-ಜಿ. ಅರುಣ್‌ಕುಮಾರ್
ಸಿನಿಮಾವೊಂದರ ಅಭೂತಪೂರ್ವ ಗೆಲುವು ಕೂಡಾ ಆ ಚಿತ್ರದ ಕಲಾವಿದರನ್ನು ಯಾವ ಮಟ್ಟಿಗೆ ಡಿಸ್ಟರ್ಬ್ ಮಾಡುತ್ತದೆ ಅನ್ನೋದಕ್ಕೆ ಬಹುಶಃ ಯಶ್ ಉದಾಹರಣೆಯಾಗಿ ನಿಂತಿದ್ದಾರೆ. ಯಶಸ್ಸಿನ ತುತ್ತ ತುದಿಯನ್ನು ಕಂಡಿರುವ ರಾಕಿ ಬಾಯ್ ಈಗ ಮುಂದೆ ಹೋಗಲಾರದೆ, ಹಿಂದಕ್ಕೂ ಹೆಜ್ಜೆ ಇಡಲಾರದೆ ಒದ್ದಾಟದಲ್ಲಿದ್ದಾರೆ ಪಾಪ!

ಯಶ್ ಮುಂದಿನ ಸಿನಿಮಾ ಯಾವುದು? ಇದು ಬರೀ ಕನ್ನಡಿಗರು ಮಾತ್ರವಲ್ಲ, ಪ್ಯಾನ್ ಇಂಡಿಯಾ ಪೂರ್ತಿ ಕೇಳಿಬರುತ್ತಿರುವ ಪ್ರಶ್ನೆ.
ಪೂರಿ ಜಗನ್ನಾಥ್ ಜೊತೆ ಸಿನಿಮಾ ಮಾಡ್ತಾರಂತೆ ಅನ್ನೋ ಮಾತು ಕೇಳಿಬಂತು ಆದರೆ ಪೂರಿ ಲೈಗರ್ ಸಿನಿಮಾ ಮಕಾಡೆ ಮಲಗಿದ ಮೇಲೆ ಅದರ ಸುದ್ದಿಯೇ ಇಲ್ಲ. ಅದಕ್ಕೂ ಮುಂಚೆ ಮುರುಗದಾಸ್ ಜೊತೆ ಸಿನಿಮಾ ಮಾಡೋದು ಪಕ್ಕಾ ಅನ್ನೋ ಸುದ್ದಿ ಕೇಳಿಬಂದಿತ್ತು. ಆ ಸುದ್ದಿ ಕೂಡಾ ಠುಸ್ ಅಂದಿತು. ಇದರ ನಡುವೆ ಶಂಕರ್ ನಿರ್ದೇಶನದಲ್ಲಿ, ಕರಣ್ ಜೋಹರ್ ನಿರ್ಮಿಸಲಿರುವ ಸಾವಿರ ಕೋಟಿ ರುಪಾಯಿ ಬಜೆಟ್ಟಿನ ಸಿನಿಮಾಗೆ ಯಶ್ ಹೀರೋ ಎನ್ನುವ ಸುದ್ದಿ ಹರಿದಾಡಿತಲ್ಲಾ? ಈಗ ಅದು ಕೂಡಾ ಆಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶಂಕರ್ ಇಂಡಿಯನ್ -2 ಮತ್ತು ರಾಮ್ ಚರಣ್ ತೇಜಾ ಅಭಿನಯದ ಸಿನಿಮಾಗಳನ್ನು ಏಕಕಾಲದಲ್ಲಿ ಮುಂದುವರೆಸಿದ್ದಾರೆ. ಇವೆರಡೂ ಚಿತ್ರಗಳ ಕೆಲಸ ಮುಗಿಸಲು ಶಂಕರ್ ಸಾಹಸ ಮಾಡುತ್ತಿದ್ದಾರೆ. ಈ ಮಧ್ಯೆ ಮತ್ತೊಂದನ್ನು ಆರಂಭಿಸುವುದು ಕಷ್ಟ ಸಾಧ್ಯ ಎನ್ನುತ್ತಿವೆ ಚೆನ್ನೈ ಮೂಲಗಳು.
ಎಲ್ಲಕ್ಕಿಂತಾ ಮೊದಲು ಕೆ.ಜಿ.ಎಫ್-2 ನಂತರ ಮಫ್ತಿ ನಿರ್ದೇಶಕ ನರ್ತನ್ ಜೊತೆಗೆ ಯಶ್ ಕೆಲಸ ಮಾಡಬೇಕಿತ್ತು. ಆದರೆ ಕೆ.ಜಿ.ಎಫ್-2 ಗೆಲುವಿನ ನಂತರ ಯಶ್ ಆ ಪ್ರಾಜೆಕ್ಟನ್ನು ಡ್ರಾಪ್ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಮೊದಲ ಚಾಪ್ಟರ್ ರಿಲೀಸ್ ಆದ ನಂತರ ಕೂಡಾ ಯಶ್ ಇದೇ ಥರಾ ನಿರ್ದೇಶಕರೊಬ್ಬರಿಗೆ ಚಾಕ್ಲೇಟ್ ಕೊಟ್ಟಿದ್ದರು. ಕೆ.ಜಿ.ಎಫ್. ಮೊದಲ ಭಾಗದ ಶೂಟಿಂಗ್ ಮುಗಿಯುತ್ತಿದ್ದಂತೇ ಕಿರಾತಕ-2 ಎನ್ನುವ ಹಳ್ಳಿ ಸಬ್ಜೆಕ್ಟಿನ ಚಿತ್ರ ಆರಂಭವಾಗಿತ್ತು. ಅದು ಕೆ.ಜಿ.ಎಫ್. ಥರದ ಮೇಕಿಂಗು, ಧೂಳು, ದಂಡು ದಾಳಿ ಯಾವುದೂ ಇಲ್ಲದ ಸರಳ ಸಿನಿಮಾ ಆಗಿತ್ತು. ಆದರೆ ಕೆ.ಜಿಎಫ್ ಸೃಷ್ಟಿಸಿದ್ದ ಕ್ರೇಜ್ನಲ್ಲಿ ಕಳೆದುಹೋಗಿದ್ದ ಯಶ್ ಮತ್ತೆ ಸಣ್ಣ ಸಿನಿಮಾದಲ್ಲಿ ಮಾಡಿದರೆ ಇಮೇಜಿಗೆ ಡ್ಯಾಮೇಜಾಗುತ್ತೆ ಅಂತಾ ಆ ಸಿನಿಮಾವನ್ನು ನಿಲ್ಲಿಸಿಬಿಟ್ಟರು. ಸರಿಸುಮಾರು ಇಪ್ಪತ್ತು ದಿನ ಶೂಟಿಂಗ್ ಕೂಡಾ ಮುಗಿಸಿದ್ದ ಕಿರಾತಕ-2 ಚಿತ್ರದ ಎಲ್ಲ ಖರ್ಚನ್ನೂ ನೀಡಿ ಸಿನಿಮಾದ ಕತ್ತು ಹಿಸುಕಿಬಿಟ್ಟರು. ಈಗ ನರ್ತನ್ ಕೂಡಾ ಅಂಥದ್ದೇ ಸಮಸ್ಯೆ ಎದುರಿಸಿದ್ದಾರಂತೆ. ಕಳೆದ ಮೂರು ವರ್ಷ ಕೂತು ಸಿದ್ದಪಡಿಸಿದ್ದ ಸ್ಕ್ರಿಪ್ಟಿಗೆ ಖರ್ಚಾದ ದುಡ್ಡು ಕೊಟ್ಟು ಸಿನಿಮಾ ಮಾಡೋದು ಬ್ಯಾಡ ಅಂದುಬಿಟ್ಟಿದ್ದಾರಂತೆ ಯಶ್.

ಸಿನಿಮಾವೊಂದರ ಅಭೂತಪೂರ್ವ ಗೆಲುವು ಕೂಡಾ ಆ ಚಿತ್ರದ ಕಲಾವಿದರನ್ನು ಯಾವ ಮಟ್ಟಿಗೆ ಡಿಸ್ಟರ್ಬ್ ಮಾಡುತ್ತದೆ ಅನ್ನೋದಕ್ಕೆ ಬಹುಶಃ ಯಶ್ ಉದಾಹರಣೆಯಾಗಿ ನಿಂತಿದ್ದಾರೆ. ಯಶಸ್ಸಿನ ತುತ್ತ ತುದಿಯನ್ನು ಕಂಡಿರುವ ರಾಕಿ ಬಾಯ್ ಈಗ ಮುಂದೆ ಹೋಗಲಾರದೆ, ಹಿಂದಕ್ಕೂ ಹೆಜ್ಜೆ ಇಡಲಾರದೆ ಒದ್ದಾಟದಲ್ಲಿದ್ದಾರೆ ಪಾಪ!