29.1 C
Bengaluru
Saturday, March 18, 2023
spot_img

ಭಾರತ ಹೃದಯ ರೋಗಗಳ ವಿಶ್ವ ರಾಜಧಾನಿಯಾಗುತ್ತಿದೆ ಎಚ್ಚರ…

-ನೀರಕಲ್ಲು ಶಿವಕುಮಾರ್

ಸೆಪ್ಟೆಂಬರ್ 29 ವಿಶ್ವ ಹೃದಯ ದಿನ. ಪ್ರತಿಯೊಬ್ಬ ಮನುಷ್ಯನಲ್ಲಿ ಹೃದಯ ಎಂಬ ಅಂಗ ಇರುವುದು ಮತ್ತು ಅದರ ಕಾರ್ಯನಿರ್ವಹಣೆಯ ಪರಿಯೇ ಅದ್ಭುತ. ನರನಾಡಿಗಳಿಂದ ಇಡೀ ದೇಹಕ್ಕೆ ನೆತ್ತರು ಪಂಪ್ ಮಾಡಿ ಜೀವಕೋಶಗಳ ಸರಾಗ ಕೆಲಸಕ್ಕೆ ಸಾಥ್ ನೀಡುವ ಹೃದಯ ಮನುಷ್ಯನ ದೇಹದ ಜೀವನಾಡಿ. ಇಂತಹ ಹೃದಯ ಕೇಳುವುದಿಷ್ಟೇ; ನನ್ನನ್ನು ಆರೋಗ್ಯವಿಟ್ಟುಕೋ ನಿನ್ನ ದೇಹವನ್ನು ಫಿಟ್ ಅಂಡ್ ಫೈನ್ ಆಗಿ ಇಡುತ್ತೇನೆ. ಆದರೆ ಅನೇಕರಿಗೆ ಹೃದಯದ ಈ ಕೋರಿಕೆಯ ಮಿಡಿತ ಕೇಳಿಸುವುದೇ ಇಲ್ಲ. ಹೀಗಾಗಿಯೇ ಇಂದು ಹೃದ್ರೋಗಿಗಳ ಪ್ರಮಾಣ ಆತಂಕಕಾರಿಯಾಗಿ ಏರುತ್ತಿದೆ. ಇದರ ಬಗ್ಗೆ ಬೆಂಗಳೂರಿನ ಖ್ಯಾತ ಹೃದಯ ತಜ್ಞ, ಸಾಗರ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಸರ್ಜನ್ ಡಾ. ಕೆ.ಎಸ್. ಕಿಶೋರ್ ಏನು ಹೇಳುತ್ತಾರೆ ಕೇಳೋಣ ಬನ್ನಿ…

ಹಣ ಗಳಿಕೆಗಾಗಿ ನಿದ್ರೆ, ವಿಶ್ರಾಂತಿ ಇಲ್ಲದ ದುಡಿಮೆ, ನಾಲಿಗೆ ರುಚಿಗಾಗಿ ಜಂಕ್ ಪುಡ್ ಅಭ್ಯಾಸ, ನಶೆಗಾಗಿ ಮಿತಿಮೀರಿದ ಕುಡಿತ, ಧೂಮಪಾನ ಸೇರಿದಂತೆ ಕೆಟ್ಟ ಜೀವನ ಪದ್ಧತಿಯಿಂದ ದೇಶದಲ್ಲಿ ಹೃದಯ ರೋಗಿಗಳ ಪ್ರಮಾಣ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಅಂಕಿ ಅಂಶಗಳತ್ತ ವೈದ್ಯಕೀಯ ತಜ್ಞರು ಬೊಟ್ಟು ಮಾಡಿದ್ದಾರೆ. ಭಾರತ ದೇಶ ವಿಶ್ವದ ಹೃದಯ ರೋಗಗಳ ರಾಜಧಾನಿಯಾಗುತ್ತಿದೆ. ಚೀನಾ ಹಿಂದಿಕ್ಕಿ ಮುನ್ನುಗ್ಗುತ್ತಿದೆ ಇದು ಹೀಗೆಯೇ ಮುಂದುವರೆದರೆ ಗಂಡಾಂತರ ಕಾದಿದೆ ಎಂದು ಹೃದಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೆಲ್ಲ ನಗರ ಪ್ರದೇಶಗಳ ಜನರಿಗೆ ಹೃದ್ರೋಗಗಳು ಬರುತ್ತಿದ್ದವು. ಈಗ ಹಾಗೇನಿಲ್ಲ. ಗ್ರಾಮೀಣ ಭಾಗದ ಜನರೂ ಹೃದಯ ಕಾಯಿಲೆಗಳಿಗೀಡಾಗುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಹೃದಯ ತಜ್ಞ ಡಾ. ಕೆ.ಎಸ್. ಕಿಶೋರ್ .

“ಹೃದಯ ಕಾಯಿಲೆಗಳು ಇಂದು ಯುವಕರಲ್ಲೇ ಹೆಚ್ಚುತ್ತಿರುವುದು ಕಳವಳಕಾರಿ. ನಮ್ಮ ಬಳಿಗೆ ಬರುವ ಹೃದ್ರೋಗಿಗಳಲ್ಲಿ ಶೇ. 35ಕ್ಕೂ ಹೆಚ್ಚು ಮಂದಿ ಹದಿಹರೆಯದವರು ಮತ್ತು ಮಧ್ಯವಯಸ್ಕರಾಗಿದ್ದಾರೆ. ಭಾರತ ಸೇರಿದಂತೆ ಮಧ್ಯ ಏಷ್ಯಾ ದೇಶಗಳು ಹೃದಯ ರೋಗಿಗಳ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿವೆ. ಚೀನಾ ಮತ್ತು ಭಾರತ ಪ್ರಥಮ ಸ್ಥಾನದಲ್ಲಿದ್ದು ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಪರಿಸ್ಥಿತಿ ಶೋಚನೀಯವಾಗುತ್ತಿದೆ” ಎಂದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸಾಗರ್ ಆಸ್ಪತ್ರೆಯ ಖ್ಯಾತ ಹೃದಯ ತಜ್ಞ ಡಾ. ಕೆ.ಎಸ್. ಕಿಶೋರ್ ಹೇಳುತ್ತಾರೆ.

ಇಂದಿನ ಯುವಜನ ಕೆಟ್ಟ ಜೀವನ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಹಣ ಗಳಿಕೆಗಾಗಿ ನಿದ್ರೆ ಇಲ್ಲದೆ ದುಡಿಮೆ ಮಾಡುತ್ತಾರೆ. ಬಹಳಷ್ಟು ಐಟಿ ಉದ್ಯೋಗಿಗಳು ಸೇರಿದಂತೆ ಕೆಲ ರಂಗದಲ್ಲಿ ಕೆಲಸ ಮಾಡುವವರು ಸದಾ ತೀವ್ರ ಒತ್ತಡದಲ್ಲಿ ಇರುತ್ತಾರೆ. ದೇಹಕ್ಕೆ ವ್ಯಾಯಾಮ ಇರುವುದಿಲ್ಲ. ನಿರಾಳತೆಯಿಂದ ವಿಮುಖರಾಗಿರುತ್ತಾರೆ. ಬಾಯಿಚಪಲಕ್ಕೆ ಜಂಕ್ ಪುಡ್ ಸೇವಿಸುವ ಅಭ್ಯಾಸ ಎಂದು ಎಲ್ಲರಲ್ಲೂ ಕಾಣುತ್ತಿದೆ. ಧೂಮಪಾನ, ಮದ್ಯಪಾನ ಶೋಕಿ ಮತ್ತು ಐಷಾರಾಮಿಯ ಸಂಕೇತ ಎಂಬ ಭಾವನೆ ಮೂಡಿದೆ, ಈ ಎಲ್ಲಾ ಕೆಟ್ಟ ಶೈಲಿಯ ಜೀವನ ಹೃದಯ ರೋಗಕ್ಕೆ ಆಹ್ವಾನ ಕೊಡುತ್ತಿದೆ ಎಂದು ಹೇಳುತ್ತಾರೆ.

ಯುವ ಸಮುದಾಯ ಯಾವುದೇ ರಾಷ್ಟ್ರದ ಆಸ್ತಿ. ಇಂದು ಒತ್ತಡಯುಕ್ತ ಜೀವನದಿಂದ ಯುವಕರು ದೇಹವನ್ನು ತೀವ್ರತರದಲ್ಲಿ ದಂಡಿಸುತ್ತಿದ್ದಾರೆ. ಐಟಿ ಕ್ಷೇತ್ರದಲ್ಲಿ 16-18 ತಾಸು ಕೆಲಸ ಮಾಡುವವರು ಕೂಡಾ ಇದ್ದಾರೆ. 60 ವರ್ಷದ ಶ್ರಮವನ್ನು 40 ವರ್ಷದಲ್ಲೇ ದೇಹದ ಮೇಲೆ ಹಾಕುತ್ತಿದ್ದಾರೆ. ದೈಹಿಕ ಶ್ರಮವಿಲ್ಲದ ಬದುಕಿನಿಂದ ಆರೋಗ್ಯಕರ ಜೀವನ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ದಕ್ಷಿಣ ಏಷ್ಯಾದ ಮನುಷ್ಯರ ವಂಶವಾಹಿಯ ಕಾರಣಕ್ಕೆ ಹೃದ್ರೋಗಗಳು ಹೆಚ್ಚು, ಇದರ ನಡುವೆ ಕೆಟ್ಟ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಿಂದ ನಾವು ಮತ್ತಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುತ್ತಿದ್ದೇವೆ ಎಂದು ಡಾ.ಕಿಶೋರ್ ವಿವರಿಸುತ್ತಾರೆ.

ಇಂದು ಆಹಾರ ವಿಷಮಯವಾಗಿದೆ. ನೀರು, ಗಾಳಿ ಮಲಿನಯುಕ್ತವಾಗಿದೆ. ಕರಿದ ತಿಂಡಿಗಳಿಗೆ ಬಳಸುವ ಎಣ್ಣೆ ಕಲಬೆರೆಕೆಯಿಂದ ಕೂಡಿರುತ್ತದೆ. ಈ ಅಂಶಗಳು ಹೆಚ್ಚು ಹೃದಯ ರೋಗಗಳಿಗೆ ಕಾರಣವಾಗಿದೆ ಎಂದರು.

ಹೃದಯದ ಆರೋಗ್ಯವು ಎಲ್ಲರಿಗೂ ಒಂದೇ ಆಗಿರುವುದಿಲ್ಲ. ಆ ಹೃದಯ ಆರೋಗ್ಯಕರ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದು ಮತ್ತು ನಿಮ್ಮ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಮುಖ್ಯವಾದರೂ, ನೀವು ಮಾಡಲು ಇಷ್ಟಪಡುವ ಕೆಲಸಗಳನ್ನು ಮಾಡುವುದು ಸಹ ಮುಖ್ಯವಾಗಿದೆ ಏಕೆಂದರೆ ನೀವು ಏನನ್ನಾದರೂ ಮಾಡಲು ಬಯಸಿದಾಗ, ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಇದು ಪ್ರಯೋಜನಕಾರಿ ಎಂದು ಸಂಶೋಧನೆ ತೋರಿಸುತ್ತದೆ. ನಿಮ್ಮಿಷ್ಟದ ಕ್ರೀಡೆ, ವ್ಯಾಯಾಮ, ಇತರೆ ಹವ್ಯಾಸಗಳಲ್ಲಿ ಮೈಮರೆತಾಗ ಹೃದಯದ ಆರೋಗ್ಯವು ಒಂದು ಮೋಜಿನ ಮತ್ತು ಆನಂದದಾಯಕವಾಗಬಹುದು ಎನ್ನುವ ವೈದ್ಯರು, ಹೃದಯ ಸಮಸ್ಯೆಗಳು ಕಾಣಿಸಿಕೊಂಡ ನಂತರ ಯಾರೊಬ್ಬರೂ ನಿರ್ಲಕ್ಷ ಮಾಡಬಾರದು. ಅನೇಕರು ಉಡಾಫೆಯ ಧೋರಣೆ ಹೊಂದಿರುತ್ತಾರೆ. ಇದು ಸರಿಯಲ್ಲ. ಹೃದಯ ಕಾಯಿಲೆ ಅನ್ಯ ಕಾಯಿಲೆಗಳಂತಲ್ಲ. ಇದು ಸಮಯದ ಮೇಲೆ ನಡೆಯುತ್ತದೆ. ಪ್ರತಿ ಸೆಕೆಂಡ್ ಕೂಡಾ ಗೋಲ್ಡನ್ ಟೈಮ್. ಇದರ ಬಗ್ಗೆ ಜಾಗೃತಿ ಮೂಡಬೇಕು ಎನ್ನುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles