-ಕೇಶವರೆಡ್ಡಿ ಹಂದ್ರಾಳ
ಎಲ್ಲಾ ಋತುಗಳ ಪೈಕಿ ಚಳಿಗಾಲ ನಮ್ಮ ಬಯಲು ಸೀಮೆಯವರಿಗೆ ಅಚ್ಚುಮೆಚ್ಚಿನ ಕಾಲ. ಹೊಲಗದ್ದೆ ತೋಟಗಳಲ್ಲಿ ಬೆಳೆಗಳು ಹಸಿರನ್ನು ಕಕ್ಕುತ್ತಿರುತ್ತವೆ. ಮುಂಗಾರು ಮಳೆ ಹದವಾಗಿ ಬಿದ್ದರೆ ಕೆರೆಕಟ್ಟೆ, ನದಿಗಳು ತುಂಬಿ ಕಾಲುವೆಗಳಲ್ಲಿ ಜುಳ ಜುಳ ಎಂದು ನೀರು ಹರಿಯುವ ಸದ್ದು ಹಿತವಾಗಿ ಕಿವಿ ತುಂಬಿಕೊಳ್ಳುವ ಪರಿಯೇ ರೈತ ಸಮುದಾಯದಲ್ಲಿ ಸಂಭ್ರಮದ ಅಲೆಗಳನ್ನು ಎಬ್ಬಿಸುತ್ತವೆ. ಜೀವನಾಧಾರವಾದ ಭೂಮಿ ತನಗೆ ತಿನ್ನುವ ಸಕಲ ಸರಕುಗಳನ್ನೂ ನೀಡುವ ಮಣ್ಣಿಗೆ ಮನುಷ್ಯ ನಿಜಕ್ಕೂ ನಿರಂತರವಾಗಿ ಋಣಿಯಾಗಿರಬೇಕು. ಅಕ್ಟೋಬರ್ ತಿಂಗಳಿನಿಂದ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದವರೆಗೂ ಹಬ್ಬಿಕೊಳ್ಳುವ ಚಳಿಗಾಲದ ಚಹರೆಯೇ ಒಂದು ರೀತಿಯ ವಿಭಿನ್ನತೆಯನ್ನು ಪಡೆದುಕೊಂಡಿರುತ್ತದೆ. ನಮ್ಮ ಬಯಲು ಸೀಮೆಯಲ್ಲಿ ನೀರಾವರಿ ಜಮೀನುಗಳಲ್ಲಿ ಭತ್ತ, ರಾಗಿ, ಕಬ್ಬು ಕಂಗೊಳಿಸುತ್ತಿದ್ದರೆ ಮಳೆಯಾಧಾರಿತ ಖುಷ್ಕಿ ಭೂಮಿಯಲ್ಲಿ ಕಡ್ಲೆಕಾಯಿ, ಹಲಸಂದೆ, ಹೆಸರು, ಅವರೆ, ಹುಚ್ಚೆಳ್ಳು, ಬಿಳಿಜೋಳ ಮುಂತಾದ ಬೆಳೆಗಳು ಅಬ್ಬರಿಸುತ್ತಿರುತ್ತವೆ. ಅವರವರ ಹೊಲಗಳಲ್ಲಿ ರೈತರು ಅದೂ ಇದೂ ಕೆಲಸ ಮಾಡಿಕೊಂಡು ಹಿಗ್ಗಿನಿಂದ ಇರುತ್ತಾರೆ. ಇಂಥ ಸಂದರ್ಭಗಳಲ್ಲಿ ಚಳಿಯನ್ನು ಲೆಕ್ಕಿಸದ ಬೆಳಗಿನ ಜಾವಕ್ಕೇ ಎದ್ದು ಜನ ದನಗಳ ಕಸಬಾಚಿ ತಿಪ್ಪೆಗೆ ಹಾಕಿಬರುವ, ಎತ್ತುಗಳಿಗೆ ಸೆಪ್ಪೆ, ಹಸಿಮೇವು ತಿನ್ನಿಸುವ ಕೆಲಸಗಳಲ್ಲಿ ನಿರತರಾಗಿರುತ್ತಾರೆ.

ಅಕ್ಟೋಬರ್ ತಿಂಗಳು ಪ್ರಾರಂಭವಾಗುತ್ತಿದ್ದಂತೆ ನಮ್ಮ ಬಯಲು ಸೀಮೆಯ ಊರು, ಕೇರಿ, ಹೊಲಗದ್ದೆಗಳ ಬುಡದಿಂದ ಒಂದು ರೀತಿಯ ಸಂಭ್ರಮದ ಚೈತನ್ಯದ ಹೊಗೆ ಕಿತ್ತುಕೊಳ್ಳುತ್ತಿತ್ತು. ಮಾರ್ನಮಿ ಹಬ್ಬಕ್ಕೆ ಇಡೀ ಭೂಮಿ ಹಸಿರು ಸೀರೆಯನ್ನುಟ್ಟ ನೀರೆಯಂತೆ ಕಂಗೊಳಿಸುವುದು ಪ್ರಕೃತಿಯ ಒಂದು ಅದ್ಬುತ ವಿಸ್ಮಯವೇ ಸರಿ. ಹಿಂದೆ ಜನ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲಗಳನ್ನು ಬಹಳ ಕರಾರುವಾಕ್ಕಾಗಿ ಹೇಳುತ್ತಿದ್ದರು. ಮತ್ತು ಪ್ರಕೃತಿಯು ಕೂಡಾ ತನ್ನ ಸಮತೋಲನ ಋತುಕಾಲವನ್ನು ಸಮನ್ವಯತೆಯಿಂದ ಕಾಪಾಡಿಕೊಳ್ಳುತ್ತಿತ್ತು. ಇದಕ್ಕೆ ಪ್ರಮುಖ ಕಾರಣವಾಗಿದ್ದದ್ದು ಹಿಂದೆ ಪ್ರಕೃತಿಯನ್ನು ಮನುಷ್ಯ ಅಷ್ಟೊಂದು ಹಾಳುಗೆಡವಿರಲಿಲ್ಲ. ಜಾಗತೀಕರಣದಿಂದಾಗಿ ಯಾವಾಗ ಮನುಷ್ಯ ಜಗತ್ತಿನಾದ್ಯಂತ ನೈಸರ್ಗಿಕ ಸಂಪನ್ಮೂಲಗಳನ್ನು ವಿಪರೀತವಾಗಿ ಬಳಸಿಕೊಳ್ಳಲು ಶುರುಮಾಡಿದನೋ ಪಕೃತಿ ಕೂಡಾ ತನ್ನ ಸಮತೋಲನವನ್ನು ಕಳೆದುಕೊಳ್ಳಲು ಪ್ರಾರಂಭಿಸಿತು. ಕೈಗಾರಿಕಾ ಅಭಿವೃದ್ಧಿಯ ಹೆಸರಲ್ಲಿ ಖನಿಜ, ಕಾಡು, ಜಲ ಮುಂತಾದ ಪ್ರಾಕೃತಿಕ ಸಂಪನ್ಮೂಲಗಳನ್ನು ವಿಪರೀತವಾಗಿ ಭೂಮಿಯಿಂದ ಸೋಸತೊಡಗಿದ. ಭಾರತ, ಪಾಕಿಸ್ತಾನ ಮುಂತಾದ ಮೂರನೇ ರಾಷ್ಟ್ರಗಳಲ್ಲಿ ಜನಸಂಖ್ಯೆ ನಿಯಂತ್ರಣ ತಪ್ಪಿ ಅತ್ಯಂತ ವೇಗದಿಂದ ಬೆಳೆಯತೊಡಗಿದ ಕಾರಣ ಉದ್ಯೋಗ, ಉತ್ಪಾದನೆ ಮುಂತಾದುವುಗಳ ನಿರ್ವಹಣೆಗಾಗಿ ಸಂಪನ್ಮೂಲಗಳನ್ನು ಇನ್ನಿಲ್ಲದಂತೆ ಬಳಸಿಕೊಳ್ಳಲು ಪ್ರಾರಂಭಿಸಲಾಯಿತು. ಮನುಷ್ಯನ ವಸತಿಗಾಗಿಯೇ ಕಾಡು ಮತ್ತು ಕೃಷಿ ಭೂಮಿಯ ಮೂಲ ಸ್ವರೂಪವನ್ನು ಕೆಡಿಸಿದ್ದರಿಂದಾಗಿ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿರುವುದು ಸುಳ್ಳೇನೂ ಅಲ್ಲ. ಇದೆಲ್ಲವನ್ನು ನಾನಿಲ್ಲಿ ಪ್ರಸ್ತಾಪಿಸುತ್ತಿರುವುದು ಏಕೆಂದರೆ ಇಂಥ ಹವಾಮಾನ ವೈಪರೀತ್ಯಗಳು ಪ್ರಾಕೃತಿಕ ಋತು ಚಕ್ರಗಳನ್ನೆ ಹಾಳುಗೆಡವಿಬಿಟ್ಟಿವಿ. ಬೇಸಿಗೆ ಕಾಲ, ಚಳಿಗಾಲ ಮತ್ತು ಮಳೆಗಾಲಗಳು ಒಂದರ ಸಾಮ್ರಾಜ್ಯದಲ್ಲೊಂದು ಸೇರಿ ಮನುಷ್ಯ ಕುಲವನ್ನು ಗೊಂದಲದಲ್ಲಿ ಮುಳುಗಿಬಿಟ್ಟಿದೆ. ಹೀಗಾಗಿ ಅತಿವೃಷ್ಟಿ, ಅನಾವೃಷ್ಟಿಗಳು ಸಾಮಾನ್ಯವಾಗಿ ವಿಪರೀತ ಮಳೆ, ಪ್ರವಾಹಗಳು ಉಂಟಾಗಿ ಬೆಳೆ ನಷ್ಟದಿಂದ ರೈತ ಸಮುದಾಯ ಸಂಕಷ್ಟಕ್ಕೆ ಈಡಾಗುತ್ತಿದೆ. ಹಿಂದಿನ ಕಾಲದಲ್ಲಿ ರೈತರು ನಿರೀಕ್ಷಿಸಿದಂತೆ ಪ್ರಸ್ತುತ ಸಂದರ್ಭದಲ್ಲಿ ಮಳೆ, ಬೆಳೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲದಂತಾಗಿದೆ.

ಎಲ್ಲಾ ಋತುಗಳ ಪೈಕಿ ಚಳಿಗಾಲ ನಮ್ಮ ಬಯಲು ಸೀಮೆಯವರಿಗೆ ಅಚ್ಚುಮೆಚ್ಚಿನ ಕಾಲ. ಹೊಲಗದ್ದೆ ತೋಟಗಳಲ್ಲಿ ಬೆಳೆಗಳು ಹಸಿರನ್ನು ಕಕ್ಕುತ್ತಿರುತ್ತವೆ. ಮುಂಗಾರು ಮಳೆ ಹದವಾಗಿ ಬಿದ್ದರೆ ಕೆರೆಕಟ್ಟೆ, ನದಿಗಳು ತುಂಬಿ ಕಾಲುವೆಗಳಲ್ಲಿ ಜುಳ ಜುಳ ಎಂದು ನೀರು ಹರಿಯುವ ಸದ್ದು ಹಿತವಾಗಿ ಕಿವಿ ತುಂಬಿಕೊಳ್ಳುವ ಪರಿಯೇ ರೈತ ಸಮುದಾಯದಲ್ಲಿ ಸಂಭ್ರಮದ ಅಲೆಗಳನ್ನು ಎಬ್ಬಿಸುತ್ತವೆ. ಜೀವನಾಧಾರವಾದ ಭೂಮಿ ತನಗೆ ತಿನ್ನುವ ಸಕಲ ಸರಕುಗಳನ್ನೂ ನೀಡುವ ಮಣ್ಣಿಗೆ ಮನುಷ್ಯ ನಿಜಕ್ಕೂ ನಿರಂತರವಾಗಿ ಋಣಿಯಾಗಿರಬೇಕು. ಅಕ್ಟೋಬರ್ ತಿಂಗಳಿನಿಂದ ಜನವರಿ ತಿಂಗಳಿನ ಸಂಕ್ರಾಂತಿ ಹಬ್ಬದವರೆಗೂ ಹಬ್ಬಿಕೊಳ್ಳುವ ಚಳಿಗಾಲದ ಚಹರೆಯೇ ಒಂದು ರೀತಿಯ ವಿಭಿನ್ನತೆಯನ್ನು ಪಡೆದುಕೊಂಡಿರುತ್ತದೆ. ನಮ್ಮ ಬಯಲು ಸೀಮೆಯಲ್ಲಿ ನೀರಾವರಿ ಜಮೀನುಗಳಲ್ಲಿ ಭತ್ತ, ರಾಗಿ, ಕಬ್ಬು ಕಂಗೊಳಿಸುತ್ತಿದ್ದರೆ ಮಳೆಯಾಧಾರಿತ ಖುಷ್ಕಿ ಭೂಮಿಯಲ್ಲಿ ಕಡ್ಲೆಕಾಯಿ, ಹಲಸಂದೆ, ಹೆಸರು, ಅವರೆ, ಹುಚ್ಚೆಳ್ಳು, ಬಿಳಿಜೋಳ ಮುಂತಾದ ಬೆಳೆಗಳು ಅಬ್ಬರಿಸುತ್ತಿರುತ್ತವೆ. ಅವರವರ ಹೊಲಗಳಲ್ಲಿ ರೈತರು ಅದೂ ಇದೂ ಕೆಲಸ ಮಾಡಿಕೊಂಡು ಹಿಗ್ಗಿನಿಂದ ಇರುತ್ತಾರೆ. ಇಂಥ ಸಂದರ್ಭಗಳಲ್ಲಿ ಚಳಿಯನ್ನು ಲೆಕ್ಕಿಸದ ಬೆಳಗಿನ ಜಾವಕ್ಕೇ ಎದ್ದು ಜನ ದನಗಳ ಕಸಬಾಚಿ ತಿಪ್ಪೆಗೆ ಹಾಕಿಬರುವ, ಎತ್ತುಗಳಿಗೆ ಸೆಪ್ಪೆ, ಹಸಿಮೇವು ತಿನ್ನಿಸುವ ಕೆಲಸಗಳಲ್ಲಿ ನಿರತರಾಗಿರುತ್ತಾರೆ.

ಚಳಿಯನ್ನು ಓಡಿಸಲು ಪ್ರತಿಯೊಂದು ಕೇರಿಗಳಲ್ಲೂ ಬೆಂಕಿಯನ್ನು ಹಾಕಿ ಮೈ ಕಾಯಿಸಿಕೊಳ್ಳುವುದೊಂದು ಹಳ್ಳಿಗಳ ಸೊಬಗಿನ ಚಿತ್ರಣಗಳೇ ಸರಿ. ದೊಡ್ಡವರು ಉರಿಯುವ ಬೆಂಕಿಯಲ್ಲಿ ಬೀಡಿ, ಸಿಗರೇಟುಗಳನ್ನು ಹಚ್ಚಿಕೊಂಡು ಹೊಗೆ ಬೀಡುತ್ತಾ ಆನಂದ ಪಡುತ್ತಿದ್ದರೆ ಚಿಕ್ಕ ಮಕ್ಕಳು ರಾಗಿತಾಳು, ಹುಚ್ಚೆಳ್ಳು ಕಡಿ ಮತ್ತು ಜೋಳದ ಕಡ್ಡಿಗಳನ್ನೇ ಬೀಡಿ, ಸಿಗರೇಟುಗಳನ್ನಾಗಿ ಮಾಡಿಕೊಂಡು ಬೆಂಕಿ ಹಚ್ಚಿ ಹೊಗೆ ಬಿಡುತ್ತಿದ್ದೆವು. ಬೆಂಕಿ ಕಾಯಿಸುವಾಗ ಕೆಲವರು ತೀರಾ ಬೆಂಕಿಯ ಹತ್ತಿರ ಹೋಗುತ್ತಿದ್ದರು. ಆಗ ಪಕ್ಕದಲ್ಲಿದ್ದವರು “ಅಪ್ಪಯ್ಯ ಯಾರತ್ರ ಅವುತಾರ ಆಡಿದ್ರೂ ಬೆಂಕಿ ಮುಂದೆ ಮಾತ್ರ ಅವುತಾರ ಆಡ್ಬಾರ್ದು. ನಿಕ್ಕರ್ ಗಿಕ್ಕರ್‌ಗೆ ಬೆಂಕಿ ಅಂಟಿಕೊಂಡ್ರೆ ಮುಗೀತು, ಹೋರಿ ಮಸಿಮಸಿ ಆಗಿ ಉದ್ರೋಕ್ತೈತೆ. ಅಮ್ಯಾಕೆ ಗೂನ್ ಸೀನಪ್ಪನ ಗೂಟಾನ ನೇತಾಕ್ಕಂಬೇಕಾಕ್ತೈತೆ ಉಚ್ಚೆ ಬಿಡೋಕೆ..” ಎಂದು ರೇಗಿಸುತ್ತಿದ್ದರು. ಒಮ್ಮೊಮ್ಮೆ ಬೆಂಕಿ ಕಾಯಿಸುವಾಗ ಕೈಕಾಲು, ಹೊದ್ದ ರಗ್ಗು, ಕಂಬಳಿಗಳಿಗೆ ಬೆಂಕಿ ತಗುಲುತ್ತಿದ್ದದ್ದೂ ಉಂಟು. ಆಗ ಎಲ್ಲರೂ ಸೇರಿ ಬೆಂಕಿಯನ್ನು ಆರಿಸುತ್ತಿದ್ದರು. ಇನ್ನು ಚಳಿಗಾಲದ ಬೆಳಿಗ್ಗೆ ಹೊತ್ತು ಎಲ್ಲರ ಮನೆಗಳಲ್ಲೂ ಕಾಫಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿತ್ತು. ಕಾಫಿಗಾಗಿ ಅನೇಕ ಮನೆಗಳಲ್ಲಿ ಜಗಳಗಳು ನಡೆಯುತ್ತಿದ್ದವು. ಜಾಸ್ತಿ ಕಾಫಿ ಬೇಕು ಎಂಬ ಜಗಳದಲ್ಲಿ ಒಮ್ಮೊಮ್ಮೆ ಲೋಟಗಳು ಕೆಳಕ್ಕೆ ಬಿದ್ದು ಕಾಫಿ ಚೆಲ್ಲಿ ನಾಯಿ, ಬೆಕ್ಕು, ನೊಣಗಳು ಕಾಫಿಯ ಪಸೆಯನ್ನು ಕ್ಲೀನ್ ಮಾಡುತ್ತಿದ್ದವು. ವಯಸ್ಸಾದವರು ಮನೆಯ ಮುಂದೆ ಎಳೆ ಬಿಸಿಲಿಗೆ ಮೈಯ್ಯೊಡ್ಡಿ ಕೂರುತ್ತಿದ್ದರು. ಚಳಿ ಹಿಟ್ಟಿನೊತ್ತಿನವರೆಗೂ ಗದಗದಿಸುತ್ತಿತ್ತು. ತುಂಬಿದ ಕೆರೆ, ನದಿ, ಕಾಲುವೆಗಳಲ್ಲಿ ಜಾನುವಾರುಗಳ ಮೈ ತೊಳೆಯುವುದೇ ಒಂದು ವೈಭವವಾಗಿರುತ್ತಿತ್ತು. ಸ್ಕೂಲ್ ಮಕ್ಕಳು ನೀರಿನಲ್ಲಿಯೇ ಎಮ್ಮೆಗಳ ಬೆನ್ನು ಹತ್ತಿ ಕುಳಿತು ಸವಾರಿ ಮಾಡುತ್ತಿದ್ದೆವು. ಇಂಥ ದೃಶ್ಯಗಳು ನಮ್ಮ ಬಯಲುಸೀಮೆಯ ಹಳ್ಳಿಗಾಡಿನ ಕಡೆ ಅಪರೂಪವಾಗಿವೆ.

ಚಳಿಗಾಲದಲ್ಲಿ ದೊಡ್ಡವರೊಂದಿಗೆ ಶಾಲೆಗೆ ಹೋಗುವ ಮಕ್ಕಳು ಕೂಡಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಚಳಿಯನ್ನು ಲೆಕ್ಕಿಸದೆ ಕೊಟ್ಟಿಗೆಯಲ್ಲಿನ ಕಸವನ್ನು ಬಾಚಿ ತಿಪ್ಪೆಗೆ ಹಾಕಿ ಬಂದು, ಗುಡಾಣದಲ್ಲಿರುತ್ತಿದ್ದ ಬಿಸಿನೀರಿನಿಂದ ಮುಖ ತೊಳೆದು ಕಾಫಿ ಕುಡಿದು ಹಸಿಹುಲ್ಲನ್ನು ಕಿತ್ತು ತರಲು ಹೊಲಗಳ ಕಡೆ ಹೆಜ್ಜೆ ಹಾಕುತ್ತಿದ್ದೆವು. ರಾಗಿ, ಅವರೆ, ಕಬ್ಬು, ಕಡಲೆ ಹೊಲಗಳಲ್ಲಿ ದಂಡಿಯಾಗಿ ಬೆಳೆದಿರುತ್ತಿದ್ದ ಹುಲ್ಲನ್ನು ಮಂಜಿನಲ್ಲೇ ಕಿತ್ತು ಕೆರೆಯಲ್ಲೋ, ಕಾಲುವೆಯಲ್ಲೋ ತೊಳೆದು ನೀರು ಸೋರುತ್ತಿದ್ದರೂ ಹೊರೆ ಕಟ್ಟಿ ಮನೆಯ ಬಳಿ ಹುಲ್ಲಿನಹೊರೆ ಹಾಕುವ ಹೊತ್ತಿಗೆ ಪೂರ್ತಿ ನೆನೆದೇ ಹೋಗಿರುತ್ತಿದ್ದೆವು. ಹುಲ್ಲು ಕೀಳುವಾಗ ಸಿಗುತ್ತಿದ್ದ ಕಾಶಿಹಣ್ಣು, ಬುಡುಮೆಹಣ್ಣು, ಬುಡ್ಡೆಹಣ್ಣು, ಕಾರೆಹಣ್ಣು, ಹಲಸಂದೆ, ಹೆಸರು ಇತ್ಯಾದಿಗಳನ್ನು ತಿನ್ನುತ್ತಿದ್ದೆವು. ಕಡಲೆಕಾಯಿ ಬಲಿತ ಮೇಲಂತೂ ನಮ್ಮ ಕೈ ಬಾಯಿಗಳಿಗೆ ಬಿಡುವೇ ಇರುತ್ತಿರಲಿಲ್ಲ. ನಮ್ಮ ಮೂತಿಗಳು ಸದಾ ಮಣ್ಣುಮಯವಾಗಿರುತ್ತಿದ್ದವು.

ಇನ್ನು ಕಬ್ಬಿನ ತೋಟದಲ್ಲಿ ಹುಲ್ಲು ಕೀಳಲು ಹೋದರಂತೂ ಬಾಯಿ ಸಿಗಿದುಹೋಗುವಂತೆ ಕಬ್ಬು ತಿನ್ನುತ್ತಿದ್ದೆವು. ಇಂಥ ಸಂದರ್ಭದಲ್ಲಿ ಚಳಿ ನಮ್ಮನ್ನು ಏನೂ ಮಾಡಲಾಗದೆ ತಾನೇ ಹೆದರಿ ಓಡಿಹೋಗುತ್ತಿತ್ತು. ಇನ್ನು ರಾತ್ರಿ ಹೊತ್ತು ಹೊದ್ದು ಕೊಳ್ಳಲು ರಗ್ಗುಗಳು ಸಾಲದೇ ಬಂದರೆ ಗೋಣಿಚೀಲದಲ್ಲಿ ತೂರಿಕೊಂಡು ಚಳಿಯಿಂದ ರಕ್ಷಣೆ ಪಡೆಯುತ್ತಿದ್ದವು. ರಾತ್ರಿ ಹೊತ್ತು ಮಲಗಿದ್ದಾಗ ನಾಯಿ, ಬೆಕ್ಕುಗಳೂ ನಮ್ಮ ರಗ್ಗುಗಳಲ್ಲಿ ತೂರಿ ಚಳಿಯಿಂದ ರಕ್ಷಣೆ ಪಡೆದುಕೊಳ್ಳುತ್ತಿದ್ದವು. ಆಲೆಮನೆಗಳು ಡಿಸೆಂಬರ್‌ನ ಕೊನೆಯಲ್ಲಿ ಪ್ರಾರಂಭವಾಗುತ್ತಿದ್ದವು. ರಾತ್ರಿ ಸರತಿಯಲ್ಲಿ ಕೆಲಸ ಮಾಡುತ್ತಿದ್ದ ಆಳುಗಳು ಚಳಿಗೆ ತಡೆಯದೆ ಒಂದಿಷ್ಟಿಷ್ಟು ಸಾರಾಯಾಯನ್ನೋ, ಹೆಂಡವನ್ನೋ ಕುಡಿಯುತ್ತಿದ್ದರು. ಗಾಣದ ಎತ್ತುಗಳನ್ನು ಅದಲಿಸುತ್ತಿದ್ದವರು ತಲೆಗೆ ಟವಲ್ ಸುತ್ತಿಕೊಂಡು ಏರುಧ್ವನಿಯಲ್ಲಿ ಕೇಕೆ ಹಾಕುತ್ತಾ ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತಿದ್ದರು. ಕೊಪ್ಪರಿಗೆಯ ಬೆಂಕಿಗೆ ಮೇವು ಹಾಕುವುದಕ್ಕೆ ಪೈಪೋಟಿ ನಡೆಯುತ್ತಿತ್ತು. ಬೆಚ್ಚಗಿರುತ್ತಿದ್ದರಿಂದ ಕೆಲವರು ಕೊಪ್ಪರಿಗೆಯ ಸುತ್ತಲೂ ಮಲಗಿಬಿಡುತ್ತಿದ್ದರು. ಅಡುಗೆ ಬಂದಾಗ ಅವರನ್ನು ಎಬ್ಬಿಸಲು ಹರ ಸಾಹಸ ಮಾಡಬೇಕಾಗುತ್ತಿತ್ತು. ಕೊಪ್ಪರಿಗೆಗೆ ಮೇವು ಹಾಕುತ್ತಿದ್ದ ಕೆಲಸವನ್ನು ಹೊಲೆಯರ ವೆಂಕಟ್ರೋಣಪ್ಪ ಪರ್ಮನೆಂಟಾಗಿ ಹಿಡಿಯುತ್ತಿದ್ದ. ಬೆಳಿಗ್ಗೆ ಅಷ್ಟೊತ್ತಿಗೆ “ರಾತ್ರಿ ತಂಗ್ಳ್ ಮುದ್ದೆ ಇದ್ರೆ ಹಾಕಣ್ಣ ಅತ್ತ ರಾತ್ರಿಯೆಲ್ಲಾ ಬೆಂಕಿ ಮುಂದೆ ಕುಂತು ಹೊಟ್ಟೆ ಮೆಟ್ನಗಾಗ್ತ ಐತೆ…” ಎಂದು ಪರಪರ ತಲೆ ಕೆರೆದುಕೊಳ್ಳುತ್ತಿದ್ದ. ಈಗ ಕಬ್ಬೂ ಬೆಳೆಯುತ್ತಿಲ್ಲ, ಆಲೆಮನೆಗಳೂ ಇಡುತ್ತಿಲ್ಲ. ಅಂದಿನಂತೆ ಜನ ಇಂದು ಚಳಿಗಾಲಗಳಲ್ಲಿ ಯಾವ ಕೆಲಸಗಳನ್ನೂ ಮಾಡುವುದಿಲ್ಲ. ಬದಲಾಗಿ ಟಿವಿಗಳ ಮುಂದೆ ಕುಂತು ಕಾಲ ಕಳೆಯುತ್ತಾರೆ.

ಸಂಕ್ರಾಂತಿ ಇನ್ನೂ ತಿಂಗಳಿರುವಾಗಲೇ ನಮ್ಮ ಕಡೆ ರಾಗಿ, ಭತ್ತ ಮತ್ತು ಕಡ್ಲೆಕಾಯಿ ಕೊಯ್ಲು ಮುಗಿಯುತ್ತಿತ್ತು. ಹುರುಳಿ, ಹುಚ್ಚೆಳ್ಳು ಮುಂತಾದವುಗಳ ಕಣಗಳನ್ನು ನಿಧಾನವಾಗಿ ಮಾಡುತ್ತಿದ್ದರು. ರೈತ ಸಮುದಾಯಕ್ಕೆ ಇಂಥ ಸುಗ್ಗಿಯ ಕಾಲವೇ ಹೊಸ ವರ್ಷವಾಗಿರುತ್ತಿತ್ತು. ರೈತರ ಮನೆಗಳಲ್ಲಿ ಕಾಳುಕಡಿ, ದವಸಧಾನ್ಯಗಳು ಚೆಲ್ಲಾಡುತ್ತಿರುವಾಗ ಸಡಗರ ಸಂಭ್ರಮಗಳು ಕೈಕಾಲು ಮುರಿದುಕೊಂಡು ಕೂರುತ್ತಿದ್ದವು. ಜೊತೆಗೆ ಅವರೆ, ಹಲಸಂದೆ, ಹೆಸರು, ತೊಗರಿ ಮುಂತಾದ ಹಸಿರು ಕಾಳುಗಳು, ಬೆರಕೆ ಸೊಪ್ಪು ಮುಂತಾದ ಸಾರಿನ ಸರಕುಗಳ ಯಥೇಚ್ಛವಾಗಿ ಲಭ್ಯವಿರುತ್ತಿದ್ದರಿಂದ ಹಳ್ಳಿಗರು ರುಚಿರುಚಿಯಾದ ತರಾವರಿ ಸಾರುಗಳನ್ನು ಮಾಡಿಕೊಂಡು ತಿನ್ನುತ್ತಿದ್ದರಲ್ಲದೆ ಹಸಿಕಾಳಿನ ವಡೆ, ಪಡ್ಡುಗಳನ್ನು ಮಾಡಿಕೊಂಡು ತಿಂದು ಢರ್ ಢರ್ ಎಂದು ತೇಗುತ್ತಿದ್ದರಲ್ಲದೆ ಪುರ್ ಪುರ್ ಎಂದು ಎಲ್ಲಂದರಲ್ಲೆ ಹೂಸುತ್ತಿದ್ದರು !

ನಾನು ಎಪ್ಪತ್ತರ ದಶಕದಲ್ಲಿ ಬೆಂಗಳೂರಿಗೆ ಹೈಸ್ಕೂಲು ಓದಲೆಂದು ಬಂದಾಗ ಬೆಂಗಳೂರಿನ ಹವಾಮಾನ ಇಷ್ಟೊಂದು ಹಾಳಾಗಿರಲಿಲ್ಲ. ಆಗ ಬೆಂಗಳೂರಿನ ಜನ ಸಂಖ್ಯೆ ಕೇವಲ ಹದಿನೇಳು, ಹದಿನೆಂಟು ಲಕ್ಷಗಳಿತ್ತು. ಅಂಬಾಸಿಡರ್, ಫಿಯೆಟ್ ಕಾರುಗಳನ್ನು ಬಿಟ್ಟರೆ ಬೇರೆ ಕಾರುಗಳು ನೋಡಲು ಸಿಗುತ್ತಿರಲಿಲ್ಲ. ಲ್ಯಾಂಬ್ರೆಟ್ಟಾ, ವೆಸ್ಪ ಸ್ಕೂಟರ್‌ಗಳು, ಜಾವಾ ಮೋಟಾರ್ ಬೈಕುಗಳು ಮಾತ್ರ ರಸ್ತೆಗಳಲ್ಲಿ ಕಾಣಸಿಗುತ್ತಿದ್ದವು. ರಸ್ತೆಗಳಲ್ಲಿ ಜಟಕಾ ಗಾಡಿಗಳ ಕಲರವ ಸದಾ ತುಂಬಿರುತ್ತಿತ್ತು. ಹಾಗಾಗಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಎಂಬುದೇ ಇರಲಿಲ್ಲ. ಮೂರೂ ಮುಕ್ಕಾಲು ಮನೆಗಳಲ್ಲಿ ಫ್ಯಾನುಗಳೂ ಇರಲಿಲ್ಲ. ಬೇಸಿಗೆಯಲ್ಲಿ ಕೂಡಾ ತಂಪಾದ ವಾತಾವರಣ ಇತ್ತು. ಚಳಿಗಾಲದಲ್ಲಿ ಕಲಾಸಿಪಾಳ್ಯಂ, ಕಾಟನ್ ಪೇಟೆ, ಓಲ್ಡ್ ತರಗುಪೇಟೆ ಮುಂತಾದ ಕಡೆ ಹಮಾಲಿಗಳು ರಸ್ತೆ ಬದಿಯಲ್ಲಿ ಬೆಳಿಗ್ಗೆ ಹೊತ್ತು ಬೆಂಕಿ ಕಾಯಿಸಿಕೊಳ್ಳುತ್ತಿದ್ದುದ್ದನ್ನು ನಾನು ಎಪ್ಪತ್ತರ ದಶಕದಲ್ಲಿ ಬೇಕಾದಷ್ಟು ಸಾರಿ ಕಂಡಿದ್ದೇನೆ. ಚಳಿಗಾಲದಲ್ಲಿ ಎಲ್ಲರ ಕೊರಳುಗಳಲ್ಲಿ ಮಫ್ಲರ್‌ಗಳು ರಾರಾಜಿಸುತ್ತಿದ್ದವು. ನಡೆಯುತ್ತಿದ್ದವರು ಸ್ಪೆಟರ್‌ಗಳನ್ನು ಹಾಕುತ್ತಿದ್ದರು. ಕೆಂಪೇಗೌಡ ರಸ್ತೆಯಲ್ಲಿ, ಗಾಂಧಿನಗರದಲ್ಲಿ ಟಿಬೆಟಿಯನ್ನರು ಫುಟ್ಪಾತ್ ಮೇಲೆ ಸ್ಪೆಟರ್‌ಗಳ ರಾಶಿ ಹಾಕಿಕೊಂಡು ಮಾರುತ್ತಿದ್ದರು. ಈಗ ಅವರ ಸಂಖ್ಯೆ ಕಡಿಮೆಯಾಗಿದ್ದರೂ ಗಾಂಧೀನಗರದಲ್ಲಿ ಅಲ್ಲಲ್ಲಿ ಇನ್ನೂ ಕಂಡುಬರುತ್ತಾರೆ. ನನ್ನದು ಉಷ್ಣ ಶರೀರಿವಾದ್ದರಿಂದ ಯಾವೊತ್ತೂ ನಾನು ಸ್ಪೆಟರ್ ಆಗಲೀ, ಕೋಟನ್ನಾಗಲೀ ತೊಟ್ಟವನಲ್ಲ. ನಮ್ಮ ಹಳ್ಳಿಗಳಲ್ಲಂತೂ ಸ್ಪೆಟರ್ ಕಂಡವರು ತುಂಬಾನೇ ಅಪರೂಪ. ಚಳಿಗೆ ಕಂಬಳಿ, ದುಪ್ಪಟಿ, ಗೋಣಿಚೀಲಗಳೇ ಮದ್ದುಗಳಾಗಿರುತ್ತಿದ್ದವು. ಈಗ ಹಳ್ಳಿಗಳ ಕಡೆಯೂ ಜನ ಬಹಳವಾಗಿ ಸ್ಪೆಟರ್ ಮತ್ತು ಶಾಲುಗಳನ್ನು ಬಳಸುತ್ತಾರೆ. ಚಳಿಗಾಲದಲ್ಲಿ ಗಂಡು-ಹೆಣ್ಣಿನ ದೇಹಗಳು ಪರಸ್ಪರ ಬಯಸುವುದರಿಂದ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ವೃದ್ಧಿಯಾಗುವುದರಲ್ಲಿ ಸಂದೇಹವೇ ಇಲ್ಲ. ಹಾಗೂ ಚಳಿಗಾಲದಲ್ಲಿ ಮನುಷ್ಯ ಜೀವಿಗಳಲ್ಲಿ ಮಧುರವಾದ ಸಂವೇದನೆಗಳು ಹುಟ್ಟಿಕೊಳ್ಳುವುದರಿಂದ ಒಂದು ರೀತಿಯ ಆರೋಗ್ಯಕರವಾದ ಬದುಕಿಗೆ ನಾಂದಿಯಾಗುವುದು ಸುಳ್ಳಲ್ಲ.

ಸುಮಾರು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಡಿಸೆಂಬರ್ 31 ರ ರಾತ್ರಿ ಬೆಂಗಳೂರಿನಲ್ಲಿ ಹೊಸ ವರ್ಷದ ಆಚರಣೆ ಅಷ್ಟೊಂದು ವ್ಯಾಪಕವಾಗಿ ಮತ್ತು ವೈಭವದ ರೀತಿಯಲ್ಲಿ ಕಂಡು ಬರುತ್ತಿರಲಿಲ್ಲ. ಕ್ರಿಶ್ಚಿಯನ್ ಸಮುದಾಯದವರು ಜಾಸ್ತಿ ಇದ್ದ ಏರಿಯಾಗಳಲ್ಲಿ ಹಲವಾರು ಕುಟುಂಬಗಳು ಜೊತೆಗೂಡಿ ಆಚರಿಸುತ್ತಿದ್ದವು. ಕ್ರಮೇಣ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾದಂತೆ ಎಲ್ಲಾ ವರ್ಗದ ಜನರೂ ಕೂಡಾ ಹೊಸವರ್ಷದ ಆಚರಣೆಯಲ್ಲಿ ತೊಡಗಿಸಿಕೊಳ್ಳತೊಡಗಿದರು. ಹಳೆಯ ವರ್ಷದಲ್ಲಿ ಜನ ಕುಡಿದು, ತಿಂದು ಸಂಗೀತ ನೃತ್ಯಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಸಾಫ್ಟ್ವೇರ್ ಮತ್ತು ಇನ್ನಿತರೆ ಕೈಗಾರಿಕೆಗಳು ಅಭಿವೃದ್ಧಿಯಾದಂತೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಗಳು ಹೊಸ ವರ್ಷ ಆಚರಣೆಯ ಕೇಂದ್ರಗಳಾದವು. ಜನವರಿ ತಿಂಗಳು ಪಾಶ್ಚಿಮಾತ್ಯರ ಹೊಸವರ್ಷವಾದರೂ ಸುಗ್ಗಿಯೊಂದಿಗೆ ಜನವರಿ ತಿಂಗಳ ಮಧ್ಯ ಭಾಗದಲ್ಲಿ ಬರುವ ಸಂಕ್ರಾಂತಿ ದಕ್ಷಿಣ ಭಾರತದ ಹೊಸವರ್ಷವೆಂದೇ ಹೇಳಬಹುದು.

ಈಗೀಗ ಗ್ರಾಮೀಣ ಪ್ರದೇಶಗಳಲ್ಲೂ ಕೂಡಾ ಡಿಸೆಂಬರ್ ಮೂವೊತ್ತೊಂದರ ರಾತ್ರಿ ಹೊಸ ವರ್ಷಾಚರಣೆಯನ್ನು ವ್ಯಾಪಕವಾಗಿ ವಿಜೃಂಭಣೆಯಿಂದ ಆಚರಿಸುತ್ತಾರೆ. ತಮತಮಗೆ ಅನುಕೂಲವಾಗುವಂತ ರೀತಿಯಲ್ಲಿ ಆಚರಿಸಿ ಮಧ್ಯೆ ರಾತ್ರಿ ಹನ್ನೆರಡು ಗಂಟೆಗೆ ಪರಸ್ಪರ ಹೊಸವರ್ಷದ ಶುಭಾಶಯಗಳನ್ನು ಕೋರುತ್ತಾರೆ. ಇನ್ನು ಕೆಲವರು ಹೊಸವರ್ಷಕ್ಕೆ ಹೊಸ ನಿರ್ಣಯಗಳನ್ನು ಕೂಡಾ ಕೈಗೊಳ್ಳುತ್ತಾರೆ. ಕುಡಿಯುವುದಿಲ್ಲವೆಂದು, ಮಾಂಸಾಹಾರ ಸೇವಿಸುವುದಿಲ್ಲವೆಂದು, ಸುಳ್ಳು ಹೇಳುವುದಿಲ್ಲವೆಂದು ಅನೇಕರು ಹೊಸವರ್ಷದಲ್ಲಿ ಸಂಕಲ್ಪಗಳನ್ನು ಕೈಗೊಂಡರೂ ಅಂಥ ಬಹುಪಾಲು ಜನ ಒಂದು ವಾರದಲ್ಲೇ ಅಂತಹ ಸಂಕಲ್ಪಗಳನ್ನು ಮುರಿಯುತ್ತಾರೆ. ಇದು ಮನುಷ್ಯ ಕುಲದ ಸಾಮಾನ್ಯ ಸ್ವಭಾವವೇ ಆಗಿದೆ. ಎಲ್ಲೋ ಕೆಲವರು ತಾವು ಮಾಡಿದ ಸಂಕಲ್ಪ ಅಥವಾ ನಿರ್ಣಯಗಳಿಗೆ ಬದ್ಧರಾಗಿರುತ್ತಾರೆ.