-ಜಿ. ಅರುಣ್‌ಕುಮಾರ್
ಎಂಥಾ ಖುಷಿ ಅಲ್ಲವಾ? ಕೆಲವು ವರ್ಷಗಳ ಹಿಂದೆ ಪರಭಾಷೆಯ ಸಿನಿಮಾದವರ ಮುಂದೆ ನಮ್ಮ ಕನ್ನಡದವರು ಕೀಳರಿಮೆಗೆ ಗುರಿಯಾಗಿದ್ದರು. ಅಯ್ಯೋ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಗಳೇ ಇಲ್ಲ. ಅಲ್ಲಿ ಬರೀ ರಿಮೇಕ್ ಸಿನಿಮಾ ಮಾಡ್ತಾರೆ… ಮಾರ್ಕೆಟ್ ವಿಸ್ತರಣೆ ಮಾಡಿಕೊಂಡಿಲ್ಲ… ಹೀಗೆ ಕೊಂಕುಗಳನ್ನೇ ಕೇಳುತ್ತಾ ಬಂದವರಿಗೆ ಈಗ ಕಾಲರು ಮೇಲಕ್ಕೆತ್ತುವಂಥಾ ಗತ್ತು ಬಂದಿದೆ. ಇದಕ್ಕೆ ಕಾರಣವಾಗಿರೋದು ಇಬ್ಬರು ಹೀರೋಗಳು. ಮೊದಲನೆಯದಾಗಿ ಯಶ್ ಮತ್ತು ಈಗ ರಿಷಬ್ ಶೆಟ್ಟಿ! ಭಾರತೀಯ ಚಿತ್ರರಂಗದ ಒಟ್ಟಾರೆ ಗೆಲುವಿನಲ್ಲಿ ಕನ್ನಡ ಚಿತ್ರರಂಗದ ಪಾತ್ರ ಯಾವತ್ತೂ ಒಂದು ಹಿಡಿ ಜಾಸ್ತೀನೇ ಇದೆ. ಸದ್ಯ ಕನ್ನಡದ ಹೀರೋ ಮತ್ತು ಹೀರೋಯಿನ್ ಇಡೀ ಇಂಡಿಯಾ ಸಿನಿಮಾ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಯಶ್ ಮತ್ತು ರಶ್ಮಿಕಾ ಎಂಬ ಎರಡು ಪ್ರತಿಭೆಗಳು ಕನ್ನಡದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳಗುತ್ತಿವೆ. ಇದರ ಜೊತೆಗೆ ಕನ್ನಡದ್ದೇ ಸಿನಿಮಾವನ್ನು ಇತರೆ ರಾಜ್ಯಗಳಲ್ಲೂ ಗೆಲ್ಲುವಂತೆ ಮಾಡಿದ್ದಾರೆ ರಿಷಬ್!

ಯಶ್ ಈಗ ಇಂಡಿಯಾದ ನಂಬರ್ 1 ಸ್ಟಾರಾ? ಇಂಥದ್ದೊಂದು ಪ್ರಶ್ನೆ ಗಾಂಧಿನಗರ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದ ವಠಾರಗಳಲ್ಲಿ ಕೇಳಿಬರುತ್ತಿದೆ. ಕೆ.ಜಿ.ಎಫ್ ಅನ್ನೋ ಮಲ್ಟಿ ಲಾಂಗ್ವೇಜ್ ಸಿನಿಮಾದ ಮೊದಲ ಭಾಗ ಬಿಡುಗಡೆಯಾದಾಗಲೇ ಕೆಲವರು ಇದನ್ನು ಊಹಿಸಿದ್ದರು. ಸದ್ಯದ ವಾತಾವರಣ ನೋಡಿದರೆ ಅದು ಅಕ್ಷರಶಃ ನಿಜವಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಹಾಗೆ ನೋಡಿದರೆ ಕೆ.ಜಿ.ಎಫ್. ಸಿನಿಮಾದಲ್ಲಿ ಕೋಟಿಗಟ್ಟಲೆ ಬಜೆಟ್ಟಿದೆ. ದೃಶ್ಯ ಶ್ರೀಮಂತಿಕೆ ಎಲ್ಲವೂ ಇದೆ. ಆದರೆ ಎಲ್ಲ ವರ್ಗದ ಪ್ರೇಕ್ಷಕರು ಚಿತ್ರವನ್ನು ಪೂರ್ತಿಯಾಗಿ ಒಪ್ಪಿಲ್ಲ. ಸಿನಿಮಾದ ಕುರಿತಾಗಿ ಮಿಶ್ರ ಪ್ರತಿಕ್ರಿಯೆಗಳೇ ವ್ಯಕ್ತವಾಗಿವೆ. ಆದರೆ ಯಶ್ ಎನ್ನುವ ಶಕ್ತಿ ಮಾತ್ರ ಎಲ್ಲರನ್ನೂ ತನ್ನತ್ತ ಸೆಳೆದಿದೆ!
ರಾಕಿಂಗ್ ಸ್ಟಾರ್ ಅನ್ನಿಸಿಕೊಳ್ಳುವ ಮುಂಚಿನ ದಿನಗಳಿಂದ ಹಿಡಿದು ಇವತ್ತಿನವರೆಗೆ ಯಶ್ ನಡೆದುಬಂದ ಸಿನಿಮಾ ಮತ್ತು ಖಾಸಗಿ ಬದುಕಿನ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಹಠಕ್ಕೆ ಬಿದ್ದು ಸಾಧಿಸುವ ಇವರ ಗುಣ ಎದ್ದುಕಾಣುತ್ತದೆ. ಆರಂಭದ ಒಂದಷ್ಟು ಸಿನಿಮಾಗಳು ನಿಲ್ಲದಿದ್ದಾಗ `ಯಶ್ ಕತೆ ಮುಗೀತು’ ಅಂತಾ ಗಾಂಧಿನಗರದ ಜನಾ ಷರಾ ಬರೆದಿದ್ದರು. ಆದರೆ ರಾಜಾಹುಲಿ, ಗಜಕೇಸರಿಯಂಥಾ ಸಿನಿಮಾಗಳ ಮೂಲಕ ಯಶ್ ಮತ್ತೆ ಎದ್ದು ನಿಂತರು. ಹೊಸ ಹುಡುಗ ಸಂತೋಷ್ ಆನಂದ್ ರಾಮ್ ಕೈಗೆ ಸಿನಿಮಾ ಕೊಟ್ಟು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮಾಡೋ ಹೊತ್ತಿನಲ್ಲಿ `ಯಶ್ ಚಾಪ್ಟರ್ರು ಮುಗೀತು ಗುರೂ’ ಅಂತಾ ಅವರ ಸುತ್ತಲಿನವರೇ ಮಾತಾಡಿಕೊಂಡಿದ್ದಿದೆ. ಆದರೆ ಯಶ್ ಮಾತ್ರ ತಮ್ಮ ಬುದ್ದಿವಂತಿಕೆಯನ್ನೆಲ್ಲಾ ಧಾರೆಯೆರೆದು ಆ ಸಿನಿಮಾಗೆ ಏನೇನು ಬೇಕೋ ಅದೆಲ್ಲವನ್ನೂ ದಕ್ಕಿಸಿಕೊಂಡು ರಾಮಾಚಾರಿಯನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಿದರು. ಒಂದರ ಹಿಂದೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಕಲೆಕ್ಷನ್ ವಿಚಾರದಲ್ಲೂ ಗೆದ್ದು ಸ್ಟಾರ್ ಎನಿಸಿಕೊಂಡರು.

ನಾಲ್ಕು ವರ್ಷಗಳ ಅಂತರದಲ್ಲಿ ಕೆ.ಜಿ.ಎಫ್ ಎರಡೂ ಚಾಪ್ಟರುಗಳು ಭರ್ಜರಿ ಗೆಲುವು ಕಂಡಿವೆ. ಈ ಮೂಲಕ ಕನ್ನಡ ಸಿನಿಮಾವೊಂದು ಭಾರತದಾದ್ಯಂತ ಮಾರುಕಟ್ಟೆ ಸ್ಥಾಪಿಸಿಕೊಂಡಿದೆ. ಈ ಹಿಂದೆ ಒಂದಷ್ಟು ಸಿನಿಮಾಗಳು ಹೊರರಾಜ್ಯಗಳಲ್ಲಿ ಬಿಡುಗಡೆಗೊಂಡು ಖಾತೆ ತೆರೆದಿದ್ದವಾದರೂ ಈ ಮಟ್ಟಿಗೆ ಸೌಂಡು ಮಾಡಿರಲಿಲ್ಲ ಅನ್ನೋದು ನಿಜ. ಒಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದ್ದಂತೇ ಇದು ಯಾರ ಗೆಲುವು ಎಂಬಂಥ ಪ್ರಶ್ನೆ ಏಳುತ್ತದೆ. ಸಾಮಾನ್ಯವಾಗಿ ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಾದಮೇಲೆ ಆ ಸಿನಿಮಾ ಟೀಮುಗಳು ಚೂರು ಚೂರಾಗಿಬಿಡುತ್ತದೆ. ಅದಕ್ಕೆ ಕಾರಣ ಗೆಲುವಿಗೆ ನಾನು ಕಾರಣ ಅನ್ನೋ ಈಗೋ ಕ್ಲ್ಯಾಶುಗಳು. ಎರಡ್ಮೂರು ಮಂದಿ ಸೇರಿ ಮಾಡೋ ಸಣ್ಣಪುಟ್ಟ ಕೆಲಸ ಕಾರ್ಯ, ಪುಟ್ಟದೊಂದು ಗೆಲುವಲ್ಲಿಯೂ ಕ್ರೆಡಿಟ್ಟಿಗಾಗಿ ಕದನ ನಡೆಯುತ್ತೆ. ಈ ಅಸಮಾಧಾನವೆಂಬುದು ಒಳಗೊಳಗೇ ಕುದ್ದು ಜ್ವಾಲಾಮುಖಿಯಾಗುತ್ತೆ. ಅದು ಅಲ್ಲಿಗೇ ತಣ್ಣಗಾಗದಿದ್ದರೆ ಪುಟ್ಟ ಟೀಮೂ ನಾಮಾವಶೇಷಗೊಳ್ಳುತ್ತೆ. ಕೆ.ಜಿ.ಎಫ್ ವಿಚಾರದಲ್ಲಿ ಇಂಥಾ ಯಾವ ಯಡವಟ್ಟೂ ಘಟಿಸಿಲ್ಲ. ಹತ್ತು ಹಲವು ಗಾಳಿ ಸುದ್ದಿಗಳು ಹಬ್ಬಿದ್ದು ನಿಜ. ಆದರೆ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನಟನ ಒಗ್ಗಟ್ಟಿನಿಂದ ತಂಡ ಇವತ್ತಿಗೂ ಗಟ್ಟಿಯಾಗಿ ನಿಂತಿದೆ ಅನ್ನೋದು ಸತ್ಯ.
ಅಷ್ಟಕ್ಕೂ ಒಂದು ಸಿನಿಮಾ ಎಂಬುದು ಯಾರೋ ಒಬ್ಬರ ಪಾಲ್ಗೊಳ್ಳುವಿಕೆಯಿಂದ ಆಗುವಂಥಾದ್ದಲ್ಲ. ಅದರಲ್ಲಿ ಡೈರೆಕ್ಟರ್, ಹೀರೋ, ಕ್ಯಾಮೆರಾದಿಂದ ಮೊದಲ್ಗೊಂಡು ಲೈಟ್ ಬಾಯ್‌ಗಳ ತನಕ ನೂರಾರು ಮಂದಿಯ ಶ್ರಮವಿರುತ್ತೆ. ಎರಡು ವರ್ಷಗಳ ಕಾಲ ಯಶ್ ಗಡ್ಡ ಬಿಟ್ಟುಕೊಂಡು ಶ್ರಮ ವಹಿಸಿದ್ದು ಹೇಗೆ ಮುಖ್ಯವೋ, ಆ ನೂರಾರು ಮಂದಿಯ ಎರಡು ವರ್ಷಗಳ ಧ್ಯಾನವೂ ಅಷ್ಟೇ ಮುಖ್ಯ. ಈವತ್ತಿಗೆ ಇಡೀ ಕೆಜಿಎಫ್ ಚಿತ್ರದ ಎರಡು ಭಾಗಗಳು ಅದ್ಭುತ ಅನ್ನಿಸಿಕೊಂಡಿದ್ದರ ಹಿಂದೆ ಅಂಥಾ ಬಿಡಿ ಬಿಡಿ ಕೆಲಸಗಳ ಬಾಬತ್ತಿದೆ. ನಿರ್ದೇಶನ, ಕ್ಯಾಮೆರಾ, ಕಲಾ ನಿರ್ದೇಶನ, ಎಡಿಟಿಂಗ್, ಸಂಗೀತ, ಸಾಹಸ ನಿರ್ದೇಶನ ಇಂಥಾ ಅದೆಷ್ಟೋ ವಿಭಾಗಗಳ, ಅದೆಷ್ಟೋ ಜನರ ಬೆವರ ಹನಿಗಳು ತಾಕದಿದ್ದರೆ ಕೆಜಿಎಫ್ ಮಾತ್ರವಲ್ಲ ಯಾವ ಚಿತ್ರವೂ ತಯಾರಾಗೋದಿಲ್ಲ. ಈ ಪಾಟಿ ಗೆಲುವು ದಕ್ಕೋದಂತೂ ದೂರದ ಮಾತು.

ಕೆಜಿಎಫ್‌ನ ಭಿನ್ನವಾದ ಕಥೆಯೊಂದಿಗೆ ಚಿನ್ನದ ಗಣಿಯ ಗರ್ಭಕ್ಕಿಳಿದು ರೋಚಕ ಕಥೆಗಳನ್ನು ಹೆಕ್ಕಿ ತೆಗೆದವರು ನಿರ್ದೇಶಕ ಪ್ರಶಾಂತ್ ನೀಲ್. ಒಟ್ಟಾರೆ ಚಿತ್ರದ ಅಸಲೀ ಶಕ್ತಿಯಂತಿರುವವರು ಪ್ರಶಾಂತ್. ಇದರ ಹಿಂದೆ ಯಾರ ಶ್ರಮವಿದ್ದರೂ, ಎಲ್ಲ ವಿಭಾಗಗಳು ಪಾಲ್ಗೊಂಡಿದ್ದರೂ ಕೂಡಾ ಅಂಥಾದ್ದೊಂದು ಕೆಲಸ ತೆಗೆಸಿದ್ದರ ಹಿಂದೆ ಅವರ ಶ್ರಮವಿದೆ. ಆದರೆ ತನ್ನ ಕಥೆ, ಸಿನಿಮಾ ಬಿಟ್ಟರೆ ಬೇರೆ ಯಾವುದರತ್ತಲೂ ಗಮನ ಹರಿಸದ ಪ್ರಶಾಂತ್ ನೀಲ್ ಸಿನಿಮಾ ಜಗತ್ತಿಗೆ ಅಪರಿಚಿತವಾಗಿರೋ ಅಂತರ್ಮುಖಿ ಗುಣ ಹೊಂದಿರುವವರು. ಬಹುಶಃ ಅವರು ಈ ಥರದ್ದೊಂದು ಸಮರ್ಪಣಾ ಭಾವದಿಂದ ಎರಡು ವರ್ಷಗಳನ್ನು ಮೀಸಲಿಡದೇ ಇದ್ದಿದ್ದರೆ ಖಂಡಿತಾ ಕೆಜಿಎಫ್ ಕಣ್ತೆರೆಯುತ್ತಿರಲಿಲ್ಲ. ಇನ್ನು ಕೆಜಿಎಫ್ ಚಿತ್ರ ನೋಡಿದವರೆಲ್ಲ ಬೆರಗಾಗಿದ್ದು ಅದರಲ್ಲಿನ ಕ್ಯಾಮೆರಾ ವರ್ಕ್ ಬಗ್ಗೆ. ಇಡೀ ಚಿತ್ರವನ್ನು ಬಾಲಿವುಡ್, ಹಾಲಿವುಡ್ ರೇಂಜಿಗೆ ಕಟ್ಟಿ ನಿಲ್ಲಿಸುವಲ್ಲಿ ಛಾಯಾಗ್ರಾಹಕ ಭುವನ್ ಗೌಡ ಪರಿಶ್ರಮ ಕಡಿಮೆಯದ್ದೇನಲ್ಲ. ಪ್ರತೀ ಫ್ರೇಮುಗಳಲ್ಲಿಯೂ ಜೀವಂತಿಕೆ ನಳನಳಿಸುವಂತೆ ಮಾಡಿದ್ದು ಭುವನ್ ಕಸುಬುದಾರಿಕೆ. ಆ ದೃಶ್ಯಾವಳಿಗಳನ್ನು ಒಪ್ಪ ಓರಣವಾಗಿಸುವಲ್ಲಿ ಕೆಲಸ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತೀ ದೃಶ್ಯಗಳಿಗೂ ಮಿಳಿತವಾದಂಥಾ ಸಂಗೀತ ನೀಡಿರೋ ರವಿ ಬಸ್ರೂರ್ ಕೆಜಿಎಫ್‌ಗಾಗಿ ಹೊಸಾ ಮ್ಯಾಜಿಕ್ಕನ್ನೇ ಮಾಡಿದ್ದಾರೆ. ಇವರ ಜೊತೆ ಕೆಲಸ ಮಾಡಿದವರೂ ಸೇರಿದಂತೆ ಒಂದರ್ಥದಲ್ಲಿ ಎಲ್ಲರೂ ಹೀರೋಗಳೇ. ಎಲ್ಲಕ್ಕಿಂತಾ ಮುಖ್ಯವಾಗಿ ನಿರ್ಮಾಣ ಸಂಸ್ಥೆ ಹೊಂಬಾಳೆ, ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ಇಡೀ ಚಿತ್ರದ ಮೇಲ್ವಿಚಾರಣೆ ನಡೆಸಿದ ಕಾರ್ತಿಕ್ ಗೌಡ ಎಲ್ಲರದ್ದೂ ಶ್ರಮ ಇದೆ. ಹೊಂಬಾಳೆ ಸಂಸ್ಥೆ ದೊಡ್ಡದಾಗಿ ಕನಸು ಕಂಡು ಅಷ್ಟೇ ದೊಡ್ಡ ಮಟ್ಟದಲ್ಲಿ ಕಾಸನ್ನು ಪಣಕ್ಕಿಡದೇ ಹೋಗಿದ್ದರೆ ಈಗ ಕಣ್ಣ ಮುಂದಿರೋ ಯಾವ ಅಚ್ಚರಿಗಳೂ ಘಟಿಸುತ್ತಲೇ ಇರಲಿಲ್ಲ.

ಹಾಗೆ ನೋಡಿದರೆ ಯಶ್ ಕೂಡಾ ಕೆಜಿಎಫ್ ಎರಡು ಭಾಗಗಳಿಗಾಗಿ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಇದರ ಫಲವೆನ್ನುವಂತೆ ಈವತ್ತಿಗೆ ಕೆಜಿಎಫ್ ಅಂದ್ರೆ ಯಶ್ ಎನ್ನುವ ಮಟ್ಟಕ್ಕೆ ಬೆಳೆದಿದ್ದಾರೆ.
ನಾನು ಬರೋತನಕ ಮಾತ್ರ ಬೇರೆಯವರ ಹವಾ. ನಾನು ಕಾಲಿಟ್ಟ ಮೇಲೆ ನನ್ನದೇ ಹವಾ ಅಂತಾ ಯಶ್ ಯಾವ ಘಳಿಗೆಯಲ್ಲಿ ಹೇಳಿದರೋ? ಅಕ್ಷರಶಃ ಹಾಗೇ ಆಗುತ್ತಿದೆ. ಅದೂ ರಾಜ್ಯದ ಗಡಿ ಮೀರಿ ಅನ್ನೋದೇ ಖುಷಿಯ ವಿಚಾರ.
ರಿಷಬ್
ಯಾರು ಈ ರಿಷಬ್ ಶೆಟ್ಟಿ? ಎಲ್ಲಿಂದ ಬಂದರು? ಕಲಾತ್ಮಕ ಸಿನಿಮಾಗಳನ್ನು ಮಾಡಿ ಕಮರ್ಷಿಯಲ್ ಹಿಟ್ ಕೊಡುತ್ತಿರುವ ಈ ವ್ಯಕ್ತಿಯ ಹಿನ್ನೆಲೆ ಏನು? ಕಾಂತಾರ ಬಗ್ಗೆ ಈ ಮಟ್ಟಿಗಿನ ಕ್ರೇಜ್ ಹುಟ್ಟಲು ಕಾರಣವೇನು?
ಯಾವುದೋ ಭಾಷೆಯ ಏಳೆಂಟು ಸಿಡಿ ನೋಡಿ ಸಿನಿಮಾ ಮಾಡುವವರು, ಸಿನಿಮಾ ಅಂದರೆ ಹೀಗೇ ಇರಬೇಕು ಅಂತಾ ಸಿದ್ದ ಸೂತ್ರಗಳಿಗೆ ಗಂಟು ಬಿದ್ದವರು, ಕಮರ್ಷಿಯಲ್ ಸಿನಿಮಾ ಕತೆ ಅಂದರೆ ಹೀಗೇ ಇರಬೇಕು ಅಂತಾ ತಪ್ಪು ತಪ್ಪೇ ಕಲ್ಪಿಸಿಕೊಂಡು ಕೂತಿದ್ದ ಗಾಂಧಿನಗರದವರ ಮುಖದ ಮೇಲೆ ರಪ್ಪನೆ ರಾಚುವಂತಾ ಸಿನಿಮಾ ಮಾಡುತ್ತಿರುವವರಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಪ್ರಮುಖರು. ಹೊಸಪ್ರಯತ್ನಗಳು ಕನ್ನಡ ಇಂಡಸ್ಟ್ರಿಯಲ್ಲಿ ವರ್ಕೌಟ್ ಆಗೋದಿಲ್ಲ, ಹೊಸ ಕಾನ್ಸೆಪ್ಟುಗಳನ್ನು ಇಲ್ಲಿನ ಜನ ಸ್ವೀಕರಿಸುವುದಿಲ್ಲ ಅಂತೆಲ್ಲಾ ಕೊಂಕು ಮಾಡುತ್ತಾ, ಮೀಸೆ ತಿರುವುತ್ತಿದ್ದವರ ಮೂತಿಗೆ ತಿವಿಯುತ್ತಿದ್ದಾರೆ ರಿಷಬ್ ಶೆಟ್ಟಿ!

ಮೂಲತಃ ಕುಂದಾಪುರದವರಾದ ರಿಷಬ್ ಪಿಯುಸಿವರೆಗೂ ಓದಿದ್ದು ಭಂಡಾರ್ಕರ್ಸ್ ಕಾಲೇಜಿನಲ್ಲಿ. ಬಿಕಾಂ ಪದವೀಧರರಾದ ರಿಷಬ್, ಪಿಯುಸಿ ಮುಗಿಸಿ ಬೆಂಗಳೂರಿಗೆ ಬಂದವರು. ಬಿಲೋ ಆವರೇಜ್ ವಿದ್ಯಾರ್ಥಿಯಾಗಿದ್ದ ರಿಷಬ್, ಪಿಯುಸಿಯಲ್ಲಿ 51 ಪರ್ಸೆಂಟ್ ಅಂಕ ತೆಗೆದಿದ್ದರಂತೆ. ಮಿಕ್ಕಂತೆ ಜಸ್ಟ್ ಪಾಸ್ ವಿದ್ಯಾರ್ಥಿಯಾಗಿದ್ದರಂತೆ. ತಂದೆ ಭಾಸ್ಕರ್ ಶೆಟ್ಟಿ ಜ್ಯೋತಿಷಿಯಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರಂತೆ. ಅವರು ರಿಷಬ್‌ರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಇಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅವರು, ಈ ಮಧ್ಯೆ ಮಿನರಲ್ ವಾಟರ್ ಮಾರಾಟ ಸೇರಿದಂತೆ ಕೆಲವು ಬೇರೆ ಕೆಲಸ ಮಾಡಿಕೊಂಡಿದ್ದರು. ಡೈರಕ್ಷನ್ ಡಿಪ್ಲೋಮಾ ಮುಗಿಸಿ ಸೈನೈಡ್ ಚಿತ್ರಕ್ಕೆ ಸಹಾಯಕ ನಿರ್ದೇಶಕ. ನಂತರ ಗಂಡ-ಹೆಂಡತಿಗೆ ಕ್ಲಾಪ್ ಬಾಯ್. ಮಧ್ಯೆ ಬೇರೆಬೇರೆ ಕೆಲಸ. ಉಳಿದವರು ಕಂಡಂತೆ ಚಿತ್ರದಲ್ಲಿ ಅಸೋಸಿಯೇಟ್ ಜೊತೆಗೆ ನಟನೆ. ಆ ನಂತರ ರಿಕ್ಕಿ, ಕಿರಿಕ್ ಪಾರ್ಟಿ ಜೊತೆಗೆ ಲೂಸಿಯಾ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದವರು.

ಕನ್ನಡ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಅಂತಾ ಕನಸಿಟ್ಟುಕೊಂಡಿದ್ದ ರಿಷಬ್ ಚಿತ್ರರಂಗದಲ್ಲಿ ಏಕಾಏಕಿ ಹೆಸರು ಮಾಡಿದ ವ್ಯಕ್ತಿಯಲ್ಲ. ಆರಂಭದಲ್ಲಿ ಎ.ಎಂ.ಆರ್. ರಮೇಶ್ ಅವರ ಸೈನೇಡ್ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗುವ ಮೂಲಕ ಚಿತ್ರರಂಗ ಪ್ರವೇಶಿಸಿದ ರಿಷಬ್ ಆ ನಂತರದಲ್ಲಿ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಅರವಿಂದ್ ಕೌಶಿಕ್ ತೆಕ್ಕೆಗೆ ಬಿದ್ದರು. ಅರವಿಂದ್ ಅವರ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಲೇ ಅವರ ತುಘಲಕ್ ಸಿನಿಮಾದಲ್ಲಿ ರಿಷಬ್ ಸಹ ನಿರ್ದೇಶನದ ಜೊತೆಗೆ ನಟನೆಯನ್ನೂ ನಿಭಾಯಿಸಿದ್ದರು. ನಂತರ ಲೂಸಿಯಾ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿರು. ರಕ್ಷಿತ್ ಶೆಟ್ಟಿ ಜೊತೆ ಉಳಿದವರು ಕಂಡಂತೆ ಸಿನಿಮಾದಲ್ಲೂ ಪ್ರಧಾನ ಪಾತ್ರ ನಿರ್ವಹಿಸಿದರು. ಆ ಹೊತ್ತಿಗೇ ಕರ್ನಾಟಕದ ನಕ್ಸಲ್ ಚಟುವಟಿಕೆ ಮತ್ತು ಎಸ್‌ಇಜೆಡ್ ಸಮಸ್ಯೆಯ ಕುರಿತಾಗಿ ರಿಕ್ಕಿ ಎನ್ನುವ ಸಿನಿಮಾವನ್ನು ನಿರ್ದೇಶಿಸಿದರು. ರಿಕ್ಕಿ ರಿಷಬ್ ನಿರ್ದೇಶನದ ಮೊದಲ ಸಿನಿಮಾ. ಸಿನಿಮಾ ಕುರಿತು ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸಾಫೀಸಿನಲ್ಲಿ ಅಂತಾ ಸೌಂಡು ಮಾಡಲಿಲ್ಲ. ಆ ಹೊತ್ತಿಗೇ ನಮ್ಮ ಜನಕ್ಕೆ ಮೊದಲು ಏನು ಕೊಡಬೇಕು ಅನ್ನೋದನ್ನು ಅರಿತ ರಿಷಬ್ ಕಿರಿಕ್ ಪಾರ್ಟಿಯನ್ನು ನಿರ್ದೇಶಿಸಿದರು. ಯಾರೂ ನಿರೀಕ್ಷಿಸದ ಮಟ್ಟಕ್ಕೆ ಕಿರಿಕ್ ಪಾರ್ಟಿ ಹೆಸರು ಮಾಡಿತು. ಕಿರಿಕ್ ಪಾರ್ಟಿ ನಂತರ ರಿಷಬ್ ಮತ್ತೆ ಅಂಥದ್ದೇ ಕಾಲೇಜು, ಲವ್ವು ಅಂತಾ ಯಾವುದಾದರೂ ಸಿನಿಮಾ ಮಾಡಬಹುದು ಅಂತಾ ಜನ ಅಂದಾಜಿಸಿದ್ದರು. ರಿಷಬ್ ಅದನ್ನು ಸುಳ್ಳಾಗಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಔಟ್ ಅಂಡ್ ಔಟ್ ಆಫ್ ಬೀಟ್ ಸಿನಿಮಾವನ್ನು ನಿರ್ದೇಶಿಸಿದರು. ಮತ್ತದನ್ನು ಕಮರ್ಷಿಯಲ್ ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವಲ್ಲಿ ಯಶಸ್ವಿಯಾದರು. ಬ್ರಿಜ್ ಲೆವೆಲ್ಲಿನ ಸಿನಿಮಾವೊಂದು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತದೆ ಅಂದರೆ ಸುಮ್ಮನೇ ಮಾತಲ್ಲ. ರಿಷಬ್ ಸರ್ಕಾರಿ ಶಾಲೆಯಲ್ಲೂ ಅದನ್ನು ಸಾಧಿಸಿ ತೋರಿಸಿದರು. ಫಾರ್ಮುಲಾಗಳಾಚೆಗೆ ಸಿನಿಮಾ ಮಾಡಿಯೂ ಅದನ್ನು ಥಿಯೇಟರಿನಲ್ಲಿ ನಿಲ್ಲಿಸಬಲ್ಲೆ ಅನ್ನೋದನ್ನು ಗಾಂಧಿನಗರದವರಿಗೆ ಮನವರಿಕೆ ಮಾಡಿದರು. ನಂತರ ಬೆಲ್ ಬಾಟಮ್ ಅನ್ನೋ ಸಿನಿಮಾದಲ್ಲಿ ನಟಿಸಿ ಹೀರೋ ಆಗಿ ಕೂಡಾ ಗಮನ ಸೆಳೆದರು. ಈ ಚಿತ್ರ ಕೂಡಾ ಬಾಕ್ಸಾಫೀಸಿನಲ್ಲಿ ಏನಿಲ್ಲವೆಂದರೂ ಏಳು ಕೋಟಿ ಲಾಭ ಮಾಡಿತು.

ಈಗಷ್ಟೇ ತೆರೆಗೆ ಬಂದಿರುವ ಕಾಂತಾರ ಕೂಡಾ ಆರು ಕೋಟಿ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿದ್ದು ಹತ್ತಾರು ಪಟ್ಟು ಗಳಿಕೆ ಮಾಡುತ್ತಾ ಮುನ್ನುಗ್ಗುತ್ತಲೇ ಇದೆ. ಹೀಗೆ ರಿಷಬ್ ಶೆಟ್ಟಿ ಅನ್ನೋ ಕುಂದಕನ್ನಡದ ಹುಡುಗ ಗಾಂಧಿನಗರಕ್ಕೆ ಕಾಲಿಟ್ಟು ಮೇಲಿಂದ ಮೇಲೆ ಅಚ್ಚರಿ ಮೂಡಿಸುತ್ತಿದ್ದಾರೆ. ಎಂಥಾ ಖುಷಿ ಅಲ್ಲವಾ? ಕೆಲವು ವರ್ಷಗಳ ಹಿಂದೆ ಪರಭಾಷೆಯ ಸಿನಿಮಾದವರ ಮುಂದೆ ನಮ್ಮ ಕನ್ನಡದವರು ಕೀಳರಿಮೆಗೆ ಗುರಿಯಾಗಿದ್ದರು. ಅಯ್ಯೋ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಗಳೇ ಇಲ್ಲ. ಅಲ್ಲಿ ಬರೀ ರಿಮೇಕ್ ಸಿನಿಮಾ ಮಾಡ್ತಾರೆ… ಮಾರ್ಕೆಟ್ ವಿಸ್ತರಣೆ ಮಾಡಿಕೊಂಡಿಲ್ಲ… ಹೀಗೆ ಕೊಂಕುಗಳನ್ನೇ ಕೇಳುತ್ತಾ ಬಂದವರಿಗೆ ಈಗ ಕಾಲರು ಮೇಲಕ್ಕೆತ್ತುವಂಥಾ ಗತ್ತು ಬಂದಿದೆ. ಇದಕ್ಕೆ ಕಾರಣವಾಗಿರೋದು ಇಬ್ಬರು ಹೀರೋಗಳು. ಮೊದಲನೆಯದಾಗಿ ಯಶ್ ಮತ್ತು ಈಗ ರಿಷಬ್ ಶೆಟ್ಟಿ!
ಭಾರತೀಯ ಚಿತ್ರರಂಗದ ಒಟ್ಟಾರೆ ಗೆಲುವಿನಲ್ಲಿ ಕನ್ನಡ ಚಿತ್ರರಂಗದ ಪಾತ್ರ ಯಾವತ್ತೂ ಒಂದು ಹಿಡಿ ಜಾಸ್ತೀನೇ ಇದೆ. ಸದ್ಯ ಕನ್ನಡದ ಹೀರೋ ಮತ್ತು ಹೀರೋಯಿನ್ ಇಡೀ ಇಂಡಿಯಾ ಸಿನಿಮಾ ಇಂಡಸ್ಟಿçಯನ್ನು ಆಳುತ್ತಿದ್ದಾರೆ. ಯಶ್ ಮತ್ತು ರಶ್ಮಿಕಾ ಎಂಬ ಎರಡು ಪ್ರತಿಭೆಗಳು ಕನ್ನಡದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಬೆಳಗುತ್ತಿವೆ. ಇದರ ಜೊತೆಗೆ ಕನ್ನಡದ್ದೇ ಸಿನಿಮಾವನ್ನು ಇತರೆ ರಾಜ್ಯಗಳಲ್ಲೂ ಗೆಲ್ಲುವಂತೆ ಮಾಡಿದ್ದಾರೆ ರಿಷಬ್!