22.8 C
Bengaluru
Wednesday, March 22, 2023
spot_img

ಚಾಲಕರಹಿತ ಕಾರಿನ ಬಗ್ಗೆ ನಿಮಗೆಷ್ಟು ಗೊತ್ತು?

-ಡಾ| ಯು.ಬಿ. ಪವನಜ

ಕಾರು ಅಥವಾ ಯಾವುದೇ ವಾಹನ ಚಲಾಯಿಸಲು ಚಾಲಕನೊಬ್ಬನಿರಲೇಬೇಕಲ್ಲ? ಹಾಗೆಂದು ನೀವಂದುಕೊಂಡಿದ್ದರೆ ಅದು ಬದಲಾಗುವ ಕಾಲ ಬರುತ್ತಿದೆ ಎನ್ನಬಹುದು. ಈಗ ಚಾಲಕನಿಲ್ಲದೆಯೂ ಕಾರು ತನ್ನಷ್ಟಕ್ಕೇ ಚಲಿಸಬಲ್ಲುದು. ಅರ್ಥಾತ್ ಚಾಲಕನಿಲ್ಲದೆಯೇ ಸ್ವಯಂಚಾಲಿತವಾಗಿ ಚಲಿಸಬಲ್ಲ ಕಾರುಗಳು ತಯಾರಾಗಿವೆ. ಅವು ಇನ್ ಊ ಭಾರತಕ್ಕೆ ಪ್ರವೇಶಿಸಿಲ್ಲ. ಈ ಕಾರುಗಳು ಹೇಗಿವೆ? ಅವುಗಳಲ್ಲಿ ಎಷ್ಟು ನಮೂನೆಗಳಿವೆ. ಅವುಗಳನ್ನು ಯಾರು ತಯಾರಿಸುತ್ತಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಸಂಚಿಕೆಯಲ್ಲಿ ಕಂಡುಕೊಳ್ಳೋಣ.

ಚಾಲಕರಹಿತ ಕಾರು, ಸ್ವಯಂಚಾಲಿತ ಕಾರು, ತಾನೇ ನಡೆಸಿಕೊಂಡು ಹೋಗುವ ಕಾರು, ರೋಬೋಟಿಕ್ ಕಾರು ಎಂದೆಲ್ಲ ಕರೆಯಲ್ಪಡುವ ಕಾರು ಪರಿಸರವನ್ನು, ರಸ್ತೆಯನ್ನು, ಸಂದರ್ಭವನ್ನು ಅರ್ಥ ಮಾಡಿಕೊಂಡು ಓರ್ವ ಚಾಲಕ ಯಾವ ರೀತಿ ಕಾರನ್ನು ನಡೆಸುತ್ತಿದ್ದನೋ ಅದೇ ರೀತಿ ತಾನೇ ನಡೆಸಿಕೊಂಡು ಹೋಗುವ ಕಾರು. ಈ ಕಾರುಗಳಲ್ಲಿ ಪರಿಸರವನ್ನು ಅರ್ಥಮಾಡಿಕೊಳ್ಳು ಬೇಕಾದ ಕ್ಯಾಮೆರಾ, ಜಿಪಿಎಸ್, ಸೋನಾರ್, ರಾಡಾರ್, ಇತ್ಯಾದಿ ವಿವಿಧ ಸಂವೇದಕಗಳಿರುತ್ತವೆ. ರಸ್ತೆಯನ್ನು ಅರ್ಥಮಾಡಿಕೊಳ್ಳಲು ಇವು ಸಹಾಯ ಮಾಡುತ್ತವೆ. ಹಾಗೆಯೇ ರಸ್ತೆಯಲ್ಲಿ ಯಾವುದೇ ಅಡೆತಡೆಗಳಿದ್ದರೂ ಅದು ಅರ್ಥಮಾಡಿಕೊಳ್ಳಬಲ್ಲುದು. ರಸ್ತೆಬದಿಯಲ್ಲಿರುವ ಸಂಕೇತಗಳನ್ನು, ರಸ್ತೆ ಸಂಕೇತದೀಪಗಳನ್ನೂ, ಅವುಗಳ ಬಣ್ಣಗಳನ್ನೂ ಸಹ ಇವು ಅರ್ಥೈಸಿಕೊಳ್ಳಬಲ್ಲವು. ಈ ಕಾರುಗಳು ಕೃತಕಬುದ್ಧಿಮತ್ತೆಯನ್ನು (artificial intelligence) ಹೊಂದಿರುತ್ತವೆ. 

ಚಾಲಕನಿಲ್ಲದ ಕಾರುಗಳಿಂದ ಕೆಲವು ಲಾಭಗಳಿವೆ. ಚಾಲಕನಿರುವ ಮಾನವ ಸಹಜ ಗುಣಗಳು ಅವಕ್ಕಿರುವುದಿಲ್ಲ. ಅವುಗಳಿಗೆ ಸುಸ್ತು ಆಗುವುದಿಲ್ಲ. ನಿದ್ರೆ ಬಂದು ತೂಕಡಿಸುವುದಿಲ್ಲ. ತುರ್ತು ಸಂದರ್ಭಗಳಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡು ಅಪಘಾತಗಳಿಗೆ ಕಾರಣವಾಗುವುದಿಲ್ಲ. ಚಾಲಕನಿಲ್ಲದೆಯೇ, ವಾಹನ ಚಾಲನೆ ತಿಳಿದಿರದ ವ್ಯಕ್ತಿಗಳನ್ನು ಬೇಕಾದ ಸ್ಥಳಕ್ಕೆ ಇವು ತಲುಪಿಸಬಲ್ಲವು. ಹೀಗೆ ಹಲವಾರು ಲಾಭಗಳು ಇವುಗಳಿದಾಗಿ ಲಭ್ಯ.

ಚಾಲಕನಿಲ್ಲದ ಕಾರುಗಳು ಎದುರುಗಡೆಯಿಂದ ಬರುವ ವಾಹನವನ್ನು ಅರ್ಥ ಮಾಡಿಕೊಳ್ಳುತ್ತವೆ. ಹಾಗೆಯೇ ರಸ್ತೆಯಲ್ಲಿ ಅಡ್ಡಬರುವ ವ್ಯಕ್ತಿಗಳನ್ನು, ರಸ್ತೆ ಮಧ್ಯದಲ್ಲಿ ಇರುವ ಯಾವುದಾದರೂ ಅಡೆತಡೆಯನ್ನು ಸೂಕ್ತ ಸಂವೇದಕಗಳಿಂದ ಪಡೆದ ಮಾಹಿತಿಗಳನ್ನು ಕೃತಕ ಬುದ್ಧಿಮತ್ತೆಯ ತಂತ್ರಾಂಶಗಳ ಮೂಲಕ ವಿಶ್ಲೇಷಣೆ ಮಾಡಿ ತಿಳಿದುಕೊಂಡು ಅಪಘಾತ ಸಂಭವಿಸದಂತೆ ನೋಡಿಕೊಳ್ಳುತ್ತವೆ.

ಚಾಲಕನಿಲ್ಲದ ಕಾರುಗಳು ಸಂಪೂರ್ಣ ಸ್ವಯಂ ಚಾಲಿತವಾಗಿರಬೇಕಾಗಿಲ್ಲ. ಅವು ಸ್ವಲ್ಪ ಸ್ವಲ್ಪವೇ ಸುಧಾರಣೆ ಆಗಿರಬಹುದು. ಈ ಸುಧಾರಣೆಯಲ್ಲಿ ಹಲವು ಹಂತಗಳಿವೆ. ಅವುಗಳನ್ನು ಕೆಳಗೆ ನೀಡಲಾಗಿದೆ:

ಹಂತ-0: ಯಾವುದೇ ಯಾಂತ್ರೀಕರಣ ಅಥವಾ ಸ್ವಯಂಚಾಲನೆಯಿಲ್ಲ. ಸ್ಟಿಯರಿಂಗ್, ಬ್ರೇಕ್, ಎಕ್ಸ್ಲೇಟರ್ ಎಲ್ಲವನ್ನು ಮನುಷ್ಯರೇ ನಿಯಂತ್ರಿಸುತ್ತಾರೆ. ಇದು ಸಂಪೂರ್ಣ ಮಾನವ ಚಾಲಕ ಕಾರು.

ಹಂತ-1: ಚಾಲಕ ಸಹಾಯ. ಸ್ವಲ್ಪ ಮಟ್ಟಿಗೆ ಸ್ಟಿಯರಿಂಗ್ ಮತ್ತು ಎಕ್ಸಲರೇಶನ್‌ನಲ್ಲಿ ಯಾಂತ್ರೀಕರಣ. ಭಾರತದಲ್ಲಿ ಲಭ್ಯವಿರುವ ಕೆಲವು ಮಧ್ಯಮ ಮತ್ತು ಮೇಲ್ದರ್ಜೆಯ ಕಾರುಗಳಲ್ಲಿರುವ ಕ್ರೂಯಿಸ್ ಕಂಟ್ರೋಲ್ ಇದರ ವ್ಯಾಪ್ತಿಯಲ್ಲಿ ಬರುತ್ತದೆ.

ಹಂತ-2: ಪಾರ್ಶ್ವ ಯಾಂತ್ರೀಕರಣ. ಸ್ಟಿಯರಿಂಗ್ ಮತ್ತು ಎಕ್ಸಲರೇಶನ್‌ಗಳನ್ನು ಕಾರು ತಾನೇ ನಿಭಾಯಿಸುವುದು. ಮಾನವ ಚಾಲಕ ಸ್ಟಿಯರಿಂಗ್ ಮೇಲೆ ಕೈಯಿಟ್ಟಿದ್ದರೂ ತನ್ನ ಪರಿಸರ ರಸ್ತಯನ್ನು ಗಮನಿಸುತ್ತಿರುತ್ತಾನೆ ಅಷ್ಟೆ. ಟೆಸ್ಲ್ಲಾದವರ ಅಟೋ ಪೈಲಟ್ ಈ ವ್ಯಾಪ್ತಿಯಲ್ಲಿ ಬರುತ್ತದೆ.

ಹಂತ-3: ಸಂದರ್ಭೋಚಿತ ನಿಯಂತ್ರಣ. ಕಾರು ತನ್ನನ್ನು ತಾನೇ ನಿಯಂತ್ರಿಸುತ್ತಿರುತ್ತದೆ ಮತ್ತು ಪರಿಸರವನ್ನು ಅಭ್ಯಸಿಸುತ್ತಿರುತ್ತದೆ. ಕೆಲವು ಸಂದರ್ಭಗಳಲ್ಲಿ ಮಾನವ ಚಾಲಕನಿಗೆ ಈಗ ನೀನು ತೀರ್ಮಾನ ತೆಗೆದುಕೊಳ್ಳು ಎನ್ನುತ್ತದೆ. ಆಡಿಯವರ ಎ8 ಇದಕ್ಕೆ ಹತ್ತಿರವಾಗಿದೆ.

ಹಂತ-4: ತುಂಬ ಸ್ವಯಂಚಾಲನೆ. ಹಂತ-೩ಕ್ಕಿಂತ ಹೆಚ್ಚು ಸ್ವಯಂಚಾಲನೆ ಹಾಗೂ ತೀರ್ಮಾನಗಳನ್ನು ಕಾರು ತಾನೇ ತೆಗೆದುಕೊಳ್ಳುವಿಕೆ ಈ ಹಂತದಲ್ಲಾಗುತದೆ. ಆದರೂ ಕೆಲವು ವಿಶೇಷ ಸಂದರ್ಭಗಳಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳಲು ಮಾನವ ಚಾಲಕನಿಗೆ ಕೇಳಿಕೊಳ್ಳುತ್ತದೆ.

ಹಂತ-5: ಸಂಪೂರ್ಣ ಸ್ವಯಂಚಾಲನೆ. ಎಲ್ಲ ರೀತಿಯಲ್ಲೂ ಸ್ವಾವಲಂಬಿಯಾದ ಕಾರು. ಮಾನವ ಚಾಲಕನಿಂದ ಯಾವ ಸಲಹೆ ಸಹಾಯವನ್ನೂ ಅಪೇಕ್ಷಿಸುವುದಿಲ್ಲ. ಕಾರು ಚಾಲನೆಯ ಎಲ್ಲ ಕೆಲಸಗಳನ್ನೂ ಅಗತ್ಯಗಳನ್ನೂ ತಾನೇ ನಿರ್ವಹಿಸುತ್ತದೆ. ಗೂಗ್ಲ್ನವರ ವಾಯ್‌ಮೋ ಈ ನಮೂನೆಯದು.

ಈಗಿನ ಮಾರುಕಟ್ಟೆಯಲ್ಲಿ ಹಂತ-3 ರ ತನಕ ಕೆಲವು ಕಾರುಗಳು ತಲುಪಿವೆ. ಉಳಿದ ಹಂತಗಳನ್ನು ಕೆಲವು ಕಾರುಗಳು ಪ್ರಯೋಗಶಾಲೆಯಲ್ಲಿ ಮಾತ್ರ ತಲುಪಿವೆ. ಅವು ಇನ್ನೂ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿಲ್ಲ. ಚಾಲಕರಹಿತ ಕಾರುಗಳ ಮಾರುಕಟ್ಟೆಯಲ್ಲಿ ಎಲೋನ್ ಮಸ್ಕ್ ಅವರ ಟೆಸ್ಲಾ ದೊಡ್ಡ ಹೆಸರು. ಈ ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಕಂಪೆನಿಗಳು ಇವೆ. ಕಾರು ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಸಿದ್ಧರಾಗಿರುವ ಹೊಂಡಾ ಹಾಗೂ ಇತರೆ ಹಲವಾರು ಕಂಪೆನಿಗಳು ಇಂತಹ ಕಾರುಗಳನ್ನು ತಯಾರಿಸುವಲ್ಲಿ ಪ್ರಯತ್ನ ಮಾಡುತ್ತಿವೆ. ಹಲವು ಕಾರುಗಳು ಹಲವು ಹಂತಗಳಲ್ಲಿವೆ.

ಚಾಲಕರಹಿತ ಕಾರುಗಳು ಹೇಗೆ ಕೆಲಸ ಮಾಡುತ್ತವೆ? ಈಗಾಗಲೇ ತಿಳಿಸಿದಂತೆ ಅದರಲ್ಲಿ ಹಲವು ನಮೂನೆಯ ಸಂವೇದಕಗಳಿರುತ್ತವೆ. ರಾಡಾರ್‌ಗಳು ಹತ್ತಿರದಲ್ಲಿ ಯಾವುದಾದರೂ ವಾಹನಗಳಿವೆಯೋ ಅಥವಾ ರಸ್ತೆಯಲ್ಲಿ ಏನಾದರೂ ಅಡಚಣೆಗಳಿವೆಯೋ ಎಂದು ನೋಡುತ್ತಿರುತ್ತದೆ. ನಿಮಗೆ ತಿಳಿದಿರುವಂತೆ ರಾಡಾರ್ ವಿದ್ಯುತ್ಕಾಂತೀಯ ಅಲೆಗಳನ್ನು ಬಳಸಿ ಕೆಲಸ ಮಾಡುತ್ತದೆ. ಕಣ್ಣಿಗೆ ಕಾಣುವ ಬೆಳಕಿನ ಮೂಲಕ ಕ್ಯಾಮೆರಗಳು ಕೆಲಸ ಮಾಡುತ್ತವೆ. ಚಾಲಕರಹಿತ ಕಾರಿನಲ್ಲಿ ಅಳವಡಿಸಲಾದ ಕ್ಯಾಮೆರಗಳು ಕೂಡ ತನ್ನ ಕಣ್ಣಿಗೆ ಕಂಡ ದೃಶ್ಯವನ್ನು ಕೇಂದ್ರೀಯ ಗಣಕಕ್ಕೆ ರವಾನಿಸುತ್ತಿರುತ್ತವೆ. ಅಲ್ಲಿ ಅಳವಡಿಸಲಾದ ಕೃತಕ ಬುದ್ಧಿಮತ್ತೆಯ ತಂತ್ರಾಂಶವು ಸತತವಾಗಿ ಈ ಎಲ್ಲ ಮಾಹಿತಿಗಳನ್ನು ವಿಶ್ಲೇಷಿಸುತ್ತಿರುತ್ತದೆ. ರಸ್ತೆಯಲ್ಲಿ ಅಡಚಣೆಗಳಿವೆಯೋ, ಯಾರಾದರೂ ರಸ್ತೆ ದಾಟುತ್ತಿದ್ದಾರೆಯೇ, ಯಾವುದಾದರೂ ವಾಹನ ಕೆಟ್ಟು ನಿಂತಿದೆಯೋ, ಹಳ್ಳಗಳಿವೆಯೋ, ಎಂದೆಲ್ಲ ಅದು ವಿಶ್ಲೇಷಿಸುತ್ತದೆ. ಬೆಳಕಿನ ಕಿರಣವನ್ನು ಕಳುಹಿಸಿ, ಅದು ಯಾವುದಾದರೂ ವಸ್ತುವಿನಿಂದ ಪ್ರತಿಫಲಿಸಿ ಬಂದಾಗ ಅದು ವಿಶ್ಲೇಷಿಸುತ್ತದೆ. ಅದರ ಮೂಲಕ ಪಾರ್ಕ್ ಮಾಡಲು ಪಕ್ಕದಲ್ಲಿ ಇನ್ನೊಂದು ವಾಹನವಿದೆಯೇ, ಇನ್ನೊಂದು ವಾಹನದ ಚಕ್ರ ಎಲ್ಲಿದೆ, ಪಾರ್ಕಿಂಗ್‌ಗೆ ಹಾಕಿದ ಬಣ್ಣದ ಗೆರೆಗಳು ಎಲ್ಲಿವೆ ಎಂದೆಲ್ಲ ತಿಳಿದುಕೊಳ್ಳುತ್ತದೆ. ಇವುಗಳನ್ನೆಲ್ಲ ತಿಳಿದುಕೊಂಡ ಬಳಿಕ ಆಯ್ಕೆ ಮಾಡಬೇಕಾದ ಚಲನೆಯ ದಾರಿ, ವೇಗ, ಎಲ್ಲ ಲೆಕ್ಕ ಹಾಕುತ್ತದೆ. ಅದರ ಪ್ರಕಾರ ಎಕ್ಸಲರೇಟರಿಗೆ ಸಂಕೇತ ಕಳುಹಿಸುತ್ತದೆ. ತಿರುಗಬೇಕಾದಾಗ ಸ್ಟಿಯರಿಂಗ್‌ಗೆ ಸಂಕೇತ ಕಳುಹಿಸುತ್ತದೆ. ಹೀಗೆ ಚಾಲಕರಹಿತ ಕಾರು ಸುರಕ್ಷಿತವಾಗಿ ಸಾಗುತ್ತದೆ. ಅಷ್ಟು ಮಾತ್ರವಲ್ಲ, ಅದು ಸುರಕ್ಷಿತವಾಗಿ ಕಾರನ್ನು ಸೂಕ್ತ ಜಾಗದಲ್ಲಿ ಸರಿಯಾಗಿ ಪಾರ್ಕಿಂಗ್ ಕೂಡ ಮಾಡುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles