-ಮಂಜುಳಾ ಮುನವಳ್ಳಿ
ಕನ್ನಡಿಗರೊಬ್ಬರು ಇಂದಿಗೆ 10 ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ ಆಗಿದ್ದರೂ ಎಂಬುವುದೇ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ.

ಪ್ರಜಾಪ್ರಭುತ್ವ ಕಣ್ಗಾವಲು ಶಕ್ತಿಯಾಗಿ ನ್ಯಾಯಾಂಗವು ಇಂದಿಗೂ ತನ್ನದೇ ಆದ ಪ್ರಭಾವ ಉಳಿಸಿಕೊಂಡಿದೆ. ಚುನಾಯಿತ ಸರ್ಕಾರಗಳು ತಮ್ಮ ವ್ಯಾಪ್ತಿ ಮೀರಿ ಕೆಲಸ ಮಾಡಲು ಹೊರಟಾಗ, ನ್ಯಾಯಾಲಯಗಳು ಸರ್ಕಾರಗಳಿಗೆ, ನಾಗರೀಕ ಹಕ್ಕುಗಳ ಬಗ್ಗೆ ಕಲ್ಯಾಣ ರಾಜ್ಯ ಪರಿಕಲ್ಪನೆ, ಸಂವಿಧಾನದ ಆಶಯಗಳ ಕುರಿತು ತಿಳಿಹೇಳುತ್ತಲೇ ಇರುತ್ತದೆ.
ಭಾರತದಲ್ಲಿ ಪರಮೋಚ್ಛ ನ್ಯಾಯಾಲಯವೆಂದರೆ ಸರ್ವೋಚ್ಛ ನ್ಯಾಯಾಲಯ. ಇಂತಹ ಉನ್ನತ ಹುದ್ದೆಗೆ 10 ವರ್ಷಗಳ ಹಿಂದೆ ಕನ್ನಡಿಗರೊಬ್ಬರು ನ್ಯಾಯಾಧೀಶರಾಗಿ ಆಯ್ಕೆ ಆಗಿ ಅತ್ಯುತ್ತಮ ನ್ಯಾಯದಾನ ಮಾಡಿ “ಜನತಾ ನ್ಯಾಯಾಧೀಶ’’ ಎಂಬ ಬಿರುದು ಪಡೆದವರು ಜಸ್ಟೀಸ್ ವಿ. ಗೋಪಾಲಗೌಡರು.

06-10-1951ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪೆದ್ದೂರಿನಲ್ಲಿ ಗೋಪಾಲಗೌಡರ ಜನನವಾಯಿತು. ತಂದೆ ವೆಂಕಟಗೌಡರು, ತಾಯಿ ಸುಬ್ಬಮ್ಮ.
ಬಾಲ್ಯದಲ್ಲಿಯೇ ಶಿಸ್ತು ಸಂಯಮಕ್ಕೆ ಹೆಸರಾಗಿದ್ದ ಗೋಪಾಲಗೌಡರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ, ಕಾಲೇಜು ಶಿಕ್ಷಣ ಚಿಂತಾಮಣಿಯಲ್ಲಿ, ಬಿಎಸ್‌ಸಿ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಮುಗಿಸಿ 1975 ರಲ್ಲಿ ತಮ್ಮ ಕಾನೂನು ವಿದ್ಯಾಭ್ಯಾಸವನ್ನು ಎಸ್‌ಜೆಆರ್‌ಸಿಸಿ ಕಾಲೇಜಿನಲ್ಲಿ ಮುಗಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಗಾಂಧಿ, ಅಂಬೇಡ್ಕರ್, ಕುವೆಂಪು, ಪ್ರೊ. ನಂಜುಂಡಸ್ವಾಮಿರವರ ಹೋರಾಟಗಳಿಂದ ಪ್ರಭಾವಿತರಾದ ಗೋಪಾಲಗೌಡರು ಜನ ಚಳವಳಿಗಳ ಜೊತೆಗೆ ಗುರುತಿಸಿಕೊಂಡರು.

1978ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿಂದ ಸನ್ನದು ಪಡೆದು ಹಿರಿಯ ವಕೀಲರಾದ
ಕೆ. ಸುಬ್ಬರಾವ್ ಮತ್ತು ಎಸ್.ಸಿ. ರೆಡ್ಡಿ ವಕೀಲರ ಬಳಿ ತಮ್ಮ ವೃತ್ತಿಜೀವನ ಆರಂಭಿಸಿದರು. 1979ರಲ್ಲಿ ಸ್ವತಂತ್ರವಾಗಿ ಬೆಂಗಳೂರಿನ ಹೈಕೋರ್ಟ್ ನಲ್ಲಿ ಕೆಲಸ ಆರಂಭಿಸಿದ ಗೋಪಾಲಗೌಡರು ಕಾರ್ಮಿಕ ನ್ಯಾಯಾಲಯ, ಸಾಂವಿಧಾನಿಕ ವಿಷಯ, ರಿಟ್ ಅರ್ಜಿಗಳು, ಭೂ ಸುಧಾರಣೆಗಳ ಬಗ್ಗೆ ಎಲ್ಲಾ ನಾಗರೀಕ ವಿಷಯಗಳ ಕುರಿತು ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಗಮನಿಸಿದ ಘನ ಉಚ್ಛ ನ್ಯಾಯಾಲಯವು 11-06-1997ರಲ್ಲಿ ಗೋಪಾಲಗೌಡರಿಗೆ ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಿತು. ಅಲ್ಲಿ ಅವರ ಶಿಸ್ತು, ಕೆಲಸಗಳನ್ನು ಮೆಚ್ಚಿ 03-06-1999ರಲ್ಲಿ ಖಾಯಂ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಲಾಯಿತು.

23-06-2006 ರಿಂದ 23-03-2010ರ ವರೆಗೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ 25-03-2010ರಂದು ಒರಿಸ್ಸಾ ರಾಜ್ಯದ ಕಟಕ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಅತ್ಯುತ್ತಮ ಸೇವೆ ಸಲ್ಲಿಸಿದರು.
24-12-2012ರಂದು ಗೋಪಾಲಗೌಡರು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಆಯ್ಕೆಯಾದರು. ಉತ್ತಮ ಸೇವೆ ಸಲ್ಲಿಸಿದರು. ತ್ವರಿತಗತಿಯಾಗಿ ನ್ಯಾಯ ಒದಗಿಸಲು ಅವಿರತ ಶ್ರಮಿಸಿ ಜನರಿಂದ “ಜನತಾ ನ್ಯಾಯಾಧೀಶ’’ ಎಂಬ ಬಿರುದು ಪಡೆದರು. 2016 ರಲ್ಲಿ ನಿವೃತ್ತರಾದರು. ಮಾನವೀಯ ಮೌಲ್ಯವುಳ್ಳ ಕನ್ನಡಿಗರೊಬ್ಬರು ಇಂದಿಗೆ 10 ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಆಯ್ಕೆ ಆಗಿದ್ದರೂ ಎಂಬುವುದೇ ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ.
(ಲೇಖಕರು, ವಕೀಲರು, ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು)