27.7 C
Bengaluru
Wednesday, March 15, 2023
spot_img

ಮೈ ನವಿರೇಳಿಸುವ ವೈಕಿಂಗ್ ಇತಿಹಾಸ..!

-ವಿಜಯ್ ದಾರಿಹೋಕ

ಕನ್ನಡದ ಜನಪ್ರಿಯ ಚಿತ್ರ  ಕೆಜಿಎಫ್ 2 ನಲ್ಲಿ ಬರುವ ಸಂಜಯ್ ದತ್ ಪಾತ್ರ ಅಧೀರನ ವೇಷದ ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಅದು ಒಂಬತ್ತನೆಯ ಶತಮಾನದ ವೈಕಿಂಗ್ ಯುಗಕ್ಕೆ ಸೇರಿದ ದಿರಿಸು. ಈ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬಾದಾಮಿಯ ಚಾಲುಕ್ಯರು, ಕಲ್ಯಾಣದ  ರಾಷ್ಟ್ರಕೂಟರ ಆಳ್ವಿಕೆಯಿದ್ದು  ಸಂಸ್ಕೃತಿ, ಸಾಹಿತ್ಯ, ಶಿಲ್ಪಕಲೆಗಳು ಉಚ್ಛ್ರಾಯ ಸ್ಥಿತಿಯಲ್ಲಿದ್ದವು. ಇದೇ ಕಾಲದಲ್ಲಿ  ಕವಿರಾಜಮಾರ್ಗ ಕೂಡ ಹುಟ್ಟಿಕೊಂಡಿತ್ತು. ಇಂತಹ ಸಮಯದಲ್ಲಿ ಯೂರೋಪಿನ ಉತ್ತರ ಭಾಗದಲ್ಲಿ ಮಿಂಚಿ ಹೋದ  ವೈಕಿಂಗ್ ಇತಿಹಾಸದ  ಮೇಲೆ ಒಂದು ಪಕ್ಷಿ ನೋಟವನ್ನು ಬೀರುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ…

ವೈಕಿಂಗ್ ಜನಾಂಗ ಮೂಲತಃ ಇವತ್ತಿನ ನಾರ್ವೆ, ಸ್ವೀಡನ್ ಹಾಗೂ ಡೆನ್ಮಾರ್ಕ್ ಭಾಗಕ್ಕೆ ಸೇರಿದ ಸ್ಕಾಂಡಿನೇವಿಯಾ  ಪ್ರದೇಶಕ್ಕೆ ಸೇರಿದವರು. ಇವರನ್ನು ನೋರ್ಸ್ ಮೆನ್ ಅಂತಲೂ  ಕರೆಯುತ್ತಾರೆ. ನೋರ್ಸ್ ಮೆನ್ ಎಂದರೆ ಉತ್ತರದ ಮನುಷ್ಯರು ಎಂಬರ್ಥ. ಇವರು ಎಂಟರಿಂದ ಹನ್ನೊಂದನೆಯ ಶತಮಾನಕ್ಕೆ ಸೇರಿದವರು.

ಮೂಲತಃ ಈ ನೋರ್ಸ್ ಮೆನ್ ಗಳು ಕೃಷಿಕರು, ಮೀನುಗಾರರು, ಕರ ಕುಶಲ ವೃತ್ತಿಗೆ ಸೇರಿದವರು ಜೊತೆಗೆ ಸಮುದ್ರ ಯಾನಿಗಳು. ಅಲ್ಲಿನ  ಅತ್ಯಂತ ತಂಪು ಹವಾಮಾನ ಹಾಗೂ ಕೃಷಿಗೆ ಅಷ್ಟಾಗಿ ಅನುಕೂಲವಲ್ಲದ ಭೂಮಿಯಿಂದಾಗಿ ಇವರು ವ್ಯಾಪಾರ ವಹಿವಾಟುಗಳಿಗಾಗಿ  ಹೊಸ ಹೊಸ ಜಾಗಗಳನ್ನು ಹುಡುಕಿಕೊಂಡು ಹೊರಟವರು. ಇದಕ್ಕಾಗಿ ಅವರು ನಾರ್ವೇಜಿಯನ್ ಸಮುದ್ರ, ಬಾಲ್ಟಿಕ್ ಸಾಗರ ಹಾಗೂ ಅಟ್ಲಾಂಟಿಕ್ ಸಮುದ್ರ ಗುಂಟ ಜಲ ಯಾನ ಕೈಗೊಂಡರು. ಹೀಗೆ ಸಮುದ್ರ ಯಾತ್ರೆಯಲ್ಲಿ ತೀರಕ್ಕೆ ತಾಕಿಕೊಂಡಿರುವ  ಊರು, ಕೇರಿಗಳನ್ನು ಕೊಳ್ಳೆ ಹೊಡೆದು, ಲೂಟಿ ಮಾಡುವುದಕ್ಕೆ ವೈಕಿಂಗ್ ಎಂದೂ ಹಾಗೂ ಹಾಗೆ ದಂಡಯಾತ್ರೆಗೆ  ಹೊರಡುವ ನೋರ್ಸ್ ಮೆನ್ ಗಳಿಗೆ ವೈಕಿಂಗ್ ಗಳು ಎಂದೂ ಕರೆಯಲಾಯಿತು. 

ವೈಕಿಂಗ್ ಜನರ ಪೇಗನ್ ಧರ್ಮ

ವೈಕಿಂಗ್ ಜನರು ನಂಬುತ್ತಿದ್ದ ಪೇಗನ್ ಧರ್ಮದಲ್ಲಿ ಒಂದಕ್ಕಿಂತ ಹೆಚ್ಚು ದೇವತೆಗಳು ಇದ್ದವು. ಇದರ ಜೊತೆಗೆ ಸುತ್ತಲಿನ ನಿಸರ್ಗ ಇವರ ಧರ್ಮ, ನಂಬಿಕೆಗಳಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಪ್ರಸಿದ್ಧಿ ಮತ್ತು ಸಂಪತ್ತು ಜೀವನದ ಮಹತ್ವದ ಸಂಗತಿಗಳಾಗಿದ್ದವು.  ಶೌರ್ಯ, ಧೈರ್ಯ ಹಾಗೂ  ವೀರ ಸ್ವರ್ಗ ಬದುಕಿನ  ದಿಕ್ಸೂಚಿ ಅಂಶ ಗಳಾಗಿದ್ದವು. ಸಾವಿನ ನಂತರ ಬೇರೆ ಲೋಕದಲ್ಲಿ ಜೀವನ ಇದೆಯೆಂದೂ, ವೀರ ಮರಣಕ್ಕೆ  ತಕ್ಕ ಸುಖದ ಜೀವನ ಸಾವಿನ ಬಳಿಕ ದೊರೆಯುತ್ತದೆ ಎಂಬುದು ಅವರ ಅಚಲ ನಂಬಿಕೆಯಾಗಿತ್ತು. ಹಾಗಾಗಿಯೇ, ಎಲ್ಲ ದಾಳಿ, ಯುದ್ಧಗಳಲ್ಲಿ  ಅತ್ಯಂತ ನಿರ್ಭೀತಿಯಿಂದ ಹಾಗೂ  ಹೋರಾಡುತ್ತಲೇ ಸಾಯಬೇಕೆಂಬ ಛಲದಿಂದ ಮುನ್ನುಗ್ಗುತ್ತಿರುವುದರಿಂದ, ಎದುರಾಳಿ ಗಳಲ್ಲಿ  ಇವರ ಬಗ್ಗೆ ಪ್ರಳಯಾಂತಕ ಭಯ ಸೃಷ್ಟಿಯಾಗಿದ್ದರಲ್ಲಿ ಅಚ್ಚರಿಯಿಲ್ಲ. ಸಮುದ್ರಾನ್ವೇಷಣೆಯ ಜೊತೆಗೆ ಸಹಜ ಕ್ರೂರತೆ, ನಿರ್ದಯ ದಾಳಿ, ಹತ್ಯೆ, ಲೂಟಿ ಗಳಿಗಾಗಿ ಇತಿಹಾಸದಲ್ಲಿ ವೈಕಿಂಗ್ ಜನರು ಕುಖ್ಯಾತಿ ಗಳಿಸಿಕೊಂಡಿದ್ದಾರೆ.

ವೈಕಿಂಗ್ ದೇವತೆಗಳು

ಪೇಗನ್ ನಂಬಿಕೆಯಲ್ಲಿ, ಎಲ್ಲ ದೇವತೆಗಳ ತಂದೆ ಒಡಿನ್ ಎಂಬ ದೇವರು. ಈತನ ಪತ್ನಿ ಫ್ರಿಗ್. ಆಕೆ ಪ್ರೇಮದ ಅಧಿದೇವತೆ. ಇನ್ನೊಬ್ಬ ಮಹತ್ವದ ದೇವರು ಥೋರ್. ಈತ ಗುಡುಗುಗಳ ಅಧಿ ದೇವತೆಯಾಗಿದ್ದು ಮಾನವರನ್ನು ರಕ್ಷಿಸುವವನು. ಅಂತೆಯೇ ಟಿಯೇರ್, ಯುದ್ದ ಮತ್ತು ನ್ಯಾಯದ ಅಧಿದೇವತೆ. ಇವೆಲ್ಲ ದೇವತೆಗಳ ಬಗ್ಗೆ, ದೈತ್ಯರ ಬಗ್ಗೆ ಹಾಗೂ  ಎಲ್ವ್ಸ್ ಗಳೆಂಬ ಕಿನ್ನರರ ಬಗ್ಗೆ ಅನೇಕಾನೇಕ ದಂತ  ಕಥೆಗಳು, ಜನಪದ ಕಥೆಗಳು  ನೂರ್ಸ್ ಪುರಾಣದಲ್ಲಿ ಯಥೇಚ್ಚವಾಗಿ ಕಾಣ ಸಿಗುತ್ತವೆ.  ನೂರ್ಸ್ ಪುರಾಣಗಳಲ್ಲಿ ಒಟ್ಟು ಒಂಬತ್ತು ಲೋಕಗಳು ಬರುತ್ತವೆ.

ವೈಕಿಂಗ್ ಜನರು  ಯುದ್ಧದಲ್ಲಿ ಹೋರಾಟ ಮಾಡುವಾಗ ಮಡಿದರೆ , ತಮಗೆ ಅಸ್ಗರ್ ಲೋಕದಲ್ಲಿ ಓಡಿನ್ ಸ್ವತಃ ಆಳುತ್ತಿರುವ  ವಲ್ಹಲ್ಲಾ ಎಂಬ ಒಡ್ಡೋಲಗದಲ್ಲಿ ಸ್ಥಾನ ಸಿಗುತ್ತದೆ ಎಂದು ಬಲವಾಗಿ ನಂಬಿದ್ದರು. ಅದೊಂದು ರೀತಿಯ ವೀರ ಸ್ವರ್ಗ.ಹಾಗೊಮ್ಮೆ ಆಗದೇ ಸಾಮಾನ್ಯವಾಗಿ ಅಥವಾ ವಯಸ್ಸಾಗಿ  ಮಡಿದರೆ  ಹೆಲ್ ಹೀಮ್ ಎಂಬ ಲೋಕಕ್ಕೆ ಹೋಗಬೇಕಾದೀತು ಹಾಗೂ ಅದು ಪಾಪಿಷ್ಟರು ತಮ್ಮ ಪಾಪಕ್ಕೆ ತಕ್ಕಂತೆ ಶಿಕ್ಷೆ ಅನುಭವಿಸುವಂತ ಲೋಕ ಎಂದೂ ತಿಳಿದಿದ್ದರು. ಈ ಎರಡು ಆಯ್ಕೆಗಳು ಇದ್ದುದರಿಂದ ವೈಕಿಂಗ್ ಜನರು ಯುದ್ಧದಲ್ಲಿ ಹೋರಾಡಿ ಸಾಯುವುದನ್ನು ಹೆಚ್ಚುಇಷ್ಟ ಪಡುತ್ತಿದ್ದರು.

ಸಮುದ್ರಯಾನ ಮತ್ತು ವ್ಯವಹಾರ 

ವೈಕಿಂಗ್ ಜನರ  ಯಾತ್ರೆ, ವ್ಯವಹಾರಗಳ  ವ್ಯಾಪ್ತಿ ಇಂಗ್ಲಂಡ್, ಸ್ಕಾಟ್ ಲ್ಯಾಂಡ್ , ಐರ್ಲಾಂಡ್ , ಉತ್ತರ ಹಾಗೂ ಮಧ್ಯ ಯುರೋಪ್ ಅಲ್ಲದೇ ಅತ್ತ ರಷ್ಯಾದ ಕಡೆಗೂ ಹಬ್ಬಿತ್ತು . ಕ್ರಿಸ್ತ ಶಕೆ 850 ರಲ್ಲಿ ಹೂತಿಟ್ಟ ನಾಣ್ಯಗಳ ಚೀಲ ಇತ್ತೀಚಿಗೆ 2008 ರಲ್ಲಿ ಸ್ವೀಡನ್ ನಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಪರಿಶೋಧನೆಯಲ್ಲಿ ದೊರಕಿದೆ. ಈ ನಾಣ್ಯಗಳಲ್ಲಿ ಹೆಚ್ಚಿನವು ಅರಬ್ ರಾಷ್ಟ್ರಗಳಾದ ಸಿರಿಯಾ ಹಾಗೂ ಇರಾಕ್ ಗಳಿಂದ ಬಂದಿದ್ದವುಗಳು ಆಗಿದ್ದು, ಆ ಕಾಲದಲ್ಲಿ ವೈಕಿಂಗ್ ಜನರು  ಅಲ್ಲಿಯೂ  ವ್ಯವಹರಿಸಿದ್ದರು  ಎಂಬುದು ತಿಳಿದು ಬರುತ್ತದೆ. ಹೀಗೆಯೇ ಕೂಡಿಟ್ಟ  ಅರಬ್ ಮೂಲದ ಬೆಳ್ಳಿ ನಾಣ್ಯಗಳ ಸಂಗ್ರಹ ಇಂಗ್ಲಂಡ್ ನಲ್ಲಿಯೂ ದೊರೆತಿದೆ.

ಸಮುದ್ರಯಾನದ ಹಾಗೂ ಆ  ಜೀವನದ ಬಗ್ಗೆ ವೈಕಿಂಗ್ ಜನರಿಗಿದ್ದ ಪ್ರೀತಿ, ಪರಿಣಿತಿ ಅಸಾಮಾನ್ಯ ವಾಗಿತ್ತು. ಯಾವುದೇ ದಿಕ್ಸೂಚಿ ಇಲ್ಲದೇ ಕೇವಲ ಸೂರ್ಯ, ಹಾಗೂ ನಕ್ಷತ್ರಗಳ ಸ್ಥಾನಮಾನಗಳ ಸಹಾಯದಿಂದಲೇ  ತಮ್ಮ ಪ್ರಯಾಣದ ದಿಕ್ಕು ದೆಸೆಗಳನ್ನು ನಿರ್ಧರಿಸುತ್ತಿದ್ದರು. ವಿಷಮ ಪರಿಸ್ಥಿತಿಯಲ್ಲಿ ಸಾಗರದ ಮೂಲಕ ತಿಂಗಳು ಗಟ್ಟಲೆ ಪ್ರಯಾಣಿಸಲು, ಮಧ್ಯೆ ಮಧ್ಯೆ ಸಿಗುವ ಭಯಂಕರ ತೂಫಾನುಗಳಿಂದಲೂ ಪಾರಾಗಿ ಬರಬೇಕಿದ್ದರೆ ಹಡಗುಗಳು ಕೂಡ ಅಷ್ಟೇ ಬಲಿಷ್ಟವಾಗಿರಬೇಕು. ಆ ಕಾಲದಲ್ಲಿ ಇಂದಿನಂತೆ ಯಂತ್ರ ಚಾಲಿತ ಬೋಟುಗಲಿರಲಿಲ್ಲ. ಮರ ಹಾಗೂ ಕಬ್ಬಿಣದ ಜೋಡಣೆಗಳನ್ನು ಹಾಗೂ ಬಟ್ಟೆಯ ಹಾಯಿ  ಬಳಸಿ ಸುಸ್ಥಿರವಾದ ಬೃಹತ್ ಬೋಟು ಕಟ್ಟುವುದರಲ್ಲಿ ಅವರದು  ಎತ್ತಿದ ಕೈ. ಮುಂದೆ ಬಾಗಿದ ಮರದ ಹಡಗುಗಳನ್ನು ದೈಹಿಕವಾಗಿ  ಬಲಿಷ್ಠರಾಗಿದ್ದ ವೈಕಿಂಗ್ ಜನರು ಹುಟ್ಟು ಹಾಕುತ್ತ ವೇಗವಾಗಿ ನಡೆಸಿಕೊಂಡು ಹೋಗುವ ಲಾಂಗ್ ಶಿಪ್ ಗಳನ್ನು ಅಂತೆಯೇ , ಲೂಟಿ ಮಾಡಿದ ವಸ್ತುಗಳನ್ನೂ, ಪ್ರಾಣಿಗಳನ್ನು, ಗುಲಾಮರನ್ನು ಹೇರಿಕೊಂಡು ಬರಬಹುದಾದ ದೊಡ್ಡದಾದ ನಾರ್ ಎಂಬ ಹಡುಗುಗಳನ್ನೂ ಬಳಸುತ್ತಿದ್ದರು .

ವೈಕಿಂಗ್ ಜನರು ವಿದೇಶದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕಾಗಿ  ಬಳಸುತ್ತಿದ್ದುದು ಅಂಬರ್ ಮರದ ವಸ್ತುಗಳು,ದಂತ, ಪ್ರಾಣಿಗಳ ಫರ್ ಹಾಗೂ ತಾವು ದಾಳಿಯಲ್ಲಿ ಲೂಟಿ ಮಾಡಿದ ಬೆಲೆ ಬಾಳುವ ವಸ್ತುಗಳನ್ನು,ಹಿಡಿದು ತಂದ ಗುಲಾಮ್ರನ್ನೂ ಕೂಡ ಮಾರಾಟ ವ್ಯವಹಾರಗಳಲ್ಲಿ ಉಪಯೋಗಿಸುತ್ತಿದ್ದರು. ಅಲ್ಲದೇ  ಬೆಳ್ಳಿ, ಚಿನ್ನ, ರೇಷ್ಮೆ, ಹಾಗೂ ಕುಸುರಿಯ ವಸ್ತುಗಳನ್ನು ತಮಗಾಗಿ ವಿನಿಮಯ ಮಾಡಿಕೊಳ್ಳುತ್ತಿದ್ದರು. ಬೆಳ್ಳಿ ಹಾಗೂ ಇತರ ವಸ್ತುಗಳನ್ನು  ತೂಗಲು ತಕ್ಕಡಿಯನ್ನು ಉಪಯೋಗಿಸುತ್ತಿದ್ದರು. 

ಬ್ರಿಟನ್ ಮೇಲೆ ಸತತ ವೈಕಿಂಗ್ ದಾಳಿ 

ಕ್ರಿಸ್ತ ಶಕೆ 780 ಹಾಗೂ 850 ರ ನಡುವೆ ವೈಕಿಂಗ್ ಹಡಗುಗಳು  ಸಮುದ್ರದಾಚೆಯ ಬ್ರಿಟನ್ ಕಡೆಗೆ ಸತತವಾಗಿ ದಾಳಿಯಿಟ್ಟವು. ಆ ಸಮಯದಲ್ಲಿ ಬ್ರಿಟನ್ ನಲ್ಲಿ ಆಂಗ್ಲೋ ಸ್ಯಾಕ್ಸನ್ಸ್ ಗಳು ನೆಲೆಸಿದ್ದರು. ಒಂದು ಕಾಲದಲ್ಲಿ ಇವರು ಕೂಡ ವೈಕಿಂಗ್ ಪ್ರದೇಶಗಳಿಂದಲೇ ವಲಸೆ ಹೋಗಿದ್ದು, ಹಳೆಯ ನೂರ್ಸ್ ಭಾಷೆ ಬಲ್ಲವರಾಗಿದ್ದರೂ, ತಮ್ಮ  ಪೇಗನ್ ಧರ್ಮ ಬಿಟ್ಟು ಆಗಲೇ  ಕ್ರಿಶ್ಚಿಯನ್ ಧರ್ಮಾನುಯಾಯಿಗಳಾಗಿದ್ದರು. ಸಮುದ್ರ ತಟಕ್ಕೆ ಹತ್ತಿರವಾಗಿದ್ದ  ಆಂಗ್ಲೋ ಸ್ಯಾಕ್ಸನ್ಸ್ ನಡೆಸುತ್ತಿದ್ದ ಶಾಂತಿಯುತ  ಮೊನಾಸ್ಟ್ರಿ  (ಮಠ) ಗಳಿಗೆ ವೈಕಿಂಗ್ ಜನ ತಮ್ಮ ಹಡಗುಗಳಲ್ಲಿ ಹಠಾತ್ತನೆ ಅಟ್ಟಹಾಸ ಗೈಯ್ಯುತ್ತ  ದಾಳಿ ನಡೆಸಿ,  ಅಲ್ಲಿನ ಧರ್ಮ ಗುರು, ಸನ್ಯಾಸಿಗಳನ್ನು ಕೊಚ್ಚಿ ಕೊಂದು, ಚಿನ್ನ, ಬೆಳ್ಳಿಯಂತ ವಸ್ತುಗಳನ್ನು, ಅಮೂಲ್ಯ ಧರ್ಮ ಗ್ರಂಥಗಳನ್ನು ಕೊಳ್ಳೆ ಹೊಡೆದು ಹೋಗುತ್ತಿದ್ದರು. ಹೀಗಾಗಿ ಸಮುದ್ರ ತಟದ ಕ್ರಿಶ್ಚಿಯನ್ ಧರ್ಮದ ಮಠಗಳು ಹಾಗೂ ಹಳ್ಳಿಗಳು ವೈಕಿಂಗ್ ದಾಳಿಯ ಯಾವತ್ತೂ  ಭೀತಿಯ ನಡುವೆ ಬದುಕುವ ಪರಿಸ್ಟಿತಿ ನಿರ್ಮಾಣವಾಗಿತ್ತು.

ಈ ನಡುವೆ ಬ್ರಿಟನ್ ಮೇಲೆ ಅನೇಕ ಬಾರಿ  ವೈಕಿಂಗ್ ದಾಳಿ ನಡೆದರೂ ಪ್ರತಿ ಬಾರಿಯೂ  ಅಲ್ಲಿನ ಆಂಗ್ಲೋ ಸಾಕ್ಶನ್ ರ ಪ್ರತಿ ದಾಳಿಯಿಂದ ಹಿಮ್ಮೆಟ್ಟ ಬೇಕಾಗಿ ಬಂತು. ಕ್ರಿ.ಶ. 850 ರಲ್ಲಿ 350 ವೈಕಿಂಗ್ ಹಡಗುಗಳು ಥೇಮ್ಸ್ ನದಿಯನ್ನು ಪ್ರವೇಶಿಸಿ ಲಂಡನ್ ಮತ್ತು ಕ್ಯಾಂಟನ್ ಬರಿ ಮೇಲೆ ದಾಳಿ ನಡೆದು ಆಂಗ್ಲೋ ಸಾಕ್ಶನ್ನರು ಹಿಮ್ಮೆಟ್ಟಿ ಆ ಚಳಿಗಾಲ ಪೂರ್ತಿ ವೈಕಿಂಗ್ ಸೇನೆ  ಅಲ್ಲಿಯೇ ಬೀಡು ಬಿಟ್ಟಿತ್ತು. ಕೆಲವು ಇತಿಹಾಸ ಕಾರರು  ರಾಗ್ನಾರ್ ಲಾಡ್ ಬ್ರೂಕ್ ಎನ್ನುವ ವೈಕಿಂಗ್ ವೀರಾಧಿವೀರನ  ಬಗ್ಗೆ  ಪ್ರಸ್ತಾಪಿಸುತ್ತಾರೆ. ಈತ ನಿಜಕ್ಕೂ ಅಸ್ತಿತ್ವದಲ್ಲಿದ್ದನೆ ಅಥವಾ ಕಾಲ್ಪನಿಕವೇ ಎಂಬುದರ ಬಗ್ಗೆ ಇಂದಿಗೂ ಗೊಂದಲವಿದೆ. ಮುಂದೆ  ರಾಗ್ನಾರ್ ಬಗ್ಗೆ ಹಾಗೂ ಆತನನ್ನು ಇಂಗ್ಲೆಂಡ್ ನ ರಾಜನೊಬ್ಬ ಹತ್ಯೆಗೈದಾಗ ಪ್ರತೀಕಾರವಾಗಿ ವೈಕಿಂಗ್ ನ  ಹೀಥನ್ ಮಹಾ  ಸೇನೆ  865 ನೆ ಇಸವಿಯಲ್ಲಿ ಇನ್ನೊಂದು ದಾಳಿ ಬ್ರಿಟನ್ ಮೇಲೆ ನಡೆಸಿದರ ಬಗ್ಗೆ ದಂತ ಕಥೆಗಳಿವೆ. ರಾಗ್ನಾರ್ ಇದ್ದನೋ ಇಲ್ಲವೋ ಆದರೆ ವೈಕಿಂಗ್ ಯುಗದಲ್ಲಿ ಅಂತಹ  ಅನೇಕ ವೀರರು ವೈಕಿಂಗ್ ಪರವಾಗಿ ಅನೇಕ ಯುದ್ಧಗಳನ್ನು  ಗೆದ್ದು ಕೊಟ್ಟಿದ್ದು ಇತಿಹಾಸ. ಆದರೆ ಮೊದ ಮೊದಲು ಹಿನ್ನಡೆಗೊಂಡರೂ  ಅಲ್ಫ್ರೆಡ್ ಎಂಬ ಪ್ರಖ್ಯಾತ  ಆಂಗ್ಲೋ ಸ್ಯಾಕ್ಶನ್ ರಾಜ ವೈಕಿಂಗ್ ಪಡೆಗಳಿಗೆ ಸೋಲಿನ ರುಚಿ ಉಣಿಸಿದ್ದ.

ರೂನ್ ಸ್ಟೋನ್

ರೂನ್ ಸ್ಟೋನ್ ಎಂಬ ಕಲ್ಲು ಬಂಡೆಯ ಮೇಲೆ ಹಳೆಯ ನೂರ್ಸ್ ಭಾಷೆಯ ರೂನ್ ಅಕ್ಷರಮಾಲೆಯಲ್ಲಿ  ಬರೆದ ಶಾಸನಗಳನ್ನುಇಂದಿಗೂ ಸ್ವೀಡನ್, ನಾರ್ವೆ, ಡೆನ್ಮಾರ್ಕ್ ಗಳಲ್ಲಿ ಕಾಣಬಹುದು. ವೈಕಿಂಗ್ ಜನರ ಸಮುದ್ರ ಯಾತ್ರೆ,ಅರಸರು, ಯುದ್ಧದ ಬಗ್ಗೆ, ವೀರರ ಹಾಗೂ ಅಪ್ತರ ಬಗ್ಗೆ ಚಿತ್ರ, ಬರಹಗಳನ್ನು ಈ  ಶಾಸನಗಳಲ್ಲಿ ಕೆತ್ತಲಾಗಿದೆ. ವೈಕಿಂಗ್ ಸಂಪರ್ಕ ಇಂಗ್ಲೆಂಡ್ ನಲ್ಲಿ ಹಳೆಯ ಇಂಗ್ಲಿಶ್ ಭಾಷೆಯ ಮೇಲೂ ತನ್ನ ಪ್ರಭಾವ ಬೀರಿದೆ. ಇಂದು ಉಪಯೋಗಿಸುವ ಲೆಗ್, ಸ್ಕಿನ್, ಸ್ಕೈ, ಸ್ಕಲ್,ನೈಫ್, ಬ್ಯಾಗ್, ಗೆಸ್ಟ್, ಗಿಫ್ಟ್, ಕಿಕ್, ಸ್ಕೇರ್, ಲೂಸ್, ವೀಕ್  ಇತ್ಯಾದಿ ಪದಗಳು ಹಳೆಯ ನೂರ್ಸ್ ಭಾಷೆಯಿಂದ ಬಂದವುಗಳು. ಇಂದಿಗೂ ಇಂಗ್ಲೆಂಡಿನ  ಡರ್ಬಿ ಅಂತಹ ಅನೇಕ ಊರುಗಳ ಹೆಸರುಗಳು ವೈಕಿಂಗ್ ಮೂಲದವುಗಳಾಗಿವೆ.

ಆಹಾರ ಹಾಗೂ ಉಡುಗೆ ತೊಡುಗೆಗಳು 

ವೈಕಿಂಗ್ ಜನರ ಆಹಾರ ಹೆಚ್ಚಾಗಿ ಮಾಂಸ,ಮೀನು,ಕಾಳು ಧಾನ್ಯ ಹಾಗೂ ಹಾಲಿನ ಉತ್ಪನ್ನಗಳು ಹೆಚ್ಚಾಗಿದ್ದವು. ವೈಕಿಂಗ್ ಜನರು ಬಾರ್ಲಿ,ನೀರು ಹಾಗೂ ಯೀಸ್ಟ್ ಗಳಿಂದ ತಯಾರಿಸಿದ ಏಲ್ ಎಂಬ ಮದ್ಯವನ್ನು ಸೇವಿಸುತ್ತಿದ್ದರು. 

ಮೊದಲು ಹಗುರ ಉಣ್ಣೆ ಅಥವಾ  ಲಿನಿನ್ ಅಂಗಿಯ ಮೇಲೆ, ಉದ್ದ ತೋಳಿನ ಮೊಣಕಾಲಿನ ವರೆಗಿನ ದಪ್ಪ ಜಾಕೆಟ್ ತರದ ನೇಯ್ದ ವಿನ್ಯಾಸದ  ನಿಲುವಂಗಿಯನ್ನು ಧರಿಸುತ್ತಿದ್ದರು. ಮಹಿಳೆಯರು ಕೂಡ ಕಾಲಿನ ವರೆಗೂ ಸ್ಕರ್ಟ್ ತೊಟ್ಟು ಮೇಲೆ ಏಪ್ರಾನ್ ತರದ ಮೇಲಂಗಿಯನ್ನು ಧರಿಸುತ್ತಿದ್ದರು.

ವೈಕಿಂಗ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳು .

1. ಕೊಲಂಬಸ್ ಗಿಂತ  500 ವರ್ಷಗಳ ಮುಂಚೆಯೇ ಅಮೇರಿಕಾದ ತೀರಕ್ಕೆ ಲೀಫ್ ಎರಿಕ್ಸನ್ ಎಂಬಾತ  ವೈಕಿಂಗ್ ಅನ್ವೇಷಕನಾಗಿ ಕಾಲಿಟ್ಟಿದ್ದ ಎಂದರೆ ಅಚ್ಚರಿಯಾದೀತು. ಇದೆ  ಲೀಫ್ ನ ತಂದೆ ಎರಿಕ್ ಎಂಬಾತ ಮೊಟ್ಟ ಮೊದಲು ಗ್ರೀನ್ ಲ್ಯಾಂಡ್ ಗೆ ಕಾಲಿಟ್ಟು ಜನ ವಸತಿ ಆರಂಭಿಸಿದ್ದ.

2.  ವೈಕಿಂಗ್ ರ ನೂರ್ಸ್ ಸಂಸ್ಕೃತಿ ರೋಮನ್ ಹಾಗೂ ಗ್ರೀಕ ಪುರಾಣಗಳ ನಂತರದ  ಕಾಲದಲ್ಲಿ  ಹುಟ್ಟಿದ್ದರೂ  ಅವರು ತಮ್ಮದೇ ಆದ  ದೇವತೆಗಳನ್ನು ಆರಾಧಿಸುತ್ತಿದ್ದರು. ಸ್ಯಾಟರ್ ಡೆ ಒಂದನ್ನು ಬಿಟ್ಟು ಉಳಿದೆಲ್ಲಾ ದಿನಗಳೂ ನೋರ್ಸ್ ದೇವತೆಗಳ ಹೆಸರಿನ ಮೂಲದವೇ ಆಗಿವೆ. ಉದಾಹರಣೆಗೆ ಫ್ರೈಡೆ  ಫ್ರಿಗ್ ದೇವತೆಯ ಹೆಸರಿನೊಂದಿಗೆ ಫ್ರಿಗ್ ಡೇ ಎಂಬರ್ಥದಲ್ಲಿ  ಥಳುಕು ಹಾಕಿಕೊಂಡಿದೆ.

3. ವೈಕಿಂಗ್ ಜನರು ದಿನಕ್ಕೆ ಎರಡೇ ಬಾರಿ ಊಟ ಮಾಡುತ್ತಿದ್ದರು. ಸೂರ್ಯೋದಯವಾಗಿ ಒಂದು ಗಂಟೆಯ ಬಳಿಕ ಬೆಳಗಿನ ಊಟ  ಹಾಗೂ ಸಂಜೆ ದಿನದ ಕೆಲಸ ಮುಗಿದ ಮೇಲೆ ರಾತ್ರಿಯ ಊಟವಾಗಿತ್ತು. 

4. ಸಿಹಿ ರುಚಿ ಪದಾರ್ಥವಾಗಿ ಕೇವಲ ಜೇನುತುಪ್ಪವನ್ನು ಬಳಸುತ್ತಿದ್ದರು. ಬೆಲ್ಲ, ಸಕ್ಕರೆ ಅವರಿಗೆ ತಿಳಿದಿರಲಿಲ್ಲ.

5. ಅಂದಿನ ಉಳಿದ ನಾಗರಿಕತೆಗಳಿಗೆ ಹೋಲಿಸಿದರೆ, ನೋರ್ಸ್ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಸಮಾನ ಸ್ಥಾನಮಾನಗಳು ಇದ್ದವು. ಆಕೆಗೆ ವಿವಾಹ ವಿಚ್ಚೇದನೆಗೆ, ಸ್ವಂತ ವ್ಯವಹಾರ, ಭೂಮಿಯನ್ನು ಹೊಂದಲು ಅಧಿಕಾರಗಳಿದ್ದವು. ಅವಕಾಶ ಇದ್ದಾಗ ಶೀಲ್ಡ್ ಮೈಡನ್ ಎಂದು ಕರೆಯಲ್ಪಡುವ ವೀರ ವೈಕಿಂಗ್ ವನಿತೆಯರೂ ಕತ್ತಿ,ಗುರಾಣಿ ಹಿಡಿದು ಯುದ್ದ ಮಾಡುತಿದ್ದದ್ದೂ ಉಂಟು.   

ನೂರ್ಸ್ ಜನರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಮುಂಬರುವ ಬೆಳೆಯ ಬಗ್ಗೆ,ಭವಿಷ್ಯ ನುಡಿಯುವ ಶ್ರೀಗಳ ಬಳಿಗೆ ಕಣಿ ಕೇಳಲು  ಹೋಗುತ್ತಿದ್ದದ್ದೂ ಉಂಟು.

6. ವೈಕಿಂಗ್ ಜನರು  ಅಲಂಕರಿಸಿದ ದೋಣಿಯಲ್ಲಿ ಆಭರಣ ಹಾಗೂ ಇತರ ವಸ್ತುಗಳನ್ನು ತುಂಬಿ  ದೇಹವನ್ನು ಹೂಳುವುದರ ಮೂಲಕ ಶವ ಸಂಸ್ಕಾರ ಮಾಡುತ್ತಿದ್ದರು.

7. ಸುಧೀರ್ಘ ಸಮುದ್ರ ಯಾನದಲ್ಲಿ ಎಂಥಹ ವಿಷಮ ಪರಿಸ್ಥಿತಿಯಲ್ಲೂ ಧಕ್ಕೆಗೊಳ್ಳದ ಹಡಗು, ಬೋಟು ಕಟ್ಟುವುದರಲ್ಲಿ ಸಿದ್ಧ ಹಸ್ತರಾಗಿದ್ದರು. ಆಳ ಸಮುದ್ರದಿಂದ ಹಿಡಿದು, ತೆಳುವಾದ ತೀರದ ನೀರಲ್ಲೂ ಉಪಯೋಗಿಸಬಹುದಾಗಿದ್ದ ಪ್ರಸಿದ್ದವಾದ ಲಾಂಗ್ ಶಿಪ್ ನ ವಿಶಿಷ್ಟ ವಿನ್ಯಾಸ  ಅನೇಕ  ಶತಮಾನಗಳ ವರೆಗೆ ಉಳಿದ ನಾಗರಿಕತೆ, ರಾಷ್ಟ್ರೀಯರಿಗೆ ಹಡಗು ನಿರ್ಮಾಣಕ್ಕೆ ಮಾದರಿ ಹಾಗೂ  ಸ್ಫೂರ್ತಿ ಒದಗಿಸಿಕೊಟ್ಟಿತ್ತು.

8. ನೂರ್ಸ್ , ವೈಕಿಂಗ್ ಸಂಬಂಧಿತ ಅನೇಕ ಸಾಹಸಯುಕ್ತ, ರಂಜನೀಯ, ದಂತ ಕಥೆಗಳು ಪೀಳಿಗೆ ಯಿಂದ ಪೀಳಿಗೆಗೆ ಮೌಖಿಕವಾಗಿ ಹರಡಿದ  ಹೆಚ್ಚಿನವು ನಮಗೆ  ಐಸ್ಲ್ಯಾಂಡಿಕ್ ಭಾಷೆಯಲ್ಲಿ ಕಾವ್ಯಗಳಾಗಿ, ವೀರ ಗಾಥೆಗಳಾಗಿ ದೊರಕುತ್ತವೆ.

9. ವಿಶೇಷ ಕೆತ್ತನೆಯ ಹರಿತವಾದ  ಖಡ್ಗ ಪ್ರತಿ  ವೈಕಿಂಗ್ ಬಳಿಯೂ ಇರಬಹುದಾದ ಅಮೂಲ್ಯವಾದ ಆಸ್ತಿಯಾಗಿತ್ತು. ವೈಕಿಂಗ್ ಜನರು  ಕಸರತ್ತು, ಈಜು ಇತ್ಯಾದಿ ದೈಹಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸದಾ ತೊಡಗಿಸಿಕೊಂಡಿರುತ್ತಿದ್ದರು. ಉಳಿದ ಯುರೋಪಿಯನ್ನರಿಗೆ ಹೋಲಿಸಿದರೆ ಸ್ವಚ್ಚ ಜೀವನ ನಡೆಸುತ್ತಿದ್ದರು. 

10. 1066 ರಲ್ಲಿ ಕೊನೆಯ ವೈಕಿಂಗ್ ರಾಜ ಹರಾಲ್ಡ್ ಇಂಗ್ಲೆಂಡಿನ ಸ್ಟಾಂಫರ್ಡ್ ಬ್ರಿಜ್ ಕದನದಲ್ಲಿ ಹತ್ಯೆಯಾಗಿದ್ದು ವೈಕಿಂಗ್ ಯುಗಕ್ಕೆ ಅಂತ್ಯ ಹಾಡಿತು. ಆ ವೇಳೆಗಾಗಲೇ, ಕ್ರಿಶ್ಚಿಯನ್ ಧರ್ಮ ವೈಕಿಂಗ್ ಧರ್ಮವನ್ನು ಹೆಚ್ಚು ಕಮ್ಮಿ ಪೂರ್ತಿಯಾಗಿ ಆವರಿಸಿ ಕೊಂಡು ವೈಕಿಂಗ್ ಪ್ರಾಬಲ್ಯ ಕುಗ್ಗುತ್ತಾ ಬಂದಿತ್ತು..

೧೧. ಇತ್ತೀಚಿಗೆ ವೈಕಿಂಗ್ ಇತಿಹಾಸದ  ಮೇಲೆ  ಆಧರಿಸಿದ ಕಾಲ್ಪನಿಕ ಜನಪ್ರಿಯ ಟಿವಿ ಧಾರವಾಹಿ ವೈಕಿಂಗ್ಸ್ ಎನ್ನುವ ಹೆಸರಿನಲ್ಲಿ 6 ಸರಣಿಗಳಲ್ಲಿ 2013 ರಿಂದ 2020 ರ ನಡುವೆ ಪ್ರಸಾರವಾಗಿ ಅತ್ಯಂತ ಜನಪ್ರಿಯವಾಗಿದ್ದು ರೋಚಕ ಹಾಗೂ ಕುತೂಹಲಭರಿತ ದೃಶ್ಯ ಕಾವ್ಯಗಳಿಂದ ಅನೇಕ ಅಭಿಮಾನಿ ವೀಕ್ಷಕರನ್ನು ಪಡೆದುಕೊಂಡಿತ್ತು..

ಕೇವಲ ಸಮುದ್ರ ಮಾರ್ಗದ ಮೂಲಕ ದಾಳಿಗಾಗಿ ಅಷ್ಟೇ ಅಲ್ಲ, ಉತ್ತಮ ನ್ಯಾಯಾಂಗ, ಕಾನೂನು ವ್ಯವಸ್ಥೆ, ಕೂಡ ಹೊಂದಿದ್ದ ವಿಶೇಷ ಸಂಸ್ಕೃತಿ ಇದಾಗಿತ್ತು ಎನ್ನುತ್ತಾ ವೈಕಿಂಗ್ ಜನ ಜೀವನ ಇಂದಿಗೂ ಕೂಡ ಇತಿಹಾಸದ ಆಸಕ್ತರಿಗೆ ವಿಶೇಷ ಕುತೂಹಲ ಮೂಡಿಸುತ್ತಿದೆ..

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles