-ಶೌರ್ಯ ಡೆಸ್ಕ್
ಒಬಿಸಿಗೆ ಶೇ 35 ರಷ್ಟು ಮೀಸಲಾತಿ ನೀಡಲಾಗಿದ್ದು, ಇದರಲ್ಲಿ ಒಕ್ಕಲಿಗರಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಈ ಮೀಸಲಾತಿ ಸಾಕಾಗುವುದಿಲ್ಲ, ಶೇ 8 ರಷ್ಟು ಏರಿಸಿ, ಒಟ್ಟು ಶೇ 12 ಪ್ರತಿಶತದಷ್ಟು ಮೀಸಲಾತಿ ನೀಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ.

ಮೀಸಲಾತಿ ಕೋಲಾಹಲ ರಾಜ್ಯದಲ್ಲಿ ಮತ್ತಷ್ಟು ತಾರಕಕ್ಕೇರುವ ರೀತಿ ಕಾಣುತ್ತಿದೆ. ವೀರಶೈವ ಲಿಂಗಾಯತ ಪಂಚಮಸಾಲಿಗಳು 2 ಎ ಪ್ರವರ್ಗಕ್ಕೆ ಸೇರಿಸುವಂತೆ ಹೋರಾಟ ಮಾಡುತ್ತಿರುವಾಗಲೇ ರಾಜ್ಯದ ಮತ್ತೊಂದು ಪ್ರಬಲ ಸಮುದಾಯ ಮೀಸಲು ಹೆಚ್ಚಳಕ್ಕಾಗಿ ಕೂಗು ಹಾಕಿದೆ.
ಹೌದು. ವಕ್ಕಲಿಗ ಸಮುದಾಯ ಈಗ ಮೀಸಲಾತಿ ಪಾಲು ಹೆಚ್ಚಳಕ್ಕೆ ಒತ್ತಡ ಆರಂಭಿಸಿದ್ದು ಸರ್ಕಾರಕ್ಕೆ ಮೀಸಲಾತಿ ಸಂಬಂಧ ಮತ್ತಷ್ಟು ಇಕ್ಕಟ್ಟು ಸೃಷ್ಟಿಯಾಗುವುದು ನಿಕ್ಕಿಯಾಗಿದೆ.
“ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಮಾತನಾಡುವುದು ಬೇಡ ಎಂದು ನಾವು ಇಷ್ಟು ಸುಮ್ಮನಿದ್ದೆವು. ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಹೆಚ್ಚಿಸುವುದಾದರೆ, ನಮಗೂ ಶೇ 8 ಪ್ರತಿಶತದಷ್ಟು ಮೀಸಲಾತಿ ಹೆಚ್ಚಿಸಿ. ಕಾನೂನು ಸಮ್ಮತವಾಗಿ ನಮ್ಮ ಬೇಡಿಕೆ ಈಡೇರದಿದ್ದರೆ, ನಮ್ಮ ಕೂಗಿಗೆ ಬೆಲೆ ಕೊಡದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಒಬಿಸಿಗೆ ಶೇ 35 ರಷ್ಟು ಮೀಸಲಾತಿ ನೀಡಲಾಗಿದ್ದು, ಇದರಲ್ಲಿ ಒಕ್ಕಲಿಗರಿಗೆ ಶೇ 4 ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ ಈ ಮೀಸಲಾತಿ ಸಾಕಾಗುವುದಿಲ್ಲ, ಶೇ 8 ರಷ್ಟು ಏರಿಸಿ, ಒಟ್ಟು ಶೇ 12 ಪ್ರತಿಶತದಷ್ಟು ಮೀಸಲಾತಿ ನೀಡಿ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಮಾತಾಡಿದ ಶ್ರೀಗಳು, ಒಕ್ಕಲಿಗರ ಸಮುದಾಯದಕ್ಕೂ ಒಕ್ಕಲಿಗರಿಗೂ ಮೀಸಲಾತಿ ಬೇಕು, ಕೊಡದಿದ್ದರೆ ಹೋರಾಟದ ಖಚಿತ ಎನ್ನುವ ಸುಳಿವು ಕೊಟ್ಟಿದ್ದಾರೆ. 1993ರ ನಂತರ ನಮ್ಮ ಸಮುದಾಯ ಯಾವುದೇ ಮೀಸಲಾತಿ ಹೋರಾಟ ದಲ್ಲಿ ಪಾಲ್ಗೊಂಡಿಲ್ಲ. ಅಲ್ಲದೇ ಅಂದಿನಿಂದ ಮೀಸಲಾತಿ ಕೂಗು ನಮ್ಮ ಸಮುದಾಯದಲ್ಲಿ ಎದ್ದಿಲ್ಲ ಎಂದು ಹೇಳಿದ್ರು.
ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಸಿಎಂ ಬೊಮ್ಮಾಯಿ ಸರ್ಕಾರ ತೆಗೆದುಕೊಂಡಿದೆ. ಜನಸಂಖ್ಯೆಗನುಗುಣವಾಗಿ ಮೀಸಲಾತಿ ಜಾರಿ ಮಾಡುತ್ತಿದ್ದೇವೆ. ಬೇರೆ ಸಮುದಾಯದ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ. ವೈಜ್ಞಾನಿಕ ಅಧ್ಯಯನ ಮಾಡಿದ ಮೇಲೆ ಬೇರೆ ಸಮುದಾಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಮೀಸಲಾತಿಗಾಗಿ ಹೆಚ್ಚಿದ ಬೇಡಿಕೆ
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರದ ನಂತರ ವಿವಿಧ ಸಮುದಾಯಗಳಿಂದ ಮೀಸಲಾತಿ ಸಂಬಂಧಿತ ಬೇಡಿಕೆಗಳು ತೀವ್ರಗೊಂಡಿವೆ. ವಿವಿಧ ಸಮುದಾಯಗಳಿಂದ ಮೀಸಲಾತಿ ಸಂಬಂಧಿತ ಬೇಡಿಕೆಗಳಿವೆ. ಪಂಚಮಸಾಲಿ ಲಿಂಗಾಯತರು ಹಿಂದುಳಿದ ವರ್ಗಗಳ ಪ್ರವರ್ಗ 2A ಅಡಿಯಲ್ಲಿ ಬರಲು ಬಯಸುತ್ತಾರೆ ಅವರು ಈಗ ಪ್ರವರ್ಗ 3B ಅಡಿಯಲ್ಲಿದ್ದಾರೆ. ಪ್ರಸ್ತುತ OBC ಗಳಾಗಿರುವ ಕುರುಬರು, ಪರಿಶಿಷ್ಟ ಪಂಗಡದ ಅಡಿಯಲ್ಲಿ ಸೇರಿಸಲು ಒತ್ತಾಯಿಸುತ್ತಿದ್ದಾರೆ. ಈಡಿಗರು ಪ್ರವರ್ಗ 1 ಕ್ಕೆ ಸೇರಿಸಲು ಆಗ್ರಹಿಸುತ್ತಿದ್ದರೆ, ಮಡಿವಾಳ ಸಮಾಜ ಎಸ್ಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದೆ. 2 ಎ ಪ್ರವರ್ಗಕ್ಕೆ ಪ್ರಬಲ ಸಮುದಾಯಗಳನ್ನು ತಂದು ತುಂಬಿದರೆ ಸುಮ್ಮನಿರಲ್ಲ ಎಂದು ಕ್ಷತ್ರಿಯ ಸಮುದಾಯದ 36 ಒಳಪಂಗಡಗಳು ಎಚ್ಚರಿಕೆ ನೀಡಿವೆ