ಬಹುಶಕ್ತಿ ಕೇಂದ್ರಗಳೇ ಚುನಾವಣೆಗೆ ಕಂಟಕ
-ನೀರಕಲ್ಲು ಶಿವಕುಮಾರ್
ಸಮರ ಸಜ್ಜಾಗುವ ಕಾಲಕ್ಕೆ ಸರಿಯಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಮೂರನೇ ಶಕ್ತಿಕೇಂದ್ರದ ಉಗಮವಾಗಿದೆ. ಈವರೆಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂಬ ಎರಡು ಶಕ್ತಿ ಕೇಂದ್ರಗಳಿದ್ದವು. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಜ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವ ಮೂಲಕ ಮತ್ತೊಂದು ಶಕ್ತಿಕೇಂದ್ರ ರಚನೆಯಾಗಿದೆ. ಬಿಜೆಪಿ ಸರ್ಕಾರದ ಬಗೆಗಿನ 40% ಕಮಿಷನ್ ಆರೋಪ, ಆಡಳಿತ ಯಂತ್ರ ಕುಸಿತ, ನೇಮಕಾತಿಗಳ ಅವ್ಯವಹಾರ, ಇತರೆ ವೈಫಲ್ಯಗಳ ಹಿನ್ನೆಲೆ ಕಾಂಗ್ರೆಸ್ ಪರ ಗಾಳಿ ಬೀಸುವ ವಾತಾವರಣ ನಿರ್ಮಾಣವಾಗತೊಡಗಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೂ ರಾಜ್ಯ ಕಾಂಗ್ರೆಸ್ ಗೆ ಬೂಸ್ಟ್ ನೀಡಿತ್ತು. ಹೀಗಿರುವಾಗಲೇ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಪಕ್ಷದೊಳಗೆ “ಮೂರು ದಾರಿ ಸ್ಪಷ್ಟವಿಲ್ಲದ ಗುರಿ” ಎಂಬ ಮಾತು ಕೇಳಿಬರುವಂತೆ ಮಾಡಿದೆ. ಈಗಾಗಲೇ ಸಿದ್ದು-ಡಿಕೆಶಿ ಬಣಗುದ್ದಾಟದಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷ ಖರ್ಗೆ ಬಣ ಪ್ರಾಬಲ್ಯದಿಂದ ಮತ್ತಷ್ಟು ನಷ್ಟ ಅನುಭವಿಸುತ್ತಾ ಎನ್ನುವ ಚರ್ಚೆ ಎಬ್ಬಿಸಿದೆ.

ರಾಜ್ಯದಲ್ಲಿ ಚುನಾವಣಾ ಜ್ವರ ಈ ತಿಂಗಳಾಂತ್ಯದಿಂದ ಏರಿಕೆಯಾಗಲಿದೆ. ಕೆಂಪೇಗೌಡರ ಪ್ರತಿಮೆ, ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ ಮೂಲಕ ಪ್ರಧಾನಿ ನರೇಂದ್ರ ಮೋದಿ ರಂಗಪ್ರವೇಶವಾಗಿ , ಅಮಿತ್ ಷಾ, ನಡ್ಡಾ ಇತರೆ ಬಿಜೆಪಿ ದಂಡನಾಯಕರ ಸಕ್ರಿಯ ಪ್ರವಾಸದ ಮೂಲಕ ಗುಜರಾತ್ ಚುನಾವಣೆ ನಂತರ ಬಿಜೆಪಿ ರಣಕಹಳೆ ಊದಲಿದೆ.
ಜಾತ್ಯಾತೀತ ಜನತಾದಳ ಮಳೆಯ ಕಾರಣಕ್ಕೆ ಪಂಚರತ್ನ ಯಾತ್ರೆಯನ್ನು ವಾರವೊಪ್ಪತ್ತು ಮುಂದಕ್ಕೆ ಹಾಕಿದ್ದು ದಳಪತಿಗಳ ಸಮರ ಶಂಖನಾದವೂ ಮೊಳಗಲಿದೆ.
ಮತ್ತೊಂದು ಕಡೆ ಸಮರ ಸಜ್ಜಾಗುವ ಕಾಲಕ್ಕೆ ಸರಿಯಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಮೂರನೇ ಶಕ್ತಿಕೇಂದ್ರದ ಉಗಮವಾಗಿದೆ. ಈವರೆಗೂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎಂಬ ಎರಡು ಶಕ್ತಿ ಕೇಂದ್ರಗಳಿದ್ದವು. ಈಗ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ರಾಜ್ಯಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುವ ಮೂಲಕ ಮತ್ತೊಂದು ಶಕ್ತಿಕೇಂದ್ರ ರಚನೆಯಾಗಿದೆ. ಬಿಜೆಪಿ ಸರ್ಕಾರದ ಬಗೆಗಿನ 40% ಕಮಿಷನ್ ಆರೋಪ, ಆಡಳಿತ ಯಂತ್ರ ಕುಸಿತ, ನೇಮಕಾತಿಗಳ ಅವ್ಯವಹಾರ, ಇತರೆ ವೈಫಲ್ಯಗಳ ಹಿನ್ನೆಲೆ ಕಾಂಗ್ರೆಸ್ ಪರ ಗಾಳಿ ಬೀಸುವ ವಾತಾವರಣ ನಿರ್ಮಾಣವಾಗತೊಡಗಿತ್ತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೂ ರಾಜ್ಯ ಕಾಂಗ್ರೆಸ್ ಗೆ ಬೂಸ್ಟ್ ನೀಡಿತ್ತು.
ಹೀಗಿರುವಾಗಲೇ ಮಲ್ಲಿಕಾರ್ಜುನ ಖರ್ಗೆ ಎಂಟ್ರಿ ಪಕ್ಷದೊಳಗೆ “ಮೂರು ದಾರಿ ಸ್ಪಷ್ಟವಿಲ್ಲದ ಗುರಿ” ಎಂಬ ಮಾತು ಕೇಳಿಬರುವಂತೆ ಮಾಡಿದೆ. ಈಗಾಗಲೇ ಸಿದ್ದು-ಡಿಕೆಶಿ ಬಣಗುದ್ದಾಟದಿಂದ ಬಳಲುತ್ತಿರುವ ಕಾಂಗ್ರೆಸ್ ಪಕ್ಷ ಖರ್ಗೆ ಬಣ ಪ್ರಾಬಲ್ಯದಿಂದ ಮತ್ತಷ್ಟು ನಷ್ಟ ಅನುಭವಿಸುತ್ತಾ ಎನ್ನುವ ಚರ್ಚೆ ಎಬ್ಬಿಸಿದೆ.

ಖರ್ಗೆ ಪ್ರಬಲ-ಸಿದ್ದು ಪಾಳೆಯ ವಿಲವಿಲ
ಎಐಸಿಸಿ ಅಧ್ಯಕ್ಷರಾಗಿ ವಿರಾಜಮಾನರಾದ ಮಲ್ಲಿಕಾರ್ಜುನ ಖರ್ಗೆ ಮೊನ್ನೆ ಬೆಂಗಳೂರಿಗೆ ಬಂದಾಗ ಅದ್ದೂರಿ ಸ್ವಾಗತ ನೀಡಲಾಯಿತು. ಜೊತೆಗೆ ಸರ್ವೋದಯ ಸಮಾವೇಶದ ಹೆಸರಿನಲ್ಲಿ ಬಲ ಪ್ರದರ್ಶನವೂ ನಡೆಯಿತು. ಅದೇನೇ ಇರಲಿ. ಖರ್ಗೆ ಹೈಕಮಾಂಡ್ ಮಟ್ಟದಲ್ಲಿ ನಂಬರ್ 1 ಸ್ಥಾನಕ್ಕೆ ಏರಿರುವುದರಿಂದ ಸಹಜವಾಗಿಯೇ ರಾಜ್ಯದಲ್ಲಿರುವ ಅವರ ಬೆಂಬಲಿಗ ಪಡೆಗೆ ಬಲ ಬಂದಿದೆ. ಮತ್ತು ಈ ಬಲ ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವೇಳೆ ಬಳಕೆಯಾಗಲಿದೆ. ಅದರ ಪರಿಣಾಮ ಮೂರುಮೂರು ಆಕಾಂಕ್ಷಿಗಳ ಪಟ್ಟಿಗಳು ಸಿದ್ದಗೊಂಡು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕಠಿಣವಾಗಲಿದೆ. ಇಷ್ಟು ದಿನ ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರಾಗಿದ್ದರೆ ಅಥವಾ ಇಬ್ಬರನ್ನೂ ಸರಿದೂಗಿಸಿಕೊಂಡು ಹೋಗಿದ್ದಾರೆ ಸಾಕಿತ್ತು. ಆದರೀಗ ದೆಹಲಿಯಲ್ಲಿ ಟಿಕೆಟ್ ಫೈನಲ್ ಆಗುವಾಗ ಖರ್ಗೆ ಅವರ ಅಭಿಪ್ರಾಯ ಮುಖ್ಯವಾಗುತ್ತದೆ. ಮೇಲಾಗಿ ಅವರ ಸಹಿ ಬೀಳದೆ ಅಭ್ಯರ್ಥಿಗಳ ಪಟ್ಟಿ ಹೊರಬೀಳುವುದಿಲ್ಲ. ಸರ್ವಸಮ್ಮತ ಅಭ್ಯರ್ಥಿಗಳೂ ಅನಿಸಿಕೊಂಡವರಿಗೂ ಕೊನೆ ಕ್ಷಣದಲ್ಲಿ ಟಿಕೆಟ್ ನೀಡಬೇಕೇ ಬೇಡವೇ ಎಂದು ನಿರ್ಧರಿಸುವ ಅಥವಾ ತಮ್ಮ ನಿರ್ಣಯವನ್ನು ಜಾರಿಗೊಳಿಸುವ ಸ್ಥಾನದಲ್ಲಿ ಖರ್ಗೆಯವರು ಇರುವುದರಿಂದ ಆಕಾಂಕ್ಷಿಗಳು ಮೂವರೂ ನಾಯಕರ ಕೃಪಾಕಟಾಕ್ಷ ಗಳಿಸುವುದು ಅನಿವಾರ್ಯ ಎಂಬಂತಾಗಿದೆ. ಖರ್ಗೆ ಹೇಳಿಕೇಳಿ ಪಕ್ಷನಿಷ್ಠ ವ್ಯಕ್ತಿ. ಎಂತ ಕಾಲಕ್ಕೂ ತಮ್ಮ ನಿಷ್ಠೆಗೆ ಅಂಟಿಕೊಂಡವರು. ಹೀಗಿರುವಾಗ ಪಕ್ಷದ ಹಿತದೃಷ್ಟಿಯಿಂದ ವ್ಯವಹರಿಸಿದರೂ ತಮ್ಮ ಬೆಂಬಲಿಗರ ವಿಚಾರ ಬಂದಾಗ ಅವರ ಬೆನ್ನಿಗೆ ನಿಲ್ಲುವುದರಿಂದ ಆಕಾಂಕ್ಷಿಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಟಿಕೆಟ್ ಗಾಗಿ ಮೂರುಬಣಗಳ ಗುದ್ದಾಟ ನಡೆಯಲಿದೆ.

ಅದರಲ್ಲೂ ಸಿದ್ದರಾಮಯ್ಯ ಬಣಕ್ಕೆ ಖರ್ಗೆ ಪ್ರಾಬಲ್ಯದ ಬಿಸಿ ಹೆಚ್ಚು ತಾಕುವ ಸಾಧ್ಯತೆ ಇದೆ. ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯದಲ್ಲಿ ಅಪ್ರಸ್ತುತರಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂಬುದು ಜಗಜ್ಜಾಹೀರಾಗಿರುವ ಸತ್ಯ. ಪ್ರತಿಪಕ್ಷ ನಾಯಕನ ಸ್ಥಾನ ಕಸಿಯುವಲ್ಲಿಯಿಂದ ಹಿಡಿದು ಕಳೆದ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವವರೆಗೂ ಖರ್ಗೆ ಅವರ ಹಾದಿಗೆ ಸಿದ್ದು ಅಡ್ಡಿಯಾಗಿದ್ದೂ ಹೆಚ್ಚು. 2008 ರ ಚುನಾವಣೆ ನಂತರ ಮನಸ್ಸಿಲ್ಲದ ಮನಸ್ಸಿನಿಂದ ಪ್ರತಿಪಕ್ಷ ಸ್ಥಾನ ಬಿಟ್ಟುಕೊಟ್ಟು ರಾಜ್ಯ ರಾಜಕಾರಣದಿಂದ ದೆಹಲಿ ರಾಜಕಾರಣಕ್ಕೆ ತೆರಳಿದ್ದ ಖರ್ಗೆ ಸಿದ್ದರಾಮಯ್ಯ ಕಾರಣಕ್ಕೆ ಅನೇಕ ಸಂಕಷ್ಟಕ್ಕೆ ತುತ್ತಾದರೂ ಅವರ ಪಕ್ಷನಿಷ್ಠೆಯೇ ಅವರನ್ನು ಕಾಪಾಡಿತ್ತು. ಇತ್ತ ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾದರು. ಆ ನಂತರವೂ ಖರ್ಗೆ ಬಣವನ್ನು ತುಳಿಯುತ್ತಲೇ ಬಂದರು. ಕಳೆದ ಲೋಕಸಭಾ ಚುನಾವಣೆ ಸಮಯ ಕಾಂಗ್ರೆಸ್ ಶಾಸಕರಾಗಿದ್ದ ಉಮೇಶ್ ಜಾಧವ್ ಅವರನ್ನು ಬಿಜೆಪಿಗೆ ಕಳಿಸಿ ಅವರ ತಮ್ಮ ಪರಮಾಪ್ತ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಮೂಲಕ ರಾಜೀನಾಮೆ ಅಂಗೀಕಾರವಾಗುವಂತೆ ನೋಡಿಕೊಂಡು ಖರ್ಗೆ ವಿರುದ್ಧ ಕಣಕ್ಕಿಳಿಸಿ ಗೆಲ್ಲುವಂತೆ ಮಾಡುವುದರಲ್ಲಿಯೂ ಸಿದ್ದು ಕೈವಾಡವಿತ್ತು ಎನ್ನಲಾಗುತ್ತದೆ.
ಹೀಗೆಲ್ಲಾ ಇರುವಾಗ ಖರ್ಗೆ ಈ ಸಲ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಆಗುವ ಕನಸಿಗೆ ಬ್ರೇಕ್ ಹಾಕದೇ ಇರುತ್ತಾರಾ? ಅದರ ಪರಿಣಾಮ ಸಿದ್ದು ಗ್ಯಾಂಗಿನ ಆಕಾಂಕ್ಷಿಗಳ ಟಿಕೆಟ್ ಗೆ ಕೊಕ್ಕೆ ಹಾಕದೇ ಇರುತ್ತಾರಾ? ಒಂದೂವರೆ ದಶಕ ಕಾಲ ಸಿದ್ದರಾಮಯ್ಯ ಅವರಿಂದ ರಾಜಕೀಯ ಹಿನ್ನಡೆ ಅನುಭವಿಸಿ ಮುಖ್ಯಮಂತ್ರಿ ಸ್ಥಾನವಿರಲಿ ರಾಜ್ಯ ರಾಜಕೀಯದಿಂದಲೇ ದೂರವಿದ್ದ ಖರ್ಗೆ ಎಲ್ಲವನ್ನೂ ಸಹಿಸಿಕೊಂಡು ಸಿದ್ದು ಮತ್ತೆ ಮುಖ್ಯಮಂತ್ರಿ ಆಗುವುದನ್ನೂ ಸಹಿಸುತ್ತಾರಾ?..ಇಲ್ಲವೇ ಇಲ್ಲ. ಹೀಗಾಗಿಯೇ ಖರ್ಗೆ ಪ್ರಾಬಲ್ಯ ಕಂಡು ಸಿದ್ದು ಬಣ ವಿಲವಿಲಗೊಟ್ಟತೊಡಗಿದೆ.
ಡಿಕೆಶಿಗೂ ಕಷ್ಟಕಷ್ಟ
ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಡಿಕೆಶಿಗೆ ಉತ್ತಮ ಬಾಂಧವ್ಯವಿದೆ. ಇತ್ತೀಚಿನ ವರ್ಷಗಳಲ್ಲಂತೂ ಅದು ಇನ್ನಷ್ಟು ಗಾಢವಾಗಿದೆ. ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಗಾದಿ ಕೊಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರ ವಿರೋಧವಿದ್ದರೂ ಡಿಕೆಶಿ ಬೆನ್ನಿಗೆ ನಿಂತಿದ್ದವರು ಖರ್ಗೆ. ಈ ಕಾರಣಕ್ಕೆ ಡಿಕೆಶಿ ಬಣದ ವಿಚಾರದಲ್ಲಿ ಖರ್ಗೆ ಉದಾರತೆ ತೋರಬಹುದು ಅಥವಾ ಡಿಕೆಶಿ ಮತ್ತು ತಾವು ಸೇರಿ ಅಭ್ಯರ್ಥಿಗಳ ಪಟ್ಟಿ ತಯಾರಿಸಿ ಆ ಪಟ್ಟಿಯಲ್ಲಿರುವ ಆಕಾಂಕ್ಷಿಗಳ ಪರ ಬ್ಯಾಟಿಂಗ್ ಮಾಡಬಹುದು. ಆದರೆ ಡಿಕೆಶಿ ವಿಚಾರದಲ್ಲಿ ಖರ್ಗೆ ಅವರಿಗೆ ಮೊದಲಿನಿಂದಲೂ ಒಂದು ಎಚ್ಚರಿಕೆಯ ಭಾವನೆ ಇರುವುದರಿಂದ ಅವರನ್ನೂ ಹೆಚ್ಚು ನಂಬುವ ಸ್ಥಿತಿಯಿಲ್ಲ ಅನ್ನಲಾಗುತ್ತದೆ.

ಆಗಾಗಿ ಮೂವರೂ ನಾಯಕರು ಟಿಕೆಟ್ ಹಂಚಿಕೆ, ಚುನಾವಣಾ ನಿರ್ವಹಣೆ, ಸಂಪನ್ಮೂಲ ಸಂಗ್ರಹಣೆ, ಪ್ರಚಾರ, ಹೀಗೆ ಎಲ್ಲದರಲ್ಲೂ ತಮ್ಮದೇ ಮೇಲುಗೈ ಸಾಧಿಸಿ ಆ ಮೂಲಕ ಮುಖ್ಯಮಂತ್ರಿ ರೇಸ್ ನಲ್ಲಿ ಮುಂಚೂಣಿಯಲ್ಲಿರಲು ಬಯಸುವುದರಿಂದ ಅದೇ ಕಾಂಗ್ರೆಸ್ ಪಕ್ಷಕ್ಕೆ ಕಂಟಕವಾಗಬಹುದು.
ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಡುವುದಿಲ್ಲ ಎಂಬ ವಿಶ್ಲೇಷಣೆಯಿದ್ದರೂ ಯಾವುದೇ ರಾಜಕೀಯ ನಾಯಕ ತನ್ನ ಪರವಾಗಿ ರಾಜಕೀಯ ವಾತಾವರಣ ನಿರ್ಮಾಣಗೊಳಿಸುವ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ. ಅದರಲ್ಲೂ ತನಗೆ ಶಕ್ತಿ ಇದ್ದಾಗ, ಅದನ್ನು ಬಳಸುವ ಕಾಲ ಬಂದಾಗ ಬಳಸದೇ ಇರಲಾರ. ಹಾಗಾಗಿ ಖರ್ಗೆ ಕೂಡಾ ತಮ್ಮ ಆಟ ಆಡಿಯೇ ತೀರುತ್ತಾರೆ. ಮೂರು ಶಕ್ತಿಕೇಂದ್ರಗಳಿಂದಲೂ ದಾಳ ಉರುಳುತ್ತವೆ. ಆ ದಾಳಗಳು ಕಾಂಗ್ರೆಸ್ ಪಕ್ಷಕ್ಕೆ ಮಾರಕವಾಗುವ ಸಾಧ್ಯತೆಗಳೇ ಎಂಬಂತೆ ಕಾಣುತ್ತಿದೆ. ಅದೇ ದಾಳಗಳು ಪೂರಕವೂ ಆಗಬಹುದಾ? ಕಾಲವೇ ಉತ್ತರಿಸಬೇಕು.