-ರಾಧಿಕಾ ವಿಟ್ಲ
ಪೊಖ್ರಾದಲ್ಲಿ ಮೂರ್ನಾಲಕ್ಕು ದಿನ ಕೂತರೆ ರಜೆಯನ್ನು ಅದ್ಭುತವಾಗಿ ಕಳೆದು ಬರಲು ಬೇಕಾದ ಎಲ್ಲವೂ ಇದೆ. ಸರೋವರಗಳು, ಜಲಪಾತಗಳು, ಗುಹೆಗಳು, ದೇವಾಲಯಗಳು, ಹಿಮಾಲಯ ಶ್ರೇಣಿ, ಸಂಜೆಯಾಗುತ್ತಿದ್ದಂತೆ ಗರಿಗೆದರುವ ಪಬ್ಬು, ಬೀದಿಬದಿಯ ತಿಂಡಿತೀರ್ಥಗಳು, ಶಾಪಿಂಗ್ ಮಾಲ್‌ಗಳು ಹೀಗೆ ಎಲ್ಲರ ಅಭಿರುಚಿಗೆ ಅನುಸಾರವಾಗಿ ಪ್ರತಿಯೊಂದೂ ಇಲ್ಲಿದೆ. ಇನ್ನೂ ಹೆಚ್ಚು ಸಮಯವಿದ್ದರೆ, ಪ್ರಪಂಚದಲ್ಲೇ ಅತ್ಯಂತ ಆಳವಾದ ನದೀ ಕಣಿವೆಯೆಂಬ ಖ್ಯಾತಿವೆತ್ತ ಗಂಡಕೀ ನದಿಯ ಹಾದಿಯಾಗಿ ಸಾಹಸಮಯ ಮುಕ್ತಿನಾಥನ ದರ್ಶನವನ್ನೂ ಮಾಡಿ ಬರಬಹುದು. ಇವಲ್ಲದೆ ಸುಖಾಸುಮ್ಮನೆ ಪೊಖ್ರಾ ಸುತ್ತಮುತ್ತ ಸುತ್ತಾಡಿದರೂ ಕಾಣುವ ಪ್ರತಿಯೊಂದು ಕೋನವೂ ಪೋಸ್ಟರೇ! ಬೆಟ್ಟಗುಡ್ಡ ಗದ್ದೆ ಬಯಲುಗಳ ಹಸಿರು ಜರತಾರಿ ಸೀರೆಯನ್ನಷ್ಟೇ ಹೊದ್ದು ಮಲಗಿರುವ ಪ್ರಕೃತಿ ಮಾತೆಗೆ ಹೊಳೆವ ವಜ್ರದ ಕಿರೀಟವೆಂಬಂತೆ ಸದಾ ಮಿಂಚುವ ಬೆಳ್ಳನೆಯ ಮಚ್‌ಪುಚರೇಗೆ ಮಾತ್ರ ಸಾಟಿ ಯಾವುದು!

ನೀವೆಲ್ಲಿಯವರು?
“ಮಚ್‌ಪುಚರೇ” ಯನ್ನೇ ನೋಡುತ್ತಾ ಸುಮ್ಮನೆ ನಿಂತಿದ್ದ ನನ್ನ ಸಮೀಪದಲ್ಲಿದ್ದ ಅದ್ಯಾವುದೋ ದೇಶದ ಯುವಕ ಕೇಳಿದ.
“ಭಾರತ. ದಕ್ಷಿಣ ಭಾರತ” ಎಂದೆ.
ʻಓಹೋ ಭಾರತʼ ಎನ್ನುತ್ತಾ ಆತನ ಮುಖವರಳಿತು.
ನಾನು ಇನ್ನೇನೋ ಈತನಿಗೆ ಹೇಳಲಿಕ್ಕೆ ಬಾಕಿಯಿದೆ ಎಂಬಂತೆ ಅವನನ್ನೇ ನೋಡತೊಡಗಿದೆ.
ಆತ, ʻಎಷ್ಟೆಲ್ಲ ದೇಶ ಸುತ್ತಿದೆ. ಆದರೆ, ಎಲ್ಲದಕ್ಕಿಂತ ಇಷ್ಟವಾಗಿದ್ದು ಈ ಪುಟಾಣಿ ದೇಶ. ಇದಾದ ಮೇಲೆ ಭಾರತ. ಈ ಎರಡು ದೇಶಗಳ್ಯಾಕೋ ನನ್ನನ್ನು ಮತ್ತೆ ಮತ್ತೆ ಕರೆಯುತ್ತಲೇ ಇರುತ್ತವೆ. ಕಾರಣ, ಅದೇ ಹಿಮಾಲಯʼ ಎನ್ನುತ್ತಾ ಮುಂದಿದ್ದ ಅಗಾಧ ಪರ್ವತ ಶ್ರೇಣಿಯ ಕಡೆಗೊಮ್ಮೆ ನೋಡಿ ಕಣ್ತುಂಬಿಕೊಂಡ.
ʻಹೌದಾ, ಇದು ಎಷ್ಟನೇ ಸಾರಿ ನೇಪಾಳ?ʼ ಎಂದೆ.
ʻನಾಲ್ಕನೇ ಸಾರಿ. ಭಾರತಕ್ಕೂ ಮೂರು ಸಾರಿ ಬಂದಿರುವೆʼ ಎನ್ನುತ್ತಾ ಕ್ಯಾಮರಾ ಧ್ಯಾನಿಯಾದ. ನಾನೂ ಕ್ಯಾಮರಾ ಮೇಲೆತ್ತಿದೆ. ಅಲ್ಲೇ ಪಕ್ಕದಲ್ಲೇ ಇದ್ದ ದೊಡ್ಡ ವಿದೇಶೀ ಗುಂಪೊಂದಕ್ಕೆ ನೇಪಾಳಿ ಗೈಡೊಬ್ಬ ಮಚ್‌ಪುಚರೇಯ ಎಡ, ಬಲಗಳಲ್ಲಿರುವ ಶಿಖರಗಳ್ಯಾವುದು ಎಂದು ಒಂದೊಂದಾಗಿ ಸಾಲಾಗಿ ವಿವರಣೆ ನೀಡುತ್ತಿದ್ದ.

ನೇಪಾಳದ ಸೌಂದರ್ಯ ಅಡಗಿರುವುದು ಒಂದೊಂದು ಊರನ್ನೂ ದಾಟಿ ಇನ್ನೊಂದೂರಿಗೆ ಕಾಲಿಟ್ಟಾಗಲೆಲ್ಲ ಪ್ರತ್ಯಕ್ಷವಾಗುವ ಹಿಮಾಲಯ ಪರ್ವತಗಳಿಂದ. ದಾರಿಯಲ್ಲೆಲ್ಲ ದರ್ಶನ ನೀಡಿ, ಇಲ್ಲೇ ಹತ್ತಿರದಲ್ಲೇ ಇದೆ ಆದರೆ ದೂರವಿದೆ ಅನಿಸುವಂತೆ ಮಾಡುವ ಹಿಮಹೊದ್ದ ಪರ್ವತಗಳಿಂದ, ಅಲ್ಲಿನ ಮಂದಿ ಅದನ್ನು ಭಯ ಭಕ್ತಿ ಗೌರವಗಳಿಂದ ಕಾಣುವುದರಿಂದ ನೇಪಾಳವೆಂಬ ದೇಶ ಇಡಿಯ ಹಿಮಾಲಯವಾಗಿ ನಮ್ಮದೇ ಅನಿಸಿಬಿಡುತ್ತದೆ.
ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಆಗಿರಬಹುದು, ಈ ಮೌಂಟ್ ಎವರೆಸ್ಟ್ ಮೇಲೆ ಕಾಲಿಟ್ಟವರೆಷ್ಟೋ ಮಂದಿ. ಅಂತೆಯೇ ಅಲ್ಲಿ ಹೆಣವಾದವರೂ ಎಷ್ಟೋ ಮಂದಿ. ತನ್ನತ್ತ ಸೆಳೆಯುತ್ತಲೇ ಸಾವು ಬದುಕಿನ ದರ್ಶನ ಮಾಡಿಸುವ ಅಪರೂಪದ ಪರ್ವತ ಎವರೆಸ್ಟ್ ಎಂಬುದು ನಿಜವೇ. ಅದರ ಮೇಲೆ ಕಾಲಿಡಲು ಧೈರ್ಯ ಮಾಡುವ ಎಂಥ ಸಾಹಸಿಯೂ ತಾನು ಮರಳಿ ಬಂದೇನು ಎಂದು ತನ್ನ ಭವಿಷ್ಯದ ಬಗ್ಗೆ ಕನಸು ಕಾಣುವುದಿಲ್ಲ. ಆ ಕ್ಷಣಕ್ಕೆ ಪರ್ವತವೇರುವುದು ಅಷ್ಟೇ ಜೀವನದ ಮಹದುದ್ದೇಶವಾಗಿ ಕಂಡಾಗಲೇ ಅಲ್ಲಿಗೆ ಬರುತ್ತಾರೆ. ಬದುಕನ್ನು ಅದಮ್ಯವಾಗಿ ಪ್ರೀತಿಸುವ ಮಂದಿಯಷ್ಟೇ ತಾನೊಮ್ಮೆ ಮೌಂಟ್ ಎವರೆಸ್ಟ್ ಮೇಲೆ ಕಾಲಿಡಬೇಕು ಎಂದು ಬಯಸುತ್ತಾರೆಂದ ಮೇಲೆ, ಜೀವ ಒತ್ತೆಯಿಡುವ ಸಾಹಸಕ್ಕೆ ಕೈಹಾಕಲು ಹಿಂದೆಮುಂದೆ ನೋಡುವುದಿಲ್ಲವೆಂದಾದ ಮೇಲೆ, ಹಿಮಾಲಯದ ಸೆಳೆತ ಎಂದರೇನು, ಅದೆಂತಹ ಅನುಭೂತಿಯೆಂಬುದನ್ನು ಅರ್ಥ ಮಾಡಿಕೊಳ್ಳಬಹುದು.

ಇಂತಹ ಹಿಮಾಲಯದ ಅತ್ಯಂತ ಎತ್ತರದ ಪರ್ವತದ ಮೇಲೆ ಕಾಲಿಡುವ ಕನಸನ್ನಾದರೂ ಕಾಣಬಹುದು ನಿಜ. ಆದರೆ, ಈ ಹಿಮಾಲಯ ಎಂಬ ಪರ್ವತ ಶ್ರೇಣಿಯೊಳಗೆ ಇನ್ನೆಷ್ಟೋ ಪರ್ವತಗಳ ತುದಿಯ ಮೇಲೆ ಕಾಲೂರಿ ನಿಲ್ಲಲು ಮನುಷ್ಯನಿಂದ ಆಗಿಯೇ ಇಲ್ಲ ಎಂಬುದೂ ಅಷ್ಟೇ ನಿಜ. ಧಾರ್ಮಿಕ ಹಾಗೂ ಭೌಗೋಳಿಕ ಕಾರಣಗಳಿಂದ ಅವುಗಳಿನ್ನೂ ಮಾನವನ ಕೈಗೆ ನಿಲುಕಿಲ್ಲ ಎಂಬುದೂ ಹೌದು. ಅಥವಾ ಅದಕ್ಕೆ ಭಾರತೀಯ ಮನಸ್ಸುಗಳಲ್ಲಿ ಅಧ್ಯಾತ್ಮವೂ ಸೇರಿಕೊಂಡಿರುವುದರಿಂದಲೋ ಏನೋ, ಹಿಮಾಲಯ ಎಂಬುದೊಂದು ಎಂದೆಂದಿಗೂ ವಿಸ್ಮಯಗಳ, ಎಂದಿಗೂ ಪೂರ್ಣವಾಗಿ ಹಿಡಿತಕ್ಕೆ ಸಿಗದ, ಯಾವಾಗಲೂ ಕಾಡುವ ಭಾವವಾಗಿ ಉಳಿದು ಬಿಡುತ್ತದೆ. ಇಂತಹ ಇನ್ನೂ ಕಾಲಿಡಲು ಸಾಧ್ಯವೇ ಆಗದ ದುರ್ಗಮ ಪರ್ವತಗಳ ಪೈಕಿ ಮಚ್‌ಪುಚರೇ ಕೂಡಾ ಒಂದು.
ನೇಪಾಳದ ಮಂದಿಗೆ ಮಚ್‌ಪುಚರೇ ಕಂಡರೆ ಕೈಲಾಸ ಪರ್ವತದಷ್ಟೇ ಭಯ, ಭಕ್ತಿ. ಇಲ್ಲಿನ ಮಂದಿಗೆ ಇದು ಮಚ್‌ಪುಚರೇ ಆದರೆ, ಇಲ್ಲಿಗೆ ಬಂದು ಹಿಮಾಲಯದ ಕಣ್ತುಂಬಿಕೊಳ್ಳ ಬಯಸುವ ಇತರ ವಿದೇಶೀಯರಿಗೆ ಇದು ಫಿಶ್ ಟೈಲ್. ಒಂದು ಭಾಗದಿಂದ ಇದು ಮೀನಿನ ಬಾಲದಂತೆ ಕಾಣುವುದರಿಂದ ಇದಕ್ಕೆ ಫಿಶ್ ಟೈಲ್ ಎಂಬ ಹೆಸರು. ನೇಪಾಳೀ ಭಾಷೆಯಲ್ಲೂ ಮಚ್‌ಪುಚರೇ ಎಂದರೆ ಮೀನಿನ ಬಾಲ ಎಂದೇ ಅರ್ಥ.

ಹಿಂದೂ ಸಂಸ್ಕೃತಿಯ ಪ್ರಕಾರ, ಇಲ್ಲಿನ ಮಂದಿಗೆ ಮಚ್‌ಪುಚರೇ ಶಿವನ ಆವಾಸಸ್ಥಾನದ ಹಾಗೆ. ಬಹುಶಃ ಭೂಮಿಯ ಮೇಲೆ ಮನುಷ್ಯ ಕಾಲಿಡಲಾಗದ ಕೆಲವೇ ಕೆಲವೂ ಜಾಗಗಳಲ್ಲಿ ಇದೂ ಒಂದು ಎಂಬ ನಂಬಿಕೆಯೇ ಈ ಭಕ್ತಿಯನ್ನೂ ಸೇರಿಸಿಕೊಂಡಿರಬೇಕು! ಸುಮಾರು ಹತ್ತಿರ ಹತ್ತಿರ ಏಳು ಸಾವಿರ ಮೀಟರ್‌ಗಳಷ್ಟು ಆಕಾಶದೆತ್ತರಕ್ಕೆ ಗಟ್ಟಿಯಾಗಿ, ತೀಕ್ಷ್ಮವಾಗಿ ದೈತ್ಯ ಶಕ್ತಿಯಂತೆ ನಿಂತು ಉಳಿದೆಲ್ಲ ಸುತ್ತಮುತ್ತಲ ಪರ್ವತಗಳ ನಡುವೆ ಭಿನ್ನವಾಗಿ ಕಾಣುವ ಇದು ಅನ್ನಪೂರ್ಣ ಶ್ರೇಣಿಯ ಹಿಮಾಲಯದಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಅಧಿಕೃತವಾಗಿ ಮಚ್‌ಪುಚರೇಯ ತುದಿಯನ್ನೂ ಈವರೆಗೆ ಯಾರಿಗೂ ತಲುಪಲಾಗಿಲ್ಲ. ಈಗ ನೇಪಾಳ ಸರ್ಕಾರದ ಅನುಮತಿಯೂ ಇಲ್ಲ. 1950ರ ಆಸುಪಾಸಿನಲ್ಲಿ ಬ್ರಿಟೀಷ್ ಮೂಲದ ಮಂದಿ ಇಲ್ಲಿ ಪರ್ವತಾರೋಹಣ ಮಾಡಲು ಬಂದು ಕೇವಲ ಐನೂರು ಅಡಿಗಳಷ್ಟು ಮಾತ್ರ ಹತ್ತಿ, ಕೊನೆಗೆ ಇದರ ಮೇಲೆ ಕಾಲಿಡುವುದು ಅಸಾಧ್ಯ ಎಂದು ಹೇಳಿದ್ದರೆನ್ನಲಾಗಿದೆ. ಇದಾದ ಮೇಲೆ ನ್ಯೂಜಿಲ್ಯಾಂಡ್‌ನ ಅನುಭವಿ ಪರ್ವತಾರೋಹಿಯೊಬ್ಬರು 1980ರಲ್ಲಿ ಇದನ್ನು ಅನಧಿಕೃತವಾಗಿ ಹತ್ತಿದ್ದರೆಂಬ ಕಥೆ ಇದೆಯಾದರೂ ಈ ಬಗ್ಗೆ ಸರಿಯಾದ ದಾಖಲೆಗಳಾಗಲೀ ಮಾಹಿತಿಗಳಾಗಲೀ ಇಲ್ಲ. ಹಿಮಾಲಯದ ಇನ್ಯಾವುದೋ ಭಾಗದಲ್ಲಿ ಪರ್ವತಾರೋಹಣದ ಸಂದರ್ಭ ಇವರು ಸಾವಿಗೀಡಾದ್ದರಿಂದ ಈ ಬಗ್ಗೆ ಹೊರ ಪ್ರಪಂಚಕ್ಕೆ ಸರಿಯಾದ ಮಾಹಿತಿ ಸಿಗಲೇ ಇಲ್ಲ ಎಂಬ ಮಾತೂ ಇದೆ. ಒಟ್ಟಾರೆಯಾಗಿ ಇಂದಿಗೂ ಇದೊಂದು ನಿಲುಕದ ನಕ್ಷತ್ರದ ಹಾಗೆ.

ಹಿಮಾಲಯ ಪರ್ವತಗಳ ಹಾಗೆ ಅದರದ್ದೇ ಒಂದು ಭಾಗವಾದ ಈ ಮಚ್‌ಪುಚರೇ ಪರ್ವತವೂ ಹುಟ್ಟಿದ್ದಕ್ಕೆ ಬೇರೆ ಕಥೆಗಳೇನಿಲ್ಲ. ಸುಮಾರು 50 ಮಿಲಿಯನ್ ವರ್ಷಗಳ ಮೊದಲು, ಎರಡು ಭೂಭಾಗಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಹುಟ್ಟಿದ ಹಿಮಾಲಯ ಶ್ರೇಣಿಯಲ್ಲಿ ಇದೂ ಒಂದು ಪರ್ವತ ಅಷ್ಟೇ. ಎತ್ತರಕ್ಕೆ ಚಿಮ್ಮಿ ನಿಂತ ಇದರ ಭಂಗಿಯೇ ಇದನ್ನು ಭವ್ಯವನ್ನಾಗಿಯೂ, ದಿವ್ಯವನ್ನಾಗಿಯೂ ಪೂಜನೀಯವನ್ನಾಗಿಯೂ ಮಾಡಿದೆ. ಅದಕ್ಕೇ ಇಂದಿಗೂ ಇದರ ಹಿಮಕರಗಿದ ನೀರು ಗಂಡಕೀ ನದಿಯಾಗಿ ಹರಿದು ತನ್ನೊಂದಿಗೆ ತರುವ ಪಳೆಯುಳಿಕೆಗಳು ಸಾಲಿಗ್ರಾಮವಾಗಿ ಪೂಜನೀಯವೆನಿಸುತ್ತದೆ. ಇದನ್ನು ಹತ್ತಿರದಿಂದ ಕಣ್ತುಂಬಬೇಕೆಂದರೆ, ಮಚ್‌ಪುಚರೇ ಬೇಸ್ ಕ್ಯಾಂಪ್ ಚಾರಣ ಮಾಡಬಹುದು. ಚಾರಣ ಸಾಧ್ಯವಿಲ್ಲವೆಂದಾದರೆ, ನೇಪಾಳದ ಪೊಖಾರದ ರಸ್ತೆಬದಿಯೂ ಸರಿಯೇ. ಪೊಖಾರಾದಲ್ಲಿ ಎಲ್ಲಿ ನಿಂತರೂ ಕಣ್ತುಂಬಿಕೊಳ್ಳಬಹುದಾದಂತೆ ಗಗನಕ್ಕೆ ಚಾಚಿ ನಿಂತಿರುವ ಇದನ್ನು ನೋಡಿ ತೃಪ್ತಿ ಹೊಂದಬಹುದು.
ಬೆಳಗಿನ ಸೂರ್ಯೋದಯದಲ್ಲಿ ಈ ಮಚ್‌ಪುಚರೇ ಸೂರ್ಯನ ಹೊಂಬಣ್ಣದಲ್ಲಿ ಮಿಂಚುವುದನ್ನು ನೋಡಬೇಕು. ಅದಕ್ಕಾಗಿ ಸಾರಂಗ್ ಕೋಟ್ ಹತ್ತಬೇಕು. ಬೆಳಗಾಗುವ ಮೊದಲೇ ಪೊಖ್ರಾದಿಂದ ಸುಮಾರು ಐದಾರು ಕಿಮೀ ದೂರದ ಸಾರಂಗ್‌ಕೋಟ್ ಹತ್ತಿ ನಿಂತು ಕಾದರೆ, ಎಂಥ ಅರಸಿಕನಿಗೂ ನಿರಾಸೆಯಾಗದು. ಬೆಳಗಿನ ಹಾಗೂ ಸಂಜೆಯ ಬೆಳಕಿನಲ್ಲಿ ಕ್ಷಣಕ್ಷಣಕ್ಕೂ ಅಪೂರ್ವವಾಗಿ ಕಾಣುವ ಈ ಇಡಿಯ ಅನ್ನಪೂರ್ಣ ಶ್ರೇಣಿಯನ್ನು ಇಲ್ಲಿಂದ ನಿಂತು ನೋಡಿ ಕಣ್ತುಂಬಿಕೊಳ್ಳುವುದೇ ಪೊಖ್ರಾದಲ್ಲಿ ಮಾಡಬಹುದಾದ ಅತ್ಯುತ್ತಮ ಕೆಲಸಗಳಲ್ಲಿ ಒಂದು.

ನೇಪಾಳದ ಕಾಠ್ಮಂಡುವಿನಿಂದ ಸುಮಾರು 200 ಕಿಮೀ ದೂರದಲ್ಲಿರುವ ಈ ಪೊಖ್ರಾ ಎಂಬ ಪುಟ್ಟ ಚೆಂದನೆಯ ಪಟ್ಟಣದ ಸೊಬಗೇ ಮಚ್‌ಪುಚರೇಯೊಂದಿಗಿರುವ ಅನ್ನಪೂರ್ಣ ಎಂದರೂ ತಪ್ಪಲ್ಲ. ಕಾಠ್ಮಂಡುವಿಗೆ ಹೋದರೂ ಹಿಮಾಲಯ ಶ್ರೇಣಿಯ ಸೊಬಗು ಪೊಖ್ರಾದಲ್ಲಿ ಕಂಡಂತೆ ಕಾಣದು. ಬೆಳಗಿನ ಸೂರ್ಯೋದಯವನ್ನು ಸಾರಂಗ್‌ಕೋಟ್‌ನಲ್ಲಿ ಸವಿದರೆ ಸಂಜೆಯ ಸೂರ್ಯಾಸ್ತವನ್ನು ಇಲ್ಲಿನ ಫೇವಾ ಸರೋವರದ ದೋಣಿವಿಹಾರದಲ್ಲಿ ಕಳೆಯಬೇಕು. ಬಣ್ಣಬಣ್ಣದ ದೋಣಿಗಳು, ನಡುವಲ್ಲೊಂದು ಪುಟಾಣಿ ದ್ವೀಪ, ದ್ವೀಪದಲ್ಲೊಂದು ಚಂದದ ದೇವಾಲಯ, ಮುಖವೆತ್ತಿ ನೋಡಿದರೆ, ಒಂದು ಬದಿ ದಟ್ಟವಾದ ಕಾಡು, ಇನ್ನೊಂದು ಬದಿ ವಿಶಾಲವಾಗಿ ಹರಡಿ ಆಗಸದೆತ್ತರಕ್ಕೆ ನಿಂತ ಮಚ್‌ಪುಚರೇಯಾದಿಯಾಗಿ ನಿಂತ ಅನ್ನಪೂರ್ಣ ಶ್ರೇಣಿ, ಹೊಂಬಣ್ಣದ ಸೂರ್ಯನ ಬೆಳಗು, ನೀರಿನ ಚುಳುಂ ಚುಳುಂ ಸದ್ದನ್ನಷ್ಟೇ ಮಾಡುತ್ತಾ ದೋಣಿಯಲ್ಲಿ ಹುಟ್ಟು ಹಾಕುತ್ತಾ ಸರೋವರದಲ್ಲಿ ಅಡ್ಡಾಡಿ ಬರುವಷ್ಟರಲ್ಲಿ ಗಂಗಾರತಿಗೆ ತಯಾರಿ ನಡೆದಿರುತ್ತದೆ.

ಕಾಶಿಯ ದಶಾಶ್ವಮೇಧ ಘಾಟ್‌ನಲ್ಲಿ ಗಂಗಾರತಿ ನೋಡದವರು ಇಲ್ಲಿ ನೋಡಬಹುದು. ಗಂಗೆ ಎಲ್ಲಿದ್ದರೇನಂತೆ, ನೀರಿನ ಮೂಲವೆಲ್ಲವೂ ಗಂಗೆಯೇ ಎಂದು ಸಾರುವ ಈ ಅರ್ಧ ಗಂಟೆಯ ಆರತಿ ಹೆಚ್ಚು ಕಡಿಮೆ ಕಾಶಿಯ ಆರತಿಯಂತೆಯೇ ಇದೆ.
ಪೊಖ್ರಾದಲ್ಲಿ ಮೂರ್ನಾಲಕ್ಕು ದಿನ ಕೂತರೆ ರಜೆಯನ್ನು ಅದ್ಭುತವಾಗಿ ಕಳೆದು ಬರಲು ಬೇಕಾದ ಎಲ್ಲವೂ ಇದೆ. ಸರೋವರಗಳು, ಜಲಪಾತಗಳು, ಗುಹೆಗಳು, ದೇವಾಲಯಗಳು, ಹಿಮಾಲಯ ಶ್ರೇಣಿ, ಸಂಜೆಯಾಗುತ್ತಿದ್ದಂತೆ ಗರಿಗೆದರುವ ಪಬ್ಬು, ಬೀದಿಬದಿಯ ತಿಂಡಿತೀರ್ಥಗಳು, ಶಾಪಿಂಗ್ ಮಾಲ್‌ಗಳು ಹೀಗೆ ಎಲ್ಲರ ಅಭಿರುಚಿಗೆ ಅನುಸಾರವಾಗಿ ಪ್ರತಿಯೊಂದೂ ಇಲ್ಲಿದೆ. ಇನ್ನೂ ಹೆಚ್ಚು ಸಮಯವಿದ್ದರೆ, ಪ್ರಪಂಚದಲ್ಲೇ ಅತ್ಯಂತ ಆಳವಾದ ನದೀ ಕಣಿವೆಯೆಂಬ ಖ್ಯಾತಿವೆತ್ತ ಗಂಡಕೀ ನದಿಯ ಹಾದಿಯಾಗಿ ಸಾಹಸಮಯ ಮುಕ್ತಿನಾಥನ ದರ್ಶನವನ್ನೂ ಮಾಡಿ ಬರಬಹುದು.
ಇವಲ್ಲದೆ ಸುಖಾಸುಮ್ಮನೆ ಪೊಖ್ರಾ ಸುತ್ತಮುತ್ತ ಸುತ್ತಾಡಿದರೂ ಕಾಣುವ ಪ್ರತಿಯೊಂದು ಕೋನವೂ ಪೋಸ್ಟರೇ! ಬೆಟ್ಟಗುಡ್ಡ ಗದ್ದೆ ಬಯಲುಗಳ ಹಸಿರು ಜರತಾರಿ ಸೀರೆಯನ್ನಷ್ಟೇ ಹೊದ್ದು ಮಲಗಿರುವ ಪ್ರಕೃತಿ ಮಾತೆಗೆ ಹೊಳೆವ ವಜ್ರದ ಕಿರೀಟವೆಂಬಂತೆ ಸದಾ ಮಿಂಚುವ ಬೆಳ್ಳನೆಯ ಮಚ್‌ಪುಚರೇಗೆ ಮಾತ್ರ ಸಾಟಿ ಯಾವುದು!