19.8 C
Bengaluru
Tuesday, March 21, 2023
spot_img

ಬೀಸಿಬಂದ ಬಲಪಂಥದ ಗಾಳಿ: ಮಗ್ಗಲು ಬದಲಿಸಿದ ಸ್ವೀಡನ್ ರಾಜಕಾರಣ

-ವಿಜಯ್ ದಾರಿಹೋಕ

ಸ್ವೀಡನ್‌ನ ಸಂಸತ್ತು ರಿಕ್ಸ್ ಡಾಗ್‌ನ ಮೇಲೆ ಹೊಸ ಬದಲಾವಣೆಯ ಗಾಳಿ ಬೀಸಲಿದೆ. ಎಂಟು ವರ್ಷಗಳ ಬಳಿಕ ಆಡಳಿತಾರೂಢ ಸಮಾಜವಾದಿ ಒಕ್ಕೂಟ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಹಿನ್ನಡೆ ಅನುಭವಿಸಿ, ಇದೀಗ ವಿರೋಧ ಪಕ್ಷಗಳ ಒಕ್ಕೂಟ ಅಧಿಕಾರಕ್ಕೆ ಬಂದಿದೆ. ಈ ಬಾರಿ ಮುನ್ನೆಲೆಗೆ ಬಂದ ಬಲಪಂಥೀಯ ಪಕ್ಷವೊಂದು ಅತಿದೊಡ್ಡ ಪಕ್ಷವಾಗಿ ಆಡಳಿತಾರೂಢ ಸರಕಾರಕ್ಕೆ ಪ್ರಮುಖ ಬೆಂಬಲ ನೀಡುತ್ತಿರುವುದು ಹಾಗೂ ತಮ್ಮ ಪ್ರಣಾಳಿಕೆಯನ್ನು ಜಾರಿಗೆ ತರುವಲ್ಲಿ ತೀವ್ರ ಪ್ರಭಾವ ಬೀರುತ್ತಿರುವುದು ಕಂಡುಬರುತ್ತಿದೆ. ಇದು ಸ್ವೀಡನ್ ರಾಜಕೀಯ ನೀತಿ, ನಿರ್ಧಾರಗಳ ವಿಷಯದಲ್ಲಿ ಒಂದು ಹೊಸ ಸ್ಥಿತ್ಯಂತರಕ್ಕೆ ಕಾರಣವಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ವಲಸೆ  ನೀತಿಗಳು ಅಮೂಲಾಗ್ರವಾಗಿ ಬದಲಾಗುವುದು ಖಚಿತವಾಗಿದೆ. ಈ ಕುರಿತು ಸ್ವೀಡನ್ ರಾಜಧಾನಿ ಸ್ಟಾಕ್‌ಹೋಮ್‌ನಲ್ಲಿ ನೆಲೆಸಿರುವ ಕನ್ನಡಿಗ ವಿಜಯ್ ದಾರಿಹೋಕ ಅವರು ಬರೆದಿರುವ ವಿಶ್ಲೇಷಣಾತ್ಮಕ ಲೇಖನ ಇಲ್ಲಿದೆ.

ಸ್ವೀಡನ್‌ನ ಸಂಸತ್ತು ರಿಕ್ಸ್ ಡಾಗ್‌.

ಸ್ವೀಡನ್‌ನಲ್ಲಿ ಸಾಮಾನ್ಯವಾಗಿ ಸಾರ್ವತ್ರಿಕ ಚುನಾವಣೆಗಳು ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಸೆಪ್ಟೆಂಬರ್‌ನ ಎರಡನೇ ರವಿವಾರದಂದು ನಡೆಯುತ್ತವೆ. ಮೊನ್ನೆ ಸೆಪ್ಟಂಬರ್ 11 ಕ್ಕೆ ನಡೆದ ಚುನಾವಣೆಯಲ್ಲಿ ಸುಮಾರು 77 ಲಕ್ಷಕ್ಕೂ ಅಧಿಕ ನಾಗರಿಕರು ಮತ ಚಲಾಯಿಸಿದ್ದರು.  ಸ್ವೀಡನ್ ಸಂಸತ್ತು ರಿಕ್ಸ್ ಡಾಗ್‌ನ 349 ಸ್ಥಾನಗಳಿಗಾಗಿ, ಜೊತೆಗೆ ಪ್ರದೇಶ ಹಾಗೂ ಮುನ್ಸಿಪಲ್ ಸ್ಥಾನಗಳಿಗಾಗಿ ಕೂಡ ಚುನಾವಣೆ ನಡೆದಿತ್ತು.  

ಫಲಿತಾಂಶ ಹೊರಬಿದ್ದು ಕಳೆದ ಎಂಟು ವರ್ಷಗಳಿಂದ ಅಧಿಕಾರದಲ್ಲಿದ್ದ ಸೋಶಿಯಲ್ ಡೆಮೊಕ್ರಾಟ್ ಹಾಗೂ ಮಿತ್ರ ಪಕ್ಷಗಳು ಈ ಬಾರಿ ಕೇವಲ ಮೂರೇ ಮೂರು ಸೀಟುಗಳಿಂದ ಹಿನ್ನಡೆ ಅನುಭವಿಸಿ ಅಧಿಕಾರದಿಂದ ಕೆಳಗಿಳಿದಿವೆ. ಪ್ರಮುಖ ವಿರೋಧಿ ಪಕ್ಷವಾಗಿದ್ದ ಮಾಡರೇಟ್ ಪಕ್ಷ ಈ ಬಾರಿ ಅತಿ ದೊಡ್ಡ ಬಲಪಂಥೀಯ ಪಕ್ಷವಾಗಿ ಹೊರ ಹೊಮ್ಮಿದ ಸ್ವೀಡನ್ ಡೆಮಾಕ್ರಟ್ ಪಕ್ಷದ ಬಾಹ್ಯ  ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರುವಲ್ಲಿ ಸಫಲವಾಗಿದೆ.

ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ಇಪ್ಪತ್ತು ವರ್ಷಗಳ ಹಿಂದೆ ಯಾವ ಲೆಕ್ಕಕ್ಕಿಲ್ಲದ ಪಕ್ಷ ಸ್ವೀಡನ್ ಡೆಮಾಕ್ರಟ್ ಕಳೆದ ಎರಡು ಮೂರು ಚುನಾವಣೆಗಳಲ್ಲಿ ವೇಗವಾಗಿ ಬಲ ವೃದ್ಧಿಸಿಕೊಂಡು ಈಗ ಕಿಂಗ್ ಮೇಕರ್ ಆಗಿ ಸರಕಾರದ ನೀತಿ ನಿರ್ದೇಶನಗಳಲ್ಲಿ ಪ್ರಭಾವ ಬೀರುವ ಹಂತಕ್ಕೆ ಬಂದಿದೆ. ಇಂಥ ಬೆಳವಣಿಗೆಗೆ ಏನು ಕಾರಣ ಎನ್ನುವುದನ್ನು ಈ ಲೇಖನದಲ್ಲಿ ಮುಂದೆ ಚರ್ಚಿಸುವ.

ಉಲ್ಫ್ ಕ್ರಿಸ್ಟೆರ್ಸನ್ ಹೊಸ ಪ್ರಧಾನಿ

ಪ್ರಮುಖ ವಿರೋಧ ಪಕ್ಷವಾಗಿದ್ದ ಮಾಡರೇಟ್ ಪಾರ್ಟಿಯು ಸೋಶಿಯಲ್ ಡೆಮಾಕ್ರಟ್ ಪಕ್ಷವನ್ನು 2014 ರಲ್ಲಿ, ಹಾಗೂ 2018 ರಲ್ಲಿ ಕೂಡ ಸೋಲಿಸಲು ವಿಫಲವಾಗಿತ್ತು. ಆಗ ಪಕ್ಷದ ನಾಯಕ ಉಲ್ಫ್ ಕ್ರಿಸ್ಟೆರ್ಸನ್ ಮೊದಲ ಬಾರಿಗೆ ಸ್ವೀಡನ್ ಡೆಮಾಕ್ರಟ್ ಪಕ್ಷದ ಜೊತೆಗೆ 2019 ರಲ್ಲಿ ಮಾತುಕತೆ ಆರಂಭಿಸುತ್ತಾರೆ. ಅಲ್ಲಿಯವರೆಗೂ ಜಿಮ್ಮಿ ಒಕೆಸ್ಸನ್ ನೇತೃತ್ವದ ಸ್ವೀಡನ್ ಡೆಮಾಕ್ರಟ್ ಪಕ್ಷವನ್ನು ತೀವ್ರ ಬಲಪಂಥೀಯ ನಿಲುವುಗಳಿಗಾಗಿ ರಾಜಕೀಯವಾಗಿ ಅಸ್ಪೃಶ್ಯ ಪಕ್ಷ ಎಂತಲೇ ಪರಿಗಣಿಸಲಾಗಿತ್ತು. ಹೀಗಾಗಿ ಮಾಡರೇಟ್ ನಾಯಕ ಉಲ್ಫ್ನ ಮೇಲೆ ಎಲ್ಲ ಕಡೆಯಿಂದಲೂ ಟೀಕೆಗಳು ಹರಿದು ಬಂದರೂ, ಅದಕ್ಕೆ ಸೊಪ್ಪು ಹಾಕದೆ ಇದು ನನ್ನ ರಾಜಕೀಯ ಪಟ್ಟು ಎಂದು ಹೇಳಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು.

ಹಾಗಾಗಿಯೇ ಇತ್ತೀಚಿನ 2022 ರ ಚುನಾವಣೆಯಲ್ಲಿ ಮಾಡರೇಟ್ ಪಕ್ಷ ಸ್ವೀಡನ್ ಡೆಮಾಕ್ರಟ್ ಗಿಂತಲೂ ಸ್ವಲ್ಪ ಕಮ್ಮಿ ಸ್ಥಾನ ಗಳಿಸಿದ್ದರೂ, ಅಧಿಕಾರದ ಗದ್ದುಗೆ ಏರುವಲ್ಲಿ ಉಲ್ಫ್ ಕ್ರಿಸ್ಟೆರ್ಸನ್ ಯಶಸ್ವಿಯಾಗಿದ್ದಾರೆ. ಉಳಿದ ಮಿತ್ರ ಪಕ್ಷಗಳೆಲ್ಲ ಒಪ್ಪುವ ಅನುಭವಿ ನಾಯಕ ಎಂದು ಬಿಂಬಿತಗೊಂಡು ಸಹಜವಾಗಿಯೇ ಸ್ವೀಡನ್‌ನ ಹೊಸ ಪ್ರಧಾನಿಯಾಗುವ ಅವಕಾಶ ಬಂದೊದಗಿದೆ.

ಸ್ವೀಡನ್ ಡೆಮಾಕ್ರಟ್ ಕಿಂಗ್ ಮೇಕರ್

ಫಲಿತಾಂಶ ಪ್ರಕಟಗೊಂಡ ನಂತರ ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿ ಕೆಲವು ವಾರಗಳ ವಿಸ್ತರಿಸಿ ಬಲಪಂಥೀಯ ಒಕ್ಕೂಟ ಪಕ್ಷಗಳು ಸತತ ಮಾತುಕತೆ ನಡೆಸಿ ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ರೂಪು ರೇಷೆಗಳನ್ನು ತಯಾರಿಸಿದ್ದಾರೆ. ಸ್ವೀಡನ್ ಡೆಮಾಕ್ರಟ್ ಸರಕಾರದಲ್ಲಿ ನೇರವಾಗಿ ಭಾಗವಹಿಸಲು ಇಚ್ಚಿಸಿದ್ದರೂ, ಉಳಿದ ಮಿತ್ರಪಕ್ಷಗಳು ಒಪ್ಪದೇ ಇದ್ದುದರಿಂದ ಬಾಹ್ಯ ಬೆಂಬಲ ಪಡೆದು ಸರಕಾರ ರಚಿಸಬೇಕಾಗಿ ಬಂದಿದೆ. ಪ್ರತಿಫಲವಾಗಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಸ್ವೀಡನ್ ಡೆಮಾಕ್ರಟ್ ಪಕ್ಷದ ಪ್ರಣಾಳಿಕೆಯ ಅಂಶಗಳದ್ದೇ ಸಿಂಹಪಾಲು. ವಲಸೆ ನೀತಿ, ಅಪರಾಧ ನಿಯಂತ್ರಣ, ಶಕ್ತಿ ಬಿಕ್ಕಟ್ಟು ಇತ್ಯಾದಿ ವಿಷಯಗಳಲ್ಲಿ ವಿವಾದಾತ್ಮಕ ಸೂತ್ರಗಳನ್ನೂ ಮುಂದಿಡಲಾಗಿದೆ.

ಮಾಡರೇಟ್ ಪಾರ್ಟಿಯ ಉಲ್ಫ್ ಕ್ರಿಸ್ಟರ್ಸನ್ ಹಾಗೂ ಸೋಶಿಯಲ್ ಡೆಮೊಕ್ರಟಿಕ್ ನ ಮ್ಯಾಗ್ದಲೇನಾ ಅಂಡರ್ಸನ್ ಚರ್ಚೆಯಲ್ಲಿ ವಾದ ಮಂಡಿಸುತ್ತಿರುವುದು.

ಈ ನಿರ್ಣಾಯಕ ಸ್ಥಾನದಲ್ಲಿ ಕುಳಿತು ಕಿಂಗ್‌ಮೇಕರ್ ಆಗಿರುವ ತೀವ್ರ ಬಲಪಂಥೀಯ ಪಕ್ಷವಾದ ಸ್ವೀಡನ್ ಡೆಮಾಕ್ರಟ್‌ನ ಮಿಂಚಿನ ಬಲವರ್ಧನೆಗೆ ಕಾರಣವೇನು? ಇದಕ್ಕೆ ಒಂದು ಪ್ರಮುಖ ಕಾರಣವಿದೆ.

ಸೋಶಿಯಲ್ ಡೆಮಾಕ್ರಟ್ ಹಿನ್ನಡೆಗೆ ಕಾರಣ ಏನು?

ಮೂಲತಃ ಸ್ವೀಡನ್ ರಾಜಕೀಯ ಇತಿಹಾಸದಲ್ಲಿ, ಸಮಾಜವಾದಿ ಸಿದ್ಧಾಂತಗಳ ಸೋಶಿಯಲ್ ಡೆಮಾಕ್ರಟ್ ಪಾರ್ಟಿ ಸುದೀರ್ಘ ಕಾಲ ಆಳಿದ ಪಕ್ಷ.

ಇಂದು ಸ್ವೀಡನ್‌ನ ಶಿಕ್ಷಣ ವ್ಯವಸ್ಥೆ, ಸಾರ್ವಜನಿಕ ಆರೋಗ್ಯ ವಿಮೆ, ಉದ್ಯೋಗ ಭದ್ರತೆ, ನಿರುದ್ಯೋಗ ಭತ್ತೆ, ಪಾಲಕ ಭತ್ತೆ, ಶಿಶು ಪೋಷಣ ಭತ್ತೆ, ಕನಿಷ್ಠ ವೇತನ ಸೌಲಭ್ಯ, ಉಚಿತ ಆಸ್ಪತ್ರೆ ಖರ್ಚುಗಳು ಇತ್ಯಾದಿ ಕಲ್ಯಾಣಕಾರಕ ಯೋಜನೆಗಳು ಜಾರಿಯಲ್ಲಿದ್ದು, ಸಾಮಾಜಿಕ ಭದ್ರತೆ ಸುಸ್ಥಿರಗೊಂಡಿದ್ದು ಜಗತ್ತನ್ನೇ ಈ ವ್ಯವಸ್ಥೆಯ ಮಾದರಿಯ ಕಡೆಗೆ ಅಚ್ಚರಿಯಿಂದ  ನೋಡುವಂತೆ ಮಾಡಿದೆ. ಸಹಜವಾಗಿಯೇ ಸ್ವೀಡನ್‌ನಲ್ಲಿ ಆದಾಯ ತೆರಿಗೆ ಜಾಸ್ತಿ ಇದ್ದು, ಸಮಾಜ ಕಲ್ಯಾಣ ಯೋಜನೆಗಳಿಗೆ ಬಹಳಷ್ಟು ವ್ಯಯ ಮಾಡಲಾಗುತ್ತದೆ.

ಹೀಗಾಗಿ, ಪ್ರತಿಯೊಬ್ಬ ಸ್ವೀಡಿಶ್ ಪ್ರಜೆಗೂ ತಾನು ಯಾವ ಕಾರಣಕ್ಕೂ ಹಸಿವಿಂದ, ಉದ್ಯೋಗವಿಲ್ಲದೆ, ಆರೋಗ್ಯ ಸೇವೆಗಳಿಂದ ವಂಚಿತನಾಗುವ ಚಿಂತೆ ಇಲ್ಲದಿದ್ದುದರಿಂದ ಸಮಾಜ ಗಣನೀಯವಾಗಿ ಒಂದು ಮಟ್ಟದ ಸ್ಥಿರತೆ, ಶಾಂತಿ ತುಂಬಿರುವುದನ್ನು ಹಾಗೆಯೇ ಗುಣಮಟ್ಟದ ಜೀವನ ಮಟ್ಟ, ಮಾನವ ಅಭಿವೃದ್ಧಿ ಸೂಚ್ಯಂಕ ಉತ್ತಮವಾಗಿರುವುದನ್ನು ಇಲ್ಲಿ ಕಾಣಬಹುದು.

ಮಾನವ ಹಕ್ಕುಗಳಿಗೆ ಹೆಚ್ಚಿನ ಒತ್ತು ನೀಡುವ ಇಂಥ ಒಟ್ಟಾರೆ ವ್ಯವಸ್ಥೆ ಬಲಗೊಳ್ಳುವಲ್ಲಿ ದಶಕಗಳಿಂದ ಸ್ವೀಡನ್ ಇತಿಹಾಸದಲ್ಲಿ ಸಿಂಹಪಾಲು ಸಮಯ ಆಳ್ವಿಕೆ ನಡೆಸಿದ ಸೋಶಿಯಲ್ ಡೆಮಾಕ್ರಟ್ ಕೊಡುಗೆ ಗಣನೀಯವಾದದ್ದು. ಹೀಗಿರುವಾಗ ಇಂದಿನ ಪರಿಸ್ಥಿತಿಯಲ್ಲಿ ಸ್ವೀಡನ್ ಡೆಮಾಕ್ರಟ್ ನಂತಹ ತೀವ್ರ ಬಲಪಂಥೀಯ ಪಕ್ಷ ಜನಪ್ರಿಯಗೊಳ್ಳಲು ಕಾರಣವೇನು?

ಕ್ರಿಸ್ಟಿಯನ್ ಡೆಮೊಕ್ರಾಟಿಕ್ ಪಕ್ಷದ ಎಬ್ಬಾ ಬುಶ್ ಎಡಕ್ಕೆ, ಮಧ್ಯ ಸ್ವೀಡನ್ ಡೆಮೊಕ್ರಾಟ್‌ನ ಜಿಮ್ಮಿ ಅಕೆಸ್ಸನ್ ಹಾಗೂ ಗ್ರೀನ್ ಪಾರ್ಟಿಯ ಮಾರ್ತಾ ಸ್ಟೆನೆವಿ ಬಲಕ್ಕೆ ಚುನಾವಣಾ ಚರ್ಚೆಯ ಸಂದರ್ಭದಲ್ಲಿ.

ಜಿನೇವಾ ಹಾಗೂ ಯುರೋಪಿಯನ್ ಒಕ್ಕೂಟದ ಒಪ್ಪಂದ ನೀತಿಗಳು ಹಾಗೂ ಮನುಷ್ಯತ್ವದ ನೆಲೆಯ ಮೇಲೆ ಸ್ವೀಡನ್ ಜಗತ್ತಿನ ಇತರ ರಾಷ್ಟ್ರಗಳಿಂದ ಬಿಕ್ಕಟ್ಟು ಹಾಗೂ ಯುದ್ಧದ ಕಾರಣಗಳಿಂದಾಗಿ ಆಶ್ರಯ ಬೇಡಿ ಬಂದವರನ್ನು ಧಾರಾಳವಾಗಿ ಒಳಕ್ಕೆ ಬಿಟ್ಟು ಕೊಂಡಿತ್ತು. ಇರಾಕ್, ಸಿರಿಯಾ, ಅಫ್ಘಾನಿಸ್ತಾನ್, ಸೋಮಾಲಿಯ, ನೈಜೀರಿಯ, ಬಾಂಗ್ಲಾದೇಶ ಅಷ್ಟೇ ಅಲ್ಲ ಪೋಲೆಂಡ್, ರೊಮಾನಿಯ, ಯುಗೊಸ್ಲೋವಾಕಿಯದಂತ ಇತರ ಯೂರೋಪಿನ ರಾಷ್ಟ್ರಗಳಿಂದಲೂ ವಲಸಿಗರು ಕುಟುಂಬ ಸಮೇತರಾಗಿ ಬಂದಿದ್ದಾರೆ. ತೊಂಬತ್ತು ಲಕ್ಷದ ಸ್ವೀಡನ್ ಜನಸಂಖ್ಯೆಯಲ್ಲಿ ಸುಮಾರು ಹದಿಮೂರು ಲಕ್ಷ ಹೊರಗಿನವರು. ಸಮಸ್ಯೆ ಎಂದರೆ ಎಲ್ಲರೂ ಸ್ವೀಡನ್‌ನ ವ್ಯವಸ್ಥೆಯ ಮುಖ್ಯವಾಹಿನಿಯಲ್ಲಿ ಬೆರೆತು ಹೋಗಲಿಲ್ಲ. ತಮ್ಮದೇ ಕೇಂದ್ರ, ಚಟುವಟಿಕೆಗಳನ್ನು ಸ್ಥಾಪಿಸಿ ಇಲ್ಲಿಯೂ ಕೆಲವು ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸಿದರು. ಮೂಲತಃ ಶಾಂತಿಯುತ ಸ್ವೀಡನ್‌ನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಲ್ಲಿ 80 ಪ್ರತಿಶತ ವಲಸಿಗರೇ ಇರುವುದು ಕಂಡು ಬಂದಿದ್ದು ಮೂಲ ಸ್ವೀಡನ್ನಿಗರ ಆತಂಕಕ್ಕೆ ಕಾರಣವಾಯಿತು.

ಅಷ್ಟೇ ಅಲ್ಲ, ಮೇಲೆ ತಿಳಿಸಿದ ಎಲ್ಲ ಸೌಲಭ್ಯಗಳೂ ನಿರಾಯಾಸವಾಗಿ ದಕ್ಕುತ್ತಿರುವುದರಿಂದ, ಅನೇಕರು ಪ್ರಮುಖ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಗೋಜಿಗೆ ಹೋಗದೆ, ಸರಕಾರದ ಬೊಕ್ಕಸಕ್ಕೆ ಹೊರೆಯಾಗಿರುವುದು ಹಾಗೂ ಅದಕ್ಕಾಗಿ ದುಡಿಯುವ ಜನತೆಯ ಅಧಿಕ ತೆರಿಗೆ ಹಂಚಿಹೊಗುವುದು ಇತ್ಯಾದಿ ವಿಷಯಗಳು ಸಹಜವಾಗಿಯೇ ಚುನಾವಣೆಯಲ್ಲಿ ಮುನ್ನೆಲೆಗೆ ಬಂದವು. ಸಮಾಜ ಕಲ್ಯಾಣ ವೆಚ್ಚ ಅಧಿಕವಾಗಿರುವುದರಿಂದ ಸಾಮಾನ್ಯವಾಗಿ ಸ್ವೀಡನ್‌ನಲ್ಲಿ ತೆರಿಗೆ ಮೂವತ್ತರಿಂದ ಐವತ್ತು ಪ್ರತಿಶತ ಇರುತ್ತದೆ ಎನ್ನುವ ಅಂಶ ಕೂಡ ಗಮನಿಸಬೇಕಾದ್ದು.

ಹೊಸ ಸರಕಾರದ ಪ್ರಮುಖ ಸೂತ್ರದಾರರು ಸ್ವೀಡನ್ ಡೆಮೊಕ್ರಾಟ್‌ನ ಜಿಮ್ಮಿ ಅಕೆಸ್ಸನ್ ಹಾಗೂ ಪ್ರಧಾನಿ ಮಾಡರೇಟ್‌ನ ಉಲ್ಫ್ ಕ್ರಿಸ್ಟೆರ್ಸನ್.

ಸ್ವೀಡನ್‌ನಲ್ಲಿ ವಲಸೆ ಅವ್ಯಾಹತವಾಗಿ ಮುಂದುವರೆಯಲು ಆಳಿದ ಸೋಶಿಯಲ್ ಡೆಮಾಕ್ರಟ್ ನೀತಿಗಳು ಮುಖ್ಯ ಕಾರಣವಾಗಿದ್ದು, ವಲಸೆ ಬಂದವರೆಲ್ಲ ಮುಖ್ಯ ವಾಹಿನಿಯಲ್ಲಿ ಬೇರೆಯದೇ ಹೋದದ್ದು, ಅಪರಾಧ ಪ್ರಕರಣ ಹೆಚ್ಚಲು ಕಾರಣವಾದದ್ದು ಇವೆಲ್ಲವನ್ನೂ ಮುಂಚಿನಿಂದ ಎಚ್ಚರಿಸುತ್ತಾ ಬಂದಿದ್ದ ಸ್ವೀಡನ್ ಡೆಮಾಕ್ರಟ್ ಪಕ್ಷದ ಜಿಮ್ಮಿ ಒಕೆಶನ್ ಸತತವಾಗಿ ಬೆಂಬಲ ಹೆಚ್ಚಿಸಿಕೊಳ್ಳುತ್ತಾ ಹೋದರು.

ಕಿಂಗ್ ಮೇಕರ್ ಸ್ವೀಡನ್ ಡೆಮೊಕ್ರಾಟ್ ಪಕ್ಷದ ಕುರಿತು

ಜಿಮ್ಮಿ ಒಕೆಸ್ಸನ್.

ಸ್ವೀಡನ್ ಡೆಮೊಕ್ರಾಟ್ ಪಕ್ಷದ ಮೂಲ ಸ್ಥಾಪಕರು ನಾಜಿ ಫ್ಯಾಸಿಸ್ಟ್ ಬೆಂಬಲಿಗರೇ ಆಗಿದ್ದರೂ, ಅವರೆಲ್ಲ ಈಗ ಕಾಲವಾಗಿದ್ದಾರೆ. ಎಲ್ಲರ ಪಕ್ಷವಾಗಲು, ರೇಸಿಸ್ಟ್ ಕೋಮುವಾದಿ ಪಾರ್ಟಿ ಎಂಬ ಕಳಂಕವನ್ನು ಹೊಡೆದೋಡಿಸಲು ಜಿಮ್ಮಿ ಒಕೆಸ್ಸನ್ ನಾಯಕತ್ವದ ಸ್ವೀಡನ್ ಡೆಮೊಕ್ರಾಟ್ ಬಹಳ ವರ್ಷಗಳಿಂದ ಶ್ರಮಿಸುತ್ತಿದ್ದು ಅದರಲ್ಲಿ ತಕ್ಕ ಮಟ್ಟಿಗೆ ಸಫಲವಾಗಿದ್ದು, ಹೆಚ್ಚುತ್ತಿರುವ ಬೆಂಬಲದಿಂದ ಸಾಬೀತಾಗುತ್ತಿದೆ. ಯಾರೇ ಬಂದರೂ, ಸ್ವೀಡನ್‌ನ ಮುಖ್ಯವಾಹಿನಿಯಲ್ಲಿ ಅವರು ಬೆರೆಯಬೇಕು, ಸ್ವೀಡನ್‌ನ ಪಾರಂಪರಿಕ ವ್ಯವಸ್ಥೆ, ಮೂಲ ಆಸಕ್ತಿಗಳನ್ನು ಕಾಪಾಡಬೇಕು ಎನ್ನುವುದು ಅವರ ಸಿದ್ಧಾಂತ. ಈ ಸಿದ್ಧಾಂತದತ್ತ ಜನ ಆಕರ್ಷಿತರಾಗಿರುವುದು ಡಮೊಕ್ರಾಟ್ ಪಕ್ಷದ ಹಿಡಿತ ಹೆಚ್ಚಿಸಿತು.

ಟಿಡೋ ಕಾರ್ಯಸೂಚಿಯಲ್ಲಿ ಏನಿದೆ?

ಈ ವಾರದಲ್ಲಿ ಹೊಸ ಪ್ರಧಾನಿ ಮಾಡರೇಟ್ ಪಕ್ಷದÀ ಉಲ್ಫ್ ಕ್ರಿಸ್ಟೆರ್ಸನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೆ ಮುಂಚೆ, ಒಕ್ಕೂಟದ ಪಕ್ಷಗಳು ಕೆಲವು ವಾರಗಳ ಬಿಸಿ ಬಿಸಿ ಚರ್ಚೆಗಳ ಬಳಿಕ ಅರವತ್ಮೂರು ಹಾಳೆಗಳ ಟಿಡೋ ಕಾರ್ಯಸೂಚಿಯನ್ನು ಅಂತಿಮಗೊಳಿಸಿದ್ದಾರೆ. ಎಲ್ಲರೂ ಕುಳಿತು ಚರ್ಚೆ ನಡೆಸಿದ ವಸ್ತೆರಾಸ್‌ನ ಟಿಡೊ ಕಟ್ಟಡದ  ಹೆಸರನ್ನೇ ಈ ಸೂತ್ರಕ್ಕೆ ಇಡಲಾಗಿದೆ.

 
ಎಡದಿಂದ: ಸ್ವೀಡನ್ ಡೆಮಾಕ್ರಟ್ಸ್ ಪಕ್ಷದ ನಾಯಕ ಜಿಮ್ಮಿ ಎಕೆಸನ್, ಮಾಡರೇಟ್ ಪಕ್ಷದ ನಾಯಕ ಉಲ್ಫ್ ಕ್ರಿಸ್ಟರ್ಸನ್, ಕ್ರಿಶ್ಚಿಯನ್ ಡೆಮಾಕ್ರಾಟ್‌ಗಳ ನಾಯಕ ಎಬ್ಬಾ ಬುಶ್ ಮತ್ತು ಲಿಬರಲ್ ಪಕ್ಷದ ನಾಯಕ ಜೋಹಾನ್ ಪೆಹ್ರ್ಸನ್ ಅವರು ಸ್ವೀಡನ್‌ನ ಸ್ಟಾಕ್‌ಹೋಮ್‌ನ ಸಂಸತ್ತಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಸ್ವೀಡನ್ ಡೆಮಾಕ್ರಟ್‌ಗೆ ಸರಕಾರದಲ್ಲಿ ಸೇರುವ ಇರಾದೆ ಇತ್ತಾದರೂ ಇತರ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರಧಾನಿ ಉಲ್ಫ್ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಲು ಒಪ್ಪಲಾಗಿದೆ.  ಮಾಡರೇಟ್‌ನ ಪ್ರಧಾನಿಯಾಗಿದ್ದರೂ, ವಲಸೆ ನೀತಿ, ಅಪರಾಧ ನಿಯಂತ್ರಣ ಹಾಗೂ ಶಕ್ತಿ ಬಿಕ್ಕಟ್ಟು ಇತ್ಯಾದಿ ವಿಷಯಗಳಲ್ಲಿ ಸ್ವೀಡನ್ ಡೆಮಾಕ್ರಟ್ ತನ್ನ ಸಿದ್ಧಾಂತವನ್ನು ಹೇರುತ್ತಿರುವುದು ಕಾರ್ಯಸೂಚಿಯಿಂದ ನಿಚ್ಚಳವಾಗಿದೆ.

ಹೊಸ ಸರಕಾರ ವಲಸೆ ನೀತಿಯಲ್ಲಿ ಬಹು ದೊಡ್ಡ ಬದಲಾವಣೆಯನ್ನು ಮುಂದಿಟ್ಟಿರುವುದು   ಖಂಡಿತ ಪರಿಣಾಮ ಬೀರುತ್ತದೆ. ಸದ್ಯದಲ್ಲೇ ಇದು ರಿಕ್ಸ್ ಡಾಗ್ ಸಂಸತ್ತಿನಲ್ಲಿ ಮಸೂದೆಯಾಗಿ ಮುಂದಿಡಲಾಗುವುದು. ಉದಾಹರಣೆಗೆ, ಕನಿಷ್ಠ ಆದಾಯವನ್ನು ಎರಡು ಪಟ್ಟು ಏರಿಸಿರುವುದರಿಂದ ಚಿಕ್ಕ ಪುಟ್ಟ ಕೆಲಸವನ್ನು ಹುಡುಕಿಬರುವ ಹೊರ ದೇಶದ ವಲಸಿಗರಿಗೆ ತೊಂದರೆಯಾಗಲಿದೆ. ಮತ್ತೆ ಮತ್ತೆ ಅಪರಾಧಗಳಲ್ಲಿ ಸಿಕ್ಕಿ ಬೀಳುವ ವಲಸಿಗರನ್ನು ಗಡಿಪಾರು ಮಾಡುವ ಬಗ್ಗೆ, ಹೊಸ ನಿರಾಶ್ರಿತ ವಲಸಿಗ ವೀಸಾಗಳನ್ನು ಗಣನೀಯವಾಗಿ ಕಡಿತಗೊಳಿಸುವುದು, ನಿರಾಶ್ರಿತ ವಲಸೆಯ ವೀಸಾ ವಿಭಾಗದಲ್ಲಿ ನೀಡುವ ಕಾರಣಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದು ಹಾಗೂ ಅವರ ಸ್ವದೇಶಗಳಲ್ಲಿ ಯುದ್ಧ, ಬಿಕ್ಕಟ್ಟು ಮುಗಿದರೆ ವಾಪಸು ಕಳಿಸಲು ಅನುವಾಗುವ ಹಾಗೂ ಅನುದಾನ ಸೌಲಭ್ಯಗಳ ಹಣ, ಕೆಲಸ ಮಾಡಿದರೆ ಸಿಗುವ ಸಂಬಳದ ಆದಾಯಕ್ಕಿಂತ ಜಾಸ್ತಿ ಆಗದ ಹಾಗೆ ಇನ್ನೂ ಅನೇಕ ನೀತಿ, ಮಾರ್ಪಾಡುಗಳ ಬಗ್ಗೆ ಚರ್ಚಿಸಲಾಗಿದೆ. ಹಾಗೆಯೇ, ವಲಸಿಗರನ್ನು ಶಾಶ್ವತ ಸ್ವೀಡನ್ ಪ್ರಜೆಯಾಗಿ ಅಧಿಕೃತಗೊಳ್ಳಲು ಮನವಿ ಸಲ್ಲಿಸಲು ಕಾಯಬೇಕಾದ ಮಿತಿಯನ್ನು ಈಗಿನ ಐದು ವರ್ಷದಿಂದ ಎಂಟು ವರ್ಷಕ್ಕೆ ಏರಿಸುವುದನ್ನು ಕೂಡ ಈ ಕಾರ್ಯಸೂಚಿಯಲ್ಲಿ ಮುಂದಿಡಲಾಗಿದೆ. 

ಸದ್ಯಕ್ಕೆ, ಅನಿಯಂತ್ರಿತ ವಲಸೆ ನೀತಿ ಹಾಗೂ ಅಪರಾಧ ನಿಯಂತ್ರಣ ನಿಶ್ಚಿತವಾಗಿಯೂ ಆದ್ಯತೆಯ ವಿಷಯ ಹಾಗೂ ಹೊಸ ಸರಕಾರಕ್ಕೆ ಅದೊಂದು ಸವಾಲು ಕೂಡ. ಅದೇ ವೇಳೆಯಲ್ಲಿ ತೀವ್ರ ಬಲಪಂಥೀಯ ಪ್ರೇರಿತ ಹೊಸ ರಾಜಕೀಯ ನೀತಿಗಳು ಒಟ್ಟಾರೆ ಸ್ವೀಡನ್‌ನ ಯಾವತ್ತೂ ಘನ ಲಕ್ಷಣಗಳಾದ ಮಾನವ ಹಕ್ಕುಗಳಿಗೆ ಆದ್ಯತೆ, ಜಾತ್ಯತೀತತೆ, ಸಮಾಜವಾದ, ಲಿಂಗ ಸಮಾನತೆ, ಆರ್ಥಿಕ ಸಮಾನತೆ, ಮತಾಂಧತೆ ರಹಿತ, ರೇಸಿಸಮ್ ರಹಿತ ಸಮಾಜ, ಸುಭಿಕ್ಷೆಯ ಒಂದು ಚೌಕಟ್ಟಿಗೆ ಧಕ್ಕೆ ಯಾವತ್ತೂ ಬರದಿರಲಿ ಎಂಬ ಆಶಯದೊಂದಿಗೆ ಮುಂದಿನ ದಿನಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇವೆ.

 ಸಾರ್ವತ್ರಿಕ ಚುನಾವಣೆ ಫಲಿತಾಂಶ-2022

     ಸಮಾಜವಾದಿ  ಒಕ್ಕೂಟ:

ಸೋಶಿಯಲ್ ಡೆಮಾಕ್ರಟ್ ಪಕ್ಷ – 107

ಎಡಪಕ್ಷ : 24

ಗ್ರೀನ್ ಪಾರ್ಟಿ : 18

ಸೆಂಟರ್ ಪಾರ್ಟಿ: 24

ಒಟ್ಟ್ಟು : 173

         ಬಲ ಪಂಥೀಯ ಒಕ್ಕೂಟ

ಮೊಡರೇಟ್ : 68

ಲಿಬರಲ್ : 16

ಕ್ರಿಶ್ಚಿಯನ್ ಡೆಮೊಕ್ರಾಟ್ : 19

ಹಾಗೂ ತೀವ್ರ ಬಲಪಂಥೀಯ ಪಕ್ಷವಾದ

ಸ್ವೀಡನ್ ಡೆಮಾಕ್ರಟ್ : 73

ಒಟ್ಟ್ಟು : 176

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles