ವಿಜಯ್ ದಾರಿಹೋಕರ ಹಿಮಗಾಲದ ಡೈರಿ…
-ವಿಜಯ್ ದಾರಿಹೋಕ
ಯುರೋಪಿಯನ್ ರಾಷ್ಟ್ರಗಳ ಹಿಮಗಾಲ ನಮಗೆ ವಸಂತ ಋತು ತಂದಷ್ಟೇ ಉಲ್ಲಾಸ, ಸಂಭ್ರಮವನ್ನು ಅಲ್ಲಿನ ಜನರಿಗೆ ಹೊತ್ತು ತರುತ್ತದೆ. ಕ್ರಿಸ್ಮಸ್ ವೇಳೆಗೆ ಪ್ರತಿವರ್ಷ ಮೊದಲ ಹಿಮಪಾತದ ಹಿತಕ್ಕಾಗಿ ಅಲ್ಲಿನ ಜನ ಹಾತೊರೆದು ಹಂಬಲಿಸುತ್ತಾರೆ. ಈ ಸಲ ಉತ್ತರಾರ್ಧ ಗೋಳದ ರಾಷ್ಟ್ರಗಳಲ್ಲಿ ವಾಡಿಕೆಗಿಂತ ಒಂದು ತಿಂಗಳಿಗೆ ಮುನ್ನವೇ ಮೊದಲ ಹಿಮಪಾತದ ಪುಳಕವನ್ನು ಮೊನ್ನೆ ಅಲ್ಲಿನ ಜನ ಅನುಭವಿಸಿದ್ದಾರೆ. ಸ್ವೀಡನ್ ದೇಶದಲ್ಲಿ ನೆಲೆಸಿರುವ ಕನ್ನಡಿಗ ವಿಜಯ್ ದಾರಿಹೋಕ ಅವರ ಈ ಹಿಮಗಾಲದ ಡೈರಿ ಇಲ್ಲಿದೆ.

ಮೊನ್ನೆ ಶನಿವಾರ ಬ್ಲಾಕ್ ಫ್ರೈಡೇ ಆಫರ್ ನಿಮಿತ್ತ ಕೆಲ ಸಮಯ ಶಾಪಿಂಗ್ ಮಾಡಿ ಹೊರ ಬರುತ್ತಿದ್ದಂತೆ ಈ ವರ್ಷದ ಮೊದಲ ಹಿಮವರ್ಷ ಆರಂಭವಾಗಿತ್ತು. ಸ್ಟಾಕ್ ಹೋಮ್‌ನ ಪ್ರತಿ ವರ್ಷದ ಪ್ರಥಮ ಹಿಮಪಾತ ನಮ್ಮೂರಿನ ಮೊದಲ ಮಳೆಯಂತೆ ಯಾವತ್ತೂ ಅತೀವ ಸಡಗರ. ಅದೊಂದು ರೀತಿಯಲ್ಲಿ ಸಗ್ಗಲೋಕದಿಂದ ಬಿಳಿಯ ಹತ್ತಿಯ ಹೂಗಳನ್ನೋ, ಪಕ್ಕಿಗಳ ಅಚ್ಚ ಬಿಳಿಯ ಪುಚ್ಚಗಳನ್ನೋ ಧಾರಾಕಾರವಾಗಿ ಶ್ವೇತ ವಸನಧಾರಿ ದೇವಲೋಕದ ದೇವದೂತೆಯರು ಬಾನಿಂದ ಹಾರಿ ಬಿಡುತ್ತಿದ್ದಾರೋ ಎನ್ನಿಸುವ ಸೃಷ್ಟಿಯೇ ಸೃಷ್ಟಿಸುವ ಇಳೆಯ ವಿಸ್ಮಯ. ನೆಲವನ್ನು ಒಂದಿಂಚೂ ಬಿಡದೇ ಬಿಳಿಯ ಆಗಸ ಅಪ್ಪುಗೆಯೊಂದಿಗೆ ಆವರಿಸುತ್ತದೆ ಎನ್ನುವಷ್ಟು ಅಚ್ಚ ಬಿಳಿಯ ಪ್ರಪಂಚ. ಆಗಸದೆತ್ತರ ಚಾಚಿಕೊಂಡ, ಉದುರಿದ ಪೈನ್ ವೃಕ್ಷಗಳ ಕೊಂಬೆಗಳ ಮೇಲೆ ಬಿದ್ದ ಹಿಮಗಳು ಬಿಳಿಯ ಎಲೆಗಳಂತೆ ಅಂಟಿಕೊಂಡು ಗಾಳಿಗೆ ಉದುರುವ ದೃಶ್ಯ ಮನ ಮೋಹಕ. ಮಧ್ಯೆ ಮಧ್ಯೆ ಕಾಣುವ ಮನೆಗಳು, ದೀಪಗಳು ಒಂದು ಅಚ್ಚರಿಯ ಮಾಯಾ ಲೋಕವನ್ನು ಸೃಷ್ಟಿಸುತ್ತವೆ.

ಈ ಬಾರಿ ಒಂದು ತಿಂಗಳ ಮುಂಚಿತವಾಗಿಯೇ ಮೊದಲ ಹಿಮ ಬಿದ್ದಿದೆ. ಅದೂ ಕೂಡ ಒಂದು ದೀರ್ಘ ಹಿಮ ಮಾರುತದೊಂದಿಗೆ. ಆರಂಭವಾಗಿ ಎರಡು ಮೂರು ದಿನಗಳವರೆಗೆ ಸತತವಾಗಿ ಹಿಮ ಸುರಿಯುತ್ತಿದ್ದುದರಿಂದ ಅನೇಕ ಕಡೆಗಳಲ್ಲಿ ನೆಲದ ಮೇಲೆ ಬಿದ್ದ ಹಿಮದ ಎತ್ತರವೇ ಅರವತ್ತು ಸೆಂಟಿಮೀಟರ್‌ಗಳಷ್ಟು. ಖಾಲಿ ಪಾರ್ಕಿನ ಬೆಂಚುಗಳ ಮೇಲೆ ಎತ್ತರದ ಸ್ನೋ ರಾಜಾರೋಷವಾಗಿ ಆವರಿಸಿಕೊಂಡಿದ್ದು ಕೂರಲೂ ಜಾಗವಿಲ್ಲ. ಮುನಿಸಿಪಾಲಿಟಿಯ ಸ್ನೋ ಟ್ರಕ್‌ಗಳಿಗಂತೂ ಎಗ್ಗಿಲ್ಲದ ಕೆಲಸ. ಟ್ರಕ್‌ಗಳು ಒಂದೇ ಸಮನೆ ರಸ್ತೆಯಲ್ಲಿ, ಬೀದಿಯಲ್ಲಿ ಬಿದ್ದ ಹಿಮವನ್ನು ಎತ್ತುತ್ತಾ ಬಳಲಿ ಬೆಂಡಾದವು. ಪರಿಣಾಮ ಅನೇಕ ಕಡೆ ಸಾರಿಗೆ ಸಂಚಾರ ಅಸ್ತವ್ಯಸ್ತವಾದದ್ದು. ಅತ್ತ ಶಾಲೆಗೇ ಹೋಗುತ್ತಿದ್ದ ಮಕ್ಕಳಿಗೆ ಮಾತ್ರ ದಾರಿಯಲ್ಲಿ ಹಿಮದ ಜೊತೆಗೆ ಆಟ ಆಡುವುದು ಬಲು ಖುಷಿ. ಅಲ್ಲಲ್ಲಿ ಮಕ್ಕಳು ನಿರ್ಮಿಸಿದ ಎತ್ತರದ ಹಿಮ ಮನುಷ್ಯ (ಸ್ನೋ ಮ್ಯಾನ್) ನಗುವುದನ್ನು ಕಾಣಬಹುದು.

ಅಂದ ಹಾಗೆ ಸ್ವೀಡನ್ ಅಂತಹ ಉತ್ತರಾರ್ಧ ಗೋಳದ ರಾಷ್ಟ್ರಗಳಲ್ಲಿ ಚಳಿಗಾಲದ ಹಿಮಪಾತ ಸರ್ವ ಸಾಮಾನ್ಯವಾದದ್ದೇ. ಇಲ್ಲಿ ಸುಮಾರು ನಾಲ್ಕು ತಿಂಗಳುಗಳಷ್ಟು ಚಳಿಗಾಲ ಇರುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಸ್ವೀಡನ್‌ನಲ್ಲಿ ಸುಮಾರು ಐದು ತಾಸಿನಷ್ಟು ಮಾತ್ರ ಹಗಲು ಇದ್ದು ಡಿಸೆಂಬರ್ 21 ರ ದಕ್ಷಿಣಾಯನದ ಸುಮಾರಿಗೆ ನಿಧಾನವಾಗಿ ಹಗಲು ಹೆಚ್ಚುತ್ತಾ ಹೋಗುತ್ತದೆ. ಸ್ವೀಡನ್ ಉತ್ತರದ ಭಾಗಗಳಲ್ಲಿ ದಿನದ ಇಪ್ಪತ್ತು ತಾಸುಗಳಷ್ಟು ರಾತ್ರಿಯಿದ್ದು ಕೇವಲ ನಾಲ್ಕು ತಾಸು ಹಗಲು ಇರುವುದನ್ನು ಕಾಣಬಹುದು. ಹಾಗಾಗಿ ಕತ್ತಲು ಹೆಚ್ಚಾಗಿರುವ ಚಳಿಗಾಲದಲ್ಲಿ ಬಿಳಿಯ ಹಿಮ ಬಿದ್ದರೆ ರಾತ್ರಿ ಕೂಡ ಪ್ರಕಾಶಮಾನವಾಗಿ ಕಾಣಿಸುತ್ತದೆ. ಕ್ರಿಸ್ಮಸ್ ಬರುವ ವೇಳೆಗೆ ಒಂಚೂರಾದರೂ ಹಿಮ ಸುರಿಯಲಿ ಎಂದು ಆಶಿಶುವ ಜನತೆ ಹಾಗೇನಾದರೂ ಆದರೆ ಅದಕ್ಕೆ ವೈಟ್ ಕ್ರಿಸ್ಮಸ್ ಈ ಬಾರಿ ಎಂದು ಹೇಳಿ ಹಿರಿ ಹಿರಿ ಹಿಗ್ಗುತ್ತಾರೆ.

ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಶುರು ಆಗುವ ಹಿಮಗಾಲ ಮಾರ್ಚ್ ಏಪ್ರಿಲ್‌ವರೆಗೂ ಮುಂದುವರೆಯುತ್ತದೆ. ಈ ಸಮಯದಲ್ಲಿ ತಾಪಮಾನ ಮೈನಸ್ 25-30 ಡಿಗ್ರೀ ಸೆಲ್ಸಿಯಸ್ ವರೆಗೂ ಇಳಿದಿರುತ್ತದೆ. ಚಳಿಗಾಲದಲ್ಲಿ ಥರ್ಮಲ್ ಉಡುಗೆಗಳು ಅದರ ಮೇಲೆ ಮೈನಸ್ ತಾಪಮಾನ ತಾಳಿಕೊಳ್ಳಬಲ್ಲ ಜಾಕೆಟು, ತಲೆಗೆ ಟೊಪ್ಪಿಗೆ ಹಾಗೂ ಕೈ ಗವಸುಗಳನ್ನೂ, ಸ್ನೋ ಬೂಟುಗಳನ್ನು ಧರಿಸುತ್ತಾರೆ. ಇಂತಹ ಕಾಲದಲ್ಲಿಯೂ ಶಾಲೆ, ಕಾಲೇಜು, ಕಚೇರಿ, ಅಂಗಡಿ ಮುಂಗಟ್ಟುಗಳು ಸಾಮಾನ್ಯ ದಿನಗಳಂತೆಯೇ ಕೆಲಸ ನಿರ್ವಹಿಸುತ್ತದೆ. ಕೆಲವೊಮ್ಮೆ ತಾಪಮಾನದಲ್ಲಿ ವ್ಯತ್ಯಾಸ ಆಗುವುದರಿಂದ ಕೆಲವೊಮ್ಮೆ ಸೊನ್ನೆ ಡಿಗ್ರೀ ಹಾಗೂ ಪ್ಲಸ್ ತಾಪಮಾನಕ್ಕೆ ಬಂದರೆ ಹಿಮ ಕರಗಲು ಆರಂಭವಾಗುತ್ತದೆ. ಆಗ ತಕ್ಕ ಬೂಟು ಧರಿಸದೆ ಅನೇಕರು ಕಾಲು ಜಾರಿ ಬೀಳುವ ಸಂಭವ ಜಾಸ್ತಿ. ಹಾಗಾಗದಂತೆ ಸ್ಥಳೀಯ ಮುನಿಸಿಪಾಲಿಟಿ ನಡೆದಾಡುವ ರಸ್ತೆಗಳಲ್ಲಿ ಕಲ್ಲು ಕಡಿಗಳನ್ನು ಚೆಲ್ಲಿರುವುದನ್ನೂ ಕಾಣಬಹುದು.

ಇನ್ನು ಹಿಮ ಬಿದ್ದಮೇಲೆ ಇಲ್ಲಿ ಹಿಮಾಧಾರಿತ ಆಟಗಳ ಸುಗ್ಗಿಯೋ ಸುಗ್ಗಿ. ಸ್ವೀಡನ್ನಿನ ರಾಷ್ಟ್ರೀಯ ಆಟ ಐಸ್ ಹಾಕಿ. ಫೆಬ್ರುವರಿಯಲ್ಲಿ ಒಂದು ವಾರ ಮಕ್ಕಳು ಪಾಲಕರೊಂದಿಗೆ ರಜ ಹಾಕಿ ಪರ್ವತ ಪ್ರದೇಶಗಳಲ್ಲಿ ಸ್ಕಿಯಿಂಗ್ ಆಡಲು ಹೋಗುತ್ತಾರೆ. ಹೆಪ್ಪುಗಟ್ಟಿದ ನದಿ ಸರೋವರಗಳ ಮೇಲೂ ಜನ ಸ್ಕೇಟಿಂಗ್ ಮಾಡುವುದನ್ನೂ ಕಾಣಬಹುದು.
ಚಳಿಗಾಲದಲ್ಲಿ ಸ್ವೀಡಿಶ್ ಜನತೆಗೆ ಒಂದು ರೂಢಿ ಇದೆ. ಮನೆಯ ಬಾಲ್ಕನಿಗಳಲ್ಲಿ ಅಥವಾ ಹತ್ತಿರದ ಮರಗಲ್ಲಿಯೋ ಒಂದು ಚಿಕ್ಕ ಹಕ್ಕಿ ಮನೆಯನ್ನು ತೂಗಿ ಬಿಡುವುದು. ಅದರಲ್ಲಿ ಹಕ್ಕಿಗಳಿಗಾಗಿಯೇ ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಕಾಳು, ಧಾನ್ಯಗಳ ಆಹಾರವನ್ನು ಅಲ್ಲಿ ಶೇಖರಿಸಿಟ್ಟಿರುತ್ತಾರೆ. ಅದರಿಂದಾಗಿ ಚಳಿಗಾಲದಲ್ಲಿ, ಅದರಲ್ಲೂ ಹಿಮಗಾಲದಲ್ಲಿ ಹಕ್ಕಿಗಳಿಗೆ ಆಹಾರ ಹುಡುಕಿಕೊಂಡು ಹೋಗುವ ಕಷ್ಟ ತಪ್ಪುವುದಲ್ಲದೆ, ಬಗೆ ಬಗೆಯ ಪಕ್ಷಿಗಳು ಬಂದು ಆಹಾರ ತಿಂದು ಹೋಗುವುದನ್ನು ಕಂಡರೆ ಅದೊಂದು ತೃಪ್ತಿ. ಹಿಮಾವೃತ ನೆಲದಲ್ಲಿ, ಎಲೆಗಳಿರದ ಬೋಳು ಮರದಲ್ಲಿ ಆಹಾರ ಸಿಗದ ಹಕ್ಕಿಗಳಿಗೆ ಆಹಾರ ನೀಡುವುದು ನಿಜಕ್ಕೂ ಮಾನವೀಯ ಕೆಲಸ.

ಹಿಮಗಾಲದಲ್ಲಿ ವಿಶೇಷವಾಗಿ ಪ್ರವಾಸಿಗರು ಸ್ವೀಡನ್‌ನ ಉತ್ತರದ ಭಾಗಕ್ಕೆ ಪ್ರವಾಸ ಹೋಗುತ್ತಾರೆ. ಲಾಪ್ಲಂಡ, ಕಿರುನಾ, ಅಬಿಸ್ಕೋ ಇತ್ಯಾದಿ ಜನಪ್ರಿಯ ತಾಣಗಳು ಅಲ್ಲಿವೆ. ಇದೇ ಸಮಯದಲ್ಲಿ ನಾರ್ಥೆರ್ನ್ ಲೈಟ್ ವೀಕ್ಷಣೆಯ ಅನುಭವ, ಐಸ್ ಹೋಟೆಲ್‌ನಲ್ಲಿ ತಂಗುವುದು, ಹಿಮನಾಯಿಗಳು ಎಳೆಯುವ ತಳ್ಳು ಗಾಡಿಯಲ್ಲಿ ಸವಾರಿ, ಆರ್ಕ್ಟಿಕ್‌ನ ವನ್ಯಜೀವಿಗಳ ವೀಕ್ಷಣೆ, ಸಾಮಿ ಎಂಬ ಆರು ಸಾವಿರ ವರ್ಷಗಳ ಇತಿಹಾಸದ ಬುಡಕಟ್ಟು ಜನಾಂಗದ ಜೀವನ ಶೈಲಿಯನ್ನು ನೋಡುವುದು ಇತ್ಯಾದಿ ಪ್ರವಾಸಿಗರಿಗೆ ಇಷ್ಟವಾಗುವ ಚಟುವಟಿಕೆಗಳು.

ಹಿಮ ಇಲ್ಲಿಯ ಜನರ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಹಿಮವಿದ್ದರೆ ಕ್ರಿಸ್ಮಸ್‌ಗೆ ಒಂದು ಕಳೆ. ಎಷ್ಟೇ ಆದರೂ ಉತ್ತರ ಧ್ರುವದಿಂದ ವೇಗವಾಗಿ ಬರುವ ದಂತಕಥೆ ಸಾಂಟಾ ಕ್ಲಾಸ್‌ನ ಜಾರುವ ರಥಕ್ಕೆ ಹಿಮ ಬೇಕೇ ಬೇಕು ತಾನೇ. ಫರ್ ಮರದ ಮೇಲಿನ ಹಿಮ ಕೂಡ ಹಬ್ಬದ ದ್ಯೋತಕವೇ. 92% ಕ್ಕೂ ಹೆಚ್ಚು ನಾಸ್ತಿಕರಿರುವ ಸ್ವೀಡನ್‌ನಲ್ಲಿ ವೈಟ್ ಕ್ರಿಸ್ಮಸ್ ಅನ್ನುವುದು ಭಕ್ತಿಯ ಹಬ್ಬವಾಗಿ ಅಲ್ಲ, ಅದು ಒಂದು ಸಂಭ್ರಮದ, ತರಹೇವಾರಿ ಆಹಾರ, ಪಾನೀಯ, ಕ್ರಿಸ್ಮಸ್ ಮಾರ್ಕೆಟ್ ಗಳ, ನೈಸರ್ಗಿಕ ಕ್ರಿಸ್ಮಸ್ ಟ್ರೀ ಗಳ, ಬೆರಗಿನ ದೀಪಾಲಂಕಾರಗಳ ಹಾಗೂ ಇತರ ವಿಶೇಷ ಆಚರಣೆಗಳ ಸಡಗರವಾಗಿ ಹೆಚ್ಚು ಆಚರಿಸಲಾಗುತ್ತದೆ.

ಒಟ್ಟಿನಲ್ಲಿ ಹಿಮದಂತ ವ್ಯತಿರಿಕ್ತ ಹವಾಮಾನ ಕೂಡ ಮನುಷ್ಯನ ಸಡಗರದ, ಮಧುರ ನೆನಹುಗಳಷ್ಟೇ ಅಲ್ಲದೇ ಪ್ರತಿ ವರ್ಷದ ಸಹಜ ಜೀವನದ ಅವಿಭಾಜ್ಯ ಭಾಗವಾಗಿ ಹೋಗಿರುವುದು ಹಾಗೂ ಅಲ್ಲಿಯೂ ನಿಸರ್ಗ ಮಾತೆಯ ಮಮತೆಯ ಛಾಪು ಕಾಣುವುದು ನಿಸರ್ಗದ ಅದ್ಭುತ ಅಚ್ಚರಿಯಾಗಿದೆ.