-ಕೇಶವರೆಡ್ಡಿ ಹಂದ್ರಾಳ
ಚರಂಡಿ, ನೀರು ಪೂರೈಕೆ ಮುಂತಾದ ಸೌಲಭ್ಯಗಳಿಲ್ಲದ ಊರುಗಳಲ್ಲಿ ಶೌಚಾಲಯಗಳನ್ನು ನಿರ್ವಹಿಸುವುದಾರೂ ಹೇಗೆ. ಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ಎಷ್ಟೋ ಊರುಗಳಲ್ಲಿ ಮನೆಯ ಮುಂದಿನ ಲ್ಯೆಟ್ರಿನ್‌ಗಳು ದುರ್ನಾತವನ್ನು ಕಕ್ಕುತ್ತಿವೆ. ನನ್ನ ಹಳ್ಳಿಯಲ್ಲೂ ಸ್ವಚ್ಛ ಭಾರತದಡಿಯಲ್ಲಿ ಕಟ್ಟಿಸಿದ ಶೌಚದ ರೂಮುಗಳು ಮೂಲೆಗೆ ಬಿದ್ದಿವೆ. ಗಂಡಸರಿರಲಿ ಹೆಂಗಸರೇ “ಅಯ್ಯಯ್ಯಪ್ಪ ಅವುಗಳಾಕೆ ಹೋಗ್ತಿದ್ದಂಗೆ ವಾಂತಿ ಬಂದಂಗಾಗ್ತೈತಪ್ಪ..” ಎಂದು ತಮ್ಮ ಮಾಮೂಲಿ ತಿಪ್ಪೆ, ಬೇಲಿ ಮರೆ, ರಸ್ತೆಗಳನ್ನು ಆಶ್ರಯಿಸತೊಡಗಿದ್ದಾರೆ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾಗುತ್ತಾ ಬಂದಿದ್ದರೂ ಹಳ್ಳಿಗಳ ಕಡೆ ರಸ್ತೆ, ಚರಂಡಿ, ನೀರಿನ ಸೌಲಭ್ಯ ಮುಂತಾದ ಮೂಲ ಸೌಕರ್ಯಗಳ ಬಗ್ಗೆ ನಮ್ಮನ್ನಾಳುವ ಸರ್ಕಾರಗಳಿಗಾಗಲೀ, ಅಧಿಕಾರಿಶಾಹಿಗಾಗಲೀ ಆಸಕ್ತಿ ಇಲ್ಲವಾಗಿರುವುದು ದೊಡ್ಡ ದುರಂತವೇ ಸರಿ. ಜೊತೆಗೆ ಇಂತಹ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಶಾಹಿ ಹಂಚಿಕೊಂಡು ಹಂದಿಗಳು ಕಕ್ಕಸ್ಸು ಮುಕ್ಕುವಂತೆ ನಾಚಿಕೆಯಿಲ್ಲದೆ ಮುಕ್ಕುತ್ತಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆ ನೆಲಮಂಗಲದ ಬಳಿಯಿರುವ ನನ್ನ ಮಿಡ್ಲಿ ಸ್ಕೂಲು ಸೀನಿಯರ್ ಗೆಳೆಯ ಲಕ್ಷ್ಮಿಕಾಂತರ (ನಿವೃತ್ತ ರಿಸರ್ವ್ ಬ್ಯಾಂಕ್ ಉದ್ಯೋಗಿ) ತೋಟದ ಮನೆಗೆ ಹೋಗಿದ್ದೆ. ಅಲ್ಲಿ ಮೂರ್ನಾಲ್ಕು ಜನ ಸೀನಿಯರ್ ಸಿಟಿಜನ್ಸ್ ಇದ್ದರು. ಸುಮಾರಾಗಿ ತೀರ್ಥ ಸೇವನೆ ನಡೆದಿತ್ತು. ಅವರಲ್ಲೊಬ್ಬರು ಬಂದ ಫೋನ್ ಕರೆಯನ್ನು ಸ್ವೀಕರಿಸಿ ಎರಡು ವರ್ಷದ ಮೊಮ್ಮಗಳೊಂದಿಗೆ ಖುಷಿಯಿಂದ ಮಾತನಾಡಿ, ಫೋನ್ ಕಟ್ ಮಾಡಿದ ಮೇಲೆ ಒಂದು ಗುಟ್ಕು ವಿಸ್ಕಿಯನ್ನು ಚಪ್ಪರಿಸಿ “ನನ್ನ ಮೊಮ್ಮಗಳು ಲ್ಯೆಟ್ರಿನ್ ರೂಮಿನಲ್ಲಿ ಕಕ್ಕಸ್ ಮಾಡಿದಳಂತೆ, ಮೈ ಗುಡ್ನೆಸ್” ಎಂದು ಸಂಭ್ರಮಿಸಿದ್ದರು. ನನಗೆ ನಂಬಲಾಗಲಿಲ್ಲ. ಎಲ್ಲೋ ಇವ್ರು ಬಂಡಲ್ ಬಿಡ್ತಾ ಅವ್ರೆ ಅಂದ್ಕೊಂಡಿದ್ದೆ. ಏಕೆಂದರೆ, ನನ್ನ ಮಕ್ಕಳು ಕೂಡ ನಾಲ್ಕೈದು ವರ್ಷಗಳ ಮೇಲೆಯೇ ಲ್ಯೆಟ್ರಿನ್ ರೂಮಲ್ಲಿ ಯಲ್ಡಾ ಮಾಡಲು ಶುರು ಮಾಡಿದ್ದು. ನಿನ್ನೆ ಸಂಜೆ ನನ್ನ ಎರಡು ವರ್ಷದ ಮೊಮ್ಮಗ ಕಕ್ಕ ಕಕ್ಕ ಎಂದಾಗ, ನನ್ನ ಮಗ ಅವನನ್ನು ಎತ್ತಿಕೊಂಡು ಹೋಗಿ ಬಚ್ಚಲು ಮನೆಯ ಇಂಡಿಯನ್ ಕಮೋಡ್ ಮೇಲೆ ನಿಲ್ಲಿಸಿದ. ಒಂದೆರಡು ಕ್ಷಣದಲ್ಲೇ ಅವನು ಇಟ್ಟ ಗೊದ್ದೆ ಕಮೋಡಿನ ತೂತಿನೊಳಕ್ಕೆ ತುಪುಕ್ ತುಪುಕ್ ಎಂದು ಬಿದ್ದಿತ್ತು. ಅವೊತ್ತು ಲಕ್ಷ್ಮಿಕಾಂತರ ತೋಟದ ಮನೆಯಲ್ಲಿ ಮೊಮ್ಮಗಳ ಬಗ್ಗೆ ಹೇಳಿದ್ದ ಹಿರಿಯರು ನೆನಪಾಗಿ “ಎಲಾ ಇವ್ನ” ಎಂದು ಲ್ಯೆಟ್ರಿನ್ ರೂಮಿನಲ್ಲಿ ನಾನೂ ಇಣುಕಿ ನೋಡಿದ್ದೆ.

ತಲೆಮಾರುಗಳು ಕಳೆಯುತ್ತಾ ಎಲ್ಲಾ ವಿಧದಲ್ಲೂ ಮನುಷ್ಯ ಬದಲಾವಣೆಯಾಗುತ್ತಿರುವ ಪರಿ ನಿಜಕ್ಕೂ ಅಚ್ಚರಿಯೇ ಸರಿ. ಬದಲಾಗುತ್ತಿರುವ ತಂತ್ರಜ್ಞಾನ, ತೀವ್ರಗೊಂಡ ವೈಜ್ಞಾನಿಕ ಸಂಶೋಧನೆಗಳು, ಜಿಯೋಮೆಟ್ರಿಕ್ ವೇಗದಲ್ಲಿ ಬೆಳೆಯುತ್ತಿರುವ ವಿಜ್ಞಾನ ಮನುಷ್ಯನ ಬುದ್ಧಿಮತ್ತತೆಯನ್ನು, ಆಲೋಚನಾ ಪರಿಧಿಗಳನ್ನು ದ್ವಿಗುಣಗೊಳಿಸುತ್ತಿವೆ. ನಾನು ಟಾಯ್ಲೆಟ್ ಅಥವಾ ಲ್ಯೆಟ್ರಿನ್ ರೂಮನ್ನು ನೋಡಿದ್ದೇ ಹೈಸ್ಕೂಲು ಓದಲೆಂದು ಬೆಂಗಳೂರಿಗೆ ಬಂದಾಗ. ಇನ್ನು ಕಕ್ಕಸ್ ರೂಮುಗಳು ಮನೆಯಲ್ಲೇ ಇರುತ್ತವೆಂದು ನಾನು ಹಳ್ಳಿಯನ್ನು ಬಿಟ್ಟು ಬೆಂಗಳೂರಿಗೆ ಬರುವವರೆಗೂ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಮಕ್ಕಳು ಬೆಳಿಗ್ಗೆ ಎದ್ದ ತಕ್ಷಣ ಹಟ್ಟಿ ಮುಂದೆಯೇ ಇಟ್ಟುಬಿಡುತ್ತಿದ್ದರು. ಹೆಂಗಸರು “ಕುರೋ ಕುರೋ..” ಎಂದು ಒಂದು ಸಾರಿ ಕೂಗಿದರೂ ಸಾಕು ಕೇರಿಯ ನಾಯಿಗಳು ಕ್ಷಣಾರ್ಧದಲ್ಲಿ ಬಂದು ಪರಸ್ಪರ ಕಿತ್ತಾಡಿಕೊಂಡು ಹೊಟ್ಟೆಗಾಕಿಕೊಂಡು ಕ್ಲೀನ್ ಮಾಡುತ್ತಿದ್ದವು. ಕೆಲವು ನಾಯಿಗಳು ತಿಕಕ್ಕೆ ಬಾಯಿ ಹಾಕಿ ನೆಕ್ಕಿಬಿಡುತ್ತಿದ್ದವು. ಚಿಕ್ಕ ಮಕ್ಕಳಿಗೂ ಮತ್ತು ನಾಯಿಗಳಿಗೂ ಅಂಥ ಮಧುರವಾದ ಬಾಂಧವ್ಯವಿತ್ತು. ಪ್ರೈಮರಿ ಸ್ಕೂಲಿಗೆ ಸೇರುತ್ತಿದ್ದಂತೆ ನಮ್ಮ ಬಹಿರ್ದೆಸೆ ಕಾರ್ಯಕ್ರಮ ಹಟ್ಟಿ ಮುಂದೆಯಿಂದ ಬಣವೆಗೆ ಶಿಫ್ಟ್ ಆಗಿಬಿಡುತ್ತಿತ್ತು. ಇನ್ನು ಮಿಡ್ಲಿ ಸ್ಕೂಲಿಗೆ ಸೇರಿ ಬುದ್ಧಿ ಬಂದ ನಂತರ ಬೇಲಿ ಮರೆಯಲ್ಲಿ ಕೇರಿಯ ಸುಮಾರು ಹುಡುಗರು ಜೊತೆ ಜೊತೆಯಲ್ಲಿ ಕುಳಿತು ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆವು. ಯರಡ ನೋಡಿಯೇ ಹಿಂದಿನ ದಿನ ಯಾರು ಬರಿ ಮುದ್ದೆ ತಿಂದಿದ್ದಾರೆ, ಯಾರು ಅನ್ನ ತಿಂದಿದ್ದಾರೆ, ಯಾರು ಸೊಪ್ಪು ತಿಂದಿದ್ದಾರೆ ಎಂಬ ಪತ್ತೆ ಸಿಕ್ಕಿಬಿಡುತ್ತಿತ್ತು. ಮತ್ತು ನಾವು ಯಾವ ಜಾಗದಲ್ಲಿ ಯರಡಕ್ಕೆ ಕುಳಿತುಕೊಂಡರೂ ನಮ್ಮ ಹಿಂದೆ ನಾಯಿಗಳ ಗೆಳೆಯರ ಗುಂಪೂ ಕಾವಲಿನಂತೆ ಇದ್ದು ಅವುಗಳ ಕೆಲಸವನ್ನು ಅವು ಶ್ರದ್ಧೆಯಿಂದ ಮಾಡುತ್ತಿದ್ದವು. ನಮ್ಮ ಹಳ್ಳಿಗಳಲ್ಲಿ ಪ್ರತಿನಿತ್ಯ ಕಾಣುತ್ತಿದ್ದ ಅಂಥ ಸೊಬಗಿನ ಸೀನುಗಳು ಈಗ ತುಂಬಾ ಅಪರೂಪವೇ ಆಗಿಬಿಟ್ಟಿವೆ. ಕೆಲವು ನಾಯಿಗಳು ಹಿಟ್ಟನ್ನು ಮುಟ್ಟುವುದಿಲ್ಲ. ಅನ್ನ, ಉಪ್ಪಿಟ್ಟು, ಮಾಂಸದ ಮೂಳೆಗಳನ್ನು ಮುತುವರ್ಜಿಯಿಂದ ತಿನ್ನುತ್ತವೆ. ಕಾಲಾಯ ತಸ್ಮೈ ನಮಃ.

ಅದಿರಲಿ, ನಾನು ಐದನೇ ಕ್ಲಾಸಿನಲ್ಲಿದ್ದಾಗ ಬೆಂಗಳೂರಿನಿಂದ ನಮ್ಮ ದೊಡ್ಡಪ್ಪನ ಮಗ ಆನಂದಣ್ಣಯ್ಯ ಮತ್ತು ಅತ್ತಿಗೆ ಒಮ್ಮೆ ಊರಿಗೆ ಬಂದಾಗ ಮಸ್ತಾಗಿ ಬೀಟ್‌ರೂಟ್ ತಂದಿದ್ದರು. ನಮ್ಮ ಕಡೆ ಕ್ಯಾರೆಟ್, ಬೀಟ್‌ರೂಟ್ ಬೆಳೆಯುತ್ತಿರಲಿಲ್ಲ. ನಮ್ಮ ಕಡೆಯೇನಿದ್ದರೂ ಬದನೆಕಾಯಿ, ಮೂಲಂಗಿ, ಬೆಂಡೆಕಾಯಿ ಜೋರು. ನಮ್ಮ ಅತ್ತಿಗೆ ಬೀಟ್‌ರೂಟ್ ಪಲ್ಯವಲ್ಲದೆ ಸಾರನ್ನೂ ಬೀಟ್‌ರೂಟ್ನಲ್ಲೆ ಮಾಡಿದ್ದಳು. ಸಿಹಿ ಸಿಹಿ ಇದ್ದಿದ್ದರಿಂದ ಸುಮಾರಾಗಿ ಜಡಿದಿದ್ದೆ. ಮಾರನೇ ದಿನ ಬಣವೆಯ ಹತ್ತಿರ ನಾನು ಕೆಂಪ ಕೆಂಪಗೆ ಯರಡಕ್ಕೆ ಹೋಗಿದ್ದೆ. ಅದನ್ನು ನೋಡಿದ ನಮ್ಮಮ್ಮ “ಅಯ್ಯೋ ಕೇಶ್ವುನ್ ತಿಕದಾಗೆ ರಕ್ತ ಬೀಳ್ತಾ ಐತೆ” ಎಂದು ಗಾಬರಿಯಿಂದ ಕೂಗಿಕೊಂಡಿದ್ದಳು. ನಮ್ಮಪ್ಪ, ಆನಂದಣ್ಣಯ್ಯ ಇಬ್ಬರೂ ಓಡಿ ಬಂದಿದ್ದರು. ಕಡ್ಡಿಯಿಂದ ಕೆದಕಿದ ಆನಂದಣ್ಣಯ್ಯ “ಸುಮ್ಕಿರ್ ಚಿಗಮ್ಮೋ ಬೀಟ್‌ರೂಟ್ ತಿಂದಿದ್ರಿಂದ ಇಂಥ ಕಲರ್ ಬಂದೈತೆ” ಎಂದು ನಕ್ಕಿದ್ದ. ನಮ್ಮಪ್ಪ “ಉಗ್ಯೊ ಆ ಬಾಗ್‌ಶಾಲಿಗೆ” ಎಂದು ನಮ್ಮಮ್ಮನ ಮೇಲೆ ಹುಸಿ ಕೋಪ ತೋರಿ ತಾನೂ ನಕ್ಕಿದ್ದ. ಈ ಮಾತುಗಳ ಮಧ್ಯೆ ನಮ್ಮ ಕೇರಿಯ ಕರಿನಾಯಿ ಬಂದು ಕೆಂಪನ್ನು ಮಾಯ ಮಾಡಿತ್ತು.
ಮೊದಲೇ ಹೇಳಿದಂತೆ ನಾನು ಲ್ಯೆಟ್ರಿನ್ ರೂಮನ್ನು ನೋಡಿದ್ದು ಬೆಂಗಳೂರಿಗೆ ಕಾಲಿಟ್ಟ ಮೇಲೇನೇ. ಎರಡು ಗಂಟೆಗೆ ಬ್ಯಾಲ್ಯಾವನ್ನು ಬಿಟ್ಟ ಲಕ್ಷ್ಮಿ ನರಸಿಂಹ ಬಸ್ಸು ಬೆಂಗಳೂರು ಕಲಾಸಿಪಾಳ್ಯ ಸೇರುವ ಹೊತ್ತಿಗೆ ಏಳು ಗಂಟೆಯಾಗಿತ್ತು. ಕಾಟನ್‌ಪೇಟೆಯ ಗೆಜ್ಜೆ ಬಶೆಟ್ಟಿ ಗಲ್ಲಿಯಲ್ಲಿದ್ದ ವಠಾರದ ಮನೆಗೆ ಜಟಕಾ ಗಾಡಿಯಲ್ಲಿ ಹೋಗುವ ಹೊತ್ತಿಗೆ ಕಕರು ಮಕರು ಹಿಡಿಸಿತ್ತು. ರಾತ್ರಿ ತಿಂದು ಮಲಗಿದವನಿಗೆ ಬೆಳಿಗ್ಗೆ ಏಳು ಗಂಟೆಗೆ ಎಚ್ಚರವಾಗಿ ಮಾಮೂಲಿಯಾಗಿ ಯಲ್ಡ ಕಿತ್ತುಕೊಂಡಿತ್ತು. ಎಲ್ಲಿ ಹೋಗುವುದೆಂದು ಯೋಚಿಸುತ್ತಿರುವಾಗ ಸಣ್ಣಣ್ಣಯ್ಯ ಬಕೆಟಿನಲ್ಲಿ ನೀರು ಹಿಡಿದು ವಠಾರದ ಬಾಗಿಲಿನಲ್ಲಿದ್ದ. ಸಣ್ಣ ರೂಮಿನ ಬಾಗಿಲು ತೆರೆದು, ಅದರಲ್ಲಿದ್ದ ಇನ್ನೊಂದು ಸಣ್ಣ ಬಕೆಟಿಗೆ ನೀರು ಹಾಕಿ ಬಾಗಿಲು ಹಾಕಿಕೊಂಡು “ಹೋಗಿ ಬಾ” ಎಂದಿದ್ದ. ಆ ಮಬ್ಬು ಮಬ್ಬು ರೂಮಿನಲ್ಲಿ ನಾನು ಯರಡ ಮಾಡಿ ತೊಳೆದುಕೊಂಡು ಮನೆ ಸೇರಿದ್ದೆ. ತಕ್ಷಣ ಯಾರೋ ಬಂದು “ರೀ ನಾರಾಯಣಪ್ಪ ಯಾರ್ರಿ ಇವ್ನು ಬಂದ್ ನೋಡ್ರಿ ಲ್ಯೆಟ್ರಿನ್ ರೂಮನ್ನೆಲ್ಲ ಗಲೀಜು ಮಾಡಿಟ್ಟವ್ನೆ” ಎಂದಿದ್ದರು. ನಮ್ಮಣ್ಣಯ್ಯ “ಅವ್ನು ರಾತ್ರಿ ತಾನೆ ಬೆಂಗಳೂರಿಗೆ ಬಂದಿರೋದು ಸುಮ್ನರ‍್ರಿ, ನಾಳೆಯಿಂದ ಅವ್ನೂ ಸರಿಯಾಗಿ ಹೋಗ್ತಾನೆ” ಎಂದು ಬಕಿಟಿನಲ್ಲಿ ನೀರು ತಗೊಂಡೋಗಿ ಸುರಿದು ಬಂದಿದ್ದ. ನಾನು ಭಯದಲ್ಲಿ ಮೇಲೆಲ್ಲಾ ಮಾಡಿ ಬಂದಿದ್ದೆ. ಒಂದೆರಡು ದಿನದಲ್ಲಿ ಹೈಕ್ಲಾಸಾಗಿ ಅಡ್ಜೆಸ್ಟ್ ಆಗಿದ್ದರೂ ಊರಿನಲ್ಲಿ ನೆಮ್ಮದಿಯಾಗಿ ಯರಡಕ್ಕೆ ಹೋಗುತ್ತಿದ್ದಂತೆ ಬೆಂಗಳೂರಿನಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನಮ್ಮಪ್ಪನಂತೂ ಬೆಂಗಳೂರಿಗೆ ಬಂದರೆ ಒಂದೇ ಒಂದು ದಿನ ಮಾತ್ರವೇ ಇರುತ್ತಿದ್ದದ್ದು. ಊರಲ್ಲಿ ದೊಡ್ಡದೊಂದು ಮುದ್ದೆ, ಸುಮಾರಾಗಿ ಅನ್ನ ತಿನ್ನುತ್ತಿದ್ದ ನಮ್ಮಪ್ಪ ಬೆಂಗಳೂರಿಗೆ ಬಂದರೆ ಅರ್ಧ ಮುದ್ದೆ ಮಾತ್ರ ತಿನ್ನುತ್ತಿದ್ದ. ಲ್ಯೆಟ್ರಿನ್ ರೂಮಿಗೆ ಪ್ರವೇಶ ಮಾಡುವಾಗ ನರಕಕ್ಕೆ ಹೊಕ್ಕಂತೆ ಭಾಸವಾಗುತ್ತಿತ್ತೇನೋ ಪಾಪ. ಬಂದ ಮಾರನೇ ಬೆಳಿಗ್ಗೆಯೇ “ನಡ್ಯೊ ಕೇಶ್ವಣ್ಣ ಲಕ್ಷ್ಮಿನರಸಿಂಹ ಬಸ್ಸು ಹತ್ಸು ಹಿಟ್ನೊತ್ತಿಗೆ ಊರು ಸೇರ್ಕೊತೀನಿ” ಎಂದು ಮಗುವಿನಂತೆ ಹಟ ಹಿಡಿಯುತ್ತಿದ್ದ. ಈಗ ನಗರಗಳಲ್ಲಿ ಮಕ್ಕಳು, ಯುವಕರು ಕೂಡಾ ವೆಸ್ಟ್ರನ್ ಕಮೋಡುಗಳಿಲ್ಲದೆ ಯರಡಕ್ಕೆ ಹೋಗಲು ತಿಣುಕಾಡುತ್ತಾರೆ. ಆದರೆ ಹಳ್ಳಿಗಳಲ್ಲಿ ಎಂಬತ್ತು ವರ್ಷದ ಮುದುಕರೂ ಸಹ ಕಾಲು ಮಡಚಿಕೊಂಡು ಕೂತು ಸಲೀಸಾಗಿ ಯರಡಕ್ಕೆ ಹೋಗುತ್ತಿದ್ದುದ್ದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ. ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ಈಗಲೂ ವೆಸ್ಟ್ರನ್ ಕಾಮೋಡುಗಳಿರಲಿ, ಇಂಡಿಯನ್ ಕಾಮೋಡುಗಳ ಸೌಲಭ್ಯಗಳಿಲ್ಲದೆ ವಯಸ್ಸಾದವರು ಬೆಳಗಿನ ಹೊತ್ತು ಇನ್ನಿಲ್ಲದ ಪಡಿಪಾಟಲುಗಳನ್ನು ಪಡುತ್ತಿದ್ದಾರೆ.

ನಮ್ಮ ಹಳ್ಳಿಗಾಡಿನಲ್ಲಿ ಯರಡಕ್ಕೆ ಲಂಡನ್ ಎಂದು ಕರೆಯಲಾಗುತ್ತಿತ್ತು. ಈಗಲೂ ಕೆಲವು ಕಡೆ ಆ ಪದ ರೂಢಿಯಲ್ಲಿದೆ. ಹೈಸ್ಕೂಲಿಗೆ ಹೋಗಲು ಶುರುವಾಗುತ್ತಿದ್ದಂತೆ ಹುಡುಗರು “ಅಪ್ಪಯ್ಯ ಲಂಡನ್‌ಗೆ ಹೋಗೋಣ ಬರ್ತೀಯ” ಎಂದು ಕರೆದರೆ “ನಾನಾಗ್ಲೆ ಲಂಡನ್‌ಗೆ ಹೋಗ್ಬಂದೆ” ಎಂದು ಉತ್ತರಿಸುತ್ತಿದ್ದರು. 2004-2005ರಲ್ಲಿ ಅಗ್ನಿ ಪತ್ರಿಕೆಯಲ್ಲಿ ಒಕ್ಕಲ ಒನಪು ಕಾಲಂ ಬರೆಯುವಾಗ ಒಂದು ವಾರ ಪ್ರಕಟವಾದ ‘ಡರ್ಟಿ ಫೆಲೋ ಇನ್ ದಿ ಸಿಟಿ’ ಎಂಬ ಅಧ್ಯಯನದಲ್ಲಿ ಬೆಂಗಳೂರಿನ ಈ ಲ್ಯೆಟ್ರಿನ್ ಪ್ರಸಂಗವನ್ನು ಪ್ರಸ್ತಾಪಿಸಿದ್ದೆ. ಅದಾದ ಮಾರನೆಯ ವಾರ ಆಫೀಸಿನ ಮೀಟಿಂಗ್‌ನಲ್ಲಿರಬೇಕಾದರೆ ಮೊಬೈಲ್‌ನಲ್ಲಿ ಚಿತ್ರ ವಿಚಿತ್ರ ನಂಬರುಗಳು ಮೂಡಿ ಬಂದಿದ್ದವು. ನಾನು ಹೊರಗೆ ಬಂದು “ಹಲೋ” ಎಂದಿದ್ದೆ. “ಫೋನ್ ತೆಗ್ಯೋದು ಎಷ್ಟೊತ್ತೋ ಯು ಡರ್ಟಿ ಫೆಲೋ” ಎಂಬ ಅಪರಿಚಿತ ಹೆಣ್ಣಿನ ಧ್ವನಿ. ನನಗೆ ಗಾಬರಿಯಿಂದ ಮಾತೇ ಹೊರಡಲಿಲ್ಲ. ಆ ಮಧುರ ಧ್ವನಿಯೇ ಮುಂದುವರೆದಿತ್ತು “ನಾನು ಲಂಡನ್‌ನಿಂದ ಮಾತಾಡ್ತಾ ಇದ್ದೀನಿ. ಅಂದ ಹಾಗೆ ನಿನ್ನ ಅರ್ಥದ ಲಂಡನ್ನಲ್ಲ. ಮೊನ್ನೆ ಇಲ್ಲೇ ಸ್ನೇಹಿತರ ಮನೆಗೆ ಹೋಗಿದ್ದೆ. ಅವರು ಅವೊತ್ತೇ ಬೆಂಗಳೂರಿನಿಂದ ಬಂದಿದ್ದರು. ಒಂದಿಷ್ಟು ಪತ್ರಿಕೆಗಳನ್ನು ತಂದಿದ್ದರು. ಅಗ್ನಿಯಲ್ಲಿ ನಿನ್ನ ಲೇಖನ ಓದಿ ನಿನ್ನ ಫೋನ್ ನಂಬರ್ ಸಂಪಾದನೆ ಮಾಡೋಕೆ ವಾರ ಹಿಡಿಸ್ತು ನೋಡು. ಚಿಕ್ಕಂದಿನ ಎಂಥ ಅಮೂಲ್ಯ ಕ್ಷಣಗಳನ್ನು ಮಿಸ್ ಮಾಡ್ಕೊಂಡೆ ಅಂಥ ನಿಜಕ್ಕೂ ಬೇಸರವಾಯ್ತು. ಡರ್ಟಿನೆಸ್ ತುಂಬಿರೋದು ಮನಸ್ಸು, ಹೃದಯಗಳಲ್ಲಿ ಅಂತ ಇಷ್ಟೆಲ್ಲಾ ವರ್ಷಗಳ ಮೇಲೆ ಜ್ಞಾನೋದಯ ಆಯ್ತು ನೋಡು. ಅಂದ ಹಾಗೆ ನನ್ನ ಹೆಸರು ಸುಬ್ಬಲಕ್ಷ್ಮಿ ಅಂತ. ಮಡಿಕೇರಿ ಕಡೆಯೋಳು. ವಯಸ್ಸು ಐವತ್ತೈದು. ಬೆಂಗಳೂರಿಗೇನಾದ್ರೂ ಬಂದ್ರೆ ನಿನ್ನ ಮುದ್ದು ಮುಖಾನ ನೋಡೇ ಬರ್ತೀನಿ” ಎನ್ನುವಷ್ಟರಲ್ಲಿ ಫೋನ್ ಕಟ್ ಆಗಿತ್ತು. ಅವೊತ್ತು ರಾತ್ರಿ ಒಂದೊತ್ತಿನಲ್ಲಿ ಏಕೋ ಬಿಕ್ಕಳಿಸಿ ಅತ್ತುಬಿಟ್ಟಿದ್ದೆ.

ಅದಿರಲಿ, ಗಂಡಸರು ರಾಜಾರೋಷವಾಗಿ ಹೊಲ, ಗದ್ದೆ, ತೋಟಗಳಲ್ಲಿ ಯರಡ ಮಾಡಬಹುದು. ಆದರೆ ಹಳ್ಳಿಗಾಡಿನ ಹೆಣ್ಣುಮಕ್ಕಳ ಗೋಳಂತೂ ಹೇಳತೀರದು. ಸೂರ್ಯ ಹುಟ್ಟುವ ಮೊದಲು ಅಥವಾ ಸೂರ್ಯ ಮುಳುಗಿದ ನಂತರದ ಕತ್ತಲಲ್ಲಿ ಇವರು ತಮ್ಮ ಪ್ರಾತಃ ವಿಧಿಗಳನ್ನು ಮುಗಿಸಬೇಕಾಗಿದೆ. ತಮ್ಮ ಪ್ರಾತಃ ವಿಧಿಗಳನ್ನು ಮುಗಿಸಲು ಹೆಂಗಸರು ತಿಪ್ಪೆಗಳನ್ನು ಇಲ್ಲವೇ ಬೇಲಿ ಮರೆಗಳನ್ನು ಆಶ್ರಯಿಸುತ್ತಿದ್ದರು; ಈಗಲೂ ಈ ಗಂಜರಗೋಳು ಭಾರತದ ಸಾವಿರಾರು ಹಳ್ಳಿಗಳಲ್ಲಿ ಕಂಡುಬರುತ್ತದೆ. ಇನ್ನು ಕೆಲವು ಊರುಗಳಲ್ಲಂತೂ ರಸ್ತೆಯ ಇಕ್ಕೆಲಗಳನ್ನೇ ಆಶ್ರಯಿಸಬೇಕಾಗುತ್ತದೆ. ಗಂಡಸರು ಕಣ್ಣಿಗೆ ಬಿದ್ದ ತಕ್ಷಣ ತಟ್ಟನೆ ಏಳುವ, ಮರೆಯಾದ ತಕ್ಷಣ ಕುಳಿತುಕೊಳ್ಳುವ ಹಿಂಸೆಯ ವ್ಯಾಯಾಮ ಮಾಡುವುದು ಒಂದು ರೀತಿಯ ನರಕಯಾತನೆಯೇ ಸರಿ. ಭಾರತದ ಹಳ್ಳಿಗಾಡಿನ ಹೆಣ್ಣುಮಕ್ಕಳಿಗೆ ಇದೊಂದು ಶಾಶ್ವತವಾದ ಶಾಪವೇ ಸರಿ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮಾನ್ಯ ಪ್ರಧಾನಮಂತ್ರಿಗಳಾದ ಮೋದಿಯವರು ಸ್ವಚ್ಛ ಭಾರತ್ ಅಭಿಯಾನದಡಿ ಭಾರತದ ಪ್ರತಿಯೊಂದು ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗೂ ಲ್ಯೆಟ್ರಿನ್ ಸೌಲಭ್ಯಗಳನ್ನು ಒದಗಿಸಲು ಮುಂದಾದರು. ಈಗ ಹಳ್ಳಿಗಳ ಕಡೆ ಪ್ರತಿಯೊಂದು ಮನೆಯ ಮುಂದೆಯೂ ಸಣ್ಣ ಗೋಪುರದಂತೆ ಲ್ಯೆಟ್ರಿನ್ ಮನೆಗಳು ಎದ್ದಿವೆ. ಆದರೆ ಬಹುತೇಕ ಎಲ್ಲಾ ಹಳ್ಳಿಗಳಲ್ಲೂ ಮನೆ ಕಟ್ಟಿಸಿದ ಮೂರ್ನಾಲ್ಕು ತಿಂಗಳಲ್ಲೇ ಈ ಲ್ಯೆಟ್ರಿನ್ ರೂಮುಗಳು ಪಾಳು ಬಿದ್ದಿವೆ.

ಚರಂಡಿ, ನೀರು ಪೂರೈಕೆ ಮುಂತಾದ ಸೌಲಭ್ಯಗಳಿಲ್ಲದ ಊರುಗಳಲ್ಲಿ ಶೌಚಾಲಯಗಳನ್ನು ನಿರ್ವಹಿಸುವುದಾರೂ ಹೇಗೆ. ಬೇಸಿಗೆಯಲ್ಲಿ ನೀರಿನ ಅಭಾವದಿಂದಾಗಿ ಎಷ್ಟೋ ಊರುಗಳಲ್ಲಿ ಮನೆಯ ಮುಂದಿನ ಲ್ಯೆಟ್ರಿನ್‌ಗಳು ದುರ್ನಾತವನ್ನು ಕಕ್ಕುತ್ತಿವೆ. ನನ್ನ ಹಳ್ಳಿಯಲ್ಲೂ ಸ್ವಚ್ಛ ಭಾರತದಡಿಯಲ್ಲಿ ಕಟ್ಟಿಸಿದ ಶೌಚದ ರೂಮುಗಳು ಮೂಲೆಗೆ ಬಿದ್ದಿವೆ. ಗಂಡಸರಿರಲಿ ಹೆಂಗಸರೇ “ಅಯ್ಯಯ್ಯಪ್ಪ ಅವುಗಳಾಕೆ ಹೋಗ್ತಿದ್ದಂಗೆ ವಾಂತಿ ಬಂದಂಗಾಗ್ತೆöÊತಪ್ಪ..” ಎಂದು ತಮ್ಮ ಮಾಮೂಲಿ ತಿಪ್ಪೆ, ಬೇಲಿ ಮರೆ, ರಸ್ತೆಗಳನ್ನು ಆಶ್ರಯಿಸತೊಡಗಿದ್ದಾರೆ. ಸ್ವಾತಂತ್ರö್ಯ ಬಂದು ಎಪ್ಪತ್ತೈದು ವರ್ಷಗಳಾಗುತ್ತಾ ಬಂದಿದ್ದರೂ ಹಳ್ಳಿಗಳ ಕಡೆ ರಸ್ತೆ, ಚರಂಡಿ, ನೀರಿನ ಸೌಲಭ್ಯ ಮುಂತಾದ ಮೂಲ ಸೌಕರ್ಯಗಳ ಬಗ್ಗೆ ನಮ್ಮನ್ನಾಳುವ ಸರ್ಕಾರಗಳಿಗಾಗಲೀ, ಅಧಿಕಾರಿಶಾಹಿಗಾಗಲೀ ಆಸಕ್ತಿ ಇಲ್ಲವಾಗಿರುವುದು ದೊಡ್ಡ ದುರಂತವೇ ಸರಿ. ಜೊತೆಗೆ ಇಂತಹ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಎಲ್ಲಾ ಹಂತದ ಜನಪ್ರತಿನಿಧಿಗಳು ಮತ್ತು ಅಧಿಕಾರಿಶಾಹಿ ಹಂಚಿಕೊಂಡು ಹಂದಿಗಳು ಕಕ್ಕಸ್ಸು ಮುಕ್ಕುವಂತೆ ನಾಚಿಕೆಯಿಲ್ಲದೆ ಮುಕ್ಕುತ್ತಿದ್ದಾರೆ. ನಾಗರೀಕತೆ ಬೆಳೆದಂತೆ ನಯ, ನಾಜೂಕುಗಳೂ ಬೆಳೆಯುತ್ತಿವೆ. ಮನುಷ್ಯನನ್ನು ಸುಂದರವಾಗಿರಿಸಲು ಎಂಥೆಂಥ ಸೌಂದರ್ಯ ಸಾಧನಗಳು ಇಂದು ಮಾರುಕಟ್ಟೆಗಳಲ್ಲಿ ರಾರಾಜಿಸುತ್ತಿವೆ. ಆದರೆ ಮನಸ್ಸು, ಹೃದಯಗಳ ಸೌಂದರ್ಯವನ್ನು ಹೆಚ್ಚಿಸುವ ಸಾಧನಗಳು ಪ್ರಪಂಚದ ಯಾವ ಮಾರುಕಟ್ಟೆಗಳಲ್ಲಿ ಸಿಗಬಹುದು, ಕಾಲ ಕಳೆಯಲು, ಬೇಸರ ಕಳೆಯಲು ನೆನಪುಗಳು ಬೇತಾಳಗಳಂತಿರಬೇಕು.