-ಬ್ರಹ್ಮದೇವರಹಳ್ಳಿ ಹರೀಶ್ ಬಾಬು
ನಗರವಾಸಿಗಳು ಗ್ರಹಣ, ಅಮಾವಾಸ್ಯೆ, ಹುಣ್ಣಿಮೆಗಳ ಬಗ್ಗೆ ಮೂಢನಂಬಿಕೆಗಳಿಗೆ ಜೋತುಬಿದ್ದಿದ್ದಾರೆ. ಯಾರೋ ಜ್ಯೋತಿಷಿ, ಇನ್ನಾರೋ ಕಾವಿ ಸ್ವಾಮಿ ಬಿತ್ತುವ ಭಯ, ಆತಂಕಗಳ ನೆರಳಿನಲ್ಲಿ ಬದುಕುತ್ತಿದ್ದಾರೆ. ಗ್ರಹಣ ಅಂದರೆ ಕೇಡು. ಗ್ರಹಗತಿಗಳಿಗೆ ಹೊಡೆತ ಎಂದೆಲ್ಲ ಭಾವಿಸಿ ಅಂಧಕಾರದಲ್ಲಿ ಮುಳುಗಿದ್ದಾರೆ. ಪೇಟೆ, ಪಟ್ಟಣದ ಅಕ್ಷರಸ್ಥರು ಮೂಢನಂಬಿಕೆಗಳಲ್ಲಿ ಮುಳುಗಿದ್ದರೆ ಹಳ್ಳಿ ಮಂದಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಕೃಷಿ ಕಸುಬುಗಳಲ್ಲಿ, ಹೊಲ ಗದ್ದೆಗಳ ಕೆಲಸಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಯಾವುದೇ ಗ್ರಹಣವಾಗಲಿ, ಹಬ್ಬ, ಹರಿದಿನ, ಅಮಾವಾಸ್ಯೆ, ಹುಣ್ಣಿಮೆಯಾಗಲಿ ಗ್ರಾಮೀಣರ ಬದುಕನ್ನು ಏರುಪೇರು ಮಾಡುವುದಿಲ್ಲ. ಆ ಮಟ್ಟಿಗೆ ಕಾಯಕ ನಿಷ್ಠೆಗೆ ಅಂಟಿಕೊಂಡ ಅವರಿಂದ ನಗರದ ಜನ ಕಲಿಯುವುದು ಸಾಕಷ್ಟಿದೆ.
ಈ ಬಗ್ಗೆ ನೆಲಮೂಲದ ಯುವ ಲೇಖಕ ಬ್ರಹ್ಮದೇವರಹಳ್ಳಿ ಹರೀಶ್ ಬಾಬು ಬರೆದಿರುವ ಲೇಖನ ನಿಮ್ಮ ಓದಿಗಾಗಿ…

ಒಂದು ದಿವಸ ಈ ಪ್ಯಾಟೆ ಸಿಟಿನಲ್ಲಿ ವಾಸವಿರೋ ಜನರೇ ಒಂದು ಕಟ್ಟಕಡೆಯ ಪುಟ್ಟ ಹಳ್ಳಿಗೆ ಹೋಗಿ ಬನ್ನಿ ಅಲ್ಲಿನ ಜನ ಜೀವನ ಅವರ ಶ್ರಮ, ನಿರಂತರ ಕೃಷಿ, ಅದರೊಳಗಿನ ಶ್ರದ್ಧೆ, ತನ್ಮಯತೆ, ಭಕ್ತಿಯನೊಮ್ಮೆ ಮನಸ್ಸು ಇಟ್ಟು ನೋಡಿ ಬನ್ನಿ. ಹಳ್ಳಿಗಳು ದೇಶದ ಬೇರುಗಳು. ಅವೇ ನಗರದವರ ಹಸಿವು ನೀಗಿಸುವುದು. ಗ್ರಾಮೀಣ ಭಾಗದ ಜನತೆ ಕೃಷಿ ಕಸುಬು, ಉಪಕಸುಬುಗಳನ್ನು ಬಿಟ್ಟು ಬೇರೆ ಗೊತ್ತಿಲ್ಲದವರು. ದುಡಿಮೆ, ವ್ಯವಸಾಯ, ಕೂಲಿ, ಹೈನುಗಾರಿಕೆಯ ಕಸುಬುದಾರರು ಹಾಗೂ ಅವಿರತ ಶ್ರಮ ಜೀವಿಗಳು.
ಪ್ಯಾಟೇ ಬದುಕು ಕಟ್ಟಿಕೊಂಡ ಜನರೇ ನೀವು ಮಾಮೂಲಿ ದಿನಗಳಲ್ಲಿ ಹಳ್ಳಿಗಳತ್ತ ಹೋಗುವುದಕ್ಕಿಂತ ಮೊನ್ನೆಯ ಸೂರ್ಯ ಗ್ರಹಣದಂತಹ ದಿನ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದರೆ ಅಲ್ಲಿನ ಮಣ್ಣಿನ ಶ್ರಮಸಂಸ್ಕೃತಿಯ ಅರಿವಾಗುತ್ತದೆ.
ಏಕೆಂದರೆ ಇಂತಹ ಸಂದರ್ಭದಲ್ಲಿ ಪ್ಯಾಟೆಯಲ್ಲಿ ಬಾಳುತ್ತಿರುವವರು ಮೂಢನಂಬಿಕೆ, ಆಡಂಬರದ ಭಕ್ತಿಯೊಳಗಿನಿಂದ ಎದ್ದ ಸುಮ್ಮಸುಮ್ಮನೆ ಆತಂಕ, ಜ್ಯೋತಿಷ್ಯ, ಭವಿಷ್ಯದವರ ಬೆದರಿಕೆಯ ನೆರಳಿನಲ್ಲಿ…
ನಿಮ್ಮ ಬದುಕು, ಅದರ ಸತ್ಯ, ವಿಜ್ಞಾನ ಧೈರ್ಯ ತಿಳಿಯಬೇಕು ಎಂದರೆ ಇಂತಹ ದಿನಗಳಲ್ಲಿ ಹಳ್ಳಿಗಳಿಗೆ ಭೇಟಿ ನೀಡುವುದೇ ಸೂಕ್ತ. ಈಗೆ ಒಮ್ಮೆ ಗ್ರಹಣದ ದಿನ ನನ್ನೂರು, ಅಲ್ಲಿನ ಜನ ಜೀವನ ಕಂಡು ಅದನ್ನಿಲ್ಲಿ ಬರೆಯುತ್ತಿದ್ದೇನೆ. ಒಮ್ಮೆ ಓದಿ.

ಗ್ರಹಣದ ಆಚರಣೆ ನನ್ನ ಹಳ್ಳಿಗಳಲ್ಲಿ ಹೇಗೆ ಇರಲಿದೆ ಎನ್ನುವುದನ್ನ ನೋಡುವುದೇ ಒಂದು ಸೋಜಿಗ, ಏಕೆ ಎಂಬುವುದನ್ನ ನೀವೆ ಓದಿ.. ಅಚ್ಚರಿಯಾದರೂ ಸತ್ಯ..
ಹುಟ್ಟಿನಿಂದ ಹಳ್ಳಿಯಲ್ಲಿ ಬೆಳೆದ ನಮಗೆ ಗರ್ನ (ಗ್ರಹಣ) ಎನ್ನುವುದು ಕೇವಲ ಐದು ಆರನೇ ತರಗತಿಯಲ್ಲಿ ಇದ್ದಾಗ ವಿಜ್ಞಾನ ಪಾಠಗಳಲ್ಲಿ ಓದಿದ್ದೆ ನೆನಪು. ಅದಕ್ಕೂ ಮುಂಚೆ ಗರ್ನ ಎನ್ನುವುದು ನಮಗೆ ತಿಳಿದೆ ಇರಲಿಲ್ಲ ವತ್ಯಾರೆಯಾದರೆ ಎದ್ದು ಕಾಫಿ ಬೆಡ್ಡು ತಿಂದ್ ಯಾರದೋ ಉಕ್ಕೆ (ಉತ್ತು ಕೃಷಿಗೆ ಅಣಿಗೊಳಿಸಿದ ಭೂಮಿ) ಯಲ್ಲಿ ಧೂಳ್ ಒಯ್ಕೊಂಡು ಹುಟುಗಾಟದಲ್ಲಿ ತೊಡಗಿ ಇರುತ್ತಿದ್ದವು. ಇಟ್ನೊಂತ್ತಿಗೆ ಅಮ್ಮ ಆ ಕಡೆ ಏರಿದ ಧ್ವನಿಯಲ್ಲಿ ಕೂಗುತ್ತಾ ಬಂದು ಬರೋ ಅಪ್ಪಯ್ಯ ಬುಯ್ ಆಗೈತೆ ಉಂಡು ಹೋಗು ಎಂದು ಕೂಗಿ ಕರೆಯುತ್ತಿದ್ದಳು. ಅದಕ್ಕೆ ಕಿವಿಗೊಡದೆ ಆಟ ಹಾಡುವುದರಲ್ಲಿ ಮಗ್ನರಾಗಿ ಇರುತ್ತಿದ್ದವು. ಜೊತೆಗಾರರು ನೋಡೋ ನಿಮ್ ಅಮ್ಮ ಕರಿತಾತೈ ಅಂದಾಗ ಅತ್ತ ತಿರುಗಿ ಇವಾಗ ಬರಲ್ಲ ಅಮ್ಯಾಕೆ ಬರ್ತಿನಿ ಹೋಗಮ್ಮ ಎಂದು ಹೇಳಿ ಮತ್ ಆದೇ ಬಯಲಿನಾಗೆ ಆಟವಾಡುತ್ತಿದ್ದೆವು. ಹೊಟ್ಟೆ ಹಸಿವಾಗ ಮನೆ ತಲುಪಿ ಅಮ್ಮನ ಕೈತುತ್ತು ತಿಂದು ಮತ್ ಅದೇ ಹುಟುಗಾಟ. ಗ್ರಹಣವಿರಲಿ, ಭೂಮಿ ಯಾವ ಭಾಗದಲ್ಲಿ ಏನೇ ನಡೆಯಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಲೋಕದಲ್ಲಿ ನಾವ್ ಇರ್ತಿದ್ದೆವು. ಆದರೆ ಇಂದಿನ ಮಕ್ಕಳನ್ನು ಅದರಲ್ಲೂ ಪೇಟೆ ಮಕ್ಕಳನ್ನು ಜೈಲಿನಂತೆ ಮನೆಯಲ್ಲಿ ಕೂಡಾಕಿ ಇರುವುದು ಕಂಡು ನನ್ನ ಬಾಲ್ಯ ದಿನಗಳು ನೆನಪಾದವು.
ಈಗೆ ಆಡಿ ಬೆಳೆದು ದೊಡ್ಡವರಾದ ಮೇಲೆ ಒಂದಿಷ್ಟು ಚುರುಕಾಗಿ ಹಾಗೂ ಪ್ರಯೋಗಗಳ ಮೂಲಕ ಮಕ್ಕಳ ಮನಸ್ಸು ಗೆದ್ದು ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಪಾಠ ಮಾಡುತ್ತಿದ್ದ ನನ್ನ ಬಾಲ್ಯ ಶಾಲೆಯ ವಿಜ್ಞಾನ ಶಿಕ್ಷಕರು ಆದ ರವಿ ಸರ್ ಹಾಗೂ ಪ್ರೌಢಶಾಲೆ ಶಿಕ್ಷಕರಾದ ನಟರಾಜ್ ಸರ್ ಹಾಗೂ ಮಂಜುನಾಥ್ ಸರ್ ನನ್ನ ಬದುಕಿಗೆ ವಿಜ್ಞಾನದ ಅಲೋಚನೆಗಳನ್ನು ಹುಟ್ಟಿ ಹಾಕಿದ್ದರು. ವಿಜ್ಞಾನದ ಅಲ್ಪ ಪರಿಚಯದಿಂದ ನಾನಂತೂ ಮೂಢನಂಬಿಕೆಗಳನ್ನು ಹತ್ತಿರ ಸುಳಿಯದೇ ದೂರದಲ್ಲೇ ಇಟ್ಟಿದ್ದೆ. ಅದರಲ್ಲೂ ನನ್ನಪ್ಪ ಮೇಷ್ಟ್ರು ಪಾಠಕ್ಕಿಂತಲೂ ವಿಜ್ಞಾನ ಪರಿಚಯಸಿ ಬದುಕಿನೊಂದಿಗೆ ಜೋಡಿಸಿದ.

ಗ್ರಾಮೀಣ ಪ್ರದೇಶಗಳಲ್ಲಿ ಬೆಳೆದು ದೊಡ್ಡವಾದ ನಾವು ದನ ಕರ ಹೊಡೆದುಕೊಂಡು ಹೋಗಿ ಮೇಯಿಸಿ ಹುಲ್ಲು ಸೊಪ್ಪು ತರುವುದು ನಮ್ಮ ದಿನ ನಿತ್ಯದ ಕರ್ತವ್ಯ. ಶಾಲೆ ಇದ್ದ ದಿನಗಳಲ್ಲಿ ಇಂತಹ ಎಲ್ಲಾ ಕೆಲಸಗಳನ್ನು ತಂದೆ ತಾಯಿಗಳೇ ನೋಡಿಕೊಳ್ಳುತ್ತಿದ್ದರು ರಜೆ ದಿನಗಳಲ್ಲಿ ಈ ಕೆಲಸ ನಮ್ದೆ ಖಾಯಂ ಆಗಿರುತ್ತಿತ್ತು. ಗ್ರಹಣವಿರಲಿ ಅಮಾವಾಸ್ಯೆ ಇರಲಿ ಹುಣ್ಣಿಮೆ ಇರಲಿ ಎಂದಿನಂತೆ ದನಕರ ಬಯಲಿಗೆ ಬಿಟ್ಟು ಗಿಡ ಗೆಂಟೆ ಬೆಟ್ಟ ಗುಡ್ಡ ಸುತ್ತಿ ಸಂಜೆ ಮನೆಗೆ ಹುಲ್ಲು ಸೊಪ್ಪು ತರಬೇಕಿತ್ತು. ದನ ಕರ ಮೇಯಿಸುವಾಗ ನಮ್ಮಂತೆ ಜೀವಾಧಿಗಳ ಹೊಡೆದುಕೊಂಡು ಬಂದು ಇದ್ದ ಹಿರಿಯ ಜೀವಗಳ ಜೊತೆ ಗ್ರಹಣ ಕುರಿತು ಆಗೆಲ್ಲ ಮಾತಾಡಿದ್ದು ಮೊನ್ನೆಯ ಸೂರ್ಯ ಗ್ರಹಣದ ದಿನ ನೆನಪಾಯ್ತು.
“ಏನ್ ತಾತ ಇವತ್ ಗ್ರಹಣ ಅಂತೇ ನೀನ್ ನೋಡಿರೆ ಬಟಾನ್ ಬಾಯ್ಲಾಗೆ ಒಬ್ಬನೆ ದನ ಮೇಸ್ತಾ ಇದ್ಯ” ಅಂದ್ರೆ
“ಅಯ್ಯಾ ನೀನ್.. ಇಂತ ಗರ್ನ ಅದ್ ಏಸ್ ನೋಡಿ ಇದ್ವಿ ನಮ್ ಜೀವಾನ್ದಾಗೆ ಗರ್ನ ಗಿರ್ನ ಅಂತ ನಾವ್ ಯಾವ್ತೂ ಮನ್ಯಾಗ ಇದ್ದವ್ರೇ ಅಲ್ಲ. ಗರ್ನ ಇದ್ರೆ ಅದ್ರಮಟ್ಟಿಗೆ ಅದ್ ಇರ್ತದೆ ನಮ್ಗೆ ಏನ್ ತೊಂದ್ರಿ ಇಲ್ಲವಲ್ಲ ಅವೆಲ್ಲ ಪರಮಾತ್ಮನಿಗೆ ಬಿಟ್ಟಿದ್ದು. ಗರ್ನ ಇದ್ರೆ ಕೊಟ್ಟಿಗೆ ಬಾಗಿಲಾಗೆ ಸುಣ್ದಾಗೆ ಸೂರ್ಯ ಚಂದ್ರನ ಬರೆದು ಮತ್ ಇಲಾಗಿರೋ ದನ ಕರುಗಳಿಗೆ ಯಾತದ್ದು ಆಗ್ದೆ ಹಿಂದ್ಗಡೆ ಕುಂಡೆ ಮ್ಯಾಕೆ ಸೂರ್ಯ ಚಂದ್ರ ಬರ್ದು ಮೂಮೂಲಿ ಬಯ್ಲಿಗೆ ಹೊಡ್ಕೊಂಡು ಬರೋದು”. ಅನ್ನೋರು.

“ಗರ್ನ ಟೈಮ್ನಾಗೆ ಮನೆ ಇಂದ್ ವರ್ಗೆ ಬರ್ಬಾದು ಅಂತೆಲ್ಲ ಟಿಬಿನಾಗೆ ಹೇಳ್ತಾರೆ ಅಲ್ಲ ತಾತ” ಅಂದ್ರೆ “ಅಯ್ಯೋ ಅವರ್ ಹೇಳ್ತಾರೆ ಮನೆಗೆ ಇದ್ರೆ ತಿನ್ನೋಕೆ ಕೂಳೂ, ಹಸ ಕರಿಗೆ ಮೇವೂ ಏನ್ ಮನೆಗೇ ಊರ್ತದಾ ಹೇಳ್”…
ಇಲ್ಲ ತಾತ ಹೋಗ್ಬೇಕು ತರಬೇಕು. ಗರ್ನ ಇದ್ರೆ ನೀವ್ ಏನ್ ಮಾಡ್ತಿರಾ.. ಅಂತ ಮರುಪ್ರಶ್ನೆ ಹಾಕಿದ್ರೆ
“ನೋಡ್ ಅಪ್ಪಯ ನಾವ್ ಯಾತದ್ದು ಇಲ್ಲ ಸಾಯಂತ್ರ ಮನೆತ್ಯಾಕೆ ಹೋದಾಗ ವತ್ಯಾರೆ ಹಿಟ್ನೆಸ್ರು ಇಕಿರ್ತಾರೆ ಅಲ್ವಾ ಅದ್ ಸಾಯಂತ್ರಕೆ ಮೂಸರೆ ಆಗತದೇ ಅದರಾಕಿ ಒಂದಿಷ್ಟು ನೀರ್ ಒಯ್ದು ದನಕರ ಮೇಲಕ್ಕೆ ಸಿಮಕ್ಸಿ ಕಟ್ಟಾಕೋ ಕೊಟ್ಟಿಗೆ ಜಾಗದಾಕೆ ಕಟ್ಟಾಕಿ ನಾವು ಒಂದ್ ಒಷ್ಟೊತ್ತು ಬಿಟ್ಕೊಂಡು ಆಗಿರೋ ಇಟ್ ಉಂಡು ತೆಪ್ಪಗ ಮನಿಕೊಳದೇ ನಮ್ಮ ಬದುಕು….” ಅನ್ನೋರು.

ಹೊಲ ಮಾಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಇವತ್ತು ಗರ್ನನಂತೆ ಅಲ್ಲ ದೊಡ್ಡಮ್ಮ ನೀವ್ ನೋಡಿರೆ ಇವತ್ ಕೂಲಿ ಬಂದಿದಿರಾ ಅಂದ್ರೆ ಅಯ್ಯೋ ನೀನ್ ಬಿಡಪ್ಪ ಇದೆಲ್ಲ ಸುಮ್ನೆ ಸೃಷ್ಟಿ ಬಸ್ರಿಹೆಗ್ಸುನಾಗೇ ಕೂಲಿನಾಗಿ ಮಾಡ್ಕೊಂಡು ತಿಂದು ಹೊಲವೆಲ್ಲ ಅಡ್ಡಾಡಿದವಳಿಗೆ ಇದ್ ಇನ್ ಯಾವ್ ಲೆಕ್ಕ. ಎಳೇ ಮಕ್ಕಳನೇ ಎತ್ಕೊಂಡು ಬಂದು ವಂಗೆ ಮರ್ಕೆ ಸೀರೆ ಕಟ್ಟಿ ಹಾಲು ಕೊಟ್ಟು ಜೋಕಾಲಿನಲ್ಲಿ ಹಾಕಿ ನಮ್ ಬದುಕು ನಾವ್ ಮಾಡಕೊಂಡ್ ನಿಮ್ಮನೆಲ್ಲ ದೊಡ್ಡವರು ಮಾಡಿದ್ವಿ.. ನಮಗೆ ಯಾವ ಅಡ್ಡಿಯೂ ಇಲ್ಲ ಯಾರೋ ಪ್ಯಾಟೇ ಜನ ನೆಳ್ಳಾಗೆ ಕಾಪುರ ಮಾಡೋರು ಗರ್ನ ಪರ್ನ ಅಂತ ಕಥೆ ಕಟ್ಕೊಂಡು ಕಾಲ ಕಳಿತಾರೆ ಆದರೆ ನಮಗಲ್ಲ.

ಈಗೆ ಎಲ್ಲಾ ಬದುಕಿ ನೂರು ವರ್ಷಗಳ ಜೀತವಾಧಿ ಕಾಲದವರೆಗೆ ಬದುಕಿ ಬಾಳಿ ಮರೆಯಾದ ನನ್ನ ಹಿರಿಯರೇ ಇಂತಹ ಗರ್ನ ಮೂಢನಂಬಿಕೆ ಮೆಟ್ಟಿ ನಿಂತು ಅವೆಲ್ಲ ವಿಜ್ಞಾನ ಎಂದು ತಿಳಿಯದ ಅನಕ್ಷರಸ್ಥರಾದರೂ ಅವೆಲ್ಲ ದೇವರಾಟ ಎಂದು ತಿಳಿದು ಸತ್ಯ ಭಕ್ತಿ ನಂಬಿಕೆ ಜೀವನ ಕಟ್ಟಿಕೊಂಡ ಹಿರಿಯರ ಜೀವನ ನಮಗೆಲ್ಲ ಮಾದರಿ. ಇಂತಹ ವಾತಾವರಣದಲ್ಲಿ ಬೆಳೆದ ನಾವು ಗರ್ನ ಅದು ಇದು ಅಂತ ಆಚರಣೆ ಮಾಡಿದವರು ಅಲ್ಲ ಈಗಿನ ಕಾಲದ ಟಿವಿಯಲ್ಲಿ ತೋರಿಸುವ ಆಚರಣೆಗಳು ಅನುಸರಿಸಿ ಅಂಧ ಭಕ್ತರಂತೂ ಅಲ್ಲ. ನೂರು ವರ್ಷ ಬಾಳಿ ಬದುಕಿದವರಿಗೆ ಇಲ್ಲದ ಗರ್ನ ಈಗ ಡೊಂಗಿ ಭಕ್ತರಿಗೆ ಇದ್ಯಾ ಗರ್ನ. ಏನಿದ್ದರೂ ದೈವ ನಿದ್ದಾನೆ ಭಕ್ತಿಯಿಂದ ನಮಿಸು ಪೂಜಿಸು ವಿನಯ ಮಾರ್ಗದಲ್ಲಿ ನಡೆ ಮಾನವೀಯ ಮೌಲ್ಯಗಳ ಜೊತೆ ಬದುಕು ಇಷ್ಟೇ ನಮ್ಮ ಬದುಕು.