ದೇಶಕ್ಕೆ ಮಾದರಿ ಪಂಚಕಮಿಟಿ ಪದ್ಧತಿ
ಸಾಮಾಜಿಕ ಪಿಡುಗುಗಳಿಗೆ ಧಿಕ್ಕಾರ ಸ್ವಾವಲಂಬನೆಗೆ ಜೈಕಾರ
-ನೀರಕಲ್ಲು ಶಿವಕುಮಾರ್
ಹುಬ್ಬಳ್ಳಿ ಮತ್ತು ಧಾರವಾಡದ ಎಸ್‌ಎಸ್‌ಕೆ ಸಮಾಜವು ಘಟಕ ವ್ಯವಸ್ಥೆಯನ್ನು ಹೊಂದಿದೆ. 18 ಘಟಕಗಳು ಇಲ್ಲಿ ಕೆಲಸ ಮಾಡುತ್ತಿವೆ. ಪ್ರತಿ ಘಟಕದಿಂದ ಮೂರು ಜನರಂತೆ ಒಟ್ಟು 54 ಮಂದಿಯನ್ನು ಕೇಂದ್ರ ಪಂಚಾಯಿತಿಗೆ ಆಯ್ಕೆ ಮಾಡಲಾಗುತ್ತದೆ. ಈ ಸದಸ್ಯರು ಕೇಂದ್ರ ಪಂಚಾಯಿತಿಯ ಮಹಾ ಧರ್ಮದರ್ಶಿ ಸೇರಿದಂತೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡುತ್ತಾರೆ.ದೇಶದ ಇತರೆ ಯಾವುದೇ ನಗರಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಘಟಕಗಳಿಲ್ಲ. ಹೀಗಾಗಿ ಅಲ್ಲಿ ಕೇವಲ ಧರ್ಮದರ್ಶಿ ಇದ್ದರೆ ಇಲ್ಲಿ ಮಹಾ ಧರ್ಮದರ್ಶಿ ಇದ್ದಾರೆ. ಈ ಗುರುತರ ಹುದ್ದೆಯಲ್ಲಿ ಕುಳಿತವರು ಸಮುದಾಯದ ಕಾವಲುಭಟರಂತೆ, ಅಗತ್ಯ ಬಿದ್ದಾಗ ಸೇನಾನಿಯಂತೆ, ತಾಯಿಗರುಳಿನ ಮಾತೃ ಮೂರ್ತಿಯಂತೆ, ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸುತ್ತಾರೆ.ಜನಾಂಗದ ಏಳಿಗೆ ಹಾಗೂ ಕಲ್ಯಾಣ, ಸಮಾಜ ಸೇವೆಯೇ ಈ ಘಟಕಗಳು ಹಾಗೂ ಮಹಾ ಪಂಚಾಯಿತಿಯ ಪರಮೋದ್ದೇಶವಾಗಿರುತ್ತದೆ. ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮೇಲೆತ್ತುವುದು, ಜಾಗೃತಿ ಮೂಡಿಸುವುದು, ಯುವಕರು ಅಡ್ಡದಾರಿ ಹಿಡಿಯದಂತೆ ಮಾರ್ಗದರ್ಶನ ಮಾಡುವ ಹೊಣೆಯನ್ನು ಈ ಹಿರಿಯರು ಹೊತ್ತಿರುತ್ತಾರೆ. ಸಮುದಾಯದೊಳಗಿನ ಯಾವುದೇ ಗಲಾಟೆ, ವಿವಾದಗಳಿಗೆ ಪ್ರಾಥಮಿಕ ಹಂತದಲ್ಲಿ ಎಸ್‌ಎಸ್‌ಕೆ ಸ್ಥಳೀಯ ಘಟಕಗಳಲ್ಲೇ ಪರಿಹಾರ ಒದಗಿಸುವ ಪದ್ಧತಿಯಿದೆ. ಕೈ ಮೀರಿದಾಗ ಕೇಂದ್ರ ಪಂಚಾಯಿತಿ ಸಂಘರ್ಷಗಳನ್ನು ಬಗೆಹರಿಸುತ್ತವೆ. ಯಾವುದೇ ಪ್ರಕರಣಗಳು ಪೊಲೀಸ್ ಠಾಣೆ, ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಅವಕಾಶವಿಲ್ಲ. ಹಿರಿಯರ ಮಾತಿಗೆ ಪ್ರತಿಯೊಬ್ಬರೂ ಗೌರವ ಕೊಟ್ಟು ನಡೆಯುತ್ತಾರೆ. ಇಂತಹ ಮಾದರಿ ವ್ಯವಸ್ಥೆ ಆಧುನಿಕ ಸಮಾಜದಲ್ಲಿ ಅಸ್ಥಿತ್ವದಲ್ಲಿರುವುದು ಅಚ್ಚರಿಯೇ ಸರಿ.

ಆಧುನಿಕತೆಯ ಭರಾಟೆಯಲ್ಲೂ ಉದಾತ್ತ ಸಂಸ್ಕೃತಿ, ಉನ್ನತ ಆದರ್ಶಗಳನ್ನು ಬಿಟ್ಟುಕೊಡದೆ ಪಾಲಿಸುತ್ತಾ ಸಮಾಜದ ಎಲ್ಲಾ ವರ್ಗ, ಸಮುದಾಯಗಳಿಗೆ ಮಾದರಿಯಂತಿರುವ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರ ಯಶೋಗಾಥೆ ಅಪರೂಪದ್ದಾಗಿದೆ. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳಿಗೆ ನಿಷೇಧ ಹೇರಿರುವ, ಯಾವುದೇ ವ್ಯಾಜ್ಯ, ವಿವಾದಗಳನ್ನು ತನ್ನದೇ ಪಂಚಕಮಿಟಿಗಳು, ಕೇಂದ್ರ ಪಂಚಾಯತ್‌ಗಳಲ್ಲಿ ಬಗೆಹರಿಸಿಕೊಳ್ಳುವ ಪದ್ಧತಿಯನ್ನು ಹೊಂದಿರುವ, ತನ್ನೊಳಗಿನ ಹಾಗೂ ಹೊರಗಿನ ದುರ್ಬಲರಿಗೆ ಆಸರೆಯಾಗುವ ಪರಂಪರೆಯನ್ನು ಅಳವಡಿಸಿಕೊಂಡಿರುವ ದೇಶದ ಏಕೈಕ ಸಮುದಾಯ ಇದಾಗಿದೆ.ಪರಸ್ಪರ ಕೈ ಜೋಡಿಸಿ ಮುನ್ನಡೆಯುವ ಮನಃಸತ್ವವನ್ನು ಹೊಂದಿರುವ ಗುಂಪುಗಳ ಮಹಾ ಸಮಾಜ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಕರ್ನಾಟಕದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯಕ್ಕೆ ಕೇಂದ್ರ ಸ್ಥಾನದಂತಿರುವುದು ಆವಳಿ ವಾಣಿಜ್ಯ ನಗರಗಳಾದ ಹುಬ್ಬಳ್ಳಿ-ಧಾರವಾಡ. ಎಸ್‌ಎಸ್‌ಕೆ ಸಮುದಾಯದ ಜನಸಂಖ್ಯೆ ಇಲ್ಲಿ ಎರಡು ಲಕ್ಷಕ್ಕೂ ಹೆಚ್ಚಿದೆ. ಹೀಗಾಗಿ ಆವಳಿ ನಗರಗಳನ್ನು ಈ ಸಮಾಜದ ಕರ್ಮಭೂಮಿ ಎಂದೇ ಕರೆಯಬಹುದು. ಉತ್ತರ ಕರ್ನಾಟಕದ ಹೃದಯ ಭಾಗದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ನಾಡಿನ ಪರಂಪರೆಗೆ ಎಸ್‌ಎಸ್‌ಕೆ ಸಮಾಜ ತನ್ನದೇ ಆದ ಕೊಡುಗೆಯನ್ನೂ ನೀಡಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಹೀಗಾಗಿ ತನ್ನ ಸಂಘಟನೆ, ತನ್ನೊಳಗಿನ ಅಂತಃಸ್ಸತ್ವ, ಎಲ್ಲಾ ಸಮುದಾಯಗಳೊಂದಿಗೆ ಬೆರೆತು ಬಾಳುವ ಸಾತ್ವಿಕತೆಯಿಂದಲೇ ಎಸ್‌ಎಸ್‌ಕೆ ಸಮಾಜ ಇಂದು ಎಲ್ಲ ರಂಗದಲ್ಲಿ ವೇಗವಾಗಿ ಬೆಳೆಯುತ್ತಿದೆ.
ಮಾದರಿ ಘಟಕ ವ್ಯವಸ್ಥೆ-ಜನಾಂಗದೊಳಗಿಲ್ಲ ಸಂಘರ್ಷದ ಅವಸ್ಥೆ
ನೇಕಾರಿಕೆಯನ್ನೇ ಕುಲಕಸುಬು ಮಾಡಿಕೊಂಡ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ದೇಶಾದ್ಯಂತ ಹರಡಿಕೊಂಡಿದ್ದರೂ ಹುಬ್ಬಳ್ಳಿ ಮತ್ತು ಧಾರವಾಡವೇ ಸಮುದಾಯಕ್ಕೆ ತಾಯಿಬೇರಿನಂತಿದೆ. ಜನಾಂಗದ ಇಲ್ಲಿನ ಮಾದರಿಯನ್ನು ದೇಶದ ಅನೇಕ ನಗರಗಳಲ್ಲಿ ಎಸ್‌ಎಸ್‌ಕೆ ಸಮಾಜದವರು ಅನುಸರಿಸುತ್ತಿದ್ದಾರೆ. ಹುಬ್ಬಳ್ಳಿ ಮತ್ತು ಧಾರವಾಡದ ಎಸ್‌ಎಸ್‌ಕೆ ಸಮಾಜ ಘಟಕ ವ್ಯವಸ್ಥೆಯನ್ನು ಹೊಂದಿದೆ. 18 ಘಟಕಗಳು ಇಲ್ಲಿ ಕೆಲಸ ಮಾಡುತ್ತಿವೆ. ಪ್ರತಿ ಘಟಕದಿಂದ ಮೂರು ಜನರಂತೆ ಒಟ್ಟು 54 ಮಂದಿಯನ್ನು ಕೇಂದ್ರ ಪಂಚಾಯಿತಿಗೆ ಆಯ್ಕೆ ಮಾಡಲಾಗುತ್ತದೆ. ಈ ಸದಸ್ಯರು ಕೇಂದ್ರ ಪಂಚಾಯಿತಿಯ ಮಹಾ ಧರ್ಮದರ್ಶಿ ಸೇರಿದಂತೆ ಆಡಳಿತ ಮಂಡಳಿಯನ್ನು ಆಯ್ಕೆ ಮಾಡುತ್ತಾರೆ. ದೇಶದ ಇತರೆ ಯಾವುದೇ ನಗರಗಳಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಘಟಕಗಳಿಲ್ಲ. ಹೀಗಾಗಿ ಅಲ್ಲಿ ಕೇವಲ ಧರ್ಮದರ್ಶಿ ಇದ್ದರೆ ಇಲ್ಲಿ ಮಹಾ ಧರ್ಮದರ್ಶಿ ಇದ್ದಾರೆ. ಈ ಗುರುತರ ಹೊಣೆ ಹೊತ್ತವರು ಸಮುದಾಯದ ಕಾವಲುಭಟರಂತೆ, ಅಗತ್ಯ ಬಿದ್ದಾಗ ಸೇನಾನಿಯಂತೆ, ತಾಯಿಗರುಳಿನ ಮಾತೃ ಮೂರ್ತಿಯಂತೆ, ನ್ಯಾಯಾಧೀಶರಂತೆ ಕಾರ್ಯ ನಿರ್ವಹಿಸುತ್ತಾರೆ. ಜನಾಂಗದ ಏಳಿಗೆ ಹಾಗೂ ಕಲ್ಯಾಣ, ಸಮಾಜ ಸೇವೆಯೇ ಈ ಘಟಕಗಳು ಹಾಗೂ ಮಹಾ ಪಂಚಾಯಿತಿಯ ಪರಮೋದ್ದೇಶವಾಗಿರುತ್ತದೆ. ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮೇಲೆತ್ತುವುದು, ಜಾಗೃತಿ ಮೂಡಿಸುವುದು, ಯುವಕರು ಅಡ್ಡದಾರಿ ಹಿಡಿಯದಂತೆ ಮಾರ್ಗದರ್ಶನ ಮಾಡುವ ಹೊಣೆಯನ್ನು ಹಿರಿಯರು ಹೊತ್ತಿರುತ್ತಾರೆ. ಸಮುದಾಯದೊಳಗಿನ ಯಾವುದೇ ಗಲಾಟೆ, ವಿವಾದಗಳಿಗೆ ಪ್ರಾಥಮಿಕ ಹಂತದಲ್ಲಿ ಎಸ್‌ಎಸ್‌ಕೆ ಸ್ಥಳೀಯ ಘಟಕಗಳಲ್ಲೇ ಪರಿಹಾರ ಒದಗಿಸುವ ಪದ್ಧತಿಯಿದೆ. ಸಂಘರ್ಷದ ಹಂತ ಮುಟ್ಟಿದಾಗ ಕೇಂದ್ರ ಪಂಚಾಯಿತಿ ಅಂಗಳಕ್ಕೆ ವಿವಾದಗಳು ಬರುತ್ತವೆ. ಇಲ್ಲಿ 54 ಪಂಚರು, ಧರ್ಮದರ್ಶಿಗಳ ನೇತೃತ್ವದಲ್ಲಿ ಸಭೆ ಸೇರಿ ಆ ವಿವಾದದ ವಾದ ಪ್ರತಿವಾದಗಳನ್ನು ಆಲಿಸಿ ನ್ಯಾಯ ಇರುವ ಕಡೆ ತೀರ್ಪು ನೀಡುತ್ತಾರೆ. ಇದೊಂದು ರೀತಿ ನ್ಯಾಯಾಲಯದಂತೆ ಪ್ರಕರಣಗಳಿಗೆ ಸುಖಾಂತ್ಯ ನೀಡುತ್ತದೆ. ಅನ್ಯ ರಾಜ್ಯದವರ ನಡುವೆ ಗೊಡವೆಗಳು ನಡೆದಾಗ ಇದೇ ಕೇಂದ್ರ ಪಂಚಾಯಿತಿ ಆ ರಾಜ್ಯದ ಪಂಚಕಮಿಟಿಗಳನ್ನು ಸಂಪರ್ಕಿಸಿ ಮಾಹಿತಿ ನೀಡುತ್ತದೆ. ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸುತ್ತದೆ. ಆಸ್ತಿ, ಹಣಕಾಸು, ವೈಯಕ್ತಿಕ ದ್ವೇಷ, ವ್ಯವಹಾರಿಕ ಸಂಘರ್ಷಗಳಿಗೆ ಈ ಪದ್ಧತಿಯಂತೆ ಪರಿಹಾರ ಒದಗಿಸಲಾಗುತ್ತದೆ. ಸಮುದಾಯದೊಳಗಿನ ಯಾರೊಬ್ಬರು ತಮ್ಮದೇ ಜನಾಂಗದವರ ಮೇಲೆ ಪೊಲೀಸ್ ಠಾಣೆ, ನ್ಯಾಯಾಲಯದ ಮೆಟ್ಟಿಲು ಏರಲು ಆಸ್ಪದ ಇರುವುದಿಲ್ಲ.
ಅಂತೆಯೇ ಎಸ್‌ಎಸ್‌ಕೆ ಸಮಾಜದಲ್ಲಿ ವರದಕ್ಷಿಣೆ ಪಿಡುಗಿಗೆ ಕಠಿಣ ನಿರ್ಬಂಧ ಏರಲಾಗಿದೆ. ಪ್ರತಿ ಹೆಣ್ಣುಮಗು ಲಕ್ಷ್ಮಿಅಪರಾವತಾರ ಎಂದು ನಂಬಲಾಗುವುದರಿಂದ ಮದುವೆಯ ಸಂದರ್ಭದಲ್ಲಿ ಯಾವುದೇ ವರದಕ್ಷಿಣೆ, ವರೋಪಚಾರವನ್ನು ಗಂಡಿನ ಕಡೆಯವರು ಬಯಸುವಂತಿಲ್ಲ. ಹೆಣ್ಣಿನ ಕಡೆಯವರು ಕೊಡುವಂತಿಲ್ಲ. ಗಂಡಿನ ಮನೆಯವರೇ ಹೆಣ್ಣುಮಕ್ಕಳಿಗೆ ಎಲ್ಲಾ ಅಗತ್ಯ ವಸ್ತುಗಳು, ವಸ್ತ್ರಾಭರಣಗಳನ್ನು ನೀಡಿ ಮನೆ ತುಂಬಿಸಿಕೊಳ್ಳಬೇಕಾಗುತ್ತದೆ. ಮದುವೆ ಮಾಡಲು ಅಶಕ್ತರಾದವರಿಗೆ ಎರಡು ವರ್ಷಗಳಿಗೊಮ್ಮೆ ಮಂಗಳ ಕಾರ್ಯ ಸಮಿತಿಯಿಂದ ನಡೆಯುವ ಮದುವೆ ಕಾರ್ಯಕ್ರಮಗಳಲ್ಲಿ ಉಚಿತವಾಗಿ ವಿವಾಹ ಮಾಡಿಸಲಾಗುತ್ತದೆ. ಮುಂಜಿ ಮತ್ತಿತರ ಮಂಗಳ ಕಾರ್ಯಕ್ರಮಗಳನ್ನೂ ಸಾಮೂಹಿಕವಾಗಿ ಈ ಸಮಿತಿ ಮಾಡುತ್ತದೆ. ಎಸ್‌ಎಸ್‌ಕೆ ಸಮಾಜದ 50ಕ್ಕೂ ಹೆಚ್ಚು ಮಂದಿಗೆ ಶಾಸ್ತ್ರ ಸಂಪ್ರದಾಯದ ಪೌರೋಹಿತ್ಯ ಮಾಡುವ ತರಬೇತಿ ಕೊಡಿಸಲಾಗಿದ್ದು, ಇವರೇ ಸಮುದಾಯದ ಎಲ್ಲಾ ಶುಭ ಕಾರ್ಯಗಳನ್ನು ಪುರೋಹಿತರಂತೆ ಶಾಸ್ತ್ರೋಕ್ತವಾಗಿ ಮಾಡಿಕೊಡುತ್ತಾರೆ. ಕೇಂದ್ರ ಪಂಚಾಯಿತಿಯಿಂದ ಎಸ್‌ಎಸ್‌ಕೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಬಡವರಿಗೆ ಆರ್ಥಿಕ ನೆರವು, ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ಕೊಡಿಸಲಾಗುತ್ತದೆ. ಸಮಾಜದ ಶಿಕ್ಷಣ ಸಂಸ್ಥೆಗಳಲ್ಲಿ ದುರ್ಬಲ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ. ಪದವೀಧರರ ಅಸೋಸಿಯೇಷನ್ ವಿದ್ಯಾವಂತ ಯುವಕರ ನೆರವಿಗೆ ಸದಾ ನಿಲ್ಲುತ್ತದೆ.

ಹುಬ್ಬಳ್ಳಿ-ಧಾರವಾಡ ಎಸ್‌ಎಸ್‌ಕೆ ಸಮಾಜಕ್ಕೆ ಪ್ರಸ್ತುತ ನೀಲಕಂಠ ಪಿ. ಜಡಿ ಅವರು ಮುಖ್ಯ ಧರ್ಮದರ್ಶಿಗಳಾಗಿದ್ದು, ಐದು ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಅಖಿಲ ಭಾರತ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ (ಎಬಿಎಸ್‌ಎಸ್‌ಕೆ) ದ ಪ್ರಮುಖರಾದ ಶ್ರೀನಿವಾಸ್ ಕೋಟೆ, ಸ್ವಾಮಿನಾಥ್ ಸಾ ಕೋಡೆ, ನಾರಾಯಣ್ ಜರ್ತಾರ್‌ಕರ್, ಎಸ್‌ಎಸ್‌ಕೆ ಪ್ರಾಂತೀಯ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಅಶೋಕ್ ಕಾಟ್ವೆ ಅವರ ಸಹಕಾರ ಕ್ಷತ್ರಿಯ ಸಮುದಾಯದ ಇತರ ಸಂಘಟನೆಗಳ ಸಹಯೋಗದಲ್ಲಿ ಆವಳಿ ನಗರದ ಎಸ್‌ಎಸ್‌ಕೆ ಸಮಾಜದ ಆಡಳಿತ ಮುನ್ನಡೆಯುತ್ತದೆ.
ಹುಬ್ಬಳ್ಳಿಯ ಪಂಚಕಮಿಟಿಗಳ ಪೈಕಿ ಒಂದಾದ ಕಮರಿಪೇಟೆ ಎಸ್‌ಎಸ್‌ಕೆಯಲ್ಲಿ ಮೋತಿಲಾಲ್ ಸಾ ಕಾವಡೆ, ವಿಠ್ಠಲ್ ಪಿ. ಲದವಾ, ಮೋಹನ್ ಸಾ ಎನ್. ಬದ್ದಿ, ಗಜಾನನ ಕಾಟ್ವೆ, ಕೃಷ್ಣತಾ ಎನ್. ಕಾಟಿಗರ ಸೇರಿದಂತೆ 11ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಾರೆ. ಇದೇ ರೀತಿ ಇತರೆಪಂಚಕಮಿಟಿಗಳು ಕಾರ್ಯನಿರ್ವಹಿಸುತ್ತವೆ. ಪ್ರಸ್ತುತ ಇರುವ 18 ಕಮಿಟಿಗಳನ್ನು ಹೆಚ್ಚಿಸಿ ಮತ್ತೆ ಐದು ಕಮಿಟಿಗಳನ್ನು ರಚಿಸುವ ಉದ್ದೇಶವಿರುವುದಾಗಿ ಮಹಾ ಧರ್ಮದರ್ಶಿ ನೀಲಕಂಠ ಪಿ.ಜಡಿ ಹೇಳುತ್ತಾರೆ.
ತುಳಜಾ ಭವಾನಿ ದೇವಸ್ಥಾನ ಸಮಿತಿಯಿಂದ ಶಿಕ್ಷಣ ಸಂಸ್ಥೆಗಳು ಮತ್ತು ಎರಡು ಕಲ್ಯಾಣಮಂಟಪಗಳನ್ನು ನಡೆಸುತ್ತದೆ. ಪಂಚಕಮಿಟಿಗಳ ಅಡಿಯಲ್ಲೂ ಕೆಲವು ಶಿಕ್ಷಣ ಸಂಸ್ಥೆಗಳು ಹಾಗೂ ಕಲ್ಯಾಣ ಮಂಟಪಗಳಿವೆ. ದ ಎಸ್‌ಎಸ್‌ಕೆ ಕೋ-ಆಪರೇಟಿವ್ ಬ್ಯಾಂಕ್ ಕೂಡಾ ಅಸ್ತಿತ್ವದಲ್ಲಿದ್ದು 5,500ಕ್ಕೂ ಹೆಚ್ಚು ಷೇರುದಾರರನ್ನು ಇದು ಹೊಂದಿದೆ.
ಸಮಾಜದ ಏಳಿಗೆಯೇ ಗುರಿ-ನೀಲಕಂಠ ಪಿ.ಜಡಿ

ಸಮಾಜದ ಏಳಿಗೆ ಹಾಗೂ ಎಲ್ಲಾ ಜನರ ಅಭಿವೃದ್ಧಿಗಾಗಿ ಎಸ್‌ಎಸ್‌ಕೆ ಸಮಾಜ ಪಂಚಸಮಿತಿ ವ್ಯವಸ್ಥೆ ಹಾಗೂ ಮಹಾಪಂಚಾಯಿತಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ಬಂದಿದೆ. ನಮ್ಮ ಹಿರಿಯರ ಸಂಪ್ರದಾಯ, ನಂಬಿಕೆಗಳೊಂದಿಗೆ ನಾವು ನಡೆಯುತ್ತಿದ್ದೇವೆ ಎಂದು ಹುಬ್ಬಳ್ಳಿ-ಧಾರವಾಡದ ಎಸ್‌ಎಸ್‌ಕೆ ಸಮಾಜದ ಮಹಾ ಧರ್ಮದರ್ಶಿ ನೀಲಕಂಠ ಪಿ.ಜಡಿ ಹೇಳುತ್ತಾರೆ. 16 ವರ್ಷಗಳಿಂದ ಸಮಾಜ ಸೇವೆಗೆ ಅರ್ಪಿಸಿಕೊಂಡು ವಿವಿಧ ಸಂಘ-ಸಂಸ್ಥೆ ಹಾಗೂ ಟ್ರಸ್ಟ್ಗಳಲ್ಲಿ ದುಡಿದಿರುವ ಅವರು ತಮ್ಮ ಕಾಳಜಿಯನ್ನು ತಮ್ಮ ಮಾತುಗಳಲ್ಲಿ ವ್ಯಕ್ತಪಡಿಸಿದರು.
ಮಹಾಪಂಚಾಯಿತಿಯಡಿ ತುಳಜಾ ಭವಾನಿ ದೇವಸ್ಥಾನದ ನಿರ್ವಹಣೆ ನಡೆಯುತ್ತದೆ. ಇದೇ ರೀತಿ ಪ್ರತಿ ಘಟಕಗಳು ಒಂದೊಂದು ದೇವಸ್ಥಾನವನ್ನು ಹೊಂದಿರುತ್ತವೆ. ಆಯಾ ಘಟಕಗಳು ವಿವಿಧ ಸಮಿತಿಗಳನ್ನು ಮಾಡಿಕೊಂಡಿರುತ್ತವೆ. ಅಂತಹ 18 ಸಮಿತಿಗಳಿಂದ ಆಯ್ಕೆಯಾಗಿ ಬರುವ ಮೂರು ಮಂದಿ ಕೇಂದ್ರ ಪಂಚಾಯಿತಿಯಲ್ಲಿದ್ದು ಸಮುದಾಯದ ಕಲ್ಯಾಣಕ್ಕೆ ದುಡಿಯುತ್ತಾರೆ ಎಂದು ಅವರು ವಿವರಿಸುತ್ತಾರೆ. ಎಸ್‌ಎಸ್‌ಕೆ ಸಮಾಜಕ್ಕೆ ಹಿಂದೆ ಶಿಕ್ಷಣದ ಮಹತ್ವದ ಬಗ್ಗೆ ಅರಿವಿರಲಿಲ್ಲ. ಇಂದು ಜಾಗೃತಿ ಮೂಡಿದೆ. ನಮ್ಮವರೂ ಉನ್ನತ ಶಿಕ್ಷಣ ಪಡೆದು ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ್ದಾರೆ. ಉದ್ಯಮ ರಂಗದಲ್ಲೂ ಹೆಸರು ಮಾಡಿದ್ದಾರೆ. ಇನ್ನೂ ಶೇ. 60ರಷ್ಟು ಮಂದಿ ಬಡವರಿರುವುದು ನಿಜ. ಅವರ ಏಳಿಗೆಗೆ ನಾವೆಲ್ಲರೂ ಶ್ರಮಿಸುತ್ತಿದ್ದೇವೆ. 1960ರಲ್ಲಿ ಸ್ಥಾಪನೆಯಾದ ಇಲ್ಲಿನ ಎಸ್‌ಎಸ್‌ಕೆ ಸಮಾಜಕ್ಕೆ ತನ್ನದೇ ಆದ ಇತಿಹಾಸವಿದೆ ಎಂದು ಜಡಿ ಹೇಳುತ್ತಾರೆ.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಧಾರವಾಡ ವಿಶ್ವವಿದ್ಯಾಲಯದಲ್ಲಿ ಸಹಸ್ರಾರ್ಜುನ ಅಧ್ಯಯನ ಪೀಠ ರಚನೆಗೆ ಕ್ರಮ ಕೈಗೊಂಡಿದ್ದರು. ಐದು ಕೋಟಿ ಹಣ ಮೀಸಲಿಟ್ಟು, ಒಂದು ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರು. ಮುಂದೆ ಇಂಜಿನಿಯರಿಂಗ್ ಕಾಲೇಜು ಮತ್ತು ಹೈಟೆಕ್ ಆಸ್ಪತ್ರೆ ಸ್ಥಾಪಿಸುವ ಉದ್ದೇಶವನ್ನು ನಾವು ಹೊಂದಿದ್ದು ಇದಕ್ಕಾಗಿ ಸರ್ಕಾರ ಒಂದು ಎಕರೆ ಜಮೀನು ನೀಡುವುದಾಗಿ ಭರವಸೆ ನೀಡಿದೆ. ದಕ್ಷಿಣ ಭಾರತದಲ್ಲೇ ಅತಿ ದೊಡ್ಡ, ಭವ್ಯವಾದ ಸಹಸ್ರಾರ್ಜುನ ದೇವಾಲಯವನ್ನು ನಿರ್ಮಿಸುವ ಕಾರ್ಯ ಯೋಜನೆಯೂ ಇದೆ. ಎಸ್‌ಎಸ್‌ಕೆ ನಿಗಮ ಸ್ಥಾಪಿಸಿ 500 ಕೋಟಿ ರೂ. ಅನುದಾನ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ತಕ್ಕ ಮಟ್ಟಿಗೆ ನಮ್ಮನ್ನು ರಾಜಕೀಯವಾಗಿ ಗುರುತಿಸಲಾಗಿದೆ. ಆದರೆ ರಾಜ್ಯದ ಇತರೆಡೆಯೂ ಆದ್ಯತೆ ಸಿಗಬೇಕಿದೆ. ಒಂದು ಪರಿಷತ್ ಸ್ಥಾನ ನಮ್ಮ ಸಮುದಾಯವರಿಗೆ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಜಡಿ ಹೇಳಿದರು.

ಹುಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯೇ ಹೆಚ್ಚಾಗಿದೆ. ಹಿಂದೆ ನಮ್ಮವರೇ ಆದ ಅಶೋಕ್ ಕಾಟ್ವೆ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಗಿದ್ದರಿಂದ ಬಹುಸಂಖ್ಯಾತ ಸಮುದಾಯಕ್ಕೆ ಅವಕಾಶ ಕೈತಪ್ಪಿತು. ಹೀಗಾಗಿ ರಾಜಕೀಯ ಪ್ರಾತಿನಿಧ್ಯ ದೊರೆಯದಿದ್ದರೆ ಕ್ಷತ್ರಿಯ ಸಂಘಟನೆಗಳ ನೇತೃತ್ವದಲ್ಲಿ ಹೋರಾಡಲು ಸಿದ್ಧ ಎಂದರು.
ಎಸ್‌ಎಸ್‌ಕೆ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಸಂಭ್ರಮ

ಸ್ವಾತಂತ್ರ್ಯಪೂರ್ವ 1921ರಲ್ಲಿ ಸ್ಥಾಪನೆಯಾದ ದ ಎಸ್‌ಎಸ್‌ಕೆ ಕೋ-ಆಪರೇಟಿವ್ ಬ್ಯಾಂಕ್ ಲಿ. ಈ ವರ್ಷಾಂತ್ಯಕ್ಕೆ ನೂರು ವರ್ಷಗಳನ್ನು ಪೂರೈಸಲಿದ್ದು ಶತಮಾನೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ವಿಠ್ಠಲ್ ಪಿ. ಲದವಾ ಹೇಳುತ್ತಾರೆ.
ಬ್ಯಾಂಕ್ ಅನೇಕ ಸವಾಲುಗಳನ್ನು ದಾಟಿ ಒಂದು ಶತಮಾನ ಪೂರೈಸಿದೆ. 2002 ರಿಂದ 12ರವರೆಗೆ ಕೆಲ ಕಾರಣದಿಂದ ಬ್ಯಾಂಕ್ ಬಂದ್ ಆಗಿತ್ತು. ಮತ್ತೆ ನಾವು ಪುನಃಶ್ಚೇತನ ಮಂಡಳಿ ರಚಿಸಿಕೊಂಡು ಮರುಜೀವ ನೀಡಿದೆವು. ಪ್ರಸ್ತುತ ಬ್ಯಾಂಕಿನ ಠೇವಣಿ 41 ಕೋಟಿ ರೂ.ಗೂ ಹೆಚ್ಚಿದೆ. ಪ್ರಾಮಾಣಿಕ ಆಡಳಿತ ಮಂಡಳಿ ಎಸ್‌ಎಸ್‌ಕೆ ಸಮಾಜದ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದರು.
ಬ್ಯಾಂಕಿನಿಂದ ಷೇರುದಾರರು ಸೇರಿದಂತೆ ಅಗತ್ಯ ದಾಖಲೆ ಹಾಗೂ ಭದ್ರತೆ ವಹಿಸುವ ಎಲ್ಲರಿಗೂ ಸಾಲದ ನೆರವು ನೀಡುತ್ತೇವೆ. ಬ್ಯಾಂಕಿನ ವ್ಯವಹಾರದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತೇವೆ. ನನ್ನ ನೇತೃತ್ವದಲ್ಲಿ ಸಹಕಾರಿ ಯಶಸ್ವಿಯಾಗಿ ನಡೆಯುತ್ತಿರುವುದು ಸಂತಸ ತಂದಿದೆ ಅವರು ಹರ್ಷ ವ್ಯಕ್ತಪಡಿಸುತ್ತಾರೆ.
ಯಾರು ಈ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರು?

ಸಾವಾಜಿ, ಪಟೇಗಾರ್ ಅಥವಾ ಪಾಟೇಗಾರ್, ಪಾಟ್ಕರ್, ಖಾತ್ರಿಗಳು ಎಂದು ಕರೆಯಲಾಗುವ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಧ್ಯ ಪ್ರದೇಶದ ಮಾಂಡವಘಡ ಇವರ ಮೂಲಸ್ಥಾನ. ಅಲ್ಲಿಂದ ದಕ್ಷಿಣಕ್ಕೆ ವಲಸೆ ಬಂದು ಇಲ್ಲಿ ನೆಲೆಸಿರುವ ಎಸ್‌ಎಸ್‌ಕೆ ಸಮಾಜದವರು ಕರ್ನಾಟಕ, ರಾಜಸ್ತಾನ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟçದ ಗಡಿ ಜಿಲ್ಲೆಗಳಲ್ಲಿ ಕೇಂದ್ರೀಕೃತವಾಗಿದ್ದಾರೆ.
ಕರ್ನಾಟಕದಲ್ಲಿ ಹುಬ್ಬಳ್ಳಿ, ಧಾರವಾಡ, ಗದಗ, ಗಜೇಂದ್ರಗಡ, ಗಂಗಾವತಿ, ಹರಿಹರ, ಬೆಳಗಾವಿ, ಗುಲ್ಬರ್ಗಾ ಮತ್ತು ಬೆಂಗಳೂರಿನಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಈ ಸಮುದಾಯದ ಪುರುಷರು ತಮ್ಮ ಹೆಸರುಗಳಿಗೆ `ಸಾ’ ಎನ್ನುವ ಗೌರವಪೂರ್ವಕ ಪದವನ್ನು ಸೇರಿಸುತ್ತಾರೆ. ಉದಾಹರಣೆ ಭಾವನ್ ಸಾ, ನಾರಾಯಣ್ ಸಾ. ಹೆಣ್ಣುಮಕ್ಕಳು ತಮ್ಮ ಹೆಸರುಗಳಿಗೆ ಸಕ್ಕೂಬಾಯಿ, ಅನಂತಬಾಯಿ ಹೀಗೆ ಬಾಯಿಯನ್ನು ಸೇರಿಸಿಕೊಳ್ಳುತ್ತಾರೆ. ಭವಾನಿ ದೇವಿಯನ್ನು ಕುಟುಂಬ ದೇವತೆಯಾಗಿ ಪೂಜಿಸುತ್ತಾರೆ.
ಪ್ರತಿ ಮನೆಯಲ್ಲೂ ದಸರಾ ಪ್ರಮುಖ ಹಬ್ಬವಾಗಿದೆ. ನವರಾತ್ರಿ ಸಮಯದಲ್ಲಿ ಪ್ರತಿ ದಿನ ಅಪಾರ ಶ್ರದ್ಧಾಭಕ್ತಿಯಿಂದ ಪೂಜೆ, ಆರತಿಯನ್ನು ಮಾಡುತ್ತಾರೆ. ಕುಟುಂಬದ ಹಿರಿಯರು ಒಂಬತ್ತು ದಿನವೂ ಪವಿತ್ರ ಉಪವಾಸ ಕೈಗೊಂಡು ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ. ಭವಾನಿ ದೇವಿಗೆ ಲಾಲ್‌ಪಾನಿ ಎಂಬ ವಿಶೇಷ ಭಕ್ಷ್ಯವನ್ನು ಎಡೆಯಾಗಿ ಇಡುತ್ತಾರೆ. ಶ್ರಾವಣ ಮಾಸದಲ್ಲಿ ಪ್ರತಿ ಕಾರ್ತೀಕ ಮಾಸದ ಸಪ್ತಮಿ ತಿಥಿಯಂದು ಸಹಸ್ರಾರ್ಜುನರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ಎಸ್‌ಎಸ್‌ಕೆ ಸಮುದಾಯದ ಇತಿಹಾಸ
ಸೋಮವಂಶ ಕ್ಷತ್ರಿಯರು ಭಾರತದ ಮೂರು ಮುಖ್ಯ ಕ್ಷತ್ರಿಯ ವಂಶಗಳ ಸಾಮಾಜಿಕ ವರ್ಗಗಳಲ್ಲಿ ಒಬ್ಬರು. ಇವರನ್ನು ಸೋಮ (ಚಂದ್ರ) ನ ನೇರ ವಂಶಸ್ಥರು ಎನ್ನಲಾಗುತ್ತದೆ. ಹೆಸರೇ ಸೂಚಿಸುವಂತೆ ಈ ಸಮುದಾಯವು ಚಂದ್ರ ರಾಜವಂಶಕ್ಕೆ ಸೇರಿದೆ. `ಸೋಮವಂಶ’ ಕ್ಷತ್ರಿಯ ಎಂಬ ಪದವು ಹಿಂದು ವರ್ಣವ್ಯವಸ್ಥೆಯ ಕ್ರಮಾನುಗತದಲ್ಲಿ ಎರಡನೇ ಜಾತಿ ಎಂದರ್ಥ. ಯೋಧರ ಚಂದ್ರ ರಾಜ ವಂಶಕ್ಕೆ ಇವರು ಸೇರಿದವರು ಎಂಬ ಪ್ರತೀತಿಯಿದೆ.
ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌ಎಸ್‌ಕೆ) ಸಮುದಾಯದ ಹೆಸರಿನಲ್ಲಿರುವ ಸಹಸ್ರಾರ್ಜುನ ಎಂಬ ಹೆಸರು ಸಾವಿರ ಕೈಗಳನ್ನು ಹೊಂದಿದ್ದ ಪುರಾಣ ಪುರುಷ, ಈಗಿನ ಮಧ್ಯ ಪ್ರದೇಶದ ಮಹೇಶ್ವರ ಎನ್ನಲಾಗುವ ಮಹಿಷ್ಮತಿ ಸಾಮ್ರಾಜ್ಯವನ್ನು ಆಳಿದ ಚಕ್ರವರ್ತಿ ಕಾರ್ತವೀರ್ಯಾರ್ಜುನನ್ನು ಸೂಚಿಸುತ್ತದೆ. ಸಹಸ್ರ ಬಾಹುಗಳನ್ನು ಹೊಂದಿದ್ದ ಈತ ಕ್ಷತ್ರಿಯ ಯೋಧರಾಗಿದ್ದರು. ವಿಷ್ಣುವಿನ ಚಕ್ರದ ಅವತಾರವಾಗಿ ಜನಿಸಿ ಭೂಮಿಯಲ್ಲಿನ ಅಧರ್ಮ, ದುಷ್ಟತನವನ್ನು ನಿಗ್ರಹಿಸಿ ಶಾಂತಿ ಸ್ಥಾಪನೆಗೆ ಜನ್ಮವೆತ್ತಿದ್ದರು. ದತ್ತಾತ್ರೇಯರು ಆತನ ಆಳವಾದ ಭಕ್ತಿಗೆ ಮೆಚ್ಚಿ ಧರ್ಮ, ಮನುಕುಲದ ಉತ್ಥಾನಕ್ಕಾಗಿ ಅರ್ಜುನನಿಗೆ ಸಹಸ್ರ ಕೈಗಳನ್ನು ನೀಡಿದ್ದರು. ಸಹಸ್ರಾರ್ಜುನನ ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆ ಕತೆಗಳನ್ನು ಪುರಾಣಗಳಲ್ಲಿ ಚಿತ್ರಿಸಲಾಗಿದೆ. ಈ ಮೂಲಪುರುಷನ ವಂಶಸ್ಥರಾದ ಸೋಮವಂಶದವರು ಅದೇ ಹಾದಿಯಲ್ಲಿ ಕ್ಷಾತ್ರ ಗುಣಗಳೊಂದಿಗೆ ನಡೆದು ಬಂದ ಇತಿಹಾಸವನ್ನು ಅನೇಕ ಗ್ರಂಥಗಳಲ್ಲಿ ಕಟ್ಟಿಕೊಡಲಾಗಿದೆ. ಈಗಿನ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯರೂ ಸಮಾಜದ ಕಲ್ಯಾಣಕ್ಕಾಗಿ, ಧರ್ಮದ ಹಾದಿಯಲ್ಲೇ ನಡೆಯುತ್ತಾ ಭಾರತದ ಹತ್ತಾರು ರಾಜ್ಯಗಳಲ್ಲಿ ನೆಲೆಸಿದ್ದಾರೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟçದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಲತಃ ನೇಕಾರ ಕಸುಬಿನ ಈ ಸಮುದಾಯ ಸಾವಿರಾರು ವರ್ಷಗಳಿಂದ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಈಗ ವಿವಿಧ ಕಸುಬು, ವ್ಯಾಪಾರ, ವ್ಯವಹಾರಗಳನ್ನು ರೂಢಿಸಿಕೊಂಡು ಬದುಕುತ್ತಿದೆ.