-ಶೌರ್ಯ ಡೆಸ್ಕ್
ದೀಪಾವಳಿ ಹಬ್ಬದ ನಡುವೆಯೇ ಅಕ್ಟೋಬರ್ 25 ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಇದಾಗಿದ್ದು ಈ ಗ್ರಹಣ ಅತ್ಯುಗ್ರ, ಕಟುವಾದದ್ದು, ಅಪಾಯಕಾರಿ ಎಂದೆಲ್ಲ ಹೇಳಲಾಗುತ್ತಿದೆ. ಇದು ನಿಜವೇ, ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು ತಿಳಿಯೋಣ ಬನ್ನಿ..

ಚಂದ್ರನು ಸೂರ್ಯ ಮತ್ತು ಭೂಮಿಯ ನಡುವಿನಲ್ಲಿ ಬರುವ, ಇರುವ ಕಾಲವನ್ನು ಸೂರ್ಯಗ್ರಹಣ ಎಂದು ಕರೆಯುತ್ತೇವೆ. ಒಂದು ಆಕಾಶಕಾಯದ ನೆರಳಿನಿಂದಾಗಿ ಮತ್ತೊಂದು ಆಕಾಶಕಾಯ ಮರೆಯಾಗುವುದು ಅಥವಾ ಮಸುಕಾಗುವುದೇ ಗ್ರಹಣ. ಭೂಮಿಯ ಮೇಲೆ ಚಂದ್ರನ ನೆರಳು ಬೀಳುವಾಗ ಸೂರ್ಯಗ್ರಹಣವಾಗುತ್ತದೆ; ಭೂಮಿಯ ನೆರಳು ಚಂದ್ರನ ಮೇಲೆ ಬೀಳುವಾಗ ಚಂದ್ರಗ್ರಹಣವಾಗುತ್ತದೆ. ಈ ಎರಡೂ ಸಂದರ್ಭಗಳಲ್ಲಿ ನೆರಳು ಬೀಳಲು ಸೂರ್ಯನ ಬೆಳಕೇ ಕಾರಣ. ಬೆಳಕಿಲ್ಲದಿದ್ದರೆ ನೆರಳು ಹೇಗಾದೀತು? ಗ್ರಹಣಕ್ಕೆ ಕಾರಣವಾದ ನೆರಳಿನ ಬಗ್ಗೆ ಪ್ರಾಚೀನ ಗ್ರೀಕರಿಗೂ ತಿಳಿದಿತ್ತು, ಭಾರತೀಯರಿಗೂ ತಿಳಿದಿತ್ತು.
ಆದರೆ ಕಾಲಾಂತರದಲ್ಲಿ ಬೇರೆ ನಂಬಿಕೆಗಳೂ ಬೇರು ಬಿಟ್ಟಿದ್ದುವು. ಸೂರ್ಯಗ್ರಹಣದ ಬಗ್ಗೆ ಅನೇಕರಿಗೆ ಇದ್ದ ಅಜ್ಞಾತ ಭಯವೇ ಈ ನಂಬಿಕೆಗಳನ್ನು ಹುಟ್ಟುಹಾಕಿರಬಹುದು. ಗ್ರಹಣವನ್ನು ನೋಡುವುದರಿಂದ ಬರಬಹುದಾದ ಅಪಾಯವೇ ಇಂಥ ಭಯಕ್ಕೆ ಕಾರಣವಾಗಿರಬಹುದು. ಆದರೆ ಗ್ರಹಣ ಕಾಲದಲ್ಲಿ ನಡೆಯುವ ನೆರಳು – ಬೆಳಕುಗಳ ಆಟವನ್ನು ಸಾಕಷ್ಟು ಮುಂಜಾಗರೂಕತೆ ವಹಿಸಿ ನೋಡಿದರೆ ಅದೊಂದು ಅನನ್ಯ ಅನುಭವವಾದೀತು.
ಪೂರ್ಣ ಸೂರ್ಯಗ್ರಹಣ
ನೋಡುವವರನ್ನು ಅತೀವ ಬೆರಗುಗೊಳಿಸುವ ಒಂದು ಖಗೋಲ ವಿದ್ಯಮಾನ – ಪೂರ್ಣ ಸೂರ್ಯಗ್ರಹಣ. ಇದನ್ನೇ ಖಗ್ರಾಸ ಸೂರ್ಯಗ್ರಹಣ ಎಂದೂ ಕರೆಯುವರು.

21ನೇ ಶತಮಾನದಲ್ಲಿ ಒಂದೆಡೆ ಅತಿ ಹೆಚ್ಚು ಅವಧಿಯ ಪೂರ್ಣ ಸೂರ್ಯಗ್ರಹಣ 2006ರ ಜುಲೈ 22 ರಂದು ನಡೆದಿತ್ತು. ಅಷ್ಟು ಅವಧಿಯ ಪೂರ್ಣ ಸೂರ್ಯಗ್ರಹಣ 21ನೇ ಶತಮಾನದಲ್ಲಿ ಬೇರೆ ಇಲ್ಲ. ಭಾರತದಲ್ಲಿ ಮುಂದಿನ ಪೂರ್ಣ ಸೂರ್ಯಗ್ರಹಣ ಕಾಣಿಸುವುದು 2034 ಮಾರ್ಚ್ 20 ರಂದು.
ಪ್ರತಿ ಅಮಾವಾಸ್ಯೆಯ ದಿನ ಚಂದ್ರನು ಭೂಮಿ ಮತ್ತು ಸೂರ್ಯನ ಮಧ್ಯೆ ಹಾದು ಹೋಗುವಾಗ, ಈ ಮೂರು ಆಕಾಶಕಾಯಗಳು ಒಂದು ಸರಳರೇಖೆಯಲ್ಲಿರುವುದಿಲ್ಲ. ಚಂದ್ರನ ಭೂಮಿಯ ಸುತ್ತ ಸುತ್ತುವ ಚಲನೆಯ ಸಮತಲ ಹಾಗೂ ಸೂರ್ಯನ ಸಮತಲ (ಭೂಮಿಯ ದೃಷ್ಟಿಯಿಂದ)ಗಳ ನಡುವಿನಲ್ಲಿ 5 ಡಿಗ್ರಿಗಳ ಅಂತರವಿರುವುದರಿಂದ ಪ್ರತಿ ಅಮಾವಾಸ್ಯೆಗೆ ಗ್ರಹಣ ಸಂಭಸುವುದಿಲ್ಲ. ಚಂದ್ರನು ರಾಹು ಅಥವಾ ಕೇತು ಬಿಂದುವಿನಲ್ಲಿ ಬಂದಾಗ ಮಾತ್ರ ಸೂರ್ಯಗ್ರಹಣ ಸಂಭವಿಸುತ್ತದೆ.
ಚಂದ್ರನು ಸೂರ್ಯನಿಗೆ ಅಡ್ಡ ಬಂದು, ಸೂರ್ಯನ ಒಂದು ಭಾಗವು ಮಾತ್ರ ಗೋಚರಿಸಿದರೆ, ಅದು ಪಾರ್ಶ್ವ ಸೂರ್ಯಗ್ರಹಣ ಆಗಿರುತ್ತದೆ. ಅದೇ ರೀತಿ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸಿದರೆ ಅದು ಖಗ್ರಾಸ ಸೂರ್ಯಗ್ರಹಣ. ಅಕ್ಟೋಬರ್ 25ರ ಸೂರ್ಯಗ್ರಹಣವು ಗೋಚರಿಸುವ ಎಲ್ಲ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣವಾಗಿರುತ್ತದೆ.
ಸಾಮಾನ್ಯವಾಗಿ ಪ್ರತಿ ಸೂರ್ಯಗ್ರಹಣದ ಮೊದಲು ಅಥವಾ ನಂತರ ಬರುವ ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸುತ್ತದೆ. ಈ ಬಾರಿ ಕೂಡ ನವೆಂಬರ್ 8ರಂದು ಚಂದ್ರಗ್ರಹಣವನ್ನು (ಚಂದ್ರ ಮತ್ತು ಸೂರ್ಯನ ಮಧ್ಯೆ ಭೂಮಿ ಬರುವ ಸಂದರ್ಭ) ನೋಡಬಹುದು.
ಖಗ್ರಾಸ ಸೂರ್ಯಗ್ರಹಣ ಯಾವ ಪ್ರದೇಶಗಳಲ್ಲಿ ಗೋಚರ?
ಅಕ್ಟೋಬರ್ 25 ರ ಗ್ರಹಣವು ಭಾರತದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಯೂರೋಪ್, ಆಫ್ರಿಕಾ ಮತ್ತು ಏಷ್ಯಾದ ಮಧ್ಯಭಾಗದ ವಿವಿಧ ದೇಶಗಳಲ್ಲಿ ಗೋಚರಿಸುತ್ತದೆ. ರಷ್ಯಾದಲ್ಲಿ ಈ ಗ್ರಹಣವು ಗೋಚರಿಸುವಾಗ ಚಂದ್ರನು ಸೂರ್ಯನನ್ನು ಗರಿಷ್ಠ ಅಂದರೆ ಶೇ.82ರಷ್ಟನ್ನು ಆವರಿಸಿಕೊಂಡಿರುತ್ತಾನೆ. ಭಾರತದಲ್ಲಿ ಈ ಗ್ರಹಣವು ಉತ್ತರದ ಲೇಹ್ ನಲ್ಲಿ ಶೇ.54ರಷ್ಟು ಹಾಗೂ ದೆಹಲಿಯಲ್ಲಿ ಶೇ.44ರಷ್ಟು ಸೂರ್ಯನನ್ನು ಆವರಿಸಿರುವುದು ಕಂಡು ಬರುತ್ತದೆ. ಉಳಿದಂತೆ ಕೋಲ್ಕತ್ತಾ, ಉಜ್ಜಯಿನಿ, ವಾರಣಾಸಿ, ಮಥುರಾದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಚೆನ್ನೈ ನಲ್ಲೂ ಕಾಣುತ್ತದೆ.

ಸೂರ್ಯಗ್ರಹಣ ಸಮಯ
ದೆಹಲಿಯಲ್ಲಿ ಸೂರ್ಯಗ್ರಹಣವು ಭಾರತೀಯ ಕಾಲಮಾನ ಸಂಜೆ 4:29ಕ್ಕೆ ಪ್ರಾರಂಭವಾಗುತ್ತದೆ. ಮುಂಬೈನಲ್ಲಿ 4:49, ಚೆನ್ನೈ ನಲ್ಲಿ 5:14 ಕ್ಕೆ ಪ್ರಾರಂಭವಾಗುತ್ತದೆ. ದೆಹಲಿಯಲ್ಲಿ 1 ಗಂಟೆ 13 ನಿಮಿಷ ಗ್ರಹಣ ದರ್ಶನವಾದರೆ ಮುಂಬೈನಲ್ಲಿ 1 ಗಂಟೆ 19 ನಿಮಿಷ, ಚೆನ್ನೈ ನಲ್ಲಿ 31 ನಿಮಿಷ 12 ಸೆಕೆಂಡ್ ಕಾಣುತ್ತದೆ.
ಕರ್ನಾಟಕದ ಎಲ್ಲ ಭಾಗಗಳಿಂದ ಗ್ರಹಣವನ್ನು ನೋಡಬಹದಾಗಿದ್ದು ರಾಜ್ಯದ ನಾನಾ ಸ್ಥಳಗಳಲ್ಲಿ ಈ ಗ್ರಹಣವು ಸಂಜೆ 5 ರಿಂದ 6 ಗಂಟೆಗೆ ನಡೆಯಲಿರುವ ಸೂರ್ಯಾಸ್ತದವರೆಗೂ ಗೋಚರಿಸುತ್ತದೆ. ಪಶ್ಚಿಮ ಮತ್ತು ನೈಋತ್ಯದ ಕಡೆ ಕ್ಷಿತಿಜವು ಗ್ರಹಣ ವೀಕ್ಷಿಸಲು ಉತ್ತಮ ಸ್ಥಳವಾಗಿರುತ್ತದೆ. ಸಮುದ್ರ ತೀರದಲ್ಲಿ ಗ್ರಹಣ ಬಹಳ ಚೆನ್ನಾಗಿ ಕಾಣುತ್ತದೆ.
ಬೆಂಗಳೂರಿನಲ್ಲಿ ಈ ಗ್ರಹಣ ಶೇ.10ರಷ್ಟು ಮಾತ್ರ ಕಂಡುಬರುತ್ತದೆ. ಸುಂದರ ಪ್ರಾಕೃತಿಕ ದೃಶ್ಯದೊಂದಿಗೆ ಕಡಲ ತೀರಕ್ಕೆ ಸಮೀಪವಿರುವ ಉಡುಪಿಯು ಈ ಗ್ರಹಣ ವೀಕ್ಷಿಸಲು ಉತ್ತಮ ಪ್ರದೇಶ. ಉಡುಪಿಯಲ್ಲಿ ಈ ಗ್ರಹಣವು ಸಂಜೆ 5.08ಕ್ಕೆ ಪ್ರಾರಂಭಗೊಂಡು 5:50ರ ಸುಮಾರಿಗೆ ಗರಿಷ್ಠ ಪ್ರಮಾಣದಲ್ಲಿ ಗೋಚರಿಸುತ್ತದೆ.
ಗ್ರಹಣವನ್ನು ಬರಿಗಣ್ಣಿನಲ್ಲಿ ನೋಡಬೇಡಿ… ಎಚ್ಚರಿಕೆ!

ಗ್ರಹಣ ಅಪಾಯಕಾರಿ ಎಂಬ ಮಾತು ಅವೈಜ್ಞಾನಿಕ. ಆದರೆ ಯಾರೂ ಸಹ ಯಾವುದೇ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಬಾರದು. ಟೆಲಿಸ್ಕೋಪ್, ದುರ್ಬೀನ್, ಕ್ಯಾಮೆರಾಗಳಿಂದ ಕೂಡ ಸೂರ್ಯಗ್ರಹಣವನ್ನು ನೋಡುವುದು ಹಾನಿಕಾರಕ. ಸೂರ್ಯಗ್ರಹಣವನ್ನು ಯಾವಾಗಲೂ ವಿಶೇಷವಾದ ಗ್ರಹಣ ವೀಕ್ಷಣಾ ಕನ್ನಡಕಗಳಿಂದ ಮಾತ್ರ ನೋಡಬೇಕು. ಪಿನ್-ಹೋಲ್ಗಳ ಮೂಲಕ ಸೂರ್ಯನ ಪ್ರಕ್ಷೇಪಣವನ್ನು ಯಾವುದೇ ಹಾನಿಯಿಲ್ಲದೆ ನೋಡಬಹುದು. ಎಕ್ಸ್-ರೇ ಹಾಳೆಗಳಿಂದ ಕೂಡ ಗ್ರಹಣವನ್ನು ನೋಡಬಾರದು.