-ಶೌರ್ಯ ಡೆಸ್ಕ್
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ಅವರಿಗೆ ವಂಚಿಸಿದ್ದಾರೆ. ಅವರು ಇನ್ನೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದು ತಿಳಿದ ನಂತರ ಸಾನಿಯಾ ಕ್ರುದ್ಧರಾಗಿದ್ದರು. ಇಬ್ಬರ ನಡುವೆ ಶರಂಪರ ಜಗಳಗಳು ನಡದು ಕೊನೆಗೆ ದಾಂಪತ್ಯದಲ್ಲಿ ಬಿರುಕು ಮೂಡಿದೆ.

ಖ್ಯಾತ ಟೆನ್ನಿಸ್ ಆಟಗಾರ್ತಿ, ದಶಕದ ಹಿಂದೆ ಒಂದು ಕಣ್ಣೋಟದಿಂದ ಅಭಿಮಾನಿಗಳ ಎದೆಬಡಿತ ಹೆಚ್ಚಿಸುತ್ತಿದ್ದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ದಾಂಪತ್ಯ ಸರಿಪಡಿಸಲಾಗದಷ್ಟು ಹಳಸಿಹೋಗಿದೆ. ಅವರಿಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ. ಇಬ್ಬರ ನಡುವೆ ಕೆಲ ದಿನಗಳಿಂದ ಎಲ್ಲವೂ ಸರಿಯಿಲ್ಲ ಎಂದು ಹೇಳಲಾಗಿದೆ.
ಈಗಾಗಲೇ ಇಬ್ಬರೂ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದಾರೆ. ಮತ್ತು ಮಗ ಇಜಾನ್‌ನನ್ನು ಒಬ್ಬೊಬ್ಬರು ಒಂದಷ್ಟು ದಿನ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ 2010ರಲ್ಲಿ ಮದುವೆಯಾಗಿದ್ದರು. ಎರಡು ದೇಶಗಳ ನಡುವೆ ದ್ವೇಷಗಳಿದ್ದರೂ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಈ ಪ್ರೇಮ ಇಬ್ಬರೂ ದೇಶಗಳ ಹಂಗು ಮೀರಿ ಮದುವೆಯಾಗುವಂತೆ ಮಾಡಿತ್ತು. ಹೈದರಬಾದ್ ನಲ್ಲಿ ನಡೆದ ಮದುವೆ ಜಗತ್ತಿನಾದ್ಯಂತ ಭಾರೀ ಸದ್ದು ಮಾಡಿತ್ತು.

ಹೆಂಡತಿಗೆ ವಂಚಿಸಿದ ಮಲಿಕ್ !
ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾ ಅವರಿಗೆ ವಂಚಿಸಿದ್ದಾರೆ. ಅವರು ಇನ್ನೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದು ತಿಳಿದ ನಂತರ ಸಾನಿಯಾ ಕ್ರುದ್ಧರಾಗಿದ್ದರು. ಇಬ್ಬರ ನಡುವೆ ಶರಂಪರ ಜಗಳಗಳು ನಡದು ಕೊನೆಗೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.

ಈ ಸುದ್ದಿಗಳ ಕುರಿತು ಇಬ್ಬರೂ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕಳೆದ ಶುಕ್ರವಾರ ಇನ್ಸ್‌ಟಾಗ್ರಾಂ ಪೋಸ್ಟ್‌ನಲ್ಲಿ ಸಾನಿಯಾ ಮಿರ್ಜಾ ಮಗ ಇಜಾನ್ ಜೊತೆಗಿನ ಫೋಟೊ ಹಾಕಿದ್ದಾರೆ. ಅದರ ಕ್ಯಾಪ್ಷನ್‌ನಲ್ಲಿ ಕಷ್ಟದ ದಿನಗಳಿಂದ ಆಚೆ ಬರಲು ಸಹಕರಿಸಿದ ಸಂದರ್ಭ ಎಂದು ಹೇಳಿಕೊಂಡಿದ್ದಾರೆ. ಮೊದಲೇ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವಿಚಾರ ಹಬ್ಬುತ್ತಿರುವ ಸಮಯದಲ್ಲೇ ಸಾನಿಯಾ ಮಿರ್ಜಾ ಕಷ್ಟದ ದಿನಗಳು ಎಂಬ ಪೋಸ್ಟ್ ಮಾಡಿರುವುದು ದಾಂಪತ್ಯದ ಕಲಹದತ್ತ ಬೊಟ್ಟು ಮಾಡಿದೆ.

ಇತ್ತೀಚೆಗೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮಗ ಇಜಾನ್‌ನ ನಾಲ್ಕನೇ ಹುಟ್ಟುಹಬ್ಬವನ್ನು ದುಬೈನಲ್ಲಿ ಆಚರಿಸಿದ್ದಾರೆ. ಆದರೆ ಇದರ ಫೋಟೊಗಳನ್ನು ಸಾನಿಯಾ ಮಿರ್ಜಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿಲ್ಲ. ಇದೂ ಕೂಡ ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿತ್ತು.

ಇತ್ತೀಚೆಗೆ ಪಾಕಿಸ್ತಾನಿ ಕ್ರಿಕೆಟ್ ಶೋ ಒಂದರಲ್ಲಿ ಸಾನಿಯಾ ಮಿರ್ಜಾ ಅವರ ಟೆನ್ನಿಸ್ ಅಕಾಡೆಮಿಗಳು ಮತ್ತು ಅವು ಎಲ್ಲೆಲ್ಲಿವೆ ಎಂಬ ಪ್ರಶ್ನೆಗೆ ಶೋಯೆಬ್ ಮಲಿಕ್ ನನಗೆ ಅದರ ಕುರಿತು ಯಾವುದೇ ಮಾಹಿತಿಯಿಲ್ಲ ಎಂದಿದ್ದರು. ನಾನು ಯಾವ ಅಕಾಡೆಮಿಗಳಿಗೂ ಇದುವರೆಗೂ ಹೋಗಿಲ್ಲ ಎಂದಿದ್ದರು. ಇದು ಕೂಡಾ ಅನುಮಾನಕ್ಕೆ ಕಾರಣವಾಗಿತ್ತು.

ಹೈದರಾಬಾದಿನ ತಾಜ್ ಕೃಷ್ಣ ಹೋಟೆಲ್‌ನಲ್ಲಿ 2010ರ ಏಪ್ರಿಲ್ 12 ರಂದು ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ ಮದುವೆಯಾಗಿತ್ತು. ಅದಾದ ನಂತರ ಪಾಕಿಸ್ತಾನದ ಆಚರಣೆಯಂತೆ ಸಿಯಾಲ್‌ಕೋಟ್‌ನಲ್ಲಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿತ್ತು. ಮದುವೆಯಲ್ಲಿ ದಂಪತಿ ಧರಿಸಿದ್ದ ಸುಮಾರು ಒಂದೂವರೆ ಲಕ್ಷ ಡಾಲರ್ ಪಾಕಿಸ್ತಾನಿ ಮದುವೆ ವಸ್ತ್ರಗಳು ಸೇರಿದಂತೆ ಅನೇಕ ವಿಚಾರಗಳು ಸುದ್ದಿಯಾಗಿದ್ದವು.

ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಮದುವೆ ಭಾರತ ಮತ್ತು ಪಾಕಿಸ್ತಾನದ ಅಭಿಮಾನಗಳಿಂದ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು. ಕೆಲವರು ಇದನ್ನು ಖಂಡಿಸಿದ್ದರೆ, ಕೆಲವರು ಪ್ರೀತಿಗೆ ದೇಶದ ಹಂಗಿಲ್ಲ ಎಂದಿದ್ದರು. ಆದರೆ ಈಗ ಇಬ್ಬರ ಮದುವೆ ವಿಚ್ಛೇದನದತ್ತ ಸಾಗಿದೆ.