-ಜಿ. ಅರುಣ್‌ಕುಮಾರ್
ಈ ವರ್ಷ, ಅಕ್ಟೋಬರ್ ಕೊನೆಯವರೆಗೂ 150 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ 10ಕ್ಕೂ ಹೆಚ್ಚು ಚಿತ್ರಗಳು ಜನರಿಗೆ ಇಷ್ಟವಾಗಿವೆ. ಮಿಶ್ರ ಪ್ರತಿಕ್ರಿಯೆ ಇದ್ದರೂ, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದ ಬಂದ ಹಣದಲ್ಲಿ ಅಲ್ಲಿಗಲ್ಲಿಗೆ ಸೇಫ್ ಆದ, ಒಂದಿಷ್ಟು ಲಾಭವನ್ನೂ ಮಾಡಿದ ಸಾಕಷ್ಟು ನಿರ್ಮಾಪಕರು ಇದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ, ಜನರಿಂದ ಮೆಚ್ಚುಗೆ ಪಡೆದಿದ್ದಷ್ಟೇ ಅಲ್ಲ, ಆ ಚಿತ್ರದ ನಿರ್ಮಾಪಕರು ಚೆನ್ನಾಗಿ ಲಾಭ ಮಾಡಿದ ಒಂದಿಷ್ಟು ಚಿತ್ರಗಳು ಈ ಪಟ್ಟಿಯಲ್ಲಿವೆ.

ಕಳೆದ ಎರಡು ವರ್ಷಗಳ ಕಾಲ ಕರೊನಾದಿಂದ ಕನ್ನಡ ಚಿತ್ರರಂಗ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿತ್ತು. ಒಂದು ಕಡೆ, ವರ್ಷದಲ್ಲಿ ಬಹಳಷ್ಟು ಸಮಯ ಚಿತ್ರರಂಗಕ್ಕೆ ಬೀಗಬಿದ್ದಿದ್ದರಿಂದ ಚಿತ್ರಗಳು ಬಿಡುಗಡೆಯಾಗುತ್ತಿರಲಿಲ್ಲ. ಚಿತ್ರ ಚೆನ್ನಾಗಿ ಪ್ರದರ್ಶನ ಕಾಣುತ್ತಿದ್ದರೂ, ಕರೊನಾದಿಂದ ಜನ ಚಿತ್ರಮಂದಿರಕ್ಕೆ ಹೋಗುವುದಕ್ಕೆ ಅನುಮಾನ ವ್ಯಕ್ತಪಡಿಸುವಂತಹ ಕಾಲವಿತ್ತು. ಈ ವರ್ಷದ ಆರಂಭದಲ್ಲೂ ಅಂಥದ್ದೊಂದು ಕಾಲ ಇತ್ತು. ಆದರೆ, ಮಾರ್ಚ್ ಹೊತ್ತಿಗೆ ಕ್ರಮೇಣ ಪರಿಸ್ಥಿತಿ ತಿಳಿಯಾಯ್ತು. ಚಿತ್ರಗಳು ಸುಸೂತ್ರವಾಗಿ ಬಿಡುಗಡೆಯಾಗ ತೊಡಗಿದವು. ಜನ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡಿ ಪ್ರೋತ್ಸಾಹಿಸಿದರು. ಒಂದಿಷ್ಟು ಕನ್ನಡ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿ, ಯಶಸ್ವಿಯಾದವು.
ಈ ವರ್ಷ, ಅಕ್ಟೋಬರ್ ಕೊನೆಯವರೆಗೂ 150 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ಈ ಪೈಕಿ 10ಕ್ಕೂ ಹೆಚ್ಚು ಚಿತ್ರಗಳು ಜನರಿಗೆ ಇಷ್ಟವಾಗಿವೆ. ಮಿಶ್ರ ಪ್ರತಿಕ್ರಿಯೆ ಇದ್ದರೂ, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದ ಬಂದ ಹಣದಲ್ಲಿ ಅಲ್ಲಿಗಲ್ಲಿಗೆ ಸೇಫ್ ಆದ, ಒಂದಿಷ್ಟು ಲಾಭವನ್ನೂ ಮಾಡಿದ ಸಾಕಷ್ಟು ನಿರ್ಮಾಪಕರು ಇದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿ, ಜನರಿಂದ ಮೆಚ್ಚುಗೆ ಪಡೆದಿದ್ದಷ್ಟೇ ಅಲ್ಲ, ಆ ಚಿತ್ರದ ನಿರ್ಮಾಪಕರು ಚೆನ್ನಾಗಿ ಲಾಭ ಮಾಡಿದ ಒಂದಿಷ್ಟು ಚಿತ್ರಗಳು ಈ ಪಟ್ಟಿಯಲ್ಲಿವೆ.
ಕೆಜಿಎಫ್ 2- ಕೆಜಿಎಫ್ 2 ಚಿತ್ರವು ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರವಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಸದ್ಯದ ಮಟ್ಟಿಗೆ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಚಿತ್ರ ಎಂದರೆ ತಪ್ಪಿಲ್ಲ. ಚಿತ್ರವು ಜಗತ್ತಿನಾದ್ಯಂತ ಒಟ್ಟಾರೆ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಈ ಪೈಕಿ ಕನ್ನಡದ ಅವತರಣಿಕೆಯೇ 150 ಪ್ಲಸ್ ಕೋಟಿ ರೂ.ಗಳನ್ನು ಸಂಪಾದಿಸಿದೆ ಎಂದು ಹೇಳಲಾಗುತ್ತಿದೆ. ವಿಶೇಷವೆಂದರೆ, ಈ ಚಿತ್ರದ ಹಿಂದಿ ಅವತರಣಿಕೆಯು ಬಾಲಿವುಡ್‌ನ ಇದುವರೆಗಿನ ಚಿತ್ರಗಳ ಪೈಕಿಯೇ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಾಂತಾರ – ರಿಷಭ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರವು ಬಿಡುಗಡೆಯಾಗಿ ಇನ್ನೂ ಒಂದು ತಿಂಗಳಾಗಿಲ್ಲ. ಈ ಒಂದು ತಿಂಗಳಲ್ಲಿ ಚಿತ್ರವು 200 ಕೋಟಿ ಕ್ಲಬ್‌ಗೆ ಸೇರಿದೆ. ಕರ್ನಾಟಕವೊಂದರಲ್ಲೇ ಈ ಚಿತ್ರವು 110 ಪ್ಲಸ್ ಕೋಟಿ ಸಂಪಾದಿಸಿದ್ದು, ಇದೇ ಓಟ ಮುಂದುವರೆದರೆ, ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಯನ್ನು ಕಾಂತಾರ ಮುರಿಯಲಿದೆ.

ಜೇಮ್ಸ್ – ಕನ್ನಡದಲ್ಲಿ ಅತೀ ಹೆಚ್ಚು ಮೊದಲ ದಿನದ ಕಲೆಕ್ಷನ್ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಜೇಮ್ಸ್ ಪಾತ್ರವಾಗಿದ್ದು, ಒಟ್ಟಾರೆ ಮೊದಲ ದಿನ 20 ಪ್ಲಸ್ ಕೋಟಿ ರೂ ಗಳಿಕೆಯಾಗಿತ್ತು. ಒಟ್ಟಾರೆ, ಜೇಮ್ಸ್ ಚಿತ್ರವು ಎಲ್ಲ ಭಾಷೆಗಳಿಂದ 125 ಕೋಟಿ ರೂ. ಸಂಗ್ರಹಿಸಿದ್ದು, ಈ ಪೈಕಿ ಕನ್ನಡದ ಗಳಿಕೆಯೇ 100 ಪ್ಲಸ್ ಕೋಟಿ ರೂ. ಎಂದು ಹೇಳಲಾಗಿದೆ.

777 ಚಾರ್ಲಿ – ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರವು ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಯಿತು. ಈ ಪೈಕಿ ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಕಲೆಕ್ಷನ್ ಸಹ ಚೆನ್ನಾಗಿತ್ತು. ಚಿತ್ರದ 25ನೇ ದಿನದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಹೇಳಿಕೊಂಡಂತೆ ಚಿತ್ರವು ಎಲ್ಲ ಮೂಲಗಳಿಂದ 150 ಕೋಟಿ ರೂ.ಗಳಿಗೂ ಹೆಚ್ಚು ಸಂಪಾದಿಸಿದ್ದು, ಇದರಲ್ಲಿ ಚಿತ್ರಮಂದಿರಗಳಿಂದಲೇ 100 ಕೋಟಿ ರೂ. ಬಂದಿದೆಯಂತೆ. ಇದರಲ್ಲಿ ಕನ್ನಡದ ಪಾಲು ಹೆಚ್ಚಾಗಿದ್ದು, 70 ಕೋಟಿ ರೂ.ಗಳಿಗೆ ಹೆಚ್ಚು ಗಳಿಕೆ ಆಗಿದೆ.

ವಿಕ್ರಾಂತ್ ರೋಣ – ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರವು ಈ ವರ್ಷ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಇನ್ನೊಂದು ಕನ್ನಡ ಚಿತ್ರ. ಈ ಚಿತ್ರವು ಕೆಜಿಎಫ್ 2 ರೇಂಜಿಗೆ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕ ಪರಿಣಾಮವಾಗಿ, ಅಷ್ಟೇನೂ ದೊಡ್ಡ ಹಿಟ್ ಎಂದನಿಸಿಕೊಳ್ಳಲಿಲ್ಲ. ಆದರೂ, ನಿರ್ಮಾಪಕರಿಗೆ ಹಾಕಿದ ದುಡ್ಡೆಲ್ಲ ಕಳೆದು ಮೇಲೆ 20ರಿಂದ 25 ಕೋಟಿ ರೂ.ವರೆಗೂ ಲಾಭ ಬಂದಿದೆ ಎಂದು ಹೇಳಲಾಗುತ್ತಿದೆ.

ಗಾಳಿಪಟ 2 – ಗಾಳಿಪಟ ೨ ಚಿತ್ರ ಬಿಡಗುಡೆಯಾಗುವುದಕ್ಕಿಂತ ಮುಂಚೆಯೇ ಒಂದಿಷ್ಟು ಸೇಫ್ ಆಗಿತ್ತು. ಚಿತ್ರಕ್ಕೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಚಿತ್ರದ ಕಲೆಕ್ಷನ್ ಸಹ ಚೆನ್ನಾಗಿತ್ತು. ಎರಡು ವಾರಗಳ ಕಾಲ ಚಿತ್ರ ಯಶಸ್ವಿ ಪ್ರದರ್ಶನ ಕಂಡು, ನಿರ್ಮಾಪಕರಿಗೆ ಐದರಿಂದ 10 ಕೋಟಿ ರೂ.ವರೆಗೂ ಲಾಭ ಬಂದಿದೆ ಎಂಬ ಮಾಹಿತಿ ಇದೆ.
ಗುರು ಶಿಷ್ಯರು – ಗುರು ಶಿಷ್ಯರು ಚಿತ್ರಕ್ಕೆ ಮೊದಲ ದಿನ ಸಿಕ್ಕ ರೆಸ್ಪಾನ್ಸ್ ನೋಡಿದರೆ, ಚಿತ್ರ ಸೂಪರ್ ಹಿಟ್ ಆಗಲಿದೆ ಎಂದನಿಸುವಂತಿತ್ತು. ಚಿತ್ರ ನೋಡಿದವರು ಸಹ ಒಳ್ಳೆಯ ಮಾತುಗಳನ್ನೇ ಆಡಿದರು. ಚಿತ್ರವು ನಿರ್ಮಾಪಕರಿಗೆ ಒಂದಿಷ್ಟು ಲಾಭ ತಂದುಕೊಟ್ಟಿತಾದರೂ, ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಲಾಗಲಿಲ್ಲ.
ಲವ್ ಮಾಕ್ಟೇಲ್ 2 – ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2 ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚುವುದಕ್ಕೆ ಕಾರಣ ಮೊದಲ ಭಾಗದ ಯಶಸ್ಸು. ಈ ಚಿತ್ರ ಸಹ ಅದಕ್ಕಿಂತ ದೊಡ್ಡ ಸದ್ದು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಅದರಷ್ಟು ಸದ್ದು ಮಾಡದಿದ್ದರೂ, ಲಾಭವಂತೂ ಚೆನ್ನಾಗಿಯೇ ಮಾಡಿತು. ಕೆಲವೇ ಕೋಟಿಗಳಲ್ಲಿ ಮಾಡಿದ ಈ ಚಿತ್ರವು 10 ಕೋಟಿ ರೂ.ಗಳಿಗೂ ಹೆಚ್ಚು ಬ್ಯುಸಿನೆಸ್ ಆಗಿದೆ ಎಂಬ ಮಾಹಿತಿ ಇದೆ.

ಓಲ್ಡ್ ಮಾಂಕ್ – ಆರ್ಜೆ ಶ್ರೀನಿ ಅವರ ಇತರೆ ಚಿತ್ರಗಳಂತೆ ಈ ಸಿನಿಮಾ ಸಹ ಬಹಳ ಕಡಿಮೆ ಬಜೆಟ್‌ನಲ್ಲಿ ಮಾಡಿದ್ದು. ಇಂಥದ್ದೊಂದು ಚಿತ್ರವು ಎಲ್ಲ ಹಕ್ಕುಗಳು ಮತ್ತು ಚಿತ್ರಮಂದಿರದ ಗಳಿಕೆಯನ್ನು ಸೇರಿಸಿದರೆ ಹಾಕಿದ ದುಡ್ಡಿಗೆ ಡಬ್ಬಲ್ ತಂದುಕೊಟ್ಟು, ನಿರ್ಮಾಪಕರ ಜೇಬು ತುಂಬಿಸಿದೆ.
ತೂತು ಮಡಿಕೆ – ಚಂದ್ರಕೀರ್ತಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡು, ನಿರ್ದೇಶನ ಮಾಡುತ್ತಿರುವ ಚಿತ್ರ ‘ತೂತು ಮಡಿಕೆ. ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ. ಒಂದು ಪುರಾತನ ಕಾಲದ, ಬೆಲೆ ಇರುವ ವಿಗ್ರಹದ ಹಿಂದೆ ಅಷ್ಟೂ ಪಾತ್ರಗಳು ಬೀಳುತ್ತವೆ. ಅದು ಸಿಗುತ್ತದೋ, ಇಲ್ಲವೋ ಎಂಬುದು ಚಿತ್ರದ ಕಥೆ. ಎಲ್ಲಾ ಪ್ರದೇಶಗಳಿಗೂ ಇಷ್ಟವಾಗುವ ಕಥೆ ಈ ಚಿತ್ರದಲ್ಲಿತ್ತು. ಬಿಡುಗಡೆಗೂ ಮುನ್ನವೇ ಮಾರಾಟವಾಗಿದ್ದ ಸಿನಿಮಾ ಕೂಡಾ ಇದಾಗಿತ್ತು.

ಹೆಡ್ ಬುಷ್ – ಡಾಲಿ ಧನಂಜಯ, ಬಾಲು ನಾಗೇಂದ್ರ ಮತ್ತು ಲೂಸ್ ಮಾದ ಒಟ್ಟಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾ ದಿವಂಗದ ಭೂಗತ ದೊರೆ ಜಯರಾಜ್ ಬದುಕನ್ನು ದೃಶ್ಯ ರೂಪದಲ್ಲಿ ತೆರೆದಿಟ್ಟಿದೆ. ಸಿನಿಮಾ ತೀರಾ ಓಹೋ ಎನ್ನುವ ಮಟ್ಟಕ್ಕೆ ಮೂಡಬರದೇ ಇದ್ದರೂ ಹಾಕಿದ ಬಂಡವಾಳಕ್ಕೆ ಮೋಸ ಮಾಡಿಲ್ಲ. ಬಿಡುಗಡೆಗೆ ಮುಂಚೆಯೇ ಲಾಭದಲ್ಲಿದ್ದ ಹೆಡ್ ಬುಷ್‌ಗೆ ಥೇಟರ್ ಕಲೆಕ್ಷನ್ ನಿಂದ ಏನಿಲ್ಲವೆಂದರೂ ಹನ್ನೆರಡು ಕೋಟಿಗಳ ನಿವ್ವಳ ಲಾಭವಾಗಲಿದೆ.