-ಜಿ. ಅರುಣ್ ಕುಮಾರ್
ಕಿರಿಕ್ ಪಾರ್ಟಿ ಟೈಮಲ್ಲಿ ಅಥವಾ ಅದರ ನಂತರ ರಿಷಬ್ ಮತ್ತು ರಶ್ಮಿಕಾ ಪರ್ಸನಲ್ಲಾಗಿ ಹೇಗಿದ್ದಾರೋ ಏನೋ ಯಾರಿಗೆ ಗೊತ್ತು? ಅಸಮಾಧಾನಗಳು ಎಲ್ಲ ಕಡೆ ಇರುತ್ತವೆ. ರಶ್ಮಿಕಾ ಮತ್ತು ರಿಷಬ್ ನಡುವೆ ಕೂಡಾ ಮನಸ್ತಾಪಗಳಿರಬಹುದು. ಅವೆಲ್ಲಾ ಅವರ ಖಾಸಗೀ ವಿಚಾರ. ಸದ್ಯ ರಶ್ಮಿಕಾ ಇರುವ ಒತ್ತಡದ ಬದುಕಿನಲ್ಲಿ ಸ್ವತಃ ತನ್ನ ಸಿನಿಮಾವನ್ನೇ ಈಕೆ ನೋಡಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಹೀಗಿರುವಾಗ ಕಾಂತಾರ ನೋಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಯಾಕೆ ಈ ಹುಡುಗಿಯನ್ನು ನಿಂದಿಸಬೇಕು?

ರಶ್ಮಿಕಾ ಮಂದಣ್ಣ ಕೆಂಪು ಬಟ್ಟೆ ಹಾಕಿಕೊಂಡರೂ, ಕಪ್ಪು ಬಟ್ಟೆ ಹಾಕೊಂಡರೂ ಟ್ರೋಲು, ರಶ್ಮಿಕಾ ಸಿನಿಮಾವೊಂದರ ಕುರಿತು ಹೇಳಿಕೆ ನೀಡದಿದ್ದರೆ ಟ್ರೋಲು, ಮುಖಕ್ಕೆ ಮಾಸ್ಕ್ ಹಾಕಿಕೊಂಡರೆ ಟ್ರೋಲು, ಈಕೆ ನಿಂತರೂ ಕುಂತರೂ ಜನ ಟ್ರೋಲ್ ಮಾಡುತ್ತಾರೆ. ಕೆಲವರು ಅಸಭ್ಯ ಭಾಷೆಯಲ್ಲಿ ನಿಂದಿಸುತ್ತಾರೆ. ತಮ್ಮ ಮನೋವಿಕಾರಗಳನ್ನೆಲ್ಲಾ ಈ ಹೆಣ್ಣುಮಗಳನ್ನು ಅನ್ನಬಾರದ್ದನ್ನೆಲ್ಲಾ ಅನ್ನುವ ಮೂಲಕ ಹೊರಹಾಕಿಕೊಳ್ಳುತ್ತಾರೆ…
ಬೇರೆ ಯಾರೇ ಆಗಿದ್ದಿದ್ದರೂ ಟೀಕೆ ಮಾಡುವವರ ವಿರುದ್ದ ತುಪುಕ್ಕಂತಾ ಉಗಿದುಬಿಡುತ್ತಿದ್ದರು. ಅಥವಾ ತಾನು ಏನೇ ಮಾಡಿದರೂ ಜನ ನನ್ನನ್ನು ಹೀಗೆ ಲೇವಡಿ ಮಾಡುತ್ತಾರಲ್ಲಾ ಅಂತಾ ಕೊರಗಿಕೊಂಡು ಕುಂತುಬಿಡುತ್ತಿದ್ದರು. ಆದರೆ ರಶ್ಮಿಕಾ ಈ ಎರಡನ್ನೂ ಮಾಡುತ್ತಿಲ್ಲ. ʻಬೊಗಳುವ ನಾಯಿಗಳೇ, ನಿಮ್ಮ ಕಡೆ ನಾನ್ಯಾಕೆ ಗಮನ ಕೊಡಲಿ. ನಿಮ್ಮ ಗಂಟಲು ಬಿದ್ದುಹೋಗೋ ತನಕ ಬಡಕೊಳ್ಳಿʼ ಅಂತಾ ತಮ್ಮ ಪಾಡಿಗೆ ತಾವು ಸಾಧನೆಯ ಶಿಖರವೇರುತ್ತಾ ಸಾಗುತ್ತಿದ್ದಾರೆ. ಹಾಗಂತಾ ಎಷ್ಟು ದಿನ ತಾನೆ ಸುಖಾಸುಮ್ಮನೆ ನಿಂದನೆಗೆ ಒಳಗಾಗಲು ಸಾಧ್ಯ? ಯಾರದ್ದೇ ಆಗಲಿ ತಾಳ್ಮೆಗೂ ಒಂದು ಲಿಮಿಟ್ ಇರುತ್ತೆ. ಅದು ಒಂದಲ್ಲಾ ಒಂದು ದಿನ ಕಟ್ಟೆಯೊಡೆಯಲೇಬೇಕು. ಈಗ ರಶ್ಮಿಕಾಗೆ ಆಗಿರೋದೂ ಅದೇ. ಕಾರಣವೇ ಇಲ್ಲದೆ ಮೂದಲಿಕೆಗೆ ಒಳಗಾಗಿ, ಸಣ್ಣ ಪುಟ್ಟ ವಿಚಾರಕ್ಕೂ ದೊಡ್ಡ ಮಟ್ಟದಲ್ಲಿ ಅವಮಾನ ಅನುಭವಿಸಿ ಸಾಕಾದ ರಶ್ಮಿಕಾ ಈಗ ಸಿಡಿದೆದ್ದಿದ್ದಾರೆ. ʻಏನ್ರೀ ನಿಮ್ದು? ಯಾಕೆ ನನ್ನನ್ನೇ ಟಾರ್ಗೆಟ್ ಮಾಡ್ತಿದ್ದೀರ?ʼʼ ಅಂತಾ ಪ್ರಶ್ನಿಸಲು ಆರಂಭಿಸಿದ್ದಾರೆ. ಈ ಕುರಿತು ಸುದೀರ್ಘ ಪತ್ರವೊಂದನ್ನು ಬರೆದು ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಟ್ಯಾಗ್ ಮಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

‘ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ವಿಚಾರಗಳು ನನಗೆ ವಿಪರೀತ ತೊಂದರೆ ನೀಡಿವೆ. ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು. ವೃತ್ತಿ ಜೀವನ ಶುರುವಾದಾಗಿನಿಂದಲೂ ನನ್ನನ್ನು ಕೆಲವರು ಕಾರಣವೇ ಇಲ್ಲದೆ ದ್ವೇಷಿಸುತ್ತಿದ್ದಾರೆ. ಟ್ರೋಲ್ ಮತ್ತು ನೆಗೆಟಿವಿಟಿಗೆ ನಾನು ಪಂಚಿಂಗ್ ಬ್ಯಾಗ್ ರೀತಿ ಆಗಿದ್ದೇನೆ. ನಾನು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ಹಾಗಿದೆ. ಎಲ್ಲರೂ ನನ್ನನ್ನು ಪ್ರೀತಿಸಲೇಬೇಕು ಅಂತೇನಿಲ್ಲ. ನನ್ನ ಬಗ್ಗೆ ನಿಮಗೆ ಸಹಮತ ಇಲ್ಲ ಎಂದಮಾತ್ರಕ್ಕೆ ನೀವು ನೆಗೆಟಿವಿಟಿ ಹಬ್ಬಿಸುವುದು ಎಷ್ಟು ಸರಿ? ನಿಮ್ಮೆಲ್ಲರನ್ನು ರಂಜಿಸಲು ನಾನು ಸತತ ಶ್ರಮಪಡುತ್ತಿದ್ದೇನೆ. ಆ ಕೆಲಸದ ಬಗ್ಗೆ ನಾನು ಹೆಚ್ಚು ಯೋಚಿಸುತ್ತೇನೆ. ನಾನು ಮತ್ತು ನೀವು ಇಬ್ಬರೂ ಹೆಮ್ಮೆ ಪಡುವಂತಹ ಕೆಲಸ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳಿಲ್ಲದ ವಿಚಾರಕ್ಕೆ ನನ್ನನ್ನು ಟ್ರೋಲ್ ಮಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಸಂದರ್ಶನಗಳಲ್ಲಿ ನಾನು ಹೇಳಿದ್ದನ್ನು ನನ್ನ ವಿರುದ್ಧವೇ ತಿರುಗಿಸಲಾಗಿದೆ. ನನಗೆ ಮತ್ತು ನನ್ನ ಸಂಬಂಧಗಳಿಗೆ ಹಾನಿ ಆಗುವಂತಹ ತಪ್ಪು ಕಥೆಗಳನ್ನು ಇಂಟರ್ನೆಟ್ನಲ್ಲಿ ಹಬ್ಬಿಸಿದ್ದಾರೆ. ಒಳ್ಳೆಯ ಟೀಕೆಯನ್ನು ನಾನು ಸ್ವಾಗತಿಸುತ್ತೇನೆ. ಅದರಿಂದ ಬೆಳವಣಿಗೆ ಸಾಧ್ಯ. ಆದರೆ ನೆಗೆಟಿವಿಟಿ ಮತ್ತು ದ್ವೇಷದಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲʼʼ
ಹೀಗೆ ಪತ್ರ ಬರೆದು ಬೊಗಳುವ ಬಾಯಿಗಳಿಗೆ ಬಿರಿಡೆ ತುರುಕುವ ಪ್ರಯತ್ನ ಮಾಡಿದ್ದಾರೆ ಕಿರಿಕ್ ಬೆಡಗಿ.

ಕಾಂತಾರ ಚಿತ್ರವನ್ನು ರಶ್ಮಿಕಾ ನೋಡಿಲ್ಲ. ಅದರ ಬಗ್ಗೆ ಮಾತಾಡಿಲ್ಲ. ಈ ಚಿತ್ರವನ್ನು ಹೊಗಳಿ ಟ್ವೀಟ್ ಮಾಡಿಲ್ಲ ಅನ್ನೋದೇ ಸದ್ಯ ರಶ್ಮಿಕಾ ಮೇಲಿನ ದೊಡ್ಡ ಆರೋಪವಾಗಿದೆ. ಇಷ್ಟಕ್ಕೂ ಒಂದು ಸಿನಿಮಾವನ್ನು ನೋಡುವುದು, ಅದರ ಬಗ್ಗೆ ಮಾತಾಡುವುದು ಅವರವರ ಸ್ವಾತಂತ್ರ್ಯ. ಕಾಂತಾರ ಒಂದು ಸಿನಿಮಾ ಅಷ್ಟೇ. ಆ ಸಿನಿಮಾದಿಂದಲೇ ದೇಶ ಅಥವಾ ಚಿತ್ರರಂಗ ಉದ್ದಾರ ಆಗಬೇಕು ಅನ್ನೋದಿದ್ದರೆ ಎಲ್ಲರೂ ನೋಡಿ, ಅದನ್ನು ಪ್ರಮೋಟ್ ಮಾಡಿ ಅಂತ ಅನ್ನಬಹುದಿತ್ತು. ರಶ್ಮಿಕಾಗೆ ಮೊದಲ ಅವಕಾಶ ಕೊಟ್ಟಿದ್ದು ರಿಷಬ್ ಅನ್ನೋದು ನಿಜ. ಕಿರಿಕ್ ಪಾರ್ಟಿ ಗೆಲುವಿಗೆ ರಶ್ಮಿಕಾ ಕೂಡಾ ಬಹುಮುಖ್ಯ ಕಾರಣ ಅನ್ನೋದು ಅಷ್ಟೇ ನಿಜವಲ್ಲವೇ? ಇಷ್ಟಕ್ಕೂ ಕಿರಿಕ್ ಪಾರ್ಟಿ ಟೈಮಲ್ಲಿ ಅಥವಾ ಅದರ ನಂತರ ರಿಷಬ್ ಮತ್ತು ರಶ್ಮಿಕಾ ಪರ್ಸನಲ್ಲಾಗಿ ಹೇಗಿದ್ದಾರೋ ಏನೋ ಯಾರಿಗೆ ಗೊತ್ತು? ಅಸಮಾಧಾನಗಳು ಎಲ್ಲ ಕಡೆ ಇರುತ್ತವೆ.

ರಶ್ಮಿಕಾ ಮತ್ತು ರಿಷಬ್ ನಡುವೆ ಕೂಡಾ ಮನಸ್ತಾಪಗಳಿರಬಹುದು. ಅವೆಲ್ಲಾ ಅವರ ಖಾಸಗೀ ವಿಚಾರ. ಸದ್ಯ ರಶ್ಮಿಕಾ ಇರುವ ಒತ್ತಡದ ಬದುಕಿನಲ್ಲಿ ಸ್ವತಃ ತನ್ನ ಸಿನಿಮಾವನ್ನೇ ಈಕೆ ನೋಡಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಹೀಗಿರುವಾಗ ಕಾಂತಾರ ನೋಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಯಾಕೆ ಈ ಹುಡುಗಿಯನ್ನು ನಿಂದಿಸಬೇಕು?
