-ಶೌರ್ಯ ಡೆಸ್ಕ್

ತ್ರಿಬಲ್ ಆರ್ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ “ಮೆಗಾ ಪವರ್ ಸ್ಟಾರ್” ರಾಮ್ ಚರಣ್ ತೇಜ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಇನ್ನೊಂದು ಹೊಸ ಪ್ಯಾನ್ ಇಂಡಿಯಾ ಘೋಷಿಸಿದ್ದಾರೆ.

ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್‌ಬ್ಲಸ್ಟರ್ ಆದ “ಉಪ್ಪೆನಾ” ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ, ಈಗ ರಾಮ್ ಚರಣ್ ಅವರನ್ನು ಈ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ. ಪ್ಯಾನ್ ಇಂಡಿಯಾಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ರಾಮ್ ಚರಣ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಮೈತ್ರಿ ಮೂವಿ ಮೇಕರ್ಸ್ ಪ್ರಸ್ತುತಪಡಿಸುತ್ತಿರುವ ವೆಂಕಟ ಸತೀಶ್ ಕಿಲಾರು ಅವರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಹೆಸರಿಡದ ಚಿತ್ರದ ಮುಂದಿನ ವರ್ಷ ಪ್ರಾರಂಭವಾಗಲಿದೆ. ಸದ್ಯ ಶಂಕರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರದ ಚಿತ್ರೀಕರಣದಲ್ಲಿ ರಾಮ್ ಚರಣ್ ತೇಜ ಭಾಗವಹಿಸಿದ್ದು, ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಅಧಿಕೃತ ಘೋಷಣೆ ಆಗಲಿದೆ.