26.6 C
Bengaluru
Monday, March 20, 2023
spot_img

ಯಾಕಿಂಗಾದರು ಸುದೀಪ್-ದರ್ಶನ್??

ಪುನೀತ ಪರ್ವ ಸಮಯದಲ್ಲೂ ಇವರಿಬ್ಬರೂ ಜಿದ್ದು ಸಾಧಿಸಬೇಕಿತ್ತಾ?

-ಶೌರ್ಯ ಡೆಸ್ಕ್

ಪುನೀತ್ ಮೇಲಿನ ಪ್ರೀತಿಯಿಂದಾಗಿ ಸುದೀಪ್-ದರ್ಶನ್ ಇಬ್ಬರೂ “ಪುನೀತ ಪರ್ವ” ಕಾರ್ಯಕ್ರಮದ ಭಾಗವಾಗಬಹುದು ಎಂದು ಎಲ್ಲರೂ ನಂಬಿದ್ದರು. ಆದರೆ, ಸುಳ್ಳಾಗಿದೆ. ದೂರದೂರಿನಿಂದ ಪುನೀತ್ ಮೇಲೆ ಪ್ರೀತಿ, ಅಭಿಮಾನ ಇಟ್ಟು ಹಲವು ನಟರು ಬಂದಿದ್ದರೂ, ಕನ್ನಡದ ಇಬ್ಬರು ಟಾಪ್ ಸ್ಟಾರ್ ನಟರು ಬರದಿದ್ದದ್ದು ಮಾತ್ರ ಎದ್ದು ಕಾಣುವುದರ ಜೊತೆಗೆ ಹಲವು ಗುಸುಗುಸುಗಳಿಗೆ ಕಾರಣವಾಗಿದೆ. ಇಷ್ಟಕ್ಕೂ ಸುದೀಪ್ ಮತ್ತು ದರ್ಶನ್ ಇಬ್ಬರೂ ಯಾಕೆ ಬರಲಿಲ್ಲ? ನಿಜಕ್ಕೂ ಅವರಿಗೆ ಬೇರೆ ಕಾರಣವಿತ್ತೋ ಅಥವಾ ಒಬ್ಬರನ್ನೊಬ್ಬರು ತಪ್ಪಿಸಿಕೊಳ್ಳುವುದಕ್ಕೆ ಕಾರ್ಯಕ್ರಮದಿಂದ ಗೈರು ಹಾಜರಾದರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಅಪ್ಪು ಸಾರ್, ಕ್ಷಮೆ ಇರಲಿ. ಮೊದಲ ದಿನವೇ ಗಂಧದ ಗುಡಿಯಲ್ಲಿ ಭೇಟಿಯಾಗೋಣ…

ಹಾಗಂತ ಟ್ವೀಟ್ ಮಾಡಿದ್ದಾರೆ ರಿಷಭ್ ಶೆಟ್ಟಿ. ಅವರು ಕ್ಷಮೆ ಕೋರಿದ್ದು ಪುನೀತ್ ರಾಜ್‌ಕುಮಾರ್ ಅವರಲ್ಲಿ. ಕಾರಣ, ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಪುನೀತ ಪರ್ವ ಕಾರ್ಯಕ್ರಮದಲ್ಲಿ ರಿಷಭ್ ಇರಲಿಲ್ಲ. ರಕ್ಷಿತ್ ಇದ್ದರು, ರಾಜ್ ಇದ್ದರು. ರಿಷಭ್ ಇರಲಿಲ್ಲ. ಇದಕ್ಕೆ ಕಾರಣವೇನಿರಬಹುದು ಎಂದು ಹಲವರಿಗೆ ಆಶ್ಚರ್ಯವಾಗಿತ್ತು. ಅದಕ್ಕೆ ರಿಷಭ್ ಕಾರಣ ಕೊಟ್ಟಿದ್ದಾರೆ. ಪೂರ್ವನಿರ್ಧಾರಿತ ಕಾರ್ಯಕ್ರಮವೊಂದರಲ್ಲಿ ಬಹರೈನ್‌ನಲ್ಲಿ ಇದ್ದ ಕಾರಣ, ಭಾಗವಹಿಸಲು ಸಾಧ್ಯವಾಗಲಿಲ್ಲವಂತೆ.

ರಿಷಭ್ ಭಾಗವಹಿಸದೇ ಇರೋದಕ್ಕೆ ಕಾರಣವಿದೆ. ಆದರೆ, ಪುನೀತ ಪರ್ವ ಕಾರ್ಯಕ್ರಮದಲ್ಲಿ ಬೇರೆ ನಟರು ಕಾಣಿಸಿಕೊಳ್ಳದಿರುವುದಕ್ಕೆ ಕಾರಣವೇನು ಎಂಬುದು ಹಲವರ ಪ್ರಶ್ನೆ. ಚೆನ್ನೈನಿಂದ ಸೂರ್ಯ, ಸಿದ್ದಾರ್ಥ್ ಮತ್ತು ಶರತ್ ಕುಮಾರ್ ಬಂದಿದ್ದರು. ಹೈದರಾಬಾದ್‌ನಿಂದ ರಾಣಾ ದಗ್ಗುಬಾಟಿ ಮತ್ತು ಅಖಿಲ್ ನಾಗಾರ್ಜುನ ಇದ್ದರು. ಪ್ರಭುದೇವ ವೇದಿಕೆಯ ಮೇಲೆ ಪುನೀತ್ ಹಾಡುಗಳಿಗೆ ನರ್ತಿಸಿ ಹೋದರು. ರವಿಚಂದ್ರನ್, ರಮೇಶ್ ಅರವಿಂದ್, ಯಶ್, ಧನಂಜಯ್, ರಕ್ಷಿತ್ ಶೆಟ್ಟಿ, ದುನಿಯಾ ವಿಜಯ್, ಕೃಷ್ಣ ಧ್ರುವ ಸರ್ಜಾ ಸೇರಿದಂತೆ ಕನ್ನಡ ಚಿತ್ರರಂಗದ ಸಾಕಷ್ಟು ಸ್ಟಾರ್ ನಟರು ಬಂದಿದ್ದರು ಉಪೇಂದ್ರ, ಗಣೇಶ್ ಸೇರಿದಂತೆ ಕೆಲವರು ಬಂದಿರಲಿಲ್ಲ. ಹಾಗೆ ನೋಡಿದರೆ, ಅವರಿಬ್ಬರೂ ಸಾಮಾನ್ಯವಾಗಿ ಇಂಥ ಕಾರ್ಯಕ್ರಮಗಳನ್ನು ತಪ್ಪಿಸುವುದಿಲ್ಲ. ಬಹುಶಃ ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲವೇನೋ? ಜರೂರು ಕೆಲಸಗಳಿಲ್ಲದಿದ್ದರೆ ಬರುತ್ತಿದ್ದರೇನೋ?

ಆದರೆ, ಸುದೀಪ್ ಮತ್ತು ದರ್ಶನ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದಿರುವುದು ಹಲವರ ಆಶ್ಚರ್ಯಕ್ಕೆ ಕಾರಣವಾಗಿದೆ. ಅವರಿಬ್ಬರ ನಡುವಿನ ಸ್ನೇಹ-ದ್ವೇಷ ಎಲ್ಲವೂ ಗೊತ್ತಿರಬಹುದು. ಕನ್ನಡಿಗರಿಗೆ ಅದ್ಯಾವುದೂ ಹೊಸದಲ್ಲ. ಕೆಲವು ವರ್ಷಗಳ ಹಿಂದೆ ಜಗಳ ಆಡಿಕೊಂಡು ದೂರವಾದವರು ಮತ್ತೆ ಒಂದಾಗಿಲ್ಲ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿಲ್ಲ. ಅವರು ಬಂದ ಕಾರ್ಯಕ್ರಮಕ್ಕೆ ಇವರು ಬರುವುದಿಲ್ಲ. ಇವರು ಬರುತ್ತಾರೆ ಎಂದು ಗೊತ್ತಾದರೆ ಅವರು ಬರುವುದಿಲ್ಲ. ಇದು ಕೆಲವು ವರ್ಷಗಳಿಂದ ನಡೆದೇ ಇದೆ. ಅಂಬರೀಷ್ ಅವರ ಅಂತ್ಯಸಂಸ್ಕಾರದವರೆಗೂ ಅವರ ಕುಟುಂಬದವರ ಜೊತೆಗೇ ಇದ್ದ ಸುದೀಪ್, ಅತ್ತ ದರ್ಶನ್ ಬರುತ್ತಿದ್ದಂತೆಯೇ ಜಾಗ ಖಾಲಿ ಮಾಡಿದ್ದರು. ಪುನೀತ್ ನಿಧನದ ಸಮಯದಲ್ಲಾಗಲೀ, ಅವರ ಅಂತ್ಯಸಂಸ್ಕಾರದಲ್ಲಾಗಲೀ, ಆ ನಂತರ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಾಗಲೀ ಇಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳಲಿಲ್ಲ. ಅವರು ಬರುತ್ತಾರೆ ಎಂದರೆ, ಇವರು ಬರುತ್ತಲೇ ಇರಲಿಲ್ಲ. ಅದಕ್ಕೆ ಮುಸುಕಿನ ಗುದ್ದಾಟ ಕಾರಣವೋ ಅಥವಾ ಅವರಿರುವಾಗ ತಮಗೆ ಪ್ರಚಾರ ಸಿಗುವುದಿಲ್ಲ ಅಥವಾ ಬಹಿರಂಗವಾಗಿ ಯಾಕೆ ರಗಳೆ ಎಂಬ ಭಯವೋ ಗೊತ್ತಿಲ್ಲ.

ಬಹುಶಃ ಪುನೀತ ಪರ್ವ ಕಾರ್ಯಕ್ರಮಕ್ಕಾದರೂ ಅವರಿಬ್ಬರೂ ಬರಬಹುದು, ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಪುನೀತ್ ಮೇಲಿನ ಪ್ರೀತಿಯಿಂದಾಗಿ ಇಬ್ಬರೂ ಒಂದೇ ಕಾರ್ಯಕ್ರಮದ ಭಾಗವಾಗಬಹುದು ಎಂದು ಎಲ್ಲರೂ ನಂಬಿದ್ದರು. ಆದರೆ, ಸುಳ್ಳಾಗಿದೆ. ದೂರದೂರಿನಿಂದ ಪುನೀತ್ ಮೇಲೆ ಪ್ರೀತಿ, ಅಭಿಮಾನ ಇಟ್ಟು ಹಲವು ನಟರು ಬಂದಿದ್ದರೂ, ಕನ್ನಡದ ಇಬ್ಬರು ಟಾಪ್ ಸ್ಟಾರ್ ನಟರು ಬರದಿದ್ದದ್ದು ಮಾತ್ರ ಎದ್ದು ಕಾಣುವುದರ ಜೊತೆಗೆ ಹಲವು ಗುಸುಗುಸುಗಳಿಗೆ ಕಾರಣವಾಗಿದೆ. ಇಷ್ಟಕ್ಕೂ ಸುದೀಪ್ ಮತ್ತು ದರ್ಶನ್ ಇಬ್ಬರೂ ಯಾಕೆ ಬರಲಿಲ್ಲ? ನಿಜಕ್ಕೂ ಅವರಿಗೆ ಬೇರೆ ಕಾರಣವಿತ್ತೋ ಅಥವಾ ಒಬ್ಬರನ್ನೊಬ್ಬರು ತಪ್ಪಿಸಿಕೊಳ್ಳುವುದಕ್ಕೆ ಕಾರ್ಯಕ್ರಮದಿಂದ ಗೈರು ಹಾಜರಾದರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ.

ಹಾಗೆ ನೋಡಿದರೆ, ಇಬ್ಬರೂ ಅಷ್ಟೇನೂ ಬ್ಯುಸಿಯಾಗಿಲ್ಲ. ಸುದೀಪ್ ಯಾವ ಚಿತ್ರದಲ್ಲೂ ನಟಿಸುತ್ತಿಲ್ಲ. ದರ್ಶನ್ ನಟಿಸುತ್ತಿದ್ದರೂ, ಒಂದು ದಿನ ಬಿಡುವು ಪಡೆಯುವುದು ದೊಡ್ಡ ವಿಷಯವೇನಲ್ಲ. ಹಾಗಿದ್ದರೂ ಇಬ್ಬರೂ ತಪ್ಪಿಸಿದ್ದೇಕೆ. ಪುನೀತ್‌ಗಿಂತ ತಮ್ಮ ನಡುವಿನ ಜಿದ್ದಾಜಿದ್ದಿಯೇ ಇಬ್ಬರಿಗೂ ಹೆಚ್ಚಾಗಿ ಹೋಯಿತಾ ಎಂಬ ಪ್ರಶ್ನೆ ಬರೀ ಚಿತ್ರರಂಗದವನ್ನಷ್ಟೇ ಅಲ್ಲ, ಕನ್ನಡ ಸಿನಿಮಾ ಅಭಿಮಾನಿಗಳನ್ನು ಕಾಡುತ್ತಿದೆ. ಒಂದು ಪಕ್ಷ ಜಿದ್ದಾಜಿದ್ದಿಯೇ ಕಾರಣವಾದರೆ, ತೀರಾ ಇಂಥ ಹೊತ್ತಿನಲ್ಲಿ ಇಬ್ಬರೂ ತಮ್ಮ ನಡುವೆ ವೈಷಮ್ಯವನ್ನು ಮರೆತು ಕಾರ್ಯಕ್ರಮದ ಭಾಗವಾಗಬಹುದಿತ್ತು. ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ ಪುನೀತ್ ಮೇಲಿನ ಪ್ರೀತಿಯಿಂದಾದರೂ ಕಾರ್ಯಕ್ರಮದಲ್ಲಿ ಹಾಜರಿದ್ದು, ತಮ್ಮ ಪ್ರೀತಿಯನ್ನು ತೋರಿಸಬಹುದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಮತ್ತು ಪುನೀತ ಪರ್ವ ಕಾರ್ಯಕ್ರಮ ಎಷ್ಟೇ ಅದ್ಭುತವಾಗಿ ನಡೆದರೂ, ಅವರಿಬ್ಬರ ಅನುಪಸ್ಥಿತಿ ಕಾಡುತ್ತಲಿತ್ತು.

ಅಂದಹಾಗೆ, ಮರುದಿನ ಜೈದ್ ಖಾನ್ ಅಭಿನಯದ ಬನಾರಸ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಿತು. ದರ್ಶನ್ ಈ ಕಾರ್ಯಕ್ರಮದ ಚೀಫ್ ಗೆಸ್ಟ್ ಆಗಿದ್ದರು. ಒಂದು ದಿನದ ಅಂತರದಲ್ಲಿ ಅಲ್ಲಿಗೆ ಹೋದವರಿಗೆ ಇಲ್ಲಿ ಬರಲು ಏನಾಗಿತ್ತು? ಅನ್ನೋದೇ ಪ್ರಶ್ನೆ!

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles