29.1 C
Bengaluru
Saturday, March 18, 2023
spot_img

ರಹಸ್ಯಗಳ ಜಗತ್ತಿನಲ್ಲಿ ರಾಜಕುಮಾರನ ಪುನೀತ ಪಯಣ!

-ರಮ್ಯಶ್ರೀ ಬಿ.ಕೆ.

ಅಮೋಘವರ್ಷ ಅವರೊಟ್ಟಿಗೆ ಕಾಡು ಮೇಡು ಅಲೆಯುವ ಪುನೀತ್ ಹೊಸ ಜಗತ್ತನ್ನು ಅನಾವರಣ ಮಾಡುತ್ತಲೇ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನೋ ಕಿವಿಮಾತನ್ನೂ ಹೇಳುತ್ತಾರೆ. ನೆಲ, ಜಲ, ಗಾಳಿ ಇಡೀ ಪರಿಸರ, ಜೀವವೈವಿಧ್ಯವನ್ನು ಉಳಿಸಿಕೊಳ್ಳುವುದರ ಕುರಿತು ಸ್ಪಷ್ಟವಾಗಿ ನುಡಿಯುತ್ತಾರೆ. ಪ್ಲಾಸ್ಟಿಕ್ ನಿಂದಾಗುವ ಅನಾಹುತಗಳ ಬಗ್ಗೆ ವಿವರಿಸುತ್ತಾರೆ. ವಿದ್ಯೆಯ ಮೌಲ್ಯಗಳನ್ನು ತಿಳಿಸುತ್ತಾರೆ. ಗಂಭೀರ ವಿಚಾರಗಳನ್ನು ಹೇಳುತ್ತಲೇ ಹಾಸ್ಯ ಮಾಡಿ ಎಲ್ಲರನ್ನೂ ನಗಿಸುತ್ತಾರೆ. ಅಷ್ಟೇ ಅಲ್ಲ ಜೀವದ ಬಗ್ಗೆ ಇರುವ ಭಯವನ್ನೂ ಹೊರಹಾಕುತ್ತಾರೆ. ʻʻಅಮೋಘ ನಾವು ಮತ್ತೆ ವಾಪಾಸ್ ಹೋಗ್ತೀವಿ ತಾನೆ? ಯಾಕೆಂದ್ರೆ ಅಲ್ಲಿ ಮೂರ್ಮೂರು ಸಿನಿಮಾ ಶೂಟಿಂಗ್ ನಡೀತಿದೆ. ಹೆಂಡ್ತಿ ಮಕ್ಳು ಎಲ್ಲಾ ಇದಾರೆʼʼ ಅಂದಾಗ ಮನಸ್ಸು ಹಿಂಡಿದಂತಾಗುತ್ತದೆ. ಕಾಳಿಂಗ ಸರ್ಪದ ಎದುರು ನಿಂತು “ನಾನು ತೀರಾ ಚಿಕ್ಕವನಾಗಿದ್ದಾಗ ಕುತ್ತಿಗೆಗೆ ಹಾವು ಸುತ್ತಿಕೊಂಡು ನಟಿಸಿದ್ದೆ. ಅದರ ಉಸಿರಿನ ಶಬ್ದ ಈಗಲೂ ಮರೆಯಲು ಆಗಲ್ಲ. ಅದಕ್ಕೇ ನನಗೆ ಹಾವೆಂದರೆ ಭಯ” ಅನ್ನುತ್ತಾರೆ. ಹಾವಿಗೆ ಭಯ ಪಡುತ್ತಿದ್ದ ಅಪ್ಪು ಸಾವಿಗೆ ಮಾತ್ರ ಯಾಕೆ ಹೆದರಲಿಲ್ಲ ಅನ್ನೋದು ಗಂಧದ ಗುಡಿಯನ್ನು ನೋಡಿದ ಎಲ್ಲರನ್ನೂ ಕಾಡುವ ಪ್ರಶ್ನೆ.

ನಾನು ಸಂಗಾತಿಯಾಗಿ ಬರೋ ಮುಂಚೇನೇ ಸಿನಿಮಾ ಅವರ ಜೀವನದಲ್ಲಿತ್ತು. ಅವರು ಜಗತ್ತನ್ನು ನೋಡೋ ಮುನ್ನ ಜಗತ್ತು ಪುನೀತ್ ಅವರನ್ನು ನೋಡಿತ್ತು. ಯೂತ್ ಐಕಾನ್ ಆಗಿ ಬೆಳೆದ ಪುನೀತ್ ಅಭಿಮಾನಿಗಳ ಪಾಲಿಗೆ ಪ್ರೀತಿಯ ಅಪ್ಪು… ನಮ್ಮ ನಾಡು, ನಮ್ಮ ಜನ ನೀಡಿದ ಪ್ರೀತಿಯ ಋಣವನ್ನು ಸದಾ ಅವರಿಗೆ ತೀರಿಸುವ ಹಂಬಲ. ಆ ಹಂಬಲದಿಂದ ಶುರುವಾಗಿತ್ತು ಒಂದು ಹೊಸ ಪಯಣ…

ಹೀಗೆ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರ ಮಾತಿನೊಂದಿಗೆ ಶುರುವಾಗುವ ಡಾಕ್ಯುಮೆಂಟರಿ ಚಿತ್ರ ಗಂಧದ ಗುಡಿ.

ಕಳೆದ ಎರಡು ದಶಕಗಳ ಕಾಲ ಗಂಧದ ಗುಡಿಯ ಅದ್ಭುತ ತಾಣಗಳಲ್ಲಿ, ಕಾಡು ಮೇಡು ಅಲೆದು ಸುತ್ತಿ ವೈಲ್ಡ್ ಲೈಫ್ ಸಿನಿಮಾಗಳನ್ನು, ಛಾಯಾಚಿತ್ರಗಳನ್ನು ಸೆರೆ ಹಿಡಿದವರು ಅಮೋಘವರ್ಷ. ಪುನೀತ್ ರಾಜ್ ಕುಮಾರ್ ಅವರು  ಕಾಡು ಸುತ್ತುವ ಕೆಲಸ ಆರಂಭಿಸಿದಾಗ ಇದೇ ಅಮೋಘ್ ಅವರನ್ನು ಜೊತೆಗಾರನನ್ನಾಗಿಸಿಕೊಂಡರು. ಕರ್ನಾಟಕದ ಸಾವಿರಾರು ಕಿಲೋಮೀಟರುಗಳನ್ನು ಸುತ್ತಾಡಿ, ಕಾಡು ಮತ್ತು ಪ್ರಾಣಿಗಳ ಬಗ್ಗೆ ತಿಳಿದುಕೊಂಡರು. ಪುನೀತ್ ಅವರು ಅಪರಿಚಿತ ಕರ್ನಾಟಕವನ್ನು ಎಕ್ಸ್ ಪ್ಲೋರ್ ಮಾಡಿದರೆ, ಅಮೋಘ ವರ್ಷ ಒಬ್ಬ ಹೀರೋ ಒಳಗಿನ ಮನಸ್ಥಿತಿಯನ್ನು ಎಕ್ಸ್ ಪ್ಲೋರ್ ಮಾಡಿದ್ದರು. ಹಾಗೆ ರೂಪುಗೊಂಡ ದೃಶ್ಯ ರೂಪಕ ಗಂಧದ ಗುಡಿ!

ಪುನೀತ್ – ಈ ಹೆಸರು ಕರ್ನಾಟಕದ ಮಟ್ಟಿಗೆ ಯಾವತ್ತಿಗೂ ಅಚ್ಚರಿ. ಡಾ. ರಾಜ್‌ಕುಮಾರ್ ಬರಿಯ ನಟನಾಗಿ ಮಾತ್ರವಲ್ಲದೆ, ಒಂದು ಶಕ್ತಿಯಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರ ಕೊನೆಯ ಮಗನಾಗಿ ಹುಟ್ಟಿದವರು ಅಪ್ಪು. ಆ ವರೆಗೆ ರಾಜ್ ಕುಟುಂಬದಲ್ಲಿ ಎಲ್ಲ ಥರದ ಕಷ್ಟ ಸುಖಗಳಿದ್ದವು. ಪುನೀತ್‌ಗಿಂತಾ ಹಿರಿಯರಾದ ಶಿವಣ್ಣ ಮತ್ತು ರಾಘಣ್ಣ ಕೂಡಾ ಆ ಕಷ್ಟದ ದಿನಗಳನ್ನು ಕಂಡವರೇ. ಆದರೆ ಪುನೀತ್ ಜನ್ಮ ಪಡೆಯೋ ಹೊತ್ತಿಗೆ ಡಾ. ರಾಜ್ ಕರ್ನಾಟಕದ ಸೂಪರ್ ಸ್ಟಾರ್. ಕಷ್ಟ ಅನ್ನೋ ಮಾತಿಗೆ ಅವರ ಮನೆಯಲ್ಲಿ ಜಾಗವೇ ಇರಲಿಲ್ಲ. ಅರಸೊತ್ತಿಗೆಯಲ್ಲಿ ಆಡಿ ಬೆಳೆದ ಪುನೀತ್ ನಿಜಕ್ಕೂ ರಾಜಯೋಗವನ್ನು ಕಂಡವರು. ಬುದ್ದಿ ಬಲಿಯುವ ಮುಂಚೆಯೇ ನಟನಾಗಿ ಕೂಡಾ ಹೆಸರು ಮಾಡಿದ್ದರು. ಸಿರಿ ಸಂಪತ್ತು, ಜಗತ್ತಿನಲ್ಲಿ ಸಿಗಬಹುದಾದ ಎಲ್ಲ ಬಗೆಯ ಸುಖ-ಸಂತೋಷವನ್ನು ಕಂಡವರು. ಎಲ್ಲವೂ ದಕ್ಕಿದ ನಂತರ ಮನಸ್ಸು ಮತ್ತೊಂದು ಕಡೆ ವಾಲುತ್ತದೆ ಅನ್ನುತ್ತಾರಲ್ಲ.. ಬಹುಶಃ ಪುನೀತ್ ಅವರಿಗೂ ಹಾಗನ್ನಿಸಿತೋ ಏನೋ? ತಾವು ನೋಡದ ಜಗತ್ತಿನ ಕಡೆಗೇ ಹೆಚ್ಚು ವಾಲುತ್ತಿದ್ದರು. ಸಿನಿಮಾ ವಾತಾವರಣದಿಂದ ದೂರವಿದ್ದು ಹೊರಗಿನ ಸ್ನೇಹ ಬಯಸುತ್ತಿದ್ದರು. ಈ ಕಾರಣಕ್ಕೇ ಇರಬಹುದು, ಆವರ ಆಪ್ತ ವಲಯದಲ್ಲಿ ಚಿತ್ರರಂಗದವರಿಗಿಂತಾ ಹೊರಗಿನವರೇ ಹೆಚ್ಚು. ಟೋಪಿ ಧರಿಸಿ ಒಬ್ಬಂಟಿಯಾಗಿ ಗಾಂಧಿಬಜಾರು, ಮಲ್ಲೇಶ್ವರದ ರಸ್ತೆಗಳಲ್ಲಿ ಅಡ್ಡಾಡಿಬರುತ್ತಿದ್ದರು. ಸೈಕಲ್ ಏರಿ ತಮ್ಮ ಕೆಲವೇ ಸ್ನೇಹಿತರೊಂದಿಗೆ ನಂದಿಬೆಟ್ಟಕ್ಕೆ ಹೊರಟು ನಿಲ್ಲುತ್ತಿದ್ದರು. ಹೀರೋ ಆಗಿ ಅಷ್ಟೊಂದು ಬ್ಯುಸಿಯಾಗಿದ್ದಾಗಲೂ ಬಿಡುವು ಮಾಡಿಕೊಂಡು ತಮ್ಮ ತಂದೆಯ ಕುರಿತು ಕಾಫಿ ಟೇಬಲ್ ಬುಕ್ ತಯಾರಿಸಿದರು. ಪಿ.ಆರ್.ಕೆ. ಬ್ಯಾನರು ಶುರು ಮಾಡಿ ಹೊಸಬರ ಕಥೆ ಕೇಳಿ ಚಿತ್ರ ನಿರ್ಮಾಣ ಮಾಡಿದರು. ಶ್ರೀಮಂತಿಕೆ, ಹೆಸರು, ಸ್ಟಾರ್ ಡಮ್ ಎಲ್ಲವನ್ನೂ ಹುಟ್ಟಿನಿಂದಲೇ ನೋಡಿದ ಬೇರೆ ಯಾರೇ ಆಗಿದ್ದರೂ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಿದ್ದರೋ ಗೊತ್ತಿಲ್ಲ. ಆದರೆ ಪುನೀತ್ ಮಾತ್ರ ಸದಾ ಹೊಸ ಜಗತ್ತನ್ನು ಕಾಣಲು ಹಾತೊರೆಯುತ್ತಿದ್ದರು. ಎಲ್ಲದರ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಬಹುಶಃ ಇದೇ ಮನಸ್ಥಿತಿ ಅವರನ್ನು ತೀರಾ ಬೇಗ ಸಾವಿನ ದಾರಿಗೂ ಕರೆದೊಯ್ತು ಬಿಟ್ಟಿತೋ ಏನೋ?

ಸತ್ತ ಮೇಲೂ ಜೀವಂತವಾಗಿರೋದು ನಿಜವಾದ ಸಾಧನೆ ಅನ್ನೋ ಮಾತಿದೆ. ಈ ನಿಟ್ಟಿನಲ್ಲಿ  ನೋಡಿದರೆ ಪುನೀತ್ ಅಪ್ಪಟ ಸಾಧಕ. ಅದ್ಭುತಗಳನ್ನು ಬಿಟ್ಟುಹೋದ ಮಹಾನುಭಾವ. ಈಗ ಬಿಡುಗಡೆಗೊಂಡಿರುವ ಗಂಧದ ಗುಡಿ ಅದರ ಕಟ್ಟ ಕಡೆಯ ನಿದರ್ಶನ.

ಅಮೋಘವರ್ಷ ಅವರೊಟ್ಟಿಗೆ ಕಾಡು ಮೇಡು ಅಲೆಯುವ ಪುನೀತ್ ಹೊಸ ಜಗತ್ತನ್ನು ಅನಾವರಣ ಮಾಡುತ್ತಲೇ ಅದನ್ನು ಹೇಗೆ ಉಳಿಸಿಕೊಳ್ಳಬೇಕು ಅನ್ನೋ ಕಿವಿಮಾತನ್ನೂ ಹೇಳುತ್ತಾರೆ. ನೆಲ, ಜಲ, ಗಾಳಿ ಇಡೀ ಪರಿಸರ, ಜೀವವೈವಿಧ್ಯವನ್ನು ಉಳಿಸಿಕೊಳ್ಳುವುದರ ಕುರಿತು ಸ್ಪಷ್ಟವಾಗಿ ನುಡಿಯುತ್ತಾರೆ. ಪ್ಲಾಸ್ಟಿಕ್ ನಿಂದಾಗುವ ಅನಾಹುತಗಳ ಬಗ್ಗೆ ವಿವರಿಸುತ್ತಾರೆ. ವಿದ್ಯೆಯ ಮೌಲ್ಯಗಳನ್ನು ತಿಳಿಸುತ್ತಾರೆ. ಗಂಭೀರ ವಿಚಾರಗಳನ್ನು ಹೇಳುತ್ತಲೇ ಹಾಸ್ಯ ಮಾಡಿ ಎಲ್ಲರನ್ನೂ ನಗಿಸುತ್ತಾರೆ. ಅಷ್ಟೇ ಅಲ್ಲ ಜೀವದ ಬಗ್ಗೆ ಇರುವ ಭಯವನ್ನೂ ಹೊರಹಾಕುತ್ತಾರೆ. ʻʻಅಮೋಘ ನಾವು ಮತ್ತೆ ವಾಪಾಸ್ ಹೋಗ್ತೀವಿ ತಾನೆ? ಯಾಕೆಂದ್ರೆ ಅಲ್ಲಿ ಮೂರ್ಮೂರು ಸಿನಿಮಾ ಶೂಟಿಂಗ್ ನಡೀತಿದೆ. ಹೆಂಡ್ತಿ ಮಕ್ಳು ಎಲ್ಲಾ ಇದಾರೆʼʼ ಅಂದಾಗ ಮನಸ್ಸು ಹಿಂಡಿದಂತಾಗುತ್ತದೆ. ಕಾಳಿಂಗ ಸರ್ಪದ ಎದುರು ನಿಂತು “ನಾನು ತೀರಾ ಚಿಕ್ಕವನಾಗಿದ್ದಾಗ ಕುತ್ತಿಗೆಗೆ ಹಾವು ಸುತ್ತಿಕೊಂಡು ನಟಿಸಿದ್ದೆ. ಅದರ ಉಸಿರಿನ ಶಬ್ದ ಈಗಲೂ ಮರೆಯಲು ಆಗಲ್ಲ. ಅದಕ್ಕೇ ನನಗೆ ಹಾವೆಂದರೆ ಭಯ” ಅನ್ನುತ್ತಾರೆ. ಹಾವಿಗೆ ಭಯ ಪಡುತ್ತಿದ್ದ ಅಪ್ಪು ಸಾವಿಗೆ ಮಾತ್ರ ಯಾಕೆ ಹೆದರಲಿಲ್ಲ ಅನ್ನೋದು ಗಂಧದ ಗುಡಿಯನ್ನು ನೋಡಿದ ಎಲ್ಲರನ್ನೂ ಕಾಡುವ ಪ್ರಶ್ನೆ.

ರಹಸ್ಯಗಳ ಜಗತ್ತಿನಲ್ಲಿ ಪಯಣಿಸುತ್ತಲೇ ಕಣ್ಮರೆಯಾದ ಪುನೀತ್ ಅವರನ್ನು ಗಂಧದ ಗುಡಿ ಮತ್ತೆ ಕಣ್ಣೆದುರು ತಂದು ನಿಲ್ಲಿಸಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳ ಸಮೇತ ಹೋಗಿ ನೋಡಿಬನ್ನಿ. ಪುನೀತ್ ಕೊನೆಯ ಸಂದೇಶ ಮತ್ತು ಮುತ್ತಿನ ಮಾತುಗಳಿಗೆ ಕಿವಿಯಾಗಿ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles