ರಾಷ್ಟೀಯ ಯುವ ಪ್ರತಿಷ್ಠಾನದ ಸದ್ದಿಲ್ಲದ ಸೇವೆ
–ನೀರಕಲ್ಲು ಶಿವಕುಮಾರ್
ಪ್ರಮೋದ್ ಶ್ರೀನಿವಾಸ್ ರಾಷ್ಟ್ರೀಯ ಯುವ ಪ್ರತಿಷ್ಠಾನ (ಆರ್‌ವೈಪಿ) ಸ್ಥಾಪಿಸಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದಲ್ಲದೆ, ಪ್ರತಿಭಾವಂತ, ಅವಕಾಶವಂಚಿತ ಯುವಕರ ಬದುಕಿನಲ್ಲಿ ಪರಿವರ್ತನೆ ತರಲು ಶ್ರಮಿಸುತ್ತಿದ್ದಾರೆ. ದುರ್ಬಲ ವರ್ಗದ ಜನರಿಗೆ ಆರೋಗ್ಯ, ಶಿಕ್ಷಣ, ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಮಹತ್ತರವನ್ನು ಸಾಧಿಸುವ ಕನಸು-ಹಂಬಲ ಮತ್ತು ಪ್ರತಿಭೆಯಿದ್ದರೂ ಆರ್ಥಿಕ ಸಂಕಷ್ಟದಿಂದ ಮಹತ್ವಾಕಾಂಕ್ಷೆ ಕೈ ಬಿಟ್ಟು ಮರುಗುವ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅವಕಾಶ ಕೊಡಿಸುತ್ತ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ. ಅನೇಕ ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ. ತಮ್ಮ ಉದ್ಯಮದ ಲಾಭದ ಒಂದಾಂಶವನ್ನು ಸೇವೆಗೆ ಎತ್ತಿಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

“ಸೇವೆಯು ಭಾವುಕತೆಯಾಗದೆ ಜೀವನ ವಿಧಾನವಾಗಬೇಕು. ಸೇವೆ ಮಾಡುವವರು ಸೇವೆ ಪಡೆಯುವವರಿಗೆ ಋಣಿಯಾಗಿರಬೇಕು” ಸೇವೆಯ ಕುರಿತು ಹೀಗೆ ಹೇಳಿದವರು ಸ್ವಾಮಿ ವಿವೇಕಾನಂದರು. ಸೇವೆ ಮಾಡುವವರು ಮತ್ತು ಮಾಡದಿರುವವರ ಬಗ್ಗೆ ವಿವೇಕಾನಂದರ ಎದೆಸೀಳುವ ಮಾತುಗಳನ್ನು ಕೂಡಾ ನಾವೆಂದೂ ಮರೆಯಬಾರದು: “ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರದ್ದೇ ಜೀವನ, ಉಳಿದವರು ಬದುಕಿದ್ದೂ ಸತ್ತಂತೆ”.
ಈ ವಿವೇಕ ವಾಣಿಯನ್ನು ಎದೆಗಿಳಿಸಿಕೊಂಡು ಸೇವೆಯನ್ನೇ ಜೀವನ ಕ್ರಮವನ್ನಾಗಿಸಿಕೊಂಡು ಬದುಕುವ, ನೊಂದವರಿಗೆ, ದುರ್ಬಲರಿಗೆ, ಅವಕಾಶ ವಂಚಿತರಿಗೆ ಮಿಡಿಯುವ ಇಂತಹ ಹೃದಯವಂತಿಕೆವುಳ್ಳ ಮಹಾಪುರುಷರು ಹಾಗೂ ಸಂಘ ಸಂಸ್ಥೆಗಳಿಂದಲೇ ಭಾರತ ವಿವೇಕಾನಂದರು ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದೆ.
ತಮ್ಮ ವ್ಯಾಪ್ತಿ, ಪರಿಧಿಯಲ್ಲಿ ಸೇವೆ ಮಾಡುವ ಅನೇಕರು ಎಲೆ ಮರೆಕಾಯಿಯಂತೆ ಸಮಾಜದ ಒಳಿತಿಗೆ ದುಡಿಯುತ್ತಿದ್ದಾರೆ. ಇಂತಹ ವ್ಯಕ್ತಿತ್ವಗಳನ್ನು ಸಮುದಾಯದ ಮಧ್ಯೆ ಪರಿಚಯಿಸುವ ಮೂಲಕ ಮತ್ತಷ್ಟು ಜನಕ್ಕೆ ಪ್ರೇರಣೆ ತುಂಬಬಹುದಾಗಿದೆ. ಇಂತಹ ಪ್ರೇರಣಾತ್ಮಕ ಹಾದಿಯಲ್ಲಿ ನಡೆಯುತ್ತ ಬೆಂಗಳೂರಿನ “ರಾಷ್ಟ್ರೀಯ ಯುವ ಪ್ರತಿಷ್ಠಾನ” ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದೆ. ಪ್ರಮೋದ್ ಶ್ರೀನಿವಾಸ್ ಎಂಬ ಯುವ ಮನಸ್ಸು ಈ ಸಂಸ್ಥೆಯ ಸಾರಥ್ಯ ವಹಿಸಿ ಮುನ್ನಡೆಸುತ್ತಿದೆ.
ಪ್ರಮೋದ್ ಶ್ರೀನಿವಾಸ್ ರಾಷ್ಟ್ರೀಯ ಯುವ ಪ್ರತಿಷ್ಠಾನ (ಆರ್‌ವೈಪಿ) ಸ್ಥಾಪಿಸಿ ಅನೇಕ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದಲ್ಲದೆ, ಪ್ರತಿಭಾವಂತ, ಅವಕಾಶವಂಚಿತ ಯುವಕರ ಬದುಕಿನಲ್ಲಿ ಪರಿವರ್ತನೆ ತರಲು ಶ್ರಮಿಸುತ್ತಿದ್ದಾರೆ. ದುರ್ಬಲ ವರ್ಗದ ಜನರಿಗೆ ಆರೋಗ್ಯ, ಶಿಕ್ಷಣ, ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಮಹತ್ತರವನ್ನು ಸಾಧಿಸುವ ಕನಸು-ಹಂಬಲ ಮತ್ತು ಪ್ರತಿಭೆಯಿದ್ದರೂ ಆರ್ಥಿಕ ಸಂಕಷ್ಟದಿಂದ ಮಹತ್ವಾಕಾಂಕ್ಷೆ ಕೈ ಬಿಟ್ಟು ಮರುಗುವ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅವಕಾಶ ಕೊಡಿಸುತ್ತ ಸಾರ್ಥಕ ಕಾರ್ಯ ಮಾಡುತ್ತಿದ್ದಾರೆ. ಅನೇಕ ಸೇವಾಕಾರ್ಯಗಳಲ್ಲಿ ತೊಡಗಿದ್ದಾರೆ. ತಮ್ಮ ಉದ್ಯಮದ ಲಾಭದ ಒಂದಾಂಶವನ್ನು ಸೇವೆಗೆ ಎತ್ತಿಟ್ಟು ಉತ್ತಮ ಸಮಾಜ ನಿರ್ಮಾಣಕ್ಕೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.
“ನಾವು ಮಾತನಾಡಬಾರದು ನಮ್ಮ ಸೇವೆ, ಸಾಧನೆ ಮಾತನಾಡಬೇಕು” ಎಂಬ ನುಡಿಯಲ್ಲಿ ನಂಬಿಕೆ ಇಟ್ಟಿರುವ ಪ್ರಮೋದ್ ಶ್ರೀನಿವಾಸ್, ರಾಷ್ಟ್ರೀಯ ಯುವ ಪ್ರತಿಷ್ಠಾನ ಕಟ್ಟಿ ಅದರ ಮೂಲಕ ತಮ್ಮೊಳಗಿನ ಸೇವಾ ಆಕಾಂಕ್ಷೆ ಈಡೇರಿಸಿಕೊಳ್ಳತೊಡಗಿದರು. ಪ್ರಸ್ತುತ ಈ ಸಂಸ್ಥೆ ಸಾವಿರಾರು ಜನರ ಬಾಳಿಗೆ ಬೆಳಕು ನೀಡುವ ಕಾರ್ಯ ಮಾಡುತ್ತಿದೆ. ಪ್ರಚಾರದ ಹಂಗಿಲ್ಲದೆ ಮುನ್ನಡೆಯುತ್ತಿದೆ. ಬೆಂಗಳೂರು ದಕ್ಷಿಣ ಭಾಗವನ್ನು ಪ್ರಮುಖ ಸೇವಾ ಭೂಮಿಕೆಯನ್ನಾಗಿ ಮಾಡಿಕೊಂಡಿರುವುದರ ಜೊತೆಗೆ ರಾಜ್ಯದ ಇತರೆಡೆಗೂ ಪ್ರತಿಷ್ಠಾನ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದೆ.

“ನಾವು ಹುಟ್ಟುವಾಗ ಬರಿಗೈನಲ್ಲೇ ಬರುತ್ತೇವೆ. ನಿರ್ಗಮನದಲ್ಲೂ ಏನನ್ನೂ ಜೊತೆಯಲ್ಲಿ ಕೊಂಡೊಯ್ಯಲಾಗದು. ಆದರೆ ನಾವು ಮಾಡಿದ ಉತ್ತಮ ಕೆಲಸ, ಸಾಧನೆಗಳು ನಮ್ಮ ಹೆಸರನ್ನು ಚಿರಕಾಲ ಭೂಮಿಯ ಮೇಲೆ ಬದುಕಿಸುತ್ತವೆ. ಸಮಾಜದಿಂದ ಸಾಕಷ್ಟು ಪಡೆದ ನಂತರ ಆದೇ ಸಮಾಜಕ್ಕೆ ಕೈಲಾದ ಕೊಡುಗೆ ಮೂಲಕ ಹಿಂದಿರುಗಿಸಲೇಬೇಕು. ಇದೇ ರೀತಿ ನನ್ನ ಕೈಲಾದ ಮಟ್ಟಿಗೆ, ಚೈತನ್ಯವಿದ್ದಷ್ಟು ಸೇವೆ ಮಾಡುತ್ತಿದ್ದೇನೆ. ಒಬ್ಬ ಉದ್ಯಮಿಯಾಗಿ ಅದರ ಗಳಿಕೆಯ ಒಂದು ಭಾಗವನ್ನು ಕಟ್ಟಕಡೆಯ ಜನತೆಯ ಕಲ್ಯಾಣಕ್ಕೆ ವಿನಿಯೋಗಿಸುತ್ತಿದ್ದೇನೆ. ಇನ್ನೂ ದೊಡ್ಡ ಮಟ್ಟದಲ್ಲಿ ಸೇವೆ ಮಾಡುವ ಆಸೆಯೂ ಇದೆ. ಇದಕ್ಕಾಗಿ ಸಮಾನ ಮನಸ್ಕರು, ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಬರುವ ಕಂಪನಿಗಳ ನೆರವು ಪಡೆಯುವ ಇಚ್ಚೆಯೂ ಇದೆ. ಅದು ಸಿಗಲಿ ಬಿಡಲಿ ನನ್ನ ಸೇವೆ ನಿರಂತರ. ಯಾರ ಮೆಚ್ಚುಗೆ, ಫಲಾಪೇಕ್ಷೆ, ಪ್ರಚಾರವೂ ನನಗೆ ಬೇಕಿಲ್ಲ” ಎನ್ನುವ ನೇರವಂತಿಕೆಯ ಮಾತುಗಳನ್ನು ಪ್ರಮೋದ್ ಶ್ರೀನಿವಾಸ್ ಆಡುತ್ತಾರೆ.
ಯಾರು ಸಮಾಜದಲ್ಲಿ ಬದಲಾವಣೆ ಬಯಸುವ ಈ ಹುಡುಗ?

ಪ್ರಮೋದ್ ಶ್ರೀನಿವಾಸ್ ಬೆಂಗಳೂರಿನ ಪ್ರಮುಖ ರಾಜಕಾರಣಿಯೊಬ್ಬರ ಮಗ. ಅಪ್ಪನ ಐಡೆಂಟಿಟಿಯೊಂದಿಗೆ ಗುರುತಿಸಿಕೊಳ್ಳಲು ಸುತಾರಾಂ ಒಪ್ಪದ ಹುಡುಗ. ಸಾಮಾಜಿಕ ಬದ್ಧತೆ, ನೊಂದವರಿಗೆ ಮಿಡಿಯುವ, ಸಹಾಯ ಹಸ್ತ ಚಾಚುವ ಗುಣಗಳನ್ನು ವಿದ್ಯಾರ್ಥಿ ಜೀವನದಿಂದಲೇ ರೂಢಿಸಿಕೊಂಡು ಬಂದ ಈ ಯುವಕ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿದರೂ ಶಿಕ್ಷಣ ಪಡೆಯುವ ಉದ್ದೇಶದಿಂದ ಚಿಕ್ಕಂದಿನಿಂದಲೂ ಶಿಸ್ತು ಕಲಿಸುವ, ಜೀವನ ಕಷ್ಟಾನುಭವಗಳನ್ನು ಹೇಳಿಕೊಡುವ ರಾಜ್ಯದ ದೂರದೂರದ ಶಿಕ್ಷಣ ಗುರುಕುಲಗಳಲ್ಲಿ ಬೆಳೆದವರು. ತಮ್ಮೆಲ್ಲ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತ, ಪರಾವಲಂಬನೆ ಇಲ್ಲದೆ ಶಿಕ್ಷಣ, ಜ್ಞಾನಾರ್ಜನೆಯಲ್ಲಿ ತೊಡಗಿ ಬದುಕು ಕಲಿಸುವ ಪಾಠಗಳನ್ನು ಕಲಿತವರು. ಅದೇ ಜೀವನ ಪಾಠಗಳಿಂದ ಸಮಾಜಮುಖಿ ವ್ಯಕ್ತಿತ್ವ ರೂಪಿಸಿಕೊಂಡವರು.
ಇಂಜಿನಿಯರಿಂಗ್ ಮುಗಿಸಿ ಉನ್ನತ ಶಿಕ್ಷಣ ಪಡೆಯಲು ಇಂಗ್ಲೆಂಡ್‌ಗೆ ತೆರಳಿ ಅಲ್ಲಿನ ಲಿವರ್‌ಪೂಲ್‌ನ ಜಾನ್ ಮೂರ್ ವಿಶ್ವವಿದ್ಯಾಲಯದಿಂದ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರಮೋದ್ ಶ್ರೀನಿವಾಸ್ ದೆಹಲಿಯಲ್ಲಿ ನಾಗರಿಕ ಸೇವೆ ಪರೀಕ್ಷೆಗಳಿಗೆ ತರಬೇತಿಯನ್ನೂ ಪಡೆದವರು. ಕೂದಲೆಳೆಯಲ್ಲಿ ಅವಕಾಶ ವಂಚಿತರಾದರೂ ತರಬೇತಿ ಸಮಯದಲ್ಲಿ ಸಮಾಜಕ್ಕಾಗಿ ದುಡಿಯಬೇಕೆಂಬ ತುಡಿತ ಆ ಅವಧಿಯಲ್ಲೇ ಬಲಗೊಂಡಿತು. ಬೆಂಗಳೂರಿಗೆ ವಾಪಸ್ ಆದವರು ಉದ್ಯಮ ಆರಂಭಿಸಿ ಅಲ್ಪ ಅವಧಿಯಲ್ಲೇ ಯಶಸ್ಸು ಕಂಡರು. ಜೊತೆಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು ಆರಂಭಿಸಿದರು. ಎರಡು ವರ್ಷಗಳ ಹಿಂದೆ ರಾಷ್ಟ್ರೀಯ ಯುವ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸೇವಾ ಕಾರ್ಯಗಳಿಗೆ ವೇಗ ನೀಡಿದ್ದಾರೆ. ಪ್ರಸ್ತುತ ಅನೇಕ ಕಾರ್ಯಕ್ರಮಗಳ ಮೂಲಕ ಅಸಹಾಯಕ ಜನತೆಗೆ ಆಸರೆಯಾಗಿದ್ದಾರೆ.
ಉದ್ಯೋಗಕ್ಷೇತ್ರ, ಶಿಕ್ಷಣ, ವೈದ್ಯಕೀಯ, ಅಥವಾ ಕೃಷಿ ವಿಭಾಗದಲ್ಲಿ ಇರಲಿ, ಬದಲಾಗುತ್ತಿರುವ ಸಮಯ ಮತ್ತು ಸಮಾಜದ ಅಗತ್ಯಗಳಿಗೆ ಅನುಗುಣವಾಗಿ ಬೇಕಾದ ನೀತಿಯನ್ನು ಬದಲಾಯಿಸುವುದು ಸದೃಢದೇಶದ ನಿರ್ಮಾಣಕ್ಕೆ ಅಗತ್ಯ ಎಂದು ಪ್ರಮೋದ್ ದೃಢವಾಗಿ ನಂಬಿದ್ದಾರೆ.
ಧಣಿವರಿಯದ ಕಾಯಕ-ಹತ್ತಾರು ಜನ ಹಿತಕಾರ್ಯ
ಆರ್‌ವೈಪಿಯ ಆಶ್ರಯದಲ್ಲಿ, ಪ್ರಮೋದ್ ಅವರು ಪ್ರಾಜೆಕ್ಟ್ ಅಮೋಡ್‌ಅನ್ನು ಪ್ರಾರಂಭಿಸಿದರು, ಇದರಲ್ಲಿ ಐಎಎಸ್ ಪರೀಕ್ಷೆಗೆ ಹಾಜರಾಗಲು ಬಯಸುವ ಆರ್ಥಿಕವಾಗಿ ದುರ್ಬಲ ಕುಟುಂಬಗಳ ಅರ್ಹ ಅಭ್ಯರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಿ ಕೋಚಿಂಗ್ ಸಂಸ್ಥೆಗಳ ಸಹಯೋಗದಲ್ಲಿ ತರಬೇತಿ ಕೊಡಿಸಲು ಮುಂದಾದರು. ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರತಿಷ್ಟಿತ ರಾಜಕುಮಾರ್ ಅಕಾಡೆಮಿ ಮತ್ತು ಇಂಡಿಯಾ ಫಾರ್ ಐಎಎಸ್ ಸಂಸ್ಥೆಯಲ್ಲಿ ತರಬೇತಿ ಕೊಡಿಸಿ ನಾಗರಿಕ ಪರೀಕ್ಷೆಗಳಿಗೆ ಸಜ್ಜುಗೊಳಿಸಿದ್ದಾರೆ. ಪ್ರತಿ ವರ್ಷ ಪ್ರವೇಶ ಪರೀಕ್ಷೆಯೊಂದನ್ನು ನಡೆಸಿ ಈ ಕಾರ್ಯಕ್ರಮಕ್ಕೆ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗುತ್ತಿದೆ. ಪ್ರಾಜೆಕ್ಟ್ ಅಮೋಡ್ ಅಡಿಯಲ್ಲಿ ಪದ್ಮನಾಭನಗರದ ಸಹಕಾರಿ ವಿದ್ಯಾಕೇಂದ್ರ, ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಸರ್ಕಾರಿ ಶಾಲೆಗಳನ್ನು ನವೀಕರಿಸಲಾಗಿದೆ. ವಾರ್ಷಿಕವಾಗಿ ವಿಶ್ವ ಕ್ಯಾನ್ಸರ್ ದಿನದಂದು, ಕ್ಯಾನ್ಸರ್ ಪೀಡಿತ ಬಡ ಮಕ್ಕಳಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳನ್ನು ವಿತರಿಸಲಾಗುತ್ತದೆ. ಪದ್ಮನಾಭನಗರ ಬಳಿಯ ದೋಬಿಘಾಟ್‌ನ ಕುಟುಂಬದ ಮಕ್ಕಳಿಗೆ ಸುಸಜ್ಜಿತ ಶಿಕ್ಷಣ ಶಿಬಿರವನ್ನು ಅದೇ ಸ್ಥಳದಲ್ಲಿ ನಿರ್ಮಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಕ್ಕಳಿಗೆ ಪಾಠ ಪ್ರವಚನಕ್ಕೆ ವ್ಯವಸ್ಥೆ ಮಾಡಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿ ಆನ್‌ಲೈನ್ ಕ್ಲಾಸ್‌ಗೆ ವ್ಯವಸ್ಥೆ ಮಾಡಿದ್ದು ಇತ್ತೀಚೆಗೆ ಅತ್ಯಂತ ಖುಷಿ ಕೊಟ್ಟ ಕೆಲಸ ಎಂದು ಪ್ರಮೋದ್ ಹೇಳುತ್ತಾರೆ.

ರಾಷ್ಟ್ರೀಯ ಯುವ ಪ್ರತಿಷ್ಠಾನದ ಶಿಕ್ಷಣ ಮತ್ತು ಮಕ್ಕಳ ಬೆಂಬಲ ಕಾರ್ಯಕ್ರಮದಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರು ಮತ್ತು ಆಸ್ಪತ್ರೆ ದಾದಿಯರಿಗೆ ಕೋವಿಡ್‌ಕೇರ್ ಕಿಟ್‌ಗಳನ್ನು ವಿತರಿಸಲಾಗಿದೆ. ಬಡವರಿಗೆ ಕೋವಿಡ್ ಕಿಟ್ ಜೊತೆಗೆ ದಿನಸಿ ವಸ್ತುಗಳನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚುವ ಕಾರ್ಯವನ್ನು ಪ್ರಾಜೆಕ್ಟ್ ಅಮೋಡ್ ವತಿಯಿಂದ ಮಾಡಲಾಗಿದೆ. ಗ್ರಾಮೀಣ ಮಹಿಳೆಯರಿಗೆ ಸ್ವಯಂಉದ್ಯೋಗ ತರಬೇತಿ, ಯುವಕರಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದೆ. ಯೋಗ ದಿನಾಚರಣೆಯಂದು ಯೋಗ ಶಿಬಿರ, ವಿಶ್ವ ಬಾಲ ಕಾರ್ಮಿಕ ದಿನಾಚರಣೆ ಸೇರಿದಂತೆ ವಿವಿಧ ದಿನಾಚರಣೆ ವೇಳೆ ಆಯಾ ದಿನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ, ಅಭಿಯಾನ ಹಮ್ಮಿಕೊಂಡು ಪ್ರಮೋದ್ ಜನತೆಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಜೆ.ಸಿ.ರಸ್ತೆಯ ಪುರಭವನದ ಬಳಿ ಆಯೋಜಿಸಿದ್ದ “ವೇರ್ ಹೆಲ್ಮೆಟ್ ವೇರ್ ಮಾಸ್ಕ್” ಅಭಿಯಾನ ಎಲ್ಲರ ಗಮನಸೆಳೆದಿತ್ತು.
ಬೆಂಗಳೂರು ನಗರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಪ್ರಮೋದ್ ಕಣ್ಮರೆಯಾಗುತ್ತಿರುವ ಕೆರೆಗಳ ಜೊತೆಗೆ ಅಂತರ್ಜಲ ಪರಿಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸುತ್ತಾರೆ. ಕೆರೆಗಳ ರಕ್ಷಣೆ, ಜಲ ಸಂರಕ್ಷಣೆ ಕುರಿತು ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸುತ್ತಾರೆ. ತಮ್ಮೊಂದಿಗಿರುವ ಸಮಾನ ಮನಸ್ಕ ತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಸಮಾಜಕ್ಕಾಗಿ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ದುಡಿಯುವ ಸದ್ಬಯಕೆ ವ್ಯಕ್ತಪಡಿಸುತ್ತಾರೆ.