2ಎ ಅಲುಗಾಡಿಸಿದರೆ ಕಲ್ಲೋಲ ಖಚಿತ
-ನೀರಕಲ್ಲು ಶಿವಕುಮಾರ್
ಕರ್ನಾಟಕದಲ್ಲಂತೂ ವಿಧಾನಸಭೆ ಚುನಾವಣೆಗಳು ಹತ್ತಿರಹತ್ತಿರವಾಗುತ್ತಿದ್ದಂತೆಯೇ ನೇತಾರರು ತಮ್ಮ ಬತ್ತಳಿಕೆಯ ಮೀಸಲು ಬಾಣಗಳನ್ನು ಹೊರತೆಗೆಯತೊಡಗುತ್ತಾರೆ. ಯಾವ ಬಾಣ ಪ್ರಯೋಗದಿಂದ ಯಾವ ಜಾತಿ ಮತಗಳು ಒಟ್ಟುಗೂಡಿಸಬಹುದು. ನಾವು ಬಳಸುವ ಅಸ್ತ್ರ ಎದುರು ಪಾಳೆಯಕ್ಕೆ ಎಷ್ಟು ನಷ್ಟ ಉಂಟು ಮಾಡಬಲ್ಲದು ಎಂಬ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿಯುತ್ತಾರೆ. ಈ ಸಲವೂ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಚಿತಾವಣೆಯಿಂದ ಮೀಸಲಾತಿ ಕೋಲಾಹಲ ಆರಂಭವಾಗಿದೆ.
ಭಾರತದಲ್ಲಿ ಮೀಸಲಾತಿ ವಿಚಾರವನ್ನು ಚುನಾವಣೆಯ ಅಸ್ತ್ರವಾಗಿ ಬಳಸುವ ವೋಟ್ ಬ್ಯಾಂಕ್ ತಂತ್ರಗಾರಿಕೆಗೆ ಅನೇಕ ದಶಕಗಳ ಇತಿಹಾಸವಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಮೀಸಲಾತಿ ವಿಚಾರಗಳು ಪ್ರಸ್ತಾಪವಾಗದೇ ಯಾವುದೇ ಚುನಾವಣೆ ನಡೆದೇ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಪ್ರತಿ ಚುನಾವಣೆಯಲ್ಲೂ ಜಾತಿ-ಜನಾಂಗಳ ಓಲೈಕೆಗೆ ಯಾವುದಾದರೊಂದು ಮೀಸಲಾತಿ ಬಾಣವನ್ನು ಹೂಡಲು ರಾಜಕಾರಣಿಗಳು ಸಿದ್ಧರಾಗುತ್ತಾರೆ. ಕೆಲವೊಮ್ಮೆ ಲಾಭವಾದರೆ ಇನ್ನೂ ಕೆಲ ಬಾರಿ ನಷ್ಟ ಅನುಭವಿಸುತ್ತಾರೆ.
ಕರ್ನಾಟಕದಲ್ಲಂತೂ ವಿಧಾನಸಭೆ ಚುನಾವಣೆಗಳು ಹತ್ತಿರಹತ್ತಿರವಾಗುತ್ತಿದ್ದಂತೆಯೇ ನೇತಾರರು ತಮ್ಮ ಬತ್ತಳಿಕೆಯ ಮೀಸಲು ಬಾಣಗಳನ್ನು ಹೊರತೆಗೆಯತೊಡಗುತ್ತಾರೆ. ಯಾವ ಬಾಣ ಪ್ರಯೋಗದಿಂದ ಯಾವ ಜಾತಿ ಮತಗಳು ಒಟ್ಟುಗೂಡಿಸಬಹುದು. ನಾವು ಬಳಸುವ ಅಸ್ತ್ರ ಎದುರು ಪಾಳೆಯಕ್ಕೆ ಎಷ್ಟು ನಷ್ಟ ಉಂಟು ಮಾಡಬಲ್ಲದು ಎಂಬ ಲೆಕ್ಕಾಚಾರದಲ್ಲಿ ಅಖಾಡಕ್ಕೆ ಇಳಿಯುತ್ತಾರೆ. ಈ ಸಲವೂ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳ ಚಿತಾವಣೆಯಿಂದ ಮೀಸಲಾತಿ ಕೋಲಾಹಲ ಆರಂಭವಾಗಿದೆ.

ಒಂದು ಕಡೆ ಪರಿಶಿಷ್ಠ ಪಂಗಡ (ಎಸ್ಟಿ) ಸಮಾಜದವರು ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಮುಂದಿಟ್ಟು ಸರ್ಕಾರದ ಮೇಲೆ ಒತ್ತಡ ಹೇರತೊಡಗಿದ್ದಾರೆ. ಪರಿಶಿಷ್ಠ ಜಾತಿ ನಡುವಿನ ಸದಾಶಿವ ಆಯೋಗ ವರದಿ ಜಾರಿ ಬೇಡಿಕೆಯೂ ಜೀವಂತವಾಗಿದೆ. ಕುರುಬರು ಎಸ್ಟಿ ಮೀಸಲಾತಿ ಕೇಳುತ್ತಿದ್ದಾರೆ. ಮಡಿವಾಳ ಜನಾಂಗ ಎಸ್ಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ ಮಾಡುತ್ತಿದೆ. ಈಡಿಗ ಸಮಾಜ ಪ್ರವರ್ಗ 1ಕ್ಕೆ ಸೇರಿಸುವಂತೆ ಪ್ರಸ್ತಾವನೆ ಇಡುತ್ತಿದೆ. ಮತ್ತೊಂದು ಕಡೆ ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡದ ಪಂಚಮಸಾಲಿಗಳು ಓಬಿಸಿ 2ಎ ಮೀಸಲಾತಿಗೆ ಬೇಡಿಕೆ ಇಡುತ್ತಿದ್ದಾರೆ. ವೀರಶೈವ ಸಮಾಜವನ್ನೇ 2ಎ ಪ್ರವರ್ಗಕ್ಕೆ ಸೇರಿಸಬೇಕೆಂಬ ಕೂಗು ಕೂಡಾ ಇದೆ.
ಈ ಬೇಡಿಕೆಗಳ ಈಡೇರಿಕೆ ಸಾಧ್ಯವೇ ಅನ್ನುವ ಪ್ರಶ್ನೆ ಹಾಕಿಕೊಂಡರೆ ಮೀಸಲಾತಿ ಹೆಚ್ಚಳ ಬೇಡಿಕೆಗಳ ಈಡೇರಿಕೆ ಸುಲಭವಲ್ಲ ಮತ್ತು ಅದು ಕೇಂದ್ರ ಸರ್ಕಾರದ ಒಪ್ಪಿಗೆಯಿಲ್ಲದೆ ಸಾಧ್ಯವೂ ಇಲ್ಲ ಎನ್ನುವ ವಾಸ್ತವ ಗೋಚರವಾಗುತ್ತದೆ. ಶೇ.50ರ ಮೀಸಲಾತಿ ಪರಿಮಿತಿಯನ್ನು ದಾಟಿ ತಮಿಳುನಾಡು ಹೊರತುಪಡಿಸಿ ಯಾವುದೇ ರಾಜ್ಯ ಸುಲಿಲಿತವಾಗಿ ಮೀಸಲು ಪ್ರಮಾಣ ಹೆಚ್ಚಿಸಲು ಸಾಧ್ಯವಾಗಿಲ್ಲ. ಸುಪ್ರೀಂಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50ಕ್ಕೆ ಮಿಗಿಲಾಗಿ ಮೀಸಲಾತಿಯನ್ನು ಯಾವುದೇ ರಾಜ್ಯ ನೀಡುವಂತಿಲ್ಲ ಎಂದು ಲಕ್ಷ್ಮಣರೇಖೆ ಎಳೆದಿರುವುದರಿಂದ ಅದನ್ನು ದಾಟಲು ರಾಜ್ಯ ಸರ್ಕಾರಗಳು ಅನೇಕ ಸಲ ಯತ್ನಿಸಿ ವಿಫಲವಾಗಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಮೇಲ್ವರ್ಗದ ಬಡವರಿಗೆ ಶೇ.10 ರಷ್ಟು ಮೀಸಲಾತಿ ಕೇಂದ್ರ ಸರ್ಕಾರದ ಮುತುವರ್ಜಿಯಿಂದ ಜಾರಿಯಾಗಿದ್ದು ರಾಜ್ಯಗಳ ಇತರೆ ಮೀಸಲು ಬೇಡಿಕೆಗಳನ್ನು ಕೇಂದ್ರ ಮನ್ನಣೆ ನೀಡಿ ಜೇನುಗೂಡಿಗೆ ಕೈಹಾಕುವ ಕೆಲಸಕ್ಕೆ ಹೋಗುವುದಿಲ್ಲ.
ಹೀಗಿರುವಾಗ ಮೀಸಲಾತಿ ಹೆಚ್ಚಳ ಪ್ರಸ್ತಾಪಕ್ಕ್ಕೆ ಹೋಗದೆ ಓಬಿಸಿಯಲ್ಲಿ ಹೆಚ್ಚು ಮೀಸಲು ಪಾಲು ಪಡೆಯುವ ಶಾಣ್ಯಾತನಕ್ಕೆ ಕೆಲ ಸಮುದಾಯಗಳು ಮುಂದಾಗಿವೆ. ಅದರ ಫಲವೇ ಪಂಚಮಸಾಲಿಗಳು ಮತ್ತು ಕುರುಬ ಸಮುದಾಯದ ಹೆಚ್ಚು ಮೀಸಲು ಇರುವ ಪ್ರವರ್ಗದ ಗುಂಪಿಗೆ ಸೇರುವ ಬಯಕೆ. ಮಡಿವಾಳ, ಈಡಿಗ ಇತರ ಸಮಾಜಗಳ ಮೀಸಲು ಗುಂಪು ಬದಲಾವಣೆ ಬೇಡಿಕೆ.

ಈ ಪೈಕಿ ಈಗ ಹೆಚ್ಚು ಸುದ್ದಿಯಲ್ಲಿರುವುದು ಪಂಚಮಸಾಲಿಗಳ 2ಎ ಬೇಡಿಕೆ. ಶೇ.15 ರಷ್ಟು ಪ್ರಮಾಣದ ಇಡುಗಂಟು ಉಳ್ಳ 102 ಅತಿ ಹಿಂದುಳಿದ ಸಮುದಾಯಗಳಿರುವ ಗುಂಪು ಸೇರಿದರೆ ಸಹಜವಾಗಿಯೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಬಲಿಷ್ಠವಾಗಿರುವ ನಮಗೆ ಆ ಗುಂಪಿನ ಅತಿಹೆಚ್ಚು ಪಾಲು ದಕ್ಕಿಸಿಕೊಳ್ಳುವುದು ಸುಲಭ ಎಂಬ ಲೆಕ್ಕಾಚಾರ ಪಂಚಮಸಾಲಿಗಳಲ್ಲಿ ಮೊಳೆತಿರಬಹುದು. ಆ ಜನಾಂಗದ ನೇತಾರರು ರಾಜಕೀಯ ಕಾರಣಕ್ಕಾಗಿ ಈ ಬಯಕೆಗೆ ನೀರೆರದು ಪೋಷಿಸಿ ಮಠಾಧೀಶರಿಗೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ವಹಿಸಿರಬಹುದು. ಅದೇನೆ ಇರಲಿ. ಯಾವುದೇ ಸಮಾಜ ತನ್ನ ಹಿತಾಸಕ್ತಿ ವಿಚಾರ ಬಂದಾಗ ಇಂತದ್ದೆನ್ನಲ್ಲ ಮಾಡುವುದು ಸಹಜ. ಆದರೆ ರಾಜ್ಯ ಸರ್ಕಾರ ಪ್ರಬಲ ಸಮುದಾಯ ಎಂಬ ಕಾರಣಕ್ಕೆ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವುದು ನೋಡಿದರೆ ಅತಿ ಹಿಂದುಳಿದ ಸಮಾಜಗಳ ಬಗ್ಗೆ ಆಳುವವರಿಗೆ ಕಾಳಜಿಯಿಲ್ಲವೇ? ಸಾಮಾಜಿಕ ನ್ಯಾಯವನ್ನು ಕಟ್ಟಕಡೆಯ ಜಾತಿ ಜನಾಂಗಕ್ಕೂ ತಲುಪಿಸಬೇಕೆಂಬ ಬದ್ಧತೆಯಿಲ್ಲವೇ, ಜನಸಂಖ್ಯೆ ಹಾಗೂ ಪ್ರಭಾವದಲ್ಲಿ ಪ್ರಬಲವಾಗಿರುವ ಸಮುದಾಯಗಳ ಮತಬ್ಯಾಂಕ್ ರಾಜಕಾರಣದ ಸಹವಾಸಕ್ಕೆ ಹಿಂದುಳಿದವರಿಗೆ ಮೋಸ ಮಾಡಲಾಗುತ್ತಿದೆಯಲ್ಲವೇ ಎಂಬ ಪ್ರಶ್ನೆಗಳು ಏಳುತ್ತವೆ. ಬಲಿತವರ ಕಪಿಮುಷ್ಠಿಯಲ್ಲಿ ಮೀಸಲಾತಿ ಬಂಧಿಯಾಗಿದೆ ಎಂಬ ಮಾತು ಸತ್ಯ ಅನಿಸುತ್ತದೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಜಾರಿಗೆ ತಂದಿದ್ದೇ ಉಸಿರಿಲ್ಲದ ಸಮಾಜಗಳಿಗೆ ಶಕ್ತಿ ತುಂಬಲು. ಹೀಗಿರುವಾಗ ಅಶಕ್ತ ಸಮುದಾಯಗಳ ಪಾಲು ಕಸಿಯಲು ಸರ್ಕಾರಗಳೇ ಪ್ರೋತ್ಸಾಹ ಕೊಡುವ ರೀತಿಯ ಧೋರಣೆ ತಾಳುವುದು ಎಷ್ಟು ಸರಿ ಅನಿಸುತ್ತದೆ.

ಪ್ರವರ್ಗ 2ಎ ಪಟ್ಟಿಯಲ್ಲಿರುವ 102 ಜಾತಿಗಳ ಪೈಕಿ ಬೆರಣಿಕೆಯಷ್ಟು ಸಮುದಾಯಗಳು ಬಿಟ್ಟು ಇತರೆ ಯಾವುದೇ ಸಮುದಾಯ ಈವರೆಗೂ ನ್ಯಾಯಬದ್ಧ ಹಕ್ಕು ಪಡೆದುಕೊಂಡಿಲ್ಲ. ಅನೇಕ ಸಣ್ಣ ಅತಿ ಸಣ್ಣ ಸಮುದಾಯಗಳು ಇಂದಿಗೂ ನಿಕೃಷ್ಣ ಸ್ಥಿತಿಯಲ್ಲಿ ಬದುಕುತ್ತಿವೆ. ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕವಾಗಿ ಸುಧಾರಣೆಯಾಗದೆ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿವೆ. ಕುಂಬಾರ, ಮಡಿವಾಳ, ಸವಿತಾ, ಗಾಣಿಗ, ಹಳೆಪೈಕ, ದೇವಾಂಗ ಇಂತಹ ಸಮಾಜಗಳಲ್ಲದೆ ಕ್ಷತ್ರಿಯ ಸಮುದಾಯದ ರಾಮ ಕ್ಷತ್ರಿಯ, ಕೋಟೆ ಕ್ಷತ್ರಿಯ, ಸೋಮವಂಶ ಕ್ಷತ್ರಿಯ, ರಾಜುಕ್ಷತ್ರಿಯ, ಕುಮಾರಕ್ಷತ್ರಿಯ, ಕುಮಾರ ಪಂತ್‌ಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ, ಭಾವಸಾರ ಕ್ಷತ್ರಿಯ, ವಹ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ತಿಗಳ, ನಯನಜ ಕ್ಷತ್ರಿಯ ಹೀಗೆ ಅನೇಕ ಜಾತಿಗಳು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿವೆ. ಪಂಚಮಸಾಲಿಗಳನ್ನು ಮತ್ತು ಲಿಂಗಾಯತರನ್ನು ಪ್ರವರ್ಗ 2ಎಗೆ ಸೇರಿಸಿದರೆ ಈ ಸಮುದಾಯಗಳಿಗೆ ಮೀಸಲಾತಿ ಬಾಗಿಲು ಸಂಪೂರ್ಣ ಮುಚ್ಚಿ ಹೋಗುತ್ತದೆ.
ಹೀಗಾಗಿ ರಾಜ್ಯ ಸರ್ಕಾರ ಅತಿ ಹಿಂದುಳಿದ ಸಮುದಾಯದ ಮೀಸಲು ಪಾಲಿಗೆ ಬಲಾಢ್ಯರು ಕೈ ಹಚ್ಚದಂತೆ ನೋಡಿಕೊಳ್ಳಬೇಕು. ಪ್ರಬಲ ಸಮುದಾಯ 2ಎ ಪಟ್ಟಿಯಲ್ಲಿರುವ ನಮ್ಮ ಪಾಲನ್ನು ಕಬಳಿಸಲು ಬಂದರೆ ನಾವೆಲ್ಲಿ ಹೋಗಬೇಕು? ಪರ್ಯಾಯ ವ್ಯವಸ್ಥೆ ಆಗದೆ ಬಲಿಷ್ಠ ಸಮಾಜವನ್ನು ದುರ್ಬಲ ಸಮುದಾಯಗಳ ನಡುವೆ ತಂದು ಬಿಟ್ಟರೆ ನಾವು ಉಳಿಯುವುದು ಸಾಧ್ಯವೇ? ಎಂಬ ಅಶಕ್ತ ಸಮಾಜಗಳ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. 2ಎ ಪಟ್ಟಿಯಲ್ಲಿರುವ ಕೆನೆಪದರ ಜಾತಿಗಳನ್ನು ತೆಗೆದು ಆಚೆ ಬಿಟ್ಟು ಅಲ್ಲಿರುವ ಸಣ್ಣ ಅತಿಸಣ್ಣ ಜಾತಿಗಳಿಗೂ ಶೇ.15ರ ಮೀಸಲಾತಿ ಪಾಲು ದೊರೆಯುವಂತೆ ನೋಡಿಕೊಳ್ಳಬೇಕು. ಪ್ರವರ್ಗಗಳನ್ನು ಬದಲಿಸಿ ಮೀಸಲಾತಿ ಬೆಂಕಿಗೆ ತುಪ್ಪ ಸುರಿಯುವ ಕಾರ್ಯ ಮಾಡಬಾರದು. ಓಬಿಸಿಗೆ ಅಳವಡಿಸಿರುವ ಕೆನೆಪದರವನ್ನು ಭದ್ರಪಡಿಸಿ 8 ಲಕ್ಷದ ಆದಾಯ ಮಿತಿ ಇಳಿಸಿ ಎಲ್ಲಾ ಸಮುದಾಯಗಳ ತಳಹಂತಕ್ಕೆ ಮೀಸಲಾತಿ ಸಮರ್ಪಕವಾಗಿ ಹರಿಯುವಂತೆ ನೋಡಿಕೊಳ್ಳಬೇಕು.
ರಾಜಕೀಯ ಮೀಸಲಾತಿ ಅವಶ್ಯ
ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಅನೇಕ ಧ್ವನಿ ಇಲ್ಲದ ಸಮಾಜಗಳಿಗೆ ಕೆಳಮಟ್ಟದಲ್ಲಿ ರಾಜಕೀಯ ಧ್ವನಿ ಬಂದಿದೆ. ಇದನ್ನು ಮೇಲ್ಮಟ್ಟದಲ್ಲೂ ಜಾರಿಗೊಳಿಸುವ ಬಗ್ಗೆ ಹಿಂದುಳಿದವರ ಪರ ನೈಜ ಕಾಳಜಿ ಇರುವವರು ಧ್ವನಿ ಎತ್ತಬೇಕು. ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳಲ್ಲಿ ಸಾಂವಿಧಾನಿಕವಾಗಿ ಎಸ್ಸಿ/ಎಸ್ಟಿ ಮೀಸಲಾತಿ ಈಗಾಗಲೇ ಜಾರಿಯಲ್ಲಿದ್ದು ಓಬಿಸಿ ಮೀಸಲಾತಿ ಅಲ್ಲಿ ಜಾರಿಗೊಳಿಸುವ ಕೆಲಸ ಆಗಬೇಕು. ಇದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಂಸತ್‌ನಲ್ಲಿ ಆಗಬೇಕಾದ ನಿರ್ಣಯವಾದರೂ ತಥಾಕಥಿತ ಓಬಿಸಿ ನೇತಾರರು ಈ ಬಗ್ಗೆ ಚರ್ಚೆಯನ್ನೂ ಮಾಡದಿರುವುದು ವಿಷಾದಕರ. ಇನ್ನೂ ಕರ್ನಾಟಕದ ಸಹಕಾರಿ ಕ್ಷೇತ್ರದಲ್ಲೂ ಮೀಸಲಾತಿ ಇಲ್ಲ. ಅಲ್ಲಿಯೂ ಓಬಿಸಿ ಮೀಸಲಾತಿ ಜಾರಿ ಕ್ರಮ ಆಗಬೇಕು.
2ಎ ಮೀಸಲಾತಿ ಮುಟ್ಟಿದರೆ ಈಡಿಗ ಸಮುದಾಯ ಸುಮ್ಮನಿರಲ್ಲ: ಪ್ರಣವಾನಂದ ಶ್ರೀ
ಹಿಂದುಳಿದ ವರ್ಗಗಳು ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯದಿಂದ ವಂಚಿತವಾಗಿವೆ. ಮುಂದುವರೆದ ಸಮಾಜಗಳ ಪಾರುಪತ್ಯ ನಡೆಯುತ್ತಿದೆ. ಅತಿ ಹಿಂದುಳಿದ ಸಮಾಜಗಳಂತೂ ಅನಾಥ ಸ್ಥಿತಿಯಲ್ಲಿವೆ. ಹಿಂದುಳಿದವರು ಹಿಂದುಳಿದಿದ್ದೇವೆ. ಮುಂದುವರೆದ ಸಮಾಜಗಳು ಮುಂದುವರೆಯುತ್ತಲೇ ಇವೆ. ಆ ಸಮುದಾಯಗಳಿಗೆ ಸರ್ಕಾರಗಳು ಭರಪೂರ ಕೊಡುಗೆಗಳನ್ನು ನೀಡುತ್ತಿವೆ. ಚುನಾವಣೆ ಹತ್ತಿರವಿರುವಾಗ ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2ಎ ಗೆ ಸೇರಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೂ ಬಹಿರಂಗವಾಗಿಯೇ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಸಿಗಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಒಳಪಂಗಡಗಳನ್ನು ತಂದು 2ಎಗೆ ಸೇರಿಸಿದರೆ ನಾವು ಎಲ್ಲಿಗೆ ಹೋಗಬೇಕು? ನಮ್ಮ ಸಮಾಜಗಳು ದುರ್ಬಲ ಎಂಬ ಕಾರಣಕ್ಕೆ ಮೀಸಲಾತಿ ಕಸಿಯಲು ಬರುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಚುನಾವಣೆ ಎಂಬ ಕಾರಣಕ್ಕೆ ಮೀಸಲಾತಿ ಕೋಲಾಹಲ ಎಬ್ಬಿಸಿ ರಾಜಕೀಯ ಲಾಭ ಪಡೆಯುವ ಯತ್ನಗಳು ಬೇಡ. ನಮ್ಮ ಈಡಿಗ-ಬಿಲ್ಲವ ಸಮುದಾಯ ಸೇರಿ 2ಎ ಪ್ರವರ್ಗದಲ್ಲಿ 102ಕ್ಕೂ ಹೆಚ್ಚು ಜಾತಿ, ಉಪಜಾತಿಗಳಿವೆ. ನಮ್ಮ ಹಕ್ಕುಗಳನ್ನು ದಮನ ಮಾಡಲು ಬಂದರೆ ಸುಮ್ಮನಿರುವುದಿಲ್ಲ.

ಈಗಾಗಲೇ ಈಡಿಗ ಸಮುದಾಯವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಂಡು ಸಮಾಜದ ಯಾವುದೇ ಬೇಡಿಕೆಗೆ ಸ್ಪಂದಿಸದೆ ವಂಚಿಸುತ್ತಿದೆ. ಈಡಿಗರ ಅಭಿವೃದ್ಧಿಗೆ ನಾರಾಯಣ ಗುರು ನಿಗಮ ಸ್ಥಾಪಿಸಿಬೇಕೆಂಬ ನಮ್ಮ ಬಹುದಿನಗಳ ಒತ್ತಾಯಕ್ಕೆ ಸರ್ಕಾರ ಕಿವುಡಾಗಿದೆ. ಶೇಂದಿ ಇಳಿಸುವುದು ಮಾರುವ ಕುಲಕಸುಬಿಗೆ ನಿಷೇಧ ಹೇರಿ 18 ವರ್ಷಗಳಾಗಿವೆ. ಈಡಿಗ ಯುವಕರಿಗೆ ಪರ್ಯಾಯ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡಿಲ್ಲ. ಬಾರ್ ಲೈಸೆನ್ಸ್ ನೀಡುವಾಗ ಆದ್ಯತೆ ನೀಡಬೇಕೆಂಬ ಆಗ್ರಹಕ್ಕೂ ಕಿಮ್ಮತ್ತು ಸಿಕ್ಕಿಲ್ಲ. ದಕ್ಷಿಣ ಕನ್ನಡ, ಶಿವಮೊಗ್ಗ, ಕಲಬುರಗಿ ಜಿಲ್ಲೆ ಸೇರಿ ೩೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಜನಸಂಖ್ಯಾ ಪ್ರಾಬಲ್ಯವನ್ನು ಹೊಂದಿದ್ದೇವೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಜಾತಿಬಲ ನಮ್ಮದಿದೆ. ಈಗಲಾದರೂ ಸರ್ಕಾರ ಈಡಿಗ ಸಮಾಜದ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೇವೆ. ನಮ್ಮ ಸಮುದಾಯದ 7 ಜನ ಶಾಸಕರು, ಇಬ್ಬರು ಮಂತ್ರಿಗಳಿದ್ದರೂ ಅವರಿಗೆ ಮೇಲ್ವರ್ಗಗಳ ಜನಪ್ರತಿನಿಧಿಗಳಂತೆ ಸ್ವಜಾತಿ ಕಲ್ಯಾಣದ ಇಚ್ಛಾಶಕ್ತಿ ಇಲ್ಲ. ಹೀಗಾಗಿ ಈಡಿಗ ಸಮುದಾಯ ದುರ್ಬಲಗೊಂಡಿದೆ. ರಾಜಕಾರಣಿಗಳನ್ನು ನಂಬಿ ಕೂರದೆ ಸಮಾಜ ಎದ್ದುನಿಲ್ಲಬೇಕಾದ ಸಂದರ್ಭ ಈಗ ಬಂದಿದೆ. ನವೆಂಬರ್ ವೇಳೆಗೆ ಮಂಗಳೂರಿನ ಕುದ್ರೋಳಿ ದೇಗುಲದಿಂದ ಬೆಂಗಳೂರಿನ ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಶಕ್ತಿ ಪ್ರದರ್ಶನ ನಡೆಸಲು ಸಜ್ಜಾಗುತ್ತಿದ್ದೇವೆ. ಲಿಂಗಾಯತ ಒಳಪಂಗಡಗಳನ್ನು 2ಎಗೆ ಸೇರಿಸಲು ನಮ್ಮ ಪ್ರಬಲ ವಿರೋಧವಿದೆ. ಈಗಾಗಲೇ ಅದು ಕೆನೆಪದರ ಸಮುದಾಯವಾಗಿದ್ದು ನಿಗಮ, ಮಠ ಮಾನ್ಯಗಳು, ಅನುಭವ ಮಂಟಪ ಹೀಗೆ ಎಲ್ಲದಕ್ಕೂ ಸಾವಿರಾರು ಕೋಟಿ ಹಣ ನೀಡಲಾಗಿದೆ. ಮೇಲ್ವರ್ಗವಾಗಿರುವ ಆ ಸಮುದಾಯವನ್ನು 2ಎ ಗೆ ಸೇರಿಸುವುದಾದರೆ ನಮ್ಮನ್ನು ಪ್ರವರ್ಗ-1ಕ್ಕೆ ಸೇರಿಸಬೇಕು. ಇಲ್ಲವೇ 2ಎ ಮೀಸಲು ಸುದ್ದಿಗೆ ಬರ ಬಾರದು.
– ಶ್ರೀ ಪ್ರಣವಾನಂದ ಸ್ವಾಮೀಜಿ
ಅಧ್ಯಕ್ಷರು, ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿ
ದುರ್ಬಲ ಸಮಾಜಗಳ 2ಎ ಮೀಸಲು ಬಲಾಢ್ಯರ ವಶವಾದರೆ ಗತಿಯೇನು?
ಪಂಚಮಸಾಲಿಗಳು ಸೇರಿ ವೀರಶೈವ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಇದು ಅತಿಹಿಂದುಳಿದ ವರ್ಗಗಳಿಗೆ ಮಾಡುವ ಘೋರ ಅನ್ಯಾಯವಾಗಿದೆ. ಆ ಸಮುದಾಯಕ್ಕೆ ಶೇ.15 ರಷ್ಟು ಮೀಸಲಾತಿ ದೊರಕಿಸಿಕೊಡಲು ಹೊರಟರೆ ಪ್ರಸ್ತುತ ಪ್ರವರ್ಗ 2ಎ ಪಟ್ಟಿಯಲ್ಲಿರುವ 102ಕ್ಕೂ ಹೆಚ್ಚು ಜಾತಿಗಳು ಮೀಸಲಾತಿಯಿಂದ ವಂಚಿತವಾಗುತ್ತವೆ. ಬಲಿಷ್ಠ ಸಮಾಜಕ್ಕೆ ಪೂರ್ತಿ ಮೀಸಲಾತಿ ಸವಲತ್ತು ದೊರೆತು ಸಣ್ಣ ಅತಿಸಣ್ಣ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಮೀಸಲಾತಿಯ ಸಾಂವಿಧಾನಿಕ ಆಶಯವೇ ಮಣ್ಣು ಪಾಲಾಗಲಿದೆ. ಲಿಂಗಾಯತ ಸಮುದಾಯ ಬೇಡಿಕೆ ಇಡುವುದು ತಪ್ಪಲ್ಲ ಆದರೆ ಅತಿ ಹಿಂದುಳಿದ ಸಮಾಜಗಳನ್ನು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಪ್ರಬಲಗೊಳಿಸಿ ಮೇಲೆತ್ತುವ ಕಾರ್ಯವನ್ನು ಸರ್ಕಾರ ಮಾಡಬೇಕು.

ಪಂಚಮಸಾಲಿ ಸೇರಿ ವೀರಶೈವ ಲಿಂಗಾಯತ ಸಮುದಾಯ ಮತ್ತು ಅದರೊಳಗಿನ ಉಪಜಾತಿಗಳನ್ನು 2ಎ ಪಟ್ಟಿಗೆ ಸೇರ್ಪಡೆ ಮಾಡಿದರೆ ಪ್ರವರ್ಗ 2ಎ ಮೀಸಲಾತಿ ಪಟ್ಟಿಯಲ್ಲಿರುವ ಕ್ಷತ್ರಿಯ ಜನಾಂಗ ಮತ್ತು ನಮ್ಮ ಉಪಜಾತಿಗಳು ಸೇರಿ ಅತಿ ಹಿಂದುಳಿದ ೧೦2ಕ್ಕೂ ಹೆಚ್ಚು ಜಾತಿಗಳಿಗೆ ಅನ್ಯಾಯವಾಗುತ್ತದೆ. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದ್ದು ನಾವು ಸಹಿಸಲು ಸಾಧ್ಯವಿಲ್ಲ.
ವೀರಶೈವ-ಲಿಂಗಾಯತ-ಪಂಚಮಸಾಲಿ ಸಮುದಾಯ ಒಂದೇ ಜಾತಿಯಾಗಿ ಗುರುತಿಸಿಕೊಂಡಿರುವುದು ಮತ್ತು ರಾಜ್ಯದ ರಾಜಕೀಯ, ಶಿಕ್ಷಣ, ಉದ್ಯಮ ಎಲ್ಲಾ ವಲಯದಲ್ಲಿ ಪ್ರಬಲವಾಗಿ ಬೆಳೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಲಿಂಗಾಯತ ಸಮುದಾಯವೇ ಬಹುತೇಕ ರಾಜ್ಯ ರಾಜಕಾರಣವನ್ನು ನಿಯಂತ್ರಿಸುತ್ತ ಬಂದಿದೆ. ಶೇ.50ಕ್ಕೂ ಹೆಚ್ಚು ರಾಜಕೀಯ ಪಾಲು ಈ ಸಮುದಾಯ ಪಡೆದಿದೆ. ಹತ್ತಾರು ಮಠಗಳು ಸರ್ಕಾರದಿಂದ ದೊಡ್ಡ ಪ್ರಯೋಜನ ಪಡೆಯುತ್ತಾ ಬಂದಿವೆ. ಪ್ರತಿ ವರ್ಷ ಈಗಲೂ ನೂರಾರು ಕೋಟಿ ಅನುದಾನ ಪಡೆಯುತ್ತಿವೆ. ಅವರ ಪಾಲು ಪಡೆದರೆ ನಮ್ಮ ಅಭ್ಯಂತರವಿಲ್ಲ. ಆದರೆ ದುರ್ಬಲರನ್ನು ನಿರ್ಲಕ್ಷಿಸಿ ಬಲಿತವರಿಗೇ ಪ್ರಾಧಾನ್ಯತೆ ನೀಡುವುದು ಸರಿಯಲ್ಲ.
ಇದನ್ನು ಒಪ್ಪಲು ಎಂದಿಗೂ ಸಾಧ್ಯವಿಲ್ಲ. ನಮ್ಮ ವಿರೋಧ ಲೆಕ್ಕಿಸದೇ 2ಎ ಮೀಸಲಾತಿ ಅಲುಗಾಡಿಸಲು ಬಂದರೆ ರಾಜ್ಯಾದ್ಯಂತ ಕ್ಷತ್ರಿಯ ಸಮಾಜ ಹೋರಾಟ ಕೈಗೆತ್ತಿಕೊಳ್ಳಲಿದೆ.
–ಉದಯ್ ಸಿಂಗ್
ರಾಜ್ಯಾಧ್ಯಕ್ಷರು, ಕರ್ನಾಟಕ ಕ್ಷತ್ರಿಯ ಒಕ್ಕೂಟ
ಮಡಿವಾಳರನ್ನು ಎಸ್ಸಿ ಪಟ್ಟಿಗೆ ಸೇರಿಸಲಿ: ಎನ್.ಶಂಕರಪ್ಪ
ಲಿಂಗಾಯತರು ಹಿಂದುಳಿದವರಲ್ಲ. ಆ ಸಮಾಜ ರಾಜ್ಯದ ಅತಿ ಮುಂದುವರೆದ ಶ್ರೀಮಂತ ಸಮುದಾಯವಾಗಿದೆ. ವೀರಶೈವ ಲಿಂಗಾಯತ ಸಮುದಾಯದ ಯಾವುದೇ ಉಪಪಂಗಡಗಳನ್ನು ಅತಿ ಹಿಂದುಳಿದ ಜಾತಿಗಳಿಂದ ತುಂಬಿರುವ 2ಎ ಪ್ರವರ್ಗಕ್ಕೆ ಸೇರಿಸುವುದು ಸಮಂಜಸವಲ್ಲ. ಚುನಾವಣೆ ಹತ್ತಿರ ಬಂದಿದೆ ಎಂಬ ಕಾರಣಕ್ಕೆ ಪಂಚಮಸಾಲಿಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿಕೊಂಡರೆ ಮಾಡಿಕೊಳ್ಳಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮೀಸಲಾತಿ ನಾಟಕಗಳು ಚುನಾವಣೆ ಬಂದ ಕೂಡಲೇ ಆರಂಭವಾಗುತ್ತವೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ನನಗೆ ಮೀಸಲು ಬದಲಿಸುವ ಕೆಲಸ ಸುಲಭ ಸಾಧ್ಯವಲ್ಲ ಎಂಬುದು ಗೊತ್ತಿದೆ. ಶೇ.50 ಮೀರಿ ಮೀಸಲಾತಿ ನೀಡುವುದು ಕಾನೂನಾತ್ಮಕವಾಗಿ ಆಗುವ ಕೆಲಸವಲ್ಲ.

ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಲಿಂಗಾಯತ ಸಮುದಾಯಗಳು ಶೇ.15ರಷ್ಟು ಮೀಸಲಾತಿ ಇರುವ 2ಎ ಪ್ರವರ್ಗ ಸೇರಲು ಪ್ರಯತ್ನಿಸುತ್ತಿರಬಹುದು. ಅದು ಕೂಡಾ ಕಾರ್ಯಸಾಧುವಲ್ಲ. ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಅವೈಜ್ಞಾನಿಕ ವರದಿ ತೆಗೆದುಕೊಂಡು 2ಎಗೆ ಸೇರಿಸಲು ಪ್ರಯತ್ನಿಸಿದರೆ ಮಡಿವಾಳ ಜನಾಂಗ ಕೈ ಕಟ್ಟಿ ಕೂರುವುದಿಲ್ಲ. ನಮ್ಮನ್ನು ಎಸ್ಸಿ ಪಟ್ಟಿಗೆ ಸೇರಿಸಿ ಎಂದು ಒಂದು ದ ಶಕದಿಂದ ಒತ್ತಾಯಿಸುತ್ತಿದ್ದೇವೆ. ಅದಕ್ಕೆ ಈವರೆಗೂ ಮನ್ನಣೆ ಸಿಕ್ಕಿಲ್ಲ. ಮಡಿವಾಳ ಸಮುದಾಯ ಇಂದಿಗೂ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ರೀತಿ ಕನಿಷ್ಠ ಎಂಬ ಭಾವನೆಯನ್ನು ಎದುರಿಸುತ್ತಾ ಬದುಕುತ್ತಿದೆ. ಮಡಿವಾಳರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತದೆ. ದೇಶದ 18 ರಾಜ್ಯಗಳಲ್ಲಿ ಮಡಿವಾಳರನ್ನು ಎಸ್ಸಿ ಪಟ್ಟಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರ ನಮಗೆ ಮೀಸಲಾತಿ ಹಕ್ಕು ಸಮರ್ಪಕವಾಗಿ ಸಿಕ್ಕಿಲ್ಲ. ಹಿಂದೆ ಸರ್ಕಾರದಿಂದ ಮಡಿವಾಳ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆದು ನಮ್ಮ ಸಮಾಜ ಎಷ್ಟು ನಿಕೃಷ್ಟವಾಗಿ ಬದುಕುತ್ತಿದೆ ಎಂಬುದರ ಬಗ್ಗೆ ಸಮಗ್ರ ವರದಿ ತಯಾರಿಸಲಾಗಿದೆ. ಆದರೂ ಈ ವರೆಗೂ ಬೇಡಿಕೆ ಈಡೇರಿಲ್ಲ. ಈಗ ನೋಡಿದರೆ ಬಲಾಢ್ಯ ಜಾತಿಯನ್ನು 2ಎಗೆ ಸೇರಿಸಿ ಮೀಸಲಾತಿ ಕಸಿಯುವ ಪ್ರಯತ್ನಗಳು ನಡೆಯುತ್ತಿವೆ. 2ಎ ಪ್ರವರ್ಗದಲ್ಲಿರುವ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವುದಾದರೆ ಸೇರಿಸಲಿ. ಅದರಿಂದ ಉಳಿದ 101 ಅತಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಮೀಸಲು ಲಾಭ ದೊರೆಯುತ್ತದೆ. ಆದರೆ ಲಿಂಗಾಯತರನ್ನು ನಮ್ಮ ಗುಂಪಿಗೆ ಸೇರಿಸುವ ಕುರಿತು ಚಿಂತನೆಯನ್ನೂ ಮಾಡಬಾರದು.
–ಎನ್.ಶಂಕರಪ್ಪ
ಮಾಜಿ ವಿಧಾನಪರಿಷತ್ ಸದಸ್ಯರು,
ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ