ನಿತೀಶ್ ಮೈತ್ರಿಕೂಟ ಬದಲಾವಣೆ ಹಿಂದೆ ರಕ್ಷಣೆಯ ತಂತ್ರ!
-ಜೋಷಿ
ಬಿಜೆಪಿ ದೇಶದ ಪ್ರಾದೇಶಿಕ ಪಕ್ಷಗಳನ್ನು ಒಡೆದು ವಿವಿಧ ರಾಜ್ಯಗಳಲ್ಲಿ ಬೇರು ಬಿಡಲು ಹೊರಟಿದೆ. ನಮಗೆ ಕಾಂಗ್ರೆಸ್ ಪ್ರತಿಸ್ಪರ್ಧಿಯಲ್ಲ. ಪ್ರಾದೇಶಿಕ ಪಕ್ಷಗಳು ಮಾತ್ರ 2024ಕ್ಕೆ ನಮಗೆ ಸೆಡ್ಡು ಒಡೆಯುವ ಸಾಮರ್ಥ್ಯ ಹೊಂದಿವೆ ಎಂಬ ಕಾರಣಕ್ಕೆ ಮೋದಿ-ಅಮಿತ್ ಷಾ ಹೊಸ ಆಟ ಶುರು ಮಾಡಿದ್ದಾರೆ ಎಂಬುದು ನಿತೀಶ್‌ರಂತಹ ನಾಯಕರ ಅನುಮಾನವಾಗಿದೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಆರ್‌ಸಿಪಿ ಸಿಂಗ್ ಅವರನ್ನು ನಿತೀಶ್ ವಿರುದ್ಧ ಎತ್ತಿಕಟ್ಟಿದ ಕಾರ್ಯತಂತ್ರ, ತಮಿಳುನಾಡಿನ ಡಿಎಂಕೆಯಲ್ಲಿ ಒಬ್ಬ ಏಕ್‌ನಾಥ್ ಶಿಂಧೆ ತಯಾರಾಗುತ್ತಿದ್ದಾನೆ ಎಂಬ ಬಿಜೆಪಿ ನಾಯಕರ ಬಹಿರಂಗ ಹೇಳಿಕೆಗಳನ್ನು ಎಲ್ಲರೂ ಸೂಕ್ಷ್ಮವಾಗಿ ಗಮನಿಸಿದ್ದಾರೆ. ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಸೇರಿ ಎಲ್ಲೆಲ್ಲಿ ನಾವು ಪ್ರಬಲವಿದ್ದೇವೋ ಅಲ್ಲೆಲ್ಲ ನಮ್ಮ ವಿರುದ್ಧ ನಮ್ಮವರನ್ನೇ ಎತ್ತಿಕಟ್ಟುವ ಕುತಂತ್ರವನ್ನು ಮಾಡಲಾಗುತ್ತಿದೆ ಎಂಬ ಭಾವನೆ ಪ್ರಾದೇಶಿಕ ಪಕ್ಷಗಳ ನಾಯಕರಲ್ಲಿ ಮೂಡಿದೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರರಾವ್ ಈ ಬಗ್ಗೆ ಇತ್ತೀಚೆಗೆ ಸ್ಪಷ್ಟ ಮಾತುಗಳಲ್ಲಿ ಹೇಳಿಕೊಂಡಿದ್ದರು. ಅವರ ಮಾತೇ ಬಹುತೇಕ ದೇಶದಲ್ಲಿ ಅಧಿಕಾರದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರ ನಿಲುವಾಗಿದೆ. ಇದು ಬಿಜೆಪಿ ಆಡುವ ಆಟಗಳಿಗೂ ತಾಳೆಯಾಗುತ್ತಿರುವುದರಿಂದ ಎಲ್ಲಾ ನಾಯಕರು ಉದ್ಧವ್ ಠಾಕ್ರೆಯಂತೆ ನಾವು ಯಮಾರಬಾರದು ಎಂದು ನಿರ್ಧರಿಸಿಬಿಟ್ಟಿದ್ದಾರೆ. ಈಗ ನಿತೀಶ್‌ಕುಮಾರ್ ಬಿಜೆಪಿ ಸಖ್ಯ ತೊರೆದು ತಾವು ಸೇಫ್ ಆಗಲು ಹೊರಟಿದ್ದಾರೆ. ಮಮತಾ ಬ್ಯಾನರ್ಜಿ ನೀಡಿದ ಎಚ್ಚರಿಕೆಯ ಸಂದೇಶವೂ ನಿತೀಶ್ ಇಷ್ಟು ಬೇಗ ಹುಶಾರಿ ಆಗಲು ಕಾರಣ ಎನ್ನಲಾಗುತ್ತಿದೆ.

ಮಹಾರಾಷ್ಟ್ರದಲ್ಲಿ `ಆಘಾಡಿ’ ಸರ್ಕಾರವನ್ನು ಉರುಳಿಸಿ ಉದ್ಧವ್‌ಠಾಕ್ರೆಯನ್ನು ಮನೆಗೆ ಕಳುಹಿಸಿದ ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಒಡೆದು ಅಧಿಕಾರ ಹಿಡಿಯುವ ಹೊಸ ಪ್ರಯೋಗಕ್ಕೆ ಚಾಲನೆ ನೀಡಿತ್ತು. ಈ ಪ್ರಯೋಗ ಈಗ ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಪ್ರತಿ ಪ್ರಾದೇಶಿಕ ಪಕ್ಷದಲ್ಲೂ ಒಬ್ಬೊಬ್ಬ ಏಕನಾಥ್ ಶಿಂಧೆಯನ್ನು ಹುಟ್ಟುಹಾಕಿ ಬಂಡಾಯದ ಮೂಲಕ ಪಕ್ಷಗಳ ಅಸ್ಥಿತ್ವ ಅಲುಗಾಡಿಸುವ ಕಾರ್ಯತಂತ್ರಕ್ಕೆ ಬೆಚ್ಚಿಬಿದ್ದು ಅಧಿಕಾರದಲ್ಲಿರುವ ಪ್ರಾದೇಶಿಕ ಪಕ್ಷಗಳ ನಾಯಕರು ಕೊನೆಗೂ ತಮ್ಮ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರ ಮೊದಲ ಫಲಿತಾಂಶವೆಂಬಂತೆ ಬಿಹಾರದಲ್ಲಿ ನಿತೀಶ್‌ಕುಮಾರ್ ಬಿಜೆಪಿ ಸಂಬಂಧ ಕಡಿದುಕೊಂಡು ಕಾಂಗ್ರೆಸ್ ಹಾಗೂ ಆರ್‌ಜೆಡಿ ಜೊತೆ ಕೈ ಮಿಲಾಯಿಸಿ ಅಧಿಕಾರ ಹಿಡಿದಿದ್ದಾರೆ. ಜೆಡಿಯು ಒಡೆಯಲು ಬಿಜೆಪಿ ಪ್ರಯತ್ನಿಸಿದ್ದೇ ನಿತೀಶ್ ಹುಷಾರಾಗಲು ಕಾರಣ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೆ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರರಾವ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಬಿಜೆಪಿ ದೇಶದ ಪ್ರಾದೇಶಿಕ ಪಕ್ಷಗಳನ್ನು ಒಡೆದು ಅಲ್ಲೆಲ್ಲ ಬೇರು ಬಿಡಲು ಹೊರಟಿದೆ. ನಮಗೆ ಕಾಂಗ್ರೆಸ್ ಪ್ರತಿಸ್ಪರ್ಧಿಯಲ್ಲ. ಪ್ರಾದೇಶಿಕ ಪಕ್ಷಗಳು ಮಾತ್ರ 2024ಕ್ಕೆ ನಮಗೆ ಸೆಡ್ಡು ಒಡೆಯುವ ಸಾಮರ್ಥ್ಯ ಹೊಂದಿವೆ ಎಂಬ ಕಾರಣಕ್ಕೆ ಮೋದಿ-ಅಮಿತ್ ಷಾ ಹೊಸ ಆಟ ಶುರು ಮಾಡಿದ್ದಾರೆ. ತಮಿಳುನಾಡಿನ ಡಿಎಂಕೆಯಲ್ಲಿ ಒಬ್ಬ ಏಕ್‌ನಾಥ್ ಶಿಂಧೆ ತಯಾರಾಗುತ್ತಿದ್ದಾನೆ ಎಂದು ಬಿಜೆಪಿ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತೆಲಂಗಾಣ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ ಸೇರಿ ಎಲ್ಲೆಲ್ಲಿ ನಾವು ಪ್ರಬಲವಿದ್ದೇವೋ ಅಲ್ಲೆಲ್ಲ ನಮ್ಮ ವಿರುದ್ಧ ನಮ್ಮವರನ್ನೇ ಎತ್ತಿಕಟ್ಟುವ ಕುತಂತ್ರವನ್ನು ಮಾಡಲಾಗುತ್ತಿದೆ ಎಂದಿದ್ದರು. ಕೆ.ಸಿ.ಆರ್. ಅವರ ಈ ಮಾತೇ ಬಹುತೇಕ ದೇಶದಲ್ಲಿ ಅಧಿಕಾರದಲ್ಲಿರುವ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರ ಭಾವನೆಯಾಗಿತ್ತು. ಇದು ಬಿಜೆಪಿ ಆಡುವ ಆಟಗಳಿಗೂ ತಾಳೆಯಾಗಿತ್ತು. ಹೀಗಾಗಿ ನಾಯಕರು ಉದ್ಧವ್ ಠಾಕ್ರೆಯಂತೆ ನಾವು ಯಮಾರಬಾರದು ಎಂದು ನಿರ್ಧರಿಸಿಬಿಟ್ಟಿದ್ದರು. ಈಗ ನಿತೀಶ್‌ಕುಮಾರ್ ಬಿಜೆಪಿ ಸಖ್ಯ ತೊರೆದು ತಾವು ಸೇಫ್ ಆಗಲು ಹೊರಟಿದ್ದಾರೆ. ಮಮತಾ ಬ್ಯಾನರ್ಜಿ ನೀಡಿದ ಎಚ್ಚರಿಕೆಯ ಸಂದೇಶವೇ ನಿತೀಶ್ ಇಷ್ಟು ಬೇಗ ಹುಶಾರಿ ಆಗಲು ಕಾರಣ ಎನ್ನಲಾಗುತ್ತಿದೆ.

ಏನಿದು ಬಿಹಾರ ರಾಜಕೀಯ?
2020ರ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಕುತೂಹಲಕಾರಿಯಾಗಿತ್ತು. ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಸಂಯುಕ್ತ ಜನತಾ ದಳ (ಜೆಡಿಯು) ಅನ್ನೂ ಮೀರಿಸಿದ ಸ್ಥಾನಗಳನ್ನು ಬಿಜೆಪಿ ಪಡೆದಿತ್ತು. ಇನ್ನಷ್ಟು ಸೀಟು ಗಳಿಸುವ ಜೆಡಿಯು ಕನಸಿಗೆ ಎಲ್‌ಜೆಪಿ ಅಡ್ಡಗಾಲು ಹಾಕಿತ್ತು. ಆರ್‌ಜೆಡಿ ಇವೆರಡಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆದಿದ್ದರೂ ಜೊತೆಗಾರರಿಲ್ಲದೆ ಸರ್ಕಾರ ರಚಿಸಲು ಆಗಿರಲಿಲ್ಲ. ಜೆಡಿಯು (43) ಹಾಗೂ ಬಿಜೆಪಿ (74) ಜೊತೆ ಸೇರಿ ಸರ್ಕಾರ ರಚಿಸಿದ್ದವು.
ಇದರೊಂದಿಗೆ ದೊಡ್ಡ ಧ್ವನಿಯನ್ನು ರಾಜ್ಯ ರಾಜಕೀಯದಲ್ಲಿ ಜೆಡಿಯು ಕಳೆದುಕೊಂಡಿದ್ದರೂ, ಹಿಡಿತ ಬಿಡಲು ನಿತೀಶ್‌ಕುಮಾರ್ ಸಿದ್ಧವಿರಲಿಲ್ಲ. ಸಿಎಂ ಪದವಿಯನ್ನು ಅವರು ಬಿಟ್ಟುಕೊಡಬೇಕಾದೀತು ಎಂದು ಭಾವಿಸಲಾಗಿತ್ತು. ಆದರೆ ಅವರಿಗೆ ಇದ್ದ ವರ್ಚಸ್ಸಿನ ಪರಿಣಾಮ, ಸಿಎಂ ಆಗಿ ನಿತೀಶ್ ಅವರೇ ಮುಂದುವರಿದರು. ಇದರ ಜತೆಗೆ ಬಿಜೆಪಿಯು ನಿತೀಶ್‌ಗೆ ಸಿಎಂ ಸ್ಥಾನವನ್ನು ಮರುಮಾತನಾಡದೆ ಬಿಟ್ಟುಕೊಡಲು ಮತ್ತೊಂದು ಕಾರಣವೂ ಇತ್ತು. ಅದೆಂದರೆ ಮಹಾರಾಷ್ಟ್ರ ಚುನಾವಣೆ ಬಳಿಕ ಆದ ಮುಖಭಂಗ ಮಿತ್ರಪಕ್ಷ ಶಿವಸೇನೆಯನ್ನು ತೊರೆದು ಎನ್‌ಸಿಪಿ ಜತೆ ಬಿಜೆಪಿ ಸರ್ಕಾರ ರಚಿಸಿತು. ಆದರೆ ಕೆಲವೇ ಗಂಟೆಗಳಲ್ಲಿ ಎನ್‌ಸಿಪಿ ಕೈಕೊಟ್ಟು ಶಿವಸೇನೆ ಸಿಎಂ ಸ್ಥಾನ ಕೊಡಲಾಗದು ಎಂದರೆ, ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇತ್ತು. ಹಾಗಾಗಿ ನಿತೀಶ್‌ಕುಮಾರ್ ಸಿಎಂ ಆಗಿ ಮುಂದುವರಿದರು. ಆದರೆ ತನ್ನ ಇಬ್ಬರು ಹಿರಿಯ ಶಾಸಕರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಕೂರಿಸಲು ಬಿಜೆಪಿ ಮರೆಯಲಿಲ್ಲ. ಅಧಿಕಾರದಲ್ಲಿ ಹಿಡಿತ ಸಾಧಿಸುವ ಬಿಜೆಪಿಯ ಈ ಯತ್ನ ಸಹಜವಾಗಿಯೇ ಆರಂಭದಿಂದಲೇ ನಿತೀಶ್‌ಗೆ ಇರಿಸುಮುರಿಸು ಉಂಟು ಮಾಡಿತು.
ಬಿಜೆಪಿ-ಜೆಡಿಯು ತಿಕ್ಕಾಟ

ಅನೇಕ ವಿಚಾರಗಳಲ್ಲಿ ಜೆಡಿಯುಗೂ ಬಿಜೆಪಿಗೂ ತಿಕ್ಕಾಟ ನಡೆಯುತ್ತಲೇ ಬಂದಿತ್ತು. ಲಿಕ್ಕರ್ ಬ್ಯಾನ್ ವಿಚಾರ, ಅಗ್ನಿಪಥ ಸ್ಕೀಮ್, ಕಾನೂನು ಸುವ್ಯವಸ್ಥೆ ವಿಚಾರ ಇತ್ಯಾದಿಗಳು ಉದಾಹರಣೆ. ಅಗ್ನಿಪಥ ಯೋಜನೆ ಜಾರಿಗೆ ತಂದ ಪರಿಣಾಮ ಬಿಹಾರದಲ್ಲಿ ಕೋಲಾಹಲವೇ ಏರ್ಪಟ್ಟಿತಲ್ಲದೆ, ಸಾರ್ವಜನಿಕ ದೊಂಬಿ ಎದ್ದು ರೈಲ್ವೆ ಇಲಾಖೆಗೆ ಗಂಭೀರ ಹಾನಿಯಾಯಿತು. ಈ ಗಲಭೆಯ ಬಗ್ಗೆ ನಿತೀಶ್ ತಮ್ಮ ಮೌನವನ್ನು ಮುರಿದಿರಲಿಲ್ಲ. ಕೇಂದ್ರ ಸರ್ಕಾರದ ಕುರಿತ ಅಸಮಾಧಾನದ ಪರಿಣಾಮವಾಗಿಯೇ ನಿತೀಶ್ ಸುಮ್ಮನಿದ್ದರು ಎಂದೂ ಹೇಳಲಾಯಿತು.
ಏಪ್ರಿಲ್‌ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು, ಮುಂದಿನ (2025) ವಿಧಾನಸಭೆ ಚುನಾವಣೆಯಲ್ಲಿ ನಿತೀಶ್‌ಕುಮಾರ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸುವುದನ್ನು ನಾವು ಮರುಪರಿಶೀಲನೆ ಮಾಡುತ್ತೇವೆ ಎಂದು ಹೇಳಿ ಜೆಡಿಯು ಒಳಗೆ ಬಂಡಾಯಗಾರರನ್ನು ಸೃಷ್ಟಿಸಲು ಬೆಂಕಿ ಹಚ್ಚತೊಡಗಿದರು. ಆರ್‌ಜೆಡಿ ನಾಯಕಿ ರಾಬ್ರಿದೇವಿ ಅವರು ಏರ್ಪಡಿಸಿದ ಇಫ್ತಾರ್‌ಕೂಟಕ್ಕೆ ನಿತೀಶ್ ಹಾಜರಾದುದು ಬೇರೊಂದು ಬಗೆಯ ಸಂಕೇತವನ್ನು ರವಾನಿಸಿತು. ಲಾಲು ಪ್ರಸಾದ್ ಯಾದವ್ ಪದೇ ಪದೇಇಡಿ ದಾಳಿಗೆ ಒಳಗಾದಾಗಲೂ ನಿತೀಶ್ ಪಡೆ ಅವರನ್ನು ಯಾವುದೇ ರೀತಿಯಲ್ಲಿ ಟೀಕಿಸಲಿಲ್ಲ.
ಇನ್ನು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿದ್ದವರು ಬಿಜೆಪಿಯ ವಿಜಯ್‌ಕುಮಾರ್ ಸಿನ್ಹಾ. ಅನೇಕ ಸಲ ಸಿನ್ಹಾ ಅವರ ಮೇಲೆ ನಿತೀಶ್ ಸಿಟ್ಟಾದದ್ದುಂಟು. ಹಲವು ಬಾರಿ ಸರ್ಕಾರದ ಕಾರ್ಯವೈಖರಿಯನ್ನು ಸಿನ್ಹಾ ಟೀಕಿಸಿದ್ದರು. ಇದು ನಿತೀಶ್ ಅವರಿಗೆ ಮುಜುಗರ ತಂದಿತ್ತು. ಸಿನ್ಹಾ ಅವರನ್ನು ಸ್ಪೀಕರ್ ಹುದ್ದೆಯಿಂದ ತೆಗೆಯಬೇಕು ಎಂದು ಅವರು ಒತ್ತಡ ಹಾಕಿದ್ದರು. ಆದರೆ ಬಿಜೆಪಿ ಕ್ಯಾರೇ ಎಂದಿರಲಿಲ್ಲ.
ಆರ್‌ಸಿಪಿ ಸಿಂಗ್ ಎತ್ತಿಕಟ್ಟಲು ಮುಂದಾಗಿದ್ದ ಬಿಜೆಪಿ
ಜೆಡಿಯುವಿಗೆ ಕೇವಲ ಒಂದೇ ಒಂದು ಕೇಂದ್ರ ಸಂಪುಟ ಸ್ಥಾನ ನೀಡಿದ್ದು ನಿತೀಶ್ ಅವರನ್ನು ಕೆರಳಿಸಿತ್ತು. ನಂತರ ನಾವು ಕೇಂದ್ರ ಸರ್ಕಾರದ ಭಾಗವಾಗುವುದಿಲ್ಲ ಎಂದು ಜೆಡಿಯು ಹೇಳುತ್ತಲೇ ಬಂದಿತ್ತು. ಆದರೆ ಕಳೆದ ವರ್ಷ ಜೆಡಿಯು ಮುಖಂಡ ಆರ್‌ಸಿಪಿ ಸಿಂಗ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಲಾಯಿತು. ಇದು ನಿತೀಶ್‌ಗೆ ಇಷ್ಟವಿರಲಿಲ್ಲ. ಅವರ ಒಪ್ಪಿಗೆಯನ್ನೂ ಪಡೆದಿರಲಿಲ್ಲ. ಸುಮ್ಮನೆ ಇದನ್ನು ಸಹಿಸಿಕೊಂಡಿದ್ದ ನಿತೀಶ್ ಆರ್‌ಸಿಪಿ ಸಿಂಗ್ ಅವರನ್ನು ಇನ್ನೊಂದು ಅವಧಿಗೆ ರಾಜ್ಯಸಭೆಗೆ ಆಯ್ಕೆ ಮಾಡಲು ಆಸಕ್ತಿ ವಹಿಸಲಿಲ್ಲ. ಹೀಗಾಗಿ ಸಿಂಗ್ ತಮ್ಮ ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆರ್‌ಸಿಪಿ ಸಿಂಗ್ ಅವರನ್ನು ಇಟ್ಟುಕೊಂಡು ಜೆಡಿಯು ಪಕ್ಷವನ್ನು ಒಡೆಯಲು ಬಿಜೆಪಿ ಸಂಚು ನಡೆಸಿದೆ ಎಂಬ ಊಹೆ ನಿತೀಶ್ ಬಣದಲ್ಲಿತ್ತು. ಇದಕ್ಕೆ ಪೂರಕ ವೆಂಬಂತೆ ಬಿಜೆಪಿ ನಡೆದುಕೊಂಡಿದ್ದು ಅನುಮಾನಗಳಿಗೆ ಪುಷ್ಟಿ ನೀಡಿತ್ತು.
ಇದಲ್ಲದೆ ಇತ್ತೀಚೆಗೆ ರಾಜ್ಯ ಸಚಿವ ಸಂಪುಟವನ್ನು ನಿತೀಶ್‌ಕುಮಾರ್ ವಿಸ್ತರಿಸಿದರು. ಈ ಸಂದರ್ಭದಲ್ಲಿ ತನ್ನ ಪಕ್ಷದ ಎಂಟು ಮಂದಿಯನ್ನು ಸೇರಿಸಿಕೊಂಡರು. ಒಂದು ಸ್ಥಾನವನ್ನು ಮಾತ್ರ ಬಿಜೆಪಿಗೆ ಮೀಸಲಾಗಿಟ್ಟರು. ಸರ್ಕಾರದಲ್ಲಿ ಹೆಚ್ಚಿನ ಜೆಡಿಯು ಸಚಿವರು ಇರಬೇಕು ಎಂಬುದು ನಿತೀಶ್ ಇಚ್ಛೆ. ಆದರೆ ಅಮಿತ್ ಷಾ ಅವರು ಬಿಜೆಪಿಯ ಹಿಡಿತ ಸಡಿಲವಾದರೆ ಸಹಿಸಲು ಸಿದ್ಧರಿರಲಿಲ್ಲ. ಜೊತೆಗೆ ಬಿಹಾರದಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯನ್ನು ಜತೆಯಾಗಿ ನಡೆಸಬೇಕು ಎಂಬುದು ಬಿಜೆಪಿಯ ಇರಾದೆಯಾಗಿತ್ತು. ಆದರೆ ಇದು ಜೆಡಿಯುಗೆ ಇಷ್ಟವಿಲ್ಲ. ಲೋಕಸಭೆಯ ರಾಷ್ಟ್ರೀಯ ಅಭಿಮತದ ಅಲೆಯಲ್ಲಿ ಜೆಡಿಯು ಕಳೆಗುಂದಬಹುದು ಎಂಬುದು ಅದರ ಆತಂಕವಾಗಿತ್ತು.

ಬಿಜೆಪಿ ಹಿಡಿತ ಬಿಗಿ
ಮುಖ್ಯವಾಗಿ, ಜೆಡಿಯು ಬಿಹಾರದಲ್ಲಿ ನಿಧಾನವಾಗಿ ಶಿಥಿಲವಾಗುತ್ತಿರುವುದು ಹಾಗೂ ಬಿಜೆಪಿ ಭದ್ರ ನೆಲೆ ಪಡೆಯುತ್ತಿರುವುದು ನಿತೀಶ್ ಅವರಿಗೆ ಸ್ಪಷ್ಟವಾಗಿ ಗೋಚರವಾಗಿತ್ತು. ಇದನ್ನು ಹೀಗೇ ಬೆಳೆಯಗೊಟ್ಟರೆ ನಿಸ್ಸಂಶಯವಾಗಿ ರಾಜ್ಯದಲ್ಲಿ ಜೆಡಿಯು-ಆರ್‌ಜೆಡಿಗಳ ಸಮಾಧಿ ಕಟ್ಟಿ ಅದರ ಮೇಲೆ ಆಲದ ಮರದಂತೆ ಬೆಳೆದುಬಿಡಲಿದೆ ಎಂಬ ಆತಂಕ ಅವರಲ್ಲಿ ಮೂಡಿದೆ. ಇದೆಲ್ಲದರ ಪರಿಣಾಮವೇ ನಿತೀಶ್ ಮೈತ್ರಿಕೂಟ ಬದಲಾವಣೆ ಎನ್ನಲಾಗುತ್ತಿದೆ.