-ಕೇಶವರೆಡ್ಡಿ ಹಂದ್ರಾಳ
ಹೇಡಿ ಮತ್ತು ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ನಿಜವಾದ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಬರಿ ಐದು ವರ್ಷಗಳ ಮಟ್ಟಿಗೆ ಮಾತ್ರ ಈ ಸಂಘಟನೆಗಳನ್ನು ನಿಷೇಧಿಸುವುದಲ್ಲ, ಖಾಯಂ ಆಗಿ ಇಂಥ ಸಂಘಟನೆಗಳನ್ನು ಮತ್ತು ಇಂಥ ಅನೇಕ ಸಂಘಟನೆಗಳನ್ನು ಪತ್ತೆಹಚ್ಚಿ ಬೇರು ಸಮೇತ ಈ ದೇಶದಿಂದ ಕಿತ್ತೊಗೆಯುವ ಕೆಲಸವನ್ನು ಮಾಡಬೇಕಾಗಿರುವುದು ತುರ್ತಿನ ಕೆಲಸವಾಗಿದೆ. ಈ ಪಿಎಫ್‌ಐನ ಉದ್ದೇಶ ಮುಂದಿನ ದಿನಗಳಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಬದಲಾಯಿಸುವುದಂತೆ ! ಇದು ಅದರ ಘೋಷವಾಕ್ಯವಂತೆ. ಇಂಥ ಸಂಘಟನೆಗಳನ್ನು ಪೋಷಿಸುವ, ಬೆಂಬಲಿಸುವ ಯಾರೇ ಆಗಲಿ ಅಂಥವರು ದೇಶದ್ರೋಹಿಗಳೆಂದೇ ನಿರೂಪಿತರಾಗುತ್ತಾರೆ. ಅಂಥವರನ್ನೂ ಈ ದೇಶದಿಂದ ಗಡಿಪಾರು ಮಾಡಿದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಶಾಂತಿ, ನೆಮ್ಮದಿಗಳು ನೆಲಸಬಹುದೇನೋ ! ಈ ನವರಾತ್ರಿಯ ಸಂದರ್ಭದಲ್ಲಿ ನಾವು ಭಾರತೀಯರು ಅದನ್ನು ಆಶಿಸೋಣ.

ನಾನಾಗ ನಮ್ಮೂರ ಪ್ರೈಮರಿ ಶಾಲೆಯ ಮೂರನೆ ಅಥವಾ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದಿರಬೇಕು. ಈ ಪ್ರೈಮರಿ ಮತ್ತು ಮಿಡ್ಲಿಸ್ಕೂಲಿನ ನೆನಪುಗಳಂತೂ ನನ್ನ ಮನದಲ್ಲಿ ಹಚ್ಚಹಸಿರಾಗಿವೆ. ನಮ್ಮ ಸ್ಕೂಲಿನ ಬಲಕ್ಕೆ ಊರ ದೇವರಾದ ರಂಗನಾಥ ಸ್ವಾಮಿ ದೇವಸ್ಥಾನವಿದ್ದರೆ, ಎಡಕ್ಕೆ ಐದಾರು ಕುರಿರೊಪ್ಪಗಳಿದ್ದವು. ಕುರಿರೊಪ್ಪಗಳ ಆಚೆಗೆ ಚಿಕ್ಕ ಕೆರೆ. ಸ್ಕೂಲಿನ ಟೈಮಲ್ಲಿ ಕೆರೆಯಂಗಳದಲ್ಲಿ ಸದಾ ಐದಾರು ಹುಡುಗರಾದರೂ ನಿಕ್ಕರ್ ಬಿಚ್ಚಿಕೊಂಡು ಯಲ್ಡಾಕೆ ಕೂತಿರುತ್ತಿದ್ದ ದೃಶ್ಯ ಸಾಮಾನ್ಯವಾಗಿರುತ್ತಿತ್ತು. ಸ್ಕೂಲಿನ ಬಾಗಿಲು ಮತ್ತು ಕಿಟಕಿಗಳಲ್ಲಿ ಕುರಿ, ಕೊಳಿ, ಹಂದಿ, ಕತ್ತೆಗಳು ಓಡಾಡುವ, ರೈತರು ಹೊಲ ಉಳುವ, ಗಾಡಿಗಳಲ್ಲಿ ಗೊಬ್ಬರ ಹೊಡೆಯುವ ಮುಂತಾದ ದೃಶ್ಯಗಳು ಸದಾ ಸ್ಕೂಲಿನಲ್ಲಿ ನಮ್ಮನ್ನು ಲವಲವಿಕೆಯಿಂದ ಇರುವಂತೆ ಪ್ರೇರೇಪಿಸುತ್ತಿದ್ದವು. ಕುರಿರೊಪ್ಪದವರಂತೂ ಘಳಿಗೆ ಘಳಿಗೆಗೂ ನಮಗೆ ಎಡತಾಕುತ್ತಿದ್ದರು. ಅವರಲ್ಲಿ ಸ್ಕೂಲ್ ಹುಡುಗರಿಗೆ ವಿಚಿತ್ರವಾಗಿ ಕಾಡುತ್ತಿದ್ದದ್ದು ದೊಡ್ಮನೆ ರಂಗೇಗೌಡರ ತಮ್ಮ ಬಜ್ಜೆರಂಗ. ಮುವತ್ತೈದು ನಲವತ್ತು ವರ್ಷಗಳಾಗಿದ್ದರೂ ಮದುವೆಯಾಗಿರಲಿಲ್ಲ. ಒಂದು ಉದ್ದನೆಯ ಶರಟು, ಪುಟಗೋಸಿ, ಸಣ್ಣ ಕಂಬಳಿ ಮತ್ತು ಒಂದು ಬಿದಿರುಕೋಲು. ನಾಲ್ಕೂವರೆ ಅಡಿ ಇದ್ದ ಬಜ್ಜೆರಂಗ ರಾತ್ರಿ ಹೊತ್ತು ಕುರಿರೊಪ್ಪದಲ್ಲಿಯೇ ಮಲಗುತ್ತಿದ್ದ. ಬೇಟೆ ಪದಗಳನ್ನು ಘನವಾಗಿ ಹಾಡುತ್ತಿದ್ದ. ಉಡಿದಾರಕ್ಕೆ ತಿತ್ತಿಯನ್ನು ಕಟ್ಟಿಕೊಂಡಿರುತ್ತಿದ್ದ ಬಜ್ಜೆರಂಗ ಮೂರೊತ್ತೂ ಅಡಿಕೆಲೆ ಜೊತೆ ಹೆಂಗಸರಂತೆ ಕಡ್ಡಿಪುಡಿಯನ್ನೂ ನಮಲುತ್ತಿದ್ದ. ಮೇಲೆ ಹೇಳಿದಂತೆ ನಾನು ಮೂರನೇ ಅಥವಾ ನಾಲ್ಕನೇ ಕ್ಲಾಸಿನಲ್ಲಿದ್ದಾಗ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾಗಿತ್ತು. ಒಂದಷ್ಟು ದಿನ ಊರಲ್ಲಿ, ಸ್ಕೂಲಿನಲ್ಲಿ, ಹೊಲಗದ್ದೆಗಳಲ್ಲಿ ಯುದ್ದದ್ದೇ ಮಾತು. ರೇಡಿಯೋದಲ್ಲಿ, ಪತ್ರಿಕೆಗಳಲ್ಲಿ ಬರುತ್ತಿದ್ದ ಯುದ್ದದ ಸುದ್ದಿಗಳನ್ನು ಜನರು ಒಬ್ಬರನ್ನೊಬ್ಬರು ಕೇಳಿ ತಿಳಿದುಕೊಳ್ಳುತ್ತಿದ್ದರು. ರಾತ್ರಿ ಹೊತ್ತಿನಲ್ಲಿ ವಿಮಾನವೇನಾದರೂ ಆಕಾಶದಲ್ಲಿ ಸದ್ದು ಮಾಡಿದರೆ “ಅಯ್ಯಯ್ಯಪ್ಪ ಪಾಕಿಸ್ತಾನ್ದೋರು ಬಂದ್ರಪ್ಪ ಬಾಂಬ್ ಹಾಕ್ತಾರೆ…” ಎಂದು ಮಕ್ಕಳು ಮನೆಗಳೊಳಕ್ಕೆ ಓಡುತ್ತಿದ್ದೆವು. ಅಂಥ ಒಂದು ದಿನ ಬೆಳಿಗ್ಗೆ ಎಂಟು ಗಂಟೆಗೆ ಸ್ಕೂಲು ಶುರುವಾಗುತ್ತಿದ್ದಂತೆಯೇ ಬಜ್ಜೆರಂಗ ಸ್ಕೂಲಿನೊಳಕ್ಕೆ ಬಂದಿದ್ದ. ಮುಖ ರವರವ ಅನ್ನುತ್ತಿತ್ತು. ಕಣ್ಣು ಕೆಂಪಗಿದ್ದವು. ಹೆಗಲ ಮೇಲೆ ಕಂಬಳಿ, ಕೈಯಲ್ಲಿ ಕೋಲು. “ಏನು ಬಜ್ಜೆರಂಗ ಬೆಳಿಗ್ಗೇನೆ” ಎಂದು ನಮ್ಮ ಅಗಸರ ಅಂಜಿನಪ್ಪ ಮೇಷ್ಟ್ರು ವಿಚಾರಿಸಿಕೊಂಡಿದ್ದರು. ಬಜ್ಜೆರಂಗ ಬೇಸರದಲ್ಲಿರುವುದು ನಮಗೆ ಸ್ಕೂಡೆಂಟ್ಸ್ಗೆ ಅರ್ಥವಾಗಿತ್ತು. ಬಜ್ಜೆರಂಗ ಮೆಲ್ಲಗೆ “ಸಾ ಪಾಕಿಸ್ತಾನ ನಮ್ಮೂರ್ಗೆ ಎಷ್ಟು ದೂರ ಆಗ್ತೈತೆ ಸಾ..” ಎಂದು ಕೇಳಿದ್ದ. ಅಂಜಿನಪ್ಪ ಮೇಷ್ಟ್ರು ಒಂಥರಾ ಕಕರುಮಕರಾದವರಂತೆ ” ಯಾಕೋ ಬಂಜೆರಂಗ ಸಾವಿರಾರು ಮೈಲಿ ದೂರ ಐತೆ..” ಎಂದಿದ್ದರು. ಬಜ್ಜೆರಂಗ ತಕ್ಷಣ ಕಟಕಟ ಹಲ್ಲು ಕಡಿದು “ಸಾ ನನ್ನ ಯಾರಾದ್ರೂ ಅಲ್ಲಿಗೆ ಕರ್ಕೊಂಡೋದ್ರೆ ಈ ರಂಗನಾಥ ಸ್ವಾಮಿಯಾಣೆಗೂ ಪಾಕಿಸ್ತಾನ್ದೋರ್ನೆಲ್ಲ ಸೀಳಿ ಬಿಸಾಕಿ ಬರ್ತೀನಿ ಸಾ. ಆ ನನ್ಮಕ್ಳು ಬಲು ದೌಲ್ ಮಾಡ್ತಾವ್ರಂತೆ. ನಮ್ತಾಯಣೆಗೂ ರಾತ್ರಿಯೆಲ್ಲ ನಿದ್ದೆ ಮಾಡ್ಲಿಲ್ಲ” ಎಂದು ಕೈಯ್ಯಲ್ಲಿದ್ದ ಕೋಲನ್ನು ನೆಲಕ್ಕೆ ಬಡಿದಿದ್ದ. ಬಜ್ಜೆರಂಗ ರೋಷಕ್ಕೆ ಹೆಗಲ ಮೇಲಿದ್ದ ಕಂಬಳಿ ಕೆಳಕ್ಕೆ ಬಿದ್ದಿತ್ತು. ಅಂಜಿನಪ್ಪ ಮೇಷ್ಟ್ರು ನಗುತ್ತಾ “ಮೊದ್ಲು ಮನೆಗೋಗಿ ಮುದ್ದೆ ಸೀಳಿ ಕುರಿ ಬಿಟ್ಕಂಡೋಗು, ಪಾಕಿಸ್ತಾನನ ಸೀಳೋಕೆ ನಮ್ಮ ಸೈನ್ಯ ಐತೆ” ಎಂದಿದ್ದರು. ಬಜ್ಜೆರಂಗ ಬಗ್ಗಿ ಕಂಬಳಿಯನ್ನು ಎತ್ತಿಕೊಳ್ಳುತ್ತಾ “ಮತ್ತೆ ನನ್ನೂ ಸೈನ್ಯಕ್ಕೆ ಸೇರಿಸಿಬಿಡಿ ಸಾ ಅತ್ತ..” ಎಂದಿದ್ದ. “ಸೈನ್ಯ ಸೇರೋಕೆ ನೀನಿನ್ನ ಚಿಕ್ಕೋನು, ಇನ್ನೊಂದತ್ತೊರ್ಷ ಕಳೀಲಿ ಸೇರ್ಕಂಬಿವಂತೆ ” ಎಂದು ಹೇಳಿದ್ದರು. ಬಜ್ಜೆರಂಗ “ನನ್ನ ಕಂಡ್ರೆ ನಿಮ್ಗೆ ಯಾವಾಗಲೂ ತಮಾಷೆನೇ ಬಿಡಿ ಸಾ..” ಎಂದು ಕುರಿರೊಪ್ಪಗಳ ಕಡೆ ನಡೆದಿದ್ದ. ಹುಡುಗರೆಲ್ಲ ಹೋ ಎಂದು ಕೂಗಿಕೊಂಡಿದ್ದೆವು. ಯುದ್ಧ ಮುಗಿದು ಮಾರನೆಯ ದಿನವೇ ನಮ್ಮ ಪ್ರಧಾನಮಂತ್ರಿ ಸತ್ತುಹೋದ ಸುದ್ದಿ ಮೇಷ್ಟ್ರು ಹೇಳಿದ್ದರು. ಅವೊತ್ತು ಊಟ ಕೂಡ ಮಾಡದೆ ಬಜ್ಜೆರಂಗ ಬಿಕ್ಕಿ ಬಿಕ್ಕಿ ಅತ್ತಿದ್ದನಂತೆ. ಅದಾದ ವಾರದ ಮೇಲೆ ತಿಳಿಯಿತು ತಿಂಗಳ ಹಿಂದೆಯೇ ಬಜ್ಜೆರಂಗ ತಾನು ಕೂಡಿಟ್ಟುಕೊಂಡಿದ್ದ ಮುವತ್ತೆಂಟು ರೂಪಾಯಿಗಳನ್ನು ಮಧುಗಿರಿಗೆ ಹೋಗಿ ಯುದ್ಧದ ಫಂಡಿಗೆ ಕೊಟ್ಟು ಬಂದಿದ್ದನಂತೆ ! ಕಡೆಗೆ ಆ ವರ್ಷದ ಸ್ವಾತಂತ್ರ್ಯ ದಿನಾಚರಣೆ ದಿನ ನಮ್ಮ ಮೇಷ್ಟ್ರು ಬಜ್ಜೆರಂಗನ ಕೈಯ್ಯಲ್ಲಿಯೇ ಧ್ವಜಾರೋಹಣ ಮಾಡಿಸಿದ್ದರು !!
ಈ ಘಟನೆಯಯನ್ನು ಪ್ರಸ್ತುತ ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಈ ದೇಶದ ಮುಗ್ಧ ಅನಕ್ಷರಸ್ಥ ಜನರಲ್ಲಿ ಇಂದಿಗೂ ದೇಶಪ್ರೇಮ ಇಂಗಿ ಹೋಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರರನ್ನು, ತ್ಯಾಗಿಗಳನ್ನು ಅವರು ಮರೆತಿಲ್ಲ. ಆದರೆ ಸಮಸ್ಯೆಯಿರುವುದೇ ಅಕ್ಷರಸ್ತರಲ್ಲಿ. ಧರ್ಮಾಂಧತೆ, ಜಾತೀಯತೆ, ಸ್ವಾರ್ಥ, ಕುತಂತ್ರ ಮುಂತಾದ ಋಣಾತ್ಮಕ ಅಂಶಗಳನ್ನು ತುಂಬಿಕೊಂಡವರಲ್ಲಿ ಅಕ್ಷರಸ್ಥರೇ ಹೆಚ್ಚು. ದೇಶಕ್ಕೆ ಮಾರಕವಾಗಿ ಪರಿಣಮಿಸಿರುವ ಮತ್ತು ನಿಷೇಧಕ್ಕೊಳಪಟ್ಟ ಕೆಲವು ಸಂಘಟನೆಗಳ ಬಗ್ಗೆ ಬರೆಯುವುದು ಇವೊತ್ತಿನ ತುರ್ತಾಗಿದೆ. ದೇಶದಲ್ಲಿ ಯಾವುದೇ ಸಂಘಟನೆಯಾದರೂ ಸಂವಿಧಾನಾತ್ಮಕವಾಗಿ ರಚನೆಗೊಂಡಿರಬೇಕು. ಸಂಘಟನೆಯೊಂದರ ಚಟುವಟಿಕೆಗಳು, ಆಶಯಗಳು ಸಂವಿಧಾನದ ಚೌಕಟ್ಟನ್ನು ಮೀರಿ ರಾಷ್ಟ್ರೀಯ ಮನೋಭಾವಕ್ಕೆ ವಿರುದ್ಧವಾಗಿದ್ದರೆ ಸಂವಿಧಾನದ ಅಡಿಯಲ್ಲಿ ಅದರ ಅಸ್ತಿತ್ವ ಖಂಡಿತವಾಗಿಯೂ ತೀವ್ರತರದ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ಪ್ರಜಾಸತ್ತಾತ್ಮಕ ಎಲ್ಲೆಗಳನ್ನು ವ್ಯಕ್ತಿ ಮೀರಿದರೂ, ಸಂಘಟನೆ ಮೀರಿದರೂ ಅದು ದಂಡನೆಗೆ ಒಳಪಡಬೇಕಾದ ಸಂಗತಿಯೇ ಸರಿ. ಭಾರತದಲ್ಲಿ ಬಹುತೇಕ ಸಂಘಟನೆಗಳು ಹುಟ್ಟಿಕೊಂಡಿದ್ದು ಸಮಾಜ ಉದ್ದಾರದ ಉದ್ದೇಶದಿಂದಾಗಿಯೇ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಸ್ವಾತಂತ್ರ್ಯ ಹೋರಾಟದ ಸಣ್ಣಪುಟ್ಟ ಸಂಘಟನೆಗಳು ಮುಂದೆ ರಾಷ್ಟ್ರೀಯ ನ್ಯಾಷನಲ್ ಕಾಂಗ್ರೆಸ್ ಆಗಿ ಬೃಹತ್ ರೂಪ ಪಡೆದುಕೊಂಡು ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ದೊಡ್ಡ ಉದಾಹರಣೆಯೇ ನಮ್ಮ ಮುಂದೆ ಇದೆ. ಇನ್ನು ಕೈಗಾರಿಕೆಗಳು ಬೆಳೆದಂತೆಲ್ಲ ದೇಶದಾದ್ಯಂತ ನಗರ ಪ್ರದೇಶಗಳಲ್ಲಿ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡವು. ಭಾರತದಲ್ಲಿ ಪ್ರಮುಖವಾಗಿ ಮುಂಬೈ, ಕೊಲ್ಕತ್ತಾದಂಥ ಕೈಗಾರಿಕಾ ನಗರಗಳಲ್ಲಿ ಕಾರ್ಮಿಕ ಸಂಘಟನೆಗಳು ವ್ಯಾಪಕವಾಗಿ ಹುಟ್ಟಿಕೊಂಡವು. ಪ್ರಾರಂಭದಲ್ಲಿ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದವು. ಮುಂಬೈನಂತಹ ನಗರಗಳಲ್ಲಿ ಕಾರ್ಮಿಕ ಸಂಘಟನೆಗಳು ಅರವತ್ತು, ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದವು. ಕ್ರಮೇಣ ಸಕ್ರಿಯ ರಾಜಕಾರಣ ಕಾರ್ಮಿಕ ಸಂಘಟನೆಗಳನ್ನೂ ಪ್ರವೇಶ ಮಾಡಿತು. ಇದರಿಂದಾಗಿ ಸಂಘಟನೆಗಳು ತಮ್ಮ ಶಕ್ತಿ, ಪ್ರಾಮಾಣಿಕತೆ, ನಿಷ್ಠೆ ಎಲ್ಲಾ ಗುಣಗಳನ್ನೂ ಕಳೆದುಕೊಂಡವು. ಗುಂಪುಗಾರಿಕೆ, ಸ್ವಾರ್ಥ, ದುರುಪಯೋಗ ಮುಂತಾದ ಋಣಾತ್ಮಕ ಸಂಗತಿಗಳು ಕಾರ್ಮಿಕ ಸಂಘಟನೆಗಳನ್ನು ಶಕ್ತಿಹೀನವನ್ನಾಗಿ ಮಾಡಿದವು. ಈಗಂತೂ ಕಾರ್ಮಿಕ ಸಂಘಟನೆಗಳು ಪೂರ್ಣವಾಗಿ ಕಣ್ಮರೆಯಾಗಿವೆ. ಅರವತ್ತು, ಎಪ್ಪತ್ತು, ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ವಿಧ್ಯಾರ್ಥಿ ಸಂಘಟನೆಗಳು ಸಹ ಪ್ರಬಲವಾಗಿದ್ದವು. ಪ್ರಮುಖವಾಗಿ ಬೆಲೆಯೇರಿಕೆಯ ವಿರುದ್ಧ ವಿದ್ಯಾರ್ಥಿ ಸಂಘಟನೆಗಳು ತಕ್ಷಣ ಹೋರಾಟಕ್ಕೆ ಇಳಿಯುತ್ತಿದ್ದದ್ದನ್ನು ಸ್ವತಃ ಕಂಡವನು ನಾನು. ಇಂಥ ವಿದ್ಯಾರ್ಥಿ ಸಂಘಟನೆಗಳ ಹೋರಾಟಕ್ಕೆ ಕಮ್ಯುನಿಸ್ಟ್, ಸೋಷಿಯಲಿಸ್ಟ್ ಪಕ್ಷಗಳು ಬೆಂಬಲ ವ್ಯಕ್ತಪಡಿಸುತ್ತಿದ್ದವು. ಕ್ರಮೇಣ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಂದಿನ ದಿನಮಾನಗಳಲ್ಲಿ ವಿದ್ಯಾರ್ಥಿ ಸಂಘನೆಗಳನ್ನು ಹಣ ಕೊಟ್ಟು ಪೋಷಿಸಲಾರಂಭಿಸಿದ್ದರಿಂದ ರೌಡಿಸಂ ವಿದ್ಯಾರ್ಥಿ ಸಂಘಟನೆಗಳನ್ನು ಕಬ್ಜಾ ಮಾಡಿಕೊಂಡಿತು. ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಟನೆಗಳನ್ನು ನಿಷೇಧಿಸಲಾಯಿತು. ಎಪ್ಪತ್ತನೆಯ ಮತ್ತು ಎಂಬತ್ತನೆಯ ದಶಕದಲ್ಲಿ ಆಸ್ಸಾಂ ರಾಜ್ಯದಲ್ಲಿ ಸ್ಟೂಡೆಂಟ್ ಯೂನಿಯನ್ ಪ್ರಬಲವಾಗಿ ಬೆಳೆದು ರಾಜಕಾರಣದಲ್ಲೂ ಮಹತ್ವದ ಪಾತ್ರ ವಹಿಸಿದ ಉದಾಹರಣೆ ನಮ್ಮ ಮುಂದೆ ಇದೆ. ರಾಜಕಾರಣ ಪ್ರವೇಶಿಸಿದ ಮೇಲೆ ಅಲ್ಲಿನ ಸ್ಟೂಡೆಂಟ್ ಯೂನಿಯನ್ ಕೂಡಾ ಹೋಳಾಗಿ ಕಡೆಗೆ ನಿರ್ನಾಮದ ಹಾದಿಯನ್ನು ಹಿಡಿಯಿತು. ಮಹಿಳಾ ಸಂಘಟನೆಗಳು, ಕೃಷಿ ಸಹಕಾರಿ ಸಂಘಟನೆಗಳು ಇಂದಿಗೂ ಭಾರತದಾದ್ಯಂತ ಸಕ್ರಿಯವಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿವೆ. ಮಹಿಳಾ ಸಬಲೀಕರಣ, ಹಳ್ಳಿಗರ ಆರ್ಥಿಕ ಅಭಿವೃದ್ಧಿ ಮುಂತಾದವುಗಳನ್ನು ಇಂಥ ಸಂಘನೆಗಳು ಸಾಧಿಸುತ್ತಿವೆ. ಇನ್ನು ಕೆಲವು ಜಾತಿ ಸಂಘಟನೆಗಳೂ ಅಸ್ತಿತ್ವದಲ್ಲಿರುತ್ತವೆ. ಆಯಾ ಜಾತಿಯ ಹಿತಾಸಕ್ತಿಗಳನ್ನು ಕಾಪಾಡಲು ಇಂಥ ಸಂಘಟನೆಗಳು ಕಾರ್ಯನಿರ್ವಹಿಸುತ್ತಿರುತ್ತವೆ. ನಮ್ಮ ಕರ್ನಾಟಕದಲ್ಲಿಯೇ ನಾನು ಕಂಡಂತೆಯೇ ಎಪ್ಪತ್ತು, ಎಂಬತ್ತರ ದಶಕದಲ್ಲಿ ರೈತ ಸಂಘಟನೆಗಳು ಮತ್ತು ದಲಿತ ಸಂಘಟನೆಗಳು ಅತ್ಯಂತ ಪ್ರವರ್ಧಮಾನಕ್ಕೆ ಬಂದಿದ್ದವು. ರೈತರ ಹಿತಾಸಕ್ತಿಗಳನ್ನು ಕಾಪಾಡಲು ರೈತ ಸಂಘ ಆ ಸಂದರ್ಭದಲ್ಲಿ ಶಕ್ತಿಯುತವಾಗಿ ಹೋರಾಟ ಮಾಡುತ್ತಿತ್ತು. ಇನ್ನು ದಲಿತ ಸಂಘಟನೆಗಳು ದಲಿತರ ಹಕ್ಕುಗಳ ಬಗ್ಗೆ ಪ್ರಶ್ನೆ ಮಾಡುವಂತೆ ಒಂದು ಹೊಸ ಜಾಗೃತಿಯನ್ನೇ ಮೂಡಿಸಿತು. ಕಡೆಗೆ ಎರಡೂ ಸಂಘಟನೆಗಳು ನಾನಾ ಕಾರಣಗಳಿಂದ ವಿಘಟನೆಗೊಂಡು ಶಕ್ತಿಹೀನವಾಗಿ ಹೋದವಲ್ಲದೆ ಎತ್ತುವಳಿ ಸಂಘಟನೆಗಳಾಗಿ ಅಷ್ಟಿಷ್ಟು ಉಸಿರಾಡಿಕೊಂಡಿವೆ. ಇನ್ನು ಭಾಷಾ ಹೋರಾಟ ಸಂಘಟನೆಗಳು ಹೊಟ್ಟೆಪಾಡಿನ ಸಂಘಟನೆಗಳಾಗಿ ಅಸ್ಥಿತ್ವವನ್ನೇ ಕಳೆದುಕೊಂಡವು.

ಮೇಲೆ ನಮೂದಿಸಿರುವ ಎಲ್ಲಾ ಸಂಘಟನೆಗಳು ರಾಷ್ಟ್ರ ವಿರೋಧಿ ಸಂಘಟನೆಗಳೇನೂ ಅಲ್ಲ. ಈ ಎಲ್ಲಾ ಸಂಘಟನೆಗಳಲ್ಲಿ ಸ್ವಾರ್ಥ, ವಂಚನೆ, ತಂತ್ರಗಾರಿಕೆ, ಜಾತೀಯತೆ ಮುಂತಾದ ಸಾಮಾಜಿಕ ಪಿಡುಗುಗಳಿದ್ದರೂ ರಾಷ್ಟ್ರೀಯತೆಗೆ ಧಕ್ಕೆ ತರುವಂತಹ ಅಂಶಗಳಿಲ್ಲ. ಹಾಗೆ ನೋಡಿದರೆ ಜಗತ್ತಿನ ಬಹುತೇಕ ಸಂಘಟನೆಗಳು ಅಂತಿಮ ಗುರಿಯನ್ನು ಅಥವಾ ಯಶಸ್ಸನ್ನು ಕಾಣದೆ ನೆಲಕಚ್ಚಿಹೋಗಿವೆ. ಅದಕ್ಕೆಲ್ಲ ಮನುಷ್ಯನಲ್ಲಿರುವ ಭಿನ್ನಾಭಿಪ್ರಾಯಗಳು, ವ್ಯಕ್ತಿತ್ವಗಳು, ಗುಣಗಳು ಕಾರಣವಾಗಿರುತ್ತವೆ. ಮನುಷ್ಯ ಸಮುದಾಯದಲ್ಲೇ ಬದುಕಿದ್ದರೂ ವ್ಯಕ್ತಿತ್ವದಲ್ಲಿ ಸದಾ ಒಂಟಿಯಾಗಿಯೇ, ಸ್ವಾರ್ಥಿಯಾಗಿಯೇ ಆಲೋಚಿಸುತ್ತಿರುತ್ತಾನೆ. ಕೆಲವು ಧಾರ್ಮಿಕ ಸಂಘಟನೆಗಳು ಸಮಾಜಕ್ಕೆ ಯಾವುದೇ ಧಕ್ಕೆ ತರದಂತೆ ಅನ್ಯರ ನಂಬಿಕೆಗಳಿಗೆ ಭಂಗ ತರದಂತೆ ತಮ್ಮ ತಮ್ಮ ನಂಬಿಕೆಗಳನ್ನು ಸಮಾಜದಲ್ಲಿ ಪ್ರಚಾರ ಮಾಡುತ್ತಿರುತ್ತವೆ. ಇಂಥ ಅನೇಕ ಸಂಘಟನೆಗಳು ಕಡೆಗೆ ಟ್ರಸ್ಟುಗಳಾಗಿ ರೂಪಾಂತರ ಪಡೆದುಕೊಂಡು ದಾನಧರ್ಮಗಳಲ್ಲಿ ಮುಳುಗಿ ಹೋಗುತ್ತವೆ. ಈಗ ಮುಖ್ಯವಾಗಿ ಕರ್ನಾಟಕ, ಕೇರಳ ಮತ್ತು ಭಾರತದ ಇನ್ನಿತರ ರಾಜ್ಯಗಳಲ್ಲಿ ಸ್ಥಾಪನೆಗೊಂಡು ಕಡೆಗೆ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪಿಎಫ್‌ಐ, ಎಸ್‌ಡಿಪಿಐ ಮತ್ತು ಇನ್ನಿತರ ಅವುಗಳನ್ನೇ ಹೋಲುವ ಸಂಘಟನೆಗಳ ವಿಷಯಕ್ಕೆ ಬರೋಣ. ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು 2006 ರಲ್ಲಿ ಪಿಎಫ್‌ಐ ಸಂಘಟನೆಯನ್ನು ರೂಪಿಸಲಾಯಿತು. ವಿಲೀನಗೊಂಡ ನಾಲ್ಕು ತಿಂಗಳ ಬಳಿಕ ಫೆಬ್ರವರಿ 2007ರ ಬೆಂಗಳೂರಿನಲ್ಲಿ ಸಭೆ ನಡೆಸುವ ಮೂಲಕ ಅಧಿಕೃತವಾಗಿ ಸಂಘಟನೆ ಅಸ್ತಿತ್ವಕ್ಕೆ ಬಂದಿತು. ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಸಮುದಾಯಗಳ ಜನರ ಹಕ್ಕುಗಳಿಗೆ ಹೋರಾಡುವುದಾಗಿ ಹೇಳಿಕೊಂಡಿದ್ದ ಈ ಮುಸ್ಲಿಂ ರಾಜಕೀಯ ಸಂಘಟನೆಯ ಬಣ್ಣ ಈಗ ಬಯಲಾಗಿದೆ. ಅನೇಕ ಸಹೋದರ ಸಂಘಟನೆಗಳ ಒಡಗೂಡಿ ಪಿಎಫ್‌ಐ ಕಾನೂನು ಬಾಹಿರ ಮತ್ತು ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ನಿರತವಾಗಿರುವುದು ಬೆಳಕಿಗೆ ಬಂದಿದೆ. ಐಸಿಸ್ ಸೇರಿ ಅನೇಕ ಉಗ್ರ ಸಂಘಟನೆಗಳ ಬಲವಾದ ನಂಟು ಈ ಸಂಘಟನೆಗೆ ಇದೆ. ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುವುದು, ಹಿಂದೂ ಕಾರ್ಯಕರ್ತರನ್ನು ಕೊಲೆ ಮಾಡುವುದು, ಸಮಾಜದಲ್ಲಿ ಶಾಂತಿಯನ್ನು ಕೆಡಿಸುವುದು ಈ ಸಂಘಟನೆಯ ರಹಸ್ಯ ಅಜೆಂಡಾಗಳು ಮತ್ತು ಚಟುವಟಿಕೆಗಳು. ಈ ಸಂಘಟನೆಯ ಸಂಸ್ಥಾಪಕ ನಿಷೇಧಿತ ಸಿಮಿ ಸಂಘಟನೆಯ ಸದಸ್ಯ ಕೂಡಾ! ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನಿಷೇಧಿಸಿರುವ ಪಾಫ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರ ವಿರುದ್ಧ ಮೂನ್ನೂರ ಇಪ್ಪತ್ತು ಅಪರಾಧ ಪ್ರಕರಣಗಳು ದಾಖಲಾಗಿವೆ. 2020 ರಲ್ಲಿ ಬೆಂಗಳೂರಿನ ಕೆ.ಜಿ. ಹಳ್ಳಿ-ಡಿ.ಜಿ.ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಪಿಎಫ್‌ಐ ಕೈವಾಡವಿರುವುದು ಸಾಬೀತಾಗಿದೆ. ಹಿಂದೆ ಕರ್ನಾಟಕದಲ್ಲಿ ಹಿಜಾಬ್ ಹೋರಾಟ ರೂಪಿಸಿದ್ದ ಕ್ಯಾಂಪಸ್ ಫ್ರಂಟ್ ಸಂಘಟನೆ ಕೂಡ ಇದರ ಸೋದರ ಸಂಘಟನೆಯೇ. ಸದ್ಯಕ್ಕೆ ಕರ್ನಾಟಕ ಮತ್ತಿತರ ರಾಜ್ಯಗಳಲ್ಲಿ ಪಿಎಫ್‌ಐ ಸೇರಿದಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ರಿಹ್ಯಾಬ್ ಇಂಡಿಯಾ ಫೌಂಡೇಶನ್, ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ನ್ಯಾಷನಲ್ ಕಾನ್ಫಿಡರೇಷನ್ ಆಫ್ ಹ್ಯೂಮನ್ ರೈಟ್ಸ್, ನ್ಯಾಷನಲ್ ವಿಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಫವರ್ ಇಂಡಿಯಾ ಫೌಂಡೇಶನ್ ಎಂಬ ಒಂಬತ್ತು ಸಂಘಟನೆಗಳನ್ನು ಐದು ವರ್ಷಗಳವರೆಗೆ ಕೇಂದ್ರ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ನೀವು ಸರಿಯಾಗಿ ಗಮನಿಸಿ ಸಾಮಾನ್ಯವಾಗಿ ಮುಸ್ಲಿಂ ಸಂಘಟನೆಗಳ ಹೆಸರುಗಳಲಿ `ಇಂಡಿಯಾ’ ಎಂಬುದು ಸಾಮಾನ್ಯವಾಗಿ ಸೇರಿರುತ್ತದೆ. ಆದರೆ ಇವುಗಳ ಚಟುವಟಿಕೆಗಳೆಲ್ಲ ಇಂಡಿಯಾ ಎಂಬ ದೇಶದ ವಿರುದ್ದವೇ ಆಗಿರುತ್ತದೆ. ಇಂಥ ಸಂಸ್ಥೆಗಳನ್ನು `ತಾಯ್ಗಂಡ’ ಸಂಘಟನೆಗಳೆಂದು ಯಾವುದೇ ಬಿಗುಮಾನ ಮತ್ತು ನಾಚಿಕೆಗಳಿಲ್ಲದೆ ಹೇಳಬಹುದು.

ಸಂವಿಧಾನದ ಅಡಿಯಲ್ಲಿ ಹಿಂದೂಗಳ ಸರಿಸಮನಾಗಿ ಎಲ್ಲವನ್ನೂ ಇವರಿಗೆ ಕೊಟ್ಟಿದ್ದರೂ ಇವರ ಆತ್ಮಗಳು ಮಾತ್ರ ಸದಾ ಪಾಕಿಸ್ತಾನದ ಜಪ ಮಾಡುತ್ತಿರುತ್ತಿರುತ್ತವೆ. ಅಲ್ಪಸಂಖ್ಯಾತರ ಹೆಸರಲ್ಲಿ ಅನೇಕ ಸೌಲಭ್ಯಗಳನ್ನು ಪಡೆಯುವ ಈ ಪಡೆ ಭಾರತವನ್ನು ಯಾವೊತ್ತೂ ಪ್ರಾಮಾಣಿಕವಾಗಿ ಮತ್ತು ದೃಢವಾಗಿ ತಮ್ಮ ಎದೆಗಳಲ್ಲಿ ತುಂಬಿಸಿಕೊಳ್ಳದಿರುವುದು ಈ ದೇಶದ ದುರ್ದೈವವೇ ಸರಿ. ಪಿಎಫ್‌ಐ ರಾಜ್ಯದ ಅನೇಕ ಕಡೆಗಳಲ್ಲಿ ಅಲ್ಲದೆ ಕೇರಳದಲ್ಲೂ ಕೂಡ ತನ್ನ ಸದಸ್ಯರಿಗೆ ಮತ್ತು ಕಾರ್ಯಕರ್ತರಿಗೆ ಭಯೋತ್ಪಾದನೆ ಮತ್ತು ವಿದ್ವಂಸಕ ಕೃತ್ಯಗಳ ಬಗ್ಗೆ ತರಬೇತಿ ನೀಡುವ ಸಂಗತಿಗಳು ಸಹ ಬಯಲಾಗಿವೆ. ವಿವಿಐಪಿಗಳ ಮೇಲೆ ಹೇಗೆ ದಾಳಿ ನಡೆಸುವುದು, ದಾಳಿ ನಡೆಸಿದಾಗ ಹೇಗೆ ತಪ್ಪಿಸಿಕೊಳ್ಳುವುದು, ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಾಗ ಹೇಗೆ ವರ್ತಿಸಿ ತಪ್ಪಿಸಿಕೊಳ್ಳಬೇಕು ಮುಂತಾದ ವಿಷಯಗಳ ಬಗ್ಗೆ ತಮಿಳುನಾಡಿನ ನಿವೃತ್ತ ತಮಿಳು ಮುಸ್ಲಿಂ ಪೊಲೀಸ್ ಅಧಿಕಾರಿಗಳಿಂದ ಪಿಎಫ್‌ಐ ತರಬೇತಿಯನ್ನು ತನ್ನ ಕಾರ್ಯಕರ್ತರಿಗೆ ನೀಡುತ್ತಿತ್ತಂತೆ. ಇಂಥ ನಮಕ್ ಹರಾಂ ಸಂಘಟನೆಗಳನ್ನು ಸಂಪೂರ್ಣವಾಗಿ ಮುಚ್ಚಿಸಿ ಅವುಗಳ ಸದಸ್ಯರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕಾಗಿದೆ.
ಕರ್ನಾಟಕದ ಎಲ್ಲಾ ಕಡೆಗಳಲ್ಲೂ ಪಿಎಫ್‌ಐ ಕಚೇರಿಗಳಿಗೆ ಸರ್ಕಾರ ಬೀಗ ಜಡಿದು, ಬೀಗ ಮುದ್ರೆಯನ್ನು ಹಾಕಿ ಹಣ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಫ್‌ಐನ ನಿಷೇಧ ಖಂಡಿತವಾಗಿಯೂ ಮೋದಿಯವರ ಅತ್ಯಂತ ಒಳ್ಳೆಯ ಮತ್ತು ಧೈರ್ಯದ ನಿರ್ಧಾರ. ರಾಷ್ಟ್ರ ವಿರೋಧಿಗಳ ಮೂಳೆ ಮುರಿಯುವ ಕೆಲಸದಲ್ಲಿ ಮೋದಿ ಯಾವೊತ್ತೂ ಹಿಂದೆ ಬೀಳುವುದಿಲ್ಲ. ಇದರ ನಿಷೇಧಕ್ಕೆ ಇಡೀ ರಾಷ್ಟ್ರ ಮೋದಿಯವರನ್ನು ಕೊಂಡಾಡುತ್ತಿದೆ. ಈ ಆಡಳಿತ ಪಕ್ಷದ ಶ್ಲಾಘನೀಯ ನಡೆ. ಪಿಎಫ್‌ಐ ನಿಷೇಧಿಸಿರುವುದನ್ನು ಸರ್ಕಾರದ ಜನವಿರೋಧಿ ನೀತಿಯೆಂದು ಎಸ್‌ಡಿಪಿಐ ಖಂಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂಥ ಸಂಘಟನೆಗಳಲ್ಲಿರುವ ಜನ ಮತ್ತು ಇಂಥ ಸಂಘಟನೆಗಳನ್ನು ಬೆಂಬಲಿಸುವ ಜನ ಈ ದೇಶದಲ್ಲಿ ಜೀವನ ನಡೆಸುವುದು ಕಷ್ಟಕರವಾಗಿದ್ದರೆ ಭಾರತದಿಂದ ತೊಲಗಿ ಪಾಕಿಸ್ತಾನದಲ್ಲೊ, ಆಫ್ಘಾನಿಸ್ತಾನದಲ್ಲೊ ಹೋಗಿ ನೆಮ್ಮದಿಯಾಗಿ ಜೀವಿಸಬಹುದಲ್ಲ. ಇಂಥವರನ್ನು ಆ ದೇಶಗಳು ಕ್ಷಣ ಕೂಡಾ ಇರಿಸಿಕೊಳ್ಳುವುದಿಲ್ಲ.

ಇಂಥ ದೇಶದ್ರೋಹಿ ನೀಚ ಸಂಘಟನೆಯನ್ನು ಕಾಂಗ್ರೆಸ್ ಪಕ್ಷ ಅದರಲ್ಲೂ ಸಿದ್ದರಾಮಯ್ಯ ಪೋಷಿಸುತ್ತಿರುವುದಾಗಿ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೋಪಿಸಿರುವುದು ಪ್ರಕರಣದ ಗಂಭೀರತೆಯನ್ನು ಸೂಚಿಸುತ್ತದೆ. ಸಿದ್ದರಾಮಯ್ಯನವರ ಆಡಳಿತದ ಅವಧಿಯಲ್ಲಿ ಪಿಎಫ್‌ಐ ಸಂಘಟನೆಗೆ ಸಂಬಂಧಪಟ್ಟ ಕೇಸುಗಳನ್ನು ವಾಪಸ್ಸು ಪಡೆದಿರುವುದಾಗಿ ಬೊಮ್ಮಾಯಿಯವರು ಗಂಭೀರವಾಗಿ ಆಪಾದನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಗಂಭೀರವಾಗಿ ಆರೋಪ ಮಾಡಬೇಕಾದರೆ ಅದರಲ್ಲಿ ಹುರುಳಿರಲೇಬೇಕು. ಆ ಬಗ್ಗೆ ಸರ್ಕಾರ ತನಿಖೆಯನ್ನು ಕೈಗೊಳ್ಳಬೇಕು. ಇಷ್ಟೆಲ್ಲಾ ಆರೋಪಗಳನ್ನು ಹೊತ್ತಿರುವ ಪಿಎಫ್‌ಐ ಸಂಘಟನೆಯನ್ನು ಮತ್ತು ಅದರ ಸಹೋದರ ಸಂಘಟನೆಗಳನ್ನು ನಿಷೇಧ ಮಾಡಿ ಅದರ ನೂರಾರು ಸದಸ್ಯರನ್ನು ಬಂಧಿಸಿರುವ ಕ್ರಮವನ್ನು ಕಾಂಗ್ರೆಸ್ ಪಕ್ಷ ಮತ್ತು ಅತಿಮುಖ್ಯವಾಗಿ ಸಿದ್ದರಾಮಯ್ಯನವರು ಬೇಸರ ವ್ಯಕ್ತಪಡಿಸಿರುವರಲ್ಲದೆ ದೇಶದಲ್ಲಿ ಆರೆಸ್ಸೆಸ್ ಸಂಘಟನೆಯನ್ನು ಕೂಡ ನಿಷೇಧಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವುದನ್ನು ನೋಡಿದರೆ ಬೊಮ್ಮಾಯಿಯವರು ಸಿದ್ದರಾಮಯ್ಯನವರ ಮೇಲೆ ಮಾಡಿರುವ ಆರೋಪ ನಿಜವೆನಿಸುತ್ತದೆ. ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಬಲವನ್ನು ದೇಶದೆಲ್ಲೆಡೆ ಮಣ್ಣುಮುಕ್ಕಿಸಿಕೊಂಡು ಕರ್ನಾಟಕದಲ್ಲಿ ತನ್ನ ಅಸ್ತಿತ್ವವಕ್ಕೆ ಹೊಡೆದಾಡುತ್ತಿರುವ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಸಂಪೂರ್ಣವಾಗಿ ಹತಾಶರಾದಂತೆ ಕಾಣುತ್ತಿದ್ದಾರೆ. ತಮ್ಮ ಗಲೀಜು ಲಾಂಗ್ವೇಜ್ ಮತ್ತು ಬಾಡಿ ಲಾಂಗ್ವೇಜಿನಿಂದಾಗಿ ಈಗಾಗಲೇ ಅಷ್ಟಿಷ್ಟೊ ಇದ್ದ ಖ್ಯಾತಿಯನ್ನು ಮಣ್ಣುಪಾಲು ಮಾಡಿಕೊಂಡಿರುವ ಸಿದ್ದರಾಮಯ್ಯ ತಾವು ಅಹಿಂದ ಸಮುದಾಯದ ಪರ ಎಂದು ತೋರಿಸಿಕೊಳ್ಳುವ ಭರದಲ್ಲಿ ದೇಶದ್ರೋಹಿ ಸಂಘಟನೆಗಳನ್ನು ಸಮರ್ಥಿಸಿಕೊಳ್ಳುತ್ತಿರುವುದು ಅವರ ವ್ಯಕ್ತಿತ್ವದ ಅಧೋಗತಿಯನ್ನು ಬಿಂಬಿಸುತ್ತದೆ. ಸಿದ್ದರಾಮಯ್ಯ ಅವರೊಂದಿಗೆ ಕರ್ನಾಟಕದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕೇಂದ್ರ ಸರ್ಕಾರ ಈ ಸಮಯದಲ್ಲಿ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿರುವುದು ಗುಜರಾತ್ ಚುನಾವಣೆಯ ಗಿಮಿಕ್ ಎಂದು ಮೋದಿಯವರ ಮೇಲೆ ಆರೋಪ ಹೊರಿಸುತ್ತಾರೆ. ಸಕ್ರಿಯ ರಾಜಕೀಯದೊಂದಿಗೆ ನೇರ ಚುನಾವಣೆಯನ್ನು ಒಮ್ಮೆಯೂ ಎದುರಿಸಲಾಗದ ಈ ಮಹಾನ್ ನಾಯಕನ ಬಾಯಿಂದ ಇಂಥ ಮಾತುಗಳು ಬರಬೇಕಾದ್ದೆ. ಎಪ್ಪತ್ತರ ದಶಕದಲ್ಲಿ ಕಾಂಗ್ರೆಸಿನ ರೌಡಿ ರಾಜಕಾರಣಿಯೆಂದೇ ಹೆಸರು ಗಳಿಸಿ ಮುಂದೆ ಮುತ್ಸದ್ದಿ ರಾಜಕಾರಣಿಯೆಂಬ ಮುಖವಾಡ ತೊಟ್ಟು ಕಾಂಗ್ರೆಸ್ ಹೈಕಮಾಂಡಿನ ದಾಸ್ಯದ ಬಳಗಕ್ಕೆ ಸೇರಿ ಹರಿಪ್ರಸಾದ್ ಬಹಳ ಚನ್ನಾಗಿ ಮಾತನಾಡುವುದನ್ನು ಕಲಿತಿದ್ದಾರೆ. ಆದರೆ ಕರ್ನಾಟಕದ ಜನತೆಗೆ ಈ ಮಹಾನುಭಾವರ ಬಂಡವಾಳವೇನು ಗೊತ್ತಿಲ್ಲವೇನು? ಇಂಥ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳ ಬಗ್ಗೆ ಕಾಳಜಿಯನ್ನು ತೋರಿಸುತ್ತಿರುವ ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ಸಂವಿಧಾನದ ಆಶಯಗಳಿಗೆ ಅಗೌರವ ತೋರಿಸುತ್ತಿದೆಯೆಂದು ಹೇಳಬಹುದು. ಇಂಥ ಹೇಡಿ ಮತ್ತು ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿರುವುದನ್ನು ನಿಜವಾದ ಭಾರತೀಯರು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಬರಿ ಐದು ವರ್ಷಗಳ ಮಟ್ಟಿಗೆ ಮಾತ್ರ ಈ ಸಂಘಟನೆಗಳನ್ನು ನಿಷೇಧಿಸುವುದಲ್ಲ, ಖಾಯಂ ಆಗಿ ಇಂಥ ಸಂಘಟನೆಗಳನ್ನು ಮತ್ತು ಇಂಥ ಅನೇಕ ಸಂಘಟನೆಗಳನ್ನು ಪತ್ತೆಹಚ್ಚಿ ಬೇರು ಸಮೇತ ಈ ದೇಶದಿಂದ ಕಿತ್ತೊಗೆಯುವ ಕೆಲಸವನ್ನು ಮಾಡಬೇಕಾಗಿರುವುದು ತುರ್ತಿನ ಕೆಲಸವಾಗಿದೆ. ಈ ಪಿಎಫ್‌ಐನ ಉದ್ದೇಶ ಮುಂದಿನ ದಿನಗಳಲ್ಲಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಬದಲಾಯಿಸುವುದಂತೆ ! ಇದು ಅದರ ಘೋಷವಾಕ್ಯವಂತೆ. ಇಂಥ ಸಂಘಟನೆಗಳನ್ನು ಪೋಷಿಸುವ, ಬೆಂಬಲಿಸುವ ಯಾರೇ ಆಗಲಿ ಅಂಥವರು ದೇಶದ್ರೋಹಿಗಳೆಂದೇ ನಿರೂಪಿತರಾಗುತ್ತಾರೆ. ಅಂಥವರನ್ನೂ ಈ ದೇಶದಿಂದ ಗಡಿಪಾರು ಮಾಡಿದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿ ಶಾಂತಿ, ನೆಮ್ಮದಿಗಳು ನೆಲಸಬಹುದೇನೋ ! ಈ ನವರಾತ್ರಿಯ ಸಂದರ್ಭದಲ್ಲಿ ನಾವು ಭಾರತೀಯರು ಅದನ್ನು ಆಶಿಸೋಣ.