-ಜೀವನ್
ಗಾಂಧಿ ಕುಟುಂಬ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಕುಟುಂಬ ಅನ್ನುವ ಮಾತಿರುವಾಗ ಆ ಪಕ್ಷದ ಚುಕ್ಕಾಣಿ ಹಿಡಿದವರಲ್ಲಿ ಗಾಂಧಿ ಪರಿವಾರ ಹೊರತಾದವರು ಯಾರಿರಬಹುದು ಎಂಬ ಕುತೂಹಲ ನಿಮಗೆ ಕಾಡುತ್ತಿರಬಹುದು. ಆ ಬಗ್ಗೆ ತಿಳಿಯೋಣ ಬನ್ನಿ.

ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಕಾಂಗ್ರೆಸ್ ಸಮಿತಿ ( ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವದ ಅನುಸಾರವೇ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷ ಗಾದಿ ಏರಿದವರಲ್ಲಿ ಅವರು ಎರಡನೇಯವರು. ದಲಿತ ಸಮುದಾಯದಲ್ಲಿ ಎರಡನೇಯವರು.
ಅದಿರಲಿ, ಗಾಂಧಿ ಕುಟುಂಬ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಕುಟುಂಬ ಅನ್ನುವ ಮಾತಿರುವಾಗ ಆ ಪಕ್ಷದ ಚುಕ್ಕಾಣಿ ಹಿಡಿದವರಲ್ಲಿ ಗಾಂಧಿ ಪರಿವಾರ ಹೊರತಾದವರು ಯಾರಿರಬಹುದು ಎಂಬ ಕುತೂಹಲ ನಿಮಗೆ ಕಾಡುತ್ತಿರಬಹುದು. ಆ ಬಗ್ಗೆ ತಿಳಿಯೋಣ ಬನ್ನಿ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಮಹಾತ್ಮ ಗಾಂಧಿ ಕರೆ ನೀಡಿದ್ದರು. ಆದರೆ ಅವರ ನಂತರ ಅದಾಗಲಿಲ್ಲ. 1951-52 ರಲ್ಲಿ ಸ್ವಾತಂತ್ರ್ಯ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆದಾಗಿನಿಂದ ಕಾಂಗ್ರೆಸ್ ನೇರವಾಗಿ ನೆಹರೂ-ಗಾಂಧಿ ಕುಟುಂಬದ ಕೈಗೆ ಹೋಯಿತು.

ಅವರನ್ನು ಹೊರತು ಪಡಿಸಿ ಚುಕ್ಕಾಣಿ ಹಿಡಿದವರಲ್ಲಿ ಅನೇಕರು ರಾಜಕೀಯ ಅನಿವಾರ್ಯತೆಯಿಂದ ಆ ಹುದ್ದೆಗೆ ಏರಿದವರು ಅಥವಾ ಗಾಂಧಿ ಕುಟುಂಬವನ್ನು ಎದುರುಹಾಕಿಕೊಂಡು ಮತ್ತು ಗಾಂಧಿ ಕುಟುಂಬದ ಕೃಪೆಯಿಂದ ಅಧ್ಯಕ್ಷ ಗಾದಿ ಅಲಂಕರಿಸಲ್ಪಟ್ಟವರು. ರಾಜೀವ್ ಗಾಂಧಿ ಹತ್ಯೆ ನಂತರ ಗಾಂಧಿ ಕುಟುಂಬ ಪಕ್ಷದಿಂದ ದೂರವುಳಿದಾಗ ಅಧ್ಯಕ್ಷರಾದವರು ಸೇರಿದ್ದಾರೆ.
ಈ ಪೈಕಿ ಇಲ್ಲಿಯವರೆಗೆ 10 ಮಂದಿ ಗಾಂಧಿ ಕುಟುಂಬದ ಹೊರಗಿನವರು ಅಧ್ಯಕ್ಷ ಹುದ್ದೆ ಏರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ 11 ನೆಯವರು.
75 ವರ್ಷಗಳಲ್ಲಿ ಮೂರನೇ ಒಂದು ಭಾಗ ಅಂದರೆ 25 ವರ್ಷ ಮಾತ್ರ ಗಾಂಧಿ ಕುಟುಂಬ ಹೊರತಾದವರು ಅಧ್ಯಕ್ಷರಾಗಿದ್ದಾರೆ. ಅತಿ ಹೆಚ್ಚು ಅವಧಿಗೆ ಅಧ್ಯಕ್ಷರಾದವರು ಯು.ಎನ್. ದೇಬರ್. ಅವರು 1955 ರಿಂದ 59 ರವರೆಗೆ ಐದು ವರ್ಷ ಪಕ್ಷದ ಚುಕ್ಕಾಣಿ ಹಿಡಿದಿದ್ದರು.

ಉಳಿದಂತೆ ನೀಲಂ ಸಂಜೀವರೆಡ್ಡಿ 1960-63, ಕೆ. ಕಾಮರಾಜ್ 1964-67, ಎಸ್. ನಿಜಲಿಂಗಪ್ಪ 1968-69, ಜಗಜೀವನ್ ರಾಂ 1970-71, ಶಂಕರ್ ದಯಾಳ್ ಶರ್ಮಾ 1972-74, ದೇವಕಾಂತ್ ಬರುವಾ 1975-77, ಕಾಸು ಬ್ರಹ್ಮಾನಂದ ರೆಡ್ಡಿ 1977-78, ಪಿ.ವಿ.ನರಸಿಂಹರಾವ್ 1992-94, ಸೀತಾರಾಂ ಕೇಸರಿ 1996-98 ರವರೆಗೆ ಅಧ್ಯಕ್ಷರಾಗಿದ್ದರು. ಅದಾಗಿ 24 ವರ್ಷಗಳ ನಂತರ ಈಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಉನ್ನತ ಹುದ್ದೆ ದೊರೆತಿದೆ.

ಜವಾಹರ್ ಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರು 50 ವರ್ಷಗಳ ಕಾಲ ಪಕ್ಷದ ಆಡಳಿತ ಮಾಡಿದ್ದಾರೆ.
