26.7 C
Bengaluru
Monday, March 20, 2023
spot_img

ಬಿಜೆಪಿಯ ನಿಷ್ಠಾವಂತರಿಗೆ ಅಧಿಕಾರ ಮುಖ್ಯವಲ್ಲ: ನಾರಾಯಣ ಸಾ ಭಾಂಡಗೆ

ರಾಷ್ಟ್ರೀಯವಾದಿ ವಿಚಾರಧಾರೆಯ ಕೇಸರಿ ಕಟ್ಟಾಳು ಮನದಾಳ

ನೀರಕಲ್ಲು ಶಿವಕುಮಾರ್

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ, ಪಕ್ಷ ಕಟ್ಟಿದವರಿಗೆ ಕಿಮ್ಮತ್ತಿಲ್ಲ ಎಂಬ ಮಾತುಗಳು ಕಮಲ ಪಾಳೆಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ `ಶೌರ್ಯ ಸಂದೇಶ್’ ಪತ್ರಿಕೆ ನಾರಾಯಣ ಸಾ ಭಾಂಡಗೆ ಅವರ ಸಂದರ್ಶನವನ್ನು ಮಾಡಿದೆ. ನೇರಧಾಟಿಯಲ್ಲಿ ಭಾಂಡಗೆ ಅವರು ಇಲ್ಲಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ. `ನನಗೆ ರಾಷ್ಟ್ರ ಮೊದಲು, ನಂತರ ಪಕ್ಷ, ಅದರ ನಂತರವೇ ಅಧಿಕಾರ, ರಾಜಕಾರಣ. ಪಕ್ಷಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದೇನೆ. 40 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದೇನೆ. ಅಧಿಕಾರ ಸಿಗುತ್ತದೆ ಎಂಬ ಆಸೆಗೆ ಯಾವುದನ್ನೂ ಮಾಡಲಿಲ್ಲ. ಆದರೆ ಪಕ್ಷವೇ ಗುರುತಿಸಿ ವಿಧಾನಪರಿಷತ್‌ಗೆ ಕಳುಹಿಸಿತು. ನನ್ನ ದುಡಿಮೆಗೆ ಪ್ರಾಧಾನ್ಯತೆ ನೀಡಿತು. ಈಗ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕು ಎಂಬುದು ನಮ್ಮ ಮಹದಾಸೆ. 2023ಕ್ಕೆ ಖಚಿತವಾಗಿ ನಾವು ಭಾರೀ ಬಹುಮತದೊಂದಿಗೆ ಮತ್ತೆ ಆಡಳಿತಕ್ಕೆ ಬರಲಿದ್ದೇವೆ’ ಎಂಬುದು ಭಾಂಡಗೆ ಅವರ ವಿಶ್ವಾಸದ ಮಾತು.

ನಾರಾಯಣ ಸಾ ಭಾಂಡಗೆ ಸಂಘ ಪರಿವಾರ ಮೂಲದ ಬಿಜೆಪಿ ಕಟ್ಟಾಳು. ವಿಧಾನಪರಿಷತ್ ಸದಸ್ಯರಾಗಿ ಮೇಲ್ಮನೆಯಲ್ಲಿ ರಚನಾತ್ಮಕವಾಗಿ ಕಾರ್ಯ ನಿರ್ವಹಿಸಿದವರು. ಬಾಗಲಕೋಟೆಯಿಂದ ಆರಂಭವಾದ ಇವರ ರಾಜಕೀಯಯಾನ ವಿಧಾನಸೌಧ ತಲುಪಿ ಜನಪರಧ್ವನಿ ಮೊಳಗಿಸುವವರೆಗೂ ಮುನ್ನಡೆಯಿತು. ಅಧಿಕಾರ  ಹೋದರೂ ಇಂದಿಗೂ ಅವರು ಪಕ್ಷದ ಶಿಸ್ತಿನ ಸಿಪಾಯಿ. ಸಂಘ ಹಾಗೂ ಪಕ್ಷದಆದೇಶವನ್ನು ಶಿರಸಾವಹಿಸಿ ಪಾಲಿಸುವ ನಿಷ್ಠಾವಂತಕಾರ್ಯಕರ್ತ. ರಾಷ್ಟ್ರೀಯವಾದಿ ವಿಚಾರಧಾರೆಯನ್ನು ಮೈಗೂಡಿಸಿಕೊಂಡು ಬೆಳೆದ ಕಟ್ಟಾ ಹಿಂದುತ್ವವಾದಿಗುಣವನ್ನು ಅವರು ಎಂದಿಗೂ ಅಧಿಕಾರದ ಆಸೆಗಾಗಿ ಪರಿತ್ಯಜಿಸಿದವರಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪಕ್ಷಕ್ಕಾಗಿ ರಾಜ್ಯ ಹಾಗೂ ದೇಶ ಸುತ್ತಲು ಸದಾ ಸಿದ್ಧರಾಗಿ ನಾಯಕರ ಆಣತಿ ಕಾಯುವ ಈ ಬಿಜೆಪಿ ಅನುಯಾಯಿ ಕೇಡರ್ ಬೇಸ್ ಕಮಲ ಪಕ್ಷದ ಪಕ್ಕಾ ಕಾರ್ಯಕರ್ತರು ಹೇಗಿರುತ್ತಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಹಾಗೂ ಇತ್ತೀಚೆಗೆ ಆ ಪಕ್ಷದಲ್ಲಿ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆಸುವ ನಾಯಕರಿಗೆ ಮಾದರಿ.

ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಬೆಲೆಯಿಲ್ಲ, ಪಕ್ಷ ಕಟ್ಟಿದವರಿಗೆ ಕಿಮ್ಮತ್ತಿಲ್ಲ ಎಂಬ ಮಾತುಗಳು ಕಮಲ ಪಾಳೆಯದಲ್ಲಿ ಬಲವಾಗಿ ಕೇಳಿಬರುತ್ತಿರುವ ಈ ಹೊತ್ತಿನಲ್ಲಿ `ಶೌರ್ಯ ಸಂದೇಶ್’ ಪತ್ರಿಕೆ ಅವರ ಸಂದರ್ಶನವನ್ನು ಮಾಡಿದೆ. ನೇರಧಾಟಿಯಲ್ಲಿ ಭಾಂಡಗೆ ಅವರು ಇಲ್ಲಿ ತಮ್ಮ ಮನದಾಳ ತೆರೆದಿಟ್ಟಿದ್ದಾರೆ. `ನನಗೆ ರಾಷ್ಟ್ರ ಮೊದಲು, ನಂತರ ಪಕ್ಷ, ಅದರ ನಂತರವೇ ಅಧಿಕಾರ, ರಾಜಕಾರಣ. ಪಕ್ಷಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದೇನೆ. 40 ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದೇನೆ. ಅಧಿಕಾರ ಸಿಗುತ್ತದೆ ಎಂಬ ಆಸೆಗೆ ಯಾವುದನ್ನೂ ಮಾಡಲಿಲ್ಲ. ಆದರೆ ಪಕ್ಷವೇ ಗುರುತಿಸಿ ವಿಧಾನಪರಿಷತ್‌ಗೆ ಕಳುಹಿಸಿತು. ನನ್ನ ದುಡಿಮೆಗೆ ಪ್ರಾಧಾನ್ಯತೆ ನೀಡಿತು. ಈಗ ಪಕ್ಷದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಬೇಕು ಎಂಬುದು ನಮ್ಮ ಮಹದಾಸೆ. 2023ಕ್ಕೆ ಖಚಿತವಾಗಿ ನಾವು ಭಾರೀ ಬಹುಮತದೊಂದಿಗೆ ಮತ್ತೆ ಆಡಳಿತಕ್ಕೆ ಬರಲಿದ್ದೇವೆ’ ಎಂಬುದು ಭಾಂಡಗೆ ಅವರ ವಿಶ್ವಾಸದ ಮಾತು.

“ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಉಳಿಗಾಲವಿಲ್ಲ ಎಂಬ ಮಾತಿನಲ್ಲಿ ಸತ್ಯವಿಲ್ಲ. ಅಧಿಕಾರ ರಾಜಕಾರಣದಲ್ಲಿ ಎಲ್ಲರಿಗೂ ಅವಕಾಶಗಳು ಸಿಗಲು ಸಾಧ್ಯವಿಲ್ಲ. ಒಂದು ಸಿದ್ಧಾಂತಕ್ಕಾಗಿ, ದೇಶಕ್ಕಾಗಿ ನಮ್ಮೆಲ್ಲ ವೈಯಕ್ತಿಕ ಆಸೆ-ಆಕಾಂಕ್ಷೆಗಳನ್ನು ತ್ಯಜಿಸುವುದು ಅನಿವಾರ್ಯ. ರಾಷ್ಟ್ರೀಯವಾದಿ ಚಿಂತನೆಯ ಪ್ರತಿಕಾರ್ಯಕರ್ತರಿಗೂ ಇದು ಸ್ಪಷ್ಟವಾಗಿ ತಿಳಿದಿದೆ. ಬಿಜೆಪಿಯಲ್ಲಿ ಮೂಲ, ವಲಸಿಗ ಎಂಬ ತಾರತಮ್ಯ, ಬೇಧ ಇಲ್ಲವೇ ಇಲ್ಲ. ಇಂತಹ ಮಾತುಗಳು ಕಾಲ್ಪನಿಕ. ಪಕ್ಷದ ನೀತಿ, ಸೈದ್ಧಾಂತಿಕ ನಿಲುವುಗಳನ್ನು ಒಪ್ಪಿ ನಮ್ಮೊಳಗೆ ಬಂದ ಮೇಲೆ ಎಲ್ಲರೂ ನಮ್ಮವರೇ’ ಎಂದು ನಾರಾಯಣ ಸಾ ಭಾಂಡಗೆ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಅವರೊಂದಿಗೆ ನಡೆಸಿರುವ ಸಂದರ್ಶನದ ಪೂರ್ಣ ಪಾಠ ಕೆಳಗಿದೆ.

*ಪರಿಷತ್ ಸದಸ್ಯರಾಗಿ ಒಂದು ಅವಧಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದಿರಿ. ಪಕ್ಷ ಮತ್ತೊಮ್ಮೆ ನಿಮಗೆ ಅವಕಾಶ ಮಾಡಿಕೊಡಲಿಲ್ಲವೇಕೆ? ನಿಷ್ಠಾವಂತರಿಗೆ ಬಿಜೆಪಿಯಲ್ಲಿ ಬೆಲೆ ಇಲ್ಲವೇ?

ರಾಜ್ಯದಲ್ಲಿ ಬಿಜೆಪಿ ಕಟ್ಟುವುದರ ಹಿಂದೆ ಲಕ್ಷಾಂತರ ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗವಿದೆ. ಸಂಘ ಪರಿವಾರದಿಂದ ಬಂದು ನಾಲ್ಕು ದಶಕಗಳ ಕಾಲ ಜನಸಂಘ ಹಾಗೂ ಬಿಜೆಪಿ ಸಂಘಟನೆಗೆ ಕೆಲಸ ಮಾಡಿದ ನನಗೆ ಪಕ್ಷಅಧಿಕಾರ ನೀಡಿದೆ. ಸಾಮಾನ್ಯ ಕಾರ್ಯಕರ್ತನಾದ ನನಗೆ ಇದೇ ಸಾರ್ಥಕ ವಿಚಾರ. ನನ್ನಂತೆ ದುಡಿದ ಎಲ್ಲರಿಗೂ ಇಂತಹ ಅವಕಾಶ ಸಿಗಲಿಲ್ಲ. ಪರಿಷತ್ ಸದಸ್ಯನಾಗಿದ್ದ ಆರು ವರ್ಷದ ಅವಧಿಯಲ್ಲಿ ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಂಡೇ ಕೆಲಸ ಮಾಡಿದ್ದೇನೆ. ಅಧಿಕಾರದ ಆಸೆ ಎಂದಿಗೂ ನನ್ನ ಬೆನ್ನು ಬಿದ್ದಿಲ್ಲ. ಅಧಿಕಾರ ಇರಲಿ, ಬಿಡಲಿ ನಾನು ಪಕ್ಷಕ್ಕೆ ದುಡಿಯಲು ಸದಾ ಸಿದ್ಧ. ಒಬ್ಬ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಅಧಿಕಾರದ ಹಿಂದೆ ಹೋಗಲು ಸಾಧ್ಯವೇಇಲ್ಲ. ಅಧಿಕಾರಕ್ಕೇರಿದವರು ಪಕ್ಷಕ್ಕಾಗಿ ದುಡಿದ ಎಲ್ಲಾ ಕಾರ್ಯಕರ್ತರ ಪ್ರತಿನಿಧಿಗಳು.

*ಬಿಜೆಪಿಯಲ್ಲಿ ಮೂಲ ಹಾಗೂ ವಲಸಿಗರ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದಿದೆ. ವಲಸಿಗರು ಮೇಲುಗೈ ಸಾಧಿಸಿದ್ದಾರೆ ಎಂಬ ಮಾತಿದೆ. ಈ ವಿಚಾರದಲ್ಲಿ ನಿಮ್ಮ ಭಾವನೆ ಏನು?

ಮೂಲ ಹಾಗೂ ವಲಸಿಗರು ಎಂಬ ಮಾತೇ ನಮ್ಮಲ್ಲಿಲ್ಲ. ಪಕ್ಷದಲ್ಲಿ ಇರುವ ಎಲ್ಲರೂ ನಮ್ಮವರೇ. ಹೊರಗಿನಿಂದ ಬಂದವರಿಂದ ಪಕ್ಷಕ್ಕೆ ಹಾನಿಯಾಗಿಲ್ಲ. ಅವರು ಮೂಲ ಬಿಜೆಪಿಗರ ಅವಕಾಶ ಕಸಿದುಕೊಂಡೂ ಇಲ್ಲ. ನಮಗೆ ಸರ್ಕಾರ ರಚಿಸಲು ಬಹುಮತ ಅಗತ್ಯವಿದ್ದಾಗ ಬಿಜೆಪಿ ತತ್ವ-ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದವರನ್ನು ಸ್ವಾಗತಿಸಿದ್ದೇವೆ. ಕೊಟ್ಟ ಮಾತಿನಂತೆ ಅವರಿಗೆ ಅಧಿಕಾರ ನೀಡಿರಬಹುದು. ನಮ್ಮ ಪಕ್ಷಕ್ಕೆ ಸೇರಿದ ನಂತರ ಅವರು ನಮ್ಮವರೇ ಆಗಿದ್ದಾರೆ.ಹೀಗಾಗಿ ಇಂತಹ ಮಾತುಗಳಲ್ಲಿ ಅರ್ಥವಿಲ್ಲ. ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರು ಕೂಡಾ ಜನತಾ ಪರಿವಾರದಿಂದ ಬಂದವರು. ಅವರ ಪಕ್ಷನಿಷ್ಠೆ ಅಚಲ. ಎಲ್ಲವನ್ನೂ ಅಳೆದು ತೂಗಿಯೇ ವರಿಷ್ಠರು ಅವರಿಗೆ ಆದ್ಯತೆ ನೀಡಿದ್ದಾರೆ. ಸಚಿವ ಸಂಪುಟ ಕೂಡಾ ಸಮತೋಲನದಿಂದ ಕೂಡಿದೆ.

*ಬಿಜೆಪಿ ಕರ್ನಾಟಕದಲ್ಲಿ ಈವರೆಗೂ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಪಕ್ಷ ಸದೃಢವಾಗಿದ್ದರೆ ಇದು ಸಾಧ್ಯವಿತ್ತು. ಜನತಾ ದಳ, ಕಾಂಗ್ರೆಸ್ ರಾಜ್ಯದಲ್ಲಿ ಭಾರೀ ಬಹುಮತದೊಂದಿಗೆ ಆಡಳಿತ ನಡೆಸಿದ ಇತಿಹಾಸವಿದೆ. ಬಿಜೆಪಿ ಇಂತಹ ಇತಿಹಾಸ ಬರೆಯಲು ಸಾಧ್ಯವೇ?

ಖಂಡಿತ.ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿಲ್ಲ ನಿಜ. ಆದರೆ ನಾವು 2008 ಮತ್ತು 2018ರಲ್ಲಿ ಬಹುಮತದ ಅಂಚಿಗೆ ಬಂದೆವು. ಅದಕ್ಕೆ ನಾನಾ ಕಾರಣಗಳಿವೆ. ನಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಮಟ್ಟದಲ್ಲಿ ಫಲ ಸಿಗಲಿಲ್ಲ. ಅಲ್ಪಅಂತರದಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಪರಾಭವಗೊಂಡಿದ್ದರಿಂದ ಬಹುಮತ ಸಾಧಿಸಲಾಗಲಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎರಡೂ ಸಲ ಅಧಿಕಾರ ಹಿಡಿದಿದ್ದೇವೆ. ಮುಂದಿನ 2023ರ ಚುನಾವಣೆಯಲ್ಲಿ ಪ್ರಚಂಡ ದಿಗ್ವಿಜಯ ಸಾಧಿಸುತ್ತೇವೆ. ರಾಜ್ಯದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದಲ್ಲಿ ಪಕ್ಷ ಸದೃಢವಾಗಿದೆ. ದಕ್ಷಿಣ ಭಾಗದ ಕೆಲ ಜಿಲ್ಲೆಗಳಲ್ಲಿ ನಮ್ಮ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವನ್ನು ನಾವು ಮನಗಂಡಿದ್ದೇವೆ. ಲಕ್ಷಾಂತರ ಕಾರ್ಯಕರ್ತರ ಪಡೆ ನಮ್ಮಲ್ಲಿದೆ.

*ಪಕ್ಷ ನಿಮಗೆ ಯಾವಜವಾಬ್ದಾರಿ ವಹಿಸಿದೆ? ನೀವು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಬಾಗಲಕೋಟೆ ಜಿಲ್ಲೆಗೆ ನಿಮ್ಮ ವ್ಯಾಪ್ತಿ ಸೀಮಿತವಾಗಿದೆಯೇ?

ವಿಧಾನಪರಿಷತ್ ಅಧಿಕಾರಾವಧಿ ಮುಗಿದ ನಂತರ ಪೂರ್ಣಾವಧಿ ಕಾರ್ಯಕರ್ತನಾಗಿ ನಾನು ಪಕ್ಷ ವಹಿಸಿದ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ನಂತರ ಅನೇಕ ಗುರುತರ ಹೊಣೆ ನನ್ನ ಪಾಲಿಗೆ ಬಂದಿದೆ. ಉತ್ತರಕರ್ನಾಟಕದ ಆರು ಜಿಲ್ಲೆಗಳ ಪ್ರಭಾರಿಯಾಗಿ ಸಂಘಟನೆಗೆ ಕೈ ಜೋಡಿಸಿದ್ದೇನೆ. ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯನಾಗಿಯೂ ಮುಂದುವರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನನ್ನನ್ನು ಕೋಲ್ಕತ್ತ ಮಹಾನಗರದ ಉಲುಬೇರಿಯ ಪೂರ್ವ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯಾಗಿ ಕಳುಹಿಸಲಾಗಿತ್ತು. 25 ದಿನಗಳ ಕಾಲ ಅಲ್ಲಿಯೇ ಮೊಕ್ಕಾಂ ಹೂಡಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಿದೆ. ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ ಚುನಾವಣೆಗೆ ಪಕ್ಷದ ಆದೇಶದಂತೆ ಕೆಲಸ ಮಾಡಿದ್ದೇನೆ. ಕಾರ್ಯಕರ್ತರೊಂದಿಗೆ ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುವಾಗ ನನಗೆ ಉತ್ಸಾಹ, ಹುಮ್ಮಸ್ಸು ಬರುತ್ತದೆ. ದಣಿವಿಲ್ಲದೆ ದುಡಿಯುತ್ತೇನೆ. ಮುಂದೆಯೂ ಪಕ್ಷ ಹೊಸ ಹೊಸ ಜವಾಬ್ದಾರಿ, ಟಾಸ್ಕ್ ನೀಡಲಿ ಎಂದು ಬಯಸುತ್ತೇನೆ.

`ಕ್ಷತ್ರಿಯ ಸಮಾಜಕ್ಕೆ ಮಾರ್ಗದರ್ಶನ ತೋರಲು ಗುರುಪೀಠ ಮಾಡಿದರೆ ಅಭ್ಯಂತರವಿಲ್ಲ’

ಕ್ಷತ್ರಿಯ ಸಮಾಜ ಇಂದು ಸಂಘಟಿತವಾಗುತ್ತಿರುವುದು ಉತ್ತಮ ಬೆಳವಣಿಗೆ. ಒಳಪಂಗಡ ಮರೆತು ಸಮುದಾಯ ಒಗ್ಗಟ್ಟಾಗುತ್ತಿದೆ. ಇದು ಹೆಮ್ಮೆ ಹಾಗೂ ಸ್ವಾಗತಾರ್ಹ ವಿಚಾರ. ಕರ್ನಾಟಕ ಕ್ಷತ್ರಿಯ ಒಕ್ಕೂಟ(ಕೆಕೆಒ)ದ ರಾಜ್ಯಾಧ್ಯಕ್ಷ ಉದಯ್‌ಸಿಂಗ್ ನೇತೃತ್ವದಲ್ಲಿ ಇತ್ತೀಚೆಗೆ ರಾಜ್ಯವ್ಯಾಪಿಯಾಗಿ ಸಂಘಟನೆ ಬಲಗೊಂಡಿದೆ. ರಾಜಕೀಯ ಪಕ್ಷಗಳಿಗೂ ನಮ್ಮ ಕೂಗು ಮುಟ್ಟಿದೆ. ಜನಾಂಗಕ್ಕೆ ನ್ಯಾಯಯುತ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂಬುದು ನಮ್ಮ ಪ್ರತಿಪಾದನೆ. ಇದಕ್ಕಾಗಿ ನಿರಂತರವಾಗಿ ಸಮುದಾಯ ನಡೆಸುತ್ತಾ ಬಂದ ಪ್ರಯತ್ನಕ್ಕೆ ಯಶಸ್ಸು ಸಿಗುವ ಕಾಲ ಹತ್ತಿರವಾಗಿದೆ. ಕ್ಷತ್ರಿಯರಿಗೆ ಮುಂದಿನ ದಿನಗಳ ರಾಜಕಾರಣದಲ್ಲಿ ಖಂಡಿತ ಭವಿಷ್ಯವಿದೆ ಎಂದು ಸಮುದಾಯದ ಮುಖಂಡರಾಗಿ ನಾರಾಯಣ ಸಾ ಭಾಂಡಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂದರ್ಶನದ ವೇಳೆ ಕ್ಷತ್ರಿಯ ಸಮಾಜಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ, ರಾಜಕೀಯ ಪ್ರಾತಿನಿಧ್ಯ, ಕ್ಷತ್ರಿಯ ಯುವಕರು ಸಾಗಬೇಕಾದದಾರಿ, ಭವಿಷ್ಯದ ಸಂಘಟನೆಯ ಬಗ್ಗೆ ಅವರು ಮಾತನಾಡಿದರು.

ಕ್ಷತ್ರಿಯ ಸಮುದಾಯದ 36 ಒಳಪಂಗಡಗಳು ಒಗ್ಗಟ್ಟಾಗಿ ಮುಂದಿನ ಹಾದಿಯನ್ನು ನಿರ್ಧರಿಸಬೇಕಿದೆ. ರಾಜಕೀಯದಲ್ಲಿ ನಮ್ಮನ್ನು ಯಾರು ಬೆಳೆಸುವುದಿಲ್ಲ ಎಂಬ ಕೊರಗು ಬೇಡ. ನಮಗೆ ನಾವೇ ಬೆಳೆಯಬೇಕು. ಇಷ್ಟು ಕ್ಷತ್ರಿಯರಿದ್ದರೂ ನಮ್ಮನ್ನು ಏಕೆ ಗುರುತಿಸಲಿಲ್ಲ ಎಂಬುದಕ್ಕೆ ನಾವು ಈವರೆಗೂ ಸಂಘಟಿತರಾಗಿರಲಿಲ್ಲ ಎನ್ನುವುದೇ ಕಾರಣ.ಸ್ವಂತ ಶಕ್ತಿ, ಪರಿಶ್ರಮದಿಂದ ನಾವು ಮುಂದೆ ಬರಬೇಕು. ನಮ್ಮ ಹಕ್ಕು ಪಡೆಯಬೇಕು. ಅಂತೆಯೇ ಸಮಾಜದ ಯುವಕರು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಭದ್ರವಾಗಬೇಕು. ಜನಾಂಗಕ್ಕೆ ಮಾರ್ಗದರ್ಶನ ಮಾಡಲು ಮಠ, ಗುರುಗಳು ಬೇಕು ಅನಿಸಿದರೆ ಎಲ್ಲರೂ ಸೇರಿ ನಿರ್ಧರಿಸಿ ಭವಿಷ್ಯದಲ್ಲಿಗುರುಪೀಠ ಮಾಡಿದರೆ ಅಡ್ಡಿಯಿಲ್ಲ. ಆದರೆಅದಕ್ಕೂ ಮೊದಲು ನಮಗೆ ನಾವೇ ಗುರುಗಳಾಗಬೇಕು. ಆದಾಗ್ಯೂ ಕ್ಷತ್ರಿಯ ಗುರುಪೀಠ ಆಗುವುದಾದರೆ ಆಗಲಿ ಎಂದು ಭಾಂಡಗೆ ಹೇಳಿದರು.

ಎಲ್ಲಾ ಸಮುದಾಯಗಳಂತೆ ನಮ್ಮಲ್ಲೂ ಬಡವರಿದ್ದಾರೆ. ಅವರ ಅಭಿವೃದ್ಧಿಗೆ ಸರ್ಕಾರ ಗಮನಹರಿಸಬೇಕು ಹಾಗೂ ನಾವೂ ಕೂಡಾ ಕೆಳಮಟ್ಟದಲ್ಲಿರುವ ನಮ್ಮ ಸೋದರರನ್ನು ಮೇಲೆತ್ತುವ ಕಾರ್ಯದಲ್ಲಿ ಕೈ ಜೋಡಿಸಬೇಕು. ಎಲ್ಲರಲ್ಲಿಯೂ ಇಚ್ಛಾಶಕ್ತಿ ಇರಬೇಕು. ಕ್ಷತ್ರಿಯರು ಪುರಾತನ ಕಾಲದಿಂದಲೂ ತಾವು ಶಕ್ತಿಶಾಲಿಯಾಗುವುದರ ಜೊತೆಗೆ ಉಳಿದ ಸಮುದಾಯಗಳಿಗೂ ಶಕ್ತಿ ತುಂಬಿ ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಜನಕಲ್ಯಾಣವನ್ನೇ ಉಸಿರಾಗಿಸಿಕೊಂಡವರು. ಹಿಂದುತ್ವ ರಕ್ಷಣೆ, ರಾಷ್ಟçರಕ್ಷಣೆ ಕೈಂಕರ್ಯದ ಗುಣಗಳು ನಮ್ಮ ರಕ್ತದಲ್ಲಿಯೇ ಬಂದಿವೆ. ಇದೇ ಹಾದಿಯಲ್ಲಿ ನಾವು ಮುನ್ನಡೆಯುವ ಗುರುತರ ಹೊಣೆ ಪ್ರತಿ ಕ್ಷತ್ರಿಯನ ಮೇಲಿದೆ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಅವರು ನುಡಿದರು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles