–ನೀರಕಲ್ಲು ಶಿವಕುಮಾರ್
ನಾರಾಯಣರಾವ್ ತಾತುಸ್ಕರ ಅವರು ಪ್ರಖರ ವಾಗ್ಮಿ, ಚಿಂತಕ. ದೇಶ ಸುತ್ತಿ ಕೋಶ ಓದಿ ಅಪಾರ ಜ್ಞಾನ ಪಡೆದ ಈ ಹಿರಿಯ ಜೀವಿ ಅದನ್ನು ಸಮಾಜದ ಉನ್ನತಿಗೆ ಬೆಳೆಸಿದ ಮಹಾಯೋಗಿ ಎನಿಸಿಕೊಂಡಿದ್ದಾರೆ. ಎತ್ತರದ ನಿಲುವಿನ ಅಜಾನುಬಾಹುವಿಗೆ ಹೃದಯ ಶ್ರೀಮಂತಿಕೆ, ಮುಗುಳು ನಗೆಯ ಮೃದುಭಾವವೇ ಹೆಗ್ಗುರುತು. ನಿರರ್ಗಳ ಮಾತಿನ ಶೈಲಿ, ಆ ಮಾತಿನಲ್ಲಿ ತಮ್ಮ ಜ್ಞಾನ, ಜೀವಾನುಭವವನ್ನು ಬೆರೆಸಿ ಎದುರಿರುವರಲ್ಲಿ ಆತ್ಮವಿಶ್ವಾಸ, ಜೀವನ ಪ್ರೀತಿ ಮತ್ತು ಭರವಸೆ ಹುಟ್ಟಿಸುವ ಶೈಲಿ ಕಂಡು ಸದಾ ಚಟುವಟಿಕೆಯಿಂದ ಇರುತ್ತ ಸಮಾಜದ ಒಳಿತಿಗೆ ಚಿಂತಿಸುವ ಕಾರ್ಯವೈಖರಿ ಗುರುತಿಸಿದ ನಡೆದಾಡುವ ದೇವರು ಬಿಜಾಪುರದ ಸಿದ್ದೇಶ್ವರ ಸ್ವಾಮಿ ಅವರು `ಸಿವಿಲ್ ಡ್ರೆಸ್ ಸಂತ’ ಎಂದು ಬಣ್ಣಿಸುವ ಮೂಲಕ ಮುಕ್ತಕಂಠದಿಂದ ತಾತುಸ್ಕರ ಅವರನ್ನು ಆಶೀರ್ವದಿಸಿದ್ದಾರೆ.

ಒಬ್ಬ ವ್ಯಕ್ತಿಗೆ ಜೀವನದಲ್ಲಿ ಎರಡು ಮಹತ್ವದ ದಿನಗಳು. ಒಂದು ಆತ ಜನಿಸಿದ ದಿನ. ಇನ್ನೊಂದು ತನ್ನ ಜನನದ ಉದ್ದೇಶ ಅರ್ಥವಾದ ದಿನ. ಯಾವುದೇ ವ್ಯಕ್ತಿ ತನ್ನ ಸುತ್ತಲಿನ ಸಾಮಾಜಿಕ ಪರಿಸರ, ತಾನು ಬೆಳೆವ ವಾತಾವರಣ, ಅರಿವಿಗೆ ನಿಲುಕುವ ವಿಷಯಗಳು ಹಾಗೂ ಮನಸ್ಸಿಗೆ ತಾಕುವ ವಿಚಾರಗಳ ಮೂಲಕವೇ ತನ್ನ ಜನನದ ಉದ್ದೇಶವೇನೆಂಬುದನ್ನು ಮನದಟ್ಟು ಮಾಡಿಕೊಳ್ಳುತ್ತಾ ಬೆಳೆಯುತ್ತಾನೆ. ಅವನಿಗೆ ಸಿಗುವ ಶಿಕ್ಷಣ, ಸಂಸ್ಕಾರವೇ ಅವನು ಸಾಗುವ ಹಾದಿಯನ್ನು ನಿರ್ಧರಿಸುತ್ತದೆ. ಜೀವನದ ಅನುಭವಗಳು ಆತ್ಮಸಂಗಾತಿಗಳಾಗುತ್ತವೆ. ಹೀಗೆ ಸ್ವಯಂ ಪ್ರಭಾವಿತರಾಗಿ ಅನೇಕ ರಂಗಗಳಲ್ಲಿ ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ. ಸಮಾಜದಿಂದ ತಾವು ಪಡೆದಿದ್ದಕ್ಕೆ ಪ್ರತಿಯಾಗಿ ಕೊಡುಗೆ ಸಲ್ಲಿಸುವ ಉದಾತ್ತ ಮನೋಭಾವದ ವ್ಯಕ್ತಿಗಳ ಹಲವು ಸಾರ್ಥಕ ಕಾರ್ಯಗಳೂ ನಮ್ಮ ಕಣ್ಣ ಮುಂದಿವೆ. ಕರುನಾಡಿನ ಇಂತಹ ಕರ್ಮಯೋಗಿಗಳ ಪೈಕಿ ಒಬ್ಬರು ನಾರಾಯಣರಾವ್ ತಾತುಸ್ಕರ.
ಯಶಸ್ವಿ ಉದ್ಯಮಿಯಾಗಿ, ಸಮಾಜ ಸೇವಕರಾಗಿ, ಸಾಮಾಜಿಕ ಸಂಘಟಕರಾಗಿ ಗುರುತಿಸಿಕೊಂಡಿರುವ ಧಾರವಾಡ ಮೂಲದ ನಾರಾಯಣರಾವ್ ತಾತುಸ್ಕರ 77 ವಸಂತಗಳ ಹೊಸ್ತಿಲಿಗೆ ಬಂದು ನಿಂತಿದ್ದಾರೆ. ಸತತ ಪರಿಶ್ರಮ, ಮಹತ್ತರವನ್ನು ಸಾಧಿಸಬೇಕೆಂಬ ಮನದ ತುಡಿತ, ಛಲ, ಸ್ವಾಭಿಮಾನದ ನಡೆಯಿಂದ ಗುರಿ ಮುಟ್ಟಿದ ಅವರ ಜೀವನಯಾನ ಇಂದಿನ ಯುವಪೀಳಿಗೆಗೆ ದಾರಿದೀಪವಾಗಿದೆ. ಸಮಾಜದ ಸಂಪತ್ತನ್ನು ಅಭಿವೃದ್ಧಿಪಡಿಸಿ ಕಾಪಾಡಿ ಅದನ್ನು ಜನಹಿತಕ್ಕೆ ಮತ್ತು ಸಮಾಜದ ಉನ್ನತಿಗೆ ವಿನಿಯೋಗಿಸಬೇಕಾದದು ನಮ್ಮ ಧರ್ಮ ಎಂಬ ತತ್ವವನ್ನು ನಂಬಿ ಆಡಂಬರದ ಭೋಗ-ವಿಲಾಸಗಳ ತ್ಯಜಿಸಿ ಸರಳ, ಶಾಂತಜೀವನ ನಡೆಸಬೇಕೆಂಬ ಸಂಕಲ್ಪ ತೊಟ್ಟು ತಾವು ಹುಟ್ಟಿದ ಜನಾಂಗ, ಸಮಾಜದ ಅಶಕ್ತ ವರ್ಗಗಳ ಕಲ್ಯಾಣಕ್ಕೆ ಜೀವನ ಮುಡುಪಿಟ್ಟ ತಾತುಸ್ಕರ ಅವರ ಕಾಯಕ ನಿಷ್ಠೆ ಉದಯೋನ್ಮುಖ ಉದ್ಯಮಿ, ಸಾಧಕರಿಗೆ ಮಾದರಿಯಾಗಿದೆ.
ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನದಿಂದ ಸಾಧನೆ
ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರಾದ ಧಾರವಾಡದಲ್ಲಿ ನಾರಾಯಣರಾವ್ ತಾತುಸ್ಕರ ಜನಿಸಿದ್ದು 1948ರ ಆಗಸ್ಟ್ 29 ರಂದು. ತಂದೆ ಬಾಬುರಾವ್ ಅವರು ಸಿದ್ಧ ಉಡುಪು ತಯಾರಕರಾಗಿದ್ದರು. ತಮ್ಮ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ತಾಯಿ ಕಮಲಬಾಯಿ ಪತಿಯ ಎಲ್ಲಾ ಕಾರ್ಯಗಳಿಗೆ ಬೆನ್ನೆಲುಬಾಗಿದ್ದರು. ಸಮಾಜದ ಬಗ್ಗೆ ಕಳಕಳಿ, ಧಾರ್ಮಿಕ ನಿಷ್ಠೆ ಮತ್ತು ಉದಾತ್ತ ಸಂಪ್ರದಾಯಸ್ಥರ ಕುಟುಂಬ ಅದಾಗಿತ್ತು. ಇಂತಹ ಮನೆಯಲ್ಲಿ ಹುಟ್ಟಿದ ತಾತುಸ್ಕರ ಚಿಕ್ಕಂದಿನಲ್ಲೇ ಸರಳ ಸಜ್ಜನಿಕೆ, ಸದ್ಗುಣ, ಸೇವಾ ಮನೋಭಾವ ರೂಢಿಸಿಕೊಂಡಿದ್ದರು. ಧೈರ್ಯ, ವಿವೇಕ, ದೂರದೃಷ್ಟಿ, ಜ್ಞಾನದ ಹಸಿವು ಅವರ ಬೆಳವಣಿಗೆ ಹಂತದಲ್ಲಿ ಜೊತೆಗೂಡಿದವು.
ಪ್ರಾಥಮಿಕ ಶಿಕ್ಷಣವನ್ನು ಹುಬ್ಬಳ್ಳಿಯ ಮರಾಠಿ ಎರಡನೇ ನಂಬರಿನ ಸರ್ಕಾರಿ ಶಾಲೆಯಲ್ಲಿ ಪೂರೈಸಿದ ಅವರು ನಂತರ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಓದಿ 1969ರಲ್ಲಿ ಜೆ.ಜಿ. ಕಾಮರ್ಸ್ ಕಾಲೇಜಿನಿಂದ ಬಿ.ಕಾಂ. ಪದವಿಯನ್ನು ಪಡೆದರು. ವ್ಯಾಪಾರಕ್ಕೆ ಕಾಲಿಟ್ಟು ಆರಂಭದ ದಿನಗಳಲ್ಲಿ ಅಪಾರ ಕಷ್ಟ ನಷ್ಟಕ್ಕೆ ಗುರಿಯಾದರು. ಆದರೆ ದೃಢವಾದ ವಿಶ್ವಾಸ, ಅಚಲ ನಂಬಿಕೆಯಿಂದ ಮುನ್ನಡೆದರು. ತಂದೆಯವರಿಂದ ತಮಗೆ ಬಂದ ರೆಡಿಮೇಡ್ ಬಟ್ಟೆ ವ್ಯಾಪಾರವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಲು ಹೋಗಿ ಕೈ ಸುಟ್ಟುಕೊಂಡಿದ್ದು ತಾತುಸ್ಕರ ಅವರು ವ್ಯವಹಾರ ಸೂಕ್ಷ್ಮಗಳನ್ನು ಕಲಿಸಿತು. ಹೆಣೆದ ಬಟ್ಟೆ ವ್ಯಾಪಾರ ಬಂದ್ ಮಾಡಿ ಮಿಲ್ ಬಟ್ಟೆ ಏಜೆನ್ಸಿ ಪಡೆದರೂ ವಸ್ತ್ರೋದ್ಯಮ ಕೈ ಹಿಡಿಯದಿದ್ದಾಗ ಕುಟುಂಬ ಮತ್ತು ಸ್ನೇಹಿತರಿಂದ ನೆರವು ಪಡೆದು ಪಶು ಆಹಾರ ಘಟಕ ಸ್ಥಾಪಿಸಿ ಲಾಭದತ್ತ ಸಾಗಿದರು. ಮುಂದೆ `ಶಕ್ತಿ ಗ್ರೂಪ್’ ಸ್ಥಾಪಿಸಿ ಉದ್ಯಮದ ರೂಪ ನೀಡಿದರು. ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಮಾರುತಿ ಕಾರು, ಹೀರೋ ಹೋಂಡಾ ಬಿಡಿಭಾಗಗಳ ಮುಖ್ಯ ಡೀಲರ್ ಆಗಿ ವ್ಯಾಪಾರೋದ್ಯಮದಲ್ಲಿ ಮತ್ತೊಂದು ಹಂತ ಮೇಲೇರಿದರು. ಶಕ್ತಿ ಆಟೋಮೊಬೈಲ್ಸ್, ಶಕ್ತಿ ಎಂಟರ್ ಪ್ರೈಸಸ್, ಶಕ್ತಿ ಆಟೋ ಪ್ರೈವೇಟ್ ಲಿಮಿಟೆಡ್, ಆದಿ ಶಕ್ತಿ ಕಂಪನೀಸ್ ಹೀಗೆ ಶಕ್ತಿ ಸಮೂಹ ಉದ್ಯಮ ಸಂಸ್ಥೆಗಳನ್ನು ಹುಟ್ಟುಹಾಕಿ ಕಂಪನಿಯ ಅಧ್ಯಕ್ಷರಾಗಿ ಸಾವಿರಾರು ಮಂದಿಗೆ ಉದ್ಯೋಗದಾತರಾದರು.
ಸಮಾಜ ಸೇವೆಗೆ ಅರ್ಪಿತವಾದ ಸಾಧಕ

ಉದ್ಯಮರಂಗದಲ್ಲಿ ಯಶಸ್ವಿಯಾದ ನಂತರ ಸಮಾಜ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ನಾರಾಯಣರಾವ್ ತಾತುಸ್ಕರ ಅವರು ಉಚಿತ ಆರೋಗ್ಯ ಶಿಬಿರ, ಸಾಮೂಹಿಕ ವಿವಾಹ ಕಾರ್ಯಕ್ರಮ, ದೀನ ದಲಿತರಿಗೆ ಶಿಕ್ಷಣ, ಯುವಕರಿಗೆ ಕೌಶಲ್ಯತರಬೇತಿ, ಮಹಿಳಾ ಸ್ವಾವಲಂಬನೆಗೆ ಕಾರ್ಯಾಗಾರ ಹೀಗೆ ಅನೇಕ ಜನಕಲ್ಯಾಣ ಚಟುವಟಿಕೆಗಳನ್ನು ಆರಂಭಿಸಿದರು. ಲಾಭದ ಉದ್ದೇಶವಿಲ್ಲದ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. 2001ರಲ್ಲಿ ಭಾವಸಾರ ವಿಜನ್ ಇಂಡಿಯಾ ಸ್ಥಾಪಿಸಿ ದೊಡ್ಡ ಮಟ್ಟದಲ್ಲಿ ಸೇವಾ ಕಾರ್ಯ ಕೈಗೊಂಡರು. ಅನೇಕ ಸಂಘ ಸಂಸ್ಥೆಗಳ ಮಹಾಪೋಷಕರಾಗಿ ಜನಸೇವೆ ಕೈಂಕರ್ಯ ಕೈಗೊಂಡರು. ಮೈತ್ರಿ ಮತ್ತು ಸೇವೆಯನ್ನು ಪರಮಧ್ಯೇಯವಾಗಿಸಿಕೊಂಡು ಆ ಸಂಸ್ಥೆಯ ಮೂಲಕ ಮುಂದಡಿ ಇಟ್ಟರು. ಯುವಕರೇ ದೇಶದ ಭವಿಷ್ಯದ ಆಸ್ತಿ ಎಂಬುದನ್ನು ಮನಗಂಡು ವ್ಯಕ್ತಿತ್ವ ವಿಕಸನ ಶಿಬಿರ, ಕೌಶಲ್ಯತರಬೇತಿ, ಶಿಕ್ಷಣಕ್ಕೆ ನೆರವು ನೀಡುತ್ತಾ ಬರುತ್ತಿದ್ದಾರೆ. ಮಕ್ಕಳಿಗೆ ಬಾಲ ಸಂಸ್ಕಾರ ಕಾರ್ಯಕ್ರಮ, ಪ್ರತಿಭಾನ್ವೇಷಣೆ, ಆಟೋಟ ಸ್ಪರ್ಧೆ ಆಯೋಜನೆಯಲ್ಲದೆ ಬಡಮಕ್ಕಳಿಗೆ ತಮ್ಮ ಬ್ರೆöಟ್ ಶಾಲೆಯಲ್ಲಿ ಡೊನೇಷನ್ ಇಲ್ಲದೆ ಪ್ರವೇಶ ಕಲ್ಪಿಸುತ್ತಿದ್ದಾರೆ. ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ತಾತುಸ್ಕರ ಅವರ ಸಾರ್ಥಕ ಕಾರ್ಯಗಳಿಗೆ ಅವರ ಧರ್ಮಪತ್ನಿ ಜಯಶ್ರೀ, ಉದ್ಯಮ ಹೊಣೆ ವಹಿಸಿಕೊಂಡಿರುವ ಪುತ್ರರಾದ ವೆಂಕಟೇಶ್, ರಿತೇಶ್, ಪುತ್ರಿ ಶೀತಲ್ ಬೆಂಬಲವಾಗಿ ನಿಂತಿದ್ದಾರೆ.
ಕ್ಷತ್ರಿಯ ಸಮಾಜ ಆಶಾಕಿರಣ-ಸಂಘಟನಾ ಚತುರ
ತಾವು ಹುಟ್ಟಿದ ಭಾವಸಾರ ಕ್ಷತ್ರಿಯ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮೇಲೆತ್ತಿ ಮುಖ್ಯವಾಹಿನಿಯಿಂದ ದೂರ ಉಳಿದ ಜನಾಂಗದ ಕಟ್ಟಕಡೆಯ ಜನರಿಗಾಗಿ ನಾರಾಯಣರಾವ್ ತಾತುಸ್ಕರ ಅಪಾರ ಶ್ರಮಿಸುವ ಮೂಲಕ ತಮ್ಮ ಸಮುದಾಯದಲ್ಲೂ ಅಪಾರ ಜನಾನುರಾಗಿಯಾಗಿದ್ದಾರೆ. ಕ್ಷತ್ರಿಯ ಸಮಾಜದಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞೆ ಮೂಡಿಸಿ ಸಂಘಟಿಸಲು ಎರಡು ದಶಕಗಳ ಕಾಲ ಶ್ರಮಿಸಿ ರಾಜ್ಯದೆಲ್ಲೆಡೆ ಸಂಚರಿಸಿ ಒಗ್ಗಟ್ಟು ಮೂಡಿಸುವ ಮೂಲಕ ಜನಾಂಗದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಅಖಿಲ ಕರ್ನಾಟಕ ಕ್ಷತ್ರಿಯ ಮಹಾಸಭಾ ಅಧ್ಯಕ್ಷರಾಗಿದ್ದ ಉದ್ಯಮಿ ಹರಿಖೋಡೆ ಅವರ ಜೊತೆ ಉಪಾಧ್ಯಕ್ಷರಾಗಿ 12 ವರ್ಷಗಳ ಕಾಲ ಸಮುದಾಯ ಸಂಘಟನೆಯಲ್ಲಿ ತೊಡಗಿದ್ದ ನಾರಾಯಣ ತಾತುಸ್ಕರ ಅವರು 80 ಲಕ್ಷ ಜನರ ಪ್ರಾತಿನಿಧಿಕ ಸಂಸ್ಥೆ ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿ 2008ರಿಂದ 2017ರವರೆಗೆ ಎರಡು ಅವಧಿಗೆ ಆಯ್ಕೆಯಾಗಿ ಜನಾಂಗದ ಏಳಿಗೆಗೆ ರಾಷ್ಟ್ರಮಟ್ಟದಲ್ಲಿ ದುಡಿದಿದ್ದಾರೆ. ಆಗ ತಾತುಸ್ಕರರ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಜರುಗಿದ ಮಹಾಸಭಾದ ಪ್ರಥಮ ರಾಷ್ಟ್ರೀಯ ಸಮಾವೇಶದಲ್ಲಿ ಲಕ್ಷ ಜನ ಭಾಗಿಯಾಗಿ ಯಶಸ್ವಿಯಾದ ನಂತರ ತಾತುಸ್ಕರ ಅವರು ಭಾವಸಾರ ಕ್ಷತ್ರಿಯ ಸಮಾಜದ ಕಣ್ಮಣಿಯಾಗಿ ಹೊರಹೊಮ್ಮಿದರಲ್ಲದೆ ಜನಾಂಗದ ಎಲ್ಲರಿಗೂ ಹಿರಿಯಣ್ಣನಾಗಿ ಇಂದಿಗೂ ಮಾರ್ಗದರ್ಶನ, ಸಮುದಾಯದ ಕಾರ್ಯಗಳಿಗೆ ಸಹಕಾರ ನೀಡುತ್ತಾ ಸಾಗುತ್ತಿದ್ದಾರೆ. ಹುಟ್ಟಿದ ಸಮುದಾಯ, ಮೆಟ್ಟಿದ ನೆಲದ ಋಣ ತೀರಿಸಿ ಸಮಾಜದ ದುರ್ಬಲರಿಗೆ ದೀನ ದಲಿತರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಾರ್ಥಕ ಜೀವನದ ಜನ್ಮದಿನ ಅಮೃತ ಮಹೋತ್ಸವದತ್ತ ಕಾಲಿಟ್ಟಿದ್ದಾರೆ.