ಮೈಸೂರು ಅರಮನೆ ಸಿಂಹಾಸನಕ್ಕಿದೆ ನಾಲ್ಕೂವರೆ ಸಾವಿರ ವರ್ಷಗಳ ಇತಿಹಾಸ…
-ಲಕ್ಷ್ಮಿ ಕಿಶೋರ್ ಅರಸ್

ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾರಣ್ಯರ ದಿವ್ಯದೃಷ್ಟಿಗೆ ಕಂಪಿಲರಾಯ ಹೂತಿಟ್ಟಿದ ಸಿಂಹಾಸನವು ಗೋಚರವಾಗುತ್ತದೆ. ನಂತರ 1338 ರಲ್ಲಿ ವಿದ್ಯಾರಣ್ಯರು ಈ ರತ್ನಸಿಂಹಾಸನವನ್ನು “ಹರಿಹರನಿಗೆ” ನೀಡಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಸುಮಾರು 150 ವರ್ಷಗಳ ಕಾಲ ಈ ಸಿಂಹಾಸನದಲ್ಲಿ ಕುಳಿತು ವಿಜಯನಗರದ ಅರಸರು ಭಾರತದಲ್ಲಿ ಸುವರ್ಣ ಯುಗವನ್ನು ನಿರ್ಮಾಣ ಮಾಡಿ, ಧರ್ಮ ಸಂಸ್ಥಾಪನೆ ಮಾಡಿದ್ದಾರೆ. ವಿಜಯನಗರ ಪತನ ನಂತರ ಈ ಸಿಂಹಾಸನವು ಅವರ ರಾಯಭಾರಿಯಾಗಿದ್ದ ಶ್ರೀರಂಗಪಟ್ಟಣದ ಶ್ರೀರಂಗರಾಯನಿಗೆ ಒಲಿಯುತ್ತದೆ . ಮುಂದೆ 1610 ರಲ್ಲಿ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಾಗ “ಕರ್ನಾಟಕ ರತ್ನ ಸಿಂಹಾಸನ” ಮೈಸೂರು ಸಂಸ್ಥಾನದ ಪಾಲಾಗುತ್ತದೆ.
ಮೈಸೂರು ದಸರಾ ವೈಭವದ ಪ್ರಮುಖ ಆಕರ್ಷಣೆ ಎಂದರೆ ಅದು ಮೈಸೂರು ಮಹಾರಾಜರ “ರತ್ನ ಖಚಿತ ಸ್ವರ್ಣ ಸಿಂಹಾಸನ”. ಈ ಸಿಂಹಾಸನವು ದೇಶದ ಯಾವುದೇ ರಾಜಮನೆತನವು ಹೊಂದಿರದ ವಿಶೇಷವಾದ ಸಿಂಹಾಸನವಾಗಿದ್ದು, ಮೈಸೂರು ಅರಸರ ಸಿಂಹಾಸನಕ್ಕೆ ಕೇವಲ ಐತಿಹಾಸಿಕ ಹಿನ್ನೆಲೆ ಅಷ್ಟೇ ಅಲ್ಲ ಪಾರಂಪರಿಕವಾದ ಪುರಾಣವೂ ಸಹ ಆಡಗಿರುವುದು ಸತ್ಯ. ಈ ಸಿಂಹಾಸನವು ಕೇವಲ ಕುಳಿತುಕೊಳ್ಳುವ ಪೀಠವಲ್ಲ ಬದಲಾಗಿ ಮೈಸೂರು ಅರಸರಿಗೆ ಮತ್ತು ನಮ್ಮ ನಾಡಿನ ಜನತೆಗೆ ಪೂಜನೀಯವಾದ ದೊರೆಪೀಠವಾಗಿದೆ .ಮೈಸೂರು ಮಹಾರಾಜರು ತಮ್ಮ ಸಿಂಹಾಸನಕ್ಕೆ ಕೊಡುವ ಗೌರವ ಅಭೂತಪೂರ್ವ ವಾದದ್ದು ಅವರು ಇದನ್ನು ದೇವರ ರೀತಿಯಲ್ಲಿ ಹಾಗೂ ಅದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಪೂಜಿಸುತ್ತಾರೆ .ಏಕೆಂದರೆ, ಮೈಸೂರು ಸಿಂಹಾಸನವು ದ್ವಾಪರಯುಗದಲ್ಲಿ ಧರ್ಮ ಸಂಸ್ಥೆ ಮಾಡಿದ “ಪಾಂಡವರ ಸಿಂಹಾಸನವಾಗಿತ್ತು” ಎಂಬ ಬಲವಾದ ನಂಬಿಕೆ ಇದ್ದು ಮೈಸೂರು ಅರಸರಿಗೆ ಈ ಸಿಂಹಾಸನವು ದೊರೆತ ಚರಿತ್ರೆಯೆ ರೋಚಕವಾಗಿದೆ. ಮೈಸೂರು ಅರಮನೆಯಲ್ಲಿರುವ ಸಿಂಹಾಸನಕ್ಕೆ ಸರಿಸುಮಾರು 4437 ವರ್ಷಗಳ ಇತಿಹಾಸವಿದೆ.

ದ್ವಾಪರಯುಗದ ಪಾಂಡವರ ಸಿಂಹಾಸನ
ದ್ವಾಪರಯುಗದಲ್ಲಿ ಕೌರವರು ಪಾಂಡವರಿಗೆ ರಾಜ್ಯವನ್ನು ನೀಡದೆ ಕಗ್ಗಾಡನ್ನು ನೀಡಿದಾಗ. ಆ ಕಾಡನ್ನೇ ಇಂದ್ರಪ್ರಸ್ಥವಾಗಿ ಪರಿವರ್ತಿಸಿ ಯದುಕುಲ ತಿಲಕ ಶ್ರೀ ಕೃಷ್ಣನು ಪಾಂಡವರಿಗೆ ರಾಜ್ಯವನ್ನು ಆಳಲು ಸಿಂಹಾಸನವನ್ನು ಮಾಡಿಸಿಕೊಡುತ್ತಾನೆ. ಪಾಂಡವ ಚಕ್ರವರ್ತಿಯಾದ ಯುಧಿಷ್ಠಿರನು (ಧರ್ಮರಾಯ) ಪ್ರಥಮ ಬಾರಿಗೆ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸುತ್ತಾನೆ. ಹಾಗಾಗಿ ಇದನ್ನು ಧರ್ಮಸಂಸ್ಥಾಪನೆಯ ಸಿಂಹಾಸನ ಎಂದು ಸಹ ಕರೆಯುತ್ತಾರೆ.
ನಂತರ ಧರ್ಮರಾಯನ ಮೊಮ್ಮಗನಾದ ಪರೀಕ್ಷಿತ ರಾಜ ಹಾಗೂ ಆತನ ವಂಶದವರು ಸುಮಾರು 1115 ವರ್ಷಗಳ ಕಾಲ ಸಿಂಹಾಸನನ್ನು ಬಳಸಿದ್ದರು ಎಂಬ ಐತಿಹ್ಯವಿದೆ. ನಂತರ ಇದು ಮಗದ ದೇಶದ ರಾಜರ ಬಳಿ 490 ವರ್ಷಗಳ ಕಾಲ ಆಡಳಿತ ಪೀಠವಾಗಿತ್ತು.
ಕದಂಬರ “ಕರ್ನಾಟಕ ಸಿಂಹಾಸನ“
ಮಗದ ದೇಶದ ಆಳ್ವಿಕೆಯ ನಂತರ ರತ್ನ ಸಿಂಹಾಸನವು ಕನ್ನಡದ ಪ್ರಥಮ ರಾಜವಂಶ ಕದಂಬರ ಬಳಿ ಇತ್ತು .ಮಯೂರವರ್ಮನು ಪ್ರಥಮ “ಕರ್ನಾಟಕ ರತ್ನ ಸಿಂಹಾಸನಾಧೀಶ್ವರನಾಗಿ” ಹಲವಾರು ವರ್ಷಗಳ ಕಾಲ ಈ ಸಿಂಹಾಸನದ ಮೇಲೆ ಕುಳಿತು ರಾಜ್ಯಭಾರ ಮಾಡಿದ್ದಾನೆ ಎನ್ನುವ ಐತಿಹ್ಯವಿದೆ.
ವಿಕ್ರಮಾದಿತ್ಯನ ಶೌರ್ಯ ಸಿಂಹಾಸನ
ಕದಂಬರ ನಂತರ ಈ ಸಿಂಹಾಸನವು ಮಾಳ್ವ ಅರಸ ವಿಕ್ರಮಾದಿತ್ಯನ ವಶಕ್ಕೆ ಹೋಗಿ ಆತ ಬಳಸಿದ್ದು ಇಂದಿಗೂ ಅದು ಶೌರ್ಯದ ಪ್ರತೀತಿಯಾಗಿದೆ. ನಂತರ ಅವಂತಿ ದೇಶದ ಭೋಜರಾಜನು 64 ವರ್ಷಗಳ ಕಾಲ ಈ ಸಿಂಹಾಸನದ ಮೇಲೆ ಕುಳಿತು ಆಡಳಿತ ನಡೆಸಿದ್ದನ್ನೆಲಾಗಿದೆ. ಇದಾದ ನಂತರ ಹಲವಾರು ರಾಜಕೀಯ ಸನ್ನಿವೇಶಗಳಿಗೆ ಸಿಲುಕಿ ಕಾಲಕ್ರಮೇಣ ಈ ಸಿಂಹಾಸನವನ್ನು ಕಂಪಿಲರಾಯ ಪೆನಗೊಂಡದಲ್ಲಿ ಹೂತಿಟ್ಟಿದ್ದನು.

“ಕರ್ನಾಟ ಸಾಮ್ರಾಜ್ಯ” ವಿಜಯನಗರದ ಸಿಂಹಾಸನ
ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾರಣ್ಯರ ದಿವ್ಯದೃಷ್ಟಿಗೆ ಕಂಪಿಲರಾಯ ಹೂತಿಟ್ಟಿದ ಸಿಂಹಾಸನವು ಗೋಚರವಾಗುತ್ತದೆ. ನಂತರ 1338 ರಲ್ಲಿ ವಿದ್ಯಾರಣ್ಯರು ಈ ರತ್ನ ಸಿಂಹಾಸನವನ್ನು “ಹರಿಹರನಿಗೆ” ನೀಡಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿಸುತ್ತಾರೆ. ಸುಮಾರು 150 ವರ್ಷಗಳ ಕಾಲ ಈ ಸಿಂಹಾಸನದಲ್ಲಿ ಕುಳಿತು ವಿಜಯನಗರದ ಅರಸರು ಭಾರತದಲ್ಲಿ ಸುವರ್ಣ ಯುಗವನ್ನು ನಿರ್ಮಾಣ ಮಾಡಿ, ಧರ್ಮ ಸಂಸ್ಥಾಪನೆ ಮಾಡಿದ್ದಾರೆ.
ವಿಜಯನಗರ ಪತನ ನಂತರ ಈ ಸಿಂಹಾಸನವು ಅವರ ರಾಯಭಾರಿಯಾಗಿದ್ದ ಶ್ರೀರಂಗಪಟ್ಟಣದ ಶ್ರೀರಂಗರಾಯನಿಗೆ ಒಲಿಯುತ್ತದೆ . ಮುಂದೆ 1610 ರಲ್ಲಿ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ವಶಪಡಿಸಿಕೊಂಡಾಗ “ಕರ್ನಾಟಕ ರತ್ನ ಸಿಂಹಾಸನ” ಮೈಸೂರು ಸಂಸ್ಥಾನದ ಪಾಲಾಗುತ್ತದೆ.

ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾಗಿ ಮೈಸೂರು ಅರಸರು
ರತ್ನಖಚಿತ ಸ್ವರ್ಣ ಸಿಂಹರೂಢರಾಗಿ, ಕರ್ನಾಟಕ ರತ್ನ ಸಿಂಹಾಸನಾಧೀಶ್ವರರಾಗಿ ,ದಸರಾ ಮಹೋತ್ಸವ ನಡೆಸಿ ರಾಜ್ಯಭಾರ ಮಾಡಿದ ಮೈಸೂರಿನ ಪ್ರಥಮ ಅರಸರೆಂದರೆ “ರಾಜಾ ಒಡೆಯರು” ನವರಾತ್ರಿಯ ಸಂದರ್ಭದಲ್ಲಿ ರತ್ನ ಸಿಂಹಾಸನದ ಮೇಲೆ ಕುಳಿತು ದರ್ಬಾರ್ ನಡೆಸಿ, ವಿಜಯದಶಮಿಯಂದು ಅಂಬಾರಿಯ ಮೇಲೆ ಬನ್ನಿ (ಶಮಿ) ಪೂಜೆಗೆ ತೆರಳುವ ಪರಿಪಾಠವನ್ನು, ವಿಜಯನಗರದಲ್ಲಿ ನಡೆಯುತ್ತಿದ್ದ ನವರಾತ್ರಿ ಆಚರಣೆಯನ್ನು ಮುಂದುವರಿಸುವ ಸಲುವಾಗಿ ದಸರಾ ಮಹೋತ್ಸವವನ್ನು 1610 ರಲ್ಲಿ ಶುರುಮಾಡಿ, ನಮ್ಮ ಮುಂದೆ ಬರುವ ಎಲ್ಲಾ ಉತ್ತರಾಧಿಕಾರಿಗಳು ಸಹ ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಟ್ಟಳೆಯನ್ನು ಹೊರಡಿಸಿದ್ದಾರೆ. ಇದು “ಶ್ರೀಮನ್ ಮಹಾರಾಜ ವಂಶಾವಳಿಯ” ಚರಿತ್ರೆಯಲ್ಲಿ ದಾಖಲಾಗಿದೆ.

ಪ್ರಸ್ತುತ ಈ ಸಿಂಹಾಸನವು ಮೈಸೂರು ರಾಜ ವಂಶಸ್ಥರ ಬಳಿ ಇದ್ದು, ನವರಾತ್ರಿ ಸಮಯದಲ್ಲಿ ಸಿಂಹಾಸನ ಜೋಡಣೇ ಕಾರ್ಯ ನಡೆಯುತ್ತದೆ. ಈ ಕಾರ್ಯಕ್ಕೆ ಮೈಸೂರು ಸಮೀಪದ ಗೆಜ್ಜೆಗಳ್ಳಿ ಗ್ರಾಮದ ಆಯ್ದ ಕೆಲವರನ್ನು ಮಾತ್ರ ಕರೆತರಲಾಗುತ್ತದೆ ,ಇದು ತಲೆತಲಾಂತರದಿಂದ ನಡೆದು ಬಂದಿದ್ದು. ನವರಾತ್ರಿಯ ದಿನಗಳಲ್ಲಿ ಈಗಿನ ಮಹಾರಾಜರಾಗಿರುವ ಶ್ರೀಮನ್ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ನವರಾತ್ರಿಯ ಮೊದಲ ದಿನದಂದು ಸಿಂಹಾಸನಾರೋಹಣ ಮಾಡಿ ನವರಾತ್ರಿಯ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಸುತ್ತಾರೆ. ಈ ಸಂದರ್ಭದಲ್ಲಿ ಹಿಂದಿನ ಕಾಲದ ರಾಜ ವೈಭವ ಮರುಕಳಿಸಿದ ಅನುಭವವಾಗಿ ಬಿಡುತ್ತದೆ. ಮುಮ್ಮಡಿ ಕೃಷ್ಣರಾಜ ಒಡೆಯರು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸಿಂಹಾಸನದ ಸ್ವರೂಪ ಬಹಳಷ್ಟು ಬದಲಾಗಿ ಸಿಂಹಾಸನವು ಚಿನ್ನದ ಬಾಳೆ ಕಂಬ, ಮತ್ತು ಚಿನ್ನದ ಮಾವಿನ ಎಲೆಗಳಿಂದ ಅಲಂಕರಿಸಲ್ಪಟ್ಟಿದೆ. ಛತ್ರಿಯ ತುದಿಯಲ್ಲಿ ಒಡವೆಗಳಿಂದ ಅಲಂಕರಿಸಿದ ಪಕ್ಷಿಯನ್ನು ಕೂರಿಸಲಾಗಿದೆ. ಸಿಂಹಾಸನವನ್ನು ಹತ್ತುವ ಎರಡು ಕಡೆಗಳಲ್ಲಿ ಸ್ತ್ರೀ ಪುತ್ಥಳಿಯನ್ನು ನಿರ್ಮಿಸಲಾಗಿದೆ, ಜೊತೆಗೆ ಛತ್ರಿಯ ಸುತ್ತಲೂ ಮುತ್ತಿನ ಕುಚ್ಚುಗಳನ್ನು ಕಟ್ಟಲಾಗಿದೆ, ಅಲ್ಲದೆ ಸಿಂಹಾಸನಕ್ಕೆ ಕೂರ್ಮರೂಪದ ಆಸನವನ್ನು ಒದಗಿಸಲಾಗಿದೆ, ಉಭಯ ಪಾಶ್ವಗಳಲ್ಲಿ ಯಾಳಿಗಳನ್ನು ಮತ್ತು ನಾಲ್ಕು ಕಡೆಗಳಲ್ಲಿ ಬಳ್ಳಿ ಲತೆಗಳನ್ನು ಕೆತ್ತಲಾಗಿದೆ. ಸಿಂಹಾಸನ ದಕ್ಷಿಣದಲ್ಲಿ ಬ್ರಹ್ಮ ,ಉತ್ತರದಲ್ಲಿ ಶಿವ, ಮಧ್ಯದಲ್ಲಿ ವಿಷ್ಣುವನ್ನು ನಿಲ್ಲಿಸಲಾಗಿದೆ. ವಿಜಯ ಸೂಚಕ ನಾಲ್ಕು ಸಿಂಹಗಳನ್ನು ಇಡಲಾಗಿದೆ, ಮೂರು ಕೋನಗಳಲ್ಲೂ ರಾಕ್ಷಸ ಶರೀರ, ಎರಡು ಕುದುರೆಗಳು ಮತ್ತು ನಾಲ್ಕು ಹಂಸ ಪಕ್ಷಿಗಳ ಇಡಲಾಗಿದೆ, ನಾಗದೇವತೆಗಳ ಚಿತ್ರಗಳು, ಸ್ವಸ್ತಿಕ ಆಕೃತಿ ಮತ್ತು ಮುತ್ತಿನ ಹಡಗು ಮೇಲಿನ ಗುಡಾರಗಳ ಚಿತ್ರಣಗಳಿವೆ, ಸಿಂಹಾಸನವನ್ನು ನಾಲ್ಕು ದಿಕ್ಕುಗಳಲ್ಲಿ ತೆರೆಯಲಾಗಿದೆ, ಸಿಂಹಾಸನದ ಛತ್ರಿಯ ಮೇಲೆ ಸಂಸ್ಕೃತದ 96 ಸಾಲುಗಳ ಶ್ಲೋಕಗಳಿವೆ. ಇಂತಹ ವಿಶಿಷ್ಟವಾದ ಸಿಂಹಾಸನವೂ ಮೈಸೂರು ಅರಮನೆಯಲ್ಲಿ ಇಂದಿಗೂ ಕಾಣಬಹುದು. ಇಂತಹ ಪರಮ ಪವಿತ್ರ ಸಿಂಹಾಸನರೂಢರಾಗಿ ನಮ್ಮ ನಾಡನ್ನು ಬೆಳಗಿದ ಮೈಸೂರು ಮಹಾರಾಜರಿಗೆ ಅನಂತನ ನಮನಗಳನ್ನು ಅರ್ಪಿಸೋಣ.
