-ಶೌರ್ಯ ಡೆಸ್ಕ್
ಮೈಸೂರಿನ 413ನೇ ದಸರಾಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಶುಭ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿಯವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು.

ವಿಶ್ವವಿಖ್ಯಾತ ಮೈಸೂರು ದಸರೆಗೆ ವಿಜೃಂಭಣೆಯ ಚಾಲನೆ ಸಿಕ್ಕಿದೆ. ಕರುನಾಡಹಬ್ಬ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸೋಮವಾರ ರಾಷ್ಟ್ರಪತಿಯವರಿಂದ ಉದ್ಘಾಟನೆಯಾಗಿದೆ. ನವರಾತ್ರಿಯ ಸಂಭ್ರಮ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ.
ಮೈಸೂರಿನ 413ನೇ ದಸರಾಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನಾಡದೇವಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಶುಭ ವೃಶ್ಚಿಕ ಲಗ್ನದಲ್ಲಿ ದಸರಾಗೆ ಚಾಲನೆ ನೀಡಿದ್ದಾರೆ. ರಾಷ್ಟ್ರಪತಿಯವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಾಥ್ ನೀಡಿದರು.
ಮೈಸೂರು ದಸರಾಗೆ ಚಾಲನೆ ನೀಡಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸರ್ಕಾರದ ವತಿಯಿಂದ ಮೈಸೂರು ಪೇಟಾ, ಮೈಸೂರು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಜೊತೆಗೆ ಚಾಮುಂಡಿ ದೇವಿಯ ಬೆಳ್ಳಿಯ ಮೂರ್ತಿ ನೀಡಿ ಗೌರವಿಸಲಾಯಿತು.
ದಸರಾ ಉದ್ಘಾಟನೆ ಬಳಿಕ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಎಲ್ಲಾ ಸಹೋದರ–ಸಹೋದರಿಯರಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಪ್ರಾರಂಭಿಸಿದ ರಾಷ್ಟ್ರಪತಿ ಮುರ್ಮು, ರಾಷ್ಟ್ರಪತಿ ಆದ ಮೇಲೆ ನಾನು ಭೇಟಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದೆ. ಅದರಲ್ಲೂ ದೇವಿಯ ಪೂಜಾ ಕಾರ್ಯವಾದ ಕಾರಣ ಬಂದೇ ಬರುತ್ತೇನೆ. ಚಾಮುಂಡಿ ದೇವಿಯ ಶಕ್ತಿ ಇಡೀ ನಾಡಿಗೆ ದಕ್ಕಿದೆ. ಕಾಲ ಕಾಲಕ್ಕೆ ಮಳೆ ಬೆಳೆ ನೀಡಿ ಇಡೀ ರಾಜ್ಯವನ್ನು ದೇವಿ ಕಾಪಾಡುತ್ತಿದ್ದಾಳೆ ಎಂದು ನುಡಿದರು.
ಗಣೇಶನ ಹಬ್ಬದ ಸಂದರ್ಭದಲ್ಲಿ ನಾನು ಕರ್ನಾಟಕಕ್ಕೆ ಬಂದಿದ್ದೆ. ಈಗ ದಸರಾ ಉದ್ಘಾಟನೆಯ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದುಕೊಳ್ಳುತ್ತೇನೆ. ಇದು ಆದಿಶಕ್ತಿಯ ಸ್ಥಾನ. ಅಧ್ಯಾತ್ಮಿಕವಾಗಿ ಉನ್ನತ ಸ್ಥಾನ ಪಡೆದಿರುವ ದೇವಿಯ ಸ್ಥಳ ಇದು. ಹೀಗಾಗಿಯೇ ದೂರದೂರದಿಂದಲೂ ಜನರು ದೇವಿಯ ದರ್ಶನಕ್ಕಾಗಿ ಬರುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.
ಕರ್ನಾಟಕದ ಅಧ್ಯಾತ್ಮಿಕ ಪರಂಪರೆ ನೆನೆದ ರಾಷ್ಟ್ರಪತಿ

ಮೈಸೂರು ದಸರಾ ಭಾರತೀಯ ಸಂಸ್ಕೃತಿಯ ಗೌರವ ಹೆಚ್ಚಿಸಿದೆ. ಕರ್ನಾಟಕದಲ್ಲಿ ಜೈನ ಮತ್ತು ಬೌದ್ಧ ಪರಂಪರೆಗಳು ಬೆಸೆದುಕೊಂಡಿವೆ. ಆದಿಶಂಕರಾಚಾರ್ಯರು ಪೀಠ ಸ್ಥಾಪಿಸಿ ನಾಡಿನ ಘನತೆ ಹೆಚ್ಚಿಸಿದ್ದಾರೆ. ಬಸವಣ್ಣನವರು ಅನುಭವ ಮಂಟಪದ ಮೂಲಕ ಸಮಾನತೆ ಮತ್ತು ಪ್ರಜಾಪ್ರಭುತ್ವದ ಆಶಯ ಸಾರಿ ಹೇಳಿದರು. ಅನುಭವ ಮಂಟಪದ ಮೂಲಕ ಅಧ್ಯಾತ್ಮಿಕ ಮತ್ತು ಸಾಮಾಜಿಕ ಚರ್ಚೆಗಳು ನಡೆಯುತ್ತಿದ್ದವು ಎಂದು ರಾಷ್ಟ್ರಪತಿ ಹೇಳಿದರು.
ಕರ್ನಾಟಕವು ಮಹಿಳಾ ಸಮಾನತೆಗೂ ಹೆಸರುವಾಸಿ. ಮಹಿಶಾಸುರ ಸೇರಿದಂತೆ ಹಲವು ರಾಕ್ಷಸರನ್ನು ದೇವಿ ಸಂಹಾರ ಮಾಡಿ ಜನರನ್ನು ರಕ್ಷಿಸಿದ್ದಾಳೆ. ದೇವಿಯು ಶಕ್ತಿಸ್ವರೂಪಳೂ ಹೌದು, ತಾಯಿಯಾಗಿ ಭಕ್ತರನ್ನು ಕಾಪಾಡುವ ತಾಯಿ ಸ್ವರೂಪಳೂ ಹೌದು. ದಸರಾ ಎನ್ನುವುದು ಸ್ತ್ರೀಶಕ್ತಿಯ ಆರಾಧನೆ ಮಾಡುವ ಹಬ್ಬ. ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮಾ, ಓಬವ್ವರಂಥ ಮಹಾನ್ ಹೋರಾಟಗಾರ್ತಿಯರು ಇದ್ದ ನಾಡು. ಮಹಿಳೆಯರು ಹಲವು ಆಯಾಮಗಳಲ್ಲಿ ಈಗ ಪ್ರಗತಿ ತೋರುತ್ತಿದ್ದಾರೆ. ಅವರಿಗೆ ನಾವು ಇನ್ನಷ್ಟು ಬಲ ತುಂಬಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪರಂಪರೆಯೊಂದಿಗೆ ಜೋಡಣೆಯಾಗಲು ನನಗೆ ಅವಕಾಶಕೊಟ್ಟರು. ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಅತಿವೃಷ್ಟಿಯಿಂದ ರಾಜ್ಯದಲ್ಲಿ ಅನಾಹುತಗಳು ಸಂಭವಿಸಿದವು. ರಾಜ್ಯ ಸರ್ಕಾರವು ಅದನ್ನು ನಿರ್ವಹಿಸಲು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಆಶಿಸಿ ರಾಷ್ಟ್ರಪತಿ ಭಾಷಣ ಮುಗಿಸಿದರು.
ಇಂದು ಮಹಿಷಾಸುರರ ಕಾಲ ಇಲ್ಲ. ಆದರೆ ಆ ಕೆಟ್ಟ ಗುಣ ನಮ್ಮ ಒಳಗಿದೆ. ನಾವು ಅದನ್ನು ಬಿಡಬೇಕು. ದುಷ್ಟ ವಿಚಾರವನ್ನು ದೂರವಿಟ್ಟು, ಒಳ್ಳೆಯ ವಿಚಾರವನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ನಾಡನ್ನು ಎಲ್ಲಾ ರಂಗದಲ್ಲೂ ಸರ್ವ ಶ್ರೇಷ್ಠವಾಗಿ ಕಟ್ಟುವ ಸಂಕಲ್ಪ ಮಾಡಬೇಕಿದೆ. ಸರ್ವರಿಗೂ ಒಳಿತು ಬಯಸುವ ಸದ್ಭುದ್ದಿ ಆ ದೇವತೆ ಎಲ್ಲರಿಗೂ ಕೊಡಲಿ ಎಂದು ಹಾರೈಸಿದರು
ಬಳಿಕ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕನ್ನಡದಲ್ಲಿಯೇ ಭಾಷಣವನ್ನು ಫ್ರಾರಂಭ ಮಾಡಿ ರಾಜ್ಯದ ಜನತೆಗೆ ಶುಭ ಕೋರಿದರು. ನಾನು ದೂರದರ್ಶನದಲ್ಲಿ ದಸರಾವನ್ನು ನೋಡಿದ್ದೆ. ಆದರೆ ಈ ಬಾರಿ ಖುದ್ದಾಗಿ ಹಾಜರಾಗಿ ಈ ಕ್ಷಣಗಳನ್ನು ನೋಡುತ್ತಿರುವು ನನಗೆ ಸಂತೋಷ ತಂದಿದೆ ಎಂದರು.
ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು-ಸಿಎಂ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ಈ ಸಲ ಗತವೈಭವ ನೆನಪಿಸಿಕೊಳ್ಳುವಂತೆ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊAಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದರು.
ಕನ್ನಡ ನಾಡನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಎಲ್ಲ ರೀತಿಯಲ್ಲಿಯೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದೇವೆ. ಈ ವರ್ಷ ಕೊವೀಡ್‌ನಂತ ಆತಂಕಗಳಿಂದ ನಾಡನ್ನು ದೂರ ಇರಿಸಿ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಶೀರ್ವಾದ ಮಾಡಲಿ ಎಂದು ಶಕ್ತಿ ದೇವತೆಯನ್ನು ಪ್ರಾರ್ಥಿಸುತ್ತೇನೆ ಎಂದರು.