20.8 C
Bengaluru
Thursday, March 16, 2023
spot_img

ಸಮಾಜ ಯಾರನ್ನು ನಂಬಬೇಕು?

-ಕೇಶವರೆಡ್ಡಿ ಹಂದ್ರಾಳ

ಜೀವಜಗತ್ತಿನ ಎಲ್ಲಾ ಪ್ರಭೇದಗಳ ಜೀವಿಗಳಲ್ಲೂ ಹಸಿವು ಮತ್ತು ಕಾಮ  ಅತ್ಯಂತ ಸಹಜವೂ, ಅನಿವಾರ್ಯವೂ ಆಗಿರುವಂಥ ಸಂಗತಿಗಳು. ಇವೆರಡೂ ಕೂಡ ಜೈವಿಕ ಸೃಷ್ಟಿಯ ಅನನ್ಯ ಸಂಗತಿಗಳೇ ಆಗಿವೆ. ಜ್ಞಾನ, ಪ್ರಜ್ಞೆ, ವಿಜ್ಞಾನ, ತಂತ್ರಜ್ಞಾನ ವಿಕಾಸದಿಂದಾಗಿ ಮನುಷ್ಯ ಜೀವಜಗತ್ತಿನಲ್ಲಿ ಬೇರೆಲ್ಲ ಪ್ರಾಣಿಗಳಿಗಿಂತಲೂ ಭಿನ್ನವಾಗಿ ಜಗತ್ತಿನಲ್ಲಿ ಗುರುತಿಸಿಕೊಂಡ. ಹಸಿವು ಮತ್ತು ಕಾಮಗಳ ವಿಷಯಗಳಲ್ಲಿ ಅನೇಕ ಪರಿಮಿತಿಗಳನ್ನು ಹೇರಿಕೊಂಡ. ಆದರೂ ದೇಹ ಮತ್ತು ಮನಸ್ಸುಗಳ ವಿಚಿತ್ರವಾದ ಅನುಸಂಧಾನ ಕಾಮದ ವಿಷಯದಲ್ಲಿ ಮನುಷ್ಯನನ್ನು ಒಮ್ಮೊಮ್ಮೆ ಮೃಗೀಯ ವರ್ತನೆಗೆ ಪ್ರೇರೇಪಿಸುತ್ತದೆ. ಕುಟುಂಬ ವ್ಯವಸ್ಥೆ ರೂಪುಗೊಂಡ ನಂತರ ಮಾನವ ಜನಾಂಗ ಒಂದು ವ್ಯವಸ್ಥಿತ ರೀತಿಯಲ್ಲಿ ಬದುಕು ನಡೆಸಲು ಪ್ರಾರಂಭಿಸಿತು.  ಮಠಗಳ ವಿಷಯಕ್ಕೆ ಬರೋಣ. ಅಲ್ಲಿ ಅಧಿಕಾರ ನಡೆಸುವವರು ಕೆಲವು ನಿರ್ಬಂಧಗಳಿಗೆ ಸಿದ್ದರಾಗಿಯೇ ಇರಬೇಕು. ಕಾಮವನ್ನು ನಿಯಂತ್ರಿಸಲು ಸಾಧ್ಯವಾಗದವರು ಸಂಸಾರಕ್ಕೆ ಅಂಟಿಕೊಂಡೇ ಇಂಥ ಸಮಾಜಮುಖಿ ಕೆಲಸಗಳನ್ನು ಮಾಡಬಹುದು. ಮತ್ತು ಅಂಥವರು ಭಾರತದಲ್ಲಿಯೇ ಅಲ್ಲದೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಕಾಣಸಿಗುತ್ತಾರೆ. ಆದರೆ ಮಠಗಳಲ್ಲಿ ಸನ್ಯಾಸಿಗಳ, ಸ್ವಾಮಿಗಳ, ಪೀಠಾಧೀಶರ ವೇಷ ಹಾಕಿಕೊಂಡು ಅದೂ ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಅತ್ಯಾಚಾರವೆಸಗುವುದು ಮತ್ತಿನ್ನಿತರ ಐಷಾರಾಮಿ ಜೀವನ ಅನುಭವಿಸುವುದು ಆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಂತೆಯೇ ಸರಿ. ಪ್ರಗತಿಪರತೆಯ ಹಿಂದೆ, ಒಳ್ಳೆಯತನದ ಹಿಂದೆ, ದಾನ ಧರ್ಮಗಳ ಕೆಲಸಗಳ ಹಿಂದೆ ಇಂಥ ಕ್ರೂರ, ಮೃಗೀಯ ಬಯಕೆಗಳನ್ನು ಬೆಳೆಸಿಕೊಳ್ಳುವುದು ವ್ಯವಸ್ಥೆಗೆ ಮಾಡಿದ ದೊಡ್ಡ ಅವಮಾನ, ಮೋಸ, ವಂಚನೆಗಳೇ ಸರಿ.

ಚಿತ್ರದುರ್ಗದ ಮುರುಘಾ ಶರಣರ ಲೈಂಗಿಕ ಹಿಂಸೆ ಪ್ರಕರಣ ಸದ್ಯಕ್ಕೆ ಕರ್ನಾಟಕದ ಇಡೀ ರಾಜಕೀಯ, ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಧಾರ್ಮಿಕ ವ್ಯವಸ್ಥೆಗಳನ್ನು, ಕ್ಷೇತ್ರಗಳನ್ನು ಬೆತ್ತಲೆಗೊಳಿಸಿದೆ. ಸಮಾಜದ ಅಸಹಾಯಕ ಸಮುದಾಯಗಳ ಬೆನ್ನಿಗೆ ನಿಲ್ಲಲು, ಅನಾಥ ಜೀವಿಗಳಿಗೆ ಅನ್ನ, ಅಕ್ಷರಗಳ ದಾಸೋಹ ಮಾಡಲು ಮಠ ಮಂದಿರಗಳು ಹುಟ್ಟಿಕೊಂಡಿದ್ದಿರಬೇಕು. ಇಂಥ ಮಠಗಳು ನಡೆಯುವುದು ಬಹುತೇಕ ಭಕ್ತಾದಿಗಳ, ಉದಾರಿ ಶ್ರೀಮಂತರ ದಾನ ಧರ್ಮಗಳಿಂದ. ಮತ್ತು ಮಠ ಮಾನ್ಯಗಳಿಗೆ ಸ್ವಂತ ಆಸ್ತಿಪಾಸ್ತಿಗಳೂ ಇರುತ್ತವೆ. ಇವೊತ್ತು ಪ್ರಸಿದ್ಧಿಯಲ್ಲಿರುವ ಅನೇಕ ಮಠಗಳು ನೂರಾರು ಕೋಟಿಗಳಷ್ಟು ಆಸ್ತಿಪಾಸ್ತಿಗಳನ್ನು ಹೊಂದಿವೆಯಲ್ಲದೆ ದೊಡ್ಡ ದೊಡ್ಡ ವಿದ್ಯಾಸಂಸ್ಥೆಗಳನ್ನು ಹೊಂದಿವೆ. ಇಂದು ಅನೇಕ ಖ್ಯಾತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಮಠಗಳ ಅಡಿಯಲ್ಲಿ ಬೆಳೆದು ನಿಂತಿವೆ. ಸರ್ಕಾರಗಳಿಂದ ಸಹ ಇಂಥ ಮಠಗಳು ಅನೇಕ ಸೌಲಭ್ಯ, ಅನುಕೂಲತೆಗಳನ್ನು ಪಡೆದುಕೊಳ್ಳುತ್ತಿವೆ. ಬಹುತೇಕ ಮಠಗಳು ಜಾತಿ ಆಧಾರಗಳ ಮೇಲೆ ಬೆಳೆದಿರುವುದರಿಂದ ರಾಜಕೀಯವಾಗಿಯೂ  ಮಠಗಳು ಬಲಾಢ್ಯವಾಗತೊಡಗಿದವು. ಕರ್ನಾಟಕದಲ್ಲಿ ಲಿಂಗಾಯತ, ಬ್ರಾಹ್ಮಣ ಮತ್ತು ಒಕ್ಕಲಿಗ ಮಠಗಳ ಪ್ರಾಬಲ್ಯವಿದ್ದರೂ ಲಿಂಗಾಯತ ಮಠಗಳೇ ಎಲ್ಲಾ ವಿಧದಲ್ಲೂ ಮುಂದಿರುವುದು. ಜಾತಿ ಆಧಾರಿತ ರಾಜಕಾರಣ ಪ್ರಾರಂಭವಾದ ಮೇಲೆ ರಾಜಕಾರಣಿಗಳು ಮತ್ತು ಭ್ರಷ್ಟ ಅಧಿಕಾರಿಗಳು ವಾಮಮಾರ್ಗಗಳಿಂದ ಸಂಪಾದನೆ ಮಾಡಿದ ಸಂಪತ್ತನ್ನು ಮಠಗಳಲ್ಲಿ ಇಡತೊಡಗಿದರು ಮತ್ತು ಈಗಲೂ ಇಡುತ್ತಿದ್ದಾರೆ. ಹಾಗಾಗಿ ಮಠಾಧೀಶರು ಇನ್ನಿಲ್ಲದಷ್ಟು ಮಹತ್ವ ಪಡೆಯತೊಡಗಿದರು. ಮಠಗಳು ಮತ ಕೇಂದ್ರಗಳಾಗಿ ಬೆಳೆಯತೊಡಗಿದ ಮೇಲಂತೂ ರಾಜಕಾರಣಿಗಳು ಪೀಠಾಧೀಶರ ಕಾಲುಗಳಿಗೆ ಬೀಳತೊಡಗಿದರು. ಪ್ರಾರಂಭದಲ್ಲಿ ದಾರ್ಶನಿಕತೆಯ ಮತ್ತು ಆಧ್ಯಾತ್ಮಿಕತೆಯ ಕೇಂದ್ರಗಳಾಗಿದ್ದ ಮಠಗಳು ಬರಬರುತ್ತಾ ರಾಜಕೀಯ ಮತ್ತು ಜಾತೀಯತೆಯ ಕೇಂದ್ರಗಳಾಗಿ ಬೆಳೆದು ನಿಂತವು. ಹೀಗಾಗಿ ಮಠಗಳಲ್ಲಿ ಅನಾಚಾರ, ಗುಂಪುಗಾರಿಕೆಗಳು ಹೆಚ್ಚಾದವು. ಹಿಂದೆ ಮಠಗಳನ್ನು ಕಟ್ಟಿದ ಮಹಾತ್ಮರ ಉದ್ದೇಶಗಳು ಮೂಲೆಪಾಲಾಗಿ ಗುಂಪುಗಾರಿಕೆ, ಪರಸ್ಪರ ನಿಂದನೆ, ವೈಯಕ್ತಿಕ ಆಶಯಗಳು ನೆಲೆಯೂರಿದವು. ನಾನು ಓದಲೆಂದು 1972ರಲ್ಲಿ ಬೆಂಗಳೂರಿಗೆ ಬಂದು ಡಿಗ್ರಿ ಮುಗಿಸುವವರೆಗೂ ನನ್ನ ಅನೇಕ ಸ್ನೇಹಿತರು ಮತ್ತು ಸಹಪಾಠಿಗಳು ರೈಲ್ವೆ ಸ್ಟೇಷನ್ ಪಕ್ಕದಲ್ಲಿದ್ದ ತೋಟದಪ್ಪ ಛತ್ರ, ಗಾಂಧೀ ನಗರದ ಜಯದೇವ ಹಾಸ್ಟೆಲ್ ಮತ್ತು ಸರ್ಪಭೂಷಣ ಮಠದಿಂದ ಬರುತ್ತಿದ್ದರು. ಹಳ್ಳಿಗಾಡಿನಿಂದ ಬಂದ ಬಡ ವಿದ್ಯಾರ್ಥಿಗಳಿಗೆ ಅವು ಆಶ್ರಯಧಾಮಗಳಾಗಿದ್ದವು. ಗೆಳೆಯರ ಜೊತೆ ನಾನು ಈ ಮೂರು ಮಠಗಳಿಗೂ ಆಗಾಗ ಹೋಗುತ್ತಿದ್ದದ್ದುಂಟು. ವಿದ್ಯಾರ್ಥಿಗಳಿಗೆ ಅದೂ ಬೆಂಗಳೂರಿನಲ್ಲಿ ಮೂರೊತ್ತೂ ಬಿಸಿ ಬಿಸಿ ಮುದ್ದೆ ಊಟ ಕೊಟ್ಟು ಸಲಹುತ್ತಿದ್ದ ಸಂಗತಿಗಳನ್ನು ನೆನಪಿಸಿಕೊಂಡರೆ ಭಾವುಕತೆ ತುಂಬಿ ಕಣ್ಣುಗಳು ಹನಿಗೂಡುತ್ತವೆ. ಅಲ್ಲಿ ಇದ್ದು ವಿದ್ಯಾಭ್ಯಾಸ ಮಾಡಿದ ನೂರಾರು ಜನ ಪ್ರತಿಷ್ಠಿತ ವ್ಯಕ್ತಿಗಳಾಗಿ ರೂಪುಗೊಂಡು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ. ಇಂಥ ಲಕ್ಷಾಂತರ ಜನರ ಬದುಕಿನ ಹಿಂದೆ ಈ ಮಠಗಳ ಶ್ರಮ ಮತ್ತು ಔದಾರ್ಯ ಅಡಗಿದೆ. ಶಿಸ್ತು ಪಾಲಿಸುವುದೂ ಕೂಡ ಇಂಥ ಮಠಗಳಲ್ಲಿ ಕಡ್ಡಾಯವಾಗಿತ್ತು. ಇನ್ನು ನಮ್ಮ ಜಿಲ್ಲೆಯ ಸಿದ್ದಗಂಗಾ ಮಠ! ನಾನು ಅತ್ಯಂತ ಮೆಚ್ಚಿಕೊಂಡ ಮಠ. 115 ವರ್ಷಗಳ ಕಾಲ ಬದುಕಿದ್ದ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಯವರು ಸಮಾಜಕ್ಕೆ ಕೊಟ್ಟ ಸೇವೆ ವಿಶಿಷ್ಟವೂ, ಅನನ್ಯವೂ ಆಗಿ ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಮಠ ಅತ್ಯಂತ ಆರ್ಥಿಕ ಸಂಕಷ್ಟದಲ್ಲಿದ್ದಾಗ ಸಾರಥ್ಯ ವಹಿಸಿಕೊಂಡ ಶಿವಕುಮಾರ ಸ್ವಾಮೀಜಿಯವರು ಇಂದು ಪ್ರತಿದಿನವೂ ಮಠದ ವಿದ್ಯಾರ್ಥಿಗಳನ್ನೂ ಸೇರಿಸಿಕೊಂಡು ಸುಮಾರು 8,000ದಿಂದ 10,000 ಜನರಿಗೆ ಮೂರೊತ್ತೂ ಅನ್ನದಾಸೋಹ ಮಾಡುವ ಮಟ್ಟಕ್ಕೆ ಮಠವನ್ನು ತಂದು ನಿಲ್ಲಿಸಿ ಲಿಂಗೈಕ್ಯರಾಗಿರುವರೆಂದರೆ ಅದರ ಹಿಂದಿರುವ ಶ್ರಮ ಮತ್ತು ಹೋರಾಟಗಳನ್ನು ಯಾರಾದರೂ ಊಹಿಸಬಹುದು. ನಾನೂ ಒಂದೆರಡು ಕಾರ್ಯಕ್ರಮಗಳಿಗೆ ಮಠಕ್ಕೆ ಹೋಗಿದ್ದುಂಟು. ಅಲ್ಲಿನ ಇಡೀ ವ್ಯವಸ್ಥೆಯನ್ನು ಕಣ್ಣು ತುಂಬಿಸಿಕೊಳ್ಳುತ್ತಿದ್ದರೆ ಧನ್ಯತಾಭಾವ ತನ್ನಷ್ಟಕ್ಕೆ ತಾನೇ ಮೂಡುತ್ತದೆ. ಶಿವಕುಮಾರ ಸ್ವಾಮೀಜಿಯವರಲ್ಲಿದ್ದ ಶಿಸ್ತು ಇಡೀ ಮಠವನ್ನು ಆವರಿಸಿಕೊಂಡಿದ್ದರಿಂದಲೇ ಮಠ ಸುಸೂತ್ರವಾಗಿ ಬಹಳ ವರ್ಷಗಳ ಕಾಲ  ನಡೆದುಕೊಂಡು ಹೋಗಿದ್ದು. ಭಾರತಾದ್ಯಂತ ಇಂಥ ಅನೇಕ ಮಠಗಳು ಇಂದಿಗೂ ಬಡಬಗ್ಗರ ಆಶಾಕಿರಣಗಳಾಗಿ ನಡೆದುಕೊಂಡು ಹೋಗುತ್ತಿವೆ.  ಯಾವುದೇ ಕುಟುಂಬ, ಸಂಸ್ಥೆ, ಸಂಘ, ಮಠ ಇತ್ಯಾದಿಗಳು ಸುಸೂತ್ರವಾಗಿ ನಡೆಯಬೇಕಾದರೆ ಅದರ ಯಜಮಾನ ಸರಿಯಾಗಿರಬೇಕಾಗುತ್ತದೆ.

ಚಿತ್ರದುರ್ಗದ ಮುರುಘಾ ಮಠಕ್ಕೆ ಇನ್ನೂರು ವರ್ಷಗಳ ಇತಿಹಾಸ ಇದೆಯಂತೆ. ಭಕ್ತಾದಿಗಳ, ದಾನಿಗಳ ಧಾರಾಳ ಕೊಡುಗೆಗಳಿಂದಾಗಿ ಮಠ ಬೆಳೆದಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಮಠದಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವರೆಂಬ ಆಪಾದನೆಯ ಮೇಲೆ ಮಠದ ಪೀಠಾಧಿಕಾರಿಗಳಾದ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರ ಮೇಲೆ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿ, ಅದು ಮಾಧ್ಯಮಗಳಲ್ಲಿ ಢಾಣಾಡಂಗೂರವಾಗಿ ಕಡೆಗೆ ಶ್ರೀಗಳವರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಹಾಗೆ ನೋಡಿದರೆ ಶಿವಮೂರ್ತಿ ಶರಣರು ಪ್ರಗತಿಪರ ಶರಣರೆಂದೇ ಖ್ಯಾತಿ ಪಡೆದವರು. ಮಠದಲ್ಲಿ ಪಾಠ ಪ್ರವಚನಗಳೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತವರು. ಬಸವಶ್ರೀ ಪ್ರಶಸ್ತಿಯನ್ನು ಸ್ಥಾಪಿಸಿ ಸಮಾಜದಲ್ಲಿ  ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದವರನ್ನು ಗುರುತಿಸಿ ವರ್ಷಕ್ಕೊಂದು ಸಾರಿ ಆ ಪ್ರಶಸ್ತಿಯನ್ನು ಒಬ್ಬೊಬ್ಬರಿಗೆ ಕೊಟ್ಟುಕೊಂಡು ಬಂದವರು. ನಾಡಿನ ಪ್ರಗತಿಪರ ಚಿಂತಕರೊಂದಿಗೆ ಸ್ನೇಹ ಬೆಳೆಸಿ  ಮಠವು ಪ್ರಗತಿಪರ ಮಠವೆಂದು ಹೆಸರು ಗಳಿಸಲು ಕಾರಣರಾದವರು. ಮಠದ ಮಕ್ಕಳನ್ನು ಬಸವ ಮಕ್ಕಳೆಂದು ಕರೆದವರು. ಬೋವಿ, ಮಾದಿಗ, ತಳವಾರ ಮುಂತಾದ ಜಾತಿಗಳಿಗೂ ಒಂದೊಂದು ಅಧೀನ ಮಠಗಳನ್ನು ಸ್ಥಾಪಿಸಿ ಅವುಗಳಿಗೆ ತಮಗೆ ಹತ್ತಿರದವರನ್ನು ಮಠಾಧಿಪತಿಗಳನ್ನಾಗಿ ನೇಮಿಸಿ ಎಲ್ಲಾ ಕೋನಗಳಿಂದಲೂ ಮಠದಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿಕೊಂಡವರು. ಶಿವಮೂರ್ತಿ ಮುರುಘರ ಮೇಲೆ ಪೋಸ್ಕೋ ಕಾಯ್ದೆಯಡಿಯಲ್ಲಿ ಎಫ್‌ಐಆರ್ ಫೈಲಾದಾಗ ಈ ಎಲ್ಲಾ ಮಠಗಳ ಸ್ವಾಮೀಜಿಗಳು ಸಹ ಮುರುಘಾ ಶರಣರ ಪರವಾಗಿ ನಿಂತು, ಶರಣರು ಶ್ರೇಷ್ಠರೆಂದು ಮಾಧ್ಯಮಗಳ ಮುಂದೆ ಬೊಬ್ಬೆ ಹೊಡೆದಿದ್ದರು. ಮೊಟ್ಟ ಮೊದಲ ಬಾರಿಗೆ ಮಠದ ಮಹಡಿಯ ಮೇಲೆ ನಿಂತು ಮಾಧ್ಯಮಗಳಿಗೆ ಉತ್ತರಿಸುವಾಗ ಅವರ ಮಾತುಗಳಲ್ಲಾಗಲೀ, ಮುಖದಲ್ಲಾಗಲೀ ಆತ್ಮವಿಶ್ವಾಸ ಇಲ್ಲದಿರುವುದು ಸ್ಪಷ್ಟವಾಗಿ ಪ್ರಕಟವಾಗುತ್ತಿತ್ತು. ನಾನೂ ಸಹ ಕನ್ನಡ ಉಪಸ್ಯಾಸಕರೊಬ್ಬರ ಬಲವಂತಕ್ಕೆ ಸಿಲುಕಿ ಸುಮಾರು ಆರೇಳು ವರ್ಷಗಳ ಹಿಂದೆ ಮಠದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶರಣ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭಕ್ಕೆ ಅತಿಥಿಯಾಗಿ ಹೋಗಿದ್ದೆ. ಶರಣರು ಕೂಡಾ ಇದ್ದರು. ಶರಣರು ಗಂಭೀರವಾಗಿದ್ದರಿಂದ ನಾನು ಅವರೊಂದಿಗೆ ಎರಡು ಮೂರು ಮಾತುಗಳನ್ನು ಮಾತ್ರ ಮಾತನಾಡಿದ್ದೆ. ನಗುನಗುತ್ತಾ ಮಾತನಾಡದವರ, ಮನಬಿಚ್ಚಿ ಮಾತನಾಡದವರ ಹತ್ತಿರ ಅವರೆಷ್ಟೇ ದೊಡ್ಡ ಮನುಷ್ಯರಾಗಿರಲಿ, ಎಷ್ಟೇ ದೊಡ್ಡ ಚಿಂತಕರಾಗಿರಲಿ ಮಾತನಾಡಲು ಹೋಗುವುದಿಲ್ಲ. ಇರಲಿ, ಅಂದು ಕಾರ್ಯಕ್ರಮ ಮುಗಿಸಿಕೊಂಡು ಬಂದುಬಿಟ್ಟಿದ್ದೆ. ಇನ್ನೊಮ್ಮೆ ಮೂರು ವರ್ಷಗಳ ಹಿಂದೆ ಸರಳ ಸಾಮೂಹಿಕ ಮದುವೆಯೊಂದಕ್ಕೆ ದೊಡ್ಡಬಳ್ಳಾಪುರದ ಸ್ನೇಹಿತರು ಮುಖ್ಯ ಅತಿಥಿಯಾಗಿ ಕರೆದುಕೊಂಡು ಹೋಗಿದ್ದರು. ಅವೊತ್ತು ಕೂಡಾ ಶರಣರೊಂದಿಗೆ ಮಾತನಾಡಿದ್ದು ಮೂರೇ ಮೂರು ಮಾತು. ಶರಣರದು ಮಾಮೂಲಿ ಗಾಂಭೀರ್ಯ. ಮಠ ನಿಜಕ್ಕೂ ವಿಶಾಲವಾಗಿ ಬೆಳೆದಿದೆ. ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸ ಕಲ್ಪಿಸುತ್ತಿದೆ. ಅನ್ನ ಹಾಕುತ್ತಿದೆ. ಆದರೆ ನಾನು ಸುಮಾರು ವರ್ಷಗಳ ಹಿಂದೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಹೋಗಿದ್ದಾಗ ಆಗಿದ್ದ ಅನುಭವವೇ ಬೇರೆಯದಾಗಿತ್ತು. ಇಳಿವಯಸ್ಸಿನಲ್ಲೂ ಶಿವಕುಮಾರ ಸ್ವಾಮೀಜಿಯವರ ಮಾತು, ಉತ್ಸಾಹ, ಆತಿಥ್ಯಗಳನ್ನು ಕಂಡು ಅಚ್ಚರಿಯಾಗಿತ್ತು. ಅದು ದೊಡ್ಡ ವಿಷಯವಲ್ಲ, ಏಕೆಂದರೆ ವ್ಯಕ್ತಿಗಳು ಸ್ವಭಾವದಲ್ಲಿ, ವರ್ತನೆಗಳಲ್ಲಿ ಭಿನ್ನವಾಗಿರುತ್ತಾರೆ. ಆದರೆ ಪ್ರತಿಷ್ಠಿತ ಮಠಗಳಲ್ಲಿ ಪೀಠ ಅಲಂಕರಿಸುವ ವ್ಯಕ್ತಿ ಹೇಗಿರಬೇಕೆನ್ನುವುದು ತುಂಬಾ ಮುಖ್ಯವಾಗುತ್ತದೆ. ಶಿಸ್ತು, ಸಂಯಮಗಳೊಂದಿಗೆ ಪ್ರಜ್ಞೆ, ಆತ್ಮಸಾಕ್ಷಿ, ಆತ್ಮನಿಗ್ರಹ ಮುಂತಾದ ಗುಣಾತ್ಮಕ ಲಕ್ಷಣಗಳ ಆಗರಗಳಾಗಿರಬೇಕು. ನಾವು ಪ್ರಾಚೀನ ಕಾಲದ ಋಷಿ ಮುನಿಗಳನ್ನು ಸಿನಿಮಾದಲ್ಲಿ ನೋಡಿದರೆ ಒಂದು ರೀತಿಯ ಪೂಜ್ಯಭಾವನೆ ಬರುತ್ತದೆ. ಏಕೆಂದರೆ ಅವರು ಗುಡಿಸಿಲಿನಂಥ ಆಶ್ರಮಗಳಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದವರು. ಈಗಿನ ಬಹುತೇಕ ಮಠಗಳ, ಆಶ್ರಮಗಳ ಪೀಠಾಧಿಪತಿಗಳನ್ನು ನೋಡಿ, ಒಳ್ಳೆ ಬಾಡಿ ಬಿಲ್ಡರುಗಳಂತೆ ಕಾಣುತ್ತಾರೆ. ಮಿರಮಿರ ಮಿನುಗುತ್ತಿರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಇವರು ಸೇವಿಸುವ ಬಾದಾಮಿ, ಒಣದ್ರಾಕ್ಷಿ, ಗೋಡಂಬಿ ಮುಂತಾದ ಡ್ರೈಪ್ರೂಟ್ಸ್ ಜೊತೆಗೆ ತುಪ್ಪದೊಂದಿಗೆ ಸುಗ್ರಾಸ ಭೋಜನ, ಬಾದಾಮಿ ಹಾಲು ಮುಂತಾದ ಅತಿ ಪೌಷ್ಟಿಕ ಆಹಾರ. ಇದು ದೇಹದಲ್ಲಿ ಅಧಿಕ ವೀರ್ಯ ಉತ್ಪಾದನೆಗೆ ಕಾರಣವಾಗಿ ಆ ಮೂಲಕ ದೇಹದಲ್ಲಿ ಕಾಮ ಜಾಗೃತಗೊಂಡು ಮನಸ್ಸನ್ನು ಚಂಚಲಗೊಳಿಸುತ್ತದೆ. ನೀವು ಬಿಡದಿಯ ನಿತ್ಯಾನಂದನನ್ನು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯನ್ನು ನೆನಪಿಸಿಕೊಳ್ಳಿ ನಾನು ಹೇಳಿದ್ದು ನಿಜ ಅನ್ನಿಸದೆ ಇರಲಾರದು. ಅಂದ ಹಾಗೆ ಕರ್ನಾಟಕದ ಈ ಇಬ್ಬರೂ ಮಠದ ಸ್ವಾಮೀಜಿಗಳು ಲೈಂಗಿಕ ಅಪರಾಧದಲ್ಲಿ ಸಿಕ್ಕಿಕೊಂಡು ದೇಶಾದ್ಯಂತ ಸುದ್ದಿಯಾದವರೇ. ಆ ವಿಷಯಕ್ಕೆ ಮತ್ತೆ ಬರೋಣ.

ಮೈಸೂರಿನ ಒಡನಾಡಿ ಸಂಸ್ಥೆ ಮುರುಘಾ ಶರಣರ ವಿರುದ್ಧ ಪೋಸ್ಕೋ ಕಾಯ್ದೆಯ ಅಡಿಯಲ್ಲಿ ಕೇಸ್ ದಾಖಲಿಸಿದ ಏಳು ದಿನಗಳ ಮೇಲೆ ಡಾ. ಶಿವಮೂರ್ತಿ ಸ್ವಾಮಿಗಳನ್ನು ಪೊಲೀಸರು ಬಂಧಿಸಿದ್ದು. ಮಠದ ಇಬ್ಬರು ಅಪ್ರಾಪ್ತ ಹುಡುಗಿಯರ ಮೇಲೆ ಸುಮಾರು ಎರಡು ವರ್ಷಗಳಿಂದಲೂ ಮುರುಘಾ ಶ್ರೀಗಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬುದು ಶ್ರೀಗಳ ಮೇಲಿರುವ ಆಪಾದನೆ. ಇದು ಮುರುಘಾ ಮಠದ ಘನತೆಯನ್ನು ಶೂನ್ಯವಾಗಿಸಿದೆ. ಯಾವುದೇ ಹೆಣ್ಣು ಸಾರ್ವಜನಿಕವಾಗಿ ಒಂದು ಖ್ಯಾತ ಮತ್ತು ಅತ್ಯಂತ ಪ್ರಭಾವಿತ ಮಠದ ಪೀಠಾಧ್ಯಕ್ಷರ ಮೇಲೆ ಲೈಂಗಿಕ ದೌರ್ಜನ್ಯದ ವಿರುದ್ಧ ಪೋಸ್ಕೋ ಕಾಯ್ದೆಯಡಿಯಲ್ಲಿ ದೂರು ದಾಖಲಿಸುವುದೆಂದರೆ ಸುಲಭದ ಮಾತಲ್ಲ. ಬದಲಾಗಿ ಮಠ, ಸ್ವಾಮೀಜಿ ಮತ್ತು ಸ್ವಾಮೀಜಿಯ ಅನುಯಾಯಿಗಳು ಇದೊಂದು ಷಡ್ಯಂತ್ರ ಎಂದು  ಆಪಾದನೆಯನ್ನು ನಿರಾಕರಿಸುತ್ತಿದ್ದರೂ ಅವರ ನಿರಾಕರಣೆಯಲ್ಲಿ ಸತ್ವ ಮತ್ತು ಸತ್ಯ ಎರಡೂ ಇಲ್ಲವೆಂಬ ವಿಷಯ ಈಗಾಗಲೇ ಅನಾವರಣಗೊಂಡಿದೆ. ಪೊಲೀಸ್ ಮುಂದೆ, ಕೋರ್ಟ್ ಮುಂದೆ  ಮುರುಘಾ ಶ್ರೀಗಳು ಅಪರಾಧಿಯಂತೆ ಕಾಣುತ್ತಿದ್ದಾರೆ. ಅವರಲ್ಲಿ ಸಾಸಿವೆಯಷ್ಟು ಆತ್ಮವಿಶ್ವಾಸವೂ ಇಲ್ಲವೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಸರ್ಕಾರ, ವಿವಿಧ ರಾಜಕೀಯ ಮುಖಂಡರು, ಅಪಾರ ಅಭಿಮಾನಿ ಬಳಗ, ಪ್ರಗತಿಪರ ಗುಂಪುಗಳು ಮುರುಘಾ ಶ್ರೀಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದು ತಪ್ಪಿತಸ್ಥ ಮನೋಭಾವವನ್ನು ಜಗಜ್ಜಾಹೀರುಗೊಳಿಸಿದಂತೆ ಪ್ರಕಟವಾಗುತ್ತಿದೆ. ವೈದ್ಯಕೀಯ ತಪಾಸಣೆ, ಪೊಲೀಸ್ ವಿಚಾರಣೆಗಳಲ್ಲಿ ಮುರುಘಾ ಶ್ರೀಗಳು ನಾಟಕವಾಡುತ್ತಿರುವುದು ಕೂಡಾ ಜಾಹೀರುಗೊಂಡಿದೆ.

ಸಂತ್ರಸ್ತ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ ಶ್ರೀಗಳ ವಿರುದ್ಧ ದೂರು ದಾಖಲಿಸಲು ಸಹಕರಿಸಿರುವ ಮೈಸೂರಿನ ಒಡನಾಡಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಮತ್ತು ಅದರ  ವಿಶ್ವಾಸಾರ್ಹತೆ ಸಹ ಪ್ರಶ್ನಾತೀತ. ಅದೊಂದು ಅತ್ಯಂತ ಸಾಮಾಜಿಕ ಬದ್ಧತೆಯುಳ್ಳ ಸಂಸ್ಥೆಯೆಂದು ಈಗಾಗಲೇ ಸಾರ್ವಜನಿಕವಾಗಿ ಸಾಬೀತುಗೊಂಡಿದೆ ಕೂಡ. ನಾನು ಮೈಸೂರಿನಲ್ಲಿ 1998ರಿಂದ 2000ದವರೆಗೆ ಕೆಲಸದಲ್ಲಿದ್ದಾಗ 4-5 ಬಾರಿ ಇಲವಾಲದ  ಬೋಗಾದಿ ರಸ್ತೆಯಲ್ಲಿರುವ ಈ ಸಂಸ್ಥೆಗೆ ಭೇಟಿ ನೀಡಿದ್ದಿದೆ. ಇದೊಂದು ಸರ್ಕಾರೇತರ ಸಾಮಾಜಿಕ ಸಂಸ್ಥೆ. ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು, ಅತ್ಯಾಚಾರಕ್ಕೊಳಪಟ್ಟ ಮಹಿಳೆಯರನ್ನು ರಕ್ಷಿಸುವುದು, ಅಂಥವರಿಗೆ ಶಿಕ್ಷಣ ಮತ್ತು ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ ಹಾಗೂ ಲೈಂಗಿಕ ಕಾರ್ಯಕರ್ತೆಯರಿಗೆ ಒದಗುವ ಸಮಸ್ಯೆಗಳನ್ನು ನೀಗಿಸುವುದು ಇತ್ಯಾದಿ ಸಮಾಜಮುಖಿ ಕೆಲಸಗಳನ್ನು ಈ ಸಂಸ್ಥೆ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಮಾಡುತ್ತಿದೆ. ಸ್ಟಾನ್ಲಿ ಪರುಶುರಾಮ್ ಎಂಬ ಇಬ್ಬರು ಗೆಳೆಯರು ಚಿಕ್ಕದಾಗಿ ಪ್ರಾರಂಭಿಸಿದ ಈ ಸಂಸ್ಥೆ ಇಂದು ನಾಡು ಮತ್ತು ದೇಶ ಮೆಚ್ಚುವಂತೆ ಕೆಲಸಗಳನ್ನು ಮಾಡುತ್ತಿದೆ. ಇಲ್ಲಿರುವ ಮಕ್ಕಳು ಪ್ರೈಮರಿ ತರಗತಿಯಿಂದಿಡಿದು ಸ್ನಾತಕೋತ್ತರ ತರಗತಿಗಳವರೆಗೂ ಓದುತ್ತಿದ್ದಾರೆ. ಮಾನವ ಕಳ್ಳಸಾಗಾಣಿಕೆಯಲ್ಲಿ ಸಿಲುಕಿದ ಹೆಂಗಸರನ್ನು ರಕ್ಷಿಸುವ, ಅವರಿಗೆ ಉದ್ಯೋಗ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸದಲ್ಲೂ ಈ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಮೂವತ್ತೆರಡು ವರ್ಷಗಳಿಂದ ಇದುವರೆಗೆ ಈ ಸಂಸ್ಥೆ 35 ಮಾನವ ಕಳ್ಳಸಾಗಾಣಿಕೆ ಜಾಲಗಳನ್ನು ಭೇದಿಸಿದೆ. 1230 ಮಹಿಳೆಯರನ್ನು ರಕ್ಷಿಸಿ ಅವರಿಗೆ ಪರ್ಯಾಯ ಜೀವನೋಪಾಯದೊಂದಿಗೆ ಪುನರ್ವಸತಿಯನ್ನು ಕಲ್ಪಿಸಿದೆ. 650 ಅಪ್ರಾಪ್ತ ವಯಸ್ಕರನ್ನು ಬಿಡುಗಡೆ ಮಾಡಿಸಿದೆ. ನೂರಾರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿದೆ. ಅನೇಕ ಅನಾಥ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿ ಬದುಕು ಕಟ್ಟಿಕೊಟ್ಟಿದೆ. ಇಷ್ಟೆಲ್ಲಾ ಸಾಧನಗಳನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಗಳಿಂದ ಮಾಡಿರುವ ಈ ಸಂಸ್ಥೆ ಇಂದು ಮುರುಘಾ ಶ್ರೀಗಳ ಪೈಶಾಚಿಕ ಕೃತ್ಯವನ್ನು ಬೆಳಕಿಗೆ ತಂದು ಸಮಾಜದ ಮುಂದೆ ಶ್ರೀಗಳ ಗೋಮುಖ ವ್ಯಾಘ್ರದ ಮುಖವಾಡವನ್ನು ಕಳಚಿಹಾಕಿ ಬೆತ್ತಲೆಯಾಗಿ ನಿಲ್ಲಿಸಿದೆ.

ಮುರುಘಾ ಶ್ರೀಗಳ ವಿರುದ್ಧದ ಸಂತ್ರಸ್ಥ ಹೆಣ್ಣುಮಕ್ಕಳು ದೂರು ದಾಖಲಿಸಿ ಈ ಸುದ್ದಿ ಇಡೀ ದೇಶವನ್ನು ಅಲ್ಲೋಲಕಲ್ಲೋಲ ಮಾಡಿದ್ದರೂ ಸರ್ಕಾರ, ವಿರೋಧ ಪಕ್ಷಗಳು, ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು ಮಾತಿಲ್ಲದ ಮೂಕರಂತೆ, ಕಿವಿಯಿಲ್ಲದ ಕಿವುಡರಂತೆ, ಕಣ್ಣಿಲ್ಲದ ಕುರುಡರಂತೆ, ಕೈಕಾಲು ಬಿದ್ದುಹೋದ ಹೆಳವರಂತೆ ಒಟ್ಟಾರೆಯಾಗಿ ಹೆಣಗಳಂತೆ ಇದ್ದದ್ದು ಮಾತ್ರ ಕರ್ನಾಟಕದ ಮಟ್ಟಿಗೆ ಒಂದು ದೊಡ್ಡ ಅವಮಾನವೇ ಸರಿ. ಮುರುಘಾ ಶ್ರೀಗಳ ಮೇಲೆ ಪೋಸ್ಕೋ ಕೇಸ್ ಫೈಲಾದ ಆರು ದಿನಗಳ ಕಾಲ  ಪೊಲೀಸರಾಗಲೀ, ಜಿಲ್ಲಾ ಆಡಳಿತವಾಗಲೀ ತುಟಿಕ್ ಪಿಟಿಕ್ ಅನ್ನಲಿಲ್ಲ. ಸ್ವತಃ ರಾಜ್ಯದ ಗೃಹಮಂತ್ರಿಗಳೇ ಮಠದಲ್ಲಿ ಶಿವಮೂರ್ತಿ ಸ್ವಾಮಿಗಳಿಗೆ ಆಗದವರು ಯಾರೋ ಷಡ್ಯಂತ್ರ ಮಾಡಿರಬಹುದು, ಕಾದು ನೋಡೋಣ ಎಂದು ಹೇಳಿ ಕೈ ತೊಳೆದುಕೊಂಡಿದ್ದರು. ಬಿಜೆಪಿ ಪಕ್ಷದ ಸಚಿವರಾಗಲೀ,  ಶಾಸಕರುಗಳಾಗಲೀ ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಲಿಂಗಾಯತ ಓಟುಗರನ್ನೇ ತನ್ನ ವಿಜಯಕ್ಕೆ ನಂಬಿಕೊಂಡಿರುವ ಬಿಜೆಪಿ ಮತ್ತು ಪಕ್ಷದಲ್ಲಿನ ಲಿಂಗಾಯತ ಮುಖಂಡರು ಮುರುಘಾ ಶ್ರೀಗಳ ವಿರುದ್ಧ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇನ್ನು ಕಾಂಗ್ರೆಸ್ಸಿನ ಸೆಕ್ಯುಲರ್ ಅಹಿಂದ ಹೀರೋ ಸಿದ್ದರಾಮಯ್ಯ ಭೂಗತರಾಗಿಬಿಟ್ಟಿದ್ದರು. ಕರ್ನಾಟಕದ ಉದ್ದಗಲಕ್ಕೂ ಹಿಜಾಬ್, ಹಲಾಲ್, ಟಿಪ್ಪು, ಸಾವರ್ಕರ್, ಮಾಂಸ ಮಡ್ಡಿ ವಿಷಯಗಳ ಪರ ವಿರೋಧಗಳ ಬಗ್ಗೆ ಇನ್ನಿಲ್ಲದಂತೆ ಬೊಬ್ಬೆ ಹೊಡೆಯುತ್ತಿದ್ದ ಭೂಪತಿಗಳೆಲ್ಲ ಯಾವ ಯಾವ ಗುಹೆಗಳಲ್ಲಿ ಅಡಗಿ ಕುಳಿತಿದ್ದರೋ? ಸಣ್ಣಪುಟ್ಟ ವಿಷಯಗಳಿಗೂ ಅಂಬೇಡ್ಕರ್, ಬುದ್ಧ, ಬಸವಣ್ಣನ ಫೋಟೋಗಳನ್ನು ಮುಂದಿಟ್ಟುಕೊಂಡು ಬೀದಿಗೆ ಇಳಿಯುವ ಅಂಬೇಡ್ಕರ್ ವಾದಿಗಳು ಈ ವಿಷಯದಲ್ಲಿ ಸಂತ್ರಸ್ತೆಯೊಬ್ಬಳು ದಲಿತ ಹುಡುಗಿಯಾಗಿದ್ದರೂ ಒಂದೇ ಒಂದು ಹನಿಯಷ್ಟೂ ರೋಷವನ್ನು ಕಕ್ಕದೆ ಎಲ್ಲಿ ತಣ್ಣಗೆ ಕೈಕಟ್ಟಿ ಕುಳಿತುಕೊಂಡರೋ! ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಗತಿಪರರ ಪಡೆ ಟೌನ್‌ಹಾಲ್ ಮುಂದೆ ಸುಳಿಯದೆ ಇರುವುದು ಪರಮಾಶ್ಚರ್ಯವೇ ಸರಿ. ಖರ್ಗೆ, ಪರಮೇಶ್ವರ್, ಖರ್ಗೆಯ ಮಗ ಪ್ರಿಯಾಂಕಾ ಮುಂತಾದ ದಲಿತ ನಾಯಕರಿಗೆ ಮುರುಘಾ ಶ್ರೀಗಳ ವಿರುದ್ಧ ಒಂದು ಸಣ್ಣ ಮಾತನಾಡಲೂ ತೊಳ್ಳೆಗಳು ನಡುಗಿದ್ದು ಏಕೆ? ಬಹುಶಃ ಕಾಂಗ್ರೆಸ್ಸಿನ ಯಾವೊಬ್ಬ ನಾಯಕರು ಬಾಯಿ ಬಿಡದಿದ್ದದ್ದು ಇತ್ತೀಚೆಗಷ್ಟೇ ಸಿದ್ದರಾಮೋತ್ಸವಕ್ಕೆ ಬಂದಾಗ ಕಾಂಗ್ರೆಸ್ ರಾಜಕುಮಾರ ರಾಹುಲ್ ಗಾಂಧಿಯವರು ಮುರುಘಾ ಮಠಕ್ಕೆ ತೆರಳಿ ಶ್ರೀಗಳ ಹತ್ತಿರ ಲಿಂಗದೀಕ್ಷೆಯನ್ನು ತೆಗೆದುಕೊಂಡ ಪರಿಣಾಮವಿರಬಹುದೆ? ಒಟ್ಟಿನಲ್ಲಿ ಮುರುಘಾ ಶ್ರೀಗಳ ಪ್ರಕರಣದಲ್ಲಿ ಎಲ್ಲಾ ಪಕ್ಷಗಳ ರಾಜಕಾರಣಿಗಳ, ಎಡ ಬಲ ಚಿಂತಕ-ಸಿದ್ಧಾಂತಿಗಳ, ಪ್ರಗತಿಪರ ಪಂಡಿತ ಪಾಮರರ, ದಲಿತ, ಅಂಬೇಡ್ಕರ್, ಕನ್ನಡ ಹೋರಾಟಗಾರರ, ಮಹಿಳಾ ಪರ ಸಂಘಟನೆಗಳ ವೇಷಗಳು ಕಳಚಿಬಿದ್ದಿವೆ. ಅಂದರೆ ಇವರಿಗೆಲ್ಲ  ಮುರುಘಾ ಶ್ರೀಗಳು ಅಪ್ರಾಪ್ತ ಬಾಲಕಿಯರ ಮೇಲೆ ನಡೆಸಿದ್ದಾರೆಂದಿರುವ ಲೈಂಗಿಕ ದೌರ್ಜನ್ಯ ಅಂಥ ದೊಡ್ಡ ವಿಷಯವೇ ಅಲ್ಲ. ಹಿಂದೆ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರು ಮಾಡಿದ್ದರೆನ್ನಲಾದ ಅತ್ಯಾಚಾರ ಪ್ರಕರಣ ಕೂಡ ದೊಡ್ಡ ಸುದ್ದಿಯಾಗಿತ್ತು. ರಾಘವೇಶ್ವರ ಭಾರತೀ ಸ್ವಾಮೀಜಿಯವರು 2011ರಿಂದ 2014ರ ನಡುವೆ ತನ್ನ ಮೇಲೆ ನಿರಂತರವಾಗಿ 169 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ರಾಮಚಂದ್ರಾಪುರ ಮಠದಲ್ಲಿ ರಾಮಕಥಾ ಗಾಯಕಿಯಾಗಿದ್ದ ಪ್ರೇಮಲತಾ ಎಂಬ ಮಹಿಳೆ ಗಿರಿನಗರ ಠಾಣೆಗೆ ದೂರು ನೀಡಿದ್ದರು. ತನಿಖೆಯನ್ನು ನಡೆಸಿದ ಸಿಐಡಿ ಅಧಿಕಾರಿಗಳು ರಾಘವೇಶ್ವರ ಶ್ರೀಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಆದರೆ ಅಧೀನ ವಿಚಾರಣಾ ನ್ಯಾಯಾಲಯವು ಸ್ವಾಮೀಜಿಯನ್ನು ಆರೋಪಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಐಡಿ ಮತ್ತು ದೂರುದಾರರು ಪ್ರತ್ಯೇಕ ಅರ್ಜಿಗಳನ್ನು ಹೈಕೋರ್ಟ್ಗೆ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ಈ ಪ್ರಕರಣದಲ್ಲಿ ಸ್ವಾಮೀಜಿ ಮತ್ತು ದೂರುದಾರರಾಗಿದ್ದ ಪ್ರೇಮಲತಾ ನಡುವೆ ಒಪ್ಪಿತ ಲೈಂಗಿಕ ನಡೆದಿರುವುದು ಮೇಲ್ನೋಟಕ್ಕೆ ಸಾಬೀತುಗೊಂಡಿತ್ತು. ಈ ಪ್ರಕರಣದಲ್ಲಿ ಸ್ವಾಮೀಜಿಯವರಿಗೆ ಜಾತಿಯ ವಿಪರೀತ ಬೆಂಬಲ ಕೂಡ ವ್ಯಕ್ತವಾಗಿತ್ತು.

ಮೈಸೂರಿನ ಒಡನಾಡಿ ಸಂಸ್ಥೆ.

ನ್ಯಾಯಮೂರ್ತಿಗಳಾದ ಕೆ.ಎನ್. ಫಣಿಚಂದ್ರ, ರಾಮಮೋಹನ ರೆಡ್ಡಿ, ಎಂ. ಶಾಂತನಗೌಡರ, ಬಿ. ವೀರಪ್ಪ, ಎಚ್.ಜಿ. ರಮೇಶ್, ಪಿ.ಬಿ. ಭಜಂತ್ರಿ ಅಧೀನ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಜಿ. ವಿಜಯಕುಮಾರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಕೆ. ಮುಖರ್ಜಿ, ಎಸ್.ಜಿ. ಪಂಡಿತ್ ಮತ್ತು ಪಿ.ಎಂ. ನವಾಜ್ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು! ರಾಮ ರಾಮ ಎಂಥಾ ನ್ಯಾಯವಯ್ಯಾ!!

ರಾಮನಗರ ಜಿಲ್ಲೆಯ ಬಿಡದಿಯ ನಿತ್ಯಾನಂದ ಸ್ವಾಮಿ ಪ್ರಕರಣವಂತೂ ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದುಕೊಂಡಿತ್ತು. ತಾನು ದೇವರ ಅವತಾರವೆಂದು ವಿಚಿತ್ರ ವೇಷಭೂಷಣಗಳಿಂದ ಜನರನ್ನು ಮರುಳು ಮಾಡುತ್ತಿದ್ದ ಸ್ವಾಮೀಜಿಯವರ ವಿರುದ್ಧ ಶ್ರೀಮತಿ ಆರತಿ ಎನ್ನುವವರು ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಅನೇಕ ನಾಟಕೀಯ ಪ್ರಸಂಗಗಳ ನಂತರ ರಾಮನಗರ ಪೊಲೀಸರು ನಿತ್ಯಾನಂದ ಸ್ವಾಮಿಯನ್ನು ಬಂಧಿಸಿದರೂ ಬೇಲ್ ಮೇಲೆ ಹೊರಗೆ ಬಂದ ನಿತ್ಯಾನಂದ ಕಡೆಗೆ ದೇಶವನ್ನೇ ಬಿಟ್ಟು ಹೋದ. ಈ ಪ್ರಕರಣದಲ್ಲೂ ಕರ್ನಾಟಕದ ರಾಜಕಾರಣಿಗಳು ಮೌನ ವಹಿಸಿದ್ದರು. ನಾಡಿನಾದ್ಯಂತ ನಿತ್ಯಾನಂದನ ವಿರುದ್ಧ ಪ್ರತಿಭಟನೆ ನಡೆದರೂ ಖುದ್ದು ಸರ್ಕಾರ ಪೊಲೀಸ್ ಇಲಾಖೆಯ ಮುಖಾಂತರ ಅವನಿಗೆ ಪಾಠ ಕಲಿಸಲು ಹಿಂದೇಟು ಹಾಕಿತು. ತನಗೆ ಪುರುತ್ವವೇ ಇಲ್ಲವೆಂದು ಹೇಳಿದ್ದ ನಿತ್ಯಾನಂದನನ್ನು ಕೋರ್ಟ್ ಪುರುಷತ್ವ ಪರೀಕ್ಷೆಗೆ ಒಳಪಡಿಸಿತ್ತು. ನಿತ್ಯಾನಂದನಲ್ಲಿ ಪುರುಷತ್ವ ಇರುವುದು ಸಾಬೀತಾಗಿತ್ತು ಕೂಡ. ನಿತ್ಯಾನಂದನ ಆಶ್ರಮದಲ್ಲಿ ಸಿನಿ ತಾರೆಯರು, ವಿದ್ಯಾವಂತರು, ಡಾಕ್ಟರುಗಳು, ಇಂಜಿನಿಯರ್‌ಗಳು ಅವನಿಗಾಗಿ ಹಂಬಲಿಸುತ್ತಿದ್ದ, ಅವನ ಮಾತುಗಳಿಗೆ ಮೈಮರೆತು ಕುಣಿಯುತ್ತಿದ್ದ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಕಂಡು ಅಚ್ಚರಿಯಾಗುತ್ತಿತ್ತು. ಯಾವುದೋ ದ್ವೀಪವನ್ನು ಖರೀದಿಸಿ ನೆಲೆಗೊಂಡಿರುವುದಾಗಿ ಮಾಧ್ಯಮಗಳ ಮೂಲಕ ಹೇಳಿಕೊಳ್ಳುತ್ತಿದ್ದ ದೇವಮಾನವ ನಿತ್ಯಾನಂದ ಪ್ರಸ್ತುತ ವಿಪರೀತ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿರುವ ಸುದ್ದಿ ವ್ಯಾಪಕವಾಗಿ ಕೇಳಿಬರುತ್ತಿದೆ! ಇನ್ನು ಹರಿಯಾಣದ ಖ್ಯಾತ ಧರ್ಮ ಗುರುವಾಗಿದ್ದ ಗುರುಮಿತ್ ಸಿಂಗ್ ರಾಮ್ ರಹೀಮ್ ಬಾಬಾ 2017ರಲ್ಲಿ ಅತ್ಯಾಚಾರ ಕೇಸೊಂದರಲ್ಲಿ ಜೈಲು ಸೇರಿದವನು ಇನ್ನೂ ಅಲ್ಲೇ ಇದ್ದಾನೆ. ಅತ್ಯಂತ ವರ್ಣರಂಜಿತ ವ್ಯಕ್ತಿಯಾಗಿದ್ದ ಅವನ ಆಶ್ರಮಕ್ಕೂ ಕೂಡಾ ಎಲ್ಲಾ ಪಕ್ಷಗಳ  ರಾಜಕಾರಣಿಗಳೂ ಭೇಟಿ ನೀಡುತ್ತಿದ್ದರಲ್ಲದೆ ಆತನಿಗೆ ಸಚಿವರುಗಳ ಅಖಂಡ ಬೆಂಬಲವೂ ಇತ್ತು. ಕೆಲವು ಕೊಲೆಯ ಪ್ರಕರಣಗಳಲ್ಲೂ ರಾಮ್ ರಹೀಮ್ ಶಾಮೀಲಾಗಿರುವುದು ದೃಢಪಟ್ಟಿದೆ. ಇಂಥ ಸ್ವಾಮೀಜಿಗಳ ಪಟ್ಟಿ ಭಾರತದಲ್ಲಿ ಬೆಳೆಯುತ್ತಾ ಹೋಗುತ್ತದೆ.

ಜೀವಜಗತ್ತಿನ ಎಲ್ಲಾ ಪ್ರಭೇದಗಳ ಜೀವಿಗಳಲ್ಲೂ ಹಸಿವು ಮತ್ತು ಕಾಮ  ಅತ್ಯಂತ ಸಹಜವೂ, ಅನಿವಾರ್ಯವೂ ಆಗಿರುವಂಥ ಸಂಗತಿಗಳು. ಇವೆರಡೂ ಕೂಡ ಜೈವಿಕ ಸೃಷ್ಟಿಯ ಅನನ್ಯ ಸಂಗತಿಗಳೇ ಆಗಿವೆ. ಜ್ಞಾನ, ಪ್ರಜ್ಞೆ, ವಿಜ್ಞಾನ, ತಂತ್ರಜ್ಞಾನ ವಿಕಾಸದಿಂದಾಗಿ ಮನುಷ್ಯ ಜೀವಜಗತ್ತಿನಲ್ಲಿ ಬೇರೆಲ್ಲ ಪ್ರಾಣಿಗಳಿಗಿಂತಲೂ ಭಿನ್ನವಾಗಿ ಜಗತ್ತಿನಲ್ಲಿ ಗುರುತಿಸಿಕೊಂಡ. ಹಸಿವು ಮತ್ತು ಕಾಮಗಳ ವಿಷಯಗಳಲ್ಲಿ ಅನೇಕ ಪರಿಮಿತಿಗಳನ್ನು ಹೇರಿಕೊಂಡ. ಆದರೂ ದೇಹ ಮತ್ತು ಮನಸ್ಸುಗಳ ವಿಚಿತ್ರವಾದ ಅನುಸಂಧಾನ ಕಾಮದ ವಿಷಯದಲ್ಲಿ ಮನುಷ್ಯನನ್ನು ಒಮ್ಮೊಮ್ಮೆ ಮೃಗೀಯ ವರ್ತನೆಗೆ ಪ್ರೇರೇಪಿಸುತ್ತದೆ. ಕುಟುಂಬ ವ್ಯವಸ್ಥೆ ರೂಪುಗೊಂಡ ನಂತರ ಮಾನವ ಜನಾಂಗ ಒಂದು ವ್ಯವಸ್ಥಿತ ರೀತಿಯಲ್ಲಿ ಬದುಕು ನಡೆಸಲು ಪ್ರಾರಂಭಿಸಿತು.

ಈಗ ಮತ್ತೆ ಮಠಗಳ ವಿಷಯಕ್ಕೆ ಬರೋಣ. ಅಲ್ಲಿ ಅಧಿಕಾರ ನಡೆಸುವವರು ಕೆಲವು ನಿರ್ಬಂಧಗಳಿಗೆ ಸಿದ್ದರಾಗಿಯೇ ಇರಬೇಕು. ಕಾಮವನ್ನು ನಿಯಂತ್ರಿಸಲು ಸಾಧ್ಯವಾಗದವರು ಸಂಸಾರಕ್ಕೆ ಅಂಟಿಕೊಂಡೇ ಇಂಥ ಸಮಾಜಮುಖಿ ಕೆಲಸಗಳನ್ನು ಮಾಡಬಹುದು. ಮತ್ತು ಅಂಥವರು ಭಾರತದಲ್ಲಿಯೇ ಅಲ್ಲದೆ ಜಗತ್ತಿನ ಬೇರೆ ಬೇರೆ ದೇಶಗಳಲ್ಲೂ ಕಾಣಸಿಗುತ್ತಾರೆ. ಆದರೆ ಮಠಗಳಲ್ಲಿ ಸನ್ಯಾಸಿಗಳ, ಸ್ವಾಮಿಗಳ, ಪೀಠಾಧೀಶರ ವೇಷ ಹಾಕಿಕೊಂಡು ಅದೂ ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದು, ಅತ್ಯಾಚಾರವೆಸಗುವುದು ಮತ್ತಿನ್ನಿತರ ಐಷಾರಾಮಿ ಜೀವನ ಅನುಭವಿಸುವುದು ಆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಂತೆಯೇ ಸರಿ. ಪ್ರಗತಿಪರತೆಯ ಹಿಂದೆ, ಒಳ್ಳೆಯತನದ ಹಿಂದೆ, ದಾನ ಧರ್ಮಗಳ ಕೆಲಸಗಳ ಹಿಂದೆ ಇಂಥ ಕ್ರೂರ, ಮೃಗೀಯ ಬಯಕೆಗಳನ್ನು ಬೆಳೆಸಿಕೊಳ್ಳುವುದು ವ್ಯವಸ್ಥೆಗೆ ಮಾಡಿದ ದೊಡ್ಡ ಅವಮಾನ, ಮೋಸ, ವಂಚನೆಗಳೇ ಸರಿ. ಮುರುಘಾಶ್ರೀಯನ್ನು ಎಲ್ಲಾ ರೀತಿಯ ತನಿಖೆ, ತಪಾಸಣೆಗಳಿಗೆ ಒಳಪಡಿಸಲಾಗುತ್ತಿದೆ. ಮುರುಘಾಶ್ರೀಗಳು ತನಿಖೆಗೆ ಸಹಕರಿಸುತ್ತಿಲ್ಲವೆಂಬ ಸುದ್ದಿ ಕೂಡಾ ಬಿತ್ತರವಾಗುತ್ತಿದೆ. ಅವರ ಪುರುಷತ್ವ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ. ಈ ಪ್ರಕರಣದಲ್ಲಿ ಶಾಮೀಲಾಗಿದ್ದರೆನ್ನಲಾಗಿರುವ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ! ಮುರುಘಾಶ್ರಿಗಳ ಜಾಮೀನು ಅರ್ಜಿ ಸಹ ಕೋರ್ಟಿನ ಮುಂದೆ ಬರಲಿದೆ. ಮತ್ತು ಸೆಪ್ಟೆಂಬರ್ 14ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಈ ಪ್ರಕರಣ ಮುಂದೆ ಎಂಥ ತಾತ್ವಿಕ ಅಂತ್ಯವನ್ನು ತಲುಪುತ್ತದೋ ಎಂದು ಕಾದು ನೋಡಬೇಕಾಗಿರುವುದಷ್ಟೆ. ಈ ಲೇಖನವನ್ನು ಮುಗಿಸುತ್ತಿರುವ ಹೊತ್ತಿನಲ್ಲಿ ಬೆಳಗಾವಿಯ ನೇಗಿನಾಳ ಗುರು ಮಡಿವಾಳೇಶ್ವರ  ಬಸವ ಸಿದ್ಧಲಿಂಗೇಶ್ವರ ಸ್ವಾಮಿಗಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗುತ್ತಿದೆ. ಅವರ ಸುತ್ತಲೂ ಲೈಂಗಿಕ ಸಂಬಂಧ, ಸಮಸ್ಯೆಗಳ ಬಲೆ, ಸುಳಿಗಳು ಸುತ್ತಿಕೊಂಡಿವೆಯಂತೆ! ಶಿವ!! ಶಿವಾ!!!

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles