–ಶೌರ್ಯ ಡೆಸ್ಕ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಅವರು ಸೋಮವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಈ ಮೂಲಕ ದೇಶದ ರಾಜಕಾರಣದ ಬಹುದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಸಮಾಜವಾದಿ ನೆಲೆಯಿಂದ ಬಂದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದ ಮುಲಾಯಂ ರಾಜಕೀಯ ಮತ್ತು ವೈಯಕ್ತಿಕ ಜೀವನವೇ ರೋಚಕ. ಅದರ ಬಗ್ಗೆ ತಿಳಿಯೋಣ ಬನ್ನಿ.

ಉತ್ತರ ಪ್ರದೇಶ ರಾಜಕಾರಣ ಮಾತ್ರವಲ್ಲ, ರಾಷ್ಟ್ರೀಯ ಮಟ್ಟದಲ್ಲೂ ಸರಿ ಸುಮಾರು ಅರ್ಧ ಶತಮಾನಗಳ ಕಾಲ ಸಕ್ರಿಯ ರಾಜಕೀಯದಲ್ಲಿದ್ದ ಮುಲಾಯಂ ಸಿಂಗ್ ಯಾದವ್, ತಮ್ಮ ರಾಜಕೀಯ ಜೀವನದಲ್ಲಿ ಕಂಡ ಏಳು-ಬೀಳುಗಳು ಒಂದೆರಡಲ್ಲ. ತಮ್ಮ ಸ್ವಂತ ಬಲದಿಂದ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿ ದೇಶದ ಹಿಂದುಳಿದ ಜಾತಿಗಳ ದೊಡ್ಡ ನಾಯಕರಾಗಿದ್ದ ಮುಲಾಯಂ ಬಡ ರೈತ ಕುಟುಂಬದಿಂದ ಬಂದು ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿ ನೇತಾಜಿ ಎಂದೇ ಖ್ಯಾತರಾಗಿದ್ದರು.
ಯಾದವ್ ಆರಂಭದ ದಿನಗಳು
ಮುಲಾಯಂ ಸಿಂಗ್ ಯಾದವ್ ಅವರು ನವೆಂಬರ್ 22, 1939 ರಂದು ಉತ್ತರ ಪ್ರದೇಶದ ಸೈಫಾಯಿ ಗ್ರಾಮದಲ್ಲಿ ಮೂರ್ತಿ ದೇವಿ ಮತ್ತು ಸುಗರ್ ಸಿಂಗ್ ಯಾದವ್ ದಂಪತಿಗೆ ಜನಿಸಿದರು.
ಮುಲಾಯಂ ಸಿಂಗ್ ಯಾದವ್ ಅವರು ಪೊಲಿಟಿಕಲ್ ಸೈನ್ಸ್ ಅಧ್ಯಯನ ಮಾಡಿದರು ಮತ್ತು ಇಟಾವಾದಲ್ಲಿನ ಕರ್ಮ್ ಕ್ಷೇತ್ರ ಸ್ನಾತಕೋತ್ತರ ಕಾಲೇಜಿನಲ್ಲಿ ತಮ್ಮ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದರು. ಅವರು ಶಿಕೋಹಾಬಾದ್‌ನ ಎಕೆ ಕಾಲೇಜಿನಲ್ಲಿ ಬಿಟಿ ಪದವಿ ಮತ್ತು ಆಗ್ರಾ ವಿಶ್ವವಿದ್ಯಾಲಯದ ಬಿಆರ್ ಕಾಲೇಜಿನಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿಯನ್ನೂ ಪಡೆದಿದ್ದಾರೆ. ರಾಜಕೀಯಕ್ಕೆ ಸೇರುವ ಮೊದಲು ಮುಲಾಯಂ ಸಿಂಗ್ ಯಾದವ್ ಒಬ್ಬ ಕುಸ್ತಿ ಪಟುವಾಗಿದ್ದರು. ಮೈನ್‌ಪುರಿಯಲ್ಲಿ ನಡೆದ ಕುಸ್ತಿ ಪಂದ್ಯದ ವೇಳೆ ಜಸ್ವಂತ್‌ನಗರದ ಅಂದಿನ ಶಾಸಕ ನಾಥು ಸಿಂಗ್ ಅವರು ಮುಲಾಯಂ ಅವರನ್ನು ಮೊದಲು ಗಮನಿಸಿದರು.

ಮುಲಾಯಂ ಅವರ ಕೌಶಲ್ಯದಿಂದ ಪ್ರಭಾವಿತರಾದ ಸಿಂಗ್ ಅವರು ಮುಲಾಯಂ ಅವರಿಗೆ ಆಶ್ರಯ ನೀಡಿ ಬೆಳೆಸಿದರು. ನಂತರ ಸಿಂಗ್ ಅವರು ಮುಲಾಯಂ ಅವರಿಗೆ ಜಸ್ವಂತ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಟಿಕೆಟ್ ನೀಡಿದರು. ಇಲ್ಲಿಂದ ಯಾದವ್ ರಾಜಕೀಯದ ಹಾದಿ ಶುರುವಾಯಿತು. 1970ರ ದಶಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಜಯಪ್ರಕಾಶ ನಾರಾಯಣ್ ಅವರ ಜೆಪಿ ಚಳವಳಿಯಲ್ಲಿ ಸಮಾಜವಾದಿ ನಾಯಕರಾಗಿ ಹೊರಹೊಮ್ಮಿದ್ದ ಲಾಲೂ ಹಾಗೂ ಮುಲಾಯಂ, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವೇಳೆ ಜೈಲು ಸೇರಿದ್ದರು. 19 ತಿಂಗಳುಗಳ ಕಾಲ ಜೈಲಿನಲ್ಲಿ ಇದ್ದರು. ಅಂದು ಕಾಂಗ್ರೆಸ್ ಪಕ್ಷವನ್ನು ವಿರೋಧಿಸಿದ್ದ ಮುಲಾಯಂ ಸಿಂಗ್ ಯಾದವ್, 2008ರಲ್ಲಿ ಭಾರತ – ಅಮೆರಿಕ ಅಣು ಒಪ್ಪಂದದ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು.
55 ವರ್ಷಗಳ ರಾಜಕೀಯ ಜೀವನ
1977ರಲ್ಲಿ ಮುಲಾಯಂ ಸಿಂಗ್ ಮೊದಲ ಬಾರಿಗೆ ಯುಪಿ ಸರ್ಕಾರದಲ್ಲಿ ಸಚಿವರಾದರು. ಅವರು 1989 ರಿಂದ 1991, 1993 ರಿಂದ 1995 ಮತ್ತು 2003 ರಿಂದ 2007ರವರೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜೂನ್ 1, 1996ರಿಂದ ಮಾರ್ಚ್ 19, 1998ರವರೆಗೆ ಎಚ್.ಡಿ.ದೇವೇಗೌಡರ ಸರ್ಕಾರದಲ್ಲಿ ಮುಲಾಯಂ ಸಿಂಗ್ ಅವರು ದೇಶದ ರಕ್ಷಣಾ ಸಚಿವರಾಗಿದ್ದರು. ಮುಲಾಯಂ ಸಿಂಗ್ ಅವರು ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭೆಯ ಸದಸ್ಯರೂ ಆಗಿದ್ದರು. ಪ್ರಸ್ತುತ ಅವರು ಯುಪಿಯ ಮೈನ್‌ಪುರಿ ಸಂಸದರಾಗಿದ್ದರು. 7 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 55 ವರ್ಷಗಳ ರಾಜಕೀಯ ಜೀವನದಲ್ಲಿ 9 ಬಾರಿ ಶಾಸಕರಾಗಿ, 7 ಬಾರಿ ಸಂಸದರಾಗಿ ಆಯ್ಕೆಯಾದ ಏಕೈಕ ನಾಯಕ ಮುಲಾಯಂ ಸಿಂಗ್. ಇಡೀ ದೇಶದಲ್ಲಿ ಮೋದಿ ಅಲೆ ಇದ್ದಾಗ ಅವರು ಅಜಂಗಢ ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದರು.

ಪ್ರಧಾನಿ ಕನಸನ್ನು ಕಂಡಿದ್ದರು!
ಮುಲಾಯಂ ಸಿಂಗ್ ಯಾದವ್ 1996ರಲ್ಲಿ ಯುನೈಟೆಡ್ ಫ್ರಂಟ್ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಮುಂದಾಗಿತ್ತು. ಈ ವೇಳೆ ಮುಲಾಯಂ ಸಿಂಗ್ ಯಾದವ್ ಅವರ ಹೆಸರು ಪ್ರಧಾನಿ ಹುದ್ದೆಗೆ ಪ್ರಮುಖವಾಗಿ ಚಾಲ್ತಿಯಲ್ಲಿತ್ತು. ಆದರೆ, ಮುಲಾಯಂ ಸಿಂಗ್ ಯಾದವ್ ಪ್ರಧಾನಿ ಆಗೋದು ಲಾಲೂ ಪ್ರಸಾದ್ ಯಾದವ್ ಅವರಿಗೆ ಇಷ್ಟವಿರಲಿಲ್ಲ. ಈ ಸಂದರ್ಭದಲ್ಲೇ ಜೆಡಿಎಸ್ ವರಿಷ್ಠ ದೇವೇಗೌಡರು ಪ್ರಧಾನಿ ಹುದ್ದೆಗೆ ಏರಿದ್ದನ್ನು ಸ್ಮರಿಸಬಹುದು.
ಇನ್ನು 2014ರಲ್ಲಿಯೂ ಪ್ರಧಾನಿ ಆಗುವ ಕನಸನ್ನು ಮುಲಾಯಂ ಸಿಂಗ್ ಯಾದವ್ ಕಂಡಿದ್ದರು. ಆದರೆ, ಚುನಾವಣೆಯ ಫಲಿತಾಂಶ ಮುಲಾಯಂ ಸಿಂಗ್ ಯಾದವ್ ಅವರ ಪಿಎಂ ಹುದ್ದೆಗೇರುವ ಕನಸನ್ನು ಶಾಶ್ವತವಾಗಿ ನುಚ್ಚುನೂರು ಮಾಡಿತು. ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ 3 ಬಾರಿ ಮುಖ್ಯಮಂತ್ರಿಯಾಗಿದ್ದರೂ ಮುಲಾಯಂ ಸಿಂಗ್ ಯಾದವ್ ಪ್ರಧಾನಿ ಹುದ್ದೆಗೆ ಏರಲು ಸಾಧ್ಯವಾಗಲಿಲ್ಲ ಎಂಬ ಕೊರಗು ಇಂದಿಗೂ ಅವರ ಅಭಿಮಾನಿಗಳಲ್ಲಿ ಇದೆ.
ಯಾದವ್ ರಾಜಕೀಯ ಜೀವನದಲ್ಲಿ ʼಅಯೋಧ್ಯೆʼ ಪಾತ್ರ!
ಅಯೋಧ್ಯೆಯ ಭೂ ವಿವಾದದ ದೇಶ ಕಂಡ ಅತ್ಯಂತ ದೊಡ್ಡ ವಿವಾದ. ಬಹಳ ಸುದೀರ್ಘವಾದ ಈ ಕಾನೂನು ಹೋರಾಟ ಮುಲಾಯಂ ಅವರ ರಾಜಕೀಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತು. 1992 ರಲ್ಲಿ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು.
ನಂತರ 1993ರಲ್ಲಿ ಇವರು ರಾಜ್ಯದ ಮುಖ್ಯಮಂತ್ರಿಯಾಗಿ ಚುಕ್ಕಾಣಿ ಹಿಡಿದರು. ಡಿಸೆಂಬರ್ 1992 ರಲ್ಲಿ ಮಸೀದಿಯನ್ನು ಕೆಡವಿದ ನಂತರ, ಮುಲಾಯಂ ಮುಸ್ಲಿಂ ಸಮುದಾಯದ ಹೀರೋ ಆಗಿ ಹೊರಹೊಮ್ಮಿದರು.

ಕರ ಸೇವಕರ ಮೇಲೆ ಗುಂಡಿಕ್ಕಲು ಆದೇಶ
ಮುಲಾಯಂ 1990 ರಲ್ಲಿ ಅಯೋಧ್ಯೆಯಲ್ಲಿ ಕರ ಸೇವಕರು ಅಥವಾ ಹಿಂದೂ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದರು. ಅವರ ಕ್ರಮಗಳನ್ನು ಹಿಂದೂಗಳು ಮತ್ತು ಮುಸ್ಲಿಮರು ಖಂಡಿಸಿದರು.
ಉತ್ತರ ಪ್ರದೇಶದಲ್ಲಿ ಸುದೀರ್ಘ ಅವಧಿಯ ರಾಷ್ಟ್ರಪತಿ ಆಳ್ವಿಕೆಯ ನಂತರ, 1994 ರ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಬೆಂಬಲದೊಂದಿಗೆ ಮುಲಾಯಂ ಮತ್ತೆ ಅಧಿಕಾರಕ್ಕೆ ಬಂದರು. ಆದಾಗ್ಯೂ, ಜೂನ್ 1995 ರಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಮೈತ್ರಿಯಿಂದ ಹೊರಬಂದರು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಯೊಂದಿಗೆ ಕೈಜೋಡಿಸಿದರು.
1992ರ ಅಕ್ಟೋಬರ್ 4ರಂದು ಸಮಾಜವಾದಿ ಪಕ್ಷ ರಚನೆ
ಮುಲಾಯಂ ಸಿಂಗ್ ಯಾದವ್ ಜನತಾ ದಳದಿಂದ ಬೇರ್ಪಟ್ಟು 1992ರ ಅಕ್ಟೋಬರ್ 4ರಂದು ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಪಕ್ಷದ ರಾಷ್ಟ್ರೀಯ ಸಮಾವೇಶವನ್ನು ಮೊದಲ ಬಾರಿಗೆ 4 ನವೆಂಬರ್ 1992ರಂದು ನಡೆಸಲಾಯಿತು. ಇದಾದ ನಂತರ 1993ರಲ್ಲಿ ಯುಪಿಯಲ್ಲಿ 422 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಬಿಎಸ್‌ಪಿಯ 164 ಅಭ್ಯರ್ಥಿಗಳು ಗೆದ್ದರೆ, ಎಸ್‌ಪಿಯ 67 ಅಭ್ಯರ್ಥಿಗಳು ಜಯಗಳಿಸಿದ್ದರು. ಎಸ್‌ಪಿ ತನ್ನ ಮೊದಲ ಚುನಾವಣೆಯಲ್ಲಿಯೇ 67 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚುನಾವಣೆಯಲ್ಲಿ ಎಸ್‌ಪಿ 256 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

2012 ರಲ್ಲಿ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷವು ಪ್ರಾರಂಭವಾದ ನಂತರ ಮೊದಲ ಬಾರಿಗೆ ಪೂರ್ಣ ಬಹುಮತವನ್ನು ಗಳಿಸಿದಾಗ, ಮುಲಾಯಂ ತಮ್ಮ ಮಗ ಅಖಿಲೇಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರು. ಅಖಿಲೇಶ್ ಯಾದವ್ 2012ರಿಂದ 2017ರವರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದರು.
ಪಕ್ಷದ ಮೇಲಿನ ಹಿಡಿತಕ್ಕಾಗಿ ಅಖಿಲೇಶ್ ಮತ್ತು ಮುಲಾಯಂ ಸಹೋದರ ಶಿವಪಾಲ್ ಯಾದವ್ ನಡುವಿನ ಕೌಟುಂಬಿಕ ಕಲಹ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಯಿತು. ನಂತರ ಕೌಟುಂಬಿಕ ಕಲಹಕ್ಕೆ ಜನವರಿ 1, 2017 ರಂದು ವಿರಾಮ ಹಾಕಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ್ ಅವರಿಗೆ ಅಧಿಕಾರವನ್ನು ಸಂಪೂರ್ಣವಾಗಿ ವರ್ಗಾಯಿಸಲಾಯಿತು.
ವೈಯಕ್ತಿಕ ಜೀವನ

ಮುಲಾಯಂ ಸಿಂಗ್ ಯಾದವ್ ಅವರ ಮೊದಲ ಪತ್ನಿ ಮಾಲ್ತಿ ದೇವಿ, 1974ರಲ್ಲಿ ಪುತ್ರ ಅಖಿಲೇಶ್ ಯಾದವ್ ಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ 2003ರ ನಿಧನದವರೆಗೆ ಮೆದುಳು ನಿಷ್ಕ್ರಿಯವಾಗಿ ಇದ್ದರು. 1990ರ ದಶಕದಲ್ಲಿ ಸಾಧನಾ ಗುಪ್ತ ಜೊತೆಗೆ ಸಂಬಂಧ ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರ ಸಂಬಂಧನ್ನು 2007ರಲ್ಲಿ ಸುಪ್ರೀಂ ಕೋರ್ಟ್ ಕಾನೂನು ಮಾನ್ಯ ಮಾಡಿತು. ಅವರ ಪುತ್ರ ಪ್ರತೀಕ್ ಯಾದವ್ ರ ಪತ್ನಿ ಅಪರ್ಣ ಬಿಷ್ತ್ ಯಾದವ್ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿ ಸುದ್ದಿಯಾಗಿದ್ದರು.
