30.6 C
Bengaluru
Wednesday, March 15, 2023
spot_img

ಕಶ್ಮೀರ್ ಫೈಲ್ಸ್ ಗಿಂತ ರಕ್ತಸಿಕ್ತವಾದ ಮಾರಿಕ್ ಝಾಪಿ ಫೈಲ್ಸ್ ಬಗ್ಗೆ ಗೊತ್ತೇ?

-ವಿಜಯ್ ದಾರಿಹೋಕ

ದೇಶ ವಿಭಜನೆ ವೇಳೆ ಬಾಂಗ್ಲಾದಿಂದ ವಲಸೆ ಬಂದು ದಂಡಕಾರಣ್ಯದ ತಾತ್ಕಾಲಿಕ ವಲಸಿಗರ ಶಿಬಿರಗಳಲ್ಲಿ ಇರಿಸಲ್ಪಟ್ಟಿದ್ದ ಹಿಂದೂಗಳು ಅಲ್ಲಿನ ಹವಾಮಾನ ವೈಪರೀತ್ಯಗಳಿಗೆ ಒಗ್ಗದೆ ಶಾಶ್ವತ ಸ್ಥಳಾಂತರಕ್ಕಾಗಿ ಹಾತೊರೆದು ಸರ್ಕಾರಗಳ ಭರವಸೆಗಳು ಈಡೇರದಿದ್ದಾಗ ಲಕ್ಷಾಂತರ ಸಂಖ್ಯೆಯಲ್ಲಿ ಸುಂದರ್ ಬನ್ ಪ್ರದೇಶದ ಮಾರಿಕ್ ಝಾಫಿ ಎಂಬ ನಿರ್ವಾಸಿತ ದ್ವೀಪಕ್ಕೆ ಬಂದು ನೆಲೆಸಿದಾಗ ಅಲ್ಲಿಂದ ಅವರನ್ನು ಒಕ್ಕಲೆಬ್ಬಿಸಲು ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಸರ್ಕಾರ ನಡೆಸಿದ ಬರ್ಬರ ರಕ್ತಪಾತ ಸರಣಿಯೇ ಮಾರಿಕ್ ಝಾಪಿ ಫೈಲ್ಸ್. ಸ್ವಾತಂತ್ರ್ಯೋತ್ತರವಾಗಿ ನಡೆದ ಅಮಾನವೀಯ ಘಟನೆಗಳಾದ ನೆಲ್ಲಿ ನರಮೇಧ, ಎಂಬತ್ತನಾಲ್ಕರ ಸಿಖ್ ದಂಗೆ, ಕಾಶ್ಮೀರ ಪಂಡಿತರ ಮಾರಣಹೋಮ ಹಾಗೂ 2002 ರ ಗುಜರಾತ್ ದಂಗೆಗಳಿಗಿಂತಲೂ ಸಾವು ನೋವು ಅಮಾನುಷತೆಯ  ಪ್ರಮಾಣದಲ್ಲಿ ದೊಡ್ಡದಾಗಿತ್ತು ಈ  ಮಾರಿಕ್ ಝಾಪಿ ಘಟನೆ. ಆದರೆ ದಶಕಗಳಷ್ಟು ಕಾಲ, ಬಂಗಾಳದ ಕಮ್ಮ್ಯುನಿಸ್ಟ್ ಸರಕಾರ ಇದನ್ನು ಕೊಂಚವೂ  ಹೊರ ಬರದಂತೆ ಮುಚ್ಚಿ ಹಾಕಿತ್ತು. ಯಾರಿಗೂ ಸೇರಿರದ ನೆಲದಲ್ಲಿ, ಗುರುತಿಲ್ಲದೆ ಸಾವಿರಾರು ಜೀವಗಳು ನರಳಿದ್ದು, ನಶಿಸಿದ್ದು  ದಾಖಲಾಗದೆ, ದೇಶಕ್ಕೆ ದೇಶಕ್ಕೆ ಅರಿಯದೆ ಹೋದದ್ದು ಒಂದು ಅತಿ ದೊಡ್ಡ ವಿಪರ್ಯಾಸ.

ಬಂಗಾಳ ಕೊಲ್ಲಿಗೆ ತಾಕಿಕೊಂಡೆ ಇರುವ ಪಶ್ಚಿಮ ಬಂಗಾಳದ ಸುಂದರಬನ್ಸ್ ಪ್ರದೇಶದಲ್ಲಿ, ಸವಳು ನೀರಿನಲ್ಲೂ ಕೂಡ ಬೆಳೆಯಬಹುದಾದ ದಟ್ಟ ಹಸಿರು  ಮ್ಯಾಂಗ್ರೂವ್ ಸಸ್ಯ ಸಂಕುಲಗಳು, ಪ್ರಸಿದ್ಧ ಬೆಂಗಾಲ್ ಟೈಗರ್ ಸೇರಿದಂತೆ ಕೆಲ ಪ್ರಜಾತಿಯ ವನ್ಯ ಜೀವಿಗಳೂ ಯಥೇಚ್ಚವಾಗಿ ಕಾಣ ಸಿಗುತ್ತವೆ. ಈ ವಿಸ್ತಾರವಾದ   ದ್ವೀಪ ಸಮೂಹಗಳಲ್ಲಿ ಒಂದು ಮಾರಿಕ್ ಝಾಪಿ ದ್ವೀಪ. ಬಂಗಾಳಿಯಲ್ಲಿ ಇದನ್ನು ಮೊರಿಕ್ ಝಾಪಿ ಅಂತಲೂ ಕರೆಯುತ್ತಾರೆ.  1977 ರ ಸುಮಾರಿಗೆ ಆ ದ್ವೀಪದಲ್ಲಿ ಇದ್ದಕ್ಕಿದ್ದಂತೆ  ಸುಮಾರು ಮೂವತ್ತರಿಂದ ನಲವತ್ತು ಸಾವಿರದಷ್ಟು  ನಿರಾಶ್ರಿತ ಮನುಷ್ಯರು ಬಂದು ಸೇರಿಕೊಳ್ಳುತ್ತಾರೆ. ಸವಳು ರುಚಿಯ ಹಿನ್ನೀರು, ಘನ ಪೊದೆಗಳನ್ನು ಬಿಟ್ಟರೆ ಅಲ್ಲಿ ವಾಸಿಸಲು ಯೋಗ್ಯ ಅಂತ ಏನೂ ಇಲ್ಲ. ಅದೊಂದು ಸಂರಕ್ಷಿತ ಅರಣ್ಯ ಎಂದು ಗುರುತಿಸಲ್ಪಟ್ಟ  ಪ್ರದೇಶ ಕೂಡ ಹೌದು. ಹೊರ ಜಗತ್ತಿನ ಅಷ್ಟೇನೂ ಸಂಪರ್ಕ ಇಲ್ಲದೇ  ಕನಿಷ್ಠ  ಮಟ್ಟದಲ್ಲಿ, ಜೀವನ ಸಾಗಿಸುತ್ತಿದ್ದ  ಕೃಶ ಕಾಯದ  ಆ ಬಡ ನಿರಾಶ್ರಿತ ಕುಟುಂಬಗಳು ಯಾವುವು ? ಎಲ್ಲಿಂದ ವಲಸೆ ಬಂದವು ? ಅರಿಯಲು ನಾವು ಕೆಲವು ದಶಕಗಳಷ್ಟು ಹಿಂದಕ್ಕೆ ಹೋಗಬೇಕಾದೀತು.

ಸುಮಾರು 75 ವರ್ಷಗಳ ಹಿಂದೆ ಬ್ರಿಟಿಷರು ದೇಶಕ್ಕೆ ಸ್ವಾತಂತ್ರ ಕೊಟ್ಟು ಹೋಗುವ ವೇಳೆಗೆ , ಧರ್ಮದ ಆಧಾರದಲ್ಲಿ ಭಾರತ, ಪಾಕಿಸ್ತಾನ ವಿಭಜನೆಯಾಗಿದ್ದು, ಅದರ ಬೆನ್ನಿಗೆ ನೋವು,ರಕ್ತಪಾತಗಳು ನಡೆದಿದ್ದು ಎಲ್ಲರೂ ತಿಳಿದ ಇತಿಹಾಸ. ಆಗ ಭಾರತ ಪ್ರಜಾಸತ್ತಾತ್ಮಕ ಜಾತ್ಯತೀತ ರಾಷ್ಟ್ರವಾಗಿ ರೂಪುಗೊಂಡರೆ, ಪೂರ್ವ ಹಾಗೂ ಪಶ್ಚಿಮ ಪ್ರಾಂತಗಳನ್ನು ಒಳಗೊಂಡು  ಪಾಕಿಸ್ತಾನ ತಮ್ಮನ್ನು ಧರ್ಮಾಧಾರಿತ ಇಸ್ಲಾಮಿಕ್ ರಾಷ್ಟ್ರವಾಗಿ ಘೋಷಿತಗೊಂಡಿತು. ಆಗ ಅಲ್ಲಿ ಅಲ್ಪಸಂಖ್ಯಾತರಾಗಿದ್ದ ಹಿಂದೂಗಳ ಮೇಲೆ ಬಲವಂತದ ಮತಾಂತರ, ಧಾರ್ಮಿಕ ಹಿಂಸೆಗಳು ಆರಂಭಗೊಂಡವು.  ಪಶ್ಚಿಮ ಪ್ರಾಂತ ಅಂದರೆ ಇವತ್ತಿನ ಪಾಕಿಸ್ತಾನದಿಂದ ಹಿಂದೂಗಳು ಭಾರತಕ್ಕೆ ಬರಲು ಆರಂಭವಾಗಿ ಅದು ಸುಮಾರು 1947 ರವರೆಗೆ ಮುಂದುವರೆದು  ಒಂದೆರಡು ವರ್ಷಗಳಲ್ಲಿ ಉತ್ತರ ಭಾರತದ ಹಲವು  ಕಡೆ ಲಕ್ಷಗಟ್ಟಲೆ ನಿರಾಶ್ರಿತರು ನೆಲೆಗೊಳ್ಳುವಲ್ಲಿ ವಲಸೆ  ಅಂತ್ಯವಾಗುತ್ತದೆ. 

ಆದರೆ ಪೂರ್ವ ಪಾಕಿಸ್ತಾನ ಅಂದರೆ ಇವತ್ತಿನ ಬಾಂಗ್ಲಾ ದೇಶದಿಂದ ಹಿಂದೂಗಳ ಭಾರತದೆಡೆಗಿನ  ವಲಸೆ ಮಾತ್ರ  ನಿಧಾನವಾಗಿ ಶುರುವಾಗಿ ಹಲವು ದಶಕಗಳವರೆಗೆ ಮುಂದುವರೆಯುತ್ತದೆ.  ಮೊದಲ ಹಂತವಾಗಿ  ಕಲಿತ, ಮೇಲ್ವರ್ಗದ ಹಿಂದೂಗಳು  ಕೊಲ್ಕತಾ ಸೇರಿದಂತೆ  ಪಶ್ಚಿಮ ಬಂಗಾಳದ  ಮುಖ್ಯ ಭಾಗಗಳಲ್ಲಿ ವಲಸೆಗೊಂಡು ನೆಲೆಗೊಳ್ಳುತ್ತಾರೆ. ಆದರೆ ಇತರ ಬಡ ಹಿಂದುಳಿದ, ದಲಿತ ಹಿಂದೂಗಳಿಗೆ ವಲಸೆ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಹೆಚ್ಚಿನ ಪಾಲು ನಾಮಶೂದ್ರ ಪಂಗಡಕ್ಕೆ ಸೇರಿದ ಇವರು ತಲೆ ತಲಾಂತರಗಳಿಂದ ನೆಚ್ಚಿಕೊಂಡಿದ್ದು ನೆಲ, ಜಲ, ಮೀನು ವ್ಯವಸಾಯಗಳನ್ನು. ಒಂದು ವೇಳೆ  ರಾತ್ರೋ ರಾತ್ರಿ ಅವನ್ನೆಲ್ಲ  ಬಿಟ್ಟು ಬಂದರೂ, ಹೊಸ ಅಪರಿಚಿತ ಜಾಗದಲ್ಲಿ ಸುಲಭವಾಗಿ  ಭವಿಷ್ಯ ಕಟ್ಟಿಕೊಳ್ಳುವುದು ಸಾಧ್ಯವೇ?  ವರ್ಗ ತಾರತಮ್ಯ ಕೂಡ ಅಧಿಕವಾಗಿದ್ದ ಕಾಲವಾಗಿತ್ತು ಅದು. ಹೀಗಾಗಿ ತಾವು ಇದ್ದಲ್ಲೇ  ಇರಲು ನಿರ್ಧರಿಸುತ್ತಾರೆ. ಇದಕ್ಕೆ ಅವರು ನಂಬಿದ  ನಾಯಕ, ದಲಿತ-ಮುಸ್ಲಿಂ ಸಹೋದರತ್ವದ ಪ್ರತಿಪಾದಕ  ಜೋಗೇಂದ್ರ ನಾಥ್ ಮಂಡಲ್  ಕೂಡ ನೈತಿಕ ಬೆಂಬಲ, ಭರವಸೆ ನೀಡಿದ್ದರು. ಮಂಡಲ್  ಆಗ ಪೂರ್ವ ಪಾಕಿಸ್ತಾನದ ಆರಂಭಿಕ ಕ್ಯಾಬಿನೆಟ್ ನಲ್ಲಿ ಕಾನೂನು ಹಾಗೂ ಕಾರ್ಮಿಕ ಸಚಿವರೂ ಆಗಿದ್ದವರು.

    ಉತ್ತಮ, ಸುರಕ್ಷೆಯ ಭವಿಷ್ಯದ ಕನಸು ಕಂಡಿದ್ದ ಪೂರ್ವ ಪಾಕಿಸ್ತಾನದ ಹಿಂದುಗಳಿಗೆ ಕೆಲವೇ ಸಮಯದಲ್ಲಿ ಭ್ರಮ ನಿರಸನವಾಗಲು ಶುರುವಾಯಿತು. ಅಲ್ಪ ಸಂಖ್ಯಾತರಾಗಿದ್ದ ಅವರ ಮೇಲೆ ಧರ್ಮಾಧಾರಿತ ಹಿಂಸೆಗಳು ಹೆಚ್ಚಳಗೊಂಡವು. ಪರಿಸ್ಥಿತಿ ಎಷ್ಟು ಬಿಗಡಾಯಿಸಿತೆಂದರೆ ಸ್ವತಃ ಜೋಗೇಂದ್ರ ನಾಥ್ ಮಂಡಲ್ ಪ್ರಾಣ ಉಳಿಸಿಕೊಳ್ಳಲು ಭಾರತಕ್ಕೆ ಓಡಿ ಬರಬೇಕಾಯ್ತು. ಹಾಗೆ ಬರುವಾಗ ತಮಗಾದ ವಿಶ್ವಾಸಘಾತಕ, ನೋವಿನ  ಕುರಿತು ಒಂದು ಸುದೀರ್ಘ ಪತ್ರವನ್ನು ಅಂದಿನ ಪಾಕಿಸ್ತಾನದ ಪ್ರಧಾನಿ ಲಿಯಾಖತ್ ಅಲಿ ಖಾನ್ ಗೆ ಬರೆದಿದ್ದರು.

ಜೋಗೇಂದ್ರ ನಾಥ್ ಮಂಡಲ್ .

  ಅಂತೆಯೇ  ಪೂರ್ವ ಪಾಕಿಸ್ತಾನ ಬಾಂಗ್ಲಾದಿಂದ ನಿರಾಶ್ರಿತ  ಹಿಂದೂಗಳ ವಲಸೆ ಕೂಡ ನಿಧಾನವಾಗಿ ಆರಂಭವಾಯಿತು. ಇದು 1970 ರ ವರೆಗೆ ಮುಂದುವರೆದು ಅವರೆಲ್ಲರನ್ನೂ ಭಾರತದ ಪಶ್ಚಿಮ ಬಂಗಾಳದಲ್ಲೊಂದರಲ್ಲೇ  ಇರಿಸಲು ಆಗಿನ ರಾಜ್ಯ ಸರಕಾರ ಒಪ್ಪದೇ, ಆಸ್ಸಾಂ, ಛತ್ತಿಸಗಡ್, ಮಧ್ಯ ಪ್ರದೇಶಕ್ಕೆ ಹೊಂದಿಕೊಂಡ ದಂಡಕಾರಣ್ಯ ಎಂಬ  ಪ್ರದೇಶದಲ್ಲಿ ತಾತ್ಕಾಲಿಕ  ಶಿಬಿರಗಳಲ್ಲಿ ವರ್ಷಗಟ್ಟಲೆ ಕಾಲ ಇರಿಸಲಾಯಿತು. ಕೃಷಿ ಕೂಡ ಸುಲಭವಾಗಿರದ ಆ  ಪ್ರದೇಶಗಳಲ್ಲಿ ತೀವ್ರ ಬೇಸಗೆ ಹಾಗೂ ಚಳಿಗಾಳದ  ವೈಪರೀತ್ಯಗಳು, ಅರಿವಿರದ ಭಾಷೆಗಳು ಬದುಕನ್ನು ಇನ್ನಷ್ಟು  ಕಠೋರಗೊಳಿಸಿದವು. ಬಂಗಾಳ ಹಾಗೂ ಕೇಂದ್ರ ಎರಡರಲ್ಲೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರಗಳು ನಿರಾಶ್ರಿತರ ಜೀವನ ಪರಿಸ್ಥಿತಿಯನ್ನು ಸುಧಾರಿಸಲು ಸಫಲರಾಗಲಿಲ್ಲ. ಇದನ್ನೇ ಉಪಯೋಗಿಸಿಕೊಂಡ ವಿರೋಧ ಪಕ್ಷದಲ್ಲಿದ್ದ ಕಮ್ಮ್ಯುನಿಸ್ಟ್ ಪಕ್ಷ ಅದಾಗಲೇ  ಬಂಗಾಲದಲ್ಲಿ ನೆಲೆಸಿದ್ದ ನಿರಾಶ್ರಿತರನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಲು ಆರಂಭಿಸಿದರು.  ಜ್ಯೋತಿ ಬಸು, ರಾಮ್ ಚಟರ್ಜಿ ಸೇರಿದಂತೆ ಅನೇಕ ಎಡ ಪಕ್ಷದ ನಾಯಕರು ದಂಡಕಾರಣ್ಯಕ್ಕೆ ಭೇಟಿ ಕೊಟ್ಟು, ಅಲ್ಲಿಯೂ ನೆಲೆಸಿದ್ದ ನಿರಾಶ್ರಿತರನ್ನು ಭೇಟಿ ಮಾಡಿ, ನೀವೆಲ್ಲ ನಮ್ಮ ಬಾಂಗ್ಲಾ ಸಹೋದರರಿದ್ದಂತೆ, ತಾವು ಅಧಿಕಾರಕ್ಕೆ ಬಂದರೆ ನಿಮ್ಮನ್ನು ವಾಪಸ್ ಪಶ್ಚಿಮ ಬಂಗಾಳಕ್ಕೆ ಕರೆಸಿಕೊಂಡು ಆಹಾರ,ಆರೋಗ್ಯ, ಉದ್ಯೋಗ, ಸಾಲ ಸೌಲಭ್ಯ ಇತ್ಯಾದಿಗಳನ್ನೂ ಒದಗಿಸಿಕೊಟ್ಟು, ಬದುಕು ಕಟ್ಟಿ ಕೊಡುವ ಆಶ್ವಾಸನೆಗಳ ಮಹಾಪೂರವನ್ನೇ ಹರಿಸಿ ಬಂದಿದ್ದರು. ಇದು ನಿರಾಶ್ರಿತರಲ್ಲಿ ಹೊಸ ಭರವಸೆ ಮೂಡಿಸಿತ್ತು.

ಇಸವಿ  1977 ರಲ್ಲಿ ಚುನಾವಣಾ ನಡೆದು  ಪಶ್ಚಿಮ ಬಂಗಾಳದಲ್ಲಿ ಎಡ ರಂಗ ಸರಕಾರ ಅಧಿಕಾರಕ್ಕೆ ಬಂತು. ದಂಡಕಾರಣ್ಯದ ನಿರಾಶ್ರಿತರು ತಮ್ಮ ಪುನರ್ವಸತಿಗಾಗಿ ಕೆಲ ಸಮಯ ಕಾಯ್ದರೂ,  ಏನೂ ಪ್ರಯೋಜನವಾಗದೆ ಗುಂಪು ಗುಂಪಾಗಿ ಪಶ್ಚಿಮ ಬಂಗಾಳದ  ಕಡೆಗೆ ಪುನರ್ವಲಸೆ  ಆರಂಭಿಸಿದರು. ಟ್ರೈನ್ ನಿಂದ ಬಂದು ಇಳಿಯುತ್ತಲೇ  ನಿರಾಶ್ರಿತರನ್ನು ವಾಪಸ್ ದಂಡಕಾರಣ್ಯಕ್ಕೆ ಹೋಗಿ ಎಂದು ವಾಪಸ್ ಕಳಿಸಲಾಯಿತು.  ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ನಿರಾಶ್ರಿತರಲ್ಲಿ  ಸುಮಾರು ಮೂವತ್ತು , ನಲವತ್ತು ಸಾವಿರದಷ್ಟು ಜನ ಹಾಗೋ ಹೀಗೋ ಓಡಿ ಬಂದು ಈ ಮೇಲೆ ತಿಳಿಸಿದ ಸುಂದರಬನ್ ಪ್ರದೇಶದ ಮಾರಿಕ್ ಝಾಪಿ ಎಂಬ ನಿರ್ವಾಸಿತ ದ್ವೀಪ ಪ್ರದೇಶಕ್ಕೆ ಬಂದು ನೆಲೆಗೊಳ್ಳಲು ಆರಂಭಿಸಿದರು. ಇವೆಲ್ಲ ನಡೆದದ್ದು 1978 ರ ಸುಮಾರಿಗೆ. 

ಅಂದ ಹಾಗೆ ಒಂದು ವಿಷಯ ನೆನಪಿರಲಿ. ಇವರೆಲ್ಲ ನಿರಾಶ್ರಿತರಿರಬಹುದು ಆದರೆ ಭಿಕ್ಷುಕರಾಗಿರಲಿಲ್ಲ. ತಮ್ಮ ರಟ್ಟೆಯ ಕಸು ಉಪಯೋಗಿಸಿ, ತಮ್ಮ ಅನ್ನವನ್ನು ದುಡಿದೇ ತಿನ್ನುವವರು.ಅವರು ಮಾರಿಕ್ ಚಾಪಿ ದ್ವೀಪದಲ್ಲಿ ಸಣ್ಣ ಊರನ್ನು ಕಟ್ಟಿಕೊಂಡರು. ರಭಸದ ಅಲೆಗಳಿಗೆ ಅಡ್ಡವಾಗಿ ಚಿಕ್ಕ  ತಡೆಗಳನ್ನು,ಓಡಾಡಲು  ರಸ್ತೆಗಳನ್ನೂ ನಿರ್ಮಿಸಿಕೊಂಡರು.  ಸುತ್ತಲೂ ಆವರಿಸಿದ ನೀರು ಕುಡಿಯಲು ಯೋಗ್ಯವಾಗದೇ ಇರುವುದರಿಂದ ಮಳೆ ನೀರು ಶೇಖರಿಸಲು ಗುಂಡಿಗಳನ್ನು ತೋಡಿಕೊಂಡರು. ಚಿಕ್ಕ ಪುಟ್ಟ ಬೆಳೆ ಬೆಳೆಯತೊಡಗಿದರು. ಹೊಟ್ಟೆ ಪಾಡಿಗೆ ಕಷ್ಟಪಟ್ಟು ಮೀನು ಹಿಡಿದು ಕಮ್ಮಿ ದರದಲ್ಲಿ ಸಮೀಪದ ಕುಮಿರ್ಮಾರಿ ದ್ವೀಪದ  ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ಇದಕ್ಕಾಗಿ ಚಿಕ್ಕ ಪುಟ್ಟ ಬೋಟುಗಳ ತಯಾರಿಕಾ ಕೇಂದ್ರವನ್ನೂ ಕಟ್ಟಿಕೊಂಡರು. ಹೆಂಗಸರು ಹೊಲಿಗೆ, ಬಟ್ಟೆ  ಕಸೂತಿ ಆರಂಭಿಸಿದರು. ಮಾರಿಕ್ ಝಾಪಿಯ ಕೇಕ್ ಮತ್ತು ಕಪ್ ಬ್ರೆಡ್ ಸುತ್ತ ಮುತ್ತಲ ದ್ವೀಪಗಳಲ್ಲೆಲ್ಲ ಹೆಸರುವಾಸಿಯಾಯಿತು. ಸ್ವ ಇಚ್ಛೆಯಿಂದ ಕೆಲವರು ಮಕ್ಕಳಿಗೆ ಕಲಿಸಲು ಮುಂದೆ ಬಂದು ಒಂದು ಚಿಕ್ಕ ಶಾಲೆ  ಮತ್ತು ಒಂದು ಚಿಕಿತ್ಸೆಯ ಕೇಂದ್ರ ತೆರೆದುಕೊಂಡರು. ಇವೆಲ್ಲ ಸರಕಾರದ ನೆರವಿಲ್ಲದೆ ನೆರವೇರಿಸಿದರೂ, ಜೀವನ ಅಂಥ ಸುಗಮವಾಗಿಯೇನೂ ಇರಲಿಲ್ಲ. ಎಲ್ಲದಕ್ಕೂ ಬಾಹ್ಯ ಅವಲಂಬನೆ ಅಧಿಕವಾಗಿತ್ತು.  

ಜ್ಯೋತಿ ಬಸು.

ಇಷ್ಟು ಹೊತ್ತಿಗಾಗಲೇ ಜ್ಯೋತಿ ಬಸು ನೇತೃತ್ವದ ಕಮ್ಯುನಿಷ್ಟ ಸರಕಾರ ತನ್ನ ವರಸೆಯನ್ನು ಸಂಪೂರ್ಣ ಬದಲಾಯಿಸಿತ್ತು. ದಂಡಕಾರಣ್ಯಕ್ಕೆ ವಾಪಸ್ ಹೋಗಬೇಕು ಹಾಗೂ ನೆರೆಯ ದೇಶದಿಂದ ಬಂದವರಿಗೆ ಬಂಗಾಳದಲ್ಲಿ ಜಾಗ ಇಲ್ಲ ಎಂದಿತು. ಸಂರಕ್ಷಿತ ಅರಣ್ಯ ಪ್ರದೇಶ ಮಾರಿಕ್ ಝಾಪಿಯಲ್ಲಿ ನಿರಾಶ್ರಿತರ ನೆಲೆಗಳು ಕಾನೂನು ಬಾಹಿರ ಎಂದು ಘೋಷಿಸಿತು.  ಅವರನ್ನು ಅತಿಕ್ರಮಿಗಳು ಎಂದು ಗುರುತಿಸಿ ಕೂಡಲೇ ದ್ವೀಪವನ್ನು ತೆರವುಗೊಳಿಸುವಂತೆ ಒತ್ತಡ ಹೇರಲು ಆರಂಭಿಸಿತು. ಮನವೊಲಿಸುವ  ಮಾತುಕತೆಗಳು ವಿಫಲವಾದವು. ಸ್ವತಃ ಜ್ಯೋತಿ ಬಸು ದಿಲ್ಲಿಗೆ ಹೋಗಿ, ಈ ನಿರಾಶ್ರಿತರು ಸುಂದರಬನ್ ಸಂರಕ್ಷಿತ ಅರಣ್ಯವನ್ನು  ಹಾಳು ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿ ಬಂದರು.

   1978 ಡಿಸೆಂಬರ್ ಕೊನೆಯ ವೇಳೆಗೆ ಪೋಲಿಸ್ ಮತ್ತು ಸಿಪಿಎಂ ಗೂಂಡಾಗಳು ಜೊತೆಯಾಗಿ ಸೇರಿಕೊಂಡು ಕೆಲವು ಬೋಟುಗಳಲ್ಲಿ ಮಾರಿಕ್ ಝಾಪಿಗೆ ಬಂದು ಬೆದರಿಕೆ ಒಡ್ಡಲು ಆರಂಭಿಸಿದರು. ಜೊತೆಗೆ ಸಮೀಪದ ದ್ವೀಪಗಳಿಗೆ ಹೋಗಿ ಇವರ ಮೀನು, ಬ್ರೆಡ್ಡು, ಕೇಕು, ಉಡುಪುಗಳನ್ನು ಖರೀದಿಸದಂತೆ  ತಾಕೀತು ಮಾಡಲು ಆರಂಭಿಸಿದರು. ದ್ವೀಪವಾಸಿಗಳು ಇದಕ್ಕೆ  ಜಗ್ಗಲಿಲ್ಲ.

ಕೆಲ ಸಮಯದಲ್ಲಿ ಸಿಪಿಎಂ ಪಕ್ಷ ಹೊಸ ಕಥೆ ಸೃಷ್ಟಿಸಲು ಶುರು ಮಾಡಿತು. ಈ ಮಾರಿಕ್ ಝಾಪಿ ನಿರಾಶ್ರಿತರೆಲ್ಲರೂ ತೀವ್ರವಾದಿ ಹಿಂದೂಗಳೆಂದೂ, ಅವರಿಗೆಲ್ಲ ಹೊರಗಿನಿಂದ ಧನ ಸಹಾಯ ಸಿಗುತ್ತದೆಯೆಂದೂ, ಮಾರಕ ಆಯುಧಗಳನ್ನು  ತಯಾರಿಸಿ ಭಾರತದ ವಿರುದ್ಧ ಸಂಚು ನಡೆಸುತ್ತಿದ್ದಾರೆಂದೂ ಸುದ್ದಿಯನ್ನು ಹಬ್ಬಿಸಲು ಆರಂಭಿಸಿತು. ತಮ್ಮದಲ್ಲದ ವಿಭಜನೆಯ  ತಪ್ಪಿಗೆ, ಪೂರ್ವ ಪಾಕಿಸ್ತಾನದಲ್ಲಿ ಸಾಮಾಜಿಕ,ಆರ್ಥಿಕ, ಧಾರ್ಮಿಕ ನೆಲೆಯಲ್ಲಿ ಶೋಷಣೆಗೆ ಒಳಗಾಗಿ, ಕೊನೆಗೆ ಜೀವ ಉಳಿಸಿಕೊಳ್ಳಲು ಹೆಂಡತಿ, ಮಕ್ಕಳು ಹಾಗೂ ವೃದ್ಧ ತಂದೆ ತಾಯಿಗಳ ಜೊತೆಗೆ ಮನೆ ಮಠ ಬಿಟ್ಟು ಭಾರತಕ್ಕೆ ವಲಸೆ ಬಂದು  ಅಲೆಮಾರಿಯಾಗಿ ವರ್ಷಗಟ್ಟಲೆ ಬದುಕಲು ಒದ್ದಾಡಿದ ಬಳಿಕವೂ ಇಂತಹ ಆರೋಪಗಳನ್ನು  ಕೇಳುವ ಸ್ಥಿತಿ ಎದುರಾಯ್ತಲ್ಲ ಎಂದು ನಿರಾಶ್ರಿತರು ತಮ್ಮ ದುರ್ವಿಧಿಯ ಕುರಿತು  ಹಲುಬಿಕೊಳ್ಳುತ್ತಾರೆ. ಅದು ಕೇವಲ  ಅರಣ್ಯರೋಧನವಾಯಿತು.

ಈ ನಡುವೆ ಪೊಲೀಸರು ಮತ್ತು ಕಾರ್ಯಕರ್ತರು ರಾತ್ರೋ ರಾತ್ರಿ ಬಂದು  ಬೋಟುಗಳಿಗೆ, ಕೊಟ್ಟಿಗೆಗಳಿಗೆ ಹಾನಿ ಮಾಡುವುದು, ದಿನಪೂರ್ತಿ ದುಡಿದು ಹಿಡಿದಿಟ್ಟ ಮೀನುಗಳನ್ನು ಬಲವಂತದಿಂದ ವಶಪಡಿಸಿಕೊಳ್ಳುವುದು ಹೀಗೆ ನಾನಾ ವಿಧಗಳಿಂದ ತೊಂದರೆ ನೀಡುವುದನ್ನು ಹೆಚ್ಚಿಸಿದರು. ಅದರೂ ಕೂಡ ದ್ವೀಪದ ಮಂದಿ ಬಗ್ಗದಿದ್ದಾಗ ಸರಕಾರ ಉಪಯೋಗಿಸಿದ ಅಸ್ತ್ರ, ಇಡೀ ದ್ವೀಪವನ್ನು ದಿಗ್ಬಂಧನಕ್ಕೊಳಪಡಿಸಿ ಹೊರ ಪ್ರಪಂಚದ ಸಂಪರ್ಕದಿಂದ ಕತ್ತರಿಸಿ ಹಾಕುವುದು.

 ಸುಮಾರು ಮೂವತ್ತು ಪೋಲಿಸ್ ಲಾಂಚ್ ಗಳು,ಎರಡು ಬಿಎಸ್ ಎಫ್ ಶಸ್ತ್ರ ಸಜ್ಜಿತ ಸ್ಟೀಮರ್ ಗಳು ಮಾರಿಕ್ ಝಾಪಿಯನ್ನು  ಸುತ್ತುವರೆದವು. ಮೀನು ಹಿಡಿಯುವ, ಮಾರಾಟ ಮಾಡಲು ಹೊರಡುವ ಬೋಟುಗಳು ತೆಪ್ಪಗೆ ಬಿದ್ದುಕೊಂಡವು. ಹೊರಗಿನಿಂದ ಕುಡಿಯುವ ನೀರು, ಆಹಾರ ಬರುವುದು ನಿಂತು ಹೋಯಿತು  ಕೆಲವರು ಹೇಗೋ ನೆರೆಯ ದ್ವೀಪಕ್ಕೆ ಬಂದು  ಸಾಮಗ್ರಿ, ಮಕ್ಕಳ ಆಹಾರ, ಔಷಧಿ ಕೊಳ್ಳುವಾಗ ಸಿಕ್ಕಿ ಬಿದ್ದರು. ಪೋಲಿಸ್ ಫೈರಿಂಗ್ ನಲ್ಲಿ ಆ ದಿನ ಸುಮಾರು ಹನ್ನೊಂದು ನಿರಾಶ್ರಿತರು ಕೊಲ್ಲಲ್ಪಟ್ಟರು. ಅವರ ಹೆಣಗಳನ್ನು ಸಮೀಪದ ಮೊಸಳೆಗಳು ತುಂಬಿರುವ ಜಲಾನಯನ ಪ್ರದೇಶದಲ್ಲಿ ಎಸೆಯಲಾಯಿತು. ಕೆಲವು ಹೆಣಗಳನ್ನು ಸುಂದರಬನ್ ಪಟ್ಟೆ ಹುಲಿಗಳಿಗೆ  ಆಹಾರವಾಗಿ ಕೂಡ  ಉಪಯೋಗಿಸಲಾಗಿತ್ತು ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.

1979, ಜನವರಿ ಮೂವತ್ತೊಂದು.  ಅಂದು ಸರಸ್ವತಿ ಪೂಜೆಯ ದಿನ. ಮನೆಯ ಮಕ್ಕಳ, ಪುರುಷರ ನಿಸ್ತೇಜ ಮುಖಗಳನ್ನು ಕಂಡು ಕೆಲವು ಮಹಿಳೆಯರು  ಆಗಿದ್ದಾಗಲಿ ಎಂದು ಹತ್ತು ಬೋಟುಗಳಲ್ಲಿ ನೀರಿಗಿಳಿದು ನೆರೆಯ ದ್ವೀಪದ ಕಡೆಗೆ ಕುಡಿಯುವ ನೀರು ತರಲು ಹೊರಟರು. ಆಗ ಪೊಲೀಸರು  ಬೃಹತ್  ಲಾಂಚ್ ಗಳಿಂದ ವೇಗವಾಗಿ ಬಂದು ಕಟ್ಟಿಗೆಯ ಬೋಟ್ ಗಳಿಗೆ ಡಿಕ್ಕಿ ಹೊಡೆಯುತ್ತಾರೆ. ವಾಪಸ್ ಹೋಗಿ ಇಲ್ಲದಿದ್ದರೆ… ಎನ್ನುತ್ತಾ  ಅವರ ಮೇಲೆ ಗುಂಡು ಹಾರಿಸಲು  ಆರಂಭಿಸುತ್ತಾರೆ.  ತಪ್ಪಿಸಿಕೊಳ್ಳಲು ಇಬ್ಬರು ಮಹಿಳೆಯರು  ನದಿಗೆ ಬಿದ್ದರೂ, ನೀರೊಳಗೆ ಗುಂಡು ಹಾರಿಸಿ ಅವರನ್ನು ಕೊಲ್ಲಲಾಯಿತು.ಉಳಿದ  ಮಹಿಳೆಯರು ಸೆರೆ ಸಿಕ್ಕಿ , ಹಲವು ದಿನಗಳ ತರುವಾತ ನೆರೆಯ ನಿರ್ಜನ ದ್ವೀಪಗಳಲ್ಲಿ ಪತ್ತೆಯಾಗಿದ್ದು, ಅವರ ಮೇಲೆ  ಸತತವಾಗಿ  ಅತ್ಯಾಚಾರವಾಗಿದ್ದು ತಿಳಿದು ಬಂದಿತ್ತು .. ತಮ್ಮ ತಾಯಂದಿರ, ಸೋದರಿಯ, ಹೆಂಡಂದಿರ ಮೇಲಿನ ಸರಕಾರದ ಪೋಲಿಸ್ ದಬ್ಬಾಳಿಕೆಗೆ, ದೂರದಲ್ಲಿ ನೋಡುತ್ತಿದ್ದ ದ್ವೀಪದ ಜನ ಒಂದು ಕ್ಷಣ ಅವಾಕ್ಕಾಗುತ್ತಾರೆ. ರೋಧಿಸುತ್ತಾ ಲಾಟಿ, ಕೋಲು, ಕಲ್ಲು  ಹಿಡಿದು ದಂಡೆಗೆ ಬಂದು ಪೋಲಿಸರ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡುತ್ತಾರೆ. ಇದನ್ನೆ ಹೊಂಚು ಹಾಕಿ ನೋಡುತ್ತಿದ್ದ ಪೊಲೀಸರು ಮತ್ತು ಸಿಪಿಎಂ ಕಾರ್ಯಕರ್ತರು  ಗುಂಡು ಹಾರಿಸುತ್ತಾ ಮುನ್ನುಗ್ಗುತ್ತಾರೆ. ಊರೊಳಗೆ ಸಿಕ್ಕ ಸಿಕ್ಕ  ಮನೆಗಳಿಗೆ ನುಗ್ಗಿ ವಸ್ತುಗಳನ್ನು  ಲೂಟಿ ಮಾಡುತ್ತಾರೆ. ಪ್ರತಿಭಟಿಸಿದ ನಿರಾಶ್ರಿತರ ಮೇಲೆ, ಹೆಂಗಸರು ಮಕ್ಕಳು ಎಂದೂ ಕೂಡ ನೋಡದೆ ಗುಂಡು ಹಾರಿಸುತ್ತಾರೆ. ಭಯದಿಂದ ಶಾಲೆಗೆ  ಹೋಗಿ ಅಡಗಿ ಕುಳಿತ ಮಕ್ಕಳನ್ನೂ ಹೊರಗೆಡವಲಾಗುತ್ತದೆ. ಅಲ್ಲಿದ್ದ ಸರಸ್ವತಿಯ ಮೂರ್ತಿಯನ್ನು ಒಡೆದು ಹಾಕಲಾಗುತ್ತದೆ. 

 ಇಂಥಹ ವಿಷಮ ಪರಿಸ್ಥಿತಿಯಲ್ಲಿ  ರಾಮಕೃಷ್ಣ ಮಿಶನ್, ಸೇವಾಶ್ರಮ ದಂತಹ ಸಂಸ್ಥೆಗಳು ಆಹಾರದ ಪೊಟ್ಟಣ, ಮಾನವೀಯ ನೆರವು ನೀಡಲು ಮುಂದೆ ಬಂದರೂ ಪೋಲಿಸ್ ಹಾಗೂ ಕಮ್ಮ್ಯುನಿಸ್ಟ್ ಕಾರ್ಯಕರ್ತರು ಅವರನ್ನು ತಡೆ ಹಿಡಿದು, ಮಕ್ಕಳಿಗೆ ಎಂದು ತಂದಿದ್ದ ಹಾಲನ್ನು ಮಣ್ಣಿಗೆ ಸುರಿದು ಹಿಮ್ಮೆಟ್ಟಿಸುತ್ತಾರೆ. ಅಷ್ಟೇ ಏಕೆ ಮದರ್ ತೆರೇಸಾ ಕೂಡ ಸಹಾಯ ಮಾಡಲು ಮುಂದೆ ಬರದಂತೆ ನೋಡಿಕೊಳ್ಳುತ್ತದೆ. ಅಂದು ಇವತ್ತಿನ ಹಾಗೆ ಸೋಷಿಯಲ್ ಮೀಡಿಯಾ ಇರಲಿಲ್ಲ. 24 ಗಂಟೆ ಬ್ರೇಕಿಂಗ್ ನ್ಯೂಸ್  ಟಿವಿ ಸುದ್ದಿ  ಮಾಧ್ಯಮಗಳು ಇರಲಿಲ್ಲ. ಇದ್ದ ಕೆಲವೇ ಕೆಲವು ಮಾಧ್ಯಮಗಳಿಗೆ ಅಲ್ಲಿ ಸುತರಾಂ ಪ್ರವೇಶ ಇರಲಿಲ್ಲ. ಒಂದೆರಡು ಪತ್ರಿಕೆಗಳು  ಸುದ್ದಿ ಪ್ರಕಟ ಮಾಡಿದರೂ  ಅದನ್ನು ಮಾರುಕಟ್ಟೆಯಲ್ಲಿ ಸಿಗದಂತೆ ಸರಕಾರ ನೋಡಿಕೊಂಡಿತು. ಇವೆಲ್ಲ ನಡೆಯುತ್ತಿದ್ದದ್ದು ಕೇವಲ 75 ಕಿಮಿ ದೂರದ ಕೊಲ್ಕತ್ತಾದಲ್ಲಿ. ಲವಲೇಶದ ಸುಳಿವೂ ಸಿಗದ ಹಾಗೆ ನೋಡಿಕೊಳ್ಳುತ್ತಾದೆ  ಜ್ಯೋತಿ ಬಸು ನೇತೃತ್ವದ ಕಮ್ಮ್ಯುನಿಸ್ಟ್ ಸರಕಾರ .

ಕೊನೆಗೂ  ಕೊಲ್ಕತ್ತಾ ನ್ಯಾಯಾಲಯ ಹೀಗೆಲ್ಲ ಆಹಾರ, ನೀರು, ಔಷಧಿಗಳನ್ನು ಬ್ಲಾಕ್ ಮಾಡುವುದು ಸರಿಯಾದ ಕ್ರಮವಲ್ಲ  ಎಂದು ತೀರ್ಪು ನೀಡುವವರೆಗೆ ಮಾರಿಕ ಝಾಪಿಯ ಮೇಲಿನ ದಿಗ್ಭಂಧನ ಸುಮಾರು ಹದಿನೈದು ದಿನಗಳ ಕಾಲ ಮುಂದುವರೆಯಿತು. ಆ ದಿನಗಳಲ್ಲಿ ದ್ವೀಪದ  ಜನ ಉಪ್ಪು ಮಿಶ್ರಿತ ನೀರು ಕುಡಿದರು. ಹಸಿವು ತಡೆಯಲಾಗದೆ ಅನೇಕರು ಹುಲ್ಲು ತಿನ್ನಲು ಆರಂಭಿಸಿದರು.  ರಾತ್ರಿಯಲ್ಲೂ ಮಕ್ಕಳು ಹಸಿವಿನಿಂದ ಸತತ  ಅತ್ತು ಕರೆದು ಸ್ವರ ಬಿದ್ದು ನಿತ್ರಾಣಗೊಂಡವು. ಕೆಲವು ಮಕ್ಕಳು ಅಸುನೀಗಿದವು.  ಯಾರೋ ಕೊಳವೆ ಭಾವಿಯಲ್ಲಿ ವಿಷ ಹಾಕಿದ್ದರಿಂದ ಕೆಲವರು ಆ ನೀರು  ಕುಡಿದು ಸಾವನ್ನಪ್ಪಿದರು. ಒಂದು ವರದಿಗಳ ಪ್ರಕಾರ ಹೆಂಗಸರು, ಮಕ್ಕಳು ಸೇರಿ ಒಟ್ಟಾರೆ ಘಟನೆಯ ಅವಧಿಯಲ್ಲಿ ಸುಮಾರು 1700 ಮಂದಿ ಕೊಲ್ಲಲ್ಪಟ್ಟರು. ಹೊತ್ತೊಯ್ದ ಅನೇಕ ಮಹಿಳೆಯರನ್ನು ಪೋಲಿಸ್ ಸ್ಟೇಷನ್ ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಯಿತು. 

   ಅಳಿದುಳಿದವರನ್ನು ದಂಡಕಾರಣ್ಯಕ್ಕೆ ಹಾಗೂ ಇತರ ಪ್ರದೇಶಗಳಿಗೆ ಒತ್ತಾಯಪೂರ್ವಕವಾಗಿ ಕಳುಹಿಸಲ್ಪಡಲಾಯಿತು. ಆ ಸಮಯದಲ್ಲಿ ಬದುಕಿ ಉಳಿದ ಕೆಲವರು ಆ ದಿನಗಳನ್ನು ದುಸ್ವಪ್ನದಂತೆ ನೆನೆಸಿ ಈಗಲೂ ಬೆಚ್ಚಿ ಬೀಳುತ್ತಾರೆ. 

ಸ್ವಾತಂತ್ರ್ಯೋತ್ತರವಾಗಿ ನಡೆದ ಅಮಾನವೀಯ ಘಟನೆಗಳಾದ ನೆಲ್ಲಿ ನರಮೇಧ, ಎಂಬತ್ತನಾಲ್ಕರ ಸಿಖ್ ದಂಗೆ, ಕಾಶ್ಮೀರ ಪಂಡಿತರ ಮಾರಣಹೋಮ ಹಾಗೂ 2002 ರ ಗುಜರಾತ್ ದಂಗೆಗಳಿಗಿಂತಲೂ ಸಾವು ನೋವು ಅಮಾನುಷತೆಯ  ಪ್ರಮಾಣದಲ್ಲಿ ದೊಡ್ಡದಾಗಿತ್ತು ಈ  ಮಾರಿಕ್ ಝಾಪಿ ಘಟನೆ. ಆದರೆ ದಶಕಗಳಷ್ಟು ಕಾಲ, ಬಂಗಾಳದ ಕಮ್ಮ್ಯುನಿಸ್ಟ್ ಸರಕಾರ ಇದನ್ನು ಕೊಂಚವೂ  ಹೊರ ಬರದಂತೆ ಮುಚ್ಚಿ ಹಾಕಿತ್ತು. ಯಾರಿಗೂ ಸೇರಿರದ ನೆಲದಲ್ಲಿ, ಗುರುತಿಲ್ಲದೆ ಸಾವಿರಾರು ಜೀವಗಳು ನರಳಿದ್ದು, ನಶಿಸಿದ್ದು  ದಾಖಲಾಗದೆ, ದೇಶಕ್ಕೆ ದೇಶಕ್ಕೆ ಅರಿಯದೆ ಹೋದದ್ದು ಒಂದು ಅತಿ ದೊಡ್ಡ ವಿಪರ್ಯಾಸ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles