19.8 C
Bengaluru
Tuesday, March 21, 2023
spot_img

ಗಾಂಧಿಯನ್ನು ಮರೆತ ಭಾರತ ನೆಮ್ಮದಿಯಿಂದ ಉಸಿರಾಡಬಲ್ಲದೆ…?

-ಕೇಶವರೆಡ್ಡಿ ಹಂದ್ರಾಳ

ಗಾಂಧಿಯವರ ಬಹು ದೊಡ್ಡ ಕನಸಾಗಿದ್ದ ಗ್ರಾಮೀಣ ಅಭಿವೃದ್ಧಿ ಅವರು ಸತ್ತ ನಂತರ ದಿಕ್ಕುದೆಸೆಯಿಲ್ಲದಂತಾಯಿತು. ಬಡತನ, ನಿರುದ್ಯೋಗ, ಜಾತೀಯತೆ, ಮೂಲಸೌಕರ್ಯಗಳ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆ, ನೈರ್ಮಲ್ಯ ಕೊರತೆ ಮುಂತಾದ ನೂರಾರು ಸಮಸ್ಯೆಗಳೊಂದಿಗೆ ಹಳ್ಳಿಗಳು ನರಳುತ್ತಿವೆ. ಅರವತ್ತರ ದಶಕದ ಮೇಲಂತೂ ದೇಶದ ರಾಜಕಾರಣಿಗಳು ಹಳ್ಳಿಗಳನ್ನು ಓಟ್ ಬ್ಯಾಂಕುಗಳನ್ನಾಗಿ ಮಾಡಿಕೊಂಡು ಅವುಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಇಂದಿಗೂ ಭಾರತದ ಸಾವಿರಾರು ಹಳ್ಳಿಗಳು ಸ್ಮಶಾನಗಳಂತೆ ಪಾಳುಬಿದ್ದಿರುವುದನ್ನು ಕಾಣಬಹುದು. ಲಕ್ಷಾಂತರ ಹಳ್ಳಿಗಳ ರೈತರು ಇಂದಿಗೂ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿದ್ದಾರೆ. ನಮ್ಮ ಸರ್ಕಾರಗಳು  ಗುಡಿ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣ ಹಳ್ಳಿಗಾಡಿನ ಯುವಜನತೆ ತಮ್ಮ ಜೀವನೋಪಾಯಕ್ಕಾಗಿ ನಗರಗಳ ಕಡೆ ಪಲಾಯನ ಮಾಡತೊಡಗಿದರು. ಹಾಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿ ರೂಪಾಂತರಗೊಂಡಿವೆ. ಇತ್ತ ಪಟ್ಟಣಗಳಲ್ಲೂ ಸರಿಯಾದ ಆದಾಯವಿಲ್ಲದೆ ಹಳ್ಳಿಗಾಡಿನಿಂದ ಬಂದ ಜನ ಸಂಕಷ್ಟಗಳಲ್ಲೇ ಬದುಕನ್ನು ಸವೆಸುತ್ತಿದ್ದಾರೆ. ಗಾಂಧಿ ಏನೇನನ್ನು ಬಯಸಿದ್ದರೋ ಅವನ್ನೆಲ್ಲ ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಗಳು ಶೂನ್ಯವಾಗಿಸಿದ್ದಾರೆ. ಗಾಂಧಿಯನ್ನು ಮರೆತ ಭಾರತ ಯಾವೊತ್ತಿಗೂ ನೆಮ್ಮದಿಯಿಂದ ಉಸಿರಾಡದು.

ಪ್ರತಿವರ್ಷ ಅಕ್ಟೋಬರ್ ತಿಂಗಳ ಎರಡನೆಯ ದಿನ ಅಂದರೆ ಎರಡನೆಯ ತಾರೀಖು ಮಾತ್ರ ದೇಶದ ತುಂಬೆಲ್ಲಾ ಗಾಂಧಿ ಸ್ಮರಣೆ ಮಾಡಿಕೊಳ್ಳುವುದು  ಒಂದು ರೂಢಿಯಾಗಿ ಉಳಿದುಬಿಟ್ಟಿದೆ. ಮಿಕ್ಕಂತೆ ಗಾಂಧಿ ಎಂಬ ಪದ ಕೂಡಾ ನಮ್ಮ ದೇಶದ ಜನರ ಬಾಯಿಂದ ಉದುರದಷ್ಟು ಮಟ್ಟಿಗೆ ಈ ದೇಶಕ್ಕೆ ಸ್ವಾತಂತ್ರ್ಯತಂದುಕೊಟ್ಟ ಮಹಾನುಭಾವ ಸ್ಕಾçಪ್ ಆಗಿ ಹೋಗಿದ್ದಾರೆ.  ಹಾಗೆ ನೋಡಿದರೆ ನಮ್ಮ ದೇಶಕ್ಕಿಂತಲೂ ಪಾಶ್ಚಿಮಾತ್ಯರಲ್ಲಿ ಗಾಂಧಿಯವರ ಬಗ್ಗೆ ಪ್ರೀತಿ, ಅಭಿಮಾನಗಳು ಹೆಚ್ಚಾಗಿ ಪ್ರಕಟವಾಗುತ್ತಿರುವುದು ಹೆಚ್ಚಾಗಿದೆ.  ಗಾಂಧಿ ನಮ್ಮ ದೇಶಕ್ಕೆ ಸ್ವಾತಂತ್ರ್ಯಮಾತ್ರ ತಂದುಕೊಡಲಿಲ್ಲ, ಬದಲಾಗಿ ಇಡೀ ಜಗತ್ತಿಗೆ ಒಂದು ವಿಶಿಷ್ಟ ಮತ್ತು ಅನನ್ಯವಾದ ಬದುಕಿನ ಮಾರ್ಗವನ್ನು ತೋರಿಸಿಕೊಟ್ಟವರು. ಜಗತ್ತಿನ ಸಂಕಷ್ಟದ ಪರಿಹಾರಕ್ಕೆ ಒಂದು ಸರಳವಾದ  ಪರಿಹಾರವನ್ನು ತೋರಿಸಿಕೊಟ್ಟವರು ಗಾಂಧಿ. ಹಾಗಾಗಿ ಮಾನವ ಬದುಕಿನ ಸಕಲ ಸಂಕಷ್ಟಗಳಿಗೂ ಗಾಂಧಿ ಮಾರ್ಗವೊಂದೇ ಪರಿಹಾರ ಎಂದು ಹೇಳಬಹುದು. ಗಾಂಧಿ ಶಾಂತಿಯ ಮೂಲಕ ಭಾರತದ ಸ್ವಾತಂತ್ರ್ಯಹೋರಾಟಕ್ಕೆ ಒಂದು ಅಪರೂಪದ ದಿಕ್ಸೂಚಿಯನ್ನು ಕಲ್ಪಿಸಿಕೊಟ್ಟರಲ್ಲದೆ ಅಹಿಂಸೆಯ ಮೂಲಕ ಮಹಾನ್ ಯುದ್ಧವನ್ನು ಗೆಲ್ಲುವುದು ಹೇಗೆಂದು ಇಡೀ ಜಗತ್ತಿಗೆ ತೋರಿಸಿಕೊಟ್ಟರು. ಗಾಂಧಿ ಒಬ್ಬ ಸ್ವಾತಂತ್ರ್ಯಹೋರಾಟಗಾರ. ಗಾಂಧಿ ಒಬ್ಬ ತತ್ವಜ್ಞಾನಿ. ಗಾಂಧಿ ಒಬ್ಬ ಸಮಾಜಶಾಸ್ತ್ರಜ್ಞ. ಗಾಂಧಿ ಒಬ್ಬ ಮುತ್ಸದ್ದಿ ರಾಜಕಾರಣಿ. ಎಲ್ಲಕ್ಕಿಂತಲೂ ಮಿಗಿಲಾಗಿ ಗಾಂಧಿ ಜಗತ್ತು ಕಂಡ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಗಾಂಧಿಯನ್ನು ಭಾರತ ಕಂಡ ಅತ್ಯಂತ ದೊಡ್ಡ ಮಾರ್ಕ್ಸಿಸ್ಟ್ ಎಂತಲೂ ಕೆಲವರು ಕೆರೆಯುತ್ತಾರೆ. ಮತ್ತು ಗಾಂಧಿ ಭಾರತ ಕಂಡ ಅತಿದೊಡ್ಡ ನಕ್ಸಲೈಟ್ ಎಂತಲೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಪ್ರೀತಿ, ಕರುಣೆ ಮತ್ತು ಮಾನವೀಯತೆಗಳ ಸಾಕಾರ ಮೂರ್ತಿ ಗಾಂಧಿ. “ಮಾನವೀಯತೆಗಿಂತಲೂ ಮಿಗಿಲಾದ ಜಾತಿಯಿಲ್ಲ, ಧರ್ಮವಿಲ್ಲ, ಕಾನೂನಿಲ್ಲ, ದೇವರೂ ಇಲ್ಲ. ಎಲ್ಲಾ ಧರ್ಮಗಳ, ಸರ್ಕಾರಗಳ ಗುರಿ ಮಾನವೀಯತೆಯನ್ನು ಬಿತ್ತಿ ಬೆಳೆಯುವುದೇ ಆಗಿರಬೇಕು…” ಎನ್ನುವ ಗಾಂಧಿಯವರ ಮಾತುಗಳಲ್ಲಿ ಒಂದು ಅದ್ಬುತವಾದ, ಅನನ್ಯವಾದ  ಲೋಕಕಲ್ಯಾಣದ ತತ್ವ ಅಡಗಿದೆ. ಗಾಂಧಿಯವರಿಗಿದ್ದ ದೂರದೃಷ್ಟಿ ಘನತರವಾಗಿತ್ತು. ಸ್ವಾತಂತ್ರ್ಯಹೋರಾಟದ ಸಮಯದಲ್ಲೇ ಪಾಶ್ಚಾತ್ಯ ರಾಷ್ಟçಗಳಲ್ಲಿ ಬಿರುಸುಗೊಂಡಿದ್ದ ಕೈಗಾರಿಕಾಭಿವೃದ್ದಿಯನ್ನು ಕಂಡು ಗಾಂಧೀಜಿ          “ಕೈಗಾರಿಕಾ ಕ್ರಾಂತಿಯಿಂದ ಉಂಟಾದ ಕಂಪನಗಳಿಂದ ಇಡೀ ಜಗತ್ತು  ವಾಸಿಯಾಗಲಾರದ ವ್ರಣದಿಂದ ನರಳುವ ರೋಗಿಯಂತೆ ನಿರಂತರವಾಗಿ  ನೋವಿನಲ್ಲೇ ಬದುಕುತ್ತಿರುತ್ತದೆ. ಇದು ಮಾನವ ಕುಲಕ್ಕೆ ದೊಡ್ಡ ಪೀಡೆಯಾಗಿ ಪರಿಣಮಿಸುತ್ತದೆ…” ಎಂದು ಹೇಳುತ್ತಾರೆ. ಗಾಂಧಿಯವರ ಅಂದಿನ ಮಾತುಗಳ ಸತ್ಯದ ಭೀಕರತೆ ಇಂದು ಅನಾವರಣಗೊಂಡಿದೆ. ಮನುಷ್ಯ ಉಪಯೋಗಕ್ಕೆ ಬಾರದ ಅಸಂಖ್ಯಾತ ಸರಕುಗಳ ಉತ್ಪಾದನೆಯೊಂದಿಗೆ ಸಂಪೂರ್ಣ ಅತೃಪ್ತನಾಗಿ, ಸ್ವಾರ್ಥಿಯಾಗಿ ಮಾನಸಿಕ ಕ್ಷೋಭೆಯಿಂದ ನರಳುತ್ತಿದ್ದಾನೆ. ಒಂದು ಕಡೆ ಅತಿ ಶ್ರೀಮಂತಿಕೆ, ಮತ್ತೊಂದು ಕಡೆ ಅತಿ ಬಡತನ. ಇದು ಕೈಗಾರಿಕಾ ಕ್ರಾಂತಿಯ ಫಲ. ಇಂದು ಜಗತ್ತಿನಾದ್ಯಂತ ಬಡವರು, ಶ್ರೀಮಂತರು ಎಂಬ ಭೇದ ಭಾವವಿಲ್ಲದೆ ಯಾರೂ ನೆಮ್ಮದಿಯಾಗಿ ಬದುಕುತ್ತಿಲ್ಲ!

ಗಾಂಧಿಯವರು ತಮ್ಮ ಸರಳವಾದ ಬದುಕಿನಿಂದ ಇಡೀ ವಿಶ್ವದ ಗಮನವನ್ನು ಸೆಳೆದವರು. ಸತ್ಯ, ಅಹಿಂಸೆ ಅವರ ಹೋರಾಟದ ಉದ್ದಗಲಕ್ಕೂ ಅವರ ಆಯುಧಗಳಾಗಿದ್ದವು. ಬ್ರಿಟಿಷರೊಂದಿಗೆ ಯುದ್ಧ ಮಾಡದೆಯೇ ಸ್ವಾತಂತ್ರ್ಯವನ್ನು ಗಳಿಸುವುದು ಗಾಂಧಿಯವರ ಗುರಿಯಾಗಿತ್ತು. ಅದನ್ನವರು ಸಾಧಿಸಿದರು ಕೂಡಾ. ಸ್ವಾತಂತ್ರ್ಯಕ್ಕಾಗಿ, ಸಮಾನತೆಗಾಗಿ, ಅಸ್ಪೃಶ್ಯತೆ ನಿವಾರಣೆಗಾಗಿ ತುಂಡು ಬಟ್ಟೆಯಲ್ಲಿ ಗಾಂಧಿ ದೇಶ ಸುತ್ತಿದಂತೆ ಬೇರೆ ಯಾರೂ ಸುತ್ತಲಿಲ್ಲ. ಆತನೊಬ್ಬ ಬರಿ ಮೈ ಪಕೀರ. ಜಗತ್ತಿನ ಯಾರೇ ಆಗಲಿ `ನಿರಾಕರಣೆ’ ಎಂಬ ವಿಧ್ಯೆಯನ್ನು ಕಲಿಯಬೇಕಾದರೆ ಮೊದಲು ಗಾಂಧಿಯವರನ್ನು ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯಚಳವಳಿಯಲ್ಲಿ ಗಾಂಧಿ ಧುಮುಕದೇ ಇದ್ದಿದ್ದರೆ ಬಹುಶಃ ಅದರ ದಿಕ್ಕೇ ಬೇರೆಯಾಗಿರುತ್ತಿತ್ತೇನೋ. ಸ್ವಾತಂತ್ರ್ಯಹೋರಾಟದ ಕಾಲದಲ್ಲಿ ಅವರು ಉಪಯೋಗಿಸಿದ ಪ್ರಮುಖ ಅಸ್ತ್ರ ಸತ್ಯಾಗ್ರಹ. 1906 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಿದ ಸತ್ಯಾಗ್ರಹ ಆಯುಧವನ್ನು ಗಾಂಧಿ ಕೊನೆತನಕವೂ ಪ್ರಯೋಗಿಸುತ್ತಾ ಬಂದವರು. ಅಸ್ಪೃಶ್ಯತೆಯ ವಿರುದ್ದದ ಗಾಂಧೀಜಿಯವರ ಆಂದೋಲನ ಜಗತ್ತಿನ ಅತಿದೊಡ್ಡ ಅಹಿಂಸಾತ್ಮಕ ಆಂದೋಲನ ಎಂದೇ ಹೇಳಬಹುದು. ಅಸ್ಪೃಶ್ಯತೆ ಭಾರತದ ಅತ್ಯಂತ ದೊಡ್ಡ ಪಿಡುಗು ಎಂದು ಪರಿಭಾವಿಸಿದ ಗಾಂಧಿ ಸಮಾಜದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಭಾರತದಾದ್ಯಂತ ಸುತ್ತಿದವರು. ಸ್ವಾತಂತ್ರ್ಯಮತ್ತು ಅಸ್ಪೃಶ್ಯತೆ ನಿರ್ಮೂಲನೆಯನ್ನು ಜೊತೆ ಜೊತೆಯಲ್ಲಿ ಸಾಧಿಸುವುದು ಗಾಂಧೀಜಿಯವರ ಅಂತಿಮ ಧ್ಯೇಯವಾಗಿತ್ತು. 1932 ರಲ್ಲಿ ಗಾಂಧೀಜಿ ಜೈಲಿನಲ್ಲಿದ್ದಾಗ ಹೊಸ ವೈಸ್‌ರಾಯ್ ಮುಖಂಡತ್ವದಲ್ಲಿ ಸಂವಿಧಾನದಲ್ಲಿ ಪ್ರತ್ಯೇಕ ಮತದಾರರನ್ನು ಹಂಚುವ ಮೂಲಕ ಅಸ್ಪೃಶ್ಯರೆಂದು ಕರೆಯಲ್ಪಡುವ ಭಾರತೀಯ ಜಾತಿವ್ಯವಸ್ಥೆಯ ಅತ್ಯಂತ ಕೆಳಮಟ್ಟದ ಸಮುದಾಯಗಳನ್ನು ಪ್ರತ್ಯೇಕಿಸಲು ಬ್ರಿಟಿಷ್ ಸರ್ಕಾರ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಗಾಂಧಿ ಬ್ರಿಟಿಷರ ಈ ನಿರ್ಧಾರವನ್ನು ಪ್ರತಿಭಟಿಸಲು ಸೆರೆಮನೆಯಲ್ಲಿಯೇ  ಉಪವಾಸ ಕೈಗೊಳ್ಳುತ್ತಾರೆ. ಇದು ಇಡೀ ದೇಶದಲ್ಲಿ ಭಾವನಾತ್ಮಕ ಕ್ರಾಂತಿಯನ್ನು ಉಂಟುಮಾಡುತ್ತದೆ. ಬ್ರಿಟಿಷರು ಅನ್ಯ ಮಾರ್ಗವಿಲ್ಲದೆ ತಮ್ಮ ನಿರ್ಧಾರವನ್ನು ಬದಲಿಸಬೇಕಾಗುತ್ತದೆ. ಹಾಗಾಗಿ ಗಾಂಧಿ ಭಾರತ ಕಂಡ ಬಹುದೊಡ್ಡ ಸಮಾಜಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರು.

ಮಹಾತ್ಮ ಗಾಂಧಿ ಜಗತ್ತು ಕಂಡ ದೊಡ್ಡ ಅರ್ಥಶಾಸ್ತ್ರಜ್ಞ ಕೂಡಾ. 1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಹಿಂತಿರುಗಿದ ಮೇಲೆ ಒಂದು ವರ್ಷ ಕಾಲ ಗಾಂಧಿ ಭಾರತದ ಆರ್ಥಿಕ ಪರಿಸ್ಥಿತಿಯನ್ನು ಅರಿಯಲು ದೇಶ ಪೂರ್ತಿ ಸುತ್ತುತ್ತಾರೆ. ಕಾರ್ಲ್ಮಾರ್ಕ್ಸ್ ನ ದಾಸ್ ಕ್ಯಾಪಿಟಲ್ ಮತ್ತು ಅಡಂಸ್ಮಿತನ ವೆಲ್ತ್ ಆಫ್ ನೇಷನ್ಸ್ ಎಂಬ ಗ್ರಂಥಗಳನ್ನು ಓದುತ್ತಾರೆ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ತಾಂಡವಾಡುತ್ತಿದ್ದ ಕಡುಬಡತನ ಮತ್ತು ಅಸ್ಪೃಶ್ಯತೆ ಗಾಂಧೀಜಿಯವರನ್ನು ದಂಗು ಬಡಿಸುತ್ತವೆ. ಸ್ವಾತಂತ್ರ್ಯಹೋರಾಟದ ಜೊತೆಯಲ್ಲಿಯೇ ಭಾರತದ ಹಳ್ಳಿಗಾಡಿನ ಅಭಿವೃದ್ಧಿಗೆ ಗಾಂಧಿ ಕರೆ ನೀಡುತ್ತಾರೆ. ಹಳ್ಳಿಗಳು ಉದ್ದಾರವಾಗದೆ ದೇಶ ಉದ್ಧಾರವಾಗದು ಎಂದು  ಗಾಂಧಿ ಹಳ್ಳಿಗಳ ಸರ್ವತೋಮುಖ ಏಳಿಗೆಗೆ ಶ್ರಮಿಸಲು ಕರೆ ನೀಡುತ್ತಾರೆ. ಸರ್ವೋದಯ ಗಾಂಧೀಜಿಯವರ ವೇದವಾಕ್ಯವಾಯಿತು. ಶ್ರಮ, ಸ್ವಾವಲಂಬನೆ, ಸಹಕಾರಗಳು ಗಾಂಧೀಜಿಯವರ ಮಂತ್ರಗಳಾದವು. ಈ ಮೂರೂ ಇದ್ದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕು ಸಾಗಿಸಬಹುದೆಂದು ಗಾಢವಾಗಿ ನಂಬುತ್ತಾರೆ. “ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕೈಗಳು ತನ್ನ ಊಟವನ್ನು ತಾನೇ ದುಡಿಯಬೇಕು” ಎಂದು ಗಾಂಧಿ ಹೇಳುತ್ತಾರೆ. ಭಾರತದ ನಿರುದ್ಯೋಗವನ್ನು ನಿವಾರಿಸಲು ಗುಡಿಕೈಗಾರಿಕೆಗಳ ಅಭಿವೃದ್ಧಿಗೆ ಕರೆ ನೀಡುತ್ತಾರೆ. ಸ್ವಾವಲಂಬನೆ ಮತ್ತು ಸಹಕಾರಗಳು ಗ್ರಾಮೀಣ ಸಮುದಾಯ ಬದುಕನ್ನು ಶ್ರೀಮಂತಗೊಳಿಸುತ್ತವಾದ್ದರಿಂದ  ಪ್ರತಿಯೊಬ್ಬರು ಹಳ್ಳಿಗಳ ಸಾಮೂಹಿಕ ಶ್ರಮದಲ್ಲಿ ನಂಬಿಕೆ ಇಟ್ಟು ಅಭಿವೃದ್ಧಿಗೆ ಕೈಜೊಡಿಸಬೇಕೆಂಬುದು ಗಾಂಧಿಯವರ  ದೊಡ್ಡ ಆಶಯವಾಗಿತ್ತು. ಬಯಕೆಗಳು ಆದಷ್ಟು ಕಡಿಮೆ ಇದ್ದು, ಸರಳತೆಯನ್ನು ಮೈಗೂಡಿಸಿಕೊಂಡರೆ ಪ್ರತಿಯೊಬ್ಬರೂ ಪ್ರತಿಕ್ಷಣವೂ ಸಂತೋಷವಾಗಿರಬಹುದೆಂಬುದು ಗಾಂಧೀಜಿಯವರ ನಂಬಿಕೆಯಾಗಿತ್ತು. ತಮ್ಮ ಸ್ವಂತ ಬದುಕಿನ ಉದ್ದಕ್ಕೂ ಗಾಂಧಿ ತಮ್ಮ ತತ್ವಗಳಿಗೆ ಅಂಟಿಕೊಂಡು ನಡೆದವರು. ಬ್ರಿಟಿಷರು ವಿಧಿಸುತ್ತಿದ್ದ ಕೃಷಿ ಉತ್ಪನ್ನಗಳ ಮೇಲಿನ ತೆರಿಗೆ ವಿರುದ್ಧ ಗಾಂಧಿ ತಿರುಗಿಬಿದ್ದರು. ಹಳ್ಳಿಗಾಡಿನ ಜನರ ಹೃದಯಗಳಲ್ಲಿ ಆತ್ಮಸ್ಥೈರ್ಯವನ್ನು ಆತ್ಮಾಭಿಮಾನವನ್ನು  ಗಾಂಧಿ ತುಂಬಿದರು. ಫ್ರಾನ್ಸಿನ ಸಾಮ್ರಾಟ ನೆಪೋಲಿಯನ್ ಬೋನಾಪಾರ್ಟೆ ” A Leader is Dealer in Hopes ” ಎಂದು ಹೇಳುತ್ತಾನೆ. ಅಂದರೆ ಒಬ್ಬ ನಿಜವಾದ ನಾಯಕ ಆತ್ಮವಿಶ್ವಾಸದ ವ್ಯಾಪಾರಿ ಎಂದು. ಆತ್ಮವಿಶ್ವಾಸವನ್ನು ಖರೀದಿಸುವುದು ಮತ್ತು ಮಾರುವುದು ಒಬ್ಬ ನಿಜವಾದ ನಾಯಕನ  ಕಾಯಕವಾಗಿರಬೇಕು. ಗಾಂಧೀಜಿ ಒಬ್ಬ ಮಹಾನ್ ನಾಯಕನಾಗಿ ರೂಪುಗೊಂಡವರು. ಗಾಂಧಿಗಿಂತಲೂ ದೊಡ್ಡ ನಾಯಕನನ್ನು ಭಾರತ  ಮತ್ತೆಂದೂ ಕಾಣಲಿಲ್ಲ. ಭಾರತದ ಜನ ಹಳ್ಳಿಗಾಡಿನ ಸರಕುಗಳಿಗೆ ತಮ್ಮ ಮೊದಲ ಆದ್ಯತೆಯನ್ನು ಕೊಡಬೇಕೆಂದು ಗಾಂಧಿ ಕರೆ ನೀಡುವ ಮೂಲಕ ಭಾರತದಲ್ಲಿ ಖಾದಿ ಆಂದೋಲನ ಶುರುವಾಗುತ್ತದೆ. ವಿದೇಶಿ ಸರಕುಗಳನ್ನು ತಿರಸ್ಕರಿಸಿ ಸ್ವದೇಶಿ ಸರಕುಗಳನ್ನು ಬಳಸಲು ಕರೆ ನೀಡುವ ಮೂಲಕ ದೇಶದಲ್ಲಿ ಸ್ವದೇಶಿ ಅಭಿಯಾನವನ್ನು ಹುಟ್ಟುಹಾಕುತ್ತಾರೆ. ಗಾಂಧಿ ಅತ್ಯಂತ ವಾಸ್ತವವಾದಿಯಾಗಿದ್ದರು. ಅಂದಿನ ಭಾರತದಲ್ಲಿ ಯಾವ್ಯಾವ ಸರಕುಗಳನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಸರಕುಗಳನ್ನು ಆಮದು ಮಾಡಿಕೊಳ್ಳಲು ಗಾಂಧಿಯವರಿಂದ ಒಪ್ಪಿಗೆ ಇತ್ತು. ಕ್ರಮೇಣ ಅಂಥ ಸರಕುಗಳನ್ನು ಭಾರತದಲ್ಲೇ ಉತ್ಪಾದನೆ ಮಾಡಿ ಸ್ವಾವಲಂಬನೆಯನ್ನು ಸಾಧಿಸಬೇಕೆಂಬುದು ಗಾಂಧೀಜಿಯವರ ಮಹತ್ತರವಾದ ಆಶಯವಾಗಿತ್ತು.

ಗಾಂಧಿ ತಮ್ಮ ತತ್ವ, ಆದರ್ಶ, ಚಿಂತನೆಗಳಿಂದ ಅನೇಕ ಪ್ರಸಿದ್ದರ ಮೇಲೆ ಪ್ರಭಾವ ಬೀರಿದ್ದಾರೆ. ಅಂಥ ಮಹಾನುಭಾವರ ದೊಡ್ಡ ಪಟ್ಟಿಯನ್ನೇ ಉಲ್ಲೇಖಿಸಬಹುದು. ಅವರ ಮಾತುಗಳಲ್ಲಿ ಗಾಂಧಿಯವರ ಗುಣಗಳು ಆಗ ತಾನೇ ಅರಳಿದ ಮಲ್ಲಿಗೆಯ ಪರಿಮಳದಂತೆ ಹರಡಿಕೊಳ್ಳುತ್ತವೆ. ಗಾಂಧಿ ಮತ್ತು ಗಾಂಧಿಯ ಚಿಂತನೆಗಳು ಮನುಕುಲದ ಸಂಕಷ್ಟಗಳಿಗೆ ದಿವ್ಯೌಷಧಿಗಳಾಗಬಲ್ಲವೆಂಬ ಸತ್ಯ ಸಾಬೀತಾಗಿದೆ. ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿಯ ವಿರುದ್ಧ ಹೋರಾಟ ಮಾಡಿದ ಅಪ್ರತಿಮ ಹೋರಾಟಗಾರ ನೆಲ್ಸನ್ ಮಂಡೇಲಾ ಗಾಂಧಿಯವರ ಬಗ್ಗೆ ಹೀಗೆ ಬರೆಯುತ್ತಾರೆ : “ನೀವು ಯುವ ಬ್ಯಾರಿಸ್ಟರ್ ಮೋಹನದಾಸ ಕರಮಚಂದ ಗಾಂಧಿಯನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿದಿರಿ. ಬದಲಾಗಿ ನಾವು ನಿಮಗೆ ಮಹಾತ್ಮ ಗಾಂಧಿಯನ್ನು ಕಳುಹಿಸಿದೆವು. ಇಪ್ಪತ್ತೇಳು ವರ್ಷ ನಾನು ಜೈಲಿನ ಕೋಣೆಯಲ್ಲಿ ಕಳೆಯುವಾಗ ನನ್ನೆದೆಯಲ್ಲಿ  ಸಾತ್ವಿಕತೆಯ ಸ್ಪೂರ್ತಿ ತುಂಬಿ  ಬೆಳಕಿನ ಆಶಾಕಿರಣವಾಗಿ ಬಂದವರು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು…”  ಆಲ್ಬರ್ಟ್ ಐನ್‌ಸ್ಟೈನ್ ಗಾಂಧಿಯ ಬಗ್ಗೆ ಆಡುವ ಮಾತುಗಳನ್ನು ನೋಡಿ: ” ಗಾಂಧಿಯಂಥ ಮನುಷ್ಯ ರಕ್ತ ಮತ್ತು ಮಾಂಸಗಳನ್ನು ತುಂಬಿಕೊಂಡು ಈ ಪ್ರಪಂಚದಲ್ಲಿ ಓಡಾಡಿದನೇ ಎಂದು ಮುಂದಿನ ಪೀಳಿಗೆಯ ಜನ ಆಶ್ಚರ್ಯ ಪಡುತ್ತಾರೆ..” ಜಗತ್ತಿನ ಅತ್ಯಂತ ದೊಡ್ಡ ಮಾನವ ಹಕ್ಕುಗಳ ಹೋರಾಟಗಾರನೆಂದು ಹೆಸರು ಪಡೆದ ಮಾರ್ಟಿನ್ ಲೂಥರ್ ಕಿಂಗ್ “ಕ್ರಿಸ್ತನು ನಮಗೆ ಗುರಿಯನ್ನು ಕೊಟ್ಟನು, ಗಾಂಧಿಯವರು ನಮಗೆ ತಂತ್ರಗಳನ್ನು ಕೊಟ್ಟರು..” ಎಂದು ಅಚ್ಚರಿ ವ್ಯಕ್ತಪಡಿಸುತ್ತಾನೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2006 ರಲ್ಲಿ  ಅಮೆರಿಕದ ವೇಕ್ ಫೀಲ್ಡ್ ಹೈಸ್ಕೂಲಿಗೆ ಭೇಟಿಯಿತ್ತಾಗ ಒಂಬತ್ತನೇ ತರಗತಿಯ ವಿಧ್ಯಾರ್ಥಿಯೊಬ್ಬ “ನೀವು ಜೀವಂತವಾಗಿರುವ ಅಥವಾ ಮರಣ ಹೊಂದಿರುವ ಒಬ್ಬ ವ್ಯಕ್ತಿಯೊಂದಿಗೆ ಡಿನ್ನರ್ ಮಾಡುವುದಾದರೆ ಆ ವ್ಯಕ್ತಿ ಯಾರಾಗಿರುತ್ತಾರೆ? ” ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಒಬಾಮಾ ಒಂದು ಕ್ಷಣ ಕೂಡಾ ಯೋಚಿಸದೆ ” ಒಳ್ಳೆಯದು, ಬದುಕಿರುವವರ ಮತ್ತು ಮರಣ ಹೊಂದಿದವರ ದೊಡ್ಡ ಪಟ್ಟಿಯೇ ನನ್ನ ಮನಸ್ಸಿನಲ್ಲಿ ಇದೆ. ಆದರೆ ನನ್ನ ನಿಜವಾದ ಹೀರೋ ಆದ ಮಹಾತ್ಮ ಗಾಂಧಿಯೊಂದಿಗೆ ಡಿನ್ನರ್ ಮಾಡಲು ಇಚ್ಚಿಸುತ್ತೇನೆ…” ಎಂದು ಉತ್ತರಿಸುತ್ತಾರೆ !

ಬರ್ಮಾದ ಸ್ವಾತಂತ್ರ್ಯಹೋರಾಟಗಾರ್ತಿ ಮತ್ತು ನೋಬಲ್ ಪ್ರಶಸ್ತಿ ವಿಜೇತೆ ಅಂಗ್ ಸನ್ ಸೂಕಿ 2012 ರಲ್ಲಿ ನ್ಯೂಯಾರ್ಕಿನ ಕೊಲೊಂಬೋ ಯೂನಿವರ್ಸಿಟಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ  ತನ್ನ ಮೇಲೆ ಅತ್ಯಂತ ಪ್ರಭಾವ ಬೀರಿದವರ ಪೈಕಿ ಗಾಂಧಿಯವರು ಪ್ರಮುಖರಾಗಿದ್ದಾರೆ ಎಂದು ಹೇಳುತ್ತಾ ಗಾಂಧಿಯವರ ಬಗ್ಗೆ ಪುಸ್ತಕಗಳನ್ನು ಓದುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಾರೆ. ಟಿಬೆಟ್ಟಿನ ಧರ್ಮಗುರು ದಲೈಲಾಮ ” ನನಗೆ ಗಾಂಧಿಯನ್ನು ಕಂಡರೆ ಅತ್ಯಂತ ಪ್ರೀತಿ ಮತ್ತು ಮೆಚ್ಚುಗೆ ಇದೆ. ಅವರು ಮಹಾನ್ ಮಾನವತಾವಾದಿ. ಅವರ ಬದುಕು ನನಗೆ ದೊಡ್ಡ  ಸ್ಪೂರ್ತಿ…”  ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಯುನೈಟೆಡ್ ಸ್ಟೇಟ್ಸ್ ನ ಮಾಜಿ ಉಪಾಧ್ಯಕ್ಷ ಮತ್ತು ಪರಿಸರವಾದಿ ಆಲ್ಗೊರೆ ” ಮಹಾತ್ಮ ಗಾಂಧಿಯವರ ಸತ್ಯಾಗ್ರಹ ಒಂದು ಸತ್ಯದ ಬಲ ಇದ್ದಂತೆ.  ಇಂಥ ಬಲದ ಮೂಲಕ ಎಂಥಾ ಯುದ್ದವನ್ನಾದರೂ ವಿಶ್ವಾಸದಿಂದ ಮೌನವಾಗಿ ಜಯಿಸಬಹುದು. ಮತ್ತು ಇಂಥ ಹೋರಾಟಗಳಲ್ಲಿ ಜನ ಸ್ವಯಂ ಪ್ರೇರಿತರಾಗಿ ಭಾಗವಹಿಸುತ್ತಾರೆ..” ಎಂದು ಹೆಮ್ಮೆಯಿಂದ ಹೇಳುತ್ತಾರೆ. ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾದ ಆಪೆಲ್ ಕಂಪನಿಯ ಸಂಸ್ಥಾಪಕ  ಸ್ಟೀವ್ ಜಾಬ್ಸ್ ತನ್ನ ಅಂತಿಮ ಕಾಲದಲ್ಲಿ ತನ್ನ ರೂಮಿನಲ್ಲಿ ಗಾಂಧಿಯ ಭಾವಚಿತ್ರವನ್ನು ಇಟ್ಟುಕೊಂಡಿದ್ದನಂತೆ ! ರವೀಂದ್ರನಾಥ ಟಾಗೂರ್ ” ಭಾರತದ ಸಾವಿರಾರು ಬಡವರ, ನಿರ್ಗತಿಕರ ಹೃದಯದಲ್ಲಿ ಗಾಂಧಿ ನೆಲೆಸಿದ್ದಾರೆ. ಗಾಂಧಿ ಎಂಬ ಹೆಸರೇ ಒಂದು ಅದ್ಬುತ ಸತ್ಯ..” ಎಂದು ಹೇಳುತ್ತಾರೆ. ಅಮೆರಿಕದ ಖ್ಯಾತ ಇತಿಹಾಸಕಾರ ವಿಲ್ ಡುರಂಟ್ ” ಬುದ್ದನ ನಂತರದ ದೊಡ್ಡ ಮಾನವೀಯತಾವಾದಿ ಸನ್ಯಾಸಿ ಗಾಂಧಿಯ ರೂಪದಲ್ಲಿ ಜನಿಸಿ ಬಂದ. ಶತ್ರುಗಳ ಮನಸ್ಸನ್ನು ಜಯಿಸುವಂಥ ಅದಮ್ಯ ಪ್ರೀತಿಯನ್ನು ಮೈತುಂಬಿಕೊಂಡು  ಒಂದು ಹೊಸತರದ ಕ್ರಾಂತಿಯನ್ನೇ ಜಗತ್ತಿಗೆ ಪರಿಚಯಿಸಿದವರು ಗಾಂಧಿ..” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಗಾಂಧಿ ಸ್ಮಾರಕ.

ಹೀಗೆ ಇಡೀ ಜಗತ್ತು ಬೆರಗಾಗಿ ಗಾಂಧಿ ಮತ್ತು ಗಾಂಧಿಯ ಚಿಂತನೆಗಳ ಕಡೆ ನೋಡುತ್ತಿದ್ದರೆ ನಾವು ಭಾರತೀಯರು ನಮಗೆ ಸ್ವಾತಂತ್ರ್ಯತಂದುಕೊಡುವಲ್ಲಿ ಅಗ್ರಪಾತ್ರ ವಹಿಸಿ ಈ ದೇಶದ ಪಿತಾಮಹ ಎನಿಸಿಕೊಂಡಿರುವ ಗಾಂಧಿಯನ್ನು ಸಂಪೂರ್ಣವಾಗಿ ಮರೆತಿದ್ದೇವೆ. ಗಾಂಧಿಯ ತತ್ವ ಚಿಂತನೆಗಳು  ಸರ್ವಕಾಲಕ್ಕೂ ಚೈತನ್ಯವನ್ನು ನೀಡಬಲ್ಲಂತವೆಂಬುದು ಸಾಬೀತಾಗಿದ್ದರೂ ಪ್ರಸ್ತುತ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಾಂಧಿ ಮತ್ತು ಗಾಂಧಿಯವರ ತತ್ವಾದರ್ಶ ಚಿಂತನೆಗಳನ್ನು ಸಮಾಧಿ ಮಾಡಿದ್ದೇವೆ. ಭಾರತದ ಇಂದಿನ ಎಲ್ಲಾ ಸಂಕಷ್ಟಗಳಿಗೂ ನಾವು ನಮ್ಮ ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಗಾಂಧಿಯವರನ್ನು ಕಳೆದುಕೊಂಡದ್ದೇ ಕಾರಣವೆಂದು ಹೇಳಬಹುದು. ನಮ್ಮ ರಾಜಕಾರಣವನ್ನೇ ತೆಗೆದುಕೊಳ್ಳಿ, ಜಾತಿ ಪದ್ಧತಿಯನ್ನು, ಅಸ್ಪೃಶ್ಯತೆಯನ್ನು ಈ ದೇಶದಿಂದ ಸಂಪೂರ್ಣವಾಗಿ ತೊಲಗಿಸಬೇಕೆಂಬುದು ಗಾಂಧಿಯವರ ದೊಡ್ಡ ಕನಸಾಗಿತ್ತು. ಆದರೆ ಇಂದು ಅದೇ ರಾಜಕೀಯ ವ್ಯವಸ್ಥೆ, ಪಕ್ಷಗಳು ಮತ್ತು ರಾಜಕೀಯ ನಾಯಕರು ಜಾತಿ ಮತ್ತು ಧರ್ಮಗಳನ್ನು ಆಡಳಿತ ಹಿಡಿಯಲು ದಾಳಗಳಂತೆ ಬಳಸುತ್ತಿವೆ/ ಬಳಸುತ್ತಿದ್ದಾರೆ. ಹಿಂದೆಂದಿಗಿಂತಲೂ ಇಂದು ರಾಜಕಾರಣದಲ್ಲಿ ಜಾತಿಯ ವ್ಯಾಧಿ ಮುಗಿಲು ಮುಟ್ಟಿದೆ. ಸ್ವಚ್ಛ ಮತ್ತು ಪ್ರಾಮಾಣಿಕ ಆಡಳಿತದ ಕನಸನ್ನು ಗಾಂಧಿಯವರು ಕಂಡಿದ್ದರು. ಆದರಿಂದು  ಆಡಳಿತದ ಪ್ರತಿಯೊಂದು ಶಾಖೆಯಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅನೇಕ ಹಿರಿಯರು ಬ್ರಿಟಿಷರ ಆಡಳಿತವೇ ಎಷ್ಟೋ ಉತ್ತಮವಾಗಿತ್ತೆಂದು ಉದ್ಘಾರ ತೆಗೆಯುತ್ತಾರೆ. ರಾಜಕಾರಣ ಇಷ್ಟೊಂದು ಗಬ್ಬೆದ್ದು ಹೋಗಲು ಕಾರಣ ನಾವು ನಮ್ಮ ರಾಜಕಾರಣದಲ್ಲಿ ಪಿತಾಮಹ ಗಾಂಧಿಯನ್ನು ಮತ್ತವರ ತತ್ವಸಿದ್ದಾಂತಗಳನ್ನು ಮರೆತಿರುವುದೇ ಆಗಿದೆ. ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿಯನ್ನು ಆಚರಿಸುವುದರ ಮೂಲಕ ಆ ದಿನ ಒಂದೆರಡು ಗಂಟೆ ಆಚರಣೆಗೆ ಮಾತ್ರ ನಮ್ಮ ಗಾಂಧಿ ಪ್ರೀತಿ ಸೀಮಿತವಾಗಿದೆ ! ದಶಕಗಳ ಕಾಲ ತಮ್ಮ ಹಿತಾಸಕ್ತಿಗಳನ್ನು ಬದಿಗೊತ್ತಿ ಈ ದೇಶದ ಲಕ್ಷಾಂತರ ಜನರನ್ನು ಸ್ವಾತಂತ್ರ‍್ಯಕ್ಕಾಗಿ ಹುರಿದುಂಬಿಸಿದವರು ಗಾಂಧಿ. ಮತ್ತು ಸ್ವಾತಂತ್ರ್ಯಸಂಗ್ರಾಮದೊಂದಿಗೆ ಭಾರತದಲ್ಲಿ ಅಖಂಡವಾಗಿ ಬೇರುಬಿಟ್ಟಿದ್ದ ಲೆಕ್ಕವಿಲ್ಲದಷ್ಟು ಸಾಮಾಜಿಕ ಪಿಡುಗುಗಳ ವಿರುದ್ಧ ಕೂಡಾ ಹೋರಾಡಿದವರು ಗಾಂಧಿ. ಇಂಥ ಅಪ್ರತಿಮ ನಾಯಕನನ್ನು  ನಮ್ಮದೇ ದೇಶದ ನಾಥೂರಾಮ್ ಗೋಡ್ಸೆ ಎಂಬ ಅಂಧ ರಾಷ್ಟ್ರೀಯವಾದಿ ಯುವಕನೊಬ್ಬ ಸ್ವಾತಂತ್ರ್ಯಬಂದು ವರ್ಷ ಕಳೆಯುವ ಮೊದಲೇ ಗುಂಡಿಟ್ಟು ಸಾಯಿಸುತ್ತಾನೆ. ಮುಸ್ಲಿಮರನ್ನು ಮತ್ತು ಪಾಕಿಸ್ತಾನ ರಚನೆಯನ್ನು ಗಾಂಧಿ ಬೆಂಬಲಿಸಿದ್ಧೇ ಗಾಂಧಿಯನ್ನು ಸಾಯಿಸಲು ಕಾರಣವೆಂದು ಗೋಡ್ಸೆ ಸಮರ್ಥನೆಯನ್ನು ನೀಡುತ್ತಾನೆ ! ಆರೆಸ್ಸೆಸ್‌ನವರು ಇತ್ತೀಚೆಗೆ ಯಾವುದೋ ಕಾರ್ಯಕ್ರಮದಲ್ಲಿ ಗೋಡ್ಸೆಯ ಫೋಟೊ ಇಟ್ಟು ಪೂಜಿಸಿದರಂತೆ. ರಾಜಕೀಯ ಕಾರಣಕ್ಕಾಗಿ, ಧರ್ಮ ಕಾರಣಕ್ಕಾಗಿ ಗಾಂಧಿಯವರನ್ನು ದ್ವೇಷಿಸುವ ದೊಡ್ಡ ಪಡೆಗಳೇ ಇಂದು ಭಾರತದಲ್ಲಿ ಹುಟ್ಟಿಕೊಂಡಿವೆ. ಗಾಂಧಿಯವರನ್ನು ಓದಿಕೊಳ್ಳದೆ ಅವರನ್ನು ಟೀಕಿಸುವ, ಅವಮಾನಿಸುವ ಪ್ರಗತಿಪರ ಚಿಂತಕರೂ ಈ ಮಹಾನ್ ಭಾರತದಲ್ಲಿ ಇಂದು ಹುಟ್ಟಿಕೊಂಡಿದ್ಧಾರೆ. ಒಂದೆರಡು ವರ್ಷಗಳ ಹಿಂದೆ ಇರಬೇಕು, ಮೈಸೂರಿನ ಪ್ರಖರ  ಪ್ರಗತಿಪರ ಚಿಂತಕ ಕೆ.ಎಸ್. ಭಗವಾನ್ ಗಾಂಧಿಯನ್ನು ಕೋಮುವಾದಿ ಎಂದು ತಮ್ಮ ಭಾಷಣದಲ್ಲಿ ಕರೆದಿದ್ದರು ! ಇಂಥ ಬೃಹಸ್ಪತಿಗಳು ಈ ದೇಶದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇವರನ್ನೆಲ್ಲ ಪೋಷಿಸುತ್ತಿರುವುದು ಗಾಂಧಿ ಬೆಳೆಸಿದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ! ಸ್ವಾತಂತ್ರ್ಯಬಂದ ಕೂಡಲೇ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಗಾಂಧಿ ಬಯಸುತ್ತಾರೆ. ಅವರು ಸಾಯುವುದಕ್ಕೆ ಎರಡು ದಿನಗಳ ಮೊದಲು ಈ ಬಗ್ಗೆ ಪತ್ರವೊಂದನ್ನೂ ಗಾಂಧಿ ಬರೆಯುತ್ತಾರೆ. ಆರೆಸ್ಸೆಸ್‌ನವರು ಏನಾದರೂ ಹೇಳಲಿ, ಗಾಂಧಿಯಂಥ ಅಪ್ರತಿಮ ದೇಶಪ್ರೇಮಿಯನ್ನು ಈ ದೇಶ ಮತ್ತೆಂದೂ ಕಾಣಲಿಕ್ಕಾಗಲಿಲ್ಲ. ಒಂದು ಕುಟುಂಬವನ್ನು ಒಟ್ಟಿಗೆ ನಡೆಸಲು ಸಾಧ್ಯವಾಗದಿದ್ದ ಕಾಲದಲ್ಲಿ ಇಡೀ ದೇಶವನ್ನು ಗಾಂಧಿ ಒಂದು ಮಾಡಿ, ರಾಷ್ಟ್ರೀಯತೆಯನ್ನು ಬಿತ್ತಿ ಬೆಳೆದು ಸ್ವಾತಂತ್ರ್ಯಹೋರಾಟಕ್ಕೆ ಅಣಿಗೊಳಿಸಿದ್ದು  ಒಂದು ದೊಡ್ಡ ಹೆಗ್ಗಳಿಕೆ ! ಆದ್ದರಿಂದಲೇ ಜಗತ್ತಿನ ಅನೇಕ ಸುಪ್ರಸಿದ್ಧ ತತ್ವಜ್ಞಾನಿಗಳು ಗಾಂಧಿಯನ್ನು Myth ಎಂದು ಕರೆಯುತ್ತಾರೆ. ಅಂದರೆ ಗಾಂಧಿ ಒಬ್ಬ ಪುರಾಣ ಪುರುಷ ಎಂದು !

ಜೂನ್ 1993 ರಲ್ಲಿ ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ನ ಚರ್ಚ್ ಸ್ಟ್ರೀಟ್‌ನಲ್ಲಿ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಅವರಿಂದ ಅನಾವರಣಗೊಂಡ ಪೀಟರ್‌ಮರಿಟ್ಜ್‌ಬರ್ಗ್ ರೈಲು ನಿಲ್ದಾಣದ ಘಟನೆಯ ಶತಮಾನೋತ್ಸವದ ನೆನಪಿಗಾಗಿ ಗಾಂಧಿಯವರ ಕಂಚಿನ ಪ್ರತಿಮೆ.

ಗಾಂಧಿ ಅಂಧಾಭಿಮಾನವನ್ನು ಎಂದು ಪ್ರದರ್ಶಿಸಿದವರೂ ಅಲ್ಲ, ಪ್ರೋತ್ಸಾಹಿಸಿದವರೂ ಅಲ್ಲ. ಅವರ ಎಲ್ಲಾ ಕ್ರಿಯೆಗಳಲ್ಲಿ ಮಾನವೀಯತೆ ಮಡುಗಟ್ಟಿ ನಿಂತಿರುತ್ತಿತ್ತು. ಅದಕ್ಕೆ ಗಾಂಧಿ ಒಂದು ಕಡೆ ಹೇಳುತ್ತಾರೆ : ” ಸಂಕಷ್ಟದಲ್ಲಿ ಸಿಲುಕಿರುವ ಮಗುವನ್ನಾಗಲೀ, ಹೆಣ್ಣನ್ನಾಗಲೀ ಅವರು ಶತ್ರುಕಡೆಯವರೇ ಆಗಲಿ ರಕ್ಷಿಸುವುದು ಧರ್ಮ..” ಎಂದು. ಇಲ್ಲಿ ಗಾಂಧಿ ಪ್ರಕಾರ ಧರ್ಮಕ್ಕಿರುವ ವೈಶಾಲ್ಯತೆಯನ್ನು ಗಮನಿಸಬೇಕು. ಇಂಥ ಸಂದರ್ಭಗಳಲ್ಲಿಯೇ ಗಾಂಧಿ ಮಹಾತ್ಮ ಎನಿಸುವುದು. ಹಿಂಸೆಯನ್ನು, ಕ್ರೌರ್ಯವನ್ನು ಬೋಧಿಸು ಧರ್ಮವನ್ನಾಗಲೀ, ದೇವರನ್ನಾಗಲೀ  ತಿರಸ್ಕರಿಸುವವರಲ್ಲಿ ನಾನು ಮೊದಲಿಗನಾಗಿರುತ್ತೇನೆ ಎಂದು ಗಾಂಧಿ ನಿರ್ಭಿಡೆಯಿಂದ ಹೇಳುತ್ತಾರೆ. ಆರೆಸ್ಸೆಸ್‌ನವರಿಗೆ ಗಾಂಧಿಯನ್ನು ಕಂಡರೆ ಇಷ್ಟು ಸಿಟ್ಟು ಏತಕ್ಕೋ? ಅವರು ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕಾಗಿದೆ. ಸರ್ದಾರ್ ವಲ್ಲಬಾಯ್  ಪಟೇಲ್ ಆರೆಸ್ಸೆಸ್‌ನ ಕಟ್ಟಾ ವಿರೋಧಿಯಾಗಿದ್ದವರು. ಒಂದು ಹಂತದಲ್ಲಿ ಆರೆಸ್ಸೆಸ್ ನಿಷೇಧಿಸಿಬೇಕೆಂದು ಬಯಸಿದ್ದವರು. ಅಂಥವರನ್ನು ಇಂದು ಆರೆಸ್ಸೆಸ್ ಇನ್ನಿಲ್ಲದಂತೆ ಆರಾಧಿಸುತ್ತಿದೆ. ಆದರೆ ಗಾಂಧಿಯ ವಿಷಯದಲ್ಲಿ ಏಕಿಂತ ಮನೋಭಾವನೆ? ಉತ್ತರಿಸುವವರು ಯಾರು. ಇನ್ನು ಅಂಬೇಡ್ಕರ್ ವಾದಿಗಳೂ ಕೂಡಾ ಗಾಂಧಿಯವರನ್ನು ಏಕೆ ದ್ವೇಷಿಸುತ್ತಾರೆಂಬುದೇ  ಒಂದು ದೊಡ್ಡ ಕಗ್ಗಂಟಾಗಿದೆ. ಹಾಗೆ ನೋಡಿದರೆ ಅನೇಕ ದಲಿತ ಹೋರಾಟಗಾರರು, ದಲಿತ ರಾಜಕೀಯ ನಾಯಕರು, ದಲಿತ ಅಧಿಕಾರಿಶಾಹಿಗಳು ಅಂಬೇಡ್ಕರ್ ರವರನ್ನೂ ಸರಿಯಾಗಿ ಓದಿಕೊಂಡಿಲ್ಲ, ಗಾಂಧಿಯವರನ್ನಂತೂ ಓದಿಯೇ ಇಲ್ಲ. ಮೀಸಲಾತಿಯ ಲಾಭ ಪಡೆಯಲು ಇವರುಗಳು ಅಂಬೇಡ್ಕರ್ ಫೋಟೋಗಳನ್ನು ಕೊರಳಿಗೆ ನೇತುಹಾಕಿಕೊಂಡವರು ! ಅಂಬೇಡ್ಕರ್ ಹೆಸರಲ್ಲಿ ಇಂದು ದೇಶದಲ್ಲಿ ಮಾಡಬಾರದ್ದನ್ನು ಮಾಡಲಾಗುತ್ತಿದೆ. ಆದರೆ ಗಾಂಧಿ ಹೆಸರಲ್ಲಿ ಅಂಥ  ಮಾಡಬಾರದ್ದನ್ನು ಮಾಡಲು ಸಾಧ್ಯವೇ ಆಗುವುದಿಲ್ಲ ! ಗಾಂಧಿ ಆ ತರಹ ಅಚ್ಚಾಗಿದ್ದಾರೆ. ಇಷ್ಟಕ್ಕೂ ಅಂಬೇಡ್ಕರ್ ಕಾಂಗ್ರೆಸಿನ ಸದಸ್ಯರಲ್ಲವೆಂದು ಅವರನ್ನು ಸಚಿವ ಸಂಪುಟದಿಂದ ದೂರ ಇಡಲು ನೆಹರು ಮತ್ತವರ ಪಟಾಲಂ ಪ್ರಯತ್ನಿಸಿದಾಗ ಅಂಬೇಡ್ಕರ್ ರವರ ಅಪಾರ ಪ್ರತಿಭೆಯನ್ನು ಗುರುತಿಸಿದ್ದ ಗಾಂಧಿ ಅಂಬೇಡ್ಕರ್ ರವರನ್ನು ಸಂಪುಟಕ್ಕೆ ಸೇರಿಸಿಯೇಕೊಳ್ಳಬೇಕೆಂದು ಹಠ ಹಿಡಿಯುತ್ತಾರೆ. ಸಂವಿಧಾನ ರಚನೆ ಮತ್ತು ಮತ್ತೆಲ್ಲಾ ನಡೆದದ್ದು ಆ ನಂತರ. ಗಾಂಧಿಯವರನ್ನು ಸುಖಾಸುಮ್ಮನೆ ಟೀಕಿಸುವ, ಗಾಂಧಿಯ ಬಗ್ಗೆ ವಿಷ ಕಾರುವ, ಕಾಂಗ್ರೆಸಿನ ಹಿಂದೆ ಬಿದ್ದಿರುವ ಅಂಬೇಡ್ಕರ್ ವಾದಿಗಳು ಇದನ್ನು ತಿಳಿಯುವುದು ಒಳ್ಳೆಯದು. ಮುಖ್ಯವಾಗಿ ದಲಿತ ಯುವ ಜನಾಂಗ ಅಂಬೇಡ್ಕರ್ ಮತ್ತು ಗಾಂಧಿ ಇಬ್ಬರನ್ನೂ  ವಿಶಾಲವಾಗಿ ಓದಿಕೊಳ್ಳುವುದು ಇಂದಿನ ಬಹು ತುರ್ತಿನ ಕೆಲಸವಾಗಿದೆ. ಇಲ್ಲದಿದ್ದಲ್ಲಿ ಅವರ ವಿಚಾರಧಾರೆಗಳು ದಾರಿತಪ್ಪುವುದೇ ಅಧಿಕ.

ಬ್ರೆಜಿಲ್‌ನ ಸಾವೊ ಪಾಲೊ, ಪ್ರಾಕಾ ಟುಲಿಯೊ ಫಾಂಟೌರಾದಲ್ಲಿ ಮಹಾತ್ಮ ಗಾಂಧಿ.

ಇನ್ನು  ಗಾಂಧಿಯವರ ಬಹು ದೊಡ್ಡ ಕನಸಾಗಿದ್ದ ಗ್ರಾಮೀಣ ಅಭಿವೃದ್ಧಿ ಅವರು ಸತ್ತ ನಂತರ ದಿಕ್ಕುದೆಸೆಯಿಲ್ಲದಂತಾಯಿತು. ಬಡತನ, ನಿರುದ್ಯೋಗ, ಜಾತೀಯತೆ, ಮೂಲಸೌಕರ್ಯಗಳ ಕೊರತೆ, ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳ ಕೊರತೆ, ನೈರ್ಮಲ್ಯ ಕೊರತೆ ಮುಂತಾದ ನೂರಾರು ಸಮಸ್ಯೆಗಳೊಂದಿಗೆ ಹಳ್ಳಿಗಳು ನರಳುತ್ತಿವೆ. ಅರವತ್ತರ ದಶಕದ ಮೇಲಂತೂ ದೇಶದ ರಾಜಕಾರಣಿಗಳು ಹಳ್ಳಿಗಳನ್ನು ಓಟ್ ಬ್ಯಾಂಕುಗಳನ್ನಾಗಿ ಮಾಡಿಕೊಂಡು ಅವುಗಳ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು. ಇಂದಿಗೂ ಭಾರತದ ಸಾವಿರಾರು ಹಳ್ಳಿಗಳು ಸ್ಮಶಾನಗಳಂತೆ ಪಾಳುಬಿದ್ದಿರುವುದನ್ನು ಕಾಣಬಹುದು. ಸ್ವಾತಂತ್ರ್ಯಬಂದಾಗಿನಿಂದಲೂ ನಮ್ಮ ಸರ್ಕಾರಗಳು ಕೈಗಾರಿಕಾಭಿವೃದ್ದಿಯ ನೆಪದಲ್ಲಿ ಹಳ್ಳಿಗಳನ್ನು ಪೂರ್ಣವಾಗಿ ಕಡೆಗಣಿಸಿಬಿಟ್ಟವು. ನಮ್ಮ ದಶಕಗಳ ಕಾಲದ ವಾರ್ಷಿಕ ಮತ್ತು ಪಂಚವಾರ್ಷಿಕ ಯೋಜನೆಗಳ ಮೇಲೆ ಕಣ್ಣಾಡಿಸಿದರೆ ಈ ಸತ್ಯ ಗೋಚರಿಸುತ್ತದೆ. ಲಕ್ಷಾಂತರ ಹಳ್ಳಿಗಳ ರೈತರು ಇಂದಿಗೂ ಕೃಷಿಗಾಗಿ ಮಳೆಯನ್ನೇ ಅವಲಂಬಿಸಿದ್ದಾರೆ. ನಮ್ಮ ಸರ್ಕಾರಗಳು  ಗುಡಿ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣ ಹಳ್ಳಿಗಾಡಿನ ಯುವಜನತೆ ತಮ್ಮ ಜೀವನೋಪಾಯಕ್ಕಾಗಿ ನಗರಗಳ ಕಡೆ ಪಲಾಯನ ಮಾಡತೊಡಗಿದರು. ಹಾಗಾಗಿ ಹಳ್ಳಿಗಳು ವೃದ್ದಾಶ್ರಮಗಳಾಗಿ ರೂಪಾಂತರಗೊಂಡಿವೆ. ಇತ್ತ ಪಟ್ಟಣಗಳಲ್ಲೂ ಸರಿಯಾದ ಆದಾಯವಿಲ್ಲದೆ ಹಳ್ಳಿಗಾಡಿನಿಂದ ಬಂದ ಜನ ಸಂಕಷ್ಟಗಳಲ್ಲೇ ಬದುಕನ್ನು ಸವೆಸುತ್ತಿದ್ದಾರೆ. ಗಾಂಧಿ ಏನೇನನ್ನು ಬಯಸಿದ್ದರೋ ಅವನ್ನೆಲ್ಲ ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಶಾಹಿಗಳು ಶೂನ್ಯವಾಗಿಸಿದ್ದಾರೆ. ಗಾಂಧಿಯನ್ನು ಮರೆತ ಭಾರತ ಯಾವೊತ್ತಿಗೂ ನೆಮ್ಮದಿಯಿಂದ ಉಸಿರಾಡದು. ಈ ಲೇಖನವನ್ನು ಕೊನೆಗೊಳಿಸುವ ಹೊತ್ತಿನಲ್ಲಿ ಸುಮಾರು  ಮುವತ್ತು ವರ್ಷಗಳ ಹಿಂದೆ ನನ್ನ ಹಿರಿಯ ಆತ್ಮೀಯ ಸ್ನೇಹಿತರಾಗಿದ್ದ ಕಥೆಗಾರ ಡಾಕ್ಟರ್ ಬೆಸಗರಹಳ್ಳಿ ರಾಮಣ್ಣನವರು ಹೇಳಿದ ಒಂದು ಘಟನೆ ನೆನಪಾಗುತ್ತಿದೆ. ಅದು 1942 ರ ಸಂದರ್ಭ. ಕ್ವಿಟ್ ಇಂಡಿಯಾ ಚಳವಳಿ ತುಂಬಾ ಬಿರುಸಾಗಿರುತ್ತದೆ. ಗಾಂಧೀಜಿ ” Leave India to God..” ಎಂದು  ಮೀಟಿಂಗ್ ಒಂದರಲ್ಲಿ  ಬ್ರಿಟಿಷ್ ಸರ್ಕಾರವನ್ನು ಒತ್ತಾಯಿಸುತ್ತಾರೆ. ಆಗ ಮೀಟಿಂಗ್ ನಲ್ಲಿದ್ದ ಬ್ರಿಟಿಷ್ ಹಿರಿಯ ಅಧಿಕಾರಿಯೊಬ್ಬರು ” ಸೀ ಮಿಸ್ಟರ್ ಗಾಂಧಿ, ವಿ ಮೆ ಲೀವ್ ಇಂಡಿಯಾ ಟು ಗಾಡ್ ಟುಡೆ. ಬಟ್ ಒನ್ ಡೇ ಆರ್ ದಿ ಅದರ್ ಡೆಫಿನೆಟ್ಲಿ  ಇಟ್ ವಿಲ್ ಗೊ ಟು ಡಾಗ್ಸ್…” ಎನ್ನುತ್ತಾನಂತೆ. ಭಾರತವನ್ನು ಇಂದು ಹುಚ್ಚು ನಾಯಿಗಳು ಮನಬಂದಂತೆ ಮುಕ್ಕುತ್ತಿವೆ..

ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರು ನವ ದೆಹಲಿ, ನವೆಂಬರ್ 8, 2010 ರಂದು ಮಹಾತ್ಮ ಗಾಂಧಿಯವರ ಸ್ಮಾರಕವಾದ ರಾಜ್‌ಘಾಟ್‌ನಲ್ಲಿ ಒಂದು ಕ್ಷಣ ಮೌನವಾಗಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles