18.9 C
Bengaluru
Wednesday, March 15, 2023
spot_img

ಲುಟಿಯನ್ಸ್ ಎಂಬ ಐಷಾರಾಮಿ ವ್ಯಾಮೋಹ!
ಬಿಟ್ಟರೂ ಬಿಡದೀ ರಾಜದರ್ಬಾರ್ ಮಾಯೆ…

-ರಾಧಿಕಾ ವಿಟ್ಲ

ರಾಜಧಾನಿ ಎಂಬುದು ದೇಶದ ಅಥವಾ ರಾಜ್ಯದ ರಾಜಕೀಯ ಕೇಂದ್ರವನ್ನುದ್ದೇಶಿಸಿ ಹೇಳುವ ಮಾತು. ಪುರಾಣ ಕಾಲದಿಂದ ಈವರೆಗೂ ರಾಜಧಾನಿಗಳ ವೈಭವ, ವಿಲಾಸಗಳ ಬಗ್ಗೆ ದಂತಕತೆಗಳೇ ಇವೆ. ರಾಜಧಾನಿಯ ಬಗೆಗಿನ ಆಕರ್ಷಣೆ, ಅಚ್ಚರಿಗಳು ಎಂದಿಗೂ ಬತ್ತುವುದಿಲ್ಲ. ಬದಲಿಗೆ ಹೆಚ್ಚುತ್ತಲೇ ಸಾಗುತ್ತವೆ. ಭಾರತದ ರಾಷ್ಟ್ರ  ರಾಜಧಾನಿ ದೆಹಲಿಯೂ ಇಂತಹ ಅಚ್ಚರಿಗಳ ಕಣಜ. ದೇಶವಾಸಿಗಳಿಗೆ ಒಂಥರಾ ಮೋಹ, ಪ್ರತಿಷ್ಠೆಯ ಕುರುಹು. ಅದರಲ್ಲೂ ರಾಜಕಾರಣಿಗಳ ಒಡ್ಡೋಲಗದಂತಿರುವ ಲುಟಿಯನ್ಸ್ ದೆಹಲಿಯಂತೂ ಸದಾ ಕುತೂಹಲದ ಕೇಂದ್ರಬಿಂದು. ಈ ಲುಟಿಯನ್ಸ್ ದೆಹಲಿ ಕುರಿತು ಅಲ್ಲಿಯ ಅನೇಕ ವರ್ಷಗಳಿಂದ ನೆಲೆಸಿರುವ ಕನ್ನಡತಿ ಪತ್ರಕರ್ತೆ, ಲೇಖಕಿ, ಟ್ರಾವೆಲರ್ ರಾಧಿಕಾ ವಿಟ್ಲ ಅವರು ಬರೆದಿರುವ ಲೇಖನ ನಿಮ್ಮ ಓದಿಗಾಗಿ.

ರೈಸೀನಾ ಹಿಲ್ ಸುಂದರ ದೃಶ್ಯ.

ನಮ್ಮ ದೇಶದ ರಾಜಧಾನಿ ಎಂಬ ಅಸಲಿ ದಿಲ್ಲಿಯ ಕಥೆಯಿದು. ಇಡೀ ದೇಶದಲ್ಲೇ ಯಾರೇ ಈ ವಿಳಾಸ ಕೇಳಿದರೆ ಒಮ್ಮೆ ತಿರುಗಿ ನೋಡಿಯಾರು. ಅದು ʻಲುಟಿಯನ್ಸ್ʼ!

ಬಹುಶಃ ಮಹಾನಗರದಲ್ಲೊಂದುʻಐಷಾರಾಮಿ ಏರಿಯಾʼಎಂಬುದಕ್ಕೇ ಅನ್ವರ್ಥನಾಮ ಈ ʻಲುಟಿಯನ್ಸ್ ಬಂಗಲೋ ಜೋನ್ʼ (ಎಲ್ಬಿಝಡ್). ವಿಶಾಲ ಬಂಗಲೆಗಳು, ಸುತ್ತಮುತ್ತ ಎಕರೆಗಟ್ಟಲೆ ಉದ್ಯಾನ, ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವದ ಪ್ರತಿದಿನದ ಬೆಳಗು, ಅಡ್ಡಾಡುವ ನವಿಲುಗಳು ಹೀಗೆ ಮಹಾನಗರದ ಮಧ್ಯದಲ್ಲೊಂದು ಕಂಡು ಕೇಳರಿಯದ ಜಗತ್ತಿನ ಹಾಗೆ ಕುತೂಹಲದ ನೋಟವೊಂದು ಈ ಪ್ರತಿಷ್ಠಿತ ಏರಿಯಾದ ಮೇಲೆ ಇದ್ದೇ ಇದೆ. ಲುಟಿಯನ್ಸ್ ಎಂಬುದೊಂದು ಫೇರಿಟೇಲ್‌ನ ಹಾಗೆ ಎಲ್ಲರ ಮನಸ್ಸಿನಲ್ಲೂ ಬೆರಗು, ತಾವು ಎಂದಿಗೂ ತಲುಪಲಾಗದ ಜಾಗದಂತೆ ಸದಾ ಅಚ್ಚರಿಯ ಕೇಂದ್ರಬಿಂದು.

ಮೆಟ್ರೋ ಪಾಲಿಟನ್ ನಗರವೊಂದರಲ್ಲಿ ಉಳಿದೆಲ್ಲ ಏರಿಯಾಗಳಲ್ಲಿ ಬೆಳಗೆದ್ದರೆ ಸಾಕು ಕಿವಿತುಂಬ ಕೇಳಿಸುವ ವಾಹನದ ಹಾರ್ನ್ಗಳು, ಸದ್ದುಗದ್ದಲ, ಮಾರ್ಕೆಟ್ ಗಜಿಬಿಜಿ, ತರಕಾರಿ ಮಾರುವವನ ಕೂಗು ಯಾವುದೂ ಈ ಏರಿಯಾಕ್ಕೆ ಅನ್ವಯವಾಗುವುದಿಲ್ಲ. ಈ ಏರಿಯಾ ಒಳಗೆ ಹೊಕ್ಕರೆ ಪ್ರಪಂಚದ ಎಲ್ಲ ಸದ್ದುಗಳೂ ಒಮ್ಮೆಯೇ ಮ್ಯೂಟ್ ಆಗಿಬಿಡುತ್ತದೆ. ಎಂದೂ ಇಲ್ಲದ, ಯಾರೂ ಹೇಳದೆ ಆವಾಹಿಸಿಕೊಂಡ ಒಂದು ಆಕರ್ಷಕ ಮೌನದ ಗತ್ತು ಇಲ್ಲಿ ಸದಾ ತಲೆ ಎತ್ತಿ ನಿಂತಿರುತ್ತದೆ.  ಹಾಗಾಗಿಯೇ ಇದು ಉಳ್ಳವರ ಏರಿಯಾ!

ದೆಹಲಿಯೆಂಬ ನಗರಿಯೇ ಹಾಗೆ, ಇಲ್ಲಿ ಹಳೇ ದಿಲ್ಲಿಯ ಗಿಜಿಗುಟ್ಟುವ ಪುಟ್ಟ ಪುಟ್ಟ ಗಲ್ಲಿಗಳೊಳಗೊಂದು ಅನೂಹ್ಯ ಜಗತ್ತಿದೆ. ಗಲ್ಲಿಯೊಳಗಣ ಗಲ್ಲಿ, ಅದರೊಳಗೊಂದು ಗಲ್ಲಿ… ಹೀಗೆ ಹೋಗುತ್ತಿದ್ದರೆ ಇದು ಎಂದೂ ಮುಗಿಯದ ಪಯಣವೇನೋ ಅನಿಸುತ್ತದೆ. ಬಡ ಮಂದಿಯಿಂದ ಹಿಡಿದು ಸಿರಿವಂತರವರೆಗೆ ಎಲ್ಲರೂ ಇಲ್ಲಿ ಓಡಾಡುತ್ತಾರೆ, ತಿನ್ನುತ್ತಾರೆ, ಖರೀದಿಸುತ್ತಾರೆ, ಕುಡಿಯುತ್ತಾರೆ. ಇಂತಹ ಒತ್ತೊತ್ತಾದ ಗಿಜಿಗುಟ್ಟುವ ಪೆಟ್ಟಿಗೆಗಳನ್ನೆಲ್ಲ ಪೇರಿಸಿಟ್ಟಂತೆ ಕಾಣುವ ಏರಿಯಾ ದಾಟಿಕೊಂಡು ಮುಂದುವರಿದರೆ, ದಿಲ್ಲಿಯ ಇನ್ನೊಂದು ಸ್ವರೂಪವನ್ನೂ ನಮಗೆ ಲುಟಿಯನ್ಸ್ ಹಾಗೂ ಸುತ್ತಮುತ್ತಲ ಏರಿಯಾಗಳು ದರ್ಶನ ಮಾಡಿಸುತ್ತದೆ. ಹಳೇ ದಿಲ್ಲಿಯ ಓಣಿಗಳ ಕಿರಿದಾದ ಜಗತ್ತಿನಿಂದ ಮನಸ್ಸು ಹೊರಬರುವ ಮೊದಲೇ ಈ ಐಷಾರಾಮಿ ಏರಿಯಾ, ಹೀಗೂ ಒಂದು ಜಗತ್ತು ಇಲ್ಲಿದೆಯಾ ಎಂಬಷ್ಟು ವೈರುಧ್ಯಗಳನ್ನು ನಮ್ಮ ಮುಂದೆ ಹರವಿಡುತ್ತದೆ.

ಸೌತ್ ಬ್ಲಾಕ್, ರೈಸೀನಾ ಹಿಲ್.

ದೆಹಲಿಗರಿಗೆ ಲುಟಿಯನ್ಸ್ ಎಂದರೆ ಒಂಥರಾ ಮೋಹ, ಪ್ರತಿಷ್ಠೆಯ ಕುರುಹು. ಎಲ್ಲವೂ ಇರುವ ಇಲ್ಲಿ ಇಲ್ಲದ್ದು ಎಂಬುದೇ ಇಲ್ಲ! ನಾನು ಇರೋದು ಲುಟಿಯನ್ಸ್ ಹತ್ತಿರ ಎಂದರೆ ಅವರ ಕಾಲರ್ ಮೇಲೇ ಇದೆ ಎಂದೇ ಅರ್ಥ. ಇಲ್ಲಿ ನಿಮ್ಮ ನೆರೆಹೊರೆಯವರೇ ಅದಾನಿ ಆಗಿರಬಹುದು, ಮಿತ್ತಲ್ ಕೂಡಾ ಆಗಿರಬಹುದು. ಅಥವಾ ನೀವು ನಿತ್ಯ ಸಂಸತ್ತಿನಲ್ಲಿ ಮೇಜು ಕುಟ್ಟಿ ಅಬ್ಬರಿಸುವ ರಾಜಕಾರಿಣಿ ನಿಮ್ಮ ಮುಂದೆಯೇ ಕಾರಿನಲ್ಲಿ ಹೋಗಬಹುದು. ಆದರೆ, ಇವರೆಲ್ಲ ಅಕ್ಕಪಕ್ಕದ ರಸ್ತೆಯಲ್ಲಿದ್ದೂ, ಇಲ್ಲದಂತಿರುವ ವಿಚಿತ್ರ ಮೌನವನ್ನು ಹೊದ್ದುಕೊಂಡಿರುವ ಏರಿಯಾವಿದು. ದಿನ ಬೆಳಗಾದರೆ, ಇಲ್ಲಿ ವಾಸಿಸುವ ಮಂದಿ ನಿಮ್ಮ ಕಣ್ಣಿಗೆ ಬೀಳುವುದಕ್ಕಿಂತಲೂ ಸೆಕ್ಯೂರಿಟಿಗೆಂದು ನಿಂತ ಪೊಲೀಸರೇ ಎಡತಾಕುತ್ತಾರೆ. ಜಗತ್ತಿನಲ್ಲಿ ಏನೇ ಆದರೂ ಇಲ್ಲಿ ಕರೆಂಟು ಹೋಗುವುದಿಲ್ಲ. ನೀರು ನಿಲ್ಲುವುದಿಲ್ಲ. ಸೂರ್ಯನ ಬಿಸಿಲೂ ನೆಲಕ್ಕೆ ಸೋಕದಂತೆ ಮರಗಳಿಂದ ಸಮೃದ್ಧವಾಗಿರುವ ಹಸಿರು ಇಲ್ಲಿದೆ. ದಿಲ್ಲಿಯಿಡೀ ವಾಯುಮಾಲಿನ್ಯದಿಂದ ತತ್ತರಿಸುತ್ತಾ ಕೂತರೂ, ಇಲ್ಲಿ ಪ್ರಶಾಂತ ಉಸಿರಾಡುವ ಗಾಳಿಯಿದೆ. ಮರದಿಂದ ಎತ್ತರದ ಕಟ್ಟಡಗಳೇ ಕಿಲೋಮೀಟರುಗಟ್ಟಲೆ ದೂರದವರೆಗೆ ಕಾಣಿಸದಿದ್ದರೂ, ವಿಶಾಲವಾದ ಬಂಗಲೆಗಳಿವೆ. ಹಲವು ಬಂಗಲೆಗಳಿಗೆ ಎಕರೆಗಟ್ಟಲೆ ಉದ್ದದ ಉದ್ಯಾನಗಳಿವೆ. ಮೊಘಲ್, ಬ್ರಿಟೀಷ್ ಹಾಗೂ ಭಾರತೀಯ ವಾಸ್ತುಶಿಲ್ಪಗಳೆಲ್ಲವುಗಳ ಬೆರಕೆಯ ಇಲ್ಲಿನ ಬಂಗಲೆಗಳು ಹಳೆಯ ಇತಿಹಾಸವನ್ನು ಸಾರುತ್ತವೆ. ಬಹಳಷ್ಟು ಸರ್ಕಾರಿ ಬಂಗಲೆಗಳು ಕಾಲಕಾಲಕ್ಕೆ  ಮಾರ್ಪಾಡುಗಳನ್ನು ಮಾಡಿಕೊಂಡರೂ, ಹಲವು ಬಂಗಲೆಗಳು ಇಂದಿಗೂ ಐತಿಹಾಸಿಕ ಕುರುಹುಗಳಾಗಿಯೇ ಇವೆ. ಪ್ರತಿಯೊಂದು ಬಂಗಲೆಯೂ ಒಂದೊಂದು ಕತೆಯನ್ನು ಹೇಳುತ್ತವೆ. ದೇಶದ ಖ್ಯಾತನಾಮರಲ್ಲಿ ಬಹುತೇಕ ದರ ಉಂಡುಟ್ಟುಕೊಳ್ಳುವಿಕೆಯೆಲ್ಲವೂ ಇಲ್ಲಿಯೇ ನಡೆದಿದೆ!

ಮಜಾ ಎಂದರೆ, ಲುಟಿಯನ್ಸ್ ಏರಿಯಾಕ್ಕೆ ಒಮ್ಮೆ ಬಂದಿಳಿದರೆ ಅಲ್ಲಿಂದ ಮತ್ತೆ ಹೋಗಲು ಮನಸು ಮಾಡುವವರೇ ಇಲ್ಲ. ಆಡಳಿತಾವಧಿಯಲ್ಲಿ ಸರ್ಕಾರದಿಂದ ನಿರ್ದಿಷ್ಟ ಅವಧಿಗೆ ಬಂಗಲೆ ಪಡೆದರೂ ಅವಧಿ ಮುಗಿದ ಮೇಲೆ ಅದನ್ನು ಯಥಾವತ್ ಹಿಂತಿರುಗಿಸುವುದು ಬಹಳಷ್ಟು ಮಂದಿ ಮಾಡುವುದಿಲ್ಲ. ಅವಧಿ ಮುಗಿದು ನಾಲ್ಕೈದು ತಿಂಗಳು ಕಳೆದರೂ ತಮ್ಮ ಬಂಗಲೆ ಖಾಲಿ ಮಾಡಿಲ್ಲದ ಮಾಜಿ ಸಂಸದರ ಪಟ್ಟಿ ಎಂಬ ತಲೆಬರಹದಡಿ ಸುದ್ದಿ ಬರುವುದೂ ನಾವು ಓದುವುದೂ ತೀರಾ ಸಾಮಾನ್ಯ. ಯಾಕೆಂದರೆ, ಇದೊಂದು ಅಂತಹ ಮಾಯಾಜಗತ್ತು! ಲುಟಿಯನ್ಸ್ ಜಗತ್ತಿನ ಸರ್ಕಾರಿ ಬಂಗಲೆಗಳ ಇತಿಹಾಸ ಕೆದಕುತ್ತಾ ಕೂತರೆ, ಅತೀ ಹೆಚ್ಚು ವರ್ಷ ಇಲ್ಲಿ ಠಿಕಾಣಿ ಹೂಡಿದವರ ಸಾಲಿನಲ್ಲಿ ಮುಂಚೂಣಿಯಲ್ಲಿ ಸೋನಿಯಾಗಾಂಧಿ, ರಾಮ್ ವಿಲಾಸ್ ಪಾಸ್ವಾನ್ ಹೆಸರುಗಳು ಸಿಗುತ್ತವೆ.

ʻ10, ಜನಪಥʼ ಎಂಬ ವಿಳಾಸ ಕೇಳಿದರೆ ಸಾಕು ನೆನಪಾಗುವುದು ಸೋನಿಯಾ ಗಾಂಧಿ. ಸುಮಾರು ಮೂವತ್ತು ವರ್ಷಗಳಿಂದ ಅಂದರೆ 1990 ಜನವರಿ 19 ರಂದು ರಾಜೀವ್ ಗಾಂಧಿಯವರಿಗೆ ನೀಡಲಾಗಿದ್ದ ಬಂಗಲೆಯಿದು. ರಾಜೀವ್ ಗಾಂಧಿಯ ಮರಣಾನಂತರ ಇದನ್ನು ಸೋನಿಯಾರಿಗೆ ಹಸ್ತಾಂತರಿಸಲಾಗಿತ್ತು. ಇಂದಿಗೂ ಅವರು ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದಲ್ಲದೆ, ಇವರ ನೆರೆಮನೆಯಲ್ಲೇ ಇರುವ ʻ12, ಜನಪಥʼ ವಿಳಾಸದಲ್ಲಿರುವ ರಾಮ್‌ವಿಲಾಸ್ ಪಾಸ್ವಾನ್ ಕೂಡಾ 1990 ಮಾರ್ಚ್ 12 ರಿಂದ ಇಲ್ಲಿದ್ದಾರೆ. ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್‌ಗೆ ಎಂಟು ವರ್ಷವಾಗುವ ಮೊದಲೇ ಅವರು ಇದೇ ವಿಳಾಸದಲ್ಲಿದ್ದರು ಎಂಬುದಕ್ಕೇ ದಾಖಲೆಗಳಿವೆ. 2009- 10ರಲ್ಲಿ ಪಾಸ್ವಾನ್ ಸಂಸದರಾಗಿ ಆಯ್ಕೆಯಾಗಿಲ್ಲದಿದ್ದರೂ ಅವರು ಇದೇ ಬಂಗಲೆಯಲ್ಲಿ ಮುಂದುವರಿದಿದ್ದರು. ಇತ್ತೀಚೆಗೆ ಒಂದೆರಡು ವರ್ಷಗಳ ಹಿಂದೆ ಉದ್ಯಮಿ ಅದಾನಿ ಲುಟಿಯನ್ಸ್ ಜೋನ್‌ನಲ್ಲೇ ಸುಮಾರು ಮೂರುವರೆ ಎಕರೆ ಜಾಗವನ್ನೂ ಹೊಂದಿದ್ದ ಸಾವಿರ ಕೋಟಿ ಬೆಲೆ ನಿಗದಿಯಾಗಿದ್ದ ಭವ್ಯ ಬಂಗಲೆಯೊಂದನ್ನು 400 ಕೋಟಿ ರೂಪಾಯಿಗಳಿಗೆ ಖರೀದಿಸಿ ಅಚ್ಚರಿ ಮೂಡಿಸಿದ್ದರು.

ನಾರ್ತ್ ಬ್ಲಾಕ್, ರೈಸೀನಾ ಹಿಲ್.

ಲುಟಿಯನ್ಸ್ ಯಾರು?: ಹಾಗಾದರೆ ಈ ಲುಟಿಯನ್ಸ್ ಏನು? ದೆಹಲಿಗೂ ಲುಟಿಯನ್ಸ್ಗೂ ಏನು ಸಂಬಂಧ ಎಂಬ ಪ್ರಶ್ನೆ ಬಾರದಿರದು. ನವದೆಹಲಿಯ ನೀಲನಕ್ಷೆ ತಯಾರಿಸಿದ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲ್ಯಾಂಡ್‌ಸೀರ್ ಲುಟಿಯನ್ಸ್ ನೆನಪಿನಲ್ಲಿ ಆತನ ಹೆಸರನ್ನೇ ಈ ಏರಿಯಾಕ್ಕೆ ನೀಡಲಾಗಿದೆ. ಭಾರತ ಇಂಗ್ಲೆಂಡ್‌ಗಳಲ್ಲದೆ ಐರ್ಲೆಂಡ್, ಫ್ರಾನ್ಸ್, ಇಟಲಿ, ಯುಎಸ್ ಹೀಗೆ ಹಲವೆಡೆ ಲುಟಿಯನ್ಸ್ ಬಹಳಷ್ಟು ಪ್ರಮುಖ ಕಟ್ಟಡಗಳನ್ನು ವಿನ್ಯಾಸ ಮಾಡಿದ್ದಾರೆ.

ಭಾರತವನ್ನು ತನ್ನ ಬಿಗಿಮುಷ್ಠಿಯಲ್ಲಿ ಹಿಡಿದು ಆಳುತ್ತಿದ್ದ ಬ್ರಿಟೀಷರು ಸುಮಾರು 1912ರ ಸುಮಾರಿನಲ್ಲಿ ಆಗ ಇದ್ದ ಕೋಲ್ಕತ್ತಾದಿಂದ ತಮ್ಮ ರಾಜಧಾನಿಯನ್ನು ದೆಹಲಿಗೆ ವರ್ಗಾಯಿಸಲು ನಿರ್ಧರಿಸಿದ್ದರು. ಉತ್ತರದಲ್ಲಿ ಕೋಲ್ಕತ್ತಾದಿಂದಲೂ, ದಕ್ಷಿಣದಲ್ಲಿ ಮದರಾಸಿನಿಂದಲೂ ಇಡೀ ದೇಶವನ್ನು ಬಿಗಿದು ಹಿಡಿದಿದ್ದ ಅವರಿಗೆ ರಾಜ್ಯಭಾರ ನಿಜಕ್ಕೂ ತ್ರಾಸಾಗಿತ್ತು. ಇಲ್ಲಿನ ಹವಾಮಾನವೂ ಅದಕ್ಕೆ ಕಾರಣವಿದ್ದೀತು. ಇಂತಹ ಬ್ರಿಟೀಷರಿಗೆ ಆಗ ಕಂಡಿದ್ದು ಮೊಘಲರು ಆಳಿದ ದೆಹಲಿ. ದೆಹಲಿಯಿಂದ ಗಿರಿಧಾಮಗಳಿರುವ ಹಿಮಾಚಲ, ಕಾಶ್ಮೀರ ಮತ್ತಿತರ ಸುಂದರ ಜಾಗಗಳು ಹತ್ತಿರದಲ್ಲೇ ಇರುವುದರಿಂದ ಆಗಾಗ ವಾರಾಂತ್ಯ/ರಜೆಗೆ ಹೋಗಿ ಬರುವುದಕ್ಕೂ ದೆಹಲಿ ಪ್ರಶಸ್ತ ಎಂದು ಭಾವಿಸಿದ್ದರು. ಬೇಸಿಗೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕುಳಿತು ಆಡಳಿತ ನಡೆಸಲು ಯೋಜನೆ ಹಾಕಿಕೊಂಡಿದ್ದ ವೈಸ್‌ರಾಯ್‌ಗಳು, ದೆಹಲಿಯಲ್ಲಿ ಭವ್ಯವಾದ ಆಡಳಿತ ಕಟ್ಟಡವನ್ನು ನಿರ್ಮಾಣ ಮಾಡಲು ಯೋಜಿಸಿದ್ದರು. ಹೀಗೆ ಕೋಲ್ಕತ್ತಾದಿಂದ ಬಂದಿಳಿದ ಬ್ರಿಟೀಷರ ಕಣ್ಣಿಗೆ ಕಂಡಿದ್ದು ಮೊಘಲರು ಉಳಿಸಿಹೋದ ಕುರುಹುಗಳು. ಇಂತಹ ಪಾರಂಪರಿಕ ಐತಿಹಾಸಿಕ ಕಟ್ಟಡಗಳನ್ನು ಉಳಿಸಿಕೊಂಡು ದೆಹಲಿಯನ್ನು ತಮ್ಮ ರಾಜ್ಯಭಾರಕ್ಕೆ ಯೋಗ್ಯವಾಗುವಂತೆ ಮಾಡುವ ಒಂದಿಷ್ಟು ಅಧಿಕೃತ ಕಟ್ಟಡಗಳು ಬೇಕೆಂದು ಯೋಚಿಸಿದ ಬ್ರಿಟೀಷರಿಗೆ ಸಿಕ್ಕಿದ್ದು ಇದೇ ಎಡ್ವಿನ್ ಲುಟಿಯನ್ಸ್!

ಇಂಗ್ಲೀಷ್ ಸಾಂಪ್ರದಾಯಿಕ ಶೈಲಿಯ ಕಟ್ಟಡಗಳನ್ನು ಕಟ್ಟುವಲ್ಲಿ ಎಡ್ವಿನ್ ಆಗಲೇ ಮುಂಚೂಣಿಯಲ್ಲಿದ್ದರು. ಈಗಾಗಲೇ ಅಮೆರಿಕಾ, ಪ್ಯಾರಿಸ್‌ಗಳಲ್ಲಿ ಇರುವ ರಾಜಧಾನಿ ಕಟ್ಟಡಗಳಿಗೆ ಸ್ಪರ್ಧೆ ನೀಡುವಂತ ಕಟ್ಟಡವೊಂದರ ವಿನ್ಯಾಸಗೊಳಿಸುವ ಜವಾಬ್ದಾರಿಯನ್ನು ಲುಟಿಯನ್ಸ್ಗೆ ನೀಡಲಾಯಿತು. ಲುಟಿಯನ್ಸ್ ಈ ಹೊಣೆಯನ್ನು ಒಪ್ಪಿ ತಮ್ಮ ತಂಡದೊಂದಿಗೆ ಭಾರತಕ್ಕೆ ಬಂದಿಳಿದು, ದೆಹಲಿಯಲ್ಲಿ ಬೀಡುಬಿಟ್ಟರು. ರೈಸಿನಾ ಎಂಬ ಬೆಟ್ಟ ಹಾಗೂ ಅದರ ಪಕ್ಕದಲ್ಲೇ ಇದ್ದ ಒಂದು ಹಳ್ಳಿ ತಮ್ಮ ಕೆಲಸಕ್ಕೆ ಸೂಕ್ತ ಎಂದು ಭವ್ಯ ಕಟ್ಟಡವೊಂದರ ನೀಲ ನಕ್ಷೆ ರೆಡಿ ಮಾಡಿ ಲುಟಿಯನ್ಸ್ ತಂಡ ಬ್ರಿಟೀಷರನ್ನು ಭೇಟಿಯಾದರು. ಆರಂಭದಲ್ಲಿ ಲುಟಿಯನ್ಸ್ ಯುರೋಪಿಯನ್ ಶೈಲಿಯ ಕಟ್ಟಡಗಳ ವಿನ್ಯಾಸವನ್ನೇ ಯೋಚಿಸಿದರೂ, ಬ್ರಿಟೀಷರ ಒತ್ತಾಸೆಯಿಂದ ಇಡೀ ಭಾರತದಲ್ಲೊಮ್ಮೆ ಸುತ್ತು ಹಾಕಿ ಬಂದು ಭಾರತದ ದೇವಾಲಯ ವಾಸ್ತುಶಿಲ್ಪಗಳನ್ನೂ ಅಧ್ಯಯನ ಮಾಡಿದರು. ಆಗ ಕಂಡ ಅತ್ಯದ್ಭುತ ವಾಸ್ತುಶಿಲ್ಪದ ಪ್ರಭಾವ, ಅವರ ಮೇಲಾಗಿದ್ದೂ ಅಲ್ಲದೆ, ಅವರ ಕಲ್ಪನೆಯ ಕಟ್ಟಡದಲ್ಲಿ ಬಹಳಷ್ಟು ಮಾರ್ಪಾಡುಗಳಾಗಿ ಅದು ನವದೆಹಲಿಯ ಎಲ್ಲ ಕಟ್ಟಡಗಳಲ್ಲೂ ಅರಳಿ ನಿಂತವು.

ಲ್ಯುಟೆನ್ಸ್ ದೆಹಲಿಯ ಪ್ರಮುಖ ಆಕರ್ಷಣೆ ಸಂಸತ್ ಭವನ.

ಈಗಿನ ನವದೆಹಲಿಯೆಂಬ ಮಾಯಾನಗರಿಯಲ್ಲಿ ಲುಟಿಯನ್ಸ್ ಕಾಣಿಕೆ ಅಮೂಲ್ಯ. ಕೇವಲ ಭಾರತವಲ್ಲದೆ, ಹರ್ವರ್ಟ್ ಬೇಕರ್ ಕೂಡಾ ಈತನ ಸಹವರ್ತಿ. ಈ ಇಬ್ಬರಲ್ಲದೆ ಒಂದಿಡೀ ತಂಡ ಸುಮಾರು 10 ವರ್ಷ ಕೆಲಸ ಮಾಡಿ ನವದೆಹಲಿಯೆಂಬ ಬ್ರಿಟೀಷರ ಕಲ್ಪನೆಗೆ ರೂಪ ಕೊಟ್ಟರು. ಬರೋಡಾ ಹೌಸ್, ಹೈದರಾಬಾದ್ ಹೌಸ್, ಇಂಡಿಯಾ ಗೇಟ್, ಜೈಪುರ್ ಕಾಲಂ, ಜನಪಥ್, ನ್ಯಾಷನಲ್ ಆರ್ಖೈವ್ಸ್ ಆಫ್ ಇಂಡಿಯಾ, ಪಟಿಯಾಲ ಹೌಸ್, ರಾಜಪಥ, ರಾಷ್ಟ್ರಪತಿ ಭವನ ಲುಟಿಯನ್ಸ್ ಅವರ ಪ್ರಮುಖ ಕಾರ್ಯಗಳು.

ಈ ಎಡ್ವಿನ್ ಲುಟಿಯನ್ಸ್ ಇದಕ್ಕಾಗಿ ಭಾರತ ಪ್ರವಾಸದಲ್ಲಿದ್ದಾಗ ಮಧ್ಯಪ್ರದೇಶ ಗ್ವಾಲಿಯರ್‌ನಿಂದ ಸುಮಾರು ನಲವತ್ತು ಕಿಮೀ ದೂರದ ಮೊರೆನಾ ಜಿಲ್ಲೆಯ ಮಿತಾವಳಿ ಎಂಬ ಹಳ್ಳಿಯೊಂದರಲ್ಲಿರುವ ಚೌಸಟ್ ಯೋಗಿನಿ ಮಂದಿರವನ್ನೂ ನೋಡಿದ್ದರಂತೆ. ಇದರ ಆಕಾರ, ಅಪರೂಪದ ವಾಸ್ತುಶಿಲ್ಪವನ್ನು ಗಮನಿಸಿದ ಲುಟಿಯನ್ಸ್ ಇದನ್ನೇ ಸ್ಪೂರ್ತಿಯನ್ನಾಗಿಟ್ಟುಕೊಂಡು ಸಂಸತ್ ಭವನವನ್ನು ಕಟ್ಟಿಸಿದರು ಎಂಬ ಮಾತಿದೆ. ಈ ಮಾತಿಗೆ ಐತಿಹಾಸಿಕವಾಗಿ ಯಾವ ಆಧಾರಗಳು ಸಿಗುವುದಿಲ್ಲವಾದರೂ ಸಂಸತ್ ಭವನದ ಅಪರೂಪದ ವಿನ್ಯಾಸಕ್ಕೆ ಇದು ಪ್ರೇರಣೆ ಖಂಡಿತ ಆಗಿರಬಹುದು ಎಂದು ಈ ದೇವಾಲಯಕ್ಕೊಮ್ಮೆ ಭೇಟಿ ನೀಡಿದರೆಯಾರಿಗೂ ಅನಿಸದೆ ಇರದು. ಅಷ್ಟರ ಮಟ್ಟಿಗಿನ ಹೋಲಿಕೆಯಿದೆ.

ಸಾವಿರಾರು ಬಂಗಲೆಗಳಿರುವ ಸುಮಾರು 28 ಚದರ ಕಿಮೀ ವ್ಯಾಪ್ತಿಯ ಈ ಲ್ಯುಟಿಯನ್ಸ್ ಜೋನ್‌ನಲ್ಲಿ ಎಡ್ವಿನ್ ಲುಟಿಯನ್ಸ್ ಎಷ್ಟು ಬಂಗಲೆ ನಿರ್ಮಿಸಿರಬಹುದು ಎಂದರೆ ಅದಕ್ಕೆ ನಿಖರವಾದ ಆಧಾರಗಳಿಲ್ಲ. ರಾಷ್ಟ್ರಪತಿ ಭವನ ಎಸ್ಟೇಟ್‌ನ ನಾಲ್ಕು ಬಂಗಲೆಗಳನ್ನು ಲುಟಿಯನ್ಸ್ ಕಟ್ಟಿಸಿದರು ಎಂದು ಹೇಳಿದರೂ ಯಾವುದನ್ನೂ ಕಟ್ಟಿಸಿಲ್ಲ ಎಂಬ ಮಾತೂ ಇವೆ. ಈ ಬಗೆಗೆ ಸರಿಯಾದ ಐತಿಹಾಸಿಕ ಮಾಹಿತಿಗಳು ಸಿಗುವುದಿಲ್ಲವಾದರೂ, ಬಂಗಲೆಗಳ ನಿರ್ಮಾಣಕ್ಕೆ ಲುಟಿಯನ್ಸ್ ಕೈ ಹಾಕಿರಲಿಲ್ಲ. ಆತನ ಸಹವರ್ತಿ ಹರ್ವರ್ಟ್ ಬೇಕರ್ ಏಳು ಬಂಗಲೆಗಳನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಲುಟಿಯನ್ಸ್ ಜೊತೆಗೆ ಹರ್ಬರ್ಟ್ ಬೇಕರ್ ಸಚಿವಾಲಯದ ಉತ್ತರ ಹಾಗೂ ದಕ್ಷಿಣ ಭಾಗದ ಬ್ಲಾಕ್‌ಗಳು, ಕಿಂಗ್‌ಜಾರ್ಜ್ ಅವೆನ್ಯೂಗಳನ್ನು ನೋಡಿಕೊಂಡರೆ, ಇನ್ನೊಬ್ಬ ಸಹವರ್ತಿ ರಾಬರ್ಟ್ ಟೋರ್‌ರಸೆಲ್ ಎಂಬವರು ಕನೌಟ್ ಪ್ಲೇಸ್, ಜನಪಥ್‌ನ ಪೂರ್ವ ಹಾಗೂ ಪಶ್ಚಿಮದ ಭಾಗಗಳು, ತೀನ್ ಮೂರ್ತಿ ಹೌಸ್, ಸಫ್ದರ್‌ಜಂಗ್ ಏರ್‌ಪೋರ್ಟ್ ಹಾಗೂ ಹಲವು ಸರ್ಕಾರಿ ಬಂಗಲೆಗಳ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು ಎನ್ನಲಾಗಿದೆ. ಅಂದಿನ ವೈಸ್‌ರಾಯ್ ಹೌಸ್ ಆಗಿದ್ದ ಈಗಿನ ರಾಷ್ಟ್ರಪತಿ ಭವನ ರೈಸಿನಾ ಎಂಬ ಬೆಟ್ಟದ ಮೇಲೆ ಆಗ ಕಟ್ಟಿದ್ದಾಗಿದ್ದು, ಇದರಿಂದ ಇಂಡಿಯಾ ಗೇಟ್‌ಗೆ ಸಂಪರ್ಕ ನೀಡುವ ರಾಜಪಥ, ಸೌತ್ ಎಂಡ್ ರಸ್ತೆಯ ಮೂಲಕವಾಗಿ ಲಂಬವಾಗಿ ಕನ್ನೌಟ್ ಪ್ಲೇಸ್‌ಗೆ ಸಂಪರ್ಕ ಕಲ್ಪಿಸುವ ಜನಪಥ ಎಲ್ಲವೂ ಅಂದಿನ ಲುಟಿಯನ್ಸ್ ತಂಡದ ನೀಲ ನಕಾಶೆಯ ಫಲವೇ ಆಗಿದೆ.

ರಾಷ್ಟ್ರಪತಿ ಭವನ.

ಇವೆಲ್ಲ ಉಳ್ಳವರ ದೊಡ್ಡವರ ಮಾತಾಯಿತು. ಈ ಲುಟಿಯನ್ಸ್ ಎಂಬ ಅಸಲಿ ದಿಲ್ಲಿಯಲ್ಲಿ ಸಾಮಾನ್ಯರ ಕಥೆಯೂ ಇದೆ. ಅಂತಸ್ತು ಏನೇ ಇರಲಿ, ಈ ಲುಟಿಯನ್ಸ್ ಮಾಯೆಯೊಳಗೆ ಇಂಡಿಯಾ ಗೇಟ್ ಎಂಬ ಜನಸಾಮಾನ್ಯರ ತಾಣ ಇಂದಿಗೂ ಎಲ್ಲರಿಗೂ ನೋವ ಮರೆವ, ಮನಸು ಹಗುರಾಗಿಸುವ ಅಡ್ಡಾ. ಸಂಜೆಯ ತಂಪಿನಲ್ಲಿ ಸುಟ್ಟ ಜೋಳ ತಿನ್ನಲು, ಪ್ರೀತಿಸುವವರ ಜೊತೆಗೆ ಕೂತು ಐಸ್ ಕ್ರೀಂ ಮೆಲ್ಲಲು, ಬೈಟೂ ಚಹಾ ಹೀರಲು ಇದಲ್ಲದೆ ಇನ್ನೇನು ನೆನಪಾದೀತು! ಕೆಲವು ಜಾಗಗಳೇ ಹೀಗೆ. ಎಂದಿಗೂ ಅವುಗಳ ಆಕರ್ಷಣೆ ಮರೆಯಾಗದು. ಅವು ಯಾವತ್ತಿಗೂ ದಂತಕತೆಗಳೇ!

ದಿಲ್ಲಿಯೇಕೆ, ಹಳ್ಳಿಯಲ್ಲೂ, ಹೀಗೆ ತನ್ನ ಕಥೆಯನ್ನು ಬಿಚ್ಚಿಡುವ ಜಾಗಗಳಿರಬಹುದು. ಈ ಲುಟಿಯನ್ಸ್ ಕಥೆ ಕೇಳಿ ಪುಟ್ಟ ಗಲ್ಲಿಯೂ ತನ್ನೊಳಗೆ ಬಚ್ಚಿಟ್ಟ ಇಂತಹ ಕಥೆಗಳನ್ನು ಬಿಚ್ಚಿಡಲು ಈಗ ಮೆಲ್ಲನೆ ಮನಸ್ಸು ಮಾಡಬಹುದು!

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles