ಓಬಿಸಿ ವರ್ಗದಲ್ಲಿ ಹೊಸ ಶಕ್ತಿ ಉದಯ
-ಶೌರ್ಯ ಡೆಸ್ಕ್
ಒಂದು ಕೋಟಿಗೂ ಹೆಚ್ಷು ಕ್ಷತ್ರಿಯರು ಕರ್ನಾಟಕದ ಉದ್ದಗಲಕ್ಕೂ ಚದುರಿಹೋಗಿದ್ದು, ಸಂಖ್ಯಾಬಲದಲ್ಲಿ ಪ್ರಬಲರಾದ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗಟ್ಟು ಸಾಧಿಸಿ ಮುನ್ನುಗ್ಗೋಣ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕ್ಷತ್ರಿಯ ಒಕ್ಕೂಟ ಕಟ್ಟಿಕೊಂಡು ಕ್ಷತ್ರಿಯರು ಒಂದಾಗತೊಡಗಿರುವುದು ಕರ್ನಾಟಕದ ಓಬಿಸಿ ವರ್ಗದಲ್ಲಿ ಹೊಸ ಶಕ್ತಿಯ ಉದಯ ಎಂಬಂತೆ ತೋರತೊಡಗಿದೆ. ಯಾರೂ ಊಹಿಸದ ರೀತಿ ಕ್ಷತ್ರಿಯರು ಒಗ್ಗಟ್ಟಾಗಿದ್ದಾರೆ. ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಕರ್ನಾಟಕ ಕ್ಷತ್ರಿಯ ಒಕ್ಕೂಟ ಶಾಖೆಗಳು ಸ್ಥಾಪನೆಯಾಗಿವೆ. ಸಮುದಾಯ ನವಚೈತನ್ಯ ತುಂಬಿಕೊಂಡು ಸಂಘಟಿತವಾಗಿದೆ.

ಸ್ವಾತಂತ್ರ್ಯಕ್ಕೂ ಮುನ್ನವೇ ರಾಜಾಳ್ವಿಕೆಯ ಮೈಸೂರು ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಉದ್ಯೋಗದಲ್ಲಿ ಮೀಸಲಾತಿ ಮತ್ತು ಸಮಾನ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದವು. ಅಬ್ರಾಹ್ಮಣ ಚಳವಳಿ ನಡೆದು ಅದರ ಬಿಸಿ, ಜನಜಾಗೃತಿಯ ನಡುವೆಯೇ ವಕ್ಕಲಿಗರ ಸಂಘ, ವೀರಶೈವ ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದವು. ಬ್ರಿಟಿಷ್ ಆಡಳಿತದ ಪರಿಣಾಮ ಶೂದ್ರ ಸಮುದಾಯಗಳಿಗೂ ಶಿಕ್ಷಣ ದೊರೆತು 1900 ರ ವೇಳೆಗೆ ವಕ್ಕಲಿಗರು ಮತ್ತು ಲಿಂಗಾಯತ ಸಮುದಾಯದ ಉನ್ನತ ಶಿಕ್ಷಣ ಪಡೆದ ಒಂದು ಯುವಪೀಳಿಗೆ ಉದ್ಯೋಗಕ್ಕಾಗಿ ಹಂಬಲಿಸತೊಡಗಿತ್ತು. ಅಲ್ಲಿಯವರೆಗೂ ಆಡಳಿತದಲ್ಲಿ ಕೆಳಗಿನಿಂದ ಮೇಲಿನವರಿಗೂ ಒಂದೇ ಸಮುದಾಯದ ಪ್ರಾಬಲ್ಯವಿತ್ತು. ಅದನ್ನು ಪ್ರಶ್ನಿಸಿ ಉದ್ಯೋಗದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಯಿತು. ಮಿಲ್ಲರ್ ಕಮಿಟಿ ರಚನೆಯಾಗಿ ಮುಂದೆ ಹಿಂದುಳಿದ ಸಮುದಾಯಗಳಿಗೆ ಮೈಸೂರು ಮಹಾರಾಜರು ಪ್ರಾತಿನಿಧ್ಯ ಕೊಟ್ಟರು. ಅದರ ಫಲವಾಗಿ ಆಡಳಿತದಲ್ಲಿ ನಿಧಾನವಾಗಿ ವಕ್ಕಲಿಗ, ಲಿಂಗಾಯತ, ಇತರೆ ಹಿಂದುಳಿದ ವರ್ಗಗಳು ಪಾಲು ಪಡೆದವು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನಬದ್ದವಾಗಿಯೇ ಮೀಸಲಾತಿ ಸೇರಿ ಎಲ್ಲಾ ಹಕ್ಕುಗಳನ್ನೂ ನೀಡಲಾಯಿತು.
ಮುಂದೆ ಮಂಡಲ್ ವರದಿ ಮೂಲಕ ಎಲ್ಲಾ ಹಿಂದುಳಿದ ಸಮುದಾಯಗಳಿಗೆ ಸರ್ಕಾರಿ ಸವಲತ್ತು, ಪ್ರಾತಿನಿಧ್ಯಗಳು ದೊರೆತವು. ಪ್ರಬಲ ಸಮುದಾಯಗಳು ಮುಂದೆ ತಮ್ಮ ಒಗ್ಗಟ್ಟು, ಸಂಘಟನಾತ್ಮಕವಾಗಿ ಬಲಿಷ್ಠಗೊಂಡು ತಮಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಪಡೆದುಕೊಂಡವು. ಆದರೆ ಅನೇಕ ಹಿಂದುಳಿದ ಸಮುದಾಯಗಳು ಇಂದಿಗೂ ಮುಖ್ಯವಾಹಿನಿಯಿಂದ ದೂರ ಉಳಿದಿವೆ. ಅಂತಹ ಸಮುದಾಯಗಳ ಪೈಕಿ ಕಣ್ಣಿಗೆ ಎದ್ದು ಕಾಣುವುದು ಕ್ಷತ್ರಿಯ ಸಮುದಾಯ.

ರಾಜ್ಯದಲ್ಲಿ ಈಗ ಎಲ್ಲಾ ರಂಗಗಳಲ್ಲೂ ಪ್ರಬಲವೆನಿಸಿಕೊಂಡ ಸಮುದಾಯಗಳಿಗೆ ಸರಿಸಮನಾಗಿ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಕ್ಷತ್ರಿಯರು ಸಂಘಟಿತರಾಗದೇ ಉಳಿದಿದ್ದರಿಂದ 70 ವರ್ಷಗಳಲ್ಲಿ ಕ್ಷತ್ರಿಯ ಸಮಾಜ ತೀವ್ರ ನಷ್ಟ ಅನುಭವಿಸಿತು. ಯಾವ ಕ್ಷತ್ರಿಯರು ಸ್ವಾತಂತ್ರ್ಯ ಪೂರ್ವ,
ಕ್ರಿಸ್ತಪೂರ್ವದಿಂದಲೂ ಭರತ ಭೂಮಿಯಲ್ಲಿ ರಾಜ್ಯ ಕಟ್ಟಿ ಆಳ್ವಿಕೆ ಮಾಡುತ್ತಾ, ದೇಶ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡುತ್ತ, ಪ್ರಜೆಗಳ ರಕ್ಷಣೆಯೇ ಪರಮ ಧ್ಯೇಯವನ್ನಾಗಿ ಮಾಡಿಕೊಂಡು ತ್ಯಾಗ, ಬಲಿದಾನಗಳ ಮೂಲಕ ಭಾರತದ ಮನುಕುಲ ಕೋಟಿಯ ಉನ್ನತಿಗೆ ಶ್ರಮಿಸಿದ್ದರು ಅದೇ ಕ್ಷತ್ರಿಯರು ದೇಶಕ್ಕೆ ಸ್ವಾತಂತ್ರ್ಯ ದೊರೆತು ಪ್ರಜಾಪ್ರಭುತ್ವ ಜಾರಿಗೆ ಬಂದ ನಂತರ ಸಮಾಜದ ಮುಖ್ಯವಾಹಿನಿಯಿಂದ ಹಿಂದೆ ಉಳಿದರು. ಪ್ರಜೆಗಳೇ ಪ್ರಭುಗಳಾದ ನಂತರ ಸಾಮಾಜಿಕ ನ್ಯಾಯಕ್ಕನುಗುಣವಾಗಿ ಸರ್ಕಾರ ವ್ಯವಸ್ಥೆಯಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದರು. ಒಳಪಂಗಡಗಳಾಗಿ ಹರಿದು ಹಂಚಿ ಹೋದರು. ರಾಜ್ಯಗಳನ್ನು ಆಳುತ್ತಿದ್ದ ಕೆಲ ರಾಜಮನೆತನಗಳನ್ನು ಹೊರತುಪಡಿಸಿ ಇತರೆ ಕ್ಷತ್ರಿಯರು ಸರ್ಕಾರದ ವ್ಯವಸ್ಥೆಯಲ್ಲಿ ಈಜಲಾಗದೇ ಹಿಂದೆಬಿದ್ದರು. ಓಬಿಸಿ ಪಟ್ಟಿಯಲ್ಲಿ ಅತಿ ಹಿಂದುಳಿದವರು ಎಂಬ ಹಣೆಪಟ್ಟಿ ಕಟ್ಟಿಕೊಂಡರು. ಎಲ್ಲವೂ ಇದ್ದು ಇಲ್ಲದಂತಾದರು.

ಈಗ ಕ್ಷತ್ರಿಯರು ಅಶ್ಚರ್ಯಕರ ರೀತಿಯಲ್ಲಿ ಸದ್ದಿಲ್ಲದೆ ಒಂದಾಗತೊಡಗಿದ್ದಾರೆ. ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಕ್ಷತ್ರಿಯರು ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪ್ರಮುಖ, ಬಲಾಢ್ಯ ಸಮುದಾಯಗಳು ಸೆಟೆದು ನಿಂತಾಗಲೆಲ್ಲ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಈಗ ಕ್ಷತ್ರಿಯರು ತಮ್ಮ ರಾಜಕೀಯ, ಸಾಮಾಜಿಕ ಹಕ್ಕುಗಳಿಗಾಗಿ ಸೆಟೆದುನಿಂತಿದ್ದಾರೆ.
ಓಬಿಸಿ ವರ್ಗದಲ್ಲಿ ಹೊಸ ಶಕ್ತಿ ಉದಯ
ಕರ್ನಾಟಕದಲ್ಲಿ ಕ್ಷತ್ರಿಯರು ಜನಸಂಖ್ಯೆಯಲ್ಲಿ ಬಲಿಷ್ಟವಾಗಿದ್ದಾರೆ. ಆದರೆ ಕ್ಷತ್ರಿಯ ಒಳಪಂಗಡಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರಿಂದ ಮತ್ತು ಆಳುವವರು ಆ ಸಮುದಾಯಗಳನ್ನು ಪ್ರತ್ಯೇಕವಾಗಿಯೇ ಗುರುತಿಸಿ ವಿಭಜಿಸಿದ್ದರಿಂದ 1 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದರೂ ಗಮನ ಸೆಳೆಯಲಿಲ್ಲ. ಈಗಲೂ ಇಷ್ಟು ಜನಸಂಖ್ಯೆ ಇದೆ ಎಂದರೇ ಅದನ್ನು ಜಾಣತನದಿಂದ ಅಲ್ಲಗಳೆಯುವವರೇ ಹೆಚ್ಚು. ಇಂತಹ ದೊಡ್ಡ ಸಮುದಾಯ ಒಂದಾದರೆ ನಮಗೂ ಕಷ್ಟ ಎಂಬ ಕಾರಣಕ್ಕೆ ಕೆಲ ಪ್ರಬಲ ಸಮುದಾಯಗಳು ಕ್ಷತ್ರಿಯರು ಒಗ್ಗಟ್ಟನ್ನು ಒಪ್ಪಿ, ಅವರೆಲ್ಲಾ ಒಂದೇ ಎಂಬ ಭಾವನೆ ವ್ಯಕ್ತಪಡಿಸುವುದೇ ಇಲ್ಲ. ಆದರೆ ಕ್ಷತ್ರಿಯ ಒಳಪಂಗಡಗಳು 38 ಕ್ಕೂ ಹೆಚ್ಚು ಉಪಜಾತಿಗಳಡಿ ಹಂಚಿಹೋಗಿದ್ದು ಸತ್ಯ. ಈ ಎಲ್ಲಾ ಸಮುದಾಯಗಳು ಈಗ ಒಗ್ಗೂಡಿವೆ.

“ಕ್ಷತ್ರಿಯರಾದ ನಾವೆಲ್ಲರೂ ಒಂದೇ ಆದರೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವುದೇ ನಮಗೆ ಕಂಟಕವಾಗಿದೆ. ರಾಜ್ಯದಲ್ಲಿ ಎಲ್ಲಾ ರಂಗಗಳಲ್ಲೂ ಸಮುದಾಯದ ಪ್ರಾಬಲ್ಯ ಕ್ಷೀಣಿಸಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಸಮುದಾಯ ಸಶಕ್ತವಾಗಿದ್ದರೂ ಕರ್ನಾಟಕದಲ್ಲಿ ನಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಆಯಾ ಸಮುದಾಯಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಎಲ್ಲರೂ ಅಧಿಕಾರ, ಅನುದಾನ, ಅವಕಾಶ ಹಾಗೂ ಸವಲತ್ತುಗಳು ಪಡೆಯುತ್ತಿದ್ದಾರೆ. ಆದರೆ ನಾವುಗಳು ದೊಡ್ಡ ಸಂಖ್ಯೆಯಲ್ಲಿದ್ದರೂ ಪ್ರಾತಿನಿಧ್ಯ, ನ್ಯಾಯಯುತ ಪಾಲಿನಿಂದ ವಂಚಿತರಾಗಿದ್ದೇವೆ” ಎಂಬ ಸತ್ಯವನ್ನು ಸಮುದಾಯ ಅರಿತುಕೊಂಡಿದೆ.
ಅನ್ಯ ಸಮುದಾಯಗಳಂತೆಯೇ ನಾವು ಕೂಡಾ ಎಲ್ಲಾ ರಂಗಗಳಲ್ಲಿಯೂ ಮುಖ್ಯವಾಹಿನಿಗೆ ಬರಲು ಒಗ್ಗಟ್ಟು ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಂಡಿದೆ.
“ಭಾರತದ ಇತಿಹಾಸದ ಪ್ರತಿರೂಪವೇ ಕ್ಷತ್ರಿಯರು, ಕ್ಷತ್ರಿಯರ ಪ್ರತಿರೂಪವೇ ಭಾರತದ ಇತಿಹಾಸ. ಹೀಗಿರುವಾಗ ಸಾವಿರಾರು ವರ್ಷಗಳ ಪರಂಪರೆ ಮತ್ತು ಇತಿಹಾಸವನ್ನು ಹೊಂದಿರುವ ಕ್ಷತ್ರಿಯರು ಇಂದು ಹತ್ತು ಹಲವು ಉಪಜಾತಿಗಳಲ್ಲಿ ಹರಿದು ಹಂಚಿಹೋಗಿದ್ದೇವೆ. ನಿಸ್ವಾರ್ಥತತೆ, ಸ್ವಾಭಿಮಾನ ಮತ್ತು ಉದಾತ್ತ ಗುಣವೇ ನಮ್ಮನ್ನು ಸಂಘಟಿತವಾಗದಂತೆ ಕಟ್ಟಿಹಾಕಿ ಬಿಟ್ಟಿದೆ. ಅನ್ಯ ಸಮುದಾಯಗಳು ಅಧಿಕಾರ, ಅನುದಾನ ಮತ್ತು ಸಕಲ ಸವಲತ್ತು ಗಳನ್ನು ಹೋರಾಟ, ಶಕ್ತಿ ಪ್ರದರ್ಶನದ ಮೂಲಕವೇ ಪಡೆದು ಪ್ರಬಲರಾಗುತ್ತ ಸಾಗುತ್ತಿರುವಾಗ ಕ್ಷತ್ರಿಯರಾದ ನಾವು ನಮ್ಮ ಅಸ್ಥಿತ್ವದ ಉಳಿವಿಗಾಗಿಯೂ ಹೋರಾಟ ಮಾಡಲಾಗದ ದುಸ್ಥಿತಿಯಲ್ಲಿರುವುದು ಶೋಚನೀಯ ಸಂಗತಿಯಾಗಿದೆ. ಹೋರಾಟ ಎನ್ನುವುದು ಕ್ಷತ್ರಿಯರ ರಕ್ತದ ಕಣಕಣದಲ್ಲಿ ತುಂಬಿದ್ದರೂ ಸಹ ನಾವು ನಮಗಾಗಿ ಹೋರಾಟ ಮಾಡದೇ ನಿರ್ಲಿಪ್ತರಾಗಿರುವುದು ಹುಟ್ಟಿದ ಕುಲಕ್ಕೆ ಹಾಗೂ ನಮ್ಮ ಮುಂದಿನ ಪೀಳಿಗೆಗೆ ಮಾಡುತ್ತಿರುವ ದ್ರೋಹವಾಗಿದೆ” ಎಂದು ಕ್ಷತ್ರಿಯ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನೂ ಬಡಿದೆಬ್ಬಿಸುವ ಕೆಲಸ ಸಮಾಜದ ಮುಖಂಡರಿಂದ ಆಗಿದೆ.
ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಕ್ರಾಂತಿ
ಒಂದು ಕೋಟಿಗೂ ಹೆಚ್ಷು ಕ್ಷತ್ರಿಯರು ಕರ್ನಾಟಕದ ಉದ್ದಗಲಕ್ಕೂ ಚದುರಿಹೋಗಿದ್ದು, ಸಂಖ್ಯಾಬಲದಲ್ಲಿ ಪ್ರಬಲರಾದ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗಟ್ಟು ಸಾಧಿಸಿ ಮುನ್ನುಗ್ಗೋಣ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕ್ಷತ್ರಿಯ ಒಕ್ಕೂಟ ಕಟ್ಟಿಕೊಂಡು ಕ್ಷತ್ರಿಯರು ಒಂದಾಗತೊಡಗಿರುವುದು ಕರ್ನಾಟಕದ ಓಬಿಸಿ ವರ್ಗದಲ್ಲಿ ಹೊಸ ಶಕ್ತಿಯ ಉದಯ ಎಂಬಂತೆ ತೋರತೊಡಗಿದೆ. ಯಾರೂ ಊಹಿಸದ ರೀತಿ ಕ್ಷತ್ರಿಯರು ಒಗ್ಗಟ್ಟಾಗಿದ್ದಾರೆ. ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಕರ್ನಾಟಕ ಕ್ಷತ್ರಿಯ ಒಕ್ಕೂಟ ಶಾಖೆಗಳು ಸ್ಥಾಪನೆಯಾಗಿವೆ. ಸಮುದಾಯ ನವಚೈತನ್ಯ ತುಂಬಿಕೊಂಡು ಸಂಘಟಿತವಾಗಿದೆ.

ರಾಜಕೀಯ ಪಾಲು ಪಡೆಯಲು ಹೋರಾಟ
ದೊಡ್ಡಮಟ್ಟದ ಜನಸಂಖ್ಯೆ ಇದ್ದರೂ ಸೂಕ್ತ ರಾಜಕೀಯ ಪಾಲು ದೊರೆತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತ ಬಂದಿವೆ ಎಂಬ ಭಾವನೆ ಕ್ಷತ್ರಿಯ ಸಮುದಾಯದಲ್ಲಿದ್ದು ಇದೇ ಭಾವನೆಯೇ ಒಗ್ಗಟ್ಟಿನ ಶಕ್ತಿಪ್ರದರ್ಶನಕ್ಕೆ ಕಾರಣವಾಗಿದೆ. ಮರಾಠ, ಅರಸು, ವಹ್ನಿಕುಲ, ಅಗ್ನಿಕುಲ ತಿಗಳ, ಭಾವಸಾರ, ರಜಪೂತ, ಸೋಮವಂಶ ಕ್ಷತ್ರಿಯ, ರಾಜು ಕ್ಷತ್ರಿಯ ಹೀಗೆ ಒಳಪಂಗಡಗಳು ಒಂದಾಗಿವೆ. ಇತ್ತೀಚೆಗಷ್ಟೇ ಎಲ್ಲಾ ಒಳಪಂಗಡಗಳ ಮುಖಂಡರು ಸಭೆಗಳನ್ನು ನಡೆಸಿ ಎಲ್ಲೆಲ್ಲಿ ಸಮುದಾಯ ಪ್ರಬಲವಾಗಿದೆಯೋ ಆ ವಿಧಾನ ಸಭಾ ಕ್ಷೇತ್ರಗಳಲೆಲ್ಲಾ ಟಿಕೆಟ್ ಪಡೆಯಲು ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹಾಕುವ ನಿರ್ಧಾರಕ್ಕೆ ಬಂದಿರುವುದಲ್ಲದೆ ನಮ್ಮನ್ನು ನಿರ್ಲಕ್ಷ್ಯ ಮಾಡಿದಾರೆ ಏನಾಗುತ್ತದೆ ಎಂಬುದನ್ನು ತೋರಿಸಿಕೊಡಬೇಕು ಎಂಬ ನಿರ್ಣಯವನ್ನೂ ಕೈಗೊಂಡಿದ್ದಾರೆ. ಜೊತೆಗೆ ಸಮುದಾಯಕ್ಕೆ ಸಲ್ಲಬೇಕಾದ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ ಹಕ್ಕುಗಳನ್ನು ಪಡೆದೇ ತೀರಬೇಕೆಂಬ ಪಣ ತೊಟ್ಟಿದ್ದಾರೆ.

ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜು
ಕ್ಷತ್ರಿಯ ಸಮುದಾಯ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ. ಜನವರಿ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕ್ಷತ್ರಿಯ ಸಮಾವೇಶ ನಡೆಸಿ ರಾಷ್ಟ್ರ ನಾಯಕರನ್ನು ಕರೆಸಿ ಹಕ್ಕೊತ್ತಾಯಗಳನ್ನು ಮಂಡಿಸಲು ಸಿದ್ಧತೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಪ್ರಬಲರಾಗಿರುವ ತಿಗಳ ಸಮುದಾಯ, ಮುಂಬೈ ಕರ್ನಾಟಕ, ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಮರಾಠರು ಕ್ಷತ್ರಿಯ ಒಕ್ಕೂಟದ ಅಡಿ ಗುರುತಿಸಿಕೊಂಡಿರುವುದರಿಂದ ರಾಜಧಾನಿಯಲ್ಲಿ ನಡೆಯುವ ಕ್ಷತ್ರಿಯರ ಶಕ್ತಿ ಪ್ರದರ್ಶನ ರಾಜ್ಯಕ್ಕೆ ಹೊಸದೊಂದು ಸಂದೇಶ ನೀಡುವುದು ಖಚಿತವಾಗಿದೆ.

ಕ್ಷತ್ರಿಯರನ್ನು ಒಗ್ಗೂಡಿಸುವ ಪ್ರಯತ್ನ ಯಶಸ್ವಿ
ಅನೇಕ ವರ್ಷಗಳಿಂದ ಸಮಸ್ತ ಕ್ಷತ್ರಿಯ ಒಳಪಂಗಡಗಳನ್ನು ಒಗ್ಗೂಡಿಸುವ ಪ್ರಯತ್ನಗಳು ನಡೆಯುತ್ತ ಬರುತ್ತಿದ್ದವು. ಆದರೆ ಯಶಸ್ವಿಯಾಗಿರಲಿಲ್ಲ. ಉದ್ಯಮಿ ಹರಿಖೋಡೆ ಅವರು ಇಂತದೊಂದು ಪ್ರಯತ್ನ ಮಾಡಿದ್ದರು. ಆ ಪ್ರಯತ್ನದಲ್ಲಿರುವಾಗಲೇ ಅವರು ಇಹಲೋಕ ತ್ಯಜಿಸಿದರು.
ದೇವರಾಜ ಅರಸು ಅವರ ನಂತರ ರಾಜಕೀಯವಾಗಿ ದುರ್ಬಲವಾದ ಕ್ಷತ್ರಿಯ ಸಮುದಾಯ ಮತ್ತೆ ಮೇಲೇಳಲಿಲ್ಲ ಎಂಬ ಕೊರಗು ಕ್ಷತ್ರಿಯ ಹಿರಿಯರಲ್ಲಿತ್ತು. ಅಷ್ಟರ ಮಟ್ಟಿಗೆ ರಾಜಕೀಯ ಪಕ್ಷಗಳು ಇನ್ನಿಲ್ಲದಂತೆ ನಿರ್ಲಕ್ಷ್ಯಿಸಿಬಿಟ್ಟವು. ಇದನ್ನೆಲ್ಲ ಸೂಕ್ಷ್ಮವಾಗಿ ಅವಲೋಕಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸ್ಥಾಪಿಸಿದ ಉದಯ್ ಸಿಂಗ್ ಅವರು ಎಲ್ಲಾ ಒಳಪಂಗಡಗಳನ್ನು ಒಂದುಗೂಡಿಸಿ ಆರಂಭಿಕ ಜಯ ಪಡೆದುಕೊಂಡಿದ್ದಾರೆ. ಸಂಘಟನೆಯ ನಂತರ ಹೋರಾಟಕ್ಕೆ ಇಳಿದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ನಮ್ಮ ಶಕ್ತಿ ತೋರಿಸಬೇಕು. ನಮ್ಮ ಸ್ವಾಭಿಮಾನ, ಸಜ್ಜನಿಕೆ ನಮ್ಮ ದೌರ್ಬಲ್ಯವಲ್ಲ. ನಾವು ಸಂಘಟಿತರಾಗಿದ್ದೇವೆ ಎಂಬುದನ್ನು ನಾಡಿಗೆ ಸಾರಬೇಕು ಎಂದು ಸಮಸ್ತ ಕ್ಷತ್ರಿಯ ನಾಯಕರೊಂದಿಗೆ ಮಹಾ ಯಜ್ಞದಂತಹ ಸಮಾವೇಶಕ್ಕೆ ಮುಂದಾಗಿದ್ದಾರೆ.