-ಶೌರ್ಯ ಡೆಸ್ಕ್
ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿರುವ “ಬೃಹತ್ ಕ್ಷತ್ರಿಯ ಸಮಾವೇಶ” ದಲ್ಲಿ ಕ್ಷತ್ರಿಯರ ವಿರಾಟ್ ಶಕ್ತಿ ಪ್ರದರ್ಶನ ನಡೆಯಲಿದ್ದು ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಕ್ಷತ್ರಿಯ ಸಮುದಾಯದ ಜನ ರಾಜಧಾನಿ ಬೆಂಗಳೂರಿಗೆ ಹರಿದುಬರಲಿದ್ದಾರೆ.

ರಾಜ್ಯದ ಕ್ಷತ್ರಿಯ ಸಮುದಾಯ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು ನಾಳೆ ಬೆಳಿಗ್ಗೆ 10 ಗಂಟೆಗೆ “ಬೃಹತ್ ಕ್ಷತ್ರಿಯ ಸಮಾವೇಶ” ನಡೆಯಲಿದೆ. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಏರ್ಪಡಿಸಿರುವ ಈ ಸಮಾವೇಶದಲ್ಲಿ ಕ್ಷತ್ರಿಯರ ವಿರಾಟ್ ಶಕ್ತಿ ಪ್ರದರ್ಶನ ನಡೆಯಲಿದ್ದು ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಕ್ಷತ್ರಿಯ ಸಮುದಾಯದ ಜನ ರಾಜಧಾನಿ ಬೆಂಗಳೂರಿಗೆ ಹರಿದುಬರಲಿದ್ದಾರೆ.
ಅನ್ಯ ಸಮುದಾಯಗಳು ಅಧಿಕಾರ, ಅನುದಾನ ಮತ್ತು ಸಕಲ ಸವಲತ್ತುಗಳನ್ನು ಹೋರಾಟ, ಶಕ್ತಿ ಪ್ರದರ್ಶನದ ಮೂಲಕವೇ ಪಡೆದು ಪ್ರಬಲರಾಗುತ್ತ ಸಾಗುತ್ತಿರುವುದರಿಂದ ಅದೇ ಹಾದಿಯಲ್ಲಿ ಸಾಗಿ ಸರ್ಕಾರ, ರಾಜಕೀಯ ಪಕ್ಷಗಳ ಮೇಲೆ ಒತ್ತಡ ಹೇರಲು ಕ್ಷತ್ರಿಯ ಸಮುದಾಯ ಮುಂದಾಗಿದೆ. ಚುನಾವಣೆ ಸಮೀಪದಲ್ಲಿ ನಡೆಯುತ್ತಿರುವ ಈ ಸಮಾವೇಶ ಕ್ಷತ್ರಿಯ ಸಮುದಾಯದತ್ತ ಎಲ್ಲಾ ರಾಜಕೀಯ ಪಕ್ಷಗಳು ತಿರುಗಿ ನೋಡುವಂತೆ ಮಾಡಲಿದೆ.
ಒಂದು ಕೋಟಿಗೂ ಹೆಚ್ಚು ಕ್ಷತ್ರಿಯರು ಕರ್ನಾಟಕದ ಉದ್ದಗಲಕ್ಕೂ ಚದುರಿಹೋಗಿದ್ದು, ಸಂಖ್ಯಾಬಲದಲ್ಲಿ ಪ್ರಬಲರಾದ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗಟ್ಟು ಸಾಧಿಸಿ ಮುನ್ನುಗ್ಗಬೇಕಾದ ಕಾಲ ಈಗ ಕೂಡಿ ಬಂದಿದೆ ಎಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಉದಯ್ ಸಿಂಗ್ ತಿಳಿಸಿದ್ದಾರೆ.

2018 ರಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟ ಸ್ಥಾಪಿಸಿ ಸಮಸ್ತ ಕ್ಷತ್ರಿಯರನ್ನು ಒಂದುಗೂಡಿಸುವ ಪಣತೊಟ್ಟು, ಅದರಂತೆ ನಮ್ಮ ಉತ್ಸಾಹಿ ತರುಣರು, ಹಿರಿಯರ ತಂಡದೊಂದಿಗೆ ಶ್ರಮಿಸಿ ಒಕ್ಕೂಟವನ್ನು ಮರಾಠರು, ಅರಸು, ಅಗ್ನಿಕುಲ, ವಹ್ನಿಕುಲ ತಿಗಳ ಕ್ಷತ್ರಿಯ, ಭಾವಸಾರ ಕ್ಷತ್ರಿಯ, ರಾಜು ಕ್ಷತ್ರಿಯ, ಸೋಮವಂಶ ಸಹಸ್ರಾರ್ಜುನ, ರಜಪೂತ ಕ್ಷತ್ರಿಯ ಸೇರಿ 38 ಕ್ಷತ್ರಿಯ ಒಳಪಂಗಡಗಳ ಏಕೈಕ ಪ್ರಾತಿನಿಧಿಕ ಸಂಘಟನೆ ಮಾಡುವಲ್ಲಿ, ಇಡೀ ಸಮುದಾಯವನ್ನು ಒಂದೇ ವೇದಿಕೆಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಆರ್ಥಿಕ, ಶೈಕ್ಷಣಿಕ ಹಾಗೂ ಬಹುಮುಖ್ಯವಾಗಿ ರಾಜಕೀಯ ಪಾಲು ಪಡೆದುಕೊಳ್ಳಲು ನಾವು ಸನ್ನದ್ಧರಾಗಿದ್ದೇವೆ.
ಕ್ಷತ್ರಿಯ ಸಮುದಾಯದ ಪ್ರಮುಖವಾದ ಬೇಡಿಕೆಗಳ ಬಗ್ಗೆ ನಮ್ಮ ಎಲ್ಲಾ ಹಿರಿಯರೊಂದಿಗೆ ಸಮಾಲೋಚಿಸಿ ಹಕ್ಕೊತ್ತಾಯ ಮಾಡಲು ನಿರ್ಧರಿಸಿದ್ದು “ಬೃಹತ್ ಕ್ಷತ್ರಿಯ ಸಮಾವೇಶ” ದಲ್ಲಿ ಮಂಡಿಸಲಿದ್ದೇವೆ ಎಂದು ಉದಯ್ ಸಿಂಗ್ ತಿಳಿಸಿದ್ದಾರೆ.
ಬೃಹತ್ ಸಮಾವೇಶದಲ್ಲಿ ಕ್ಷತ್ರಿಯ ಸಮುದಾಯದ ಎಲ್ಲಾ ಗುರುಪೀಠಗಳ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಎಂಟಿಬಿ ನಾಗರಾಜ್, ಬೈರತಿ ಬಸವರಾಜ, ಪ್ರಭು ಚವ್ಹಾಣ್, ಸಂಸದ ಪಿ.ಸಿ. ಮೋಹನ್, ಶಾಸಕ ಬಂಡೆಪ್ಪ ಕಾಶೆಂಪೂರ್, ಮಾಜಿ ಸಚಿವರಾದ ಕೃಷ್ಣ ಪಾಲೇಮಾರ್, ಮಾಲೀಕಯ್ಯ ಗುತ್ತೇದಾರ್, ಬೈಂದೂರು ಮಾಜಿ ಶಾಸಕ ಲಕ್ಷ್ಮಿ ನಾರಾಯಣ ಮತ್ತಿತರರು ಭಾಗಿಯಾಗಲಿದ್ದಾರೆ. ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀ ಉದಯ್ ಸಿಂಗ್ ಅವರು ಸಮಾವೇಶದ ನೇತೃತ್ವ ವಹಿಸಲಿದ್ದಾರೆ.