ರಾಜ್ಯ ರಾಜಕಾರಣದಲ್ಲಿ ಹೊಸ ಜಾತಿ ಸಮೀಕರಣ
-ನೀರಕಲ್ಲು ಶಿವಕುಮಾರ್
ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳ ನಡುವಣ ಸಂಬಂಧ ಇಂದು-ನಿನ್ನೆಯದಲ್ಲ. ಒಂದು ಸಾಂಪ್ರದಾಯಿಕ ಅರ್ಥದಲ್ಲಿ ಭಾರತೀಯ ಸಮಾಜದಲ್ಲಿ ಜಾತಿಯ ಹಿಡಿತ ಕಡಿಮೆಯಾಗುತ್ತಿರುವಂತೆ ಕಂಡು ಬಂದರೂ ಸಾರ್ವತ್ರಿಕ ಚುನಾವಣೆಗಳು, ಅನೇಕ ಜಾತಿಗಳು ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ಹೊಸ ಹೊಸ ಅವಕಾಶಗಳನ್ನು ಕಲ್ಪಿಸಿವೆ. ಹೀಗಿದ್ದಾಗ್ಯೂ ಈ ನಾಡಿನ ಪ್ರಬಲ ಕ್ಷತ್ರಿಯ ಸಮುದಾಯ ತಮ್ಮ ಒಗ್ಗಟ್ಟಿನ ಕಡೆ ಗಮನವನ್ನೇ ಕೊಡದೆ, ಇತರೆ ಪ್ರಬಲ ಜಾತಿಗಳಂತೆ ರಾಜಕಾರಣ ನಿಯಂತ್ರಿಸುವುದಿರಲಿ, ಅಲ್ಲಿ ನೆಲೆ ಕಾಣಲೂ ವಿಫಲವಾಗಿತ್ತು. ಎಲ್ಲಾ ಹಕ್ಕುಗಳಿಂದ ವಂಚಿತವಾಗಿತ್ತು. ಈಗ ಆ ಸಮುದಾಯ ಕೊನೆಗೂ ಒಗ್ಗಟ್ಟಿನ ಅನಿವಾರ್ಯತೆಯನ್ನು ಅರಿತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯ ಸಮುದಾಯ ಒಂದಾಗುತ್ತಲೇ ಸಹಜವಾಗಿಯೇ ಈ ಶಕ್ತಿ ಚುನಾವಣೆಯಲ್ಲಿ ಎತ್ತ ತಿರುಗುತ್ತದೆ ಎಂಬ ಲೆಕ್ಕಾಚಾರಗಳೂ ರಾಜಕೀಯ ಪಡಸಾಲೆಗಳಲ್ಲಿ ಆರಂಭವಾಗಿದ್ದು ರಾಜಕೀಯ ಪಕ್ಷಗಳಲ್ಲಿ ಸಣ್ಣಗೆ ನಡುಕ ಆರಂಭವಾಗಿದೆ.

ರಾಜ್ಯದ ರಾಜಕಾರಣ ಮತ್ತೊಂದು ಹೊಸ ಭವಿಷ್ಯಕ್ಕೆ ಮುನ್ನುಡಿ ಬರೆಯುವ ವಿಧಾನಸಭೆ ಚುನಾವಣೆಯ ಕಡೆಗೆ ಹೆಜ್ಜೆ ಇಡುವ ಹೊತ್ತಿನೊಳಗೆ ರಾಜಕೀಯ ಸಮೀಕರಣವನ್ನೇ ಬದಲು ಮಾಡುವ ನಡೆಗಳು ಶುರುವಾಗಿವೆ. ಕಾಲುಚಾಚಿ ಕುಳಿತಿದ್ದವರು, ಮಲಗಿದ್ದವರು ದಿಗ್ಗನೆದ್ದು ಬೀದಿಯಲ್ಲಿ ಅಬ್ಬರಿಸುತ್ತಿದ್ದಾರೆ. ಎಲ್ಲಾ ಪ್ರಬಲ ಜಾತಿಗಳು ಮೀಸಲಾತಿ ಸೇರಿ ವಿವಿಧ ಬೇಡಿಕೆಗಳನ್ನು ಮುಂದೆ ಮಾಡಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರಲಾರಂಭಿಸಿವೆ.
ಕರ್ನಾಟಕದ ಸಮಕಾಲೀನ ರಾಜಕಾರಣ ತೆಗೆದುಕೊಳ್ಳುತ್ತಿರುವ ತಿರುವುಗಳು ಹಾಗೂ ಅವು ಕಳುಹಿಸುತ್ತಿರುವ ಸಂದೇಶಗಳು ಆಡಳಿತ ಹಿಡಿದವರನ್ನು ಮತ್ತು ಪ್ರತಿಪಕ್ಷಗಳನ್ನೂ ಅಲುಗಾಡಿಸುತ್ತಿರುವಂತಿದೆ.
ಇದರ ನಡುವೆ ಎಲ್ಲರೂ ಹುಬ್ಬೇರಿಸುವಂತೆ ಹೊಸ ಜನಶಕ್ತಿಯೊಂದು ರೂಪತಾಳತೊಡಗಿದ್ದು ಸಮುದಾಯವೊಂದು ದಶಕಗಳ ನಿದ್ರೆಯಿಂದ ಆಕಳಿಸಿ ಮೇಲೆದ್ದು ಮೈಕೊಡವಿಕೊಂಡಿದೆ. ಒಂದು ಕೋಟಿ ಜನಸಂಖ್ಯೆ ಇರುವ ಈ ಸಮುದಾಯ ಈ ಸಲದ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ನಿಕ್ಕಿಯಾಗಿದೆ. ಸಂಚಲನಕ್ಕೆ ಕಾರಣವಾಗಿರುವ ಈ ಸಮುದಾಯವೇ ಕ್ಷತ್ರಿಯ ಸಮುದಾಯ.

ವಿಶೇಷವಾಗಿ ಚುನಾವಣಾ ರಾಜಕೀಯದಲ್ಲಿ ಸಮೀಕರಣವನ್ನು ನಾವು ಬಹುಕಾಲದಿಂದ ಕಾಣುತ್ತಲೇ ಬಂದಿದ್ದೇವೆ. ರಾಜಕೀಯ ಸಮೀಕರಣದ ಮುಖ್ಯ ಲಕ್ಷಣವೆಂದರೆ ಒಂದು ಪ್ರಬಲ ಅಥವಾ ಪ್ರಬಲವಾಗಿದ್ದರೂ ಒಡೆದುಹೋದ ಗುಂಪು ಐಕ್ಯತೆಯ ಭಾವನೆಯನ್ನು ಬೆಳೆಸಿಕೊಂಡು ವಿರಾಟ್ ಶಕ್ತಿಯಾಗಿ ರೂಪ ತಾಳುವುದು. ಹೀಗಾದಾಗ ಹೊಸ ಸಮೀಕರಣವೂ ತನ್ನಿಂದ ತಾನೇ ರೂಪಗೊಳ್ಳುತ್ತದೆ. ಆ ಸಮೀಕರಣ ಸಿದ್ದಸೂತ್ರಗಳನ್ನು ಬುಡಮೇಲು ಮಾಡುತ್ತದೆ.
ಸಮಾಜದಲ್ಲಿ ಹಕ್ಕು, ಅಧಿಕಾರ ಪಡೆಯುವ ಸಾಮುದಾಯಿಕ ಹೋರಾಟಗಳೂ ಸಮೀಕರಣಗಳನ್ನು ಗಟ್ಟಿಗೊಳಿಸುತ್ತ ಹೋಗುತ್ತದೆ. ಒಂದು ಕಾಲಘಟ್ಟದಲ್ಲಿ ರಾಜಕೀಯ ಕ್ಷೇತ್ರದಲ್ಲಿ ವಿಷಯಾಧಾರಿತ ಅಥವಾ ತತ್ವಾಧಾರಿತ ಸಮೀಕರಣವನ್ನು ಕಾಣಲು ಸಾಧ್ಯವಿತ್ತಾದರೂ ಇತ್ತೀಚೆಗೆ ಸಮೀಕರಣ ಮುಖ್ಯವಾಗಿ ಅನುಕೂಲ ರಾಜಕಾರಣದ ಒಂದು ತಂತ್ರವಾಗಿ ರೂಪುಗೊಳ್ಳುತ್ತಿದೆ.
ಭಾರತೀಯ ಸಮಾಜದ ಸಂದರ್ಭದಲ್ಲಿ ಜಾತಿ ರಾಜಕೀಯ ಸಮೀಕರಣದ ಒಂದು ಪ್ರಬಲ ಆಧಾರವಾಗಿ ಹೊರ ಹೊಮ್ಮಿದ್ದು ಏಕಕಾಲದಲ್ಲಿ ಒಗ್ಗೂಡಿಸುವಿಕೆ ಮತ್ತು ಬೇರ್ಪಡಿಸುವಿಕೆಗಳೆರಡು ಪ್ರಕ್ರಿಯೆಗಳನ್ನೂ ಪ್ರಭಾವಿಸುತ್ತಿದೆ.
ಬರಬರುತ್ತಾ ಜಾತಿಯ ಹೆಸರಿನಲ್ಲಿ ಅಧಿಕಾರವನ್ನು ಅರಸುವವರು ಹಾಗೂ ಜಾತಿಯನ್ನು ಮುಂದಿಟ್ಟುಕೊಂಡು ಸ್ವಜಾತಿ ನಾಯಕರಿಗೆ ಬೆಂಬಲವನ್ನು ನೀಡುವವರು-ಈ ಎರಡು ಗುಂಪುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಬಹುಕಾಲ ಒಳಗೊಳಗೇ ನಡೆಯುತ್ತಿದ್ದ ಜಾತಿಕೇಂದ್ರಿತ ಸಂಧಾನಗಳು ಇಂದು ಸಾರ್ವಜನಿಕ ವಲಯವನ್ನು ತಲುಪಿ, ಅವುಗಳಲ್ಲಿ ಭಾಗಿಯಾಗಲು ಅನೇಕರಿಗೆ ಯಾವುದೇ ಮುಜುಗರಗಳು ಇದ್ದಂತೆ ಕಾಣುತ್ತಿಲ್ಲ. ತಮ್ಮನ್ನು ಯಾವುದೋ ಒಂದು ಜಾತಿಯ ಪ್ರತಿನಿಧಿಯಂತೆ ಗುರುತಿಸಿಕೊಳ್ಳುವ ಮಾತಿರಲಿ, ಮತದಾರರಿಗೂ ಜಾತಿಯ ಅಂಕಿತವನ್ನು ನೀಡಿ, ನೇರವಾಗಿಯೇ ಜಾತಿಯ ಆಚರಣೆಗೆ ಪ್ರಚೋದನೆಯನ್ನು ನೀಡುತ್ತಿದ್ದಾರೆ ನಮ್ಮ ಜನನಾಯಕರನೇಕರು.

ಇಂಥ ಪ್ರವೃತ್ತಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತಿರುವ ಮಠಮಾನ್ಯಗಳು, ಜಾತಿ ಸಂಘಟನೆಗಳು ಹಾಗೂ ಇತರ ಒತ್ತಡ ಗುಂಪುಗಳು ಈ ಸಮಾಜದಲ್ಲಿ ಜಾತಿಯ ಬೇರುಗಳನ್ನು ಮತ್ತಷ್ಟು ಹರಡುತ್ತಿವೆ.
ಜಾತಿ ಮತ್ತು ರಾಜಕೀಯ ವ್ಯವಸ್ಥೆಗಳ ನಡುವಣ ಸಂಬಂಧ ಇಂದು-ನಿನ್ನೆಯದಲ್ಲ. ಒಂದು ಸಾಂಪ್ರದಾಯಿಕ ಅರ್ಥದಲ್ಲಿ ಭಾರತೀಯ ಸಮಾಜದಲ್ಲಿ ಜಾತಿಯ ಹಿಡಿತ ಕಡಿಮೆಯಾಗುತ್ತಿರುವಂತೆ ಕಂಡು ಬಂದರೂ ಸಾರ್ವತ್ರಿಕ ಚುನಾವಣೆಗಳು, ಅನೇಕ ಜಾತಿಗಳು ತಮ್ಮ ಪ್ರಾಬಲ್ಯವನ್ನು ಬೆಳೆಸಿಕೊಳ್ಳಲು ಹೊಸ ಹೊಸ ಅವಕಾಶಗಳನ್ನು ಕಲ್ಪಿಸಿವೆ.
ಹೀಗಿದ್ದಾಗ್ಯೂ ಈ ನಾಡಿನ ಪ್ರಬಲ ಕ್ಷತ್ರಿಯ ಸಮುದಾಯ ತಮ್ಮ ಒಗ್ಗಟ್ಟಿನ ಕಡೆ ಗಮನವನ್ನೇ ಕೊಡದೆ, ಇತರೆ ಪ್ರಬಲ ಜಾತಿಗಳಂತೆ ರಾಜಕಾರಣ ನಿಯಂತ್ರಿಸುವುದಿರಲಿ, ಅಲ್ಲಿ ನೆಲೆ ಕಾಣಲೂ ವಿಫಲವಾಗಿತ್ತು. ಎಲ್ಲಾ ಹಕ್ಕುಗಳಿಂದ ವಂಚಿತವಾಗಿತ್ತು. ಈಗ ಆ ಸಮುದಾಯ ಕೊನೆಗೂ ಒಗ್ಗಟ್ಟಿನ ಅನಿವಾರ್ಯತೆಯನ್ನು ಅರಿತು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಒಂದು ಕೋಟಿಗೂ ಹೆಚ್ಚು ಜನಸಂಖ್ಯೆಯ ಸಮುದಾಯ ಒಂದಾಗುತ್ತಲೇ ಸಹಜವಾಗಿಯೇ ಈ ಶಕ್ತಿ ಚುನಾವಣೆಯಲ್ಲಿ ಎತ್ತ ತಿರುಗುತ್ತದೆ ಎಂಬ ಲೆಕ್ಕಾಚಾರಗಳೂ ರಾಜಕೀಯ ಪಡಸಾಲೆಗಳಲ್ಲಿ ಆರಂಭವಾಗಿದ್ದು ರಾಜಕೀಯ ಪಕ್ಷಗಳಲ್ಲಿ ಸಣ್ಣಗೆ ನಡುಕ ಆರಂಭವಾಗಿದೆ.
ಏಕೆ ರಾಜಕೀಯ ಪಕ್ಷಗಳಿಗೆ ನಡುಕ?

ಕ್ಷತ್ರಿಯ ಸಮುದಾಯ ರಾಜ್ಯದ ಪ್ರಬಲವೆನಿಸಿಕೊಂಡ ಸಮುದಾಯಗಳಿಗೆ ಸರಿಸಮನಾಗಿ ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಸಂಘಟಿತರಾಗದೇ ಉಳಿದಿದ್ದರಿಂದ 70 ವರ್ಷಗಳಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ತೀವ್ರ ನಷ್ಟ ಅನುಭವಿಸಿದೆ. ಒಳಪಂಗಡಗಳಾಗಿ ಹರಿದು ಹಂಚಿ ಹೋಗಿದ್ದರ ಪರಿಣಾಮ ತೀವ್ರ ಹಾನಿ ಅನುಭವಿಸಿದೆ. ಚುನಾವಣೆಗಳಲ್ಲಿ ಒಂದೊಂದು ಉಪಪಂಗಡ ಒಂದೊಂದು ದಿಕ್ಕಿನಲ್ಲಿ, ಇತರೆ ಸಮುದಾಯದ ನಾಯಕರ ಹಿಂದೆ, ಸಿದ್ಧಾಂತವೊಂದರ ಹಿಂದೆ ಸಾಗುತ್ತಿದ್ದರಿಂದ ಕ್ಷತ್ರಿಯ ರಾಜಕೀಯ ನಾಯಕತ್ವವೇ ಬೆಳೆಯದ ಸ್ಥಿತಿ ಉದ್ಭವಿಸಿ ಇದು ಸಹಜವಾಗಿಯೇ ಅನ್ಯ ಪ್ರಬಲ ಸಮುದಾಯಗಳಿಗೆ ಅನುಕೂಲಕರವಾಗಿತ್ತು. ಈಗ ಇದೇ ಕ್ಷತ್ರಿಯರು ಒಳಪಂಗಡಗಳನ್ನು ಮರೆತು ಮೊದಲ ಬಾರಿಗೆ ಒಂದಾಗಿದ್ದಾರೆ.
ಮರಾಠರು, ತಿಗಳ ಕ್ಷತ್ರಿಯರು, ಅರಸರು, ಭಾವಸಾರ, ಸೋಮವಂಶ ಸಹಸ್ರಾರ್ಜುನ, ರಜಪೂತ, ರಾಜು ಕ್ಷತ್ರಿಯರು ಹೀಗೆ ಎಲ್ಲಾ ಶಕ್ತಿಗಳ ಸಮ್ಮಿಲನವಾಗಿದೆ. ಈ ಶಕ್ತಿ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದರ ಸುಳಿವು ಸಿಗುತ್ತಲೇ ರಾಜಕೀಯ ಪಕ್ಷಗಳಿಗೆ ನಡುಕ ಶುರುವಾಗಿದೆ.
ಪ್ರಮುಖ, ಬಲಾಢ್ಯ ಸಮುದಾಯಗಳು ಸೆಟೆದು ನಿಂತಾಗಲೆಲ್ಲ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಈಗ ಕ್ಷತ್ರಿಯರು ತಮ್ಮ ರಾಜಕೀಯ, ಸಾಮಾಜಿಕ ಹಕ್ಕುಗಳಿಗಾಗಿ ಸೆಟೆದುನಿಂತಿರುವುದು ಹೊಸ ರಾಜಕೀಯ ಸಮೀಕರಣಕ್ಕೆ ನಾಂದಿ ಹಾಡಿದೆ.
ಓಬಿಸಿ ವರ್ಗದಲ್ಲಿ ಹೊಸ ಶಕ್ತಿ ಉದಯ

ಕರ್ನಾಟಕದಲ್ಲಿ ಕ್ಷತ್ರಿಯರು ಜನಸಂಖ್ಯೆಯಲ್ಲಿ ಬಲಿಷ್ಟವಾಗಿದ್ದಾರೆ. ಆದರೆ ಕ್ಷತ್ರಿಯ ಒಳಪಂಗಡಗಳು ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದರಿಂದ ಮತ್ತು ಆಳುವವರು ಆ ಸಮುದಾಯಗಳನ್ನು ಪ್ರತ್ಯೇಕವಾಗಿಯೇ ಗುರುತಿಸಿ ವಿಭಜಿಸಿದ್ದರಿಂದ 1 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದರೂ ಗಮನ ಸೆಳೆಯಲಿಲ್ಲ. ಈಗಲೂ ಇಷ್ಟು ಜನಸಂಖ್ಯೆ ಇದೆ ಎಂದರೇ ಅದನ್ನು ಜಾಣತನದಿಂದ ಅಲ್ಲಗಳೆಯುವವರೇ ಹೆಚ್ಚು. ಇಂತಹ ದೊಡ್ಡ ಸಮುದಾಯ ಒಂದಾದರೆ ನಮಗೂ ಕಷ್ಟ ಎಂಬ ಕಾರಣಕ್ಕೆ ಕೆಲ ಪ್ರಬಲ ಸಮುದಾಯಗಳು ಕ್ಷತ್ರಿಯರು ಒಗ್ಗಟ್ಟನ್ನು ಒಪ್ಪಿ, ಅವರೆಲ್ಲಾ ಒಂದೇ ಎಂಬ ಭಾವನೆ ವ್ಯಕ್ತಪಡಿಸುವುದೇ ಇಲ್ಲ. ಆದರೆ ಕ್ಷತ್ರಿಯ ಒಳಪಂಗಡಗಳು 38 ಕ್ಕೂ ಹೆಚ್ಚು ಉಪಜಾತಿಗಳಡಿ ಹಂಚಿಹೋಗಿದ್ದು ಸತ್ಯ. ಈ ಎಲ್ಲಾ ಸಮುದಾಯಗಳು ಈಗ ಒಗ್ಗೂಡಿವೆ.
“ಕ್ಷತ್ರಿಯರಾದ ನಾವೆಲ್ಲರೂ ಒಂದೇ ಆದರೂ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವುದೇ ನಮಗೆ ಕಂಟಕವಾಗಿದೆ. ರಾಜ್ಯದಲ್ಲಿ ಎಲ್ಲಾ ರಂಗಗಳಲ್ಲೂ ಸಮುದಾಯದ ಪ್ರಾಬಲ್ಯ ಕ್ಷೀಣಿಸಿದೆ. ರಾಷ್ಟ್ರ ಮಟ್ಟದಲ್ಲಿ ನಮ್ಮ ಸಮುದಾಯ ಸಶಕ್ತವಾಗಿದ್ದರೂ ಕರ್ನಾಟಕದಲ್ಲಿ ನಮ್ಮ ಅಸ್ತಿತ್ವವೇ ಇಲ್ಲದಂತಾಗಿದೆ. ಪ್ರಜಾಪ್ರಭುತ್ವದಲ್ಲಿ ಆಯಾ ಸಮುದಾಯಗಳ ಸಂಖ್ಯಾಬಲಕ್ಕೆ ಅನುಗುಣವಾಗಿ ಎಲ್ಲರೂ ಅಧಿಕಾರ, ಅನುದಾನ, ಅವಕಾಶ ಹಾಗೂ ಸವಲತ್ತುಗಳು ಪಡೆಯುತ್ತಿದ್ದಾರೆ. ಆದರೆ ನಾವುಗಳು ದೊಡ್ಡ ಸಂಖ್ಯೆಯಲ್ಲಿದ್ದರೂ ಪ್ರಾತಿನಿಧ್ಯ, ನ್ಯಾಯಯುತ ಪಾಲಿನಿಂದ ವಂಚಿತರಾಗಿದ್ದೇವೆ” ಎಂಬ ಸತ್ಯವನ್ನು ಸಮುದಾಯ ಅರಿತುಕೊಂಡಿದೆ.
ಅನ್ಯ ಸಮುದಾಯಗಳಂತೆಯೇ ನಾವು ಕೂಡಾ ಎಲ್ಲಾ ರಂಗಗಳಲ್ಲಿಯೂ ಮುಖ್ಯವಾಹಿನಿಗೆ ಬರಲು ಒಗ್ಗಟ್ಟು ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಿಕೊಂಡಿದೆ.

ಒಂದು ಕೋಟಿಗೂ ಹೆಚ್ಷು ಕ್ಷತ್ರಿಯರು ಕರ್ನಾಟಕದ ಉದ್ದಗಲಕ್ಕೂ ಚದುರಿಹೋಗಿದ್ದು, ಸಂಖ್ಯಾಬಲದಲ್ಲಿ ಪ್ರಬಲರಾದ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಗ್ಗಟ್ಟು ಸಾಧಿಸಿ ಮುನ್ನುಗ್ಗೋಣ ಎಂಬ ಘೋಷವಾಕ್ಯದೊಂದಿಗೆ ಕರ್ನಾಟಕ ಕ್ಷತ್ರಿಯ ಒಕ್ಕೂಟ ಕಟ್ಟಿಕೊಂಡು ಕ್ಷತ್ರಿಯರು ಒಂದಾಗತೊಡಗಿರುವುದು ಕರ್ನಾಟಕದ ಓಬಿಸಿ ವರ್ಗದಲ್ಲಿ ಹೊಸ ಶಕ್ತಿಯ ಉದಯ ಎಂಬಂತೆ ತೋರತೊಡಗಿದೆ. ಯಾರೂ ಊಹಿಸದ ರೀತಿ ಕ್ಷತ್ರಿಯರು ಒಗ್ಗಟ್ಟಾಗಿದ್ದಾರೆ.
ರಾಜ್ಯದ ಹಳ್ಳಿಹಳ್ಳಿಗಳಲ್ಲೂ ಕರ್ನಾಟಕ ಕ್ಷತ್ರಿಯ ಒಕ್ಕೂಟ ಶಾಖೆಗಳು ಸ್ಥಾಪನೆಯಾಗಿವೆ. ಸಮುದಾಯ ನವಚೈತನ್ಯ ತುಂಬಿಕೊಂಡು ಸಂಘಟಿತವಾಗಿದೆ.
ದೊಡ್ಡಮಟ್ಟದ ಜನಸಂಖ್ಯೆ ಇದ್ದರೂ ಸೂಕ್ತ ರಾಜಕೀಯ ಪಾಲು ದೊರೆತಿಲ್ಲ. ಎಲ್ಲಾ ರಾಜಕೀಯ ಪಕ್ಷಗಳೂ ನಮ್ಮನ್ನು ನಿರ್ಲಕ್ಷ್ಯ ಮಾಡುತ್ತ ಬಂದಿವೆ ಎಂಬ ಭಾವನೆ ಕ್ಷತ್ರಿಯ ಸಮುದಾಯದಲ್ಲಿದ್ದು ಇದೇ ಭಾವನೆಯೇ ಒಗ್ಗಟ್ಟಿನ ಶಕ್ತಿಪ್ರದರ್ಶನಕ್ಕೆ ಕಾರಣವಾಗಿದೆ.
ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜು

ರಾಜ್ಯದ ರಾಜಧಾನಿಯಲ್ಲೇ ಕ್ಷತ್ರಿಯ ಸಮುದಾಯ ಬೃಹತ್ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಜನವರಿ 29 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕ್ಷತ್ರಿಯ ಸಮಾವೇಶ ನಡೆಸಿ ರಾಷ್ಟ್ರ ನಾಯಕರನ್ನು ಕರೆಸಿ ಹಕ್ಕೊತ್ತಾಯಗಳನ್ನು ಮಂಡಿಸಲು ಸಿದ್ಧತೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ ಪ್ರಬಲರಾಗಿರುವ ತಿಗಳ ಸಮುದಾಯ, ಮುಂಬೈ ಕರ್ನಾಟಕ, ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಮರಾಠರು ಕ್ಷತ್ರಿಯ ಒಕ್ಕೂಟದ ಅಡಿ ಗುರುತಿಸಿಕೊಂಡಿರುವುದರಿಂದ ರಾಜಧಾನಿಯಲ್ಲಿ ನಡೆಯುವ ಕ್ಷತ್ರಿಯರ ಶಕ್ತಿ ಪ್ರದರ್ಶನ ರಾಜ್ಯಕ್ಕೆ ಹೊಸದೊಂದು ಸಂದೇಶ ನೀಡುವುದು ಖಚಿತವಾಗಿದೆ.
ಕ್ಷತ್ರಿಯ ಪಡೆ ಮುಂಬರುವ ಚುನಾವಣೆಯಲ್ಲಿ ಎತ್ತ ಸಾಗುತ್ತದೆ? ಯಾವ ರಾಜಕೀಯ ಪಕ್ಷಕ್ಕೆ ಬಲ ತುಂಬಲಿದೆ? ತಮ್ಮನ್ನು ಇಷ್ಟು ವರ್ಷ ಕಾಲ ಸಂಖ್ಯಾಬಲ ಕೊರತೆ ತೋರಿಸಿ ನಿರ್ಲಕ್ಷ್ಯ ಮಾಡಿದ ರಾಜಕೀಯ ಪಕ್ಷಗಳಿಗೆ ಯಾವ ಪಾಠ ಕಲಿಸಲಿದೆ ಎಂಬುದು ಕುತೂಹಲಕ್ಕೂ ಎಡೆ ಮಾಡಿಕೊಟ್ಟಿದೆ.
ಈ ಚುನಾವಣೆ ಕ್ಷತ್ರಿಯರಿಗೆ ನಿರ್ಣಾಯಕ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರವಿದ್ದಾಗ ಜಾತಿ ಜನಗಣತಿ ನಡೆದಿತ್ತು. ಆ ಗಣತಿಯ ವರದಿಯನ್ನು ಸರ್ಕಾರ ಅಧಿಕೃತ ಬಿಡುಗಡೆ ಮಾಡಿಲ್ಲವಾದರೂ, ಸೋರಿಕೆಯಾದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಈವರೆಗೂ ಪ್ರಬಲ ಎನಿಸಿಕೊಂಡ ವಕ್ಕಲಿಗರು ಮತ್ತು ಲಿಂಗಾಯತರು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಅದೇ ವರದಿಯಲ್ಲಿರುವ ಕ್ಷತ್ರಿಯ ಸಮುದಾಯಗಳ ಉಪ ಪಂಗಡಗಳ ಒಟ್ಟಾರೆ ಜನಸಂಖ್ಯೆಯನ್ನು ಗಣನೆ ಮಾಡಿದರೆ ಹತ್ತಿರ ಹತ್ತಿರ ಒಂದು ಕೋಟಿ ಮುಟ್ಟುತ್ತದೆ ಎಂಬ ಮಾತಿದೆ. ಇಷ್ಟು ದೊಡ್ಡ ಮಟ್ಟದ ಜನಸಂಖ್ಯೆ ಇದ್ದರೂ ರಾಜ್ಯ ರಾಜಕೀಯದಲ್ಲಿ ಕ್ಷತ್ರಿಯರು ತೀರಾ ಬಲಹೀನ. ಹೀಗಾಗಿ ಎಲ್ಲಾ ಅಂಶಗಳನ್ನು ಮನವರಿಕೆ ಮಾಡಿಕೊಂಡೇ ಕ್ಷತ್ರಿಯರು ತಮ್ಮ ಒಳಪಂಗಡಗಳ ಸಂಕೋಲೆ ಕಳಚಿಕೊಂಡು ಒಗ್ಗಟ್ಟಾಗಿದ್ದಾರೆ. ರಾಜಕೀಯ ಪಕ್ಷಗಳ ಬಳಿ ಹೆಚ್ಚು ರಾಜಕೀಯ ಅವಕಾಶ ಕೇಳಲು ಸಜ್ಜಾಗಿದ್ದಾರೆ. ಆ ಸಮುದಾಯಕ್ಕೆ ಟಿಕೆಟ್ ನೀಡಿಕೆಯಲ್ಲಿ ಅನ್ಯಾಯ ಮಾಡಿದರೆ ತಕ್ಕ ಪಾಠ ಕಲಿಸಲೂ ಸಜ್ಜಾಗಿದ್ದಾರೆ. ಹೀಗಾಗಿ ಕ್ಷತ್ರಿಯ ಸಮುದಾಯಕ್ಕೆ ಈ ಸಲದ ವಿಧಾನಸಭಾ ಚುನಾವಣೆ ನಿರ್ಣಾಯಕ. ತಮ್ಮ ಒಗ್ಗಟ್ಟು ಕೇವಲ ತೋರಿಕೆಗಲ್ಲ ಎಂಬುದನ್ನು ರಾಜ್ಯಕ್ಕೆ ತೋರಿಸುವುದು ಕೂಡಾ ಕ್ಷತ್ರಿಯರಿಗೆ ಅನಿವಾರ್ಯ