ಜನಾನುರಾಗಿ ನಾಯಕನ ಮೂಲೆಗುಂಪು ಮಾಡಿತೇ ಬಿಜೆಪಿ?
-ಶೌರ್ಯ ಡೆಸ್ಕ್ ಸಂದರ್ಶನ
ತಮಗೆ ಅಧಿಕಾರ, ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕೃಷ್ಣ ಪಾಲೇಮಾರ್ ಎಂದಿಗೂ ಬೇಸರ ಪಟ್ಟುಕೊಂಡವರಲ್ಲ. ಹೆಸರಿನಲ್ಲೇ ಕೃಷ್ಣನನ್ನು ಇಟ್ಟುಕೊಂಡಿರುವ ಅವರು, ಶ್ರೀಕೃಷ್ಣನ ಗೀತೆಯ `ಕರ್ಮಣ್ಯೇ ವಾಧಿಕಾರಸ್ಥೆ ಮಾ ಫಲೇಷುಕದಾಚನ’ ಎಂಬ ಶ್ಲೋಕ ಸಾರವನ್ನು ಪಾಲಿಸುತ್ತಾ ಎಂದಿಗೂ ಫಲಾಫಲಗಳ ಬಗ್ಗೆ ಯೋಚಿಸದೆ ಸಾಗುವ ವ್ಯಕ್ತಿತ್ವದವರು. 2013ರ ಚುನಾವಣೆಯಲ್ಲಿ ಪಾಲೇಮಾರ್ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ ನಡುವೆ ಅಲ್ಪಅಂತರದಿಂದ ಪರಾಭವಗೊಂಡಿದ್ದರು. 2018ರ ಚುನಾವಣೆಯಲ್ಲಿ ಅವರ ಬದಲಿಗೆ ಬೇರೊಬ್ಬರಿಗೆ ಮಂಗಳೂರು ನಗರ ಉತ್ತರದಿಂದ ಟಿಕೆಟ್ ನೀಡಲಾಯಿತು. ಆಗಲೂ ಬೇಸರಿಸಿಕೊಳ್ಳದೆ ಪಕ್ಷದ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ಕೆಲಸ ಮಾಡಿ ಗೆಲುವಿಗೆ ಕಾರಣಕರ್ತರಾಗಿದ್ದರು. ಈಗಲೂ ಪಕ್ಷ, ಸಂಘದ ಆದೇಶವನ್ನು ಶಿಸ್ತಿನ ಸಿಪಾಯಿಯಂತೆ ಪಾಲಿಸುತ್ತಾ ಬರುತ್ತಿರುವುದು ಅವರ ಸೈದ್ಧಾಂತಿಕ ಮತ್ತು ತಾತ್ವಿಕ ನಿಷ್ಠೆಗೆ ಸಾಕ್ಷಿ.

`ಕೆಲವರು ಹಣ ಮಾಡಲು ರಾಜಕೀಯಕ್ಕೆ ಬರುತ್ತಾರೆ, ನಾನು ದುಡಿದ ಹಣ ಖರ್ಚು ಮಾಡಿಕೊಂಡು ರಾಜಕಾರಣ ಮಾಡಿದವನು. ಭಾರತೀಯ ಜನತಾ ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ್ದೆ. ವೈಯಕ್ತಿಕ ಮಟ್ಟದಲ್ಲಿ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೆರವು ನೀಡಿದ್ದೇನೆ. ಪಕ್ಷದ ಋಣಭಾರವೂ ನನ್ನ ಮೇಲಿದೆ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವೆ. ಕೊಡದಿದ್ದರೆ ಉದ್ಯಮ, ವ್ಯಾಪಾರ, ಜನಸೇವೆ ಮಾಡಲು ದಾರಿಗಳಿವೆ. ಎಂದಿಗೂ ಅಧಿಕಾರದ ಹಿಂದೆ ಬಿದ್ದಿಲ್ಲ. ಸಂಘ ಪರಿವಾರ ನನಗೆ ಕೊಟ್ಟ ಸಂಸ್ಕಾರ, ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡವನು ನಾನು. ಸಂಘದ ಪ್ರಾಮಾಣಿಕ ಅನುಯಾಯಿ ಎಂದಿಗೂ ರಾಜಕೀಯ ಸ್ಥಾನಮಾನದ ಅಪೇಕ್ಷೆ ಪಡುವುದಿಲ್ಲ. ಅಧಿಕಾರಕ್ಕಾಗಿಗುಂಪುಗಾರಿಕೆ ಮಾಡುವುದಿಲ್ಲ. ದೇಶಪ್ರೇಮ, ನಿಸ್ವಾರ್ಥ ಸೇವೆಯೇ ಅಪ್ಪಟ ಆರೆಸ್ಸೆಸ್ ಮನೋಧರ್ಮ. ಇದನ್ನು ನಾನು ಪಾಲಿಸುತ್ತಿದ್ದೇನೆ’… ಇದು ಮಾಜಿ ಸಚಿವ, ಉದ್ಯಮಿ, ಬಿಜೆಪಿ ನಾಯಕ, ಕುಡ್ಲಕುವರ ಕೃಷ್ಣ ಪಾಲೇಮಾರ್ ಅವರ ಸ್ಪಷ್ಟೋಕ್ತಿ.
ಕೃಷ್ಣ ಪಾಲೇಮಾರ್ 2004 ಮತ್ತು 2008ರಲ್ಲಿ ಸುರತ್ಕಲ್-ಮಂಗಳೂರು ನಗರ ಉತ್ತರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಬಿಜೆಪಿಯ ನಿಷ್ಠಾವಂತ ನಾಯಕ. ಬಿ.ಎಸ್. ಯಡಿಯೂರಪ್ಪ ಮತ್ತು ಡಿ.ವಿ. ಸದಾನಂದಗೌಡ ಅವರ ಸಂಪುಟದಲ್ಲಿ ಮೀನುಗಾರಿಕೆ, ಬಂದರು, ಜಲ ಒಳಸಾರಿಗೆ, ಸಣ್ಣ ಉಳಿತಾಯ ಮತ್ತು ಲಾಟರಿ, ವಿಜ್ಞಾನ-ತಂತ್ರಜ್ಞಾನ, ಪರಿಸರ, ಮುಜರಾಯಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿ ದಕ್ಷಿಣ ಕನ್ನಡ ಮತ್ತು ಮಡಿಕೇರಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆಡಳಿತ ನಡೆಸಿ ಸೈ ಎನಿಸಿಕೊಂಡವರು. ರಾಜಕೀಯ ಏರಿಳಿತ, ಕೆಲ ಪಟ್ಟಭದ್ರರ ಕುತಂತ್ರದಿಂದ ಪಾಲೇಮಾರ್ 2018ರ ಚುನಾವಣೆಯಲ್ಲಿ ಟಿಕೆಟ್ ವಂಚಿತರಾದರು. ಎರಡು ಅವಧಿಗೆ ಉತ್ತಮವಾಗಿ ಕಾರ್ಯದಕ್ಷತೆ ತೋರಿ ಸೂಕ್ಷ್ಮ ಪರಿಸ್ಥಿತಿಯ ದಕ್ಷಿಣ ಕನ್ನಡದ ಉಸ್ತುವಾರಿ ಹೊಣೆ ಹೊತ್ತು ಯಶಸ್ವಿಯಾದವರು. ಕೊಟ್ಟ ಖಾತೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಜನಾನುರಾಗಿಯಾಗಿದ್ದರೂ, ಮೂರು ಅವಕಾಶಗಳಿಗೆ ಅವರನ್ನು ಸೀಮಿತಗೊಳಿಸಿ ಟಿಕೆಟ್ ತಪ್ಪಿಸಿದ್ದಕ್ಕೆ ಜನಮಾನಸದಲ್ಲಿ ಹಾಗೂ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರ ವಲಯದಲ್ಲಿ ಬೇಸರವಿದೆ. ಆದರೆ ಪಾಲೇಮಾರ್ ಎಂದಿಗೂ ಅಸಮಾಧಾನ ವ್ಯಕ್ತಪಡಿಸಿದವರಲ್ಲ.
`ಶೌರ್ಯ ಸಂದೇಶ್’ ಕೃಷ್ಣ ಪಾಲೇಮಾರ್ ಅವರ ಸಂದರ್ಶನದ ಮೂಲಕ ಅವರ ನಿಲುವು-ಒಲವು, ಮನದಾಳ, ಪ್ರಸ್ತುತ ರಾಜಕೀಯ ಮತ್ತು ಬಿಜೆಪಿ ಪಕ್ಷದ ಭವಿಷ್ಯದ ಕುರಿತು ಅಭಿಪ್ರಾಯ ಪಡೆದಿದೆ. ಸಂದರ್ಶನದ ಪೂರ್ಣ ಪಾಠದ ಸಾರ ಇಲ್ಲಿದೆ.
*2013ರ ಸೋಲಿನ ನಂತರ ಪಕ್ಷದಲ್ಲಿ ನೀವು ಮೂಲೆಗುಂಪಾಗಿದ್ದೀರಿ ಎಂಬ ಮಾತಿದೆ. 2018ರಲ್ಲಿ ನಿಮಗೆ ಟಿಕೆಟ್ ತಪ್ಪಿತು. ಪ್ರಸ್ತುತ ನಿಮ್ಮ ಸ್ಥಾನಮಾನವೇನು?
ಸ್ಥಾನಮಾನ, ಅಧಿಕಾರಕ್ಕಾಗಿ ನಾನು ಎಂದಿಗೂ ಆಸೆ ಬಿದ್ದಿಲ್ಲ. ಅಧಿಕಾರ ಬರಲಿ, ಬಿಡಲಿ ಸಾಮಾನ್ಯ ಕಾರ್ಯಕರ್ತನಾಗಿಯೇ ಉಳಿದಿದ್ದೇನೆ. 2013ರ ಸೋಲು ನನ್ನ ವೈಯಕ್ತಿಕ ನೆಲೆಯಲ್ಲಿ ಆಗಿದ್ದಲ್ಲ. ಆಗ ಇಡೀ ಪಕ್ಷವೇ ಸೋತಿತ್ತು. ನಾವು ಗೆದ್ದಿದ್ದು 40 ಸ್ಥಾನ ಮಾತ್ರ. ಆಡಳಿತ ವಿರೋಧಿ ಅಲೆ ನಮ್ಮ ಗೆಲುವಿಗೆ ಅಡ್ಡ ಬಂದಿತ್ತು.2018ರಲ್ಲಿ ಟಿಕೆಟ್ ಕೈ ತಪ್ಪಿದ್ದಕ್ಕೆ ಯಾರನ್ನೂ ದೂರುವುದಿಲ್ಲ. ಮೂರು ಸಲ ಪಕ್ಷ ನನಗೆ ಟಿಕೆಟ್ ಕೊಟ್ಟಿದೆ, ಮಂತ್ರಿ ಮಾಡಿದೆ. ಪಕ್ಷದ ಋಣಭಾರ ನನ್ನ ಮೇಲಿದೆ. ಬೇರೆಯವರಿಗೆ ಟಿಕೆಟ್ ಕೊಟ್ಟಾಕ್ಷಣ ಅಸಮಾಧಾನಗೊಳ್ಳುವುದು ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತನಾದ ನನ್ನ ಜಾಯಮಾನವಲ್ಲ. ಪಕ್ಷ ನನ್ನ ಮೂಲೆಗುಂಪು ಮಾಡಿದೆ ಎಂಬ ಮಾತಿನಲ್ಲಿ ಹುರುಳಿಲ್ಲ. ನನಗೆ ಸಿಗಬೇಕಾದ ಗೌರವ ದೊರೆಯುತ್ತಿದೆ. ಪಕ್ಷದ ರಾಜ್ಯಕಾರ್ಯಕಾರಣಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಪಕ್ಷ ಸಂಘಟನೆಗೆ ನಿಯೋಜಿಸಲಾಗುತ್ತಿದೆ. ನನ್ನಲ್ಲಿ ಯಾವುದೇ ಅತೃಪ್ತಿ, ಅಸಮಾಧಾನವಿಲ್ಲ.
*ಸಚಿವರಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದರೂ ನಿಮಗೆ ಕ್ಷೇತ್ರ ಕೈ ಬಿಟ್ಟುಹೋಯಿತು. ನಿಮ್ಮ ನಿಷ್ಠೆ ಏನೇ ಇರಲಿ, ರಾಜಕೀಯವಾಗಿ ನಿಮಗೆ ಹಿನ್ನಡೆಯಾಯಿತಲ್ಲ?
ರಾಜಕಾರಣದಲ್ಲಿ ಸಣ್ಣಪುಟ್ಟ ಅಡಚಣೆ ಯಾರಿಗೂ ತಪ್ಪಿದ್ದಲ್ಲ. ಕೆಲವೊಮ್ಮೆ ಗುಂಪುಗಾರಿಕೆ ನಡೆದು ಮತ್ತೊಬ್ಬರನ್ನು ತುಳಿಯುವ ತಂತ್ರ-ಕುತಂತ್ರಗಳೂ ನಡೆಯುತ್ತವೆ. ನನಗೂ ಇಂತಹ ಅಡೆತಡೆ ಎದುರಾಗಿದ್ದು ನಿಜ. ಬಿಜೆಪಿ ವರಿಷ್ಠ ನಾಯಕರು, ಸಂಘಪರಿವಾರದ ಪ್ರಮುಖರ ಬಳಿ ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಿ ಕಿವಿ ಊದಿದ್ದಾರೆ. ಕರಾವಳಿ ಮೂಲದವರೇ ಆದ ಈಗ ದೊಡ್ಡ ನಾಯಕರಾಗಿರುವವರು ಇದಕ್ಕೆ ತಾಳ ಹಾಕಿದ್ದಾರೆ ಎಂದು ನನ್ನ ಕೆಲ ಅಭಿಮಾನಿಗಳು ಮಾತನಾಡುತ್ತಾರೆ. ಅದೇನೇ ಇರಬಹುದು, ನನಗಂತೂ ಯಾರ ಬಗ್ಗೆಯೂ ಆರೋಪಗಳಿಲ್ಲ. ಎಲ್ಲರೊಂದಿಗೂ ಉತ್ತಮ ಸಂಬಂಧವಿದೆ. ಸಚಿವನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇಂದಿಗೂ ಇದೆ.

*ವಿಧಾನಸಭೆ ಕಲಾಪದ ವೇಳೆ ನೀಲಿ ಚಿತ್ರ ನೋಡಿದ ವಿವಾದವೇ ನಿಮ್ಮ ರಾಜಕೀಯ ಹಿನ್ನಡೆಗೆ ಕಾರಣ. ಮುಜರಾಯಿ ಖಾತೆ ಪಡೆದವರ ರಾಜಕೀಯ ಭವಿಷ್ಯ ಅಂತ್ಯವಾಗುತ್ತದೆ ಎಂಬ ಮಾತಿದೆ. ಇದಕ್ಕೆ ಏನು ಹೇಳುವಿರಿ?
ವಿಧಾನಸಭೆಯಲ್ಲಿ ನೀಲಿ ಚಿತ್ರ ನೋಡಿದ್ದೇನೆ ಎಂಬ ಆರೋಪದಲ್ಲಿ ಸತ್ಯಾಂಶವಿಲ್ಲ. ವಿಧಾನಸಭೆಯ ಜಂಟಿ ಸದನ ಸಮಿತಿಯೇ ಈ ವಿವಾದದಲ್ಲಿ ನನಗೆ ಕ್ಲೀನ್‌ಚಿಟ್ ನೀಡಿದೆ. ಸುಳ್ಳು ಸುದ್ದಿ ಬಿತ್ತರಿಸಿದ್ದಕ್ಕಾಗಿ ಸುವರ್ಣ ಸುದ್ದಿ ವಾಹಿನಿಯ ವಿರುದ್ಧ 25 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿದೆ. ಇನ್ನು ಮುಜರಾಯಿ ಖಾತೆ ಪಡೆದವರ ರಾಜಕೀಯ ಭವಿಷ್ಯ ಅತಂತ್ರವಾಗುತ್ತದೆ ಎಂಬುದರಲ್ಲೂ ನಂಬಿಕೆಯಿಲ್ಲ. ಹಿಂದೆ ನಾಗರಾಜ ಶೆಟ್ಟಿ ಮಂತ್ರಿಯಾಗಿದ್ದರು. ಅಂತಹ ಉದಾಹರಣೆಗಳನ್ನು ಇಟ್ಟು ಇಂತಹ ಕತೆಗಳನ್ನು ಕಟ್ಟಲಾಗುತ್ತದೆ. ನನ್ನ ರಾಜಕೀಯ ಜೀವನ ಅಂತ್ಯವಾಗಿಲ್ಲ. ಪಕ್ಷ ಮತ್ತೆ ಗುರುತಿಸಿ ಜವಾಬ್ದಾರಿ ವಹಿಸುವ ವಿಶ್ವಾಸವಿದೆ. ಕೊಡದಿದ್ದರೂ ನಾನು ಪಕ್ಷನಿಷ್ಠನೇ, ಪಕ್ಷ ಸೇವೆಯಿಂದಲೂ ದೂರವಿಟ್ಟರೆ ನನ್ನ ವ್ಯಾಪಾರ, ಉದ್ಯಮ ನೋಡಿಕೊಂಡು ಜನಸೇವೆ ಮಾಡಿಕೊಂಡಿರಲು ಅನೇಕ ದಾರಿಗಳಿವೆ.
*ಬಿಜೆಪಿಯಲ್ಲಿ ನಿಷ್ಠಾವಂತರಿಗೆ ಮನ್ನಣೆ ಸಿಗುವ ಕಾಲ ಹೋಗಿದೆ. ವಲಸಿಗರು ವಿಜೃಂಭಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಅವರ ಸಂಪುಟದಲ್ಲಿರುವ ಅರ್ಧದಷ್ಟು ಸಚಿವರು ಅನ್ಯ ಪಕ್ಷಗಳಿಂದ ಬಂದವರು ಎಂಬ ಮಾತು ನಿಮ್ಮ ಪಕ್ಷದೊಳಗೇ ಕೇಳಿಬರುತ್ತಿದೆಯಲ್ಲ?
ನಮ್ಮಲ್ಲಿಯಾರು ವಲಸಿಗರಿಲ್ಲ, ಎಲ್ಲರೂ ನಮ್ಮವರೇ. ಬೊಮ್ಮಾಯಿ ಅವರು ಪಕ್ಷಕ್ಕೆ ಬಂದು ಒಂದೂವರೆ ದಶಕವಾಗಿದೆ. ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ 17 ಜನ ಶಾಸಕರು ರಾಜೀನಾಮೆ ನೀಡಿ ಮತ್ತೆ ಆರಿಸಿ ಬಂದಿದ್ದರಿಂದ ನಮ್ಮ ಪಕ್ಷಅಧಿಕಾರಕ್ಕೆ ಬಂದಿದೆ. ನಾವೇ ಸ್ವಯಂಬಲದ ಮೇಲೆ 120 ಸ್ಥಾನ ಗೆದ್ದಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಅವರೂ ತ್ಯಾಗ ಮಾಡಿ ಬಂದಿದ್ದಾರೆ. ಅವರಿಗೆ ಪ್ರಾಧಾನ್ಯತೆ ನೀಡುವುದು ಧರ್ಮವಾಗಿತ್ತು. ನಮ್ಮ ಪಕ್ಷ ಹಿಂದೆ 2-3 ಶಾಸಕ ಸ್ಥಾನ ಗೆಲ್ಲುತ್ತಿತ್ತು. ಇಂದು ರಾಜ್ಯದಲ್ಲಿ ಪ್ರಬಲವಾಗಿ ಬಿಜೆಪಿ ನೆಲೆಯೂರಲು ಅನ್ಯ ಪಕ್ಷಗಳಿಂದ ಬಂದ ನಾಯಕರೂ ಕಾರಣ. ನಮ್ಮಲ್ಲಿ ಬಂದ ಮೇಲೆ ಎಲ್ಲರೂ ನಮ್ಮವರೇ ಅಲ್ಲವೇ.
*ಪಕ್ಷದ ತತ್ವ ಸಿದ್ಧಾಂತ, ಹಿಂದುತ್ವ ಮೂಲದ ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ. ಪಕ್ಷ ಕಟ್ಟಿದವರಿಗೆ ಉಳಿಗಾಲವಿಲ್ಲದಂತಾಗಿದೆ ಎಂಬುದು ಹಿರಿಯ ನಾಯಕರ ಬಾಯಿಂದ ಬಂದ ಮಾತಲ್ಲವೇ?
ಈ ಭಾವನೆ ಕೊಂಚ ಮಟ್ಟಿಗೆ ನಿಜವಿರಬಹುದು. ಈ ಬಗ್ಗೆ ಪಕ್ಷದ ಆಂತರಿಕ ಮಟ್ಟದಲ್ಲಿ ಧ್ವನಿಯೆತ್ತುತ್ತೇವೆ. ನಮ್ಮ ಮೂಲ ಅಜೆಂಡಾದಿಂದ ದೂರ ಸರಿಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ಗೌರವದಿಂದ ಕಾಣಬೇಕು. ಸಂಘಪರಿವಾರ, ಬಿಜೆಪಿಯ ಲಕ್ಷಾಂತರ ಮಂದಿಯ ಶ್ರಮದಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅವರ ತ್ಯಾಗಕ್ಕೆ ಚ್ಯುತಿ ಬರಲು ಬಿಡುವುದಿಲ್ಲ. ಮೂಲ ಬಿಜೆಪಿ ನಾಯಕರು, ಕಾರ್ಯಕರ್ತರ ಪರಧ್ವನಿಯೆತ್ತಲು ನಾನು ಸಿದ್ಧನಿದ್ದೇನೆ. ಸಂಘ ಮೂಲದ ಅದೆಷ್ಟೋ ಮಂದಿ ಅಧಿಕಾರ ಗಳಿಸಲು ಮನೆ, ಮಠ ಬಿಟ್ಟು ಶ್ರಮಪಟ್ಟಿದ್ದಲ್ಲ. ಹಿಂದುತ್ವ, ದೇಶಪ್ರೇಮ, ಸಶಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಅವರೆಲ್ಲಾ ನಿಸ್ವಾರ್ಥ ಸೇವೆ ಮಾಡಿದವರು. ಇಂದು ಬಿ.ಎಲ್. ಸಂತೋಷ್ ಅವರನ್ನು ನೋಡಿ ಆರೆಸ್ಸೆಸ್‌ನ ಮೂಲದವರಿಗೆ ಅಧಿಕಾರ ಸಿಕ್ಕಿದೆ ಎಂದುಕೊಳ್ಳುವವರು ಮೂರ್ಖರು. ಅಧಿಕಾರಕ್ಕಾಗಿ ನಿಷ್ಠಾವಂತ, ಸ್ವಯಂಸೇವಕ, ಕಾರ್ಯಕರ್ತ ಎಂದಿಗೂ ಆಸೆ ಪಡುವುದಿಲ್ಲ. ಅಂತಹ ಸಂಸ್ಕೃತಿಯನ್ನು ಸಂಘ ನಮಗೆ ಕಲಿಸಿಲ್ಲ.
*ಬಸವರಾಜ ಬೊಮ್ಮಾಯಿಅವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎಂದು ಅಮಿತ್ ಷಾ ಘೋಷಿಸಿದ್ದಾರೆ. ಇದು ಪಕ್ಷದೊಳಗೆ ಬಿಕ್ಕಟ್ಟು ಉಂಟು ಮಾಡಿದೆ. ಇದರ ಬಗ್ಗೆ ಏನು ಹೇಳುವಿರಿ? ಪಕ್ಷ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆಯೇ?
ಹೈಕಮಾಂಡ್ ನಾಯಕರು ಹೇಳಿದಂತೆ ನಡೆಯುವುದು ನಮ್ಮ ಪದ್ಧತಿ. ವರಿಷ್ಠರು ಪಕ್ಷದ ಹಿತದೃಷ್ಟಿಯಿಂದಲೇ ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ನಮಗೆ ಅಧಿಕಾರ ಬೇಕಿರುವುದು ಅನುಭವಿಸಲು ಅಲ್ಲ. ದೇಶ ಹಾಗೂ ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕಾಗಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸಮಗ್ರ ಏಳಿಗೆ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಯಾರ ನಾಯಕತ್ವ ಎಂಬುದು ಮುಖ್ಯವಾಗುವುದಿಲ್ಲ. ನಮ್ಮಗುರಿ ಸಾಧನೆ ಮಾತ್ರ ಮುಖ್ಯ. ವರಿಷ್ಠರ ಮಟ್ಟದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗೋಣ ಎಂಬ ನಿರ್ಣಯವಾದರೆ ಅದೇ ಅಂತಿಮ. ಅವರೂ ಕೂಡಾ ಸಾಮೂಹಿಕವಾಗಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದಲೇ ಮುನ್ನಡೆಯುತ್ತಾರೆ. ಇದು ನಮ್ಮ ಪಕ್ಷದ ಸಂಪ್ರದಾಯ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಕ್ಷ ಮತ್ತು ಜನರ ವಿಶ್ವಾಸ ಗಳಿಸುವಂತೆ ಆಡಳಿತ ನಡೆದರೆ ಖಚಿತವಾಗಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿ.ಎಸ್. ಯಡಿಯೂರಪ್ಪ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಗಬೇಕು. ಪ್ರಾಯ ಆದ ತಕ್ಷಣ ಅವರನ್ನು ಸೈಡ್‌ಲೈನ್ ಮಾಡಲಾಗುವುದಿಲ್ಲ. ಅವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಮಾತುಕೂಡಾ ನಿಜವಲ್ಲ.

ಕ್ಷತ್ರಿಯ ಸಮಾಜದ ಒಗ್ಗಟ್ಟು ಅತ್ಯವಶ್ಯ
ಕರ್ನಾಟಕ ಕ್ಷತ್ರಿಯ ಒಕ್ಕೂಟದಡಿ ಸಮುದಾಯದ 36 ಒಳ ಜಾತಿಗಳು ಒಟ್ಟಾಗಿರುವುದು ಶ್ಲಾಘನೀಯ ವಿಚಾರ. ನಮ್ಮ ಸಮುದಾಯ ಎಂದಿಗೂ ಗುಂಪುಗಾರಿಕೆ, ಸರ್ಕಾರದ ಮೇಲೆ ಒತ್ತಡ ಹೇರುವುದು, ಶಕ್ತಿ ಪ್ರದರ್ಶನದಂತಹ ಕಾರ್ಯಗಳಿಗೆ ಕೈ ಹಾಕಿಲ್ಲ. ಪುರಾತನ ಕಾಲದಿಂದಲೂ ದೇಶಪ್ರೇಮ, ಜನಹಿತವೇ ನಮಗೆ ಮುಖ್ಯವಾಗಿತ್ತು. ಅಂತಹ ಗುಣ ರಕ್ತಗತವಾಗಿ ನಮಗೆ ಬಂದಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಧ್ವನಿ ಎತ್ತುವಿಕೆಗೆ ಮಹತ್ವವಿದೆ. ಕೂಗೆಬ್ಬಿಸಿದವರನ್ನು ಗುರುತಿಸಲಾಗುವುದಿಲ್ಲ ಎಂಬ ಮಾತು ಸತ್ಯ ಅನಿಸುತ್ತದೆ. ಹೀಗಾಗಿ ನಾವು ಒಗ್ಗಟ್ಟಾಗಿ ರಾಜಕೀಯ, ಸಾಮಾಜಿಕ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆಯಿದೆ ಎಂದು ಕೃಷ್ಣ ಪಾಲೇಮಾರ್ ಹೇಳಿದರು.
ಕರಾವಳಿಯಲ್ಲಿ ಕ್ಷತ್ರಿಯ ಸಮುದಾಯದ ಜನಸಂಖ್ಯೆ ರಾಜಕೀಯವಾಗಿ ನಿರ್ಣಾಯಕವಾಗಿದೆ. ಆದರೂ ಬಿಜೆಪಿ ಮತ್ತು ಇತರೆ ಪಕ್ಷಗಳಲ್ಲಿ ನಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ. ಹಿಂದೆ ಬ್ರಿಟೀಷರು ಕ್ಷತ್ರಿಯರನ್ನು ಹೊಡೆದು ಆಳುವ ತಂತ್ರ ಪ್ರಯೋಗಿಸಿದರು. ಈಗಲೂ ನಮ್ಮೊಳಗಿನ ಸಮುದಾಯಗಳನ್ನು ಹೊಡೆದು ರಾಜಕೀಯ ನೆಲೆಯಿಲ್ಲದಂತೆ ಮಾಡಲಾಗುತ್ತಿದೆ. ಇದನ್ನು ಜನಾಂಗದ ಪ್ರತಿಯೊಬ್ಬರೂ ಮನಗಾಣಬೇಕಿದೆ. ಕರ್ನಾಟಕ ಕ್ಷತ್ರಿಯ ಒಕ್ಕೂಟ ಸಮುದಾಯವನ್ನು ಸಂಘಟಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ರಾಜ್ಯಾಧ್ಯಕ್ಷ ಉದಯ್ ಸಿಂಗ್ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಕ್ಷತ್ರಿಯರು ಗತಕಾಲದ ವೈಭವಕ್ಕೆ ಮರಳಲು ಒಗ್ಗಟ್ಟೊಂದೇ ಮಾರ್ಗ ಎಂದು ಅಭಿಪ್ರಾಯಪಟ್ಟರು.
ನಮ್ಮ ಕೂಗು, ನೋವು ಕೇಳುವವರೇ ಇಲ್ಲ. ನಮಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕಾಗ ನಮ್ಮೊಳಗಿನ ಕೂಗು ಸರ್ಕಾರಗಳಿಗೆ ಮುಟ್ಟುತ್ತದೆ. ನನಗೆ ಅವಕಾಶ ಕೊಡಿಎಂದಲ್ಲ. ನಮ್ಮ ಸಮುದಾಯದ ಯಾರಿಗೇ ರಾಜಕೀಯ ಅವಕಾಶ ಲಭ್ಯವಾಗಲಿ. ನಾವು ಖುಷಿ ಪಡುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕ್ಷತ್ರಿಯ ಸಮಾಜ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಪ್ರಮುಖ ಪಕ್ಷಗಳ ಟಿಕೆಟ್ ಪಡೆಯಲು ಈಗಿನಿಂದಲೇ ತಯಾರಿ ನಡೆಸಬೇಕು. ಇದಕ್ಕಾಗಿ ಸಿದ್ಧತೆ ಕೈಗೊಳ್ಳಬೇಕು ಎಂದರು.