28.2 C
Bengaluru
Sunday, March 19, 2023
spot_img

ಹಿಮಾಚಲದಲ್ಲೊಂದು ಕಿನ್ನರಲೋಕ!

-ರಾಧಿಕಾ ವಿಟ್ಲ

ನದಿಗೆ ನಮ್ಮ ಮನಸ್ಸಿನ ಎಲ್ಲ ಸುಸ್ತನ್ನೂ ಹೋಗಲಾಡಿಸಿ ಹೊಸ ಚೈತನ್ಯ ನೀಡಬಲ್ಲ ಶಕ್ತಿಯಿದೆ. ಪ್ರಶಾಂತವಾಗಿ ಹರಿವ ನದೀತೀರದಲ್ಲಿ ಸಂಜೆಯಲ್ಲೋ ಮುಂಜಾವಿನಲ್ಲೋ ಅಡ್ಡಾಡಿದರೆ, ಅದು ನಮಗೆ ಬಹಳದಿನಗಳಿಗೆ ಸಾಕಾಗುವಷ್ಟು ಭರಪೂರ ಚೈತನ್ಯವನ್ನು ಸುರಿಸುರಿದು ಕೊಡುತ್ತದೆ. ಹಾಗಾಗಿ ಚಿತ್ಕೂಲಿಗೆ ಬಂದರೆ ಅಲ್ಲೊಂದು ರಾತ್ರಿ ತಂಗಬೇಕು. ಬಸ್ಪಾನದೀ ತೀರದಲ್ಲಿ ಸುಖಾಸುಮ್ಮನೆ ತಿರುಗಾಡಬೇಕು. ಅಲ್ಲಿ ಮರಳಲ್ಲಿ ಕೂತು, ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಹಿಮಬೆಟ್ಟಗಳನ್ನೆಲ್ಲ ಕಣ್ತುಂಬಿಕೊಳ್ಳಬೇಕು. ಕತ್ತಲರಾತ್ರಿಯಲ್ಲಿ ಆಗಸ ತುಂಬ ಮಿನುಗುವ ನಕ್ಷತ್ರಕೋಟಿಯನ್ನೂ ಎಣಿಸಬೇಕು.

ಕಿನೌರ್ ಕಣಿವೆಯ ಸುಂದರ ಕಲ್ಪ ಗ್ರಾಮ.

ಒಂದು ಕಡೆಗೆ ಪ್ರಶಾಂತವಾಗಿ ಹರಿವ ಬಸ್ಪಾ ನದಿ, ಇನ್ನೊಂದು ಕಡೆ ಮುದ್ದಾದ ಪುಟಾಣಿ ಹಳ್ಳಿ, ಸುತ್ತಲೂ ಸರ್ವಋತುಗಳಲ್ಲೂ ಹಿಮ ಹೊದ್ದು ನಿಂತಿರುವ ಹಿಮಾಲಯ ಶ್ರೇಣಿ, ತಿರುಗಿ ನೋಡಿದರೆ ಎತ್ತರೆತ್ತರ ಬೆಟ್ಟ ಸಾಲುಗಳ ನಡುವೆ ಏನೂ ಆಗದಂತೆ ಮೆತ್ತಗೆ ಮಲಗಿರುವ ಸಪೂರ ದಾರಿ!

ಕಷ್ಟದ ದಾರಿಯಷ್ಟೇ ಸುಂದರ ಜಾಗವೊಂದಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಎಂಬ ಜನಪ್ರಿಯ ಮಾತಿದೆಯಲ್ಲ, ಈ ಜಾಗ ಅಂಥ ಮಾತಿಗೆ ಸಾರ್ವಕಾಲಿಕ ಉದಾಹರಣೆ. ಅಷ್ಟೇ ಅಲ್ಲ, ಈ ಮಾತಿಗೆ ವೈರುಧ್ಯವೆನಿಸುವ ಇನ್ನೊಂದು ಜನಪ್ರಿಯ ಹೇಳಿಕೆಯಿದೆ. ಪಯಣದಲ್ಲಿ ಹೋಗಿ ಸೇರುವ ಜಾಗ ಮುಖ್ಯವಲ್ಲ, ಸಾಗುವ ದಾರಿಯಷ್ಟೆ ಮುಖ್ಯ ಎಂಬುದು. ವಿಚಿತ್ರವೆಂದರೆ ಅದಕ್ಕೂ ಇದೇ ಜಾಗ ಅತ್ಯುತ್ತಮ ಉದಾಹರಣೆಯೇ ಆಗುತ್ತದೆ. ಯಾಕೆಂದರೆ ಇಲ್ಲಿ ಹೋಗುವ ದಾರಿಯೂ ಕಣ್ಣಿಗೆ ಹಬ್ಬ, ಗುಂಡಿಗೆಯ ಬಿಸಿ ರಕ್ತವನ್ನು ಇನ್ನಷ್ಟು ಬಿಸಿ ಮಾಡುವ ಜೊತೆಗೆ ಮೈಜುಂ ಎನಿಸುವ ಈ ಹಾದಿಯ ಪಯಣ ಮುಗಿದು ಅಂತಿಮವಾಗಿ ಸೇರುವ ಜಾಗ ಕನಸೋ ನನಸೋ ಎಂದು ನಮ್ಮನ್ನು ನಾವೇ ಚಿವುಟಿಕೊಳ್ಳುವಂತೆ ಮಾಡುತ್ತದೆ. ಅಕ್ಷರಶಃ ಹೆಸರಿನಂತೆಯೇ ಕಿನ್ನರಲೋಕವೇ ಇದು!

ಹಸಿರು ಹೊದ್ದು ಮಲಗಿದ ಕಣಿವೆಯ ಕೃಷಿ ಜಮೀನುಗಳು.

ಹಿಮಾಚಲ ಎಂದಾಕ್ಷಣ ಶಿಮ್ಲಾ ಮನಾಲಿಗಳೇ ಪ್ರವಾಸೀ ತಾಣಗಳಾಗಿ ಜನಪ್ರಿಯ. ಸದಾ ಪ್ರವಾಸಿಗರಿಂದ ಗಿಜಿಗುಡುವ, ತೀರಾ ಇಕ್ಕಟ್ಟು ರಸ್ತೆಗಳಿರುವ, ನಗರದ ಟ್ರಾಫಿಕ್ಕಿನಿಂದ ತಪ್ಪಿಸಿಕೊಂಡು ಇಲ್ಲಿ ಬಂದೂ ವೃಥಾ ಟ್ರಾಫಿಕ್ಕಿನಲ್ಲೇ ಕೊಳೆಯುವಂತೆ ಮಾಡುವ ಜನಪ್ರಿಯ ತಾಣಗಳು ಬಹಳ ಸಾರಿ ಪ್ರವಾಸವನ್ನು ಪ್ರಯಾಸ ಮಾಡಿಬಿಡುತ್ತದೆ. ಮಹಾನಗರಗಳಿಂದ ವಾರಾಂತ್ಯದಲ್ಲಿ ಭರಪೂರ ಪ್ರವಾಸಿಗರನ್ನು ಎಳೆದುತರುವ ಇಂಥ ಪ್ರವಾಸಿತಾಣಗಳು ಮಹಾನಗರಗಳ ಪ್ರಭಾವಕ್ಕೆ ಸಿಕ್ಕು ಬದಲಾಗಿ ಕಾಲವಾಗಿದೆ. ಹೀಗಾಗಿ ಜನರಿಂದ ದೂರವಿರುವ, ಆಯಾಪ್ರದೇಶದ ಜನಜೀವನ, ಪ್ರಕೃತಿಯ ನೈಜತೆಯನ್ನು ಅರಸಿಕೊಂಡು ಎಲ್ಲದರಿಂದ ದೂರ ಇದ್ದು ಶಾಂತಿ ನೆಮ್ಮದಿಯಿಂದ ಕಾಲ ಕಳೆದು ಮರಳಲು ಬಯಸುವ ಪಯಣಿಗರಿಗೆ ಮಾತ್ರ ಕಿನ್ನೌರ್‌ ಹೇಳಿ ಮಾಡಿಸಿದಂತ ಜಾಗ.

ಒಂದು ಕಡೆಯಿಂದ ಕುಲ್ಲು ಕಣಿವೆಯಿಂದಲೂ, ಇನ್ನೊಂದು ಕಡೆಯಿಂದ ಸ್ಪಿತಿ ಕಣಿವೆಯಿಂದಲೂ ಸುತ್ತುವರಿದಿರುವ ಈ ಕಿನ್ನೌರ್‌ ಕಣಿವೆಗೆ ಅದರದ್ದೇ ಆದ ಸೌಂದರ್ಯವಿದೆ. ಸ್ಪಿತಿಯಂತೆ ತೀರ ಒಣ ಶೀತ ಮರುಭೂಮಿಯೂ ಅಲ್ಲದ, ಕುಲುವಿನಂತೆ ದಟ್ಟ ಕಾಡೂ ಹೊಂದಿಲ್ಲದ, ಇವೆರಡರ ಸಮಾನ ಮಿಶ್ರಣವೆಂಬಂತಿದೆ. ಹಿಮಾಚಲದ ವಿವಿಧ ಬುಡಕಟ್ಟುಗಳ ಇಂದಿಗೂ ಅಸ್ತಿತ್ವದಲ್ಲಿರುವ ವಿಧವಿಧ ಭಾಷೆ, ಅಪರೂಪದ ಸಂಸ್ಕೃತಿ, ವೇಷಭೂಷಣ, ಜೀವವೈವಿಧ್ಯ ಎಲ್ಲವುಗಳ ವಿಸ್ತೃತ ಪರಿಚಯ ನಮಗೆ ಇಲ್ಲಿ ದಕ್ಕುತ್ತದೆ. ಆದರೆ, ಹೀಗೆ ಬಂದು ಹಾಗೆ ಬೇಗ ಮುಗಿಸಿ ಓಡಿಬಿಡುತ್ತೇನೆ ಎಂಬ ಧಾವಂತದಲ್ಲಿರುವವರಿಗೆ ಈ ಕಿನ್ನೌರ್‌ ಪ್ರವಾಸ ಕಷ್ಟವೇ.

ಗುಡ್ಡಗಾಡು ಪ್ರದೇಶದ ಸ್ಥಳೀಯ ಆಡುಗಳು.

ಹಾಗೆ ನೋಡಿದರೆ, ಹಿಂದೂ ಪುರಾಣಗಳಲ್ಲಿ ಬರುವ ಯಕ್ಷ ಗಂಧರ್ವ ಕಿನ್ನರರಿಗೂ ಈ ಹಿಮಾಚಲಿ ಕಿನ್ನರರಿಗೂ ಸಂಬಂಧ ಇದೆ ಎಂದು ಸಾಕಷ್ಟು ವಾದಗಳಿವೆ. ಬಹಳಷ್ಟು ಪುಸ್ತಕಗಳೂ ಈ ಬಗ್ಗೆ ಬೆಳಕು ಚೆಲ್ಲಿದ್ದು, ಪುರಾಣದ ಕಿನ್ನರದೇಶವೇ ಈಗಿನ ಕಿನ್ನೌರ್‌ ಜಿಲ್ಲೆ ಎಂದು ಇದಕ್ಕೆ ಪುಷ್ಟಿ ನೀಡುವ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತಾರೆ. ವಿಷಯ ಏನೇ ಇರಲಿ, ಪುರಾಣದ ಕಿನ್ನರನಾಡು ಕಟ್ಟಿಕೊಡುವ ಕನಸಿನ ಲೋಕಕ್ಕೂ ಈಗಿರುವ ಕಿನ್ನೌರ್‌ ಪ್ರದೇಶಕ್ಕೂ ನಿಜವಾಗಿಯೂ ಹೋಲಿಕೆ ಇರುವುದು ಹೌದಲ್ಲ ಅಂತ ಅನಿಸುವುದು ನಾವು ಅಲ್ಲಿಗೆ ಕಾಲಿಟ್ಟಾಗಲೇ. ಅತ್ಯಂತ ಸುಂದರ ಕಣಿವೆಗಳಿರುವ, ಸದಾ ಬಣ್ಣಬಣ್ಣದ ಕಾಡು ಹೂವುಗಳು ಅರಳಿರುವ, ಹಕ್ಕಿಗಳಿಂಚರದ, ಹಣ್ಣುಹಂಪಲುಗಳಿಂದ ಸಮೃದ್ಧವಾಗಿರುವ, ವಿಶಾಲ ಹುಲ್ಲುಗಾವಲುಗಳಲ್ಲಿ ಸದಾ ದನಕರು ಕುರಿಗಳು ಮೇಯುತ್ತಿರುವ, ಜುಳುಜುಳು ಹರಿವ ನದಿಯಿಂದ, ಕಣ್ಣೆದುರೇ ಹಿಮಚ್ಛಾದಿತ ಬೆಟ್ಟ ಸಾಲುಗಳು ನೀಲಾಕಾಶಕ್ಕೆ ಚಾಚಿ ನಿಂತಿರುವಾಗ ಇದೊಂದು ಅದ್ಭುತ ವಿಸ್ಮಯ ಕಿನ್ನರಲೋಕವೇ ಎನಿಸುತ್ತದೆ. ಗೋಡೆಯ ಮೇಲೆ ಸದಾ ಇರಿಸಬಯಸುವ ಕನಸಿನ ಲೋಕದ ಚಿತ್ರದ ಹಾಗೆ ಕಣ್ಣಮುಂದೆ ಕಿನ್ನೌರಿನ ಫ್ರೇಮೊಂದು ಸದಾ ಕಾಲ ಉಳಿದುಬಿಡುತ್ತದೆ. ನೋಡಲು ಸುಂದರವಿರುವ ಶ್ರಮಜೀವಿ ಕಿನ್ನೌರ್‌ ಮಂದಿ ಭೌಗೋಳಿಕವಾಗಿ ದುರ್ಗಮ ಪ್ರದೇಶದಲ್ಲಿಯೇ ವಾಸಿಸಿದ್ದರಿಂದಲೋ ಏನೋ, ಭಾರತದ ಮುಖ್ಯವಾಹಿನಿಯಿಂದ ದೂರವೇ ಉಳಿದರೂ, ಇತ್ತೀಚಿಗಿನ ವರ್ಷಗಳಲ್ಲಿ ಬದಲಾದ ಪ್ರವಾಸೋದ್ಯಮ ಹೊರಪ್ರಪಂಚಕ್ಕೆ ಇವರನ್ನು ಪರಿಚಯಿಸಿದೆ.

ಕಿನ್ನೌರ್‌ ಕಣಿವೆ.

ಶಿಮ್ಲಾದಿಂದ ಸುಮಾರು 250 ಕಿಮೀ (ದೆಹಲಿಯಿಂದ ಸುಮಾರು 600 ಕಿಮೀ) ದೂರವಿರುವ ಕಿನ್ನೌರ್‌ ತಲುಪಲು ನಗರದಲ್ಲಿ ನಾವು ಸಂಚಾರ ಮಾಡುವ ವೇಗದ ಆಧಾರದಲ್ಲಿ ಲೆಕ್ಕ ಹಾಕಿಕೊಂಡು ನಾಲ್ಕೈದು ಗಂಟೆ ಒಳಗೆ ತಲುಪಬಹುದೆಂದು ಲೆಕ್ಕಾಚಾರ ಹಾಕಿಕೊಂಡರೆ ನಮ್ಮ ಯೋಜನೆಯೆಲ್ಲ ತಲೆಕೆಳಗಾಗುತ್ತದೆ. ದುರ್ಗಮ ದಾರಿಗಳಿರುವ, ಪ್ರಪಾತದಂಚಿನ ಸಪೂರ ರಸ್ತೆಯಲ್ಲಿ ವಾಹನ ಚಲಾಯಿಸುವುದಕ್ಕೆ ಇಲ್ಲಿ ನಿಜಕ್ಕೂ ಗುಂಡಿಗೆ ಬೇಕು. ನಿಧಾನವಾಗಿ, ತೆವಳುತ್ತಾ ಸಾಗಬೇಕಾದ ಇಲ್ಲಿಗೆ, ವಾತಾವರಣ ಸೇರಿದಂತೆ ಎಲ್ಲ ಸರಿಯಿದ್ದರೆ, ಈ 250 ಕಿಮೀ ಕ್ರಮಿಸಲು ಕನಿಷ್ಟ ಎಂದರೂ 8-9 ತಾಸು ಬೇಕು. ಆದರೆ, ಇಷ್ಟು ಕಷ್ಟ ಹಾದಿಯನ್ನೊಮ್ಮೆ ಕ್ರಮಿಸಿ ತಲುಪುವಾಗ ಅಷ್ಟರವರೆಗಿನ ಸುಸ್ತು ಮಾಯವಾಗುತ್ತದೆ. ಬಂದ ಹಾದಿಯ ಬೆಲೆ ಅರಿವಾಗುತ್ತದೆ. ಹಾಗಾಗಿಯೇ ಸಾಹಸ ಪ್ರವೃತ್ತಿಯವರಿಗೆ, ಬೈಕರ್‌ಗಳಿಗೆ ಕಿನೌರ್‌ ರಸದೌತಣ.

ಕಿನೌರ್ ಕಣಿವೆಯ ದುರ್ಗಮ ಭಾರತ-ಟಿಬೆಟ್ ಹೆದ್ದಾರಿ.

ಕಿನ್ನೌರ್‌ನಲ್ಲಿ ನೋಡಲು ಏನಿದೆ ಎಂದು ಕೇಳಿದರೆ ಹೇಳುವುದು ಕಷ್ಟ. ಇಲ್ಲಿ ಪ್ರಕೃತಿ ಸೌಂದರ್ಯ ಬಿಟ್ಟರೆ ಬೇರೇನಿಲ್ಲ. ಮುಖ್ಯವಾಗಿ ಕಿನ್ನೌರ್‌ ಪ್ರಾಂತ್ಯದ ಕೆಲವು ಊರುಗಳನ್ನು ಉದಾಹರಿಸಬಹುದು. ರೆಕಾಂಗ್‌ ಪಿಯೋ, ಕಲ್ಪ, ನಕೋ, ಸಾಂಗ್ಲಾ ಕಣಿವೆ, ಚಿತ್ಕೂಲ್‌ ಮತ್ತಿತರ ಊರುಗಳನ್ನು ತಪ್ಪಿಸದೆ ಸುತ್ತಿ ಬಂದರೆ ಕಿನ್ನೌರ್‌ಗೆ ಬಂದಿದ್ದಕ್ಕೆ ಒಂದು ಮಟ್ಟಿಗೆ ನ್ಯಾಯ ಸಲ್ಲಿಸಿದಂತೆ. ಈ ಎಲ್ಲ ಊರುಗಳ ಹಾದಿಯೂ ದುರ್ಗಮವೇ. ಟಿಬೆಟ್‌ ಗಡಿಯಲ್ಲಿರುವ ಈಶಾನ್ಯ ಹಿಮಾಚಲದ ಭಾಗವಾಗಿರುವುದರಿಂದ ಕಲ್ಪ, ರೆಕಾಂಗ್‌ ಪಿಯುಗಳಲ್ಲಿ ಸಾಕಷ್ಟು ಬೌದ್ಧವಿಹಾರಗಳಿವೆ. ಇವುಗಳ ಭೇಟಿ ಕೂಡ ಮನಸ್ಸಿಗೆ ಶಾಂತಿ ನೆಮ್ಮದಿ ನೀಡುತ್ತದೆ.

ಕಮ್ರು ಕೋಟೆ

ಕಿನ್ನೌರ್‌ ಪ್ರಾಂತ್ಯದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಕಮ್ರು ಕೋಟೆ. ಸಾಂಗ್ಲಾದಿಂದ 2 ಕಿಮೀಗಳಷ್ಟು ಏರುಹಾದಿಯಲ್ಲಿ ಹಳ್ಳಿ ನೋಡುತ್ತಾ ಮೆಟ್ಟಿಲೇರಿದರೆ ಭವ್ಯ ಕಮ್ರು ಕೋಟೆಯ ದರ್ಶನವಾಗುತ್ತದೆ. ಕೇವಲ 55 ಚದರ ಅಡಿಗಳ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಕೋಟೆ ಐದು ಮಹಡಿಗಳನ್ನು ಹೊಂದಿದೆ. ಬಹಳ ಸೂಕ್ಷ್ಮ ಮರದ ಕೆತ್ತನೆಗಳಿಂದಲೇ ಮಾಡಲ್ಪಟ್ಟ ಈ ಗೋಪುರದಂತಹ ಕೋಟೆ ನೋಡುವುದೇ ಸೊಗಸು.

ಕಮ್ರು ಕೋಟೆ.

800 ವರ್ಷಗಳಷ್ಟು ಹಳೆಯದೆನ್ನುವ ಈ ಕೋಟೆಯನ್ನು ನೋಡಿಕೊಂಡು ಅಲ್ಲಿ ಕಾಮಕ್ಯ ದೇವಿಯ ದರ್ಶನ ಮಾಡಿಕೊಂಡು ಸುತ್ತಲೂ ಕಣ್ಣು ಹಾಯಿಸಿದರೆ ಹಿಮಚ್ಛಾದಿತ ಬೆಟ್ಟಗಳ ನಡುವೆ ಕಿನ್ನರ್‌ ಕೈಲಾಸವೂ ದರ್ಶನ ಕೊಡುತ್ತದೆ. ಸಂಜೆಯ ಹೊತ್ತಿಗೆ ಸೂರ್ಯಾಸ್ತದ ಸುಂದರ ದೃಶ್ಯವನ್ನು ಇಲ್ಲಿಂದ ಕಣ್ತುಂಬಿಕೊಳ್ಳಬಹುದು.

ಕಿನ್ನರ ಕೈಲಾಸ

ಕಿನ್ನರ ಕೈಲಾಸ ಕಿನ್ನೌರ್‌ ಮಂದಿಗೆ ಮನೆದೇವರ ಹಾಗೆ. ಕಿನ್ನೌರ್‌ ಮಂದಿಗೆ ಇದು ಸಾಕ್ಷಾತ್‌ ಕೈಲಾಸವೇ. ಶಿವಲಿಂಗದಾಕಾರದಲ್ಲಿ ಸದಾ ಹಿಮಹೊದ್ದು ದರ್ಶನ ನೀಡುವ ಪರ್ವತ. ಸುಮಾರು 6050 ಮೀಟರ್‌ ಎತ್ತರದಲ್ಲಿರುವ ಇದು 79 ಅಡಿ ಎತ್ತರದ ಏಕಶಿಲಾ ಶಿವಲಿಂಗದಂತಹ ರಚನೆಯನ್ನು ತನ್ನ ಶಿಖರದಲ್ಲಿ ಹೊಂದಿದೆ. ಹಾಗಾಗಿ ಇದು ಶಿವನ ಕೈಲಾಸ ಎಂದು ನಂಬಲಾಗುತ್ತದೆ. ಇಲ್ಲೇ ಪಾರ್ವತೀ ಕುಂಡವಿದ್ದು ಸ್ವತಃ ಪಾರ್ವತಿಯೇ ಇದನ್ನು ನಿರ್ಮಿಸಿದಳು ಎಂಬ ನಂಬಿಕೆಯಿದೆ.

ಕಿನೌರ್ ಪ್ರದೇಶದ ನಾಕೋ ಗ್ರಾಮದ ಲೇಕ್.

ಕಿನ್ನೌರ್ನಲ್ಲಿ ನೆಲೆಸಿರುವ ಹಿಂದೂಗಳೂ ಬೌದ್ಧರೂ ಇದನ್ನು ಆರಾಧಿಸುತ್ತಾರೆ. ಪರಿಕ್ರಮ ಕೂಡಾ ನಡೆಸುತ್ತಾರೆ. ಸುಮಾರು 14 ಕಿಮೀಗಳ ಚಾರಣ ಇದಾಗಿದ್ದು, ಎಷ್ಟು ಪ್ರಸಿದ್ಧವೋ ಅಷ್ಟೇ ಕಠಿಣದ್ದೂ ಆಗಿದೆ. ಚಾರಣದಲ್ಲಿ ಹಿಮಪಾತವಾಗಿ, ಹಾದಿ ತಪ್ಪಿ ತಪ್ಪಿಸಿಕೊಂಡವರು ಮರಳದೆ ಹೋದುದು ಇತ್ಯಾದಿ ಇತ್ಯಾದಿ ಘಟನೆಗಳು ನಡೆಯುತ್ತಲೇ ಇರುವುದು ಆಗಾಗ ಬೆಳಕಿಗೆ ಬರುತ್ತವೆ. ಮೇ ತಿಂಗಳಿಂದ ಅಕ್ಟೋಬರ್‌ ತಿಂಗಳವರೆಗೆ ಈ ಚಾರಣ ಮಾಡಬಹುದಾಗಿದ್ದು ಉಳಿದ ಸಮಯದಲ್ಲಿ ಹಿಮ ಮುಚ್ಚಿದ ಕಾರಣದಿಂದ ಚಾರಣ ನಿಷಿದ್ಧವಾಗಿರುತ್ತದೆ. ಅಲ್ಲದೆ, ಚಳಿಗಾಲದಲ್ಲಿ ಶಿವ ಪಾರ್ವತಿಯರು ಎಲ್ಲ ದೇವಾನುದೇವತೆಗಳನ್ನು ಕರೆದು ಇಲ್ಲಿ ಸಭೆ ಸೇರುತ್ತಾರೆಂದೂ, ಹುಲು ಮಾನವರು ಇಂಥ ಸಂದರ್ಭ ಇದನ್ನೇರಬಾರದೆಂದೂ ಸ್ಥಳೀಯರು ಬಲವಾಗಿ ನಂಬಿದ್ದಾರೆ. ಕೈಲಾಸ ಪರ್ವತ ನೋಡದಿದ್ದರೇನಂತೆ, ಕಿನ್ನರ ಕೈಲಾಸಕ್ಕೆ ಹೋಗಿ ಬಂದೆನಲ್ಲ ಎಂದು ಇಲ್ಲಿ ಬಂದು ಒಮ್ಮೆ ಧನ್ಯತಾಭಾವದಲ್ಲೂ ಮುಳುಗೇಳಬಹುದು

ಚಿತ್ಕೂಲ್ ಎಂಬ ಕೊನೆಯ ಹಳ್ಳಿ

ಹಿಮಾಚಲ ಪ್ರದೇಶದಲ್ಲಿರುವ ಭಾರತದ ಕೊನೆಯ ಹಳ್ಳಿ ಈ ಚಿತ್ಕೂಲ್. ಇಂಡೋ-ಟಿಬೆಟ್‌ ಗಡಿಯಲ್ಲಿರುವ ಈ ಹಳ್ಳಿಯಲ್ಲಿ ನೋಡಲು ಏನಿದೆ ಎಂದರೆ ಏನೂ ಇಲ್ಲ, ಆದರೆ ಎಲ್ಲವೂ ಇದೆ. ಸಾಂಗ್ಲಾದಿಂದ ಸುಮಾರು 28 ಕಿಮೀ ದೂರದಲ್ಲಿರುವ ಈ ಹಳ್ಳಿಯ ಹಾದಿಯ ಪಯಣವೇ ಒಂದು ಚಂದದ ಅನುಭವ.

ಚಿತ್ಕೂಲ್ ಮತೀದೇವಿ ದೇವಸ್ಥಾನ .

ಮತೀದೇವಿ ದೇವಸ್ಥಾನ ಒಂದು ಪ್ರಮುಖ ಆಕರ್ಷಣೆ. ಪ್ರಶಾಂತವಾದ, ಜನಜಂಗುಳಿಯಿಲ್ಲದ, ಮರದ ಕೆತ್ತನೆಗಳಿರುವ ಬಹುಸುಂದರ ದೇವಾಲಯವಿದು. ಸುಮಾರು 500 ವರ್ಷ ಹಳೆಯದಾದ ಈ ದೇವಾಲಯದಲ್ಲಿ ಸುತ್ತುಹಾಕಿ, ಬೆರಳೆಣಿಕೆಯ ಮನೆಗಳಿರುವ ಪುಟ್ಟ ಊರಿನಲ್ಲಿ ಸುತ್ತುಹಾಕಿ ಬರುವುದು ಚಿತ್ಕೂಲಿನಲ್ಲಿ ಮಾಡಲೇಬೇಕಾದ್ದು.

ಚಾರಣಪ್ರಿಯರಿಗೆ ಚಿತ್ಕೂಲ್‌ ಹಬ್ಬವೇ ಸರಿ. ಚಿತ್ಕೂಲಿನಿಂದ ಮುಂದಕ್ಕೆ ಹೋಗುವ ರಸ್ತೆಯಿಂದ ಹಾಗೆಯೇ ಸುಮ್ಮನೆ ನಡೆದು ಸಾಗಿದರೆ ಇಂಡೋ ಟಿಬೆಟ್‌ ಗಡಿಯ ಚೆಕ್‌ಪೋಸ್ಟ್‌ವರೆಗೂ ನಡೆಯಬಹುದು. ನಡೆಯುತ್ತಾ ನಡೆಯುತ್ತಾ ಈ ಹಾದಿಯಿಡೀ, ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿನ ಜನರು ಗಂಡಸರು, ಹೆಂಗಸರೆನ್ನದೆ ಮೈಬಗ್ಗಿಸಿ ಗದ್ದೆಗಳಲ್ಲಿ ದುಡಿದು, ಬೇಳೆಕಾಳುಗಳು, ತರಕಾರಿ, ಸೇಬು ಬೆಳೆಯುವುದನ್ನು ನೋಡಬಹುದು. ಇದೊಂದೇ ಅಲ್ಲ, ಕಿನ್ನೌರ್‌ ತುಂಬ ಸಾಕಷ್ಟು ಚಾರಣದ ಅವಕಾಶಗಳಿವೆ. ಸಮಯ, ದೇಹದಲ್ಲಿ ಶಕ್ತಿ ಇದ್ದರೆ ಇಲ್ಲಿನ ಪರ್ವತಗಳಲ್ಲಿ ದಿನಗಟ್ಟಲೆ ಅಡ್ಡಾಡಬಹುದು.

ನದೀತೀರ ಎಂಬ ಅಯಸ್ಕಾಂತೀಯ ಶಕ್ತಿ

ನದಿಗೆ ನಮ್ಮ ಮನಸ್ಸಿನ ಎಲ್ಲ ಸುಸ್ತನ್ನೂ ಹೋಗಲಾಡಿಸಿ ಹೊಸ ಚೈತನ್ಯ ನೀಡಬಲ್ಲ ಶಕ್ತಿಯಿದೆ. ಪ್ರಶಾಂತವಾಗಿ ಹರಿವ ನದೀತೀರದಲ್ಲಿ ಸಂಜೆಯಲ್ಲೋ ಮುಂಜಾವಿನಲ್ಲೋ ಅಡ್ಡಾಡಿದರೆ, ಅದು ನಮಗೆ ಬಹಳದಿನಗಳಿಗೆ ಸಾಕಾಗುವಷ್ಟು ಭರಪೂರ ಚೈತನ್ಯವನ್ನು ಸುರಿಸುರಿದು ಕೊಡುತ್ತದೆ. ಹಾಗಾಗಿ ಚಿತ್ಕೂಲಿಗೆ ಬಂದರೆ ಅಲ್ಲೊಂದು ರಾತ್ರಿ ತಂಗಬೇಕು. ಬಸ್ಪಾನದೀ ತೀರದಲ್ಲಿ ಸುಖಾಸುಮ್ಮನೆ ತಿರುಗಾಡಬೇಕು. ಅಲ್ಲಿ ಮರಳಲ್ಲಿ ಕೂತು, ಕಣ್ಣು ಹಾಯಿಸಿದಲ್ಲೆಲ್ಲ ಕಾಣುವ ಹಿಮಬೆಟ್ಟಗಳನ್ನೆಲ್ಲ ಕಣ್ತುಂಬಿಕೊಳ್ಳಬೇಕು. ಕತ್ತಲರಾತ್ರಿಯಲ್ಲಿ ಆಗಸ ತುಂಬ ಮಿನುಗುವ ನಕ್ಷತ್ರಕೋಟಿಯನ್ನೂ ಎಣಿಸಬೇಕು.

ಚಿತ್ಕೂಲ್‌ ಸೇರಿದಂತೆ, ಕಲ್ಪಾ, ಸಾಂಗ್ಲಾ, ರೆಕಾಂಗ್‌ ಪಿಯೋಗಳಲ್ಲಿ ಉಳಿದುಕೊಳ್ಳಲು ಸಾಕಷ್ಟು ವ್ಯವಸ್ಥೆಗಳಿವೆ. ಹೋಂಸ್ಟೇಗಳು, ಟೆಂಟ್‌ ಸೌಲಭ್ಯಗಳು, ರೆಸಾರ್ಟ್ಗಳು ಸೇರಿದಂತೆ, ಪ್ರವಾಸಿಗರ ಜೇಬಿಗೆ ಆಸಕ್ತಿಗೆ ಅನುಗುಣವಾಗಿ ಸಿಗುತ್ತವೆ. ಆದರೆ, ಇಲ್ಲಿಗೆ ಬರುವ ಮೊದಲು ಪ್ರವಾಸಿಗರು ಒಂದು ವಿಚಾರಕ್ಕೆ ಗಮನ ಕೊಡಬೇಕು. ಅದು ಹವಾಮಾನ. ಜೂನ್‌, ಜುಲೈ ಆಗಸ್ಟ್‌ ತಿಂಗಳುಗಳಲ್ಲಿ ಇಂಥ ಕಡಿದಾದ ಬೆಟ್ಟಗಳ ದುರ್ಗಮದಾರಿಗಳಲ್ಲಿ ಪ್ರಯಾಣ ಮಾಡುವುದು ಸ್ವಲ್ಪ ಯಾತನಾದಾಯಕ. ಒಂದು ಭಾರೀ ಮಳೆ ಇದ್ದಕ್ಕಿದ್ದಂತೆ ನಮ್ಮ ದಾರಿಯನ್ನೇ ಮುಚ್ಚಿಬಿಡಬಹುದು, ಭೂಕುಸಿತಗಳಿಂದ ಇದ್ದಕ್ಕಿದ್ದಂತೆ ಅಪಾಯಗಳು ಎದುರಾಗಬಹುದು. ಉಳಿದಂತೆ ಚಳಿಗಾಲವೂ ಕೂಡ ಇಲ್ಲಿ ಕಷ್ಟದ್ದೇ. ಡಿಸೆಂಬರ್‌ ಜನವರಿ ತಿಂಗಳುಗಳಲ್ಲಿ ಹಿಮಮುಚ್ಚಿದ ದಾರಿಗಳು ಪ್ರಯಾಣವನ್ನು ದುಸ್ತರವಾಗಿಸುತ್ತದೆ. ಜೊತೆಗೆ ಚಿತ್ಕೂಲ್‌ ಸೇರಿದಂತೆ ಹಲವಾರು ಹಳ್ಳಿಗಳು ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ.

ಕಿನೌರ್ ಕಣಿವೆಯಿಂದ ಹರಿದುಬರುವ ಸಟ್ಲೆಜ್ ನದಿ.

ಇನ್ನು ಈ ಪ್ರವಾಸವನ್ನು ಇನ್ನೂ ಸಾಹಸಮಯವನ್ನಾಗಿಸ ಬಯಸುವವರಿಗೆ ಹಾಗೂ ಕೈಯಲ್ಲಿ 10-15 ದಿನ ರಜೆ ಇರುವ ಸ್ವತಃ ಬೈಕ್/ವಾಹನ ಚಲಾಯಿಸಿಕೊಂಡು ಹೋಗಬಯಸುವವರಿಗೆ, ಶಿಮ್ಲಾದಿಂದ ಬೈಕನ್ನೋ ಕಾರನ್ನೋ ಬಾಡಿಗೆ ಪಡೆದು ಸಾಂಗ್ಲಾ ಮಾರ್ಗವಾಗಿ ಚಿತ್ಕೂಲ್‌ ನೋಡಿಕೊಂಡು, ಸ್ಪಿತಿ ಕಣಿವೆಗೆ ಹೋಗಬಹುದು. ಸ್ಪಿತಿಯನ್ನು ನೋಡಿಕೊಂಡು ರೋಹ್ತಂಗ್‌ ಪಾಸ್‌ ಮೂಲಕವಾಗಿ ಮನಾಲಿ ಮಾರ್ಗವಾಗಿ ಮರಳುವುದು ಸಾಹಸ ಪ್ರಿಯರಲ್ಲಿ ಬಹು ಜನಪ್ರಿಯವಾದ ಮಾರ್ಗ.‌

ಹೋಗುವ ಜಾಗದ ಬಗ್ಗೆ ಒಂದಿಷ್ಟು ಮಾಹಿತಿ, ಓದು, ಸಂಸ್ಕೃತಿ, ಆಚಾರ ವಿಚಾರ, ಆಹಾರ ಇವುಗಳೆಲ್ಲವುಗಳ ಬಗ್ಗೆ ಒಂದು ಕುತೂಹಲದ ಕಣ್ಣು ಇದ್ದರೆ, ಎಲ್ಲವುಗಳ ಅನುಭವಕ್ಕೆ ತೆರೆದ ಮನಸ್ಸಿದ್ದರೆ ಒಂದು ಪ್ರವಾಸ ಕೇವಲ ಮನರಂಜನೆಯಷ್ಟೇ ಆಗದೆ ಅರಿವಿನ ಬೆಳಕಿಂಡಿಯೂ ಆಗುತ್ತದೆ. ಒಂದು ಪ್ರವಾಸ ಸಂಪನ್ನವಾಗಲು ಇದಕ್ಕಿಂತ ಇನ್ನೇನು ಬೇಕು ಹೇಳಿ. ಅದಕ್ಕೇ, ಕೋಶ ಓದಿದರೆ ಮಾತ್ರ ಸಾಲದು, ದೇಶ ಸುತ್ತುವುದೂ ಮುಖ್ಯವೇ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles