-ಜಿ. ಅರುಣ್‌ಕುಮಾರ್
ಆರ್.ಚಂದ್ರು ಮತ್ತೊಬ್ಬರ ಕೃತಿಯನ್ನು ಎತ್ತುವಳಿ ಮಾಡಿ ಸಿನಿಮಾ ಮಾಡಿರುವುದೂ ಅಲ್ಲದೆ, ʻನಾನು ಕೆಜಿಎಫ್ ಸಿನಿಮಾದಿಂದ ಸ್ಫೂರ್ತಿ ತಗೊಂಡು ಸಿನಿಮಾ ಮಾಡಿದ್ದೀನಿʼ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದವರು ಚಂದ್ರು ಸ್ಪೂರ್ತಿಯಾಗಿ ತೆಗೆದುಕೊಂಡಿಲ್ಲ ಬದಲಿಗೆ ಪೂರ್ತಿಯಾಗಿ ಎತ್ತುವಳಿ ಮಾಡಿದ್ದಾರೆ ಅಂತಾ ಲೇವಡಿ ಮಾಡುತ್ತಿದ್ದಾರೆ.

ʻಕೆ.ಜಿ.ಎಫ್.ʼ ಒಳಗೆ ಸಿಕ್ಕಿಕೊಂಡಿರುವ ಆರ್.ಚಂದ್ರು ಆಚೆ ಬರಲಿ ಅಂತಾ ಶೌರ್ಯ ಈ ಹಿಂದೆಯೇ ಆಶಯ ವ್ಯಕ್ತಪಡಿಸಿತ್ತು. ಈಗ ಕಬ್ಜ ಚಿತ್ರದ ಟೀಸರ್ ರಿಲೀಸಾಗಿದೆ. ನಾವು ಅಂದುಕೊಂಡಂತೆಯೇ ಆಗಿದೆ. ಆರ್. ಚಂದ್ರು ಎನ್ನುವ ಪುಣ್ಯಾತ್ಮ ಕೆ.ಜಿ.ಎಫ್ ಸಿನಿಮಾದ ಶೇಡ್‌ನಲ್ಲಿ ಚಿತ್ರವನ್ನು ರೂಪಿಸಿಲ್ಲ. ಯಥಾವತ್ತು ಅದೇ ಸಿನಿಮಾವನ್ನು ಕದ್ದು ಕಬ್ಜ ಮಾಡಿದಂತಿದೆ. ಫ್ರೇಂ ಟು ಫ್ರೇಂ ಕೆ.ಜಿ.ಎಫ್ ಅನ್ನು ನಕಲು ಮಾಡಿದ್ದಾರೆ. ಇದನ್ನು ನೋಡಿದವರು ಇದು ಕಬ್ಜ ಅಲ್ಲ ಇದು ಕೆ.ಜಿ.ಎಫ್ ಪಾರ್ಟ್ 3 ಅಂತಾ ಆಡಿಕೊಳ್ಳುತ್ತಿದ್ದಾರೆ.
ಆರ್. ಚಂದ್ರು ಯಾವತ್ತೂ ಸ್ವಂತಿಕೆಯ ಸಿನಿಮಾ ಮಾಡಿದವರಲ್ಲ. ಹಿಂದಿನ ಯಾವ ಸಿನಿಮಾ ಹಿಟ್ ಆಗಿದೆ ಅಂತಾ ನೋಡಿ, ಅದೇ ಫಾರ್ಮುಲಾವನ್ನು ಎತ್ತಿ ಮತ್ತೊಂದು ಸಿನಿಮಾ ಕಟ್ಟುವುದು ಈತನ ವರಸೆ. ಮುಂಗಾರುಮಳೆ ಸಿನಿಮಾ ಬಂದ ಮೇಲೆ ಈತ ತಾಜ್ ಮಹಲ್ ಶುರು ಮಾಡಿದ್ದರು. ಆ ಸಂದರ್ಭದಲ್ಲಿ ಮುಂಗಾರುಮಳೆಯ ಸಿಡಿಯನ್ನು ಲ್ಯಾಪ್ ಟಾಪಲ್ಲಿ ಹಾಕಿಕೊಂಡು ಪ್ರತಿಯೊಂದು ಫ್ರೇಮನ್ನು ಕಂಪೋಸ್ ಮಾಡಿದ್ದರು. ತಂತ್ರಜ್ಞರಿಗೆ ಕೂಡಾ ಮುಂಗಾರುಮಳೆ ಥರಾನೇ ಬೇಕು ಅಂತಾ ತಲೆ ತಿಂದಿದ್ದರು. ಈಗ ಕಬ್ಜ ಸಿನಿಮಾದಲ್ಲಿ ಆಗಿರುವುದೂ ಅದೇ.
ಯಾವತ್ತೂ ಸಿನಿಮಾದ ಥರ ಸೃಜನಶೀಲ ಮಾಧ್ಯಮದಲ್ಲಿ ಸ್ವಂತಿಕೆಗಷ್ಟೇ ಬೆಲೆ. ಅದು ಒಂದು ಸಲ ಮಾತ್ರ. ಪ್ರಶಾಂತ್ ನೀಲ್ ಪ್ರತೀ ಸಲ ಕೆ.ಜಿ.ಎಫ್ ಸಿನಿಮಾವನ್ನು ಹೋಲುವ ಚಿತ್ರವನ್ನು ರೂಪಿಸಿದರೆ ಯಾರೂ ಕಿಮ್ಮತ್ತು ಕೊಡುವುದಿಲ್ಲ. ಹೀಗಿರುವಾಗ ಮತ್ತೊಬ್ಬರ ಕೃತಿಯನ್ನು ಎತ್ತುವಳಿ ಮಾಡಿ ಸಿನಿಮಾ ಮಾಡಿರುವುದೂ ಅಲ್ಲದೆ, ʻನಾನು ಕೆಜಿಎಫ್ ಸಿನಿಮಾದಿಂದ ಸ್ಫೂರ್ತಿ ತಗೊಂಡು ಸಿನಿಮಾ ಮಾಡಿದ್ದೀನಿʼ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದವರು ಚಂದ್ರು ಸ್ಪೂರ್ತಿಯಾಗಿ ತೆಗೆದುಕೊಂಡಿಲ್ಲ ಬದಲಿಗೆ ಪೂರ್ತಿಯಾಗಿ ಎತ್ತುವಳಿ ಮಾಡಿದ್ದಾರೆ ಅಂತಾ ಲೇವಡಿ ಮಾಡುತ್ತಿದ್ದಾರೆ.
