-ಬಾಲಾಜಿ, ದೊಡ್ಡಬಳ್ಳಾಪುರ
ಉತ್ತರಪ್ರದೇಶದ ಬನಾರಸ್ ಜಿಲ್ಲೆಯಲ್ಲಿರುವ ಕಾಶಿಯೊಂದು ಮುಕ್ತಿ ದೊರಕಿಸಿಕೊಡುವ ಪುಣ್ಯ ಕ್ಷೇತ್ರ. ಜೀವಿತದಲ್ಲಿ ಹಿಂದುಗಳು ಒಮ್ಮೆಯಾದರೂ ವಿಶ್ವನಾಥನ ದರ್ಶನ ಮಾಡಬೇಕು ಎನ್ನುವ ಮಹೋನ್ನತ ನಂಬಿಕೆ ಇಲ್ಲಿ ನೆಲೆಸಿರುವ ಮುಕ್ಕೋಟಿ ಜನರಿಗಷ್ಟೇ ಅಲ್ಲ ಎಲ್ಲೆಡೆ ಹಬ್ಬಿದೆ. ಮೋದಿ ತಾವು ಗೆದ್ದ ಕ್ಷೇತ್ರಕ್ಕೆ ನೀಡಿರುವ ಆದ್ಯತೆ ದೇಶಕ್ಕೂ ಮಿಗಿಲು ಎಂಬುದನ್ನು ಧಾರಾಳವಾಗಿ ಹೇಳಬಹುದು. 2004 ರಿಂದೀಚಿಗೆ ಏನಾಗಿದೆ ಅಲ್ಲಿ ಎಂಬುದನ್ನು ಅವಲೋಕಿಸಿದರೆ ಅಲ್ಲೀಗ ಅಲೌಕಿಕ ಬೆಳಗಿಗಿಂತ ಲೌಕಿಕ ಬೆಡಗು ಕಾಣಿಸುತ್ತಿದೆ. ಒಟ್ಟಾರೆ ಅಲ್ಲಿರುವ ಜನರ ಜೀವನ ಮಟ್ಟ ಗೌರಿಶಂಕರದ ಮಟ್ಟಕ್ಕೇರಿದೆ ಎಂದು ಹೇಳಲಾಗದಿದ್ದರೂ ಅದರ ಸ್ವರೂಪ ಬದಲಾಗಿದೆ. ಇದು ಜನರ ಜೀವಿತವನ್ನು ಎಷ್ಟರ ಮಟ್ಟಿಗೆ ರೂಪಾಂತರಿಸುತ್ತದೆ ಎಂಬ ಪ್ರಶ್ನೆ ಇದ್ದೇ ಇದೆ. ಪ್ರಾಚೀನ -ನವೀನ ಕಾಶಿಯತ್ತ ನೋಟ.

“ಕಾಶಿಯಿಂದ ಬಂದನಿಲ್ಲಿ ವಿಶ್ವನಾಥ. ಕರೆಯುವರು ಅವನನ್ನೇ ಮಂಜುನಾಥ. ಧರ್ಮದ ಮರ್ಮವಿಹ ಈ ನೆಲ, ಕನ್ನಡದ ಹಿರಿಮೆಯ ಧರ್ಮಸ್ಥಳ”… ಅರ್ಚನಾ ಉಡುಪ ಅವರ ದನಿಯಲ್ಲಿ ಈ ಹಾಡು ಎಲ್ಲೆಡೆ ಮೊಳಗುತ್ತಿರುತ್ತದೆ. ಬೆಳಗಾವಿ ಜಿಲ್ಲೆಯ ರಾಯದುರ್ಗ ತಾಲೂಕಿನ ಮುಗಳಖೋಡದ ಮರುಘರಾಜೇಂದ್ರ ಮಠದ ಕುರಿತು “ಕಾಶಿಯಿಂದ ಬಂದ ನಮ್ಮ ಶಿವಲಿಂಗನು, ಮುಗಳಖೋಡ ಮಠಕ್ಕೆ ಬಂದು ವಾಸವಾದನು”ಎಂಬ ಕಸ್ತೂರಿ ಶಂಕರ್ ಗಾನಸುಧೆಯಲ್ಲೂ ಕಾಶಿ ಪ್ರಸ್ತಾಪ ಬರುತ್ತದೆ. ಗಂಗಾ ಸ್ನಾನ, ತುಂಗಾ ಪಾನ ಎಂಬ ಉಕ್ತಿ, ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ, ಬಿಕಾರಿಯಾದವನು ಕಾಶಿಗೆ ಹೋದರೂ ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ? ಎಂಬ ಗಾದೆಗಳು-ಹೀಗೆ ನಾವಿರುವ ಎಡೆಗಳಲ್ಲೇ ಕಾಶಿ ಮಾರ್ದನಿಸುತ್ತಿರುತ್ತದೆ. ಇದೊಂದು ಪುಣ್ಯ, ಪಾವನ ಮತ್ತು ಮೋಕ್ಷ ತಾಣ. ಸಹಜವಾಗಿಯೂ ಇದರ ಅಂಟು ನಂಟು ಧರ್ಮಸ್ಥಳ ಆದಿಯಾಗಿ ಹಲವು ಕ್ಷೇತ್ರಗಳಿಗೆ ಇದ್ದೇ ಇದೆ. ಕಾಶಿಗೆ ಹೋಗಿ ಬರುವುದು ಜೀವನದ ದೊಡ್ಡ ಪುರುಷಾರ್ಥ ಎನ್ನುವವರಿಗೇನೂ ಕಡಿಮೆ ಇಲ್ಲ.
ಸಾವಿರಾರು ವರ್ಷಗಳ ಪುರಾಣ ಮತ್ತು ನೂರಾರು ವರ್ಷಗಳ ಇತಿಹಾಸವಿರುವ ಈ ಪ್ರದೇಶವೀಗ ವರ್ತಮಾನದಲ್ಲೂ ನಿನಾದಿಸುತ್ತಿದೆ. ಏಕೆಂದರೆ ಕಾಶಿ ವಿಶ್ವನಾಥ ದೇವಾಲಯದ ಜೀರ್ಣೋದ್ಧಾರ ಹಾಗೂ ಇಡೀ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಮತ್ತು ಉತ್ತರಪ್ರದೇಶ ಸರಕಾರ ಒಟ್ಟು 13,450 ಕೋಟಿ ರೂಪಾಯಿ ಖರ್ಚು ಮಾಡುವ ಯೋಜನೆ ಹಾಕಿಕೊಂಡಿದೆ. ಕಾಶಿ ವಿಶ್ವನಾಥ ಧಾಮ (ಕಾಶಿ ಕಾರಿಡಾರ್) ಇದರ ಹೆಸರು. ಈಗಾಗಲೇ ಉದ್ಘಾಟನೆಯಾಗಿದೆ. 2014 ರಿಂದ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳು ನಡೆಯುತ್ತಲೇ ಇವೆ. ಪುಣ್ಯ ಕ್ಷೇತ್ರದ ಚಹರೆ ಬದಲಾಗುತ್ತಿದೆ. ಡಿ. 17ರಂದು ವಾರಣಾಸಿಯಲ್ಲಿ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನ ಜರುಗಿತು. ಕಾಶಿ ಅಭಿವೃದ್ಧಿ ಕಾರ್ಯಗಳು ಇಡೀ ದೇಶದ ಅಭಿವೃದ್ಧಿಗೆ ಮಾರ್ಗಸೂಚಿ ಎಂದು ಮೋದಿ ಘೋಷಿಸಿದರು. ತಮ್ಮ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಪರ್ವವನ್ನು ಬಿಡಿಸಿಟ್ಟರು. ಇಡೀ ದೇಶಕ್ಕೆ ಮಾದರಿ ಎಂದು ಹೇಳಲಾಗುತ್ತಿರುವ ಕಾಶಿ ಸ್ವರೂಪವನ್ನು ಹೇಗೆ ಬದಲಾಯಿಸಲಾಗುತ್ತಿದೆ ಎಂಬುದನ್ನು ನೋಡೋಣ. ಕಾಶಿ ಎಂಬ ಹೆಸರು ಬನಾರಸ್, ವಾರಣಾಸಿ ಎಂದಾಗಿದೆ ನಿಜ. ಆದರೆ ಕಾಶಿ ಎಂಬುದು ಇಡೀ ದೇಶದ್ಯಾಂತ ಚಾಲ್ತಿಯಲ್ಲಿರುವ ಹೆಸರು ಎಂಬುದನ್ನು ಮರೆಯುವಂತಿಲ್ಲ.

ರೂಪಾಂತರ ಕಾಶಿ ಕಳೆ
ಪಾಪ ಪುಣ್ಯಗಳ ಲೆಕ್ಕದಲ್ಲಿ ಗಂಗೆಗೆ ಹೋಗಿ ಮುಳುಗಿ ಬರುತ್ತಿದ್ದ ಹಿಂದೂ ಯಾತ್ರಾರ್ಥಿಗಳಿಗೆ ಅಲ್ಲಿನ ಗಲೀಜು, ಅವ್ಯವಸ್ಥೆ, ಅರಾಜಕತೆ ನೋಡಿ ಮನಸ್ಸಿಗೆ ಬೇಸರವಾದರೂ ಲೌಕಿಕವಷ್ಟೇ ಅಲ್ಲ ಅಲೌಕಿಕವಾಗಿಯ ಇದೊಂದು ಪುಣ್ಯ ಸಂಚಯನ ಕೇಂದ್ರ ಎಂಬ ಕಾರಣಕ್ಕೆ ಅಸೌಖ್ಯದ ಕುರಿತು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಕೆಲವೊಮ್ಮೆ ನಮ್ಮ ನಂಬಿಕೆಗಳು ವಾಸ್ತವವನ್ನು ಇದ್ದಂತೆ ಸ್ವೀಕರಿಸಲು ಹಿಂದೆ ಸರಿಯುತ್ತವೆ. ಮೋದಿ 2014 ರಲ್ಲಿ ‘ಮಾತೆ ಗಂಗೆ ಕರೆದಿದ್ದಾಳೆ’ ಎಂದು ಘೋಷಿಸಿದರು. ಮೋದಿ ಅವರನ್ನು ಅಲ್ಲಿನ ಪಂಡಿತರು ಹಿಂದುತ್ವದ ಕಾರಣದಿಂದ ಅಪ್ಪಿಕೊಂಡಿದ್ದರಾದರೂ ಅಭಿವೃದ್ಧಿ ಮನ್ವಂತರ ಶುರು ಎಂದಾಗ ಜೋರಾಗಿ ನಕ್ಕರು. ಕಾಶಿ ಪಂಡಿತರಿಗೆ ಬೆಳಿಗ್ಗೆ ಪೂಜೆ ಮತ್ತು ಕರ್ಮ ಮುಗಿಸಿ ಬನಾರಸ್ ಪಾನ್ ತಿನ್ನುತ್ತಾ ಗಂಗೆ ತಟದಲ್ಲಿ ಕುಳಿತು ಜೋ ಬೈಡೆನ್‌ನಿಂದ ಹಿಡಿದು ಮೋದಿ, ಯೋಗಿ ಎಲ್ಲದರ ಬಗ್ಗೆ ಹರಟೆ ಹೊಡೆಯುವುದು ಪ್ರೀತಿಯ ಸಂಗತಿ. 2015ರಲ್ಲೇ ಕಾಶಿಯ ಘಾಟ್‌ಗಳನ್ನು ಸ್ವಚ್ಛಗೊಳಿಸುವ ಜವಾಬ್ದಾರಿ ಒಂದೊಂದೇ ಖಾಸಗಿ ಕಂಪನಿಗೆ ವಹಿಸುತ್ತಾ ಬಂದ ಮೋದಿ ಇಸ್ರೇಲ್‌ನಿಂದ ನೀರು ಸ್ವಚ್ಛಗೊಳಿಸುವ ಯಂತ್ರ ತಂದು ನದಿಯಲ್ಲಿ ಬಿಟ್ಟರು.
ಸ್ಥಳೀಯ ಆಡಳಿತದಿಂದ ಯಾರು ಕೂಡ ನದಿಗೆ ಹೆಣ ಬಿಡಬಾರದು ಎಂದು ಫರ್ಮಾನು ಹೊರಡಿಸಿ ಇಕ್ಕಟ್ಟಾದ ಜಾಗದಲ್ಲಿದ್ದ ವಾರಾಣಸಿ ರೈಲ್ವೆ ನಿಲ್ದಾಣದಿಂದ 10 ಕಿ.ಮೀ. ದೂರದಲ್ಲಿದ್ದ ಸಣ್ಣ ಮಂಡೂದಿಹ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಬನಾರಸ್ ಎಂದು ಹೆಸರು ಕೊಟ್ಟರು. ಮಧ್ಯರಾತ್ರಿ ಮೋದಿ ಮತ್ತು ಯೋಗಿ ಪರಿಶೀಲನೆಗೆ ಹೋಗಿದ್ದು ಅದೇ ರೈಲ್ವೆ ನಿಲ್ದಾಣಕ್ಕೆ. ಈಗ ದಾಖಲೆಯ 3 ವರ್ಷದಲ್ಲಿ 330ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿ ಕಾಶಿ ವಿಶ್ವನಾಥನ ಮಂದಿರದ ಸೊಬಗನ್ನು ಹೆಚ್ಚಿಸಿದ್ದಾರೆ.

ಉದ್ಯೋಗಗಳ ಸುಗ್ಗಿ
ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣದಲ್ಲಿ ಕೂಡ ಬಹಳಷ್ಟು ಕೆಲಸಗಳು ಸೃಷ್ಟಿಯಾಗಿದೆ. ಇದು ಮುಗಿದು ಲೋಕಾರ್ಪಣೆ ಆದ ಮೇಲೆ ಕೂಡ ಹೆಚ್ಚಿನ ಉದ್ಯೋಗಗಳು ಉಂಟಾಗಲಿವೆ. ಜಗತ್ತಿನ ದೊಡ್ಡ ವೃತ್ತಿಪರರ ನೆಟ್ ವರ್ಕ್ ಹೊಂದಿರುವ ಸಂಸ್ಥೆಯಾದ ಅರ್ನೆಸ್ಟ್ ಅಂಡ್ ಯಂಗ್, ಕಾಶಿ ವಿಶ್ವನಾಥ ಸ್ಪೆಷಲ್ ಏರಿಯಾ ಡವಲಪ್‌ಮೆಂಟ್ ಬೋರ್ಡ್ ಎದುರು ಒಂದು ಪ್ರೆಸೆಂಟೇಷನ್ ನೀಡಿತ್ತು. ಇದರಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಬರುವ ಆದಾಯದ ಲೆಕ್ಕಾಚಾರ ಜೊತೆಗೆ ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಕ್ರೌಡ್ ಮ್ಯಾನೇಜ್ಮೆಂಟ್ ಮಾಡಲು ಕೂಡ ಹೊಸ ಐಟಿ ಸೊಲ್ಯೂಷನ್ ನೀಡಿತು. ಒಂದು ಅಂದಾಜಿನ ಪ್ರಕಾರ ಹೀಗೆ ಬರುವ ಯಾತ್ರಾರ್ಥಿಗಳ ಯೋಗಕ್ಷೇಮಕ್ಕೆ ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ಗೆ ತಿಂಗಳಿಗೆ 27 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ.
ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಈ ಮಂದಿರಕ್ಕೆ ಸಿಕ್ಕಿರುವ ಪ್ರಚಾರ ಮತ್ತು ಇದರ ಅಭಿವೃದ್ಧಿ ಇಲ್ಲಿಗೆ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಕರೆದು ತರುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇವಸ್ಥಾನದ ಸುತ್ತಮುತ್ತ 23 ಬಹುದೊಡ್ಡ ಕಟ್ಟಡಗಳ ನಿರ್ಮಾಣ ಕೂಡ ಆಗಿದೆ, ಇಲ್ಲಿ ಆಸ್ಪತ್ರೆಯಿಂದ ಹಿಡಿದು, ಶಾಪಿಂಗ್ ಕಾಂಪ್ಲೆಕ್ಸ್ ವರೆಗೆ ಎಲ್ಲಾ ತರಹದ ವಾಣಿಜ್ಯ ವಹಿವಾಟಿಗೂ ಅವಕಾಶವಿರುತ್ತದೆ. ಉತ್ತರ ಪ್ರದೇಶದಲ್ಲಿ ನಡೆದ ಕುಂಭಮೇಳ ಸಾವಿರಾರು ಕೋಟಿ ರೂಪಾಯಿ ಆದಾಯ ತಂದುಕೊಟ್ಟ ಕಾರ್ಯಕ್ರಮವಾಗಿತ್ತು. ಉತ್ತರ ಪ್ರದೇಶದ ಸರಕಾರಕ್ಕೆ ಈ ವಿಷಯ ತಿಳಿದಿದೆ. ಇಲ್ಲಿಗೆ ಹೂಡಿರುವ ಹಣವನ್ನ ವರ್ಷ ಅಥವಾ ಎರಡು ವರ್ಷದಲ್ಲಿ ವಾಪಸ್ ಪಡೆಯುವ ಭರವಸೆ ಅವರಿಗಿದೆ. ಅರ್ನೆಸ್ಟ್ ಅಂಡ್ ಯಂಗ್ ಸಂಸ್ಥೆಯನ್ನು ಸಲಹೆಗಾರರನ್ನಾಗಿ ನೇಮಿಸಿಕೊಂಡಿರುವ ಉದ್ದೇಶ ಕೂಡ ಇದೆ. ಮೊದಲ ದಿನದಿಂದ ವೃತಿಪರತೆ ಕಾಯ್ದುಕೊಳ್ಳುವುದು ಮೂಲ ಉದ್ದೇಶವಾಗಿದೆ. ಈ ಕಾರಿಡಾರ್ ವರ್ಷಕ್ಕೆ ಎಷ್ಟು ಆದಾಯ ತಂದುಕೊಡಬಹುದು ಎನ್ನುವುದು ಇನ್ನೂ ಪೂರ್ಣಪ್ರಮಾಣವಾಗಿ ಮಂಡಿಸಿಲ್ಲ, ಆದರೆ ಇದು ಜಗತ್ತಿನ ಎಲ್ಲೆಡೆಯಿಂದ ಜನರನ್ನ ಸೆಳೆಯುವುದು ಮಾತ್ರ ಖಚಿತ.

ಉತ್ತರ ಪ್ರದೇಶ ಸರಕಾರ ಇದರಿಂದ ಎರಡು ಕೆಲಸಗಳನ್ನು ಒಂದೇ ಏಟಿಗೆ ಸಾಧಿಸಿಕೊಂಡಿದೆ. ಮೊದಲೆನೆಯದಾಗಿ ಸಮಸ್ತ ಹಿಂದೂ ಜನರ ಮನಸ್ಸನ್ನು ಗೆದ್ದಿರುವುದು, ಇದರಿಂದ ಅವರಿಗೆ ರಾಜಕೀಯವಾಗಿ ಲಾಭವಾಗಲೂಬಹುದು, ಇದಕ್ಕಿಂತ ಮುಖ್ಯವಾಗಿ ಕಾಶಿಯ ಮುಖವನ್ನು ಬದಲಾಯಿಸಿರುವುದು ತನ್ಮೂಲಕ ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಶಾಶ್ವತವಾಗಿ ಆದಾಯವನ್ನು ಸರಕಾರಕ್ಕೆ ಬರುವಂತೆ ಮಾಡಿಕೊಳ್ಳುವುದು.
ಚರಿತ್ರೆಯಲ್ಲಾದ ಏಳುಬೀಳು
ಕಾಶಿ ವಿಶ್ವನಾಥ ದೇವಾಲಯವು ಮೊಘಲರ ಆಳ್ವಿಕೆಯಲ್ಲಿ ಹಲವಾರು ಬಾರಿ ದಾಳಿಗೊಳಗಾಗಿದೆ. ಅಕ್ಬರ್ ಚಕ್ರವರ್ತಿಯು ರಾಜಾ ಮಾನ್‌ಸಿಂಗ್‌ಗೆ ಈ ದೇವಾಲಯ ಕಟ್ಟಲು ಅನುಮತಿ ನೀಡಿದ್ದ. ಆದರೆ, ಆತನ ಮರಿ ಮಗ ಔರಂಗಜೇಬ್ ಮಾತ್ರ ತನ್ನ ಆಳ್ವಿಕೆ ಕಾಲದಲ್ಲಿ ಈ ದೇವಾಲಯ ಉರುಳಿಸಲು ಆದೇಶ ನೀಡಿದ್ದಷ್ಟೇ ಅಲ್ಲ, ಈ ಸ್ಥಳದಲ್ಲಿ ಮಸೀದಿಯನ್ನೂ ನಿರ್ಮಿಸಿದ. ದೇವಾಲಯ ಹಲವು ಬಾರಿ ನೆಲಸಮವೂ ಆಗಿಬಿಟ್ಟಿದೆ. ಪುನರ್ನಿರ್ಮಾಣವನ್ನೂ ಕಂಡಿದೆ. ಕಡೆಯ ಬಾರಿಗೆ ಮತ್ತೆ ಕಾಶಿ ದೇವಾಲಯ ಪುನರ್ನಿರ್ಮಿಸಿದಾಕೆ ಇಂಧೋರ್‌ನ ರಾಣಿ ಅಹಲ್ಯಾ ಬಾಯಿ ಹೋಲ್ಕರ್. ಶಿವನು ರಾಣಿಯ ಕನಸಿನಲ್ಲಿ ಬಂದು ಸೂಚನೆ ಕೊಟ್ಟ ಎಂಬ ಪ್ರತೀತಿ ಇದೆ. ಅದನ್ನು ಗಂಭೀರವಾಗಿ ಪರಿಗಣಿಸಿದ ರಾಣಿ, ಕಾಶಿಗೆ ಮುಂಚಿನ ವೈಭವವನ್ನು ಮರಳಿಸಬೇಕೆಂದು ನಿರ್ಧರಿಸಿ ಅದರ ಪುನರ್ನಿರ್ಮಾಣಕ್ಕೆ ದೇಣಿಗೆ ನೀಡಿದಳು. ನಂತರ ಇಂಧೋರ್‌ನ ಮಹಾರಾಜ ರಂಜಿತ್ ಸಿಂಗ್ ಕೂಡಾ ಈ ದೇವಾಲಯದ 4 ಚಿನ್ನದ ಕಂಬಗಳಿಗಾಗಿ ಸುಮಾರು 10 ಟನ್‌ನಷ್ಟು ಬಂಗಾರವನ್ನು ಕಾಣಿಕೆಯಾಗಿ ನೀಡಿದರು. ಈಗಲೂ ಕೂಡಾ ಮಸೀದಿಯ ಅವಶೇಷಗಳು ದೇವಾಲಯದ ಬಳಿ ಇವೆ. ಯಾವಾಗ ಔರಂಗಜೇಬ್ ದೇವಾಲಯ ಉರುಳಿಸಲು ಆದೇಶ ನೀಡಿದನೋ, ಆಗ ದೇವಾಲಯದ ಮುಖ್ಯ ಅರ್ಚಕರು ಶಿವಲಿಂಗವನ್ನು ಉಳಿಸುವ ಸಲುವಾಗಿ ಬಚ್ಚಿಡಲು ಶಿವಲಿಂಗದೊಂದಿಗೆ ಬಾವಿಗೆ ಹಾರಿದರು. ಈಗ ಕೂಡಾ ಈ ಬಾವಿಯು ದೇವಾಲಯ ಹಾಗೂ ಮಸೀದಿಯ ಅವಶೇಷಗಳ ನಡುವೆ ಇದೆ. ಇದನ್ನು ಗ್ಯಾನವಪಿ ಬಾವಿ ಎಂದೇ ಕರೆಯಲಾಗುತ್ತದೆ.

ಪುರಾಣ ಪ್ರಭೆ
ಭೂಮಿಯು ರೂಪುಗೊಂಡಾದ ಮೇಲೆ ಸೂರ್ಯನ ಮೊದಲ ಕಿರಣ ಬಿದ್ದಿದ್ದು ಕಾಶಿಯ ಮೇಲೆ ಎಂಬ ನಂಬಿಕೆ ಇದೆ. ಶಿವನು ಈ ದೇವಾಲಯದಲ್ಲಿ ಕೆಲ ಕಾಲ ನೆಲೆಸಿದ್ದ ಎನ್ನಲಾಗುತ್ತದೆ. ಇಡೀ ನಗರದ ಕಾವಲಾಗಿ ಈಗಲೂ ಶಿವ ನಿಂತಿದ್ದಾನೆ ಎಂಬ ನಂಬಿಕೆಯಿಂದಲೇ ಕಾಶಿಯನ್ನು ಶಿವ್ ಕಿ ನಗ್ರಿ ಎನ್ನಲಾಗುತ್ತದೆ. ದೇವಾಲಯದ ಮೇಲ್ಭಾಗದಲ್ಲಿ ಚಿನ್ನದ ಛಾತ್ರಾ ಇದೆ. ಇದರ ಸೌಂದರ್ಯದ ಹೊರತಾಗಿಯೂ ಛಾತ್ರಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. ಈ ದೇವಾಲಯದಲ್ಲಿ ಮಾಡಿಕೊಂಡ ಯಾವುದೇ ಪ್ರಾರ್ಥನೆಯು ಛಾತ್ರವನ್ನು ನೋಡಿದ ನಂತರ ಈಡೇರುತ್ತದೆ ಎನ್ನಲಾಗುತ್ತದೆ. ಛಾತ್ರವು ದೇವಾಲಯದಷ್ಟೇ ಪವಿತ್ರ ಎಂದು ಪರಿಗಣಿತವಾಗಿದೆ.
ಇಲ್ಲಿರುವ ವಿಶ್ವನಾಥನು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದ್ದಾನೆ. ಇಲ್ಲಿ ವಿಶ್ವೇಶ್ವರ ಜ್ಯೋತಿರ್ಲಿಂಗವಿದ್ದು, ಇದು ಸ್ವತಃ ಶಿವನ ಅಂತಿಮ ರೂಪದ ಪ್ರತಿನಿಧಿ ಎನ್ನಲಾಗುತ್ತದೆ. ಇದನ್ನು ಕಾಶಿ ದೇವಾಲಯದ ಗರ್ಭಗುಡಿಯಲ್ಲಿ ಬೆಳ್ಳಿಯ ಅಂಕಣದ ಮೇಲಿರಿಸಲಾಗಿದೆ. ಈ ಜ್ಯೋತಿರ್ಲಿಂಗ ದರ್ಶನ ಮಾತ್ರದಿಂದ ಮೋಕ್ಷ ಲಭಿಸಲಿದೆ ಎಂಬ ಮಾತಿದೆ. ಈ ಕಾರಣಕ್ಕೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಶಿಗೆ ಹೋಗಬೇಕು ಎಂಬ ಅಭೀಪ್ಸೆ ಇದ್ದೇ ಇರುತ್ತದೆ. ಹಿಂದುಗಳ ಪಾಲಿಗೆ ಇದೊಂದು ಪವಿತ್ರ ಕ್ಷೇತ್ರವಾಗಿದೆ.
ಕಾಶಿಯು ಅತಿ ಪುರಾತನ ನಗರಗಳಲ್ಲೊಂದು. ಇಡೀ ವಿಶ್ವ ಪ್ರಳಯದಿಂದ ಮುಳುಗಿದಾಗ ಶಿವನು ತನ್ನ ತ್ರಿಶೂಲದ ತುದಿಯಲ್ಲಿ ಕಾಶಿಯನ್ನು ಎತ್ತಿ ಹಿಡಿದು ರಕ್ಷಿಸಿದನಂತೆ. ಶಿವನ ಈ ಕ್ರಿಯೆ ಊರ್ಧ್ವಾಮ್ನಾಯ ಎಂದು ಹಿಂದೂ ಪುರಾಣಗಳಲ್ಲಿ ಕರೆಸಿಕೊಂಡಿದೆ. ಹಾಗಾಗಿಯೇ ಕಾಶಿ ಅತಿ ಹಳೆಯ ನಗರವಾಗಿರುವುದು. ಇಲ್ಲಿನ ಪ್ರತಿಯೊಂದು ಕಲ್ಲು ಕೂಡಾ ವಿಶ್ವನಾಥನಷ್ಟೇ ಪವಿತ್ರ ಎನ್ನಲಾಗುತ್ತದೆ.
ಮೋದಿ ಸ್ಪರ್ಶ
ಇದಲ್ಲದೆ ಇನ್ನೊಂದು ದಿಕ್ಕಿನ ವಿಚಾರವೂ ಇದ್ದೇ ಇದೆ. ಜನರಿಗೆ ಬೇಕಿರುವುದು ಮೋಕ್ಷವಲ್ಲ, ಕೆಲಸ ಎನ್ನುವ ಕೂಗನ್ನು ಸಮಾಜದ ಒಂದು ವರ್ಗ ಶುರು ಮಾಡಿದೆ. 352 ವರ್ಷಗಳ ಹಿಂದೆ ಮೊಗಲರ ದಾಳಿಯಿಂದ ಝರ್ಜರಿತವಾಗಿದ್ದ ಕಾಶಿ ವಿಶ್ವನಾಥ ಮಂದಿರಕ್ಕೆ ಈಗ ಭಾರಿ ಖರ್ಚು ಮಾಡಿ ಹೊಸ ರೂಪ ನೀಡಲಾಗಿದೆ. 2014ರ ವೇಳೆ ಇದ್ದ ಕಾಶಿಯೇ ಬೇರೆ, ಈಗಿನ ನವನಿರ್ಮಾಣಗೊಂಡಿರುವ ಕಾಶಿಯೇ ಬೇರೆ. ನರೇಂದ್ರ ಮೋದಿ ಇಡೀ ದೇಶಕ್ಕೆ ಕೊಟ್ಟ ಭರವಸೆ ಮತ್ತು ಅದನ್ನು ಈಡೇರಿಸಲು ಅವರು ಮಾಡುತ್ತಿರುವ ಕಾರ್ಯಗಳು ತುಂಬ ಹಿತಾನುಭವವನ್ನೇನೂ ನೀಡುತ್ತಿಲ್ಲ. ಆದರೆ ಅವರು ಗೆದ್ದ ಕ್ಷೇತ್ರ ಮಾತ್ರ ಎಲ್ಲ ವಿಧದಲ್ಲೂ ಬದಲಾಗುತ್ತಿದೆ. ವಾರಣಾಸಿ, ಬನಾರಸ್ ಎಂದೂ ಕರೆಯಲ್ಪಡುವ ಹಿಂದೂಗಳ ಪೂಜಾಕೇಂದ್ರ, ಶಕ್ತಿಕೇಂದ್ರ ಕಾಶಿಯ ಗಲ್ಲಿಗಲ್ಲಿಗಳೂ ಬದಲಾವಣೆಯ ದ್ಯೋತಕವಾಗುತ್ತಿದೆ.

ಜಪಾನಿನ ಧಾರ್ಮಿಕ ನಗರವಾದ ಕ್ಯೋಟೋ ನಗರದಂತೆ ವಾರಣಾಸಿಯಲ್ಲೂ ಬದಲಾವಣೆ ತರಲಾಗುವುದು ಎಂದು ಕಳೆದ ಲೋಕಸಭಾ ಚುನಾವಣೆಯ ವೇಳೆ ಮೋದಿ ಜನರಿಗೆ ವಾಗ್ದಾನ ನೀಡಿದ್ದರು. ಅವರ ಕನಸಿನ ಯೋಜನೆಗಳು ಕಾಶಿಯಲ್ಲಿ ಒಂದೊಂದಾಗಿ ಆರಂಭಗೊಂಡಿತು. ಭೂಕಬಳಿಕೆದಾರರನ್ನು ಹೆಡೆಮುರಿ ಕಟ್ಟಲಾಯಿತು, ವಿದ್ಯುತ್ ಲೈನುಗಳನ್ನು ಅಂಡರ್ ಗ್ರೌಂಡ್ ಮೂಲಕ ಎಳೆಯಲಾಯಿತು. ಗಂಗಾ ನದಿಯನನ್ನು ಶುಚಿತ್ವಗೊಳಿಸುವ ಕೆಲಸ ವೇಗ ಪಡೆದುಕೊಂಡಿತು. ಬಹುಪಯೋಗಿ ಟರ್ಮಿನಲ್ ಅನ್ನು ಸ್ಥಾಪಿಸಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ವಾರಣಾಸಿಯಿಂದ ಕೋಲ್ಕತ್ತಾಗೆ ಒಳನಾಡು ಜಲಮಾರ್ಗದ ಮೂಲಕ ಕಂಟೇನರ್ ಕಳುಹಿಸಲಾಯಿತು.
1572 ಕೋಟಿ ರೂಪಾಯಿ ವೆಚ್ಚದಲ್ಲಿ ವಾರಣಾಸಿಯ 34 ಕಿಲೋಮೀಟರ್ ರಸ್ತೆಯನ್ನು ಅಭಿವೃದ್ದಿಗೊಳಿಸಲಾಯಿತು. ಫ್ಲೈಓವರ್, ರಿಂಗ್ ರಸ್ತೆಗಳು ನಿರ್ಮಾಣಗೊಂಡವು. ಇಲ್ಲಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳು ಹೊಸರೂಪವನ್ನು ಪಡೆದುಕೊಂಡವು. ನಮಾಮಿ ಗಂಗೆ ಪ್ರಾಜೆಕ್ಟ್ ಮೂಲಕ 913 ಕೋಟಿ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ಸೇರಿದಂತೆ ಹಲವು ಅಭಿವೃದ್ದಿ ಕಾಮಗಾರಿಗಳು ಪೂರ್ಣಗೊಂಡವು. ಜೆನರ್ಮ್, ಅಮೃತ್ ಸ್ಕೀಂ ಅಡಿಯಲ್ಲಿ 703 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಚೆ ನೀರು ಗಂಗಾ ನದಿ ಸೇರದಂತೆ ಯೋಜನೆ ಕಾರ್ಯಗತಗೊಂಡವು. ಇದಕ್ಕಾಗಿ, ಒಳಚರಂಡಿ ಸಂಸ್ಕರಣಾ ಘಟಕ ಯೋಜನೆ ತರಲಾಯಿತು.

ವಾರಣಾಸಿ ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್
(ಸಿಜಿಡಿ) ನೆಟ್ವರ್ಕ್ ಕಾರ್ಯಾರಂಭಗೊಂಡಿತು. ಇದು ನಗರದ ಮನೆಗಳು, ಸಾರಿಗೆ ವಲಯ ಮತ್ತು ಕೈಗಾರಿಕೆಗಳಿಗೆ ಪರಿಸರ ಸ್ನೇಹಿ ನೈಸರ್ಗಿಕ ಅನಿಲವನ್ನು ಪೂರೈಸುತ್ತದೆ. 86 ವರ್ಷಗಳ ನಂತರ, ವಾರಣಾಸಿಯಲ್ಲಿ 16 ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಅಂಡರ್ ಗ್ರೌಂಡ್ ಮೂಲಕ ಕೇಬಲ್ ಹಾಕಿ, ಓವರ್‌ಹೆಡ್ ವಿದ್ಯುತ್ ಕೇಬಲ್‌ಗಳನ್ನು ಕಿತ್ತುಹಾಕಲಾಯಿತು. ಪ್ರತ್ಯೇಕ ಪವರ್ ಗ್ರಿಡ್ ಅನ್ನು ಹಾಕಲಾಯಿತು.

ಹೋಮಿ ಬಾಬಾ ಕ್ಯಾನ್ಸರ್ ಆಸ್ಪತ್ರೆಯನ್ನು ವಾರಣಾಸಿಯಲ್ಲಿ ತೆರೆಯಲಾಯಿತು. ಜಪಾನ್ ಸಹಯೋಗದೊಂದಿಗೆ ಆಧುನಿಕ ಸಮಾವೇಶ ಕೇಂದ್ರ ಶುರುವಾಯಿತು. ಡಿ. 13 ರಂದು ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಪ್ರಧಾನಿ ಮೋದಿ ದೇಶಕ್ಕೆ ಅರ್ಪಿಸಿದರು. ಸಾಂಸ್ಕೃತಿಕತೆಯ ಜೊತೆಗೆ ಆಧುನಿಕತೆಯನ್ನೂ ಸೇರಿಸಿ ಈ ಕಾರಿಡಾರ್ ನಿರ್ಮಾಣಗೊಂಡಿದೆ. ಐದು ಲಕ್ಷ ಚದರಡಿಯಲ್ಲಿ ನಿರ್ಮಾಣಗೊಂಡಿರುವ ಈ ಕಾರಿಡಾರ್‌ನಿಂದಾಗಿ ದೇವಾಲಯದೊಳಗೆ ಏಕಕಾಲಕ್ಕೆ ಸಾವಿರಾರು ಮಂದಿ ಕೂರಬಹುದಾಗಿದೆ.
ವಿಶ್ವದ ಅತಿ ಹಳೆಯ ನಗರವಾದ ವಾರಣಾಸಿಯಲ್ಲಿ ಎಲ್ಲೆಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವುದು ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತಹ ಮಾತು. ಕೆಲವೊಂದು ಯೋಜನೆಗಳಿಗೆ 2018ರಲ್ಲಿ ಹಾಕಿದ ಅಡಿಪಾಯ 2021 ರೊಳಗೆ ಪೂರ್ಣಗೊಳಿಸಲಾಗುತ್ತಿದೆ. ಒಟ್ಟಿನಲ್ಲಿ, ಕಳೆದ ಏಳು ವರ್ಷಗಳಲ್ಲಿ ವಾರಣಾಸಿ ಹತ್ತುಹಲವು ಬದಲಾವಣೆ/ಅಭಿವೃದ್ದಿಯನ್ನು ಕಂಡಿದ್ದಂತೂ ಹೌದು.