24.8 C
Bengaluru
Wednesday, March 15, 2023
spot_img

ಬಿಜೆಪಿಗೆ ಮೀಸಲಾತಿ ಕೋಲಾಹಲವೇ ಕಂಟಕ!

ಆರ್.ಟಿ. ವಿಠ್ಠಲಮೂರ್ತಿ

ಹಲವಾರು ಜಾತಿಗಳು ತಮ್ಮನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಅಂತ, ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಅಂತ ಹೋರಾಟ ಮಾಡುತ್ತಲೇ ಇವೆ. ಮೀಸಲಾತಿ ಹೆಚ್ಚಳಕ್ಕೂ, ಬೇರೆ ಬೇರೆ ಪ್ರವರ್ಗಗಳ ಪಟ್ಟಿಗೆ ಸೇರಿಸುವುದಕ್ಕೂ ವ್ಯತ್ಯಾಸವಿದೆ ನಿಜ. ಆದರೆ ಈ ಕೆಲಸಕ್ಕೆ ಕೈ ಹಾಕಿದರೆ ತಮಗಿರುವ ಮೀಸಲಾತಿಯ ಪ್ರಮಾಣ ಕಡಿಮೆಯಾಯಿತು ಎಂಬ ಆಕ್ರೋಶ ಶುರುವಾಗುತ್ತದೆ. ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಗೆ ಸೇರಿಸುವುದಕ್ಕೆ ಹಿಂದುಳಿದ ವರ್ಗಗಳ ಕೋಟೆಯಿಂದ ಈಗಾಗಲೇ ಅಪಸ್ವರ ಏಳುತ್ತಿದೆ. ಇದೇ ರೀತಿ ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ವಾಲ್ಮೀಕಿ ಸಮುದಾಯ ಕೆರಳುತ್ತದೆ. ಒಂದು ವೇಳೆ ಇದನ್ನು ಗಮನದಲ್ಲಿಟ್ಟುಕೊಂಡು ಮೌನವಾಗಿದ್ದರೆ ಪಂಚಮಸಾಲಿಗಳು ಮತ್ತು ಕುರುಬರ ಕೋಪಕ್ಕೆ ಸರ್ಕಾರ ಗುರಿಯಾಗುತ್ತದೆ. ಮತ್ತೊಂದು ಕಡೆ ಒಕ್ಕಲಿಗ ಸಮುದಾಯ 2 ಎ ಪ್ರವರ್ಗದ ಮೀಸಲು ಹೆಚ್ಚಿಸುವಂತೆ ಒತ್ತಡ ಆರಂಭಿಸಿದೆ. ಏರಿಕೆ ಮಾಡಿದ್ದರೆ ಬೀದಿಗಿಳಿಯುವ ಎಚ್ಚರಿಕೆಯನ್ನು ಒಕ್ಕಲಿಗ ಸಂಘ ಮತ್ತು ಆ ಸಮುದಾಯದ ಮಠಾಧೀಶರು ನೀಡತೊಡಗಿದ್ದಾರೆ. ಇದನ್ನೆಲ್ಲ ಬೊಮ್ಮಾಯಿ ಸರ್ಕಾರ ಹೇಗೆ ನಿಭಾಯಿಸುತ್ತದೆ ಅನ್ನುವುದೇ ದೊಡ್ಡ ಸವಾಲು.

ಕಾಂಗ್ರೆಸ್ ಪಕ್ಷದ ಪೇಸಿಎಂ ಮತ್ತು ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ಕೊಟ್ಟ ಸಂಭ್ರಮ ಇದೀಗ ಬಿಜೆಪಿ ಪಾಳೆಯದಲ್ಲಿ ಕಾಣತೊಡಗಿದೆ.

ಹಾಗೆ ನೋಡಿದರೆ ಕಾಂಗ್ರೆಸ್ ಪಕ್ಷದ ಪೇಸಿಎಂ ಅಭಿಯಾನದ  ಹೊಡೆತ ಹೇಗಿತ್ತೆಂದರೆ ಖುದ್ದು ಮುಖ್ಯಮಂತ್ರಿಗಳೇ ಬಸವಳಿದಂತೆ ಕಾಣುತ್ತಿದ್ದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಅಂತ ಅವರು ತಿರುಗೇಟು ನೀಡುವ ಯತ್ನ ಮಾಡಿದರೂ ಅದಕ್ಕೊಂದು ಒಳಶಕ್ತಿಯೇ ಇರಲಿಲ್ಲ. ಯಾಕೆಂದರೆ ಅಂತಹ ಮಾತುಗಳನ್ನಾಡುವುದಕ್ಕಿಂತ ಮುಂಚೆ, ನಾವು ಭ್ರಷ್ಟಾಚಾರ ಮಾಡುವುದೇ ಇಲ್ಲ ಅಂತ ಅವರು ಹೇಳಿದ್ದರೆ ಅದಕ್ಕೊಂದು ಶಕ್ತಿ ಇರುತ್ತಿತ್ತು. ಆದರೆ ಬೊಮ್ಮಾಯಿಯವರ ಮಾತಿನ ಧಾಟಿ ಹೇಗಿತ್ತು ಎಂದರೆ ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ಸಿಗೆ ನಾವು ಮಾಡಿದ ಭ್ರಷ್ಟಾಚಾರವನ್ನು ಟೀಕಿಸುವ ಹಕ್ಕಿಲ್ಲ ಎಂಬಂತಿತ್ತು. ಅಂದ ಹಾಗೆ ರಾಜಕಾರಣದಲ್ಲಿ ಒಂದು ಆರೋಪ ಬಂದಾಗ ಅದು ಸುಳ್ಳು ಅಂತ ಸಾಬೀತು ಮಾಡಬೇಕೇ ಹೊರತು, ಅದರ ಬಗ್ಗೆ ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ ಎಂದರೆ ಸಾಲದು.

ಇದೇ ರೀತಿ ರಾಹುಲ್ ಗಾಂಧಿ ನಡೆಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು  ಪ್ರವೇಶಿಸಿದ ನಂತರ ಬಿಜೆಪಿ ನಾಯಕರು ಕೂಗಾಡುತ್ತಿರುವ ರೀತಿಯೇ ಯಾತ್ರೆ ಸಕ್ಸಸ್ ಎಂಬುದರ ಕುರುಹು.

ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಹಿಡಿದು ರಾಜ್ಯ ಬಿಜೆಪಿಯ ಫ್ರಂಟ್ ಲೈನ್ ನಾಯಕರು ಈ ಯಾತ್ರೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಟೀಕಿಸಿದರು. ಈ ಯಾತ್ರೆ ಯಶಸ್ವಿಯಾಗಿಲ್ಲ ಎಂಬುದೇ ಆದರೆ ಬಿಜೆಪಿ ಅದನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಹಾಗೆ ನಿರ್ಲಕ್ಷ ಮಾಡಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ರಾಜ್ಯದಲ್ಲಿ ತನ್ನ ಬಲ ಕುಸಿಯುತ್ತಿದೆ ಎಂಬ ಆತಂಕ ಅದಕ್ಕಿದೆ ಎಂಬುದು ಸ್ಪಷ್ಟ.

ಆದರೆ ಹೀಗೆ ಬಿದ್ದ ಹೊಡೆತವನ್ನು ಮೊನ್ನೆ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಮೂಲಕ ಸರಿಪಡಿಸಿಕೊಂಡಿದ್ದೇವೆ. ಹೀಗಾಗಿ ಇದು ತಾವು ಬಾರಿಸಿದ ಮಾಸ್ಟರ್ ಸ್ಟ್ರೋಕ್ ಎಂಬ ಸಂಭ್ರಮ ಬಿಜೆಪಿ ಪಾಳೆಯದಲ್ಲಿ ಕಾಣತೊಡಗಿದೆ.

ಬಿಜೆಪಿ ಸಂಭ್ರಮ ಉಳಿಯುವುದೇ?

ಅಂದ ಹಾಗೆ ಪರಿಶಿಷ್ಟ ಜಾತಿ, ಪಂಗಡಗಳಿಗೆ ಒದಗಿಸಲಾಗಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಬೇಕು ಅಂತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ವರದಿ ನೀಡಿದ್ದರಲ್ಲ? ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಗೆ ಈಗಿರುವ 15 ಪರ್ಸೆಂಟ್ ಮೀಸಲಾತಿಯನ್ನು 17 ಪರ್ಸೆಂಟ್ ಗೇರಿಸಬೇಕು. ಪರಿಶಿಷ್ಟ ಪಂಗಡಕ್ಕೆ ಒದಗಿಸಲಾಗಿರುವ 3 ಪರ್ಸೆಂಟ್ ಮೀಸಲಾತಿಯನ್ನು 7 ಪರ್ಸೆಂಟಿಗೆ ಏರಿಸಬೇಕು ಎಂಬುದು ಈ ವರದಿಯ ಮುಖ್ಯ ಶಿಫಾರಸು. ಈ ಶಿಫಾರಸನ್ನು ಮೊನ್ನೆ ಒಪ್ಪುವ ಮೂಲಕ ರಾಜ್ಯದ ನಂಬರ್ ಒನ್ ವೋಟ್ ಬ್ಯಾಂಕಿನ ಮನ ಗೆದ್ದಿದ್ದೇವೆ ಎಂಬುದು ಬಿಜೆಪಿ ನಾಯಕರ ಸದ್ಯದ ಸಂಭ್ರಮ.

ಹೀಗೆ ಅದು ಪರಿಶಿಷ್ಟರ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಲು ತೀರ್ಮಾನಿಸಿದ್ದೇನೋ ಸರಿಯಾದ ಬೆಳವಣಿಗೆ. ಆದರೆ ಇದು ಮಾಸ್ಟರ್ ಸ್ಟ್ರೋಕ್ಆಗಿ ಪರಿವರ್ತನೆಯಾಗಿ ರಾಜ್ಯ ಬಿಜೆಪಿಗೆ ಬಂಪರ್ ಲಾಭ ತಂದುಕೊಡುತ್ತದೆ ಎಂಬುದು ಮಾತ್ರ ಅದರ ಭ್ರಮೆ. ಯಾಕೆಂದರೆ ಇವತ್ತು ಎಲ್ಲ ಜಾತಿ, ವರ್ಗಗಳು ತಮ್ಮದೇ ನೆಲೆಯಲ್ಲಿ ರಾಜಕೀಯ ಪ್ರಜ್ಞೆ ಹೊಂದಿವೆ ಮತ್ತು ಇದರ ಆಧಾರದ ಮೇಲೆಯೇ ಅವುಗಳ ನಡೆ ತೀರ್ಮಾನವಾಗುತ್ತದೆ.

ಯಾಕೆಂದರೆ ಈ ಹಿಂದೆ ಸಿದ್ಧರಾಮಯ್ಯ ಅವರೂ ಇದೇ ಮಾದರಿಯ ಮೂರು ಮಾಸ್ಟರ್ ಸ್ಟ್ರೋಕ್  ಹೊಡೆದ ಸಂಭ್ರಮದಲ್ಲಿದ್ದರು. ಪರಿಶಿಷ್ಟರಿಗಾಗಿ ವಿಶೇಷ ಕಾಯ್ದೆ ರೂಪಿಸಿ, ಸರ್ಕಾರದ ಎಲ್ಲ ಇಲಾಖೆಗಳಲ್ಲಿ 18 ಪರ್ಸೆಂಟ್ ಹಣವನ್ನು ಪರಿಶಿಷ್ಟರಿಗೆ ಮೀಸಲಿಡಲು ಕ್ರಮ ಕೈಗೊಂಡಿದ್ದು ಸಿದ್ಧರಾಮಯ್ಯ ಅವರ ಮೊದಲನೇ ಮಾಸ್ಟರ್ ಸ್ಟ್ರೋಕ್. ಹೀಗೆ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಪಾಲಿನ ಹಣವನ್ನು ಅವರಿಗೇ ಖರ್ಚು ಮಾಡಬೇಕೆಂಬ ನಿರ್ಧಾರ ಅಪೂರ್ವವಾದದ್ದು. ನೆರೆಯ ಆಂಧ್ರ ಪ್ರದೇಶ ರಾಜ್ಯವನ್ನು ಹೊರತುಪಡಿಸಿದರೆ ಇಂತಹ ಕೆಲಸ ಮಾಡಿದ್ದು ಕರ್ನಾಟಕ ಮಾತ್ರ. ಈ ಮಧ್ಯೆ ಬಡ್ತಿ ಮೀಸಲಾತಿಗೆ ಸಂಬಂಧಪಟ್ಟಂತೆ ಶುರುವಾದ ಕಲಹ ಸರ್ಕಾರಿ ಕೆಲಸದಲ್ಲಿದ್ದ ಪರಿಶಿಷ್ಟರಿಗೆ ಆತಂಕ ತಂದಾಗ ಕಾಯ್ದೆ ರೂಪಿಸಿದ್ದು ಸಿದ್ಧರಾಮಯ್ಯ ಸರ್ಕಾರ.

ಈ ಮಧ್ಯೆ ಪರಿಶಿಷ್ಟರಿಗೆ ಬಲ ನೀಡಬೇಕು ಎಂಬ ಕಾರಣಕ್ಕಾಗಿ ಒಂದು ಕೋಟಿ ರೂವರೆಗಿನ ಗುತ್ತಿಗೆಯನ್ನು ಅವರಿಗೆ ನೀಡಲು ಕಾಯ್ದೆಯನ್ನು ರೂಪಿಸಿದ್ದು ಸಿದ್ಧರಾಮಯ್ಯ ಸರ್ಕಾರದ ಮೂರನೇ ಮಾಸ್ಟರ್ ಸ್ಟ್ರೋಕ್. ಆದರೆ ಈ ಮೂರು ಮಾಸ್ಟರ್ ಸ್ಟ್ರೋಕುಗಳು 2008 ರ ವಿಧಾನಸಭಾ ಚುನಾವಣೆಯಲ್ಲಿ ಅವರ ಕೈ ಹಿಡಿಯಲಿಲ್ಲ.

ಬದಲಿಗೆ ದಲಿತ ವರ್ಗದ ಬಲಗೈ ಸಮುದಾಯದ ಗಣನೀಯ ಮತಗಳು ಕಾಂಗ್ರೆಸ್ ಜತೆ ನಿಂತರೆ, ಎಡಗೈ ಸಮುದಾಯದ ಮತಗಳು ದೊಡ್ಡ ಮಟ್ಟದಲ್ಲಿ ಬಿಜೆಪಿ ಜತೆ ನಿಂತವು. ಇದಕ್ಕೊಂದು ಸೈದ್ಧಾಂತಿಕ ಕಾರಣವೂ ಇದೆ. ಅದೆಂದರೆ ದಲಿತರಿಗೆ ಒಳಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ಸಿಗೆ ಸಹಮತವಿಲ್ಲ. ಕಾರಣ? ಒಳಮೀಸಲಾತಿ ಸೌಲಭ್ಯ ಕಲ್ಪಿಸಿದರೆ ದಲಿತರಲ್ಲಿ ಒಡಕುಂಟಾಗುತ್ತದೆ ಎಂಬುದು. ಆದರೆ ಮೀಸಲಾತಿಯ ದೊಡ್ಡ ಪ್ರಯೋಜನ ಪಡೆದಿರುವುದು ಬಲಗೈ ಸಮುದಾಯ. ಹೀಗಾಗಿ ಒಳಮೀಸಲಾತಿ ಕಲ್ಪಿಸಿಕೊಡಬೇಕು ಎಂಬ ಎಡಗೈ ಸಮುದಾಯದ ಒತ್ತಾಯಕ್ಕೆ ಬಿಜೆಪಿಯ ಸಹಮತವಿದೆ. ಹೀಗಾಗಿ ಕರ್ನಾಟಕದ ನೆಲೆಯಲ್ಲಿ ದಲಿತ ಸಮುದಾಯ ರಾಜಕೀಯವಾಗಿ ಇಬ್ಭಾಗವಾಗಿ ಹಲವು ಕಾಲವಾಗಿದೆ.

ಹೀಗಾಗಿ ಇಂತಹ ನೆಲೆಯಲ್ಲಿ ದಲಿತ ಮತಗಳು ಚಲಾವಣೆಯಾಗುತ್ತವೆಯೇ ಹೊರತು ಮೀಸಲಾತಿಯನ್ನು ಹೆಚ್ಚಳ ಮಾಡಿದ ಕಾರಣಕ್ಕಾಗಿ ಪರಿಶಿಷ್ಟರ  ಮತ ಬ್ಯಾಂಕು ಸಾರಾಸಗಟಾಗಿ ಬಿಜೆಪಿ ಜತೆ ನಿಲ್ಲುವುದು ನಿಜಕ್ಕೂ ಅಸಾಧ್ಯ.

ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಅವಧಿಯಲ್ಲಿ ಸಿದ್ಧರಾಮಯ್ಯ ಬಾರಿಸಿದ ಮಾಸ್ಟರ್ ಸ್ಟ್ರೋಕುಗಳು ಇಡೀ ದಲಿತ ಸಮುದಾಯದ ಶಕ್ತಿಯನ್ನು ಹೆಚ್ಚಿಸಿದ್ದವೇ ಹೊರತು ವಿಶೇಷವಾಗಿ ಬಲಗೈ ಸಮುದಾಯದ ಶಕ್ತಿಯನ್ನಲ್ಲ.

ಹೀಗಿದ್ದರೂ ಅದು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವರವಾಗಲಿಲ್ಲ ಎಂಬುದು ಅರ್ಥವಾಗಿದ್ದರೆ, ಬಿಜೆಪಿ ಪಾಳೆಯ ಇಷ್ಟೊಂದು ಸಂಭ್ರಮದಲ್ಲಿರುತ್ತಿರಲಿಲ್ಲ.

ಬಿಜೆಪಿಗೆ ಮೀಸಲಾತಿ ಕೋಲಾಹಲವೇ ಕಂಟಕ!

ಅಂದ ಹಾಗೆ ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಲು ತಮಗಿರುವ ಸಾಮಾಜಿಕ ನ್ಯಾಯದ ಕಾಳಜಿಯೇ ಮುಖ್ಯ ಕಾರಣ ಅಂತ ಬೊಮ್ಮಾಯಿ ಸರ್ಕಾರ ಹೇಳಿಕೊಂಡರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬೇರೊಂದು ಬಗೆಯ ಒತ್ತಡಗಳು ಹೆಚ್ಚಾಗುತ್ತವೆ. ತಮ್ಮನ್ನು ಪ್ರವರ್ಗ `2 ಎ’ ಗೆ ಸೇರಿಸಬೇಕು ಅಂತ ಹೋರಾಟಕ್ಕಿಳಿದಿರುವ ಪಂಚಮಸಾಲಿ ಲಿಂಗಾಯತರು ಈಗ ಮತ್ತಷ್ಟು ಅಗ್ರೆಸಿವ್ ಆಗಿ ವರ್ತಿಸುತ್ತಾರೆ. ಇದೇ ರೀತಿ ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂದು ಬೀದಿಗಿಳಿದಿರುವ ಕುರುಬ ಸಮುದಾಯ ಕೂಡಾ ಜಿದ್ದಿಗೆ ಬೀಳುತ್ತದೆ. ಇನ್ನು ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಎಂಬ ಮಡಿವಾಳರ ಕೂಗು ಮತ್ತಷ್ಟು ಹೆಚ್ಚಾಗುತ್ತದೆ.

ಈ ಮಧ್ಯೆ ಹಲವಾರು ಜಾತಿಗಳು ತಮ್ಮನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಅಂತ, ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಅಂತ ಹೋರಾಟ ಮಾಡುತ್ತಲೇ ಇವೆ. ಮೀಸಲಾತಿ ಹೆಚ್ಚಳಕ್ಕೂ, ಬೇರೆ ಬೇರೆ ಪ್ರವರ್ಗಗಳ ಪಟ್ಟಿಗೆ ಸೇರಿಸುವುದಕ್ಕೂ ವ್ಯತ್ಯಾಸವಿದೆ ನಿಜ. ಆದರೆ ಈ ಕೆಲಸಕ್ಕೆ ಕೈ ಹಾಕಿದರೆ ತಮಗಿರುವ ಮೀಸಲಾತಿಯ ಪ್ರಮಾಣ ಕಡಿಮೆಯಾಯಿತು ಎಂಬ ಆಕ್ರೋಶ ಶುರುವಾಗುತ್ತದೆ.

ಪಂಚಮಸಾಲಿ ಲಿಂಗಾಯತರನ್ನು ಪ್ರವರ್ಗ 2 ಎ ಗೆ ಸೇರಿಸುವುದಕ್ಕೆ ಹಿಂದುಳಿದ ವರ್ಗಗಳ ಕೋಟೆಯಿಂದ ಈಗಾಗಲೇ ಅಪಸ್ವರ ಏಳುತ್ತಿದೆ. ಇದೇ ರೀತಿ ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ವಾಲ್ಮೀಕಿ ಸಮುದಾಯ ಕೆರಳುತ್ತದೆ. ಈಗ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಮೀಸಲಾತಿಯ ಪ್ರಮಾಣವನ್ನು 7 ಪರ್ಸೆಂಟಿಗೆ ಏರಿಸಿರುವುದೇನೋ ಸರಿ. ಹೀಗೆ ಮೀಸಲಾತಿ ಪ್ರಮಾಣವನ್ನು ಏರಿಸಿದ ನಂತರ ರಾಜ್ಯದ ಜನಸಂಖ್ಯೆಯ ಶೇಕಡಾ ಎಂಟರಷ್ಟಿರುವ ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಹೇಗೆ? ಅನ್ನುವುದು ನಾಯಕರ ಆಕ್ರೋಶ. ಒಂದು ವೇಳೆ ಇದನ್ನು ಗಮನದಲ್ಲಿಟ್ಟುಕೊಂಡು ಮೌನವಾಗಿದ್ದರೆ ಪಂಚಮಸಾಲಿಗಳು ಮತ್ತು ಕುರುಬರ ಕೋಪಕ್ಕೆ ಸರ್ಕಾರ ಗುರಿಯಾಗುತ್ತದೆ. ಮತ್ತೊಂದು ಕಡೆ ಒಕ್ಕಲಿಗ ಸಮುದಾಯ `3ಎ’ ಪ್ರವರ್ಗದ ಮೀಸಲು ಹೆಚ್ಚಿಸುವಂತೆ ಒತ್ತಡ ಆರಂಭಿಸಿದೆ. ಏರಿಕೆ ಮಾಡಿದ್ದರೆ ಬೀದಿಗಿಳಿಯುವ ಎಚ್ಚರಿಕೆಯನ್ನು ಒಕ್ಕಲಿಗ ಸಂಘ ಮತ್ತು ಆ ಸಮುದಾಯದ ಮಠಾಧೀಶರು ನೀಡತೊಡಗಿದ್ದಾರೆ. ಇದನ್ನೆಲ್ಲ ಬೊಮ್ಮಾಯಿ ಸರ್ಕಾರ ಹೇಗೆ ನಿಭಾಯಿಸುತ್ತದೆ ಅನ್ನುವುದೇ ದೊಡ್ಡ ಸವಾಲು.

ಬರೀ ಮತಬ್ಯಾಂಕ್ ಸೆಳೆಯಲು ಸರ್ಕಸ್ಸಾ?

ಅಂದ ಹಾಗೆ ಮತಬ್ಯಾಂಕುಗಳ ಮೇಲೆ ಪ್ರಭಾವ ಬೀರುವಂತಹ ಕೆಲಸಗಳನ್ನು ಮಾಡುವುದು ಉತ್ತಮ ಕೆಲಸ. ಆದರೆ ಮತಬ್ಯಾಂಕನ್ನು ಸೆಳೆಯುವ ಸಲುವಾಗಿಯೇ ಇದನ್ನು ಮಾಡುತ್ತೇವೆ ಎಂಬುದು ನಿಜವಾದ ಕಾಳಜಿ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ಸರ್ಕಾರ ಜನರ ಹಿತವನ್ನು ಕಾಪಾಡಲು ಏನು ಕೆಲಸ ಮಾಡುತ್ತದೆ ಎಂಬುದು ಮುಖ್ಯ. ಈ ವಿಷಯದಲ್ಲಿ ಅದು ಯಾವುದೇ ರಾಜಿ ಮಾಡಿಕೊಳ್ಳಬಾರದು.

ಉದಾಹರಣೆಗೆ ನೋಡುವುದಾದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರ್ಷದಿಂದ ರಾಜ್ಯಕ್ಕೆ ಬರಬೇಕಿದ್ದ ಜಿ.ಎಸ್.ಟಿ ಬಾಬ್ತಿನ ಪರಿಹಾರವನ್ನು  ನಿಲ್ಲಿಸಿದೆ. ಈ ಬಾಬ್ತಿನಲ್ಲಿ ನಮಗೆ ನೀಡಬೇಕಾಗಿದ್ದ ಇಪ್ಪತ್ತು ಸಾವಿರ ಕೋಟಿಯಷ್ಟು ಹಣ ಬಂದಿಲ್ಲ.

ಯಾವ ಕಾರಣಕ್ಕಾಗಿ ನಮಗೆ ಜಿ.ಎಸ್.ಟಿ ಪರಿಹಾರ ನೀಡುವುದಿಲ್ಲ? ಹಾಗೆ ನೀಡಬಾರದು ಎನ್ನುವುದಾದರೆ ರಾಜ್ಯದಿಂದ ಇನ್ನು ಮುಂದೆ ಜಿ.ಎಸ್.ಟಿ ಸಂಗ್ರಹವನ್ನು ಸ್ಥಗಿತಗೊಳಿಸುತ್ತೀರಾ? ಇಲ್ಲ, ನಾವು ಮಾಮೂಲಿಯಂತೆ ಜಿ.ಎಸ್.ಟಿ ಹಣ ಸಂಗ್ರಹಿಸುತ್ತೇವೆ. ನಿಮಗಷ್ಟೇ ಪಾಲು ಕೊಡುವುದಿಲ್ಲ ಎನ್ನುವುದಾದರೆ ರಾಜ್ಯಗಳ ಕೆಲಸ ಏನು? ಅಂತ ಧ್ವನಿಯೆತ್ತಿ ಕೇಳುವ ಕೆಲಸ ಬೊಮ್ಮಾಯಿ ಸರ್ಕಾರದಿಂದ ಆಗಬೇಕು.

ನೀವು ಕೊಡುತ್ತಿರುವುದು ಧರ್ಮದ ಹಣವಲ್ಲ, ನಮ್ಮಿಂದಲೇ ಪಡೆದಿರುವ ಹಣದ ಪಾಲು ಎಂದು ಹೇಳುವ ತಾಕತ್ತು ಬರಬೇಕು. ಇದನ್ನು ಬಿಟ್ಟು ತಾಕತ್ತಿನ ಸವಾಲನ್ನು ಕಾಂಗ್ರೆಸ್ ಮುಂದೆ ಹಾಕಿ ಮೀಸೆ ತಿರುವಿಕೊಳ್ಳುವುದಲ್ಲ. ಜಿ.ಎಸ್.ಟಿ ಅಂತಲ್ಲ, ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಬರುವ ಪಾಲೂ ಕಡಿಮೆಯಾಗುತ್ತಿದೆ. ಹೀಗಾಗಿ ರಾಜ್ಯದಿಂದ ಪ್ರತಿ ವರ್ಷ ಮೂರು ಲಕ್ಷ ಕೋಟಿ ರೂಪಾಯಿ ಎತ್ತಿಕೊಂಡು ಹೋಗುವ ಕೇಂದ್ರ ಸರ್ಕಾರ, ಅದರಲ್ಲಿ ಕಾಲು ಭಾಗದಷ್ಟು ಹಣವನ್ನೂ ಹಿಂತಿರುಗಿಸುವುದಿಲ್ಲ ಎಂಬ ಸಿದ್ಧರಾಮಯ್ಯ ಅವರ ಆರೋಪ ಏನಿದೆ? ಅದಕ್ಕೆ ಪುಷ್ಟಿ ನೀಡುವಂತಹ ಘಟನೆಗಳೇ ನಡೆಯುತ್ತಿವೆ.

ಆದರೆ ಈ ಬಗ್ಗೆ ಮಾತನಾಡದ ಬಿಜೆಪಿ ಸರ್ಕಾರ ಜೇನು ಗೂಡಿಗೆ ಕೈ ಹಾಕಿ ತುಪ್ಪ ಸಿಗುತ್ತದೆ ಅಂತ ಕನಸು ಕಾಣುತ್ತಿದೆ. ಅದೇ ಸದ್ಯದ ವಿಪರ್ಯಾಸ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
46FollowersFollow
- Advertisement -spot_img

Latest Articles