19.9 C
Bengaluru
Friday, March 17, 2023
spot_img

ದೊಡ್ಡವರ ಬೆನ್ನತ್ತಿದೆ ಸೋಲಿನ ನೆರಳು..

ಕ್ಷೇತ್ರ ಆಯ್ಕೆ ಹಾವು ಏಣಿ ಆಟ ಭದ್ರಕೋಟೆಗಾಗಿ ಹುಡುಕಾಟ

-ನೀರಕಲ್ಲು ಶಿವಕುಮಾರ್

ಮುಂಬರುವ ವಿಧಾನಸಭಾ ಚುನಾವಣೆ ರಾಜ್ಯದ ಹಲವು ದೊಡ್ಡನಾಯಕರಿಗೆ ಸೋಲಿನ ಭೀತಿ ಹುಟ್ಟಿಸಿದೆ. ಹಿಂಬಾಲಿಸುತ್ತಿರುವ ಸೋಲಿನ ನೆರಳು ನಾಯಕರು ಸುರಕ್ಷಿತ ಭದ್ರಕೋಟೆಗಳಂತಹ ಕ್ಷೇತ್ರಗಳ ಮೊರೆ ಹೋಗುವಂತೆ ಮಾಡುವುದು ದಿಟವಾಗಿದೆ. ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತ್ತೊಬ್ಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ತಾವು ಈಗಿರುವ ಕ್ಷೇತ್ರ ಸುರಕ್ಷಿತವೇ? ವಲಸೆ ಹೋಗಬೇಕೆಂದರೆ ಎಲ್ಲಿಗೆ ಹೋಗಬೇಕು? ಇರುವಲ್ಲಿಯೇ ಇರಬೇಕೆಂದರೆ ಗೆಲುವಿಗೆ ಏನು ಮಾಡಬೇಕು? ಹೀಗೆ ತಲೆ ಕೆಡಿಸಿಕೊಂಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಂತವರು ಮೊದಲ ಚುನಾವಣೆಯನ್ನು ಎಲ್ಲಿಂದ ಎದುರಿಸಿದರೆ ಭವಿಷ್ಯಕ್ಕೆ ಉತ್ತಮ ಎಂಬ ಚಿಂತನೆಯಲ್ಲಿದ್ದಾರೆ.

ದೇಶದ ಅನೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಘಟಾನುಘಟಿ ರಾಜಕೀಯ ನಾಯಕರು ಮುಗ್ಗರಿಸಿ ಪ್ರಧಾನಿ, ಮುಖ್ಯಮಂತ್ರಿ, ಸಚಿವ ಸ್ಥಾನ ಕಳೆದುಕೊಂಡ ಉದಾಹರಣೆಗಳು ನಮ್ಮ ಮುಂದಿವೆ. ನಿರ್ಣಾಯಕ ಚುನಾವಣೆಯಲ್ಲಿ ಸೋತ ಕಾರಣಕ್ಕೆ ರಾಜಕೀಯ ಬದುಕೇ ಕೊಚ್ಚಿಹೋಗಿ ಮೂಲೆಗುಂಪಾದ ನಾಯಕರನ್ನೂ ಕಂಡಿದ್ದೇವೆ. ಚುನಾವಣೆ ಅಖಾಡದ ಒಂದು ಗೆಲುವು ರಾತ್ರೋರಾತ್ರಿ ಕನಸು ಮನಸಲ್ಲೂ ನಿರೀಕ್ಷಿಸದ ಮಟ್ಟಕ್ಕೆ ಕೊಂಡೊಯ್ಯಬಹುದು. ಒಂದು ಸೋಲು ಮತ್ತೆ ಮೇಲೆದ್ದು ಬರಲಾಗದ ಪ್ರಪಾತಕ್ಕೆ ದೂಡಬಹುದು ಎಂಬ ಅರಿವು ರಾಜಕಾರಣಿಗಳಿಗೆ ಇರುವುದರಿಂದಲೇ ಪ್ರತಿ ಚುನಾವಣೆಯಲ್ಲೂ ಅವರು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಾರೆ. ಅದರಲ್ಲೂ ದೊಡ್ಡ ನಾಯಕರಾಗಿ ಬೆಳೆದವರು ಅಡಿಗಡಿಗೂ ಯೋಚಿಸುತ್ತಾರೆ. ಅದರೂ ಕೆಲವೊಮ್ಮೆ ಜಾರಿಬೀಳುತ್ತಾರೆ. ಚುನಾವಣೆಯಲ್ಲಿ ಸೋತು ಕಣ್ಣೆದುರೇ ತಮ್ಮ ಹತ್ತಿರಕ್ಕೆ ಬಂದಿದ್ದ ಅಧಿಕಾರ ಪೀಠ ಪರರ ಪಾಲಾಗುವುದನ್ನು ಕಂಡು ಮಮ್ಮಲ ಮರುಗುತ್ತಾರೆ. ತಮ್ಮದೇ ಪಕ್ಷ, ತಮ್ಮದೇ ಹಿಡಿತ ಇರುವವರು ಸೋಲನ್ನು ಮೆಟ್ಟಿ ಅಧಿಕಾರ ಸ್ಥಾನ ಪಡೆಯಬಹುದು ಆದರೆ ಇಂತಹ ಉದಾಹರಣೆಗಳು ವಿರಳ. ಸೋತು ಮಹತ್ವಾಕಾಂಕ್ಷೆಯ ಸ್ಥಾನ ತಪ್ಪಿಸಿಕೊಂಡವರೇ ಹೆಚ್ಚು.

ಇಂತದ್ದಕ್ಕೆ ದೇಶ ಮತ್ತು ರಾಜ್ಯ ರಾಜಕಾರಣದಲ್ಲಿ ಅನೇಕ ಪ್ರಕರಣಗಳನ್ನು ಉದಾಹರಣೆಯಾಗಿ ಕೊಡಬಹುದಾದರೂ ಇತ್ತೀಚಿನವು ಎಂದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನಮ್ಮ ರಾಜ್ಯದಲ್ಲಿ ಡಾ.ಜಿ.ಪರಮೇಶ್ವರ್ ಅವರದು.

ಬಿಜೆಪಿ ಅಬ್ಬರದ ಅಲೆಗೆ ಎದೆಯೊಡ್ಡಿ ನಿಂತ ಮಮತಾ ಬ್ಯಾನರ್ಜಿ 2022 ರ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಘನವಿಜಯ ತಂದುಕೊಟ್ಟರು. ಆದರೆ ತಾವೇ ನಂದಿಗ್ರಾಮ ಕ್ಷೇತ್ರದಲ್ಲಿ ಪರಾಭವಗೊಂಡರು. ತಮ್ಮದೇ ಪಕ್ಷ, ತಮ್ಮದೇ ಹಿಡಿತವಿರುವ ಕಾರಣಕ್ಕೆ ಆ ಸೋಲನ್ನೇ ಚುನಾವಣಾ ಕಾರ್ಯತಂತ್ರದ ಭಾಗ ಎಂದು ಬಿಂಬಿಸಿಕೊಂಡರು. ಸರಾಗವಾಗಿ ಮುಖ್ಯಮಂತ್ರಿ ಹುದ್ದೆ ಏರಿದರು. ಉಪಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಆದರು.

ಕರ್ನಾಟಕದಲ್ಲಿ 2013 ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ಪರಮೇಶ್ವರ್ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂದಿದ್ದರು. ಆದರೆ ಕೊರಟಗೆರೆ ಕ್ಷೇತ್ರದ ಸೋಲು ಅವರನ್ನು ರೇಸ್‌ನಿಂದ ಹೊರಹಾಕಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ದಾರಿಯನ್ನು ತೆರೆಯಿತು. ಅಡೆತಡೆಯಿಲ್ಲದೆ ನಿರಾಂತಕವಾಗಿ ಸಿದ್ದು ಗದ್ದುಗೆ ಏರಿದರು. ಪರಮೇಶ್ವರ್ ಅತ್ತುಕರೆದು ವಿಧಾನಪರಿಷತ್‌ಗೆ ಆಯ್ಕೆ ಆಗಿ ಉಪಮುಖ್ಯಮಂತ್ರಿಯಾಗಲು ಒದ್ದಾಟ ನಡೆಸಿ ವಿಫಲರಾದರು.

ಹೀಗೆ ಸೋಲುಗಳು ಘಟಾನುಘಟಿ ನಾಯಕರನ್ನು ಅಕ್ಷರಶಃ ಅಲ್ಲಾಡಿಸಿಹಾಕುತ್ತವೆ. ಕೆಲವರು ಎರಡೆರಡು ಕ್ಷೇತ್ರಗಳಲ್ಲಿ ನಿಂತು ಸೋಲು ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ. ಒಂದು ಕಡೆ ಸೋತರೂ ಮತ್ತೊಂದು ಕಡೆ ಗೆದ್ದು ಮುಖ ಉಳಿಸಿಕೊಳ್ಳುತ್ತಾರೆ. ಈ ಎರಡು ಕ್ಷೇತ್ರದ ಸ್ಪರ್ಧೆಗೆ ಕಡಿವಾಣ ಹಾಕಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಇತ್ತೀಚೆಗೆ ಚುನಾವಣಾ ಆಯೋಗ ಕೇಂದ್ರ ಸರ್ಕಾರವನ್ನು ಕೋರಿ ಪತ್ರ ಬರೆದಿದೆ. ಅದೇನಾಗುತ್ತೋ ಗೊತ್ತಿಲ್ಲ. ಆದರೆ ಸೋಲು ತಪ್ಪಿಸಿಕೊಳ್ಳಲು ರಾಜಕಾರಣಿಗಳು ಭದ್ರಕೋಟೆಗಳನ್ನು ಅರಸಿ ಹೊರಡುವುದು ಮಾತ್ರ ನಿಲ್ಲುವುದಿಲ್ಲ. ಕರ್ನಾಟಕದಲ್ಲೂ ಮುಂಬರುವ ವಿಧಾನಸಭಾ ಚುನಾವಣೆ ಹಲವು ನಾಯಕರಿಗೆ ಸೋಲಿನ ಭೀತಿ ಹುಟ್ಟಿಸಿದೆ. ಹಿಂಬಾಲಿಸುತ್ತಿರುವ ಸೋಲಿನ ನೆರಳು ನಾಯಕರು ಸುರಕ್ಷಿತ ಭದ್ರಕೋಟೆಗಳಂತಹ ಕ್ಷೇತ್ರಗಳ ಮೊರೆ ಹೋಗುವಂತೆ ಮಾಡುವುದು ದಿಟವಾಗಿದೆ.

ಮಾಜಿ ಮುಖ್ಯಮಂತ್ರಿ, ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮತ್ತೊಬ್ಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಪರಮೇಶ್ವರ್ ಸೇರಿದಂತೆ ಅನೇಕ ನಾಯಕರು ತಾವು ಈಗಿರುವ ಕ್ಷೇತ್ರ ಸುರಕ್ಷಿತವೇ? ವಲಸೆ ಹೋಗಬೇಕೆಂದರೆ ಎಲ್ಲಿಗೆ ಹೋಗಬೇಕು? ಇರುವಲ್ಲಿಯೇ ಇರಬೇಕೆಂದರೆ ಗೆಲುವಿಗೆ ಏನು ಮಾಡಬೇಕು? ಹೀಗೆ ತಲೆ ಕೆಡಿಸಿಕೊಂಡಿದ್ದಾರೆ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಂತವರು ಮೊದಲ ಚುನಾವಣೆಯನ್ನು ಎಲ್ಲಿಂದ ಎದುರಿಸಿದರೆ ಭವಿಷ್ಯಕ್ಕೆ ಉತ್ತಮ ಎಂಬ ಚಿಂತನೆಯಲ್ಲಿದ್ದಾರೆ.   

ಕೊಂಕಣಕ್ಕೆ ಸುತ್ತಿ ಮೈಲಾರಕ್ಕೆ ಸಿದ್ದು

2023 ರಲ್ಲಿ ಮತ್ತೊಮ್ಮೆ ಸಿಎಂ ಆಗುವ ಕನಸಿನೊಂದಿಗೆ ವಯಸ್ಸು 75 ಆದರೂ 25 ರ ಚಿರಯುವಕನಂತೆ ರಾಜ್ಯ ಸುತ್ತಲು ಸಿದ್ದವಾಗಿರುವ ಸಿದ್ದರಾಮಯ್ಯ ಅವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ನಿಲ್ಲುವ ಲಕ್ಷಣಗಳು ಗೋಚರವಾಗಿದೆ.

ವರುಣಾ ಬಳಿಕ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತು ಭರ್ಜರಿಯಾಗಿ ಗೆದ್ದ ಸಿದ್ದರಾಮಯ್ಯ ಅವರು ಅದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೀವ್ರತರವಾಗಿ ಸೋಲುಂಡ ನೋವು ಇನ್ನೂ ಮಾಸಿಲ್ಲ. ಇದೇ ಕಾರಣಕ್ಕೆ ಇತ್ತೀಚೆಗೆ ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಬಳಿ ಇನ್ನು ನನ್ನ ಯಾವ ಕಾರಣಕ್ಕೂ ನಿಲ್ಲಿ ಅಂತ ಕೇಳಬೇಡಿ. ನಾನು ನಿಲ್ಲೋದು ಇಲ್ಲ. ಸಾಕಿನ್ನು ಅಂತ ನೋವು ತೋಡಿಕೊಂಡಿದ್ದರು. ಒಂದು ವೇಳೆ 2018 ರಲ್ಲಿ ಕೊನೆ ಕ್ಷಣದಲ್ಲಿ ಎಚ್ಚೆತ್ತುಕೊಂಡು ಎರಡು ಕ್ಷೇತ್ರದಲ್ಲಿ ನಿಲ್ಲುವ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಇಷ್ಟೊತ್ತಿಗೆ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯ ಮುಗಿಯೋ ಹಂತಕ್ಕೆ ಬಂದು ನಿಲ್ಲುತ್ತಿತ್ತೋ ಏನೋ. ಆದರೆ ಶಿಷ್ಯರ ಒತ್ತಾಯ ಹಾಗೂ ಗುಪ್ತಚರ ವರದಿಗಳ ಆಧಾರದ ಮೇಲೆ ಕೊನೆವರೆಗೂ ಗುಟ್ಟು ಕಾಯ್ದುಕೊಂಡು ಎರಡು ಕ್ಷೇತ್ರದಲ್ಲಿ ನಿಲ್ಲುವುದಾಗಿ ಘೋಷಿಸಿ ಬಾದಾಮಿಯನ್ನು ಆಯ್ಕೆ ಮಾಡಿಕೊಂಡರು. ಆದರೀಗ ಅದೇ ಬಾದಾಮಿ ಸಿದ್ದರಾಮಯ್ಯ ಅವರನ್ನು ಮತ್ತೆ ಕೈ ಹಿಡಿಯೋಕೆ ತಯಾರಿಲ್ಲ. ಹಾಗಾಗಿ ಕ್ಷೇತ್ರ ಬದಲಿಸೋದು ಸಿದ್ದುಗೆ ಅನಿವಾರ್ಯ ಅನ್ನೋದು ಈಗೇನು ಗುಟ್ಟಾಗಿ ಉಳಿದಿಲ್ಲ.

ಆದರೂ ಜಟ್ಟಿ ಕೆಳಗೆ ಬಿದ್ದರೂ ಮಣ್ಣಾಗಿಲ್ಲ ಅನ್ನೋ ಹಾಗೆ ಸಿದ್ದರಾಮಯ್ಯ ತನಗೆ ಬಾರೀ ಡಿಮ್ಯಾಂಡ್ ಇದೆ, ಎಲ್ಲಾ ಕ್ಷೇತ್ರದಲ್ಲೂ ನನ್ನ ಕರೀತಿದ್ದಾರೆ ಎಂಬಂತೆ ಬಿಂಬಿಸಿಕೊಳ್ಳಲು ಫೋಸು ಕೂಡ ಕೊಟ್ಟಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿಯೇ. ಅತ್ತ ಜಮೀರ್ ಅಹಮದ್ ಬನ್ನಿ ಸಾಹೇಬ್ರೇ ಚಾಮರಾಜಪೇಟೆ ಬಿಟ್ಟುಕೊಡ್ತೀನಿ ಅಂದಿದ್ದರು. ಇತ್ತ ರಮೇಶ್ ಅವರು ಕೋಲಾರ ಬಿಟ್ಟು ಕೊಡ್ತೀವಿ ಅಂದರು. ರಾಜಣ್ಣ ತುಮಕೂರಿಗೆ ಬರಲಿ ಗೆಲ್ಲಿಸ್ತೀವಿ ಅಂದರು. ಅತ್ತ ಚಿಕ್ಕಮಗಳೂರಲ್ಲಿ ಮತ್ತೊಬ್ಬರು ಕರೆದರು. ಇದರಿಂದ ಸಿದ್ದರಾಮಯ್ಯ ಉಬ್ಬಿಹೋಗಿದ್ದರು. ಹೋದಲ್ಲಿ ಬಂದಲ್ಲಿ ಇವತ್ತಿಗೂ ಜನಕ್ಕೆ ನಾನೇ ಬೇಕು. ಎಲ್ಲಾ ಕಡೆ ಬಂದು ನಿಲ್ಲುವಂತೆ ಕರೀತಿದ್ದಾರೆ. ದಿಸ್ ಇಸ್ ಸಿದ್ದರಾಮಯ್ಯ ಎಂದೇ ಬೀಗುತ್ತಿದ್ದರು.

ಇನ್ನು ಇದೇ ಜೋಶ್‌ನಲ್ಲಿದ್ದ ಸಿದ್ದರಾಮಯ್ಯ ಅವರಿಗೆ ಸಿದ್ದರಾಮೋತ್ಸವಕ್ಕೆ ನೆರೆದಿದ್ದ ಜನ ಸಾಗರ ಇನ್ನಷ್ಟು ಎದೆ ಬೀಗುವಂತೆ ಮಾಡಿದ್ದೂ ಸುಳ್ಳಲ್ಲ. ಹಾಗಾಗೇ ಮೇಲಿಂದ ಮೇಲೆ ಪಾದಯಾತ್ರೆ ಬಸ್ ಯಾತ್ರೆಗೂ ಮುಂದಾದರು. ಆದರೆ ಮಧ್ಯೆ ರಾಹುಲ್ ಗಾಂಧಿ ಅವರ ಜೋಡೋ ಯಾತ್ರೆಯಿಂದಾಗಿ ಅವರ ಬಸ್ ಯಾತ್ರೆ ಸದ್ಯ ಮುಂದಕ್ಕೋಗಿದೆ. ಇನ್ನೇನು ದೀಪಾವಳಿ ಬಳಿಕ ಸಿದ್ದು ಬಸ್ ಯಾತ್ರೆ ಕೈಗೊಂಡು ಮತ್ತೆ ಪೇಸಿಎಂ ವಾರ್ ಜೋರು ಮಾಡಲು ಒಳಗೊಳಗೇ ಕಸರತ್ತು ನಡೆಸಿದ್ದಾರೆ. ಈಗಿರೋವಾಗಲೇ ಸಿದ್ದರಾಮಯ್ಯ ಅವರ ಕೈ ತಲುಪಿರೋ ವರದಿ ಮಾತ್ರ ಅವರಿಗೇ ದಂಗು ಬಡಿಯುವಂತೆ ಮಾಡುತ್ತಿದೆ.

ಅಸಲಿಗೆ ಸಿದ್ರಾಮಯ್ಯ ಅವರ ಕೈ ಸೇರಿರೋ ವರದಿ `ನಿಲ್ಲೋದಾದರೆ ಯಾವ್ ಯಾವುದೋ ಕ್ಷೇತ್ರಗಳಲ್ಲಿ ನಿಲ್ಲೋಕೆ ಹೋಗಬೇಡಿ. ನಿಲ್ಲೋದಾದ್ರೆ ವರುಣಾ ಕ್ಷೇತ್ರದಲ್ಲೇ ನಿಲ್ಲಿ. ಆ ಕ್ಷೇತ್ರ ಬಿಟ್ರೆ ಬೇರೆಲ್ಲೂ ನಿಮಗೆ ಗೆಲುವು ಗ್ಯಾರಂಟಿ ಇಲ್ಲ. ಸುಮ್ಮನೆ ರಿಸ್ಕ್ ಬೇಡ’ ಅಂತ ಸೂಚಿಸಲಾಗಿದೆ. ಹೀಗಾಗಿ ಸಿದ್ದು ಮತ್ತೆ ವರುಣಾ ಕಡೆ ತಿರುಗಿ ನೋಡುವಂತೆ ಮಾಡಿದೆ.

ಇನ್ನು ಸಿದ್ದರಾಮಯ್ಯ ಕೊಂಕಣ ಸುತ್ತಿ ಕೊನೆಗೆ ಮೈಲಾರಕ್ಕೇ ಬರುತ್ತಾರೆ ಅನ್ನೋದರ ಸುಳಿವು ಈ ಹಿಂದೆ ಪುತ್ರ ಯತೀಂದ್ರ ಅವರೇ ಬಿಟ್ಟುಕೊಟ್ಟಿದ್ದರು. ಆದರೆ ಸಿದ್ದರಾಮಯ್ಯ ಅವರಿಗೆ ಮಗನೂ ರಾಜಕೀಯದಲ್ಲಿ ಇರಬೇಕು ಅನ್ನೋ ಆಸೆ. ಹಾಗಾಗಿ ನೀನು ವರುಣಾದಲ್ಲಿರು. ನಾನು ಬೇರೆ ಕ್ಷೇತ್ರ ನೋಡಿಕೊಂಡು ನಿಲ್ಲುತ್ತೇನೆ ಅಂದಿದ್ದರು. ಅದಕ್ಕೆ ಒಂದು ವೇಳೆ ಬೇರೆ ಕ್ಷೇತ್ರ ಆಗಲಿಲ್ಲ ಅಂದ್ರೆ ನೀವು ವರುಣಾದಲ್ಲಿ ನಿಲ್ಲಿ ನಾನು ರಾಜಕೀಯದಿಂದ ಬ್ಯಾಕ್‌ಡ್ರಾಪ್ ಆಗ್ತೀನಿ ಅಂತಾನೂ ಯತೀಂದ್ರ ಅಪ್ಪನ ಬಳಿ ಹೇಳಿಕೊಂಡಿದ್ದರು. ಈ ವಿಚಾರವನ್ನು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿಯೂ ಹೇಳಿಕೊಂಡಿದ್ದರು. ಈಗ ಮತ್ತೆ ಯತೀಂದ್ರ ಅದೇ ರಾಗ ಆಡಿ `ತಂದೆಯವರು ವರುಣಾದಲ್ಲಿ ನಿಲ್ಲೋದಾದ್ರೆ ನಾನು ಕ್ಷೇತ್ರ ಬಿಟ್ಟುಕೊಡಲು ಸಿದ್ದನಿದ್ದೇನೆ. ಅಪ್ಪ ಬೇರೆ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಅಂದ್ರೆ ಅವರು ಬಿಟ್ಟುಕೊಟ್ಟ ಹಾಗೆ ನಾನೂ ಪಕ್ಷದ ಕಾರ್ಯಕರ್ತನಾಗಿ ಬಿಟ್ಟುಕೊಡುತ್ತೇನೆ. ಆದರೆ ಬೇರೆಲ್ಲೂ ನಿಲ್ಲುವುದಿಲ್ಲ. ಅಪ್ಪನ ಬೆನ್ನಿಗೆ ನಿಂತು ವರುಣಾದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತೇನೆ’ ಎಂಬುದಾಗಿ ಅತಿ ವಿನಯದಿಂದಲೇ ಹೇಳಿಕೊಂಡಿದ್ದಾರೆ.

ವರುಣಾನೇ ಯಾಕೆ?

ಸಿದ್ದರಾಮಯ್ಯ ಅವರಿಗೆ ಮತ್ತೊಮ್ಮೆ ಕೊನೇ ಬಾರಿಗೆ ಸಿಎಂ ಆಗೋ ತವಕ. ಆದರೆ ಆ ರೇಸ್‌ನಲ್ಲಿ ಡಿಕೆಶಿ ಕೂಡ ಇದ್ದಾರೆ, ತಾನು ಮಾಡಿದ್ದು ಮತ್ತೆ ತನಗೆ ಕಾಡಬಾರದು ಅಂದರೆ 2013ರ ಇತಿಹಾಸ ಮರುಕಳಿಸಬಾರದು ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಮುನ್ನೆಚ್ಚರಿಕೆಯಾಗಿ ಸೇಫ್ ಕ್ಷೇತ್ರ ಹುಡುಕಿಕೊಳ್ಳುತ್ತಿದ್ದಾರೆ. ಇದಾಗಲೇ ಚಾಮುಂಡಿ ಕ್ಷೇತ್ರದ ಒಳೇಟಿನ ಗಾಯ ಮಾಗಿಲ್ಲ. ಹಾಗಾಗಿ ಬೇರೆ ಕ್ಷೇತ್ರದಲ್ಲಿ ನಿಂತು ಸೋತು ಸಿಎಂ ಪದವಿಯನ್ನು ಕಳೆದ ಬಾರಿ ಕುಮಾರಸ್ವಾಮಿ ತಟ್ಟೆಗಿಟ್ಟ ರೀತಿಯಲ್ಲಿ ಈ ಬಾರಿ ಡಿಕೆಶಿಗೆ ಆಗಬಾರದು ಅನ್ನೋದು ಸಿದ್ದರಾಮಯ್ಯ ಅವರ ಉದ್ದೇಶ. ಇನ್ನು ವರುಣಾದಲ್ಲಿ ಹೊರಗಿನವರನ್ನು ನಂಬುವ ಅಗತ್ಯವಿಲ್ಲ. ಕಳೆದ ಬಾರಿ ಆಪ್ತನನ್ನು ನಂಬಿ ಕೈ ಸುಟ್ಟುಕೊಂಡ ಅನುಭವವೂ ಇದೆ. ಹಾಗಾಗಿ ವರುಣಾ ಕ್ಷೇತ್ರದಲ್ಲಿ ಮಗನೇ ಮುತುವರ್ಜಿಯಿಂದ ನೋಡಿಕೊಂಡರೆ ಅಲ್ಲಿಗೆ ಸುಲಭವಾಗಿ ಕ್ಷೇತ್ರದಿಂದ ಹೊರಗೆ ಕಾಲಿಟ್ಟು ರಾಜ್ಯ ಪ್ರವಾಸ ಮಾಡಬಹುದು ಅನ್ನೋ ಲೆಕ್ಕಾಚಾರ.

ಇಷ್ಟಲ್ಲದೇ ಒಂದು ವೇಳೆ ಬೇರೆ ಕ್ಷೇತ್ರದಲ್ಲಿ ಸವಾಲು ಹಾಕಿ ನಿಂತಲ್ಲಿ ಬಿಜೆಪಿಯವರಿಗಿಂತ ಹೆಚ್ಚಾಗಿ ಸ್ವಪಕ್ಷೀಯರೇ ಕಾಲೆಳೆದು ಸೋಲಿಸಬಹುದೆಂಬ ಆತಂಕವೂ ಕಾಡುತ್ತಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲುಂಟಾದರೆ ಸಿಎಂ ಸ್ಥಾನ ಕೈತಪ್ಪೋದರ ಜೊತೆಗೆ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ. ಹಾಗಾಗಿ ಈ ಎಲ್ಲಾ ಕಾರಣದಿಂದಾಗಿಯೇ ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಕೂರುವ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ. ಅಧಿಕೃತ ಘೋಷಣೆಯೊಂದು ಬಾಕಿ ಇದೆ ಅಷ್ಟೆ.

ಕುಮಾರಸ್ವಾಮಿಗೂ ಕಷ್ಟವಿದೆ!

ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಇತ್ತೀಚೆಗೆ ಕ್ಷೇತ್ರದ ಚಿಂತೆ ಕಾಡಹತ್ತಿದೆ. ಬಿಜೆಪಿಯ ಸಿ.ಪಿ. ಯೋಗೀಶ್ವರ್ ಚನ್ನಪಟ್ಟಣದಲ್ಲಿ ಇಡುತ್ತಿರುವ ಅಬ್ಬರ, ಮಾಡುತ್ತಿರುವ ಆರ್ಭಟ ಕುಮಾರಸ್ವಾಮಿ ಅವರನ್ನು ಒಳಗೊಳಗೆ ಕಂಗೆಡಿಸಿದೆ. ಇಲ್ಲಿ ಚುನಾವಣೆಗೆ ನಿಂತು ಅಪ್ಪಿತಪ್ಪಿ ಸೋತರೆ, ಅದೇ ಕಾಲಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಅಗತ್ಯ ತಲೆದೋರಿದರೆ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತವಾಗಬೇಕಾಗುತ್ತದೆ ಎಂಬ ಸಣ್ಣ ಆತಂಕ ಹೆಚ್‌ಡಿಕೆ ಹಿಂಬಾಲಕ ಪಡೆಯಲ್ಲಿದೆ.

ಕಳೆದ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕಡೆ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರು ಎರಡೂ ಕಡೆ ಗೆದ್ದಿದ್ದರು. ಮುಖ್ಯಮಂತ್ರಿಯಾದ ನಂತರ ಯೋಗೀಶ್ವರ್ ಹಣಿಯಲೆಂದೇ ಡಿ.ಕೆ.ಶಿವಕುಮಾರ್ ಮಾತುಕೇಳಿ ಚನ್ನಪಟ್ಟಣ ಉಳಿಸಿಕೊಂಡು ರಾಮನಗರಕ್ಕೆ ರಾಜೀನಾಮೆ ಕೊಟ್ಟಿದ್ದರು. ಉಪಚುನಾವಣೆಯಲ್ಲಿ ಪತ್ನಿ ಅನಿತಾ ಗೆದ್ದು ಬರುವಂತೆ ನೋಡಿಕೊಂಡಿದ್ದರು.

ಆದರೆ ಈ ಸಲ ಚನ್ನಪಟ್ಟಣದಲ್ಲಿ ವಾತಾವರಣ ವ್ಯತಿರಿಕ್ತವಾಗುತ್ತಿದೆ. ಯೋಗೀಶ್ವರ್ ಶತಾಯಗತಾಯ ಗೆಲ್ಲಲ್ಲೇಬೇಕೆಂದು ಕ್ಷೇತ್ರದಲ್ಲಿ ಸುಂಟರಗಾಳಿಯಂತೆ ಸುತ್ತುತ್ತಿದ್ದಾರೆ. ಬಿಜೆಪಿ ಸರ್ಕಾರ ಭರಪೂರ ಅನುದಾನದ ಹೊಳೆ ಹರಿಸಿ ಯೋಗೀಶ್ವರ್ ಬೆನ್ನಿಗೆ ನಿಂತಿದೆ. ಅದರಲ್ಲೂ ಸಚಿವ ಅಶ್ವತ್ಥನಾರಾಯಣ ಚನ್ನಪಟ್ಟಣದಲ್ಲಿ ಮತ್ತು ರಾಮನಗರದಲ್ಲಿ ಈ ಸಲ ಹೆಚ್‌ಡಿಕೆ ಗೆಲ್ಲಲು ಬಿಡಬಾರದು ಎಂಬಷ್ಟರ ಮಟ್ಟಿಗೆ ಹಾವಳಿ ಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಹೆಚ್‌ಡಿಕೆ-ಅಶ್ವತ್ಥನಾರಾಯಣ ನಡುವೆ ರಾಜಕೀಯ ಜಂಗೀಕುಸ್ತಿಯೇ ನಡೆಯುತ್ತಿದೆ. ಹೀಗಿರುವಾಗ ಚನ್ನಪಟ್ಟಣ ಎಷ್ಟು ಸುರಕ್ಷಿತ ಎಂದು ಹೆಚ್‌ಡಿಕೆ ತಲೆ ಕೆಡಿಸಿಕೊಂಡಿದ್ದಾರೆ. ಮೇಲಾಗಿ ಇದೇ ಕ್ಷೇತ್ರದಲ್ಲಿ ಜನ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿರುವ ಇತಿಹಾಸವೂ ಇರುವುದರಿಂದ ಇಲ್ಲಿಯರಬೇಕೆ ಅಥವಾ ರಾಮನಗರಕ್ಕೆ ವಲಸೆ ಹೋಗಬೇಕೆ? ಕಳೆದ ಬಾರಿಯಂತೆ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಉತ್ತಮವೇ ಎಂಬ ಚಿಂತನೆಯಲ್ಲಿ ಮುಳುಗಿದ್ದಾರೆ.

ಬೊಮ್ಮಾಯಿ ವಿಜಯೇಂದ್ರ ನಡೆ ಎತ್ತ ಕಡೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಈ ಸಲ ಶಿಗ್ಗಾಂವಿಯಲ್ಲಿ ಕಷ್ಟವಿದೆ ಎಂಬ ಮಾತು ಬಿಜೆಪಿ ಒಳಮನೆಯಿಂದ ಕೇಳಿಬರುತ್ತಿದೆ. ಈ ಕ್ಷೇತ್ರದಿಂದ 2008, 2013 ಮತ್ತು 2018 ರಲ್ಲಿ ಬೊಮ್ಮಾಯಿ ಗೆದ್ದು ಬಂದಿದ್ದಾರೆ. ಆದರೆ ಈ ಸಲ ಕ್ಷೇತ್ರದಲ್ಲಿ ಪ್ರಬಲವಾಗಿರುವ ಪಂಚಮಸಾಲಿ ಲಿಂಗಾಯತರ ಒಳೇಟಿನ ಭೀತಿ ಇದೆ. ಸಾದರ ಲಿಂಗಾಯತ ಮತ್ತು ಪಂಚಮಸಾಲಿಗಳ ಮತಗಳಿಂದ ಬೊಮ್ಮಾಯಿ ಸುಲಭವಾಗಿ ಗೆಲ್ಲುತ್ತಿದ್ದರು. ಈ ಸಲ ಮೀಸಲಾತಿ ಸೇರಿ ಅನೇಕ ಕಾರಣಗಳಿಗಾಗಿ ಪಂಚಮಸಾಲಿಗಳು ಮುನಿದಿದ್ದಾರೆ. ಮೇಲಾಗಿ ಮುಖ್ಯಮಂತ್ರಿಯಾದ ನಂತರ ವಿರೋಧಿ ಪಡೆ ಕತ್ತಿ ಮಸೆಯುತ್ತಿದೆ. ಹಾನಗಲ್ ಉಪಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಮುಖಭಂಗ ಮಾಡಲೆಂದೇ ಸ್ವಪಕ್ಷೀಯರು ಕಾಲೆಳೆದು ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದರು. ಈ ಸಲ ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರನ್ನೇ ಸೋಲಿಸಲು ಸ್ಕೆಚ್ಚು ರೂಪಿಸಲಾಗುತ್ತಿದೆ. ಇದಕ್ಕಾಗಿ ಶತ್ರು ಪಾಳೆಯ ಒಗ್ಗಟ್ಟಾಗುತ್ತಿದೆ ಎಂಬ ಮಾತಿದೆ.

ಶಿಗ್ಗಾಂವಿಯ ಜಾತಿ ಸಮೀಕರಣ ನೋಡುವುದಾದರೆ ಪಂಚಮಸಾಲಿ ಲಿಂಗಾಯತರು ಮತ್ತು ಮುಸ್ಲಿಮರು ತಲಾ 60 ಸಾವಿರದಂತೆ ಸಮ ಸಂಖ್ಯೆಯಲ್ಲಿದ್ದಾರೆ. ಬೊಮ್ಮಾಯಿ ಅವರ ಸ್ವಜಾತಿ ಸಾದರ ಲಿಂಗಾಯತರು 16 ಸಾವಿರವಷ್ಟೇ ಇದ್ದಾರೆ.  ದಲಿತರು 40 ಸಾವಿರ, ಕುರುಬರು 24 ಸಾವಿರದಷ್ಟಿದ್ದಾರೆ. ಹೀಗಿರುವಾಗ ಪಂಚಮಸಾಲಿಗಳು ಕೈಕೊಟ್ಟರೆ ಕುರುಬರು, ಮುಸ್ಲಿಮರ ಜೊತೆಗೆ ದಲಿತ ಸಮುದಾಯದ ಅರ್ಧದಷ್ಟು ಮತ ಕಾಂಗ್ರೆಸ್ ಕಡೆ ಹೋದರೂ ಬಸವರಾಜ ಬೊಮ್ಮಾಯಿ ಗೆಲುವು ಕಷ್ಟವಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಆ ಭಾಗದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಸವರಾಜ ಬೊಮ್ಮಾಯಿ ವಿರೋಧಿ ಪಾಳೆಯದಲ್ಲಿದ್ದಾರೆ. ಹಾವೇರಿ ಜಿಲ್ಲೆ ಮಟ್ಟಿಗೆ ಬರುವುದಾದರೂ ಸಂಸದ ಶಿವಕುಮಾರ್ ಉದಾಸಿ, ನೆಹರೂ ಒಲೇಕಾರ್ ಸೇರಿದಂತೆ ಎಲ್ಲರೂ ಬೊಮ್ಮಾಯಿ ಕಂಡರೆ ಆಗುವುದಿಲ್ಲ. ಹೀಗಾಗಿ ಮುಖ್ಯಮಂತ್ರಿಯವರನ್ನು ಸೋಲಿನ ನೆರಳು ಹಿಂಬಾಲಿಸುತ್ತಿದೆ.

ಇನ್ನೂ ಮೊದಲ ಸಲ ಚುನಾವಣೆಗೆ ಸ್ಪರ್ಧಿಸಿ ಭದ್ರ ರಾಜಕೀಯ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಲು ಸಿದ್ಧವಾಗಿರುವ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಯಾವ ಕ್ಷೇತ್ರದಿಂದ ಕಣಕ್ಕಿಳಿಸಬೇಕು ಎಂದು ಅವರ ಕುಟುಂಬ ತಲೆಕೆಡಿಸಿಕೊಂಡಿದೆ. ವಿಜಯೇಂದ್ರ ಚುನಾವಣೆ ಸ್ಪರ್ಧೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆಯಾದರೂ ಯಾವ ಕ್ಷೇತ್ರದಿಂದ ನಿಲ್ಲಲು ಸೂಚಿಸುತ್ತದೆ ಎಂಬುದು ಸ್ಪಷ್ಟವಿಲ್ಲ. ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರದಲ್ಲಿ ನಿಂತರೆ ಗೆಲುವು ಸುಲಭ. ಆದರೆ ಅಕ್ಕಪಕ್ಕದ ಕ್ಷೇತ್ರಗಳ ಗೆಲುವಿನ ದೃಷ್ಟಿಯಿಂದ ಮೈಸೂರು, ಚಾಮರಾಜನಗರ ಅಥವಾ ಮಂಡ್ಯದಿಂದ ಸ್ಪರ್ಧೆಗೆ ಸೂಚಿಸಿದರೆ ಕಷ್ಟ. ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಲ್ಲೂ ಲಿಂಗಾಯತ ಮತಬ್ಯಾಂಕ್ ಪ್ರಬಲವಾಗಿದ್ದು ಅಲ್ಲಿಂದ ಸ್ಪರ್ಧಿಸುವಂತೆ ಹೇಳಿದರೆ ವಿಜಯೇಂದ್ರ ಮೊದಲ ಹೆಜ್ಜೆಯೇ ಸವಾಲಿನದಾಗುತ್ತದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles