ಪವರ್ ಇಲ್ಲದ ಅಧ್ಯಕ್ಷರಿಗೆ ಸಿಕ್ಕಿದೆ ಪ್ರಚಾರ ಪಡೆಯುವ ಐಡಿಯಾ
-ಜಿ. ಅರುಣ್‌ಕುಮಾರ್
ಒಂದು ಕಡೆ ವಾಣಿಜ್ಯ ಮಂಡಳಿಯಲ್ಲಿ ಈ ರೀತಿಯ ಕಾರ್ಯಕ್ರಮಗಳು ಹೆಚ್ಚಾಗುತ್ತಿದ್ದಂತೆಯೇ, ಇನ್ನೊಂದು ಕಡೆ ಗಾಂಧಿನಗರದಲ್ಲಿ ಗೇಲಿ ಮಾಡುವವರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲ, ಕರ್ನಾಟಕ ಚಲನಚಿತ್ರ ಸನ್ಮಾನ ಮಂಡಳಿ ಎಂದು ತಮಾಷೆ ಮಾಡಲಾಗುತ್ತಿದೆ. ಆದರೆ, ಹರೀಶ್ ಮತ್ತು ಪದಾಧಿಕಾರಿಗಳಿಗೆ ಬೇರೆ ದಾರಿ ಇಲ್ಲ. ಇದನ್ನೂ ಮಾಡದಿದ್ದರೆ, ಬೇರೆ ಕೆಲಸವೇ ಉಳಿಯುವುದಿಲ್ಲ. ಮೇಲಾಗಿ, ಕನ್ನಡ ಚಿತ್ರರಂಗದ ಎಲ್ಲ ಅಂಗ ಸಂಸ್ಥೆಗಳು ನಿಷ್ಕ್ರಿಯವಾಗಿ ಕುಳಿತಿರುವಾಗ ಕನಿಷ್ಠ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾದರೂ ಆಗಾಗ ಇಂಥದ್ದೇನಾದರೂ ಮಾಡುತ್ತಿರುತ್ತದೆ. ಅದಕ್ಕೆ ಖುಷಿಪಡಬೇಕೋ, ದುಃಖಪಡಬೇಕೋ ಗೊತ್ತಾಗುತ್ತಿಲ್ಲ.
ಯಾಕೋ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ. ಹರೀಶ್ ಅವರ ಅದೃಷ್ಟವೇ ಸರಿ ಇಲ್ಲ. ಕೈಯಲ್ಲಿ ಅಧಿಕಾರವಿದ್ದರೂ, ಏನೂ ಮಾಡದಂತ ಪರಿಸ್ಥಿತಿ ಅವರಿಗೆ ಎದುರಾಗಿದೆ. ಹಾಗಾಗಿಯೇ, ಹಿರಿಯರಿಗೆ ಸನ್ಮಾನ, ಹೆಣ್ಮಕ್ಕಳಿಗೆ ಬಾಗಿನ ಕೊಡುವುದಕ್ಕೆ ಮಂಡಳಿ ಸೀಮಿತವಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಬೇಕೆಂದು ಅದೆಷ್ಟೋ ವರ್ಷಗಳಿಂದ ಪ್ರಯತ್ನ ಮಾಡುತ್ತಲೇ ಇದ್ದರು ಹರೀಶ್. ಅದೆಷ್ಟೋ ಬಾರಿ ಚುನಾವಣೆಗೆ ನಿಂತು ಸೋತಿದ್ದರು. ಈ ಬಾರಿ ಕೊನೆಗೂ ಸಾ.ರಾ. ಗೋವಿಂದು ಅವರನ್ನು ಸೋಲಿಸಿ ಅಧ್ಯಕ್ಷರಾಗಿದ್ದಾರೆ. ಸೋಲಿಸಿದರು ಎನ್ನುವುದಕ್ಕಿಂತ ಗೋವಿಂದು ಮಾಡಿಕೊಂಡ ಸ್ವಯಂಕೃತಾಪರಾಧಗಳೇ ಅವರನ್ನು ಸೋಲುವುಂತೆ ಮಾಡಿದವು ಎಂದರೆ ತಪ್ಪಿಲ್ಲ. ಕಾರಣ ಏನೇ ಇರಲಿ, ಗೋವಿಂದು ಸೋತು ಹರೀಶ್ ಗೆದ್ದರು. ಆದರೆ, ಗೆದ್ದೆ ಎಂದು ರಾಜ್ಯಭಾರ ಮಾಡುವ ಹಾಗಿಲ್ಲ. ಏಕೆಂದರೆ, ಹರೀಶ್ ಕೆಲಸ ಮಾಡದಂತೆ ಗೋವಿಂದು ಕಾನೂನು ಸಮರ ಸಾರಿದ್ದಾರೆ. ಮಂಡಳಿಯ ಹಣಕಾಸು ವ್ಯವಹಾರಗಳಿಗೆ ಸ್ಟೇ ತಂದಿದ್ದಾರೆ. ಹಾಗಾಗಿ, ಹರೀಶ್ ಮತ್ತು ಮಂಡಳಿಯ ಇತರೆ ಪದಾಧಿಕಾರಿಗಳಿಗೆ ದೊಡ್ಡ ಮಟ್ಟದಲ್ಲಿ ಏನೂ ಮಾಡದಂತಹ ಪರಿಸ್ಥಿತಿ ಎದುರಾಗಿದೆ.

ಇನ್ನೊಂದು ಕಡೆ ಸರ್ಕಾರಿ ಲೆವೆಲ್‌ನಲ್ಲಿ ಏನಾದರೂ ಮಾಡಿ ಚಿತ್ರರಂಗವನ್ನು ದೊಡ್ಡ ಮಟ್ಟದಲ್ಲಿ ಉದ್ಧಾರ ಮಾಡೋಣ ಎಂದರೆ, ಸರ್ಕಾರದ್ದೇ ನೂರೆಂಟು ಸಮಸ್ಯೆಗಳು. ಮುಖ್ಯಮಂತ್ರಿಗಳಿಗೆ ನೂರೆಂಟು ತಲೆನೋವುಗಳಿರುವಾಗ, ಚಿತ್ರರಂಗದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆಯೇ? ಖಂಡಿತಾ ಇಲ್ಲ. ಹಾಗಾಗಿ, ಹರೀಶ್ ಮತ್ತು ಮಂಡಳಿಗೆ ಏನೂ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಇರುವುದರಲ್ಲೇ ಏನಾದರೂ ಮಾಡಬೇಕು ಎಂದು ಹರೀಶ್ ಬೇರೊಂದು ಪ್ಲಾನ್ ಮಾಡಿದ್ದಾರೆ. ಸಕ್ರಿಯವಾಗಿರಬೇಕು, ನಿರಂತರವಾಗಿ ಪ್ರಚಾರ ಪಡೆಯುತ್ತಿರಬೇಕು ಎಂಬ ಕಾರಣಕ್ಕೆ ವಾರಕ್ಕೊಂದು ಕಾರ್ಯಕ್ರಮವನ್ನು ಮಂಡಳಿಯ ವತಿಯಿಂದ ಆಯೋಜಿಸುತ್ತಲೇ ಇದ್ದಾರೆ.
ಮೊದಲಿಗೆ ಚಿತ್ರರಂಗದಲ್ಲಿ 60 ವರ್ಷಗಳನ್ನು ಪೂರೈಸಿದ ಹಿರಿಯ ನಟ ಉಮೇಶ್ ಅವರನ್ನು ಸನ್ಮಾನಿಸಲಾಯಿತು. ಆ ನಂತರ 80ನೇ ವರ್ಷಕ್ಕೆ ಕಾಲಿಟ್ಟ ದ್ವಾರಕೀಶ್ ಅವರನ್ನು ಸನ್ಮಾನಿಸಲಾಯಿತು. ಗೌರಿ ಹಬ್ಬದ ಸಂದರ್ಭದಲ್ಲಿ ನಟಿಯರು ಮತ್ತು ತಂತ್ರಜ್ಞರಿಗೆ ಬಾಗಿನ ನೀಡಲಾಯಿತು. ಮಂಡಳಿಯ ಇತಿಹಾಸದಲ್ಲೇ ಈ ತರಹದ ಕಾರ್ಯಕ್ರಮ ಹೊಸದು. ಆದರೂ ಸುಧಾರಾಣಿ ಮುಂತಾದ ಹಿರಿಯರನ್ನು ಕರೆದು ಬಾಗಿನ ನೀಡಿ ಹಬ್ಬ ಆಚರಿಸಲಾಯಿತು. ಈಗ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ಹಿರಿಯರನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಗಿದೆ. ಒಂದು ಕಾಲಕ್ಕೆ ಶಿಕ್ಷಕರಾಗಿದ್ದ ಎಸ್.ಎ. ಚಿನ್ನೇಗೌಡ, ಅವಿನಾಶ್, ನಾಗತಿಹಳ್ಳಿ ಚಂದ್ರಶೇಖರ್, ಡಾ, ಚಂದ್ರಶೇಖರ ಕಂಬಾರ, ಲೋಹಿತಾಶ್ವ, ದೊಡ್ಡರಂಗೇಗೌಡ ಮುಂತಾದವರನ್ನು ವಾಣಿಜ್ಯ ಮಂಡಳಿಗೆ ಕರೆದು ಸನ್ಮಾನಿಸಲಾಗಿದೆ.