21.9 C
Bengaluru
Monday, March 20, 2023
spot_img

ಕಾಂತಾರ ಗೆಲ್ಲಲು ಕಾರಣವಾದ  ಹತ್ತು ಸಂಗತಿಗಳು…

ವಿಜಯ್ ದಾರಿಹೋಕ 

ಕಾಂತಾರ ಚಿತ್ರದ  ಪ್ರತಿ ಡೈಲಾಗ್ ಗಳೂ ಕೂಡ ಕನ್ನಡದ ಜನಮನದಲ್ಲಿ ಹುಟ್ಟಿಕೊಂಡವುಗಳು. ಅವು ಇತರ ಭಾಷೆಯ ಚಿತ್ರಗಳಿಂದ ಎರವಲು ಪಡೆದವಲ್ಲ.  ಕನ್ನಡದಲ್ಲಿ ಬರುವ ಅನೇಕ ಸಿನೆಮಾಗಳು ತಮಿಳು ತೆಲುಗು ಚಿತ್ರದ ಸಿದ್ಧ ಸೂತ್ರಗಳನ್ನು ನಕಲಿಸುವ ಕೆಲಸ ಮಾಡಿ, ಕನ್ನಡದ ಜಾಯಮಾನಕ್ಕೆ ಒಗ್ಗದೆ ಸೋತಿರುವ ಉದಾಹರಣೆಗಳನ್ನು ಕಂಡಿದ್ದೇವೆ.  ಕಾಂತಾರದಲ್ಲಿ ರಿಷಭ್  ಶೆಟ್ಟಿ ಗೆದ್ದಿರುವುದು ಅಂಥ ಸಿನೆಮಾಗಳ ಸಿದ್ಧ ಸೂತ್ರಗಳನ್ನು ಬಿಟ್ಟು ಸ್ವಂತ ಪರಿ ಕಲ್ಪನೆಗಳೊಂದಿಗೆ, ಪ್ರಾದೇಶಿಕ ಸೊಗಡನ್ನು ಪೂರಕವಾಗಿ ಬೆರೆಸಿ  ಸಿನೆಮಾ ಮಾಡಿದ್ದಕ್ಕೆ. ಸ್ವತಃ ರಿಷಭ್ ಕೂಡ ತಮ್ಮ ಹಳೆಯ ಚಿತ್ರಗಳ ಅನುಭವದಿಂದ  ಕಲಿತು ಮಾಗುತ್ತಿದ್ದಾರೆ. ಈ  ಚಿತ್ರದ ಹತ್ತು ಅಂಶಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ಇತ್ತೀಚಿಗೆ ಬಿಡುಗಡೆಯಾಗಿ, ಭರ್ಜರಿ ಸದ್ದು ಮಾಡುತ್ತಿರುವ ರಿಷಭ್ ಶೆಟ್ಟಿ ಅವರ  ಕಾಂತಾರ ಸಿನೆಮಾ ಜಗತ್ತಿನಾದ್ಯಂತ ಕನ್ನಡಿಗರ ಮನ ಸೂರೆಗೊಂಡಿದೆ.  ಕನ್ನಡ ಸಿನೆಮಾ ಕ್ಷೇತ್ರದಲ್ಲಿ  ಅದ್ಭುತ ಯಶಸ್ಸಿಗೆ ಕಾರಣವಾಗಿರುವ ಈ  ಚಿತ್ರದ ಹತ್ತು ಅಂಶಗಳನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇವೆ.

1. ಭೂತಾರಾಧನೆಯ ಹಿನ್ನೆಲೆ : ಜಗತ್ತಿನಲ್ಲಿ ಶ್ರೇಷ್ಠ ಕೃತಿಗಳು ಹಾಗೂ ಕಲಾ ಪ್ರಸ್ತುತಿಗಳು ಒಂದು ಢಾಳಾದ ಜನಪದ,ಪಾತ್ರ ಇಲ್ಲವೇ ಆಚರಣೆಗಳ  ಹಿನ್ನೆಲೆಯನ್ನು ಬಳಸಿಕೊಳ್ಳುತ್ತವೆ. ಕಾಂತಾರ ಚಿತ್ರದಲ್ಲಿ ದಕ್ಷಿಣ ಕನ್ನಡದ ಭೂತಾರಾಧನೆ ಪರಂಪರೆಯನ್ನು ಕಥನಕ್ಕೆ  ಪೂರಕವಾಗಿ ಉಪಯೋಗಿಸಿದ್ದು, ದೃಶ್ಯ ಹಾಗೂ ಶ್ರಾವ್ಯ ವಿಭಾಗದಲ್ಲಿ ಅದು ಮೂಡಿಸುವ ಭವ್ಯವಾದ ಅನುಭವ, ನಿಗೂಢತೆಗಳು ಚಿತ್ರಕ್ಕೆ ಗಟ್ಟಿಯಾಗಿ ಒದಗಿಬಂದಿವೆ. ಚಿತ್ರ ಮಾಡುವ ಮುಂಚೆ ನಿರ್ದೇಶಕ ರಿಷಭ್ ಶೆಟ್ಟಿ ಸುಮಾರು ಮೂರು ತಿಂಗಳ ಕಾಲ ದೈವವನ್ನು ಮೈಯಲ್ಲಿ ಆಹ್ವಾನಿಸುವ ವಿವಿಧ ಪಾತ್ರಿಗಳನ್ನು ಭೇಟಿ ಮಾಡಿ ಅದರ ಬಗ್ಗೆ ತಿಳಿದುಕೊಂಡಿದ್ದಾರೆ. 

2. ಸಂಭಾಷಣೆಗಳ ಅನನ್ಯತೆ   

  ಮಂಗಳೂರು ಕನ್ನಡ  ಭಾಷೆಯಲ್ಲಿ ಕೇಳಿ ಬರುವ ಎಲ್ಲ ಸಂಭಾಷಣೆಗಳೂ ಅರ್ಥ ಗರ್ಭಿತ, ಹಾಸ್ಯ, ಮೊನಚುತನದಿಂದ ಕೂಡಿದ್ದವು. ಎಲ್ಲ ಪಾತ್ರಗಳು ಸಂದರ್ಭಕ್ಕೆ ತಕ್ಕ ಹಾಗೆ ಸಹಜವಾಗಿ  ಮಾತನಾಡುವ ಬಗೆ ನೋಡಿದರೆ, ಅದು ಕೇವಲ  ಬರೆದು ಒಪ್ಪಿಸಿದ ಅಥವಾ ತುರುಕಿದ  ಸಂಭಾಷಣೆ ಅನ್ನಿಸದಿರುವುದು  ಕಂಡುಬರುತ್ತದೆ.  ಈ ಚಿತ್ರದ ಸಂಭಾಷಣೆಯ ಪಕ್ವತೆ ಎಷ್ಟಿದೆ ಎಂದರೆ ತುಂಬಾ ಗಂಭೀರ ಸನ್ನಿವೇಶದಲ್ಲೂ ಕೂಡ ಬರುವ ಹಾಸ್ಯದ ಡೈಲಾಗ್ ಗಳು,  ಪ್ರೇಕ್ಷಕನ ರಸಾನುಭಾವಕ್ಕೆ ಅಡ್ಡ ಪರಿಣಾಮ ಉಂಟು ಮಾಡದಿರುವುದು.

3. ನಿರೂಪಣೆಯ ಗತಿ  

ಈ ಚಿತ್ರದ ಇನ್ನೊಂದು ವೈಶಿಷ್ಟ್ಯತೆ ನಿರೂಪಣಾ ವೇಗ, ಡೈಲಾಗ್ ಗಳು ದೀರ್ಘವಾಗಿರದೆ ಇರುವುದರಿಂದ  ನೋಡುಗನ ತಾಳ್ಮೆಗೆ ಧಕ್ಕೆ ಬರುವುದಿಲ್ಲ. ಕ್ಯಾಮೆರಾದ ಕಣ್ಣುಗಳು ಸಂಭಾಷಣೆಗೆ ತಕ್ಕಂತೆ ವಸ್ತು, ಹಿನ್ನೆಲೆಗಳನ್ನು ಕೇಂದ್ರೀಕರಿಸಿ, ಮುಂದಿನ ಫ್ರೇಮುಗಳಿಗೆ ನಿರಾಯಾಸವಾಗಿ ಸ್ಥಿತ್ಯಂತರ ಗೊಳ್ಳುತ್ತದೆ.  ಇದೇ  ರಿಷಭ್ ತಮ್ಮ ಹಿಂದಿನ ನಿರ್ದೇಶಿತ  ಚಿತ್ರ  ಕಿರಿಕ್  ಪಾರ್ಟಿಯ ದೀರ್ಘ ನಿರೂಪಣೆಯ ವಿಷಯದಲ್ಲಿ ಮಾಡಿದ ತಪ್ಪನ್ನು, ಪುನಾವರ್ತಿಸಲಿಲ್ಲ.  

4. ಕೆರಾಡಿಯ  ಫಿಲಂ ಸೆಟ್ 

ಚಿತ್ರದಲ್ಲಿ ತೋರಿಸಿರುವ ಊರು ದಕ್ಷಿಣ ಕನ್ನಡದ ಕೆರಾಡಿ ಎಂಬಲ್ಲಿ ಚಿತ್ರಕ್ಕಂತಲೇ  ಹಾಕಿದ ಒಂದು ಸೆಟ್ ಎಂದರೆ ಆಶ್ಚರ್ಯವಾಗಬಹುದು..ಒಂದು ಊರಿಗೆ ಬೇಕಾದ ಎಲ್ಲವನ್ನೂ ಅಲ್ಲಿ ಸೃಷ್ಟಿಸಿದ್ದು, ಕಥೆಗೆ ತಕ್ಕ ಹಿನ್ನೆಲೆಯನ್ನು ಒದಗಿಸಿದೆ. ಇದನ್ನು ಚಿತ್ರ ತಂಡ ಕೆರಾಡಿ ಫಿಲಂ ಸಿಟಿ ಎಂದು ತಮಾಷೆಗೆ ಕರೆದಿದ್ದು ಸಹ ಉತ್ಪ್ರೇಕ್ಷೆಯೇನಲ್ಲ. 

5. ರಿಷಭ್  ಅವರ ಸ್ಕ್ರೀನ್ ಪ್ರಸೆನ್ಸ್

ಕಥೆಯ ಹಾಗೂ ಮುಖ್ಯ ಪಾತ್ರದ ಪರಿ ಕಲ್ಪನೆ ರಿಷಭ್  ಅವರದ್ದೇ ಆಗಿರುವುದರಿಂದ, ಜೊತೆಗೆ ತಾವೇ ನಿರ್ದೇಶಕ ಆದ್ದರಿಂದ ಸ್ವತಃ ಅಭಿನಯಿಸಿದ್ದು ಹೆಚ್ಚು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಚಿತ್ರದ ಶಿವಾ ಪಾತ್ರಕ್ಕೆ, ರಿಷಭ್  ಅವರ ಶರೀರ ಹಾಗೂ ಶಾರೀರ ಎರಡೂ ಪೂರಕವಾಗಿ ಕೆಲಸಕ್ಕೆ ಬಂದಿದೆ. ಈ ಚಿತ್ರದಲ್ಲಿ ತಂದೆ ಹಾಗೂ ಮಗನಾಗಿ ಪಾತ್ರಿಯ ವೇಷದಲ್ಲಿ ದ್ವಿಪಾತ್ರದಲ್ಲಿ  ಮಿಂಚಿದ್ದಾರೆ.

6. ಪೋಷಕ ಪಾತ್ರಗಳು

ಈಗಾಗಲೇ ಹಿಂದಿನ ಚಿತ್ರಗಳಲ್ಲಿ  ಅಭಿನಯಿಸಿ ತಮ್ಮದೇ  ಛಾಪು ಮೂಡಿಸಿರುವ ಹೆಚ್ಚು ಕಮ್ಮಿ  ಎಲ್ಲ ಪೋಷಕ ನಟರೂ ತಮ್ಮ ಪಾತ್ರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದು, ಎಲ್ಲಿಯೂ ಓವರ್ ಆಕ್ಟಿಂಗ್ ಗೆ ಅವಕಾಶ ಕೊಡದಿರುವುದನ್ನು ಕಾಣಬಹುದು. ಚಿಕ್ಕ ಪುಟ್ಟ ಪಾತ್ರಗಳು ಸಾಕಷ್ಟು ಇರುವುದು ಪ್ರತಿ ಫ್ರೇಮ್ ನಲ್ಲಿ ಒಂದು ಲವಲವಿಕೆಯನ್ನು ಕಟ್ಟಿ ಕೊಟ್ಟಿದೆ. ಗುರುವಾನನ್ನು ಸಾಯಿಸಿದ್ದು ಯಾರು ಎಂಬುದರ ಬಗ್ಗೆ ಸುಳಿವು ಕೊಡುವ  ಕಬ್ಬಿಣ ಕೆಲಸ ಮಾಡುವ ಸಾಮಾನ್ಯ ಕಮ್ಮಾರನ ಪಾತ್ರ  ನಿಮಿಷ ಮಾತ್ರ   ಕಾಲ ಬಂದು ಹೋದರೂ, ನೆನಪಿನಲ್ಲುಳಿಯುತ್ತದೆ.. 

7. ಫೋಟೋ ಅಥವಾ ಸಿನೆಮಾಟೋಗ್ರಫಿ

 ಇದು ಕೂಡ ಈ ಚಿತ್ರದಲ್ಲಿ ಕಂಡ ಉತ್ತಮ ಅಂಶಗಳಲ್ಲಿ ಒಂದು. ಮೊದಲು ಬರುವ ಕಂಬಳದ ದೃಶ್ಯಗಳು,ಎಲ್ಲ ಕಾಡಿನ ದೃಶ್ಯಗಳು ಹಾಗೂ ಕಮ್ಮಾರನ ಕಮ್ಮಟದ ಬಳಿ ನಡೆಯುವ ಸಾಹಸ ದೃಶ್ಯಗಳು ಇವಿಷ್ಟು ಚಿತ್ರದ ಸಿನೆಮಾಟೋಗ್ರಫಿ ಕೈ ಚಳಕಕ್ಕೆ ಕೊಡಬಹುದಾದ  ಉತ್ತಮ ನಿದರ್ಶನಗಳು. 

8.ಕಥೆ ಮತ್ತು ಕ್ಲೈಮಾಕ್ಷ್

ಈ  ಚಿತ್ರದ ಕಥೆ ಹಳ್ಳಿಯ ಸಾಮಾನ್ಯ ಜನತೆ ತಮಗಿಂತ ಬಲಶಾಲಿ, ಧನಿಕ ವರ್ಗದ ವಿರುದ್ಧದ  ಭೂಮಿಯ ಹಕ್ಕಿಗಾಗಿ ನಡೆಯುವ  ಹೋರಾಟದ ಸುತ್ತ ಕಟ್ಟಲಾಗಿದೆ.  ಕಾಂತಾರದಲ್ಲಿ ಕೂಡ  ಬೆರಗು , ಅಚ್ಚರಿ ಗಳನ್ನು ಮೂಡಿಸುವ ದೈವಾರಾಧನೆಯ ಹಿನ್ನೆಲೆಯಿಟ್ಟುಕೊಂಡ ಕ್ಲೈಮಾಕ್ಸ್ ಮೂಲಕ  ಒಂದು  ತಾರ್ಕಿಕ ಅಂತ್ಯ ನೀಡುವಲ್ಲಿ ರಿಷಭ್ ಶೆಟ್ಟಿ ಯಶಸ್ವಿಯಾಗಿದ್ದಾರೆ. ಆ ಪಾತ್ರ ನಿರ್ವಹಣೆಗೆ ಅವರು ತಮ್ಮ ತನ್ಮಯರಾಗಿ ಅಭಿನಯಿಸಿದ್ದಾರೆ. ದೈವ ಆಹ್ವಾನಿಸಿಕೊಂಡ ದೃಶ್ಯಾವಳಿಗಳಲ್ಲಿ, ಸನ್ನಿವೇಶದ ಗಾಂಭೀರ್ಯಕ್ಕೆ ಕೊಂಚವೂ ಧಕ್ಕೆಯಾಗದೆ ನಿರ್ವಹಿಸಿದ್ದು ಮೆಚ್ಚುವಂತದ್ದು.  ಚಿತ್ರದ ಮೊದಲು ಹಾಗೂ ಕೊನೆಯಲ್ಲಿ  ದೈವದ ಪಾತ್ರಿ ಅದೃಶ್ಯವಾಗುವ ಕಲ್ಪನೆ ಚಿತ್ರಕ್ಕೆ ಮೆರುಗು ತಂದ ಕಥಾನಕ.

9. ಹಿನ್ನೆಲೆ ಸಂಗೀತ 

ಕಾಂತಾರ ಚಿತ್ರದಲ್ಲಿ  ಬರುವ ಹಿನ್ನೆಲೆ  ಸದ್ದುಗಳು ಕರ್ಕಶ, ಆರ್ಭಟ ಅನ್ನಿಸುವುದಿಲ್ಲ. ಕಾಡಿನ ರಾತ್ರಿಯ  ದೃಶ್ಯಗಳಲ್ಲಿ ಹಾಗೂ ಮಳೆ ಹಾಗೂ ಬೆಂಕಿ ಉಪಯೋಗಿಸಿ ನಡೆದ ಹೊಡೆದಾಟದ ಸಮಯದಲ್ಲಿ ಹಿನ್ನೆಲೆಯಲ್ಲಿ ಬರುವ ಹಿತವಾದ  ಟ್ಯೂನ್ ಸಾಮಾನ್ಯವಾಗಿ  ಸಾಹಸ ದೃಶ್ಯಗಳ ವೇಳೆ ಕೇಳಿಸುವ ತಲೆ ಚಿಟ್ಟು ಹಿಡಿಸುವ ಸದ್ದು ಆಗದೆ,  ತಕ್ಕುದಾಗಿ ಮೂಡಿ ಬಂದಿದ್ದು ಸನ್ನಿವೇಶಗಳು ಪರಿಣಾಮಕಾರಿಯಾಗಿ ವ್ಯಕ್ತಗೊಂಡಿದೆ..

10.  ಸ್ವಂತಿಕೆ, ಪ್ರಾದೇಶಿಕತೆ  ಮತ್ತು ಕನ್ನಡದ  ಜಾಯಮಾನ

ಈ  ಚಿತ್ರದ  ಪ್ರತಿ ಡೈಲಾಗ್ ಗಳೂ ಕೂಡ ಕನ್ನಡದ ಜನಮನದಲ್ಲಿ ಹುಟ್ಟಿಕೊಂಡವುಗಳು. ಅವು ಇತರ ಭಾಷೆಯ ಚಿತ್ರಗಳಿಂದ ಎರವಲು ಪಡೆದವಲ್ಲ.  ಕನ್ನಡದಲ್ಲಿ ಬರುವ ಅನೇಕ ಸಿನೆಮಾಗಳು ತಮಿಳು , ತೆಲುಗು ಚಿತ್ರದ ಸಿದ್ಧ ಸೂತ್ರಗಳನ್ನು ನಕಲಿಸುವ ಕೆಲಸ ಮಾಡಿ, ಕನ್ನಡದ ಜಾಯಮಾನಕ್ಕೆ ಒಗ್ಗದೆ ಸೋತಿರುವ ಉದಾಹರಣೆಗಳನ್ನು ಕಂಡಿದ್ದೇವೆ.  ಕಾಂತಾರದಲ್ಲಿ ರಿಷಭ್  ಶೆಟ್ಟಿ ಗೆದ್ದಿರುವುದು ಅಂಥ ಸಿನೆಮಾಗಳ ಸಿದ್ಧ ಸೂತ್ರಗಳನ್ನು ಬಿಟ್ಟು ಸ್ವಂತ ಪರಿ ಕಲ್ಪನೆಗಳೊಂದಿಗೆ, ಪ್ರಾದೇಶಿಕ ಸೊಗಡನ್ನು ಪೂರಕವಾಗಿ ಬೆರೆಸಿ  ಸಿನೆಮಾ ಮಾಡಿದ್ದಕ್ಕೆ. ಸ್ವತಃ ರಿಷಭ್ ಕೂಡ ತಮ್ಮ ಹಳೆಯ ಚಿತ್ರಗಳ ಅನುಭವದಿಂದ  ಕಲಿತು ಮಾಗುತ್ತಿದ್ದಾರೆ. ಒಂದು ಮಟ್ಟದ ಬೌದ್ಧಿಕ ಪ್ರೌಢಿಮೆ, ಇತಿಹಾಸ ಜ್ಞಾನ,ಕಲಾತ್ಮಕ ದೃಷ್ಟಿಕೋನ, ಸ್ವಂತಿಕೆ,ಯಥಾ ಸ್ಥಿತಿ ವಾದವನ್ನು ಒಪ್ಪದಿರುವುದು ಹಾಗೂ ಸೃಜನಶೀಲತೆ ಕಾಂತಾರ ಚಿತ್ರದ  ಒಟ್ಟಾರೆ  ಯಶಸ್ಸಿಗೆ ಕಾರಣಿಭೂತವಾದ ಕೆಲ ಅಂಶಗಳಾಗಿವೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles