21.9 C
Bengaluru
Monday, March 20, 2023
spot_img

ಪಂಚರತ್ನ ಯಾತ್ರೆ: ಸಿದ್ದರಾಮಯ್ಯ ಪರ ಶಾಸಕ ವೀರಭದ್ರಯ್ಯ ಬ್ಯಾಟಿಂಗ್: ಹೆಚ್.ಡಿ.ಕೆ. ಕಸಿವಿಸಿ

-ಎಂ.ಎಸ್. ರಘುನಾಥ್ ಮಧುಗಿರಿ

ವೀರಭದ್ರಯ್ಯ ಅವರು ಕೆ‌.ಎನ್. ರಾಜಣ್ಣ, ಸಿದ್ದರಾಮಯ್ಯ ಅವರ ಬಗ್ಗೆ ತೀರಾ ಸಾಫ್ಟ್ ಕಾರ್ನರ್ ತೋರುತ್ತಿರುವುದು ಏಕೆ? ಜೆಡಿಎಸ್ ಅಭ್ಯರ್ಥಿಗೆ ಮತ ಕೊಡಿ ಎನ್ನುವ ಅವರ ಮಾತು, ತಮಗೆ ಜೆಡಿಎಸ್ ಅಭ್ಯರ್ಥಿಯಾಗಲು ಈಗಲೂ ಪೂರ್ಣ ಮನಸ್ಸಿಲ್ಲ ಎಂಬುದರ ಸೂಚಕವೇ ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅಲ್ಲಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಜೆಡಿಎಸ್ ಪಕ್ಷದಿಂದ ಈ ಸಲ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನಗೆ ಟಿಕೆಟ್ ಬೇಡ. ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಇತ್ತೀಚೆಗಷ್ಟೇ ಹೇಳಿದ್ದ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ವಿ.ವೀರಭದ್ರಯ್ಯ ಅವರಿಗೇ ಕೊನೆಗೂ ಟಿಕೆಟ್ ಫಿಕ್ಸ್ ಆಗಿದ್ದು ಶುಕ್ರವಾರ ಪಂಚರತ್ನ ಯಾತ್ರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕೃತ ಘೋಷಣೆ ಮಾಡಿ ವೀರಭದ್ರಯ್ಯ ಅವರೇ ನಮ್ಮ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಈ ನಡುವೆ ಪಂಚರತ್ನ ಯಾತ್ರೆಯಲ್ಲಿ ಶಾಸಕ ವೀರಭದ್ರಯ್ಯ ಅವರು ಆಡಿರುವ ಕೆಲ ಮಾತುಗಳು ಪಕ್ಷದ ಕಾರ್ಯಕರ್ತರ ತಲೆ ಕೆಡಿಸಿವೆ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಶಾಸಕರು ಏಕೆ ಇಂತಹ ಮಾತುಗಳನ್ನಾಡಿದರು? ಅವರ ಮಾತಿನ ಗೂಢಾರ್ಥವೇನು? ಎಂಬ ಬಗ್ಗೆ ಕಾರ್ಯಕರ್ತರು ತಲೆಬಿಸಿ ಮಾಡಿಕೊಂಡಿರುವುದು ಕ್ಷೇತ್ರದಲ್ಲಿ ಚರ್ಚೆಯ ಅಲೆಯೆಬ್ಬಿಸಿದೆ.
ಇಷ್ಟಕ್ಕೂ ಶಾಸಕ ವೀರಭದ್ರಯ್ಯ ಅವರು ಆಡಿದ ಆ ಮಾತುಗಳು ಯಾವುವು? ಸೂಕ್ಷ್ಮವಾಗಿ ಗಮನಿಸಿದವರು ಮಾತಾಡಿಕೊಂಡಿದ್ದು ಏನು? ತಿಳಿಯೋಣ ಬನ್ನಿ.

ಶುಕ್ರವಾರ ಮಧುಗಿರಿಗೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ ಸಾರಥ್ಯದ ಪಂಚರತ್ನ ಯಾತ್ರೆಗೆ ಶಾಸಕ ವೀರಭದ್ರಯ್ಯ ಅವರ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಅಭೂತಪೂರ್ವ ಸ್ವಾಗತವನ್ನು ಕೋರಿದರು.
ಪಟ್ಟಣದ ಪ್ರವೇಶದಲ್ಲಿಯೇ ಇರುವ ಪವಾಡ ದೇವತೆ ದಂಡಿನ ಮಾರಮ್ಮನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಪಂಚರತ್ನ ಯಾತ್ರೆಯ ವಾಹನವನ್ನು ಏರಿದರು.
ಅಲ್ಲಿ ನೆರದಿದ್ದ ಕಾರ್ಯಕರ್ತರು, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. “ಇಲ್ಲಿನ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ರಾಜಕೀಯ ಮರುಜೀವ ನೀಡಿದ್ದು ಜೆಡಿಎಸ್ ಪಕ್ಷ, ರಾಜಣ್ಣಗೆ ಕಾರ್ಯಕರ್ತರ ವಿರೋಧದ ನಡುವೆಯೂ ಬೆಳ್ಳಾವಿ ಟಿಕೆಟ್ ನೀಡಿ ಪ್ರಚಾರದ ಅಂತಿಮ‌ ದಿನದಂದು ದೊಡ್ಡೇರಿ ಹೋಬಳಿಗೆ ಬಂದು ದೇವೇಗೌಡರು ನೂರಾಮೂರು ಡಿಗ್ರಿ ಜ್ಚರದಲ್ಲೂ ಪ್ರಚಾರ ಮಾಡಿದ್ದಕ್ಕೆ ಈ ಅಸಾಮಿ ಗೆದ್ದರು. ದೇವೇಗೌಡರಿಂದ ಶಾಸಕರಾದರು. ನಂತರ ದೇವೇಗೌಡರ ಬಗ್ಗೆ ಕೃತಜ್ಞತೆ ಇಲ್ಲದೆ ನಡೆದುಕೊಂಡರು.‌ ಕೆಲ ತಿಂಗಳ ಹಿಂದೆ, ‘ದೇವೇಗೌಡರು ಈಗ ಇಬ್ಬರ ಮೇಲೆ ಹೋಗುತ್ತಿದ್ದಾರೆ. ಶೀಘ್ರದಲ್ಲೇ ನಾಲ್ವರ ಮೇಲೆ ಹೋಗೋ ಕಾಲ ಬರುತ್ತೆ’ ಅಂತ ದೇವೇಗೌಡರ ಸಾವು ಬಯಸಿದರು. ಇಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಿ” ಎಂದು ಮನವಿ ಮಾಡಿ. ವೀರಭದ್ರಯ್ಯ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಎನ್ನುತ್ತ ಅವರೇ ಅಭ್ಯರ್ಥಿ ಎಂದು ಘೋಷಿಸಿದರು.
ನಂತರ ಮಾತನಾಡಿದ ಶಾಸಕ ವೀರಭದ್ರಯ್ಯ ತಮ್ಮ ಮಾತುಗಳಲ್ಲಿ “ನನಗೆ ಆಶೀರ್ವಾದ ಮಾಡಿ ಮರುಆಯ್ಕೆ ಮಾಡಿ ” ಎಂದು ಕೇಳಲಿಲ್ಲ. ಬದಲಿಗೆ “ಮಧುಗಿರಿಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ” ,‌ “ಪಕ್ಷಕ್ಕೆ ಮತನೀಡಿ ಜೆಡಿಎಸ್ ಮತ್ತೆ ಕ್ಷೇತ್ರದಲ್ಲಿ ಗೆಲ್ಲುವಂತೆ ಮಾಡಿ”… ಅಂದರೇ ಹೊರತು ನನಗೆ ಮತ್ತೆ ನಿಮ್ಮ ಆಶೀರ್ವಾದ ಬೇಕು, ನಾನು ಜೆಡಿಎಸ್ ಅಭ್ಯರ್ಥಿ ಎಂದು ಹೇಳಲಿಲ್ಲ. ಕುಮಾರಸ್ವಾಮಿ ಅವರೇ ವೀರಭದ್ರಯ್ಯ ಅವರಿಗೆ ಮತ್ತೆ ಆಯ್ಕೆ ಮಾಡಿ ಅಂದರೂ ವೀರಭದ್ರಯ್ಯ ಅವರು ಮಾತ್ರ ” ನನಗೆ ಮತ್ತೆ ನಿಮ್ಮ ಆಶೀರ್ವಾದ ಬೇಕು” ಅನ್ನಲೇ ಇಲ್ಲ.

ನಂತರ ತಡರಾತ್ರಿ ದೊಡ್ಡೇರಿ ಹೋಬಳಿಯ ಬಡವನಹಳ್ಳಿಯಲ್ಲಿ ಶಾಸಕರು ಮಾತನಾಡುವಾಗ, ” ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವೇಳೆ ರೈತರ ಸಾಲ ಮನ್ನಾಕ್ಕೆ ಒಪ್ಪಿದ್ದರು. ಆದರೆ ತಮ್ಮ ಅಧಿಕಾರಾವಧಿಯ ಯೋಜನೆಗಳನ್ನು ಮುಂದುವರೆಸಲು ಬೇಡಿಕೆ ಇಟ್ಟಿದ್ದರು” ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಮಾತನಾಡಲು ಇಷ್ಟಪಡದೇ ಸಾಲ ಮನ್ನಾ ಕ್ರೆಡಿಟ್ ಸಿದ್ದುಗೆ ಕೊಡಲು ಹೋದರು.
ಆಗ ಕಸಿವಿಸಿಗೊಂಡ ಕುಮಾರಸ್ವಾಮಿ ಅವರು ಕೈ ಆಡಿಸುತ್ತ ಸಿದ್ದರಾಮಯ್ಯ ಅವರು ಸಾಲ ಮನ್ನಾಕ್ಕೆ ಒಪ್ಪಿರಲಿಲ್ಲ ಎಂದು ಸಂಜ್ಞೆ ಮಾಡಿದರೂ ವೀರಭದ್ರಯ್ಯ ಮಾತು ಮುಂದುವರೆಸಿದಾಗ ತಲೆಯಾಡಿಸುತ್ತ ಇಲ್ಲ ಇಲ್ಲ ಸಿದ್ದರಾಮಯ್ಯ ಒಪ್ಪಿರಲಿಲ್ಲ ಅಂದರು. ಆಗ ಕ್ಷಮೆ ಕೇಳಿದ ವೀರಭದ್ರಯ್ಯ ” ಸಿದ್ದರಾಮಯ್ಯ ಸಾಲ ಮನ್ನಾ ಮಾಡಲು ಒಪ್ಪಿರಲಿಲ್ಲ” ಅಂದರು.
ಸಿದ್ದರಾಮಯ್ಯ ಬಗ್ಗೆ ಶಾಸಕರು ತೋರಲು ಹೋದ ಸಾಫ್ಟ್ ಕಾರ್ನರ್ ಕುಮಾರಸ್ವಾಮಿ ಅವರಿಗೆ ಇರಿಸುಮುರಿಸು ತಂದಿದ್ದು ಸುಳ್ಳಲ್ಲ.
ಅಲ್ಲಿದ್ದ ಕಾರ್ಯಕರ್ತರು ಇದೇನು ಸಿದ್ದರಾಮಯ್ಯ ಪರ ಎಂಬಂತೆ ಮಾತನಾಡುತ್ತ ನಮ್ಮ ನಾಯಕರಿಗೆ ಮುಜುಗರ ತಂದರಲ್ಲ ಅಂದುಕೊಂಡರು.
ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆಯೇ ಮಧುಗಿರಿ ರಾಜಕೀಯ ವಲಯದಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಿವೆ.
ವೀರಭದ್ರಯ್ಯ ಅವರು ಕೆ‌.ಎನ್. ರಾಜಣ್ಣ, ಸಿದ್ದರಾಮಯ್ಯ ಅವರ ಬಗ್ಗೆ ತೀರಾ ಸಾಫ್ಟ್ ಕಾರ್ನರ್ ತೋರುತ್ತಿರುವುದು ಏಕೆ? ಜೆಡಿಎಸ್ ಅಭ್ಯರ್ಥಿಗೆ ಮತ ಕೊಡಿ ಎನ್ನುವ ಅವರ ಮಾತು, ತಮಗೆ ಜೆಡಿಎಸ್ ಅಭ್ಯರ್ಥಿಯಾಗಲು ಈಗಲೂ ಪೂರ್ಣ ಮನಸ್ಸಿಲ್ಲ ಎಂಬುದರ ಸೂಚಕವೇ ? ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಅಲ್ಲಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಪಂಚರತ್ನ ಯಾತ್ರೆಯಿಂದ ಮಧುಗಿರಿ ರಾಜಕೀಯ ಅಖಾಡ ಬಿಸಿಯೇರಿದೆ.

Related Articles

LEAVE A REPLY

Please enter your comment!
Please enter your name here

Stay Connected

14FansLike
35FollowersFollow
47FollowersFollow
- Advertisement -spot_img

Latest Articles