-ನೀರಕಲ್ಲು ಶಿವಕುಮಾರ್
ಯುದ್ಧದಲ್ಲಿ ಶತ್ರುವಿನ ಮೇಲೆ ಒಂದು ಕಡೆಯಿಂದ ನೇರಮುತ್ತಿಗೆ, ಮತ್ತೊಂದು ಕಡೆಯಿಂದ ಪರೋಕ್ಷ ದಾಳಿ, ಮಗದೊಂದು ಕಡೆಯಿಂದ ಅಚಾನಕ್ ದಾಳಿ ನಡೆಯುವಂತೆ ಮಾಡಿ ಘಾಸಿಗೊಳಿಸುವುದು, ಶಕ್ತಿ ಕುಂದಿಸಿ ಮೇಲುಗೈ ಸಾಧಿಸುವುದು ತ್ರಿಶೂಲ ವ್ಯೂಹ. ಇದೇ ವ್ಯೂಹವನ್ನು ರಚಿಸಿ ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಕಟ್ಟಿಹಾಕಬೇಕು ಎಂಬುದು ಜೆಡಿಎಸ್ ಪಾಳೆಯದ ತಂತ್ರ.

ತುಮಕೂರು ಜಿಲ್ಲಾ ರಾಜಕಾರಣದಲ್ಲಿ ತಮ್ಮದೇ ಆದ ಹಿಡಿತ ಇಟ್ಟುಕೊಂಡಿರುವ ಮಾಜಿ ಶಾಸಕ, ಹಿರಿಯ ಸಹಕಾರಿ ಧುರೀಣ ಕೆ.ಎನ್. ರಾಜಣ್ಣ ಅವರಿಗೆ ಈ ಸಲದ ವಿಧಾನಸಭಾ ಚುನಾವಣೆ ಮಾಡು ಇಲ್ಲವೇ ಮಡಿ ಹೋರಾಟ. ಈ ಸಲ ಸೋತರೆ ಅವರ ರಾಜಕೀಯ ಜೀವನವೇ ಸಮಾಪ್ತಿಯ ಹಾದಿ ಹಿಡಿಯುವುದಲ್ಲದೆ ಜಿಲ್ಲೆಯ ಮೇಲಿರುವ ಹಿಡಿತ ಸಹಜವಾಗಿಯೇ ಕ್ಷೀಣಿಸಲಿದೆ. ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಕೀಯ ಭವಿಷ್ಯವೂ ಕಠಿಣವಾಗಲಿದೆ. ಹೀಗಾಗಿ ಈ ಸಲ ಗೆಲ್ಲುವ ಪಣ ತೊಟ್ಟು ರಾಜಣ್ಣ ಗ್ರೌಂಡ್ ಲೆವೆಲ್ ಕೆಲಸಕ್ಕೆ ಇಳಿದಿದ್ದಾರೆ. ಮುನಿಸಿಕೊಂಡ ಸ್ವಪಕ್ಷೀಯರ ಮನೆಮನೆಗೆ ತೆರಳಿ ಮನವೊಲಿಸುವ ಕಾರ್ಯವನ್ನೂ ಆರಂಭಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಜೊತೆಯಲ್ಲೇ ಇದ್ದು ಕೊನೆ ಕ್ಷಣದಲ್ಲಿ `ಕೈ’ ಕೊಟ್ಟ ನಾಯಕರೊಂದಿಗೆ ಸಂಬಂಧ ಬೆಸೆದುಕೊಳ್ಳುತ್ತಿದ್ದಾರೆ. ಈ ನಡುವೆ ರಾಜಣ್ಣ ಅವರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ತ್ರಿಶೂಲ ವ್ಯೂಹ ರಚನೆಯಾಗತೊಡಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಸೋಲಿಸಿದ್ದು ನಾನೇ ಎಂದು ಕೆ.ಎನ್.ರಾಜಣ್ಣ ಸ್ವಯಂಘೋಷಿಸಿಕೊಂಡಿದ್ದರು. ಇದನ್ನು ಚುನಾವಣೆ ಫಲಿತಾಂಶದ ದಿನವೇ ಅರಿತಿದ್ದ ದಳಪತಿಗಳು ವಿಧಾನಪರಿಷತ್ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳುವ ಮಾತನಾಡಿದ್ದರು. ವಾಲ್ಮೀಕಿ ಸಮುದಾಯದವರೇ ಆದ ಕೆಎಎಸ್ ಅಧಿಕಾರಿ ಅನಿಲ್ ಕುಮಾರ್ ಎಂಬುವವರ ಸ್ವಯಂನಿವೃತ್ತಿ ಕೊಡಿಸಿ ರಾಜಣ್ಣ ಪುತ್ರ ರಾಜೇಂದ್ರ ವಿರುದ್ಧ ಕಣಕ್ಕಿಳಿಸಿದ್ದಲ್ಲದೆ ಬಹಿರಂಗವಾಗಿ ‘ದೇವೇಗೌಡರ ಸೋಲಿನ ಸೇಡು ತೀರಿಸಿಕೊಳ್ಳಿ’ಎಂದು ಕರೆ ನೀಡಿದ್ದರು. ಕುಮಾರಸ್ವಾಮಿ ಮತ್ತು ದೇವೇಗೌಡರೇ ಬಂದು ಪ್ರಚಾರ ನಡೆಸಿದರೂ ಕಾಂಗ್ರೆಸ್ ಪಕ್ಷದ ಸಂಘಟಿತ ಹೋರಾಟ ಮತ್ತು ಸಂಪನ್ಮೂಲದ ಸಮರ್ಪಕ ಬಳಕೆ ಎದುರು ಜೆಡಿಎಸ್ ಅಭ್ಯರ್ಥಿ ಸೋತಿದ್ದಷ್ಟೇ ಅಲ್ಲ, ಮೂರನೇ ಸ್ಥಾನಕ್ಕೆ ಹೋಗಿದ್ದರು. ರಾಜಣ್ಣ ಪುತ್ರನನ್ನು ಗೆಲ್ಲಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು. ಕೆಎನ್‌ಆರ್ ಕುಟುಂಬ ಆ ಗೆಲುವಿಗಾಗಿ ಇನ್ನಿಲ್ಲದೆ ತಹತಹಿಸಿತ್ತು.

ಆ ನಂತರ ಕೆ.ಎನ್. ರಾಜಣ್ಣ ದಳಪತಿಗಳ ವಿರುದ್ಧ ಮಾತಿನ ದಾಳಿ ಬಿರುಸುಗೊಳಿಸಿದ್ದರು. ಒಂದು ಹಂತದಲ್ಲಿ ದೇವೇಗೌಡರ ಬಗ್ಗೆ ಕೀಳು ಅಭಿರುಚಿಯ ಹೇಳಿಕೆ ನೀಡಿ ಕ್ಷಮೆ ಕೋರಿದ್ದರು. ಇದನ್ನೆಲ್ಲ ಸಹಿಸಿಕೊಂಡು ಸುಮ್ಮನಿದ್ದ, ಪರಿಷತ್ ಚುನಾವಣೆಯ ಸೋಲಿನಿಂದ ನಿರಾಸೆ ಅನುಭವಿಸಿದ್ದ ದಳಪತಿಗಳು ಈ ಸಲ ರಾಜಣ್ಣ ಅವರನ್ನು ಮಧುಗಿರಿಯಲ್ಲಿ ಕಟ್ಟಿಹಾಕಲು ತಂತ್ರ ಹೆಣೆದಿದ್ದಾರೆ. ಇದಕ್ಕೆ ಬಿಜೆಪಿಯ ಸಾಥ್ ಇರುವಂತೆ ಕಾಣತೊಡಗಿದೆ.
ಏನಿದು ತ್ರಿಶೂಲ ವ್ಯೂಹ?

ಯುದ್ಧದಲ್ಲಿ ಶತ್ರುವಿನ ಮೇಲೆ ಒಂದು ಕಡೆಯಿಂದ ನೇರಮುತ್ತಿಗೆ, ಮತ್ತೊಂದು ಕಡೆಯಿಂದ ಪರೋಕ್ಷ ದಾಳಿ, ಮಗದೊಂದು ಕಡೆಯಿಂದ ಅಚಾನಕ್ ದಾಳಿ ನಡೆಯುವಂತೆ ಮಾಡಿ ಘಾಸಿಗೊಳಿಸುವುದು, ಶಕ್ತಿ ಕುಂದಿಸಿ ಮೇಲುಗೈ ಸಾಧಿಸುವುದು ತ್ರಿಶೂಲ ವ್ಯೂಹ. ಇದೇ ವ್ಯೂಹವನ್ನು ರಚಿಸಿ ಮಧುಗಿರಿಯಲ್ಲಿ ಕೆ.ಎನ್.ರಾಜಣ್ಣ ಅವರನ್ನು ಕಟ್ಟಿಹಾಕಬೇಕು ಎಂಬುದು ಜೆಡಿಎಸ್ ಪಾಳೆಯದ ತಂತ್ರ. ಯಾರು ಏನೇ ಹೇಳಿದರೂ ಈ ಸಲ ಕೆ.ಎನ್. ರಾಜಣ್ಣ ಅವರ ಪರ ಅಲೆ ಸೃಷ್ಟಿಯಾಗತೊಡಗಿದ್ದು ನಿಜ. ಆದರೆ ಅವರಿಗೆ ಹಿರಿಯ ಕೆಎಎಸ್ ಅಧಿಕಾರಿ, ಈಗಲೂ ಸೇವೆಯಲ್ಲೇ ಇರುವ ಎಲ್.ಸಿ. ನಾಗರಾಜ್ ದಿಟ್ಟವಾಗಿ ಠಕ್ಕರ್ ಕೊಟ್ಟಿದ್ದರು. ಹಳ್ಳಿಹಳ್ಳಿಯಲ್ಲೂ ತಮ್ಮದೇ ಪಡೆಯನ್ನು ಹುಟ್ಟುಹಾಕಿ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆದರೆ ಜೆಡಿಎಸ್, ಹಾಲಿ ಶಾಸಕ ವೀರಭದ್ರಯ್ಯ ಅವರಿಗೆ ಮತ್ತೆ ಟಿಕೆಟ್ ಘೋಷಿಸಿದೆ. ವೀರಭದ್ರಯ್ಯ ಉತ್ತಮ ವ್ಯಕ್ತಿಯಾದರೂ ಅವರನ್ನು ಸುತ್ತುವರೆದಿರುವ ಒಂದಿಷ್ಟು ಮುಖಂಡರು ಅವರ ವರ್ಚಸ್ಸನ್ನು ಮಣ್ಣುಪಾಲು ಮಾಡಿದ್ದಾರೆ. ಮೇಲಾಗಿ ಒಮ್ಮೆ ಗೆದ್ದವರನ್ನು ಮಧುಗಿರಿ ಜನ ಮತ್ತೊಮ್ಮೆ ಗೆಲ್ಲಿಸುವುದಿಲ್ಲ. ಹೀಗಿರುವಾಗ ಎಲ್.ಸಿ. ನಾಗರಾಜ್ ಅವರಿಗೆ ಟಿಕೆಟ್ ನೀಡಿದ್ದರೆ ರಾಜಣ್ಣ ಅವರನ್ನು ಹಿಮ್ಮೆಟ್ಟಿಸಬಹುದಿತ್ತು. ಆದರೆ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಕುಂಚಿಟಿಗ ವಕ್ಕಲಿಗರು ಕೈ ಕೊಟ್ಟರೆ ನಾಗರಾಜ್ ಸೋಲಬಹುದು ಎಂಬ ಅಳುಕು ಮೂಡಿದ್ದರಿಂದ ಹೊಸ ಪ್ರಯೋಗ ಬೇಡ ಎಂದು ಜೆಡಿಎಸ್ ನಾಯಕರು ಹಿಂದಡಿ ಇಟ್ಟರು. ಈ ಎಲ್ಲಾ ಬೆಳವಣಿಗೆಗಳ ನಂತರ ಇದೀಗ ಜೆಡಿಎಸ್-ಬಿಜೆಪಿ ಜಂಟಿ ವ್ಯೂಹ ರಚನೆಯಾಗತೊಡಗಿದೆ.

ಇದರ ಪ್ರಕಾರ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಅವರು ಕಾಂಗ್ರೆಸ್‌ನ ಕೆ.ಎನ್. ರಾಜಣ್ಣ ಎದುರು ನೇರ ಸೆಣಸಾಟ ನಡೆಸಲಿದ್ದಾರೆ. ಎಲ್.ಸಿ. ನಾಗರಾಜ್ ಅವರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡು ಸ್ವಯಂನಿವೃತ್ತಿ ಕೊಟ್ಟು ಅಭ್ಯರ್ಥಿ ಮಾಡಲಿದೆ. ಅವರು ಮತ್ತೊಂದು ದಿಕ್ಕಿನಿಂದ ರಾಜಣ್ಣ ಸೋಲಿಸಲು ಆಕ್ರಮಣ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದವರೇ ಆದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಅವರ ಮೂಲಕ ಅಚಾನಕ್ ದಾಳಿ ನಡೆಸುವುದಕ್ಕೆ ಜೆಡಿಎಸ್ ಕುಮ್ಮಕ್ಕು ನೀಡುತ್ತಿದೆ. ಇದರ ಭಾಗವಾಗಿ ಈಗಾಗಲೇ ಚಂದ್ರಶೇಖರ್ ತಮ್ಮದೊಂದು ಗುಂಪು ಕಟ್ಟಿಕೊಂಡು `ನನಗೆ ಕಾಂಗ್ರೆಸ್ ಟಿಕೆಟ್ ಕೊಡಿ’ಎಂದು ತಮ್ಮ ಪಕ್ಷದ ನಾಯಕರಿಗೆ ಮೊರೆ ಇಡುತ್ತಿದ್ದಾರೆ. ಕೊಡದಿದ್ದರೆ ರಾಜಣ್ಣ ಸೋಲಿಸಲು ಒಳೇಟು ಕೊಡಲಿದ್ದಾರೆ.

ಹೀಗಾದಾಗ ಸ್ವಜಾತಿಯ ಎಲ್.ಸಿ. ನಾಗರಾಜ್, ಸ್ವಪಕ್ಷದ ಕೊಂಡವಾಡಿ ಚಂದ್ರಶೇಖರ್ ನೀಡುವ ಪೆಟ್ಟುಗಳು ರಾಜಣ್ಣ ಅವರಿಗೆ ಖಂಡಿತವಾಗಿ ಮುಳುವಾಗಲಿವೆ. ಆಗ ಜೆಡಿಎಸ್ ಕಳೆದ ಚುನಾವಣೆಗಿಂತ 10-15 ಸಾವಿರ ಕಡಿಮೆ ಮತ ಪಡೆದರೂ ಗೆಲುವಿನ ದಡ ಮುಟ್ಟಲಿದೆ ಎಂಬುದು ಜೆಡಿಎಸ್ ನಾಯಕರ ಪ್ಲಾನ್. ಎಲ್.ಸಿ. ನಾಗರಾಜ್ ಬಿಜೆಪಿಗೆ ಹೋಗಿ ಟಿಕೆಟ್ ತೆಗೆದುಕೊಳ್ಳಲಿ ಎಂಬುದು ಕುಮಾರಸ್ವಾಮಿಯವರ ಹಲವು ತಿಂಗಳ ಬಯಕೆ. ಆಗ ಜೆಡಿಎಸ್ ಗೆಲ್ಲಲಿದೆ. ಒಂದು ವೇಳೆ ಎಲ್.ಸಿ.ನಾಗರಾಜ್ ತಮ್ಮೆಲ್ಲಾ `ಶಕ್ತಿ’ಬಳಸಿ ಬಿಜೆಪಿಯಿಂದ ಗೆದ್ದರೂ ನಮ್ಮ ಶತ್ರುವನ್ನು ಸೋಲಿಸಿದಂತೆಯೇ ಆಗುತ್ತದೆ ಎಂಬುದು ಅವರ ಕಾರ್ಯತಂತ್ರ.
ರಾಜಕೀಯದಲ್ಲಿ ಎಲ್ಲಾ ತಂತ್ರಗಳು ಫಲಿಸುತ್ತವೆ ಎಂದು ಹೇಳಲು ನಿಶ್ಚಿತವಾಗಿ ಬರುವುದಿಲ್ಲ. ಹೀಗಾಗಿ ಚುನಾವಣಾ ಅಖಾಡ ಸಂಪೂರ್ಣ ಸಿದ್ಧವಾಗುವವರೆಗೂ ಗಾಳಿ ದಿಕ್ಕು ಗುರುತಿಸುವುದು ಕಷ್ಟಕರ. ಆದರೆ ಕೆ.ಎನ್. ರಾಜಣ್ಣ ಅವರನ್ನು ಶತಾಯಗತಾಯ ಸೋಲಿಸಲು ಹೊಸ ತಂತ್ರ ನಡೆದಿರುವುದು ಮಾತ್ರ ಸತ್ಯ.