-ಅವನಿ ರಾವ್
ಕಲ್ಪನೆಗೂ ಮೀರಿದ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿದ ಹೆಗ್ಗಳಿಕೆ ಜೇಮ್ಸ್ ಬಾಂಡ್ ಚಿತ್ರಗಳದ್ದು. ಇವತ್ತಿಗೂ ಬಾಂಡ್ ಸರಣಿ ಚಿತ್ರಗಳಿಗೆ ಕುತೂಹಲದಿಂದ ಕಾಯುವ ಚಿತ್ರಪ್ರೇಮಿಗಳು ಜಗತ್ತಿನಾದ್ಯಂತ ಇದ್ದಾರೆ. ಜನರಲ್ಲಿ ವಿಪರೀತ ಕ್ರೇಝ್ ಹುಟ್ಟಿಸಿದ ಈ “ಜೇಮ್ಸ್ ಬಾಂಡ್” ಪಾತ್ರ ಮತ್ತು ಚಿತ್ರದ ಇತಿಹಾಸವನ್ನೊಮ್ಮೆ ಅವಲೋಕಿಸೋಣ.

ಸುಂಟರಗಾಳಿಯಂತೆ ರಭಸದಿಂದ ಓಡುವ ದುಬಾರಿ ಕಾರು, ಆ ಕಾರೊಳಗೆ ತುಂಬಿಕೊಂಡಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಚೆಂದದ ಹುಡುಗಿಯರು, ಹೀರೋ ಕೈಯಲ್ಲಿ ಮಾರ್ಟಿನಿ ಡ್ರಿಂಕು, ಕಣ್ಣಲ್ಲೇ ಕೊಲ್ಲುವ ಆತನ ಸ್ಟೈಲಿಶ್ ಲುಕ್, ಆಕರ್ಷಣೀಯ ಕೋಟ್, ಕೈಯಲ್ಲಿ ಸಿಗಾರ್, ಪರ್ವತ, ಹಿಮ ಯಾವುದನ್ನೂ ಲೆಕ್ಕಿಸದೆ ಎಲ್ಲೆಂದರಲ್ಲಿ ಹಾರುವ ಕ್ಷಿಪಣಿಗಳು, ಶೂನಲ್ಲಿ ಗನ್ ಬಚ್ಚಿಟ್ಟುಕೊಂಡಿರುವ, ಉಂಗುರದಲ್ಲೇ ಡೈಮಂಡ್ ಕಟ್ ಮಾಡುವ ಹೀರೋ, ಅಪ್ರತಿಮವಾದ, ಯಾರೂ ಊಹಿಸಲಾಗದ ಆತನ ಸಾಹಸ…ಏನುಂಟು ಏನಿಲ್ಲ? ಇಂಥದೊಂದು ಸಿನಿಮಾ ಯಾವುದದು ಎಂದರೆ ಸಿನಿಮಾ ಪ್ರಿಯರು ಥಟ್ಟನೆ ಉತ್ತರಿಸುತ್ತಾರೆ: ಅದು ಜೇಮ್ಸ್ ಬಾಂಡ್!
ಹೌದು, ಬಾಂಡ್ ಸಿನಿಮಾ ಕಳೆದ ಐದು ದಶಕಗಳಿಂದ ಸಾಹಸಮಯ ಚಿತ್ರರಂಗವನ್ನು ಆಳುತ್ತಲೇ ಇದೆ. ಸಾಹಸ ಚಿತ್ರ ಎಂದಾಗ ಇವತ್ತಿಗೂ ಜನರು ಮೊದಲು ಹೇಳುವ ಹೆಸರೇ ಜೇಮ್ಸ್ ಬಾಂಡ್. 1962ರಿಂದ ತೆರೆಗೆ ಬಂದ ಬಾಂಡ್ ಸಿನಿಮಾಗಳು ಇವತ್ತಿಗೂ ಅದೇ ಕ್ರೇಝನ್ನು ಜನರಲ್ಲಿ ಉಳಿಸಿವೆ. ಬಾಂಡ್ ಸರಣಿ ಚಿತ್ರಗಳಲ್ಲಿ ಆತನ ಸಾಹಸ, ಆಕರ್ಷಣೀಯ ದೇಹ, ಗಡುಸಾಗಿದ್ದರೂ ಹೃದಯಕ್ಕೆ ಕಚಗುಳಿಯಿಡುವ ದನಿ, ನೋಟ ಎಲ್ಲವೂ ವೀಕ್ಷಕರಲ್ಲಿ ರೋಮಾಂಚನ ಮೂಡಿಸಿದ್ದಂತೂ ನಿಜ.
ಈಗ ಮತ್ತೊಮ್ಮೆ ಬಾಂಡ್ ಚಿತ್ರದ ಬಗ್ಗೆ ಮಾತುಗಳು ಶುರುವಾಗಿವೆ. 2021ರಲ್ಲಿ ಬಾಂಡ್ ಸರಣಿಯ “ನೋ ಟೈಮ್ ಟು ಡೈ’ ಬಿಡುಗಡೆಯಾದ ಬಳಿಕ ಮುಂದಿನ ಬಾಂಡ್ ಚಿತ್ರಕ್ಕೆ ನಾಯಕನಾರು? ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಸಿನಿಪ್ರಿಯರ ಮಧ್ಯೆ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. “ನೋ ಟೈಮ್ ಡೈ’ ಚಿತ್ರದಲ್ಲಿ ಡೇನಿಯಲ್ ಕ್ರೇಗ್ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಂಡಿದ್ದು, ಇದು ಆತನ ಐದನೇ ಮತ್ತು ಕೊನೆಯ ಚಿತ್ರವಾಗಿದೆ. ಇದೀಗ ಬಾಂಡ್ ಸರಣಿಯ ನಿರ್ಮಾಣ ಸಂಸ್ಥೆ “ಇಯಾನ್ ಪ್ರೊಡಕ್ಷನ್” ಹೊಸ ನಾಯಕನ ಹುಡುಕಾಟದಲ್ಲಿದೆ. ಹಾಗಾದರೆ ಈ ಜೇಮ್ಸ್ ಬಾಂಡ್ ಚಿತ್ರಗಳ ಬಗ್ಗೆ ಏಕೆ ಅಷ್ಟೊಂದು ಕುತೂಹಲ? ಬ್ರಿಟಿಷ್ ಸಿನಿಮಾವಾದರೂ ಜನರು ಏಕೆ ಬಾಂಡ್ ಚಿತ್ರಗಳಿಗಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ? ಈ ಹಿನ್ನೆಲೆಯಲ್ಲಿ ಬಾಂಡ್ ಚಿತ್ರಗಳ ಬಗ್ಗೆ ಒಂದು ಸುತ್ತು ಹಾಕೋಣ.

ಚಿತ್ರಕತೆ ಇಷ್ಟೆನೇ!
ಅಂದಹಾಗೇ ಈವರೆಗೆ 25 ಬಾಂಡ್ ಸರಣಿ ಚಿತ್ರಗಳು ತೆರೆಕಂಡಿವೆ. ಈ ಎಲ್ಲಾ ಸಿನಿಮಾಗಳಲ್ಲೂ ನಾಯಕ ಜೇಮ್ಸ್ ಬಾಂಡ್. 007 ಕೋಡ್‌ನಿಂದ ಗುರುತಿಸಿಕೊಳ್ಳುವ ಎಂ16 ಗುಪ್ತಚರ ಸಂಸ್ಥೆಯ ಏಜೆಂಟ್ ಆತ. ಓರ್ವ ಗುಪ್ತಚರ ಅಧಿಕಾರಿಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ನಿರ್ವಹಿಸುವುದು ಜೇಮ್ಸ್ ಬಾಂಡ್ ಕೆಲಸ. ಈತನಿಗೆ “ಎಂ” ಮತ್ತು “ಕ್ಯು” ಎಂಬ ಮೇಲಾಧಿಕಾರಿಗಳಿರುತ್ತಾರೆ. ಅವರು ನೀಡಿರುವ ಆದೇಶವನ್ನು ಪಾಲಿಸುವುದು ಆತನ ಕೆಲಸ. ಈತ ಇಂಗ್ಲೆಂಡ್ ರಾಣಿಗೆ ವಿಧೇಯನಾಗಿರುತ್ತಾನೆ. ದೇಶ ಸಂಕಷ್ಟದಲ್ಲಿ ಸಿಲುಕಿದರೆ ತನ್ನ ಸಾಹಸಗಳಿಂದ ದೇಶವನ್ನು ಸಂಕಷ್ಟದಿಂದ ಪಾರುಮಾಡುತ್ತಾನೆ-ನೀವು ಯಾವ ಬಾಂಡ್ ಸರಣಿ ನೋಡಿದರೂ ಅಲ್ಲಿರುವ ಕತೆ ಇಷ್ಟೆನೇ. ಆತ ಯಾವ ತರ ಪಾರು ಮಾಡುತ್ತಾನೆ? ಯಾವ ರೀತಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾನೆ? ಅವನ ಸಾಹಸ ಹೇಗಿರುತ್ತದೆ? ಎಲ್ಲವೂ ನಿಜವೇ ಎಂಬಂತೆ ತೋರಿಸುವ ಕಾಲ್ಪನಿಕ ದೃಶ್ಯಗಳು! ಕಲ್ಪನೆಗೂ ಮೀರಿದ ಈ ಸಾಹಸಗಳು ಜನರನ್ನು ಮೋಡಿ ಮಾಡುತ್ತವೆ. ಇಲ್ಲಿ ಜೇಮ್ಸ್ ಬಾಂಡ್‌ನಿಂದ ಹಿಡಿದು ಎಲ್ಲವೂ ಕಾಲ್ಪನಿಕ ಪಾತ್ರಗಳೇ, ಆದರೆ, ಇಂಥದ್ದೊಂದು ಕಾಲ್ಪನಿಕ ಪಾತ್ರ ಸೃಷ್ಟಿಯಾಗಿದ್ದು ಹೇಗೆ? ಅದರ ಹಿಂದೆಯೂ ಒಂದು ಚೆಂದದ ಕತೆಯಿದೆ.

ಜೇಮ್ಸ್ ಬಾಂಡ್ ಸೃಷ್ಟಿಕರ್ತ
ಇದನ್ನು ಸೃಷ್ಟಿ ಮಾಡಿದವರು ಬ್ರಿಟಿಷ್ ಲೇಖಕ, ಪತ್ರಕರ್ತ ಮತ್ತು ನೌಕಾದಳ ಗುಪ್ತಚರ ಅಧಿಕಾರಿಯಾಗಿದ್ದ ಅಯಾನ್ ಫ್ಲೆಮಿಂಗ್. ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟನ್‌ನ ನೌಕಾದಳ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಯಾನ್ ಫ್ಲೆಮಿಂಗ್ “ಆಪರೇಷನ್ ಗೋಲ್ಡ್ ಐ” ಯೋಜನೆಯಲ್ಲಿಯೂ ಮುಂದಾಳತ್ವ ವಹಿಸಿದ್ದವರು. ಅವರು ತಮ್ಮ ಅಧಿಕಾರಿವಧಿಯ ಅನುಭವಗಳನ್ನು ಪತ್ತೆದಾರಿ ಕಾದಂಬರಿಯ ರೂಪಕ್ಕಿಳಿಸಿದರು. ಗುಪ್ತಚರ ವಿಭಾಗದಲ್ಲಿನ ಅವರ ಕಾರ್ಯವೈಖರಿಗಳು ಆ ಕಾದಂಬರಿಗಳಿಗೆ ವಸ್ತುಗಳಾದವು. ವಿಶೇಷವೆಂದರೆ, 1952ರ ಸುಮಾರಿನಲ್ಲಿ ಇವರ ಕಾದಂಬರಿಗಳು ಸಿಕ್ಕಾಪಟ್ಟೆ ಮಾರಾಟವಾಗುತ್ತಿದ್ದವು. ಒಂದು ಅಂಕಿ-ಅಂಶಗಳ ಪ್ರಕಾರ, ಫ್ಲೆಮಿಂಗ್ ಅವರ 100 ಮಿಲಿಯನ್ ಪುಸ್ತಕಗಳು ಮಾರಾಟವಾಗಿ ದಾಖಲೆಯಾಗಿದ್ದವು ಎಂದು ಹೇಳಲಾಗುತ್ತದೆ. ಫ್ಲೆಮಿಂಗ್ 12 ಕಾದಂಬರಿಗಳನ್ನು ಮತ್ತು ಎರಡು ಸಣ್ಣ ಕತೆಗಳನ್ನು ಬರೆದಿದ್ದರು.

1954ರಲ್ಲಿಯೇ ಇವರು ಬರೆದ “ಕೆಸಿನೋ ರಾಯಲ್” ದೂರದರ್ಶನದಲ್ಲಿ ಸರಣಿಯಾಗಿ ಪ್ರಸಾರವಾಗಿತ್ತು. ಇದರಲ್ಲಿ ಅಮೆರಿಕನ್ ನಟ ಬ್ಯಾರಿ ನೆಲ್ಸನ್ ಜೇಮ್ಸ್ ಬಾಂಡ್ ಆಗಿ ಕಾಣಿಸಿಕೊಂಡಿದ್ದರು. ಇದನ್ನು ನೋಡಿ ಮೆಚ್ಚಿದ ಅಲ್ಬಟ್ ಆರ್ ಬ್ರಕೋಲಿ ಮತ್ತು ಹ್ಯಾರಿ ಸ್ಟಾಟ್ಸ್ಮ್ಯಾನ್ ಎಂಬುವವರು 1961ರಲ್ಲಿ ಫ್ಲೆಮಿಂಗ್ ಕಾದಂಬರಿಗಳನ್ನು ಸಿನಿಮಾವನ್ನಾಗಿ ಮಾಡುವ ಹಕ್ಕನ್ನು ಪಡೆದುಕೊಂಡರು. ಅವರೇ ಇಯಾನ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ 1962ರಲ್ಲಿ ಮೊತ್ತಮೊದಲ ಬಾರಿಗೆ “ಡಾಕ್ಟರ್ ನೊ” ಚಿತ್ರವನ್ನು ತೆರೆಮೇಲೆ ತಂದರು. ಶಾನ್ ಕಾನೋರಿ ಮೊತ್ತಮೊದಲ ಬಾಂಡ್ ಚಿತ್ರದ ನಾಯಕ ನಟನಾಗಿ ಕಾಣಿಸಿಕೊಂಡರು.
ಮೊದಲ ಬಾಂಡ್ ಸರಣಿ ಚಿತ್ರ

ಎಂ 16 ಸ್ಟೇಷನ್ ಚೀಫ್ ಜಾನ್ ಸ್ಟ್ರಾಂಗ್ ವೇ ಅವರ ಕೊಲೆಯೊಂದಿಗೆ “ಡಾಕ್ಟರ್ ನೊ” ಕಥೆ ಆರಂಭವಾಗುತ್ತದೆ. ಈ ಕೊಲೆ ವಿಷಯ ಎಂ16 ಮೇಲಾಧಿಕಾರಿಗೆ ತಿಳಿಯುತ್ತಿದ್ದಂತೆ ಏಜೆಂಟ್ ಜೇಮ್ಸ್ ಬಾಂಡ್‌ಗೆ ತಿಳಿಸಲಾಗುತ್ತದೆ. 007 ಕೋಡ್ ಹೆಸರಿನೊಂದಿಗೆ ಜೇಮ್ಸ್ ಕೊಲೆ ತನಿಖೆ ಶುರುಮಾಡುತ್ತಾನೆ. ಈ ಚಿತ್ರದಲ್ಲಿ ಶಾನ್ ಕಾನೋರಿ ಕೈಯಲ್ಲಿ ಸಿಗರೇಟು ಹಿಡಿದುಕೊಂಡು “ಬಾಂಡ್ ಜೇಮ್ಸ್ ಬಾಂಡ್” ಎಂದು ಡೈಲಾಗ್ ಡೆಲಿವರಿ ಮಾಡುವ ಆ ಆಕರ್ಷಣೀಯ ಶೈಲಿಗೆ ಜನ ಹುಚ್ಚೆದ್ದುಹೋಗಿದ್ದರು. ಒಂದು ಕಡೆಯಂತೂ ಅದೆಂಥ ಸಾಹಸ ಮಾಡುತ್ತಾನಂದ್ರೆ ಬಂಧನದಲ್ಲಿದ್ದ ಜೇಮ್ಸ್ ಗಾಳಿಯಷ್ಟೇ ಹೋಗಲು ಜಾಗವಿರುವ ಸಣ್ಣ ರಂಧ್ರದ ಮೂಲಕ ತಪ್ಪಿಸಿಕೊಂಡು ಬಂದುಬಿಡುತ್ತಾನೆ! ಅದರಲ್ಲಿ ನೀಳಕಾಯದ ಕಾನೋರಿಯನ್ನು ಸ್ಯೂಟ್-ಬೂಟ್‌ನಲ್ಲಿನೋಡಿದ ಜನರು ಹಗಲಿರುಳು ಆತನನ್ನೇ ಕನವರಿಸಿದ್ದರು. ಆದರೆ, ನಿಜ ಜೀವನದಲ್ಲಿ ಶಾನ್ ಕಾನೋರಿ ಅಲ್ಲಿಯವರೆಗೆ ಸ್ಯೂಟ್ ಧರಿಸಿದವರೇ ಅಲ್ಲ! ಈ ಚಿತ್ರವನ್ನು ನಿರ್ದೇಶಿದ್ದ ಟೆರೆಸ್ ಯಂಗ್ ಕಾನೋರಿಗೆ ಹಗಲು-ರಾತ್ರಿ ಸ್ಯೂಟ್ ಹಾಕಿಸಿ ಅಭ್ಯಾಸ ಮಾಡಿಸಿದ್ದರಂತೆ. ಎಷ್ಟೋ ಸಲ ಕಾನೋರಿ ಸ್ಯೂಟ್‌ನಲ್ಲೇ ನಿದ್ದೆಹೋಗಿದ್ದರಂತೆ. ಅಷ್ಟೇ ಅಲ್ಲ, ಈ ಸ್ಯೂಟ್ ಹೊಲಿಸಲು ಆಂಥೋನಿ ಸಿಂಕ್ಲೇರ್ ಎನ್ನುವ ದರ್ಜಿಯನ್ನು (ನಂತರ ಹಲವು ಬಾಂಡ್ ಚಿತ್ರಗಳಿಗೆ ಆಂಥೋನಿ ಸ್ಯೂಟ್ ಹೊಲಿದಿದ್ದರು) ಕೂಡ ಗೊತ್ತು ಮಾಡಲಾಗಿತ್ತು. ಇದನ್ನು ನೋಡಿದ ಚಿತ್ರಪ್ರೇಮಿಗಳಲ್ಲಿ “ಜೇಮ್ಸ್ ಬಾಂಡ್” ಅಂದ್ರೆ ಹೀಗೆಯೇ ಇರಬೇಕು, ಕಾನೋರಿಗಿಂತ ಹ್ಯಾಂಡ್‌ಸಮ್ ಆಗಿರುವವ ಇನ್ನೊಬ್ಬನಿರಲಾರ ಎಂಬ ಗಟ್ಟಿ ನಂಬಿಕೆ ನೆಲೆಯಾಗಿತ್ತು.
ಕಾನೋರಿ ಸ್ಟೈಲ್
1962ರಲ್ಲಿ ತೆರೆಕಂಡ “ಡಾ. ನೊ” ದಿಂದ ಶುರುವಾಗಿ 1983ರ ತನಕ ಶಾನ್ ಕಾನೋರಿ ಒಟ್ಟು ಏಳು ಬಾಂಡ್ ಚಿತ್ರಗಳಲ್ಲಿ ನಟಿಸಿದ್ದಾರೆ. “ಡಾಕ್ಟರ್ ನೊ” ಸೇರಿದಂತೆ, ಫ್ರಮ್ ರಷ್ಯಾ ವಿಥ್ ಲವ್, ಗೋಲ್ಡ್ ಫಿಂಗರ್, ಥಂಡರ್‌ಬಾಲ್, ಯೂ ಓನ್ಲಿ ಲೀವ್ ಟ್ವೈಸ್, ಡೈಮಂಡ್ಸ್ ಆರ್ ಫಾರೆವರ್ ಮತ್ತು ನೆವರ್ ಸೆ ನೆವರ್ ಅಗೈನ್. ಕಾನೋರಿ ವೀಕ್ಷಕರಿಗೆ ಎಷ್ಟು ಇಷ್ಟವಾಗಿಬಿಟ್ಟರಂದ್ರೆ ಆ ಕಾಲದ ಯುವಕರಂತೂ ಶಾನ್ ಕಾನೋರಿ ಧರಿಸಿದ ಶೈಲಿಯ ಬಟ್ಟೆಗಳನ್ನು ಖರೀದಿಸಲು ಶುರುಮಾಡಿದ್ದರು. “ಗೋಲ್ಡ್ ಫಿಂಗರ್” ಚಿತ್ರದಲ್ಲಿ ಕಾನೋರಿ ಕೈಯಲ್ಲಿದ್ದ ರೊಲೆಕ್ಸ್ 6538 ವಾಚಂತೂ ಸಿನಿಮಾ ತೆರೆಕಂಡ ಬಳಿಕ 65,000 ಡಾಲರ್‌ನಿಂದ ಅದರ ಬೆಲೆ 544,939 ಡಾಲರ್‌ಗೆ ಏರಿತ್ತು! ಒಂದು ಸಿನಿಮಾ ಜನರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆ.

ಈ ನಡುವೆ ಆರನೇ ಬಾಂಡ್ ಸಿನಿಮಾದಲ್ಲಿ ಕಾನೋರಿ ಬದಲು ಜಾರ್ಜ್ ಲೆಝೆಂಬಿ ಎಂಬ ಆಸ್ಟ್ರೇಲಿಯನ್‌ನಟನನ್ನು ಜೇಮ್ಸ್ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ, ಐದು ಸಿನಿಮಾಗಳಲ್ಲಿ ಶಾನ್ ಕನೋರಿಯನ್ನು ನೋಡಿ ಮೆಚ್ಚಿಕೊಂಡಿದ್ದ ಬ್ರಿಟನ್ ಜನರು ಕಾನೋರಿ ಬದಲಾವಣೆಯನ್ನು ಒಪ್ಪಿಕೊಳ್ಳಲಿಲ್ಲ. ಲೆಝೆಂಭಿ ಆಸ್ಟ್ರೇಲಿಯನ್ ನಟನಾಗಿದ್ದರಿಂದ ಅವರ ಇಂಗ್ಲಿಷ್ ಭಾಷಾ ಉಚ್ಛಾರಣೆ ಬ್ರಿಟನ್ ಜನರ ಉಚ್ಛಾರಣೆಯಂತಿಲ್ಲ ಎನ್ನುವ ಮಾತುಗಳು ಕೇಳಿಬಂದವು. ಅದೇ ಕಾರಣಕ್ಕೇನೋ ಏಳನೇ ಬಾಂಡ್ ಚಿತ್ರ “ಡೈಮಂಡ್ಸ್ ಆರ್ ಫಾರೆವರ್” ನಲ್ಲಿ ಮತ್ತೆ ಕಾನೋರಿಯನ್ನು ತರಲಾಯಿತು. ಇದು ಕಾನೋರಿ ಅವರ ಕೊನೆಯ ಚಿತ್ರವಾಯಿತು.
ಮರ್ರೆ ಜಮಾನ
ಶಾನ್ ಕಾನೋರಿ ನಂತರದ ಜಮಾನ ರೋಜರ್ ಮರ್ರೆ ಅವರದ್ದು. ಶಾನ್ ಕಾನೋರಿಗೆ ಹೋಲಿಸಿದರೆ ರೋಜರ್ ಮರ್ರೆ ಅಭಿನಯವನ್ನು ಅಷ್ಟು ಬೇಗ ಜನರು ಒಪ್ಪಿಕೊಳ್ಳಲಿಲ್ಲ. ಕಾನೋರಿ ತುಂಬಾ ಗಂಭೀರ ನಟನಾಗಿದ್ದರೆ, ಮರ್ರೆ ಅವರನ್ನು ಕೆಲವರು “ಕಾಮಿಡಿ ಪೀಸ್” ಎಂದೂ ಟೀಕಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅವರನ್ನೂ ಜನರು ಒಪ್ಪಿಕೊಂಡರು. ಕಾನೋರಿಯಂತೆ ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ಛಾಪು ಮೂಡಿಸಿದ್ದ ಇನ್ನೊಬ್ಬ ನಟ ಮರ್ರೆ. ಲೈವ್ ಆಂಡ್ ಲೆಟ್ ಡೈ, ದಿ ಮ್ಯಾನ್ ವಿಥ್ ಗೋಲ್ಡನ್ ಗನ್, ದಿ ಸ್ಪೈ ಹೂ ಲವ್ಡ್ ಮಿ, ಮೂನ್ ರೇಕರ್, ಫಾರ್ ಯುವರ್ ಐಸ್ ಓನ್ಲಿ, ಅಕ್ಟೋಪಸಿ, ಎ ವೀವು ಟು ಟ ಕಿಲ್ ಸೇರಿದಂತೆ ಏಳು ಚಿತ್ರಗಳಲ್ಲಿ ರೋಜರ್ ಮರ್ರೆ ನಟಿಸಿದ್ದಾರೆ. ಕಲ್ಪನೆಗೂ ಮೀರಿದ ಕಾಲ್ಪನಿಕ ಸನ್ನಿವೇಶವನ್ನು ಸೃಷ್ಟಿಸುವುದೇ ಬಾಂಡ್ ಸರಣಿ ಚಿತ್ರಗಳ ವಿಶೇಷ.

ಮರ್ರೆ ಅಭಿನಯದ “ಮೂನ್ ರೇಕರ್”ನಲ್ಲಿ ಬಾಹ್ಯಾಕಾಶದಲ್ಲಿ ಪ್ರಣಯ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು! ವೈಜ್ಞಾನಿಕವಾಗಿ ಅಸಾಧ್ಯವಾದ ಇಂಥ ದೃಶ್ಯವೊಂದು ಆ ಕಾಲದಲ್ಲಿ ಕ್ರೇಝ್ ಹುಟ್ಟಿಸಿತು. ಮರ್ರೆ ಅಭಿನಯಿಸಿದ “ದಿ ಸ್ಪೈ ಹೂ ಲವ್ಡ್ ಮಿ” ಜನರನ್ನು ಗೆಲ್ಲಲಿಲ್ಲ, ಆದರೆ ವಿಮರ್ಶಕರು ಅದನ್ನು ಬಹುಮೆಚ್ಚಿಕೊಂಡಿದ್ದರು. ಸ್ಪೈ ನಂತರ ಥಿಮೋಟಿ ಡಲ್ಟನ್ ಎರಡು ಬಾಂಡ್ ಚಿತ್ರಗಳಲ್ಲಿ (ದಿ ಲಿವಿಂಗ್ ಡೈ ಲೈಟ್ಸ್ ಮತ್ತು ಲೈಸೆನ್ಸ್ ಟು ಕಿಲ್ ) ಅಭಿನಯಿಸಿದ್ದರು. ಶಾನ್ ಕಾನೋರಿ ಮತ್ತು ಮರ್ರೆ ಬಾಂಡ್ ಸಿನಿಮಾಗಳಲ್ಲಿ ಸೃಷ್ಟಿಸಿದ “ಇಮೇಜ್” ಅನ್ನು ಡಲ್ಟನ್ ಸೃಷ್ಟಿಸಲಿಲ್ಲ ಎನ್ನುವ ಕಾರಣಕ್ಕೆ ಎರಡೇ ಚಿತ್ರಕ್ಕೆ ಡಲ್ಟನ್ ಅವರನ್ನು ಕೈಬಿಡಲಾಯಿತು.
ಕೆಸಿನೋ ರಾಯಲ್ ಮತ್ತು ಡೇನಿಯಲ್ ಗ್ರೇಗ್
ನಂತರ ಬಂದ ಪಿಯರ್ಸ್ ಬ್ರಾನ್ಸನ್ ನಾಲ್ಕು ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ರಾನ್ಸನ್ ಚಾರ್ಮ್ ಕೂಡ ಜನರಿಗೆ ಇಷ್ಟವಾಗಿತ್ತು. ನಂತರ ಬಂದಿರುವುದು ಡೇನಿಯಲ್ ಗ್ರೇಗ್. “ಕೆಸಿನೋ ರಾಯಲ್” ಮೂಲಕ ಬಾಂಡ್ ಚಿತ್ರಗಳಿಗೆ ಕಾಲಿಟ್ಟ ಡೇನಿಯಲ್ ಗ್ರೇಗ್, ಶಾನ್ ಕಾನೋರಿಯಂತೆ ಬಹುಬೇಗನೆ ವೀಕ್ಷಕರನ್ನು ಸೆಳೆದರು. ಇಂದಿನ ಯುವ ಜಮಾನದಲ್ಲಿ ಒಂದು ರೀತಿಯ “ಸೆನ್ಷೇಷನ್” ಹುಟ್ಟಿಸಿದವರಂದ್ರೆ ಅದು ಡೇನಿಯಲ್ ಗ್ರೇಗ್. ಕೆಸಿನೋ ರಾಯಲ್ ಚಿತ್ರದಲ್ಲಿ ಡೇನಿಯಲ್ ಗ್ರೇಗ್ ಬೀಚ್‌ನಿಂದ ಎದ್ದು ಬರುವ ದೃಶ್ಯವಂತೂ ಇವತ್ತಿನ ತನಕವೂ ಜನರು ಮರೆಯುವಂಥದ್ದಲ್ಲ. ಆತನ ಆಜಾನುಬಾಹು ದೇಹ, ಖಡಕ್ ಮಾತು ಎಲ್ಲವೂ ಜನಮೆಚ್ಚುಗೆ ಪಡೆದವು.

ಪ್ರತಿ ಚಿತ್ರಕ್ಕೂ ಸಾಮ್ಯತೆ
ಈವರೆಗೆ ಫ್ಲೆಮಿಂಗ್ ಹೆಣೆದ ಕಾಲ್ಪನಿಕ ಪಾತ್ರದ ಮೂಲಕ 25 ಬಾಂಡ್ ಸರಣಿ ಚಿತ್ರಗಳು ಬಂದಿವೆ. ಎಲ್ಲಾ ಚಿತ್ರಗಳಲ್ಲೂ ಸಾಮ್ಯತೆ ಇದೆ, ಆದರೆ “ಸ್ಕ್ರೀನ್ ಪ್ಲೇ” ಮೂಲಕ ನೋಡುಗರಿಗೆ ಹೊಸ ಚಿತ್ರವೆನ್ನುವಂತೆ ಕಟ್ಟಿಕೊಡುವುದು ಬಾಂಡ್ ಚಿತ್ರತಂಡದ ಹೆಗ್ಗಳಿಕೆ. ಈ ಚಿತ್ರಗಳ ಸಂಗೀತದಲ್ಲಿಯೂ ಯಾವುದೇ ಬದಲಾವಣೆಗಳಿಲ್ಲ, ಆರಂಭಿಕ ಚಿತ್ರಗಳ ಥೀಮ್ ಮ್ಯೂಸಿಕ್ ಹೇಗಿತ್ತೋ ಈಗಲೂ ಹಾಗೇ ಇದೆ. ಈ ಬಾಂಡ್ ಚಿತ್ರಗಳಲ್ಲಿನ ಇನ್ನೊಂದು ವಿಶೇಷ ಎಂದರೆ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಜೇಮ್ಸ್ ಬಾಂಡ್ ಇದ್ದಕಿದ್ದಂತೆ ಎಲ್ಲೋ ರಜಾ ದಿನಗಳನ್ನು ಕಳೆಯಲು ಅಥವಾ ಯಾವುದೋ ಹುಡುಗಿಯೊಂದಿಗೆ ಮಜಾ ಮಾಡಲು ಹೋಗಿರುತ್ತಾನೆ. ತಕ್ಷಣ ಆತನಿಗೆ ಕರೆ ಬರುತ್ತದೆ. ಅತ್ತ ಕಡೆಯಿಂದ ಆತನ ಮೇಲಾಧಿಕಾರಿಗಳು “ವೇರ್ ಆರ್ ಯೂ, ಪ್ಲೀಸ್ ಕಮ್” ಎಂದಾಗ ತಕ್ಷಣ ಜೇಮ್ಸ್ ಬಾಂಡ್ ಕರ್ತವ್ಯಕ್ಕೆ ಅಣಿಯಾಗುತ್ತಾನೆ! ಆತನಿಗೆ ಇಂಥದ್ದೊಂದು ಆದೇಶ ನೀಡುವ ಮೇಲಾಧಿಕಾರಿ ಯಾವಾಗಲೂ “ಎಂ” ಹೆಸರಿನಿಂದ ಗುರುತಿಸಲ್ಪಡುತ್ತಾರೆ. 1995 ರಿಂದ 2012ರ ತನಕ ಜೂಡಿ ಡೆಂಚ್ (ಅತೀ ಹೆಚ್ಚು ಬಾರಿ) ಈ ಎಂ ಪಾತ್ರದಲ್ಲಿ ನಟಸಿದ್ದಾರೆ.

ಟ್ರೆಂಡ್ ಸೃಷ್ಟಿಸಿದ ಬಾಂಡ್
ಜೇಮ್ಸ್ ಬಾಂಡ್ ಸರಣಿ ಚಿತ್ರಗಳು ಜಾಗತಿಕವಾಗಿ ಮನ್ನಣೆ ಪಡೆಯುತ್ತಿದ್ದಂತೆ ಅದೇ ರೀತಿಯ ಸಾಹಸಮಯ ಹಾಲಿವುಡ್ ಚಿತ್ರಗಳು ತೆರೆಮೇಲೆ ಬರಲು ಶುರುವಾಯಿತು. 1996ರಿಂದ ಟ್ರಾಮ್ ಕ್ರೂಸ್ “ಮಿಶನ್ ಇಂಪಾಸಿಬಲ್” ಸರಣಿ ಚಿತ್ರಗಳನ್ನು ತೆರೆಮೇಲೆ ತಂದರು. ಈ ಸರಣಿ ಕೂಡ ಯಶಸ್ವಿಯಾಯಿತು. ಬಾರ್ನ್ ಫ್ರಾಂಚೈಸಿ ಕೂಡ ಇದೇ ತರಹದ ಸಾಹಸಮಯ ಸರಣಿ ಚಿತ್ರಗಳನ್ನು ಬಿಡುಗಡೆಗೊಳಿಸಿತು. ಲೇಖಕ ಟಾಮ್ ಕ್ಲಾನ್ಸಿ ಪರಿಚಯಿಸಿದ ಕಾಲ್ಪನಿಕ ಪಾತ್ರ “ಜಾಕ್ ರಯಾನ್” ಸರಣಿ ಚಿತ್ರಗಳಾಗಿ ತೆರೆಯ ಮೇಲೆ ಬಂದವು. ಆದರೆ, ಇವತ್ತಿಗೂ ಯಾವುದೇ ಸಾಹಸ ಚಿತ್ರಗಳು ಬಂದರೂ ಜೇಮ್ಸ್ ಬಾಂಡ್ ಚಿತ್ರಗಳಂದ್ರೆ ಜನರಿಗೆ ವಿಪರೀತ ಕ್ರೇಝ್. ಆ ಕ್ರೇಝ್ 1962ರಿಂದ ಇವತ್ತಿನ ತನಕವೂ ಜನಮಾನಸವಾಗಿಯೇ ಉಳಿದಿದೆ. ಆತನ ಅದ್ಧೂರಿ ಕಾರು, ಸಿಗರೇಟು, ಕೋಟು, ಖಡಕ್ ಮಾತು, ಸ್ಟೈಲು, ಸಾಹಸ ಎಲ್ಲವನ್ನೂ ತೆರೆಮೇಲೆ ನೋಡಲು ಜಗತ್ತಿನ ಮೂಲೆಮೂಲೆಗಳ ಜನರೂ ಕುತೂಹಲದಿಂದ ಕಾಯುತ್ತಲೇ ಇರುತ್ತಾರೆ.
